ಮಂಗಳವಾರ, ಏಪ್ರಿಲ್ 20, 2021
29 °C

ಸಾಬರಮತಿ ಸಂತ ಗಾಂಧಿ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಯಾವುದೇ ಸಮಾಜ, ಯಾವುದೇ ಸಾಮ್ರಾಜ್ಯ ತನ್ನ ಅಸ್ತಿತ್ವ ಉಳಿಸಿಕೊಂಡು ಬೆಳೆಯಬೇಕಾದರೆ, ಅದಕ್ಕೊಂದು ಸಾತ್ವಿಕತೆಯ ಸ್ಪರ್ಶವಿರಬೇಕು, ಮಾನವೀಯತೆಯ ಹಂದರವಿರಬೇಕು. ಈ ದೇಶ ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕವಾಗಿ ಬಹಳ ಶ್ರೀಮಂತವಾಗಿ ಬೆಳೆದಿರುವುದೇ ಉತ್ತಮ ಆದರ್ಶಗಳಿಂದ ಎಂಬ ಸತ್ಯವನ್ನ ಗಾಂಧೀಜಿ ಅರಿತಿದ್ದರು. ಇದಕ್ಕಾಗಿ ಭಾರತದ ಪ್ರತಿ ಮನೆಯಲ್ಲೂ ಜಾತ್ಯತೀತ ಹಣತೆ ಹಚ್ಚಿ, ಪ್ರತಿ ಭಾರತೀಯರ ಮನದಲ್ಲೂ ಮಾನವತೆ ಬೆಳಗಲು ಪ್ರಯತ್ನಿಸಿದರು. ಗಾಂಧೀಜಿ ಈ ದೇಶದ ಜನರನ್ನ ಅರ್ಥಮಾಡಿಕೊಂಡಷ್ಟು ಬೇರಾರು ಮಾಡಿಲ್ಲ. ಹಾಗೇ, ಗಾಂಧೀಜಿ ಕಂಡ ಕನಸು ಹಗಲುಗನಸಲ್ಲ, ಅದು ವಾಸ್ತವತೆಯ ತಿಳಿನೀರ ಕೊಳದಲ್ಲಿ ಅದ್ದಿ ತೆಗೆದ ಸ್ಫಟಿಕದಂಥ ನಿರ್ಮಲ ಕನಸು.

ಈ ದೇಶಕ್ಕೆ ಬೇಕಿರುವುದು ಕೇವಲ ಸ್ವಾತಂತ್ರ್ಯವಲ್ಲ, ‘ಸ್ವರಾಜ್ಯ’ ಅಂತ ಪ್ರತಿಪಾದಿಸಿದ್ದರು. ಅವರು ಕಂಡ ‘ಸ್ವರಾಜ್ಯ’ದ ಕಣ್ಣಲ್ಲಿ ಭಾರತೀಯರ ಸ್ವಾವಲಂಬಿ ಬದುಕಿನ ಗುರಿಯಿತ್ತು. ಅದನ್ನು ಸಾಕಾರಗೊಳಿಸುವ ಅರಿವಿತ್ತು. ಅದರಲ್ಲಿ ಭಾರತೀಯನೊಬ್ಬ ಸರ್ವ ಸ್ವತಂತ್ರವಾಗಿ ಹೆಮ್ಮೆಯಿಂದ ಬದುಕುವ ಸೊಗಡಿತ್ತು. ಇಂಥ ‘ಸ್ವರಾಜ್ಯ’ ಸುಮ್ಮನೆ ಬರುವುದಿಲ್ಲ ಸರ್ವರಲ್ಲೂ ಉತ್ತಮವಾದ ಗುಣಗಳು ಉದಯವಾದಾಗ ಮಾತ್ರ ಸಾಧ್ಯ ಅಂತ ‘ಸರ್ವೋದಯ’ದ ಬಗ್ಗೆ ಭಾರತೀಯರಿಗೆ ತಿಳಿವಳಿಕೆ ನೀಡಿದರು. ಸಂಕುಚಿತ ಮನಸ್ಸಿನ ರೋಗಕ್ಕೆ ‘ಜಾತ್ಯತೀತ ತತ್ವ’ವೇ ಮದ್ದು ಅಂತ ವಿಶ್ಲೇಷಿಸಿದರು. ಹಳ್ಳಿಗಳು ದೇಶದ ಜೀವನಾಡಿ ಎಂದು ‘ಗ್ರಾಮ ಸ್ವರಾಜ್ಯ’ದ ಪರಿಕಲ್ಪನೆ ಬಿಡಿಸಿಟ್ಟರು. ಇದಕ್ಕಾಗಿ ಸಾಬರಮತಿ ಆಶ್ರಮವನ್ನೇ ಸೇವಾ ತರಬೇತಿ ಕಾರ್ಯಾಗಾರವನ್ನಾಗಿಸಿದರು. ಇಂಥ ಸಾಬರಮತಿ ಸಂತ ಗಾಂಧಿ ಅವರನ್ನ ಅರ್ಥಮಾಡಿಕೊಳ್ಳುವಲ್ಲಿ ದೇಶದ ಜನರು ಸೋತಿದ್ದಾರೆ.

ಗಾಂಧೀಜಿಗೆ ಸ್ವತಂತ್ರ ಭಾರತದ ಬಗ್ಗೆ ಸ್ಪಷ್ಟವಾದ ಮತ್ತು ಆರೋಗ್ಯ ಪೂರ್ಣವಾದ ಕಲ್ಪನೆ ಇತ್ತು. ಯಾವುದೇ ವ್ಯಕ್ತಿ ಆತ್ಮಗೌರವದಿಂದ ಬದುಕಿದಾಗ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತಷ್ಟು ಹೆಚ್ಚುತ್ತದೆ ಎಂದು, ಜನರೆಲ್ಲಾ ಮಾನವತೆಯ ದೀಪದಡಿ ಬಾಳಬೇಕೆಂದಿದ್ದರು. ಇದೇ ದೇವರನ್ನು ಸಂಪ್ರೀತಗೊಳಿಸುವ ಧರ್ಮಮಾರ್ಗ ಅನ್ನೋದನ್ನ ಮನದಟ್ಟು ಮಾಡಿಸಲು ಚಿಂತನ-ಮಂಥನ ನಡೆಸಿದರು. ತಮ್ಮ ಹೃದಯದಲ್ಲೇ ಸನ್ಮಾರ್ಗದ ಯಾಗ ಮಾಡಿದರು. ಮನುಷ್ಯರ ಎಲ್ಲ ಗುಣಗಳ ಹವಿಸ್ಸನ್ನು ಹೃದಯದ ಯಜ್ಞಕುಂಡಕ್ಕೆ ಸುರಿದು, ಮಾನವೀಯ ಮೌಲ್ಯದ ಗಡಿಗೆಯಲ್ಲಿ ‘ಸರ್ವೋದಯ’ ಪಾಯಸವನ್ನ ತಯಾರಿಸಿದ್ದರು. ಮನುಕುಲ ಉದ್ಧಾರದ ಪಾಯಸವನ್ನ ದೇಶದ ಜನರಿಗೆಲ್ಲಾ ಹಂಚಿದರು. ಸನ್ನಡತೆ ಇಲ್ಲದ ಮಾನವ ಸಮುದಾಯ ಹಾಳು ಬೀಳುತ್ತದೆ ಎಂದು, ಆದರ್ಶ ಗುಣಗಳಿಗೆ ಹೆಸರಾದ ಶ್ರೀರಾಮನನ್ನು ಮಾದರಿಯಾಗಿಟ್ಟುಕೊಂಡರು. ಶ್ರೀರಾಮನಂತೆ ಜನರೆಲ್ಲ ಸನ್ನಡತೆಯಿಂದ ದೈವತ್ವ ಪಡೆದು, ಭಾರತ ‘ರಾಮರಾಜ್ಯ’ವಾಗಬೇಕೆಂದು ಬಯಸಿದ್ದರು.

ಗಾಂಧೀಜಿ ಕಂಡ ‘ಗ್ರಾಮಸ್ವರಾಜ್ಯ‘ದಲ್ಲಿ ನಿಷ್ಕಲ್ಮಶ ಗ್ರಾಮಸ್ಥನಿದ್ದ. ಯಾರಿಗೂ ಅಡಿಯಾಳಾಗದ ಸ್ವಾವಲಂಬಿ ಕೃಷಿಕನಿದ್ದ. ಎಲ್ಲರ ಬದುಕನ್ನೂ ಉದ್ಧರಿಸುವ ದೈವಸಮಾನನಾದ ಸಂತನಿದ್ದ. ಅಂಥ ಹಳ್ಳಿಗಳಲ್ಲಿ ಈಗ ಜನ ಬದುಕಲಾಗದೆ ನಗರದತ್ತ ಗುಳೆ ಹೋಗುತ್ತಿದ್ದಾರೆ. ಹಳ್ಳಿಗಳಲ್ಲಿ ಕಷ್ಟಪಟ್ಟು ದುಡಿಯುವ ಯುವಕರಿಲ್ಲದೆ, ಗಾಂಧೀಜಿ ಕಂಡ ಬಲಿಷ್ಠ ಗ್ರಾಮೀಣ ಭಾರತ ಬಡಕಲಾಗಿದೆ. ಸಾಲಸೋಲ ಮಾಡಿ ಬೆಳೆ ತೆಗೆದ ರೈತ ಲಾಭ ಕಾಣದೆ, ಸಾಲಗಾರನಾಗಿ ಸಾಯುತ್ತಿದ್ದಾನೆ.

ಭಾರತಕ್ಕೆ ಎರಗಿದ ಇಂಥ ಅಪಸವ್ಯಗಳು ನಿರ್ನಾಮವಾಗಬೇಕಾದರೆ, ಗಾಂಧೀಜಿ ಕಂಡ ‘ಗ್ರಾಮಸ್ವರಾಜ್ಯ’ದ ಪರಿಕಲ್ಪನೆ, ಪ್ರತಿಯೊಬ್ಬರಲ್ಲೂ ವಿವೇಕ ಮೂಡುವ ‘ಸರ್ವೋದಯ’, ಎಲ್ಲರೂ ಮಾನವರಂತೆ ಬದುಕುವ ‘ಜಾತ್ಯತೀತತತ್ವ’ ಸಾಕಾರವಾಗಬೇಕು. ಇದಕ್ಕಾಗಿ ಜನರೆಲ್ಲಾ ಗಾಂಧಿಮಾರ್ಗ ಅನುಸರಿಸಬೇಕು. ಆಗ ಭಾರತ ತನ್ನಿಂತಾನೆ ‘ಸಚ್ಚಿದಾನಂದ’ಮಯವಾಗಿ ಬೆಳಗುತ್ತದೆ.

.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು