ಶನಿವಾರ, ಆಗಸ್ಟ್ 15, 2020
21 °C
ಆಪರೇಷನ್ ಆಡಿಯೊಗೆ ‘ಮಾಸಿಕ’: ಯಾರ ಕೈಯನ್ನು ಯಾರು ಕಟ್ಟಿ ಹಾಕಿದರು?

ಏನಾಯ್ತು ‘ಭುಜಬಲ’ದ ಪರಾಕ್ರಮ?

ವೈ.ಗ. ಜಗದೀಶ್ Updated:

ಅಕ್ಷರ ಗಾತ್ರ : | |

ಮುಖ್ಯಮಂತ್ರಿ ಕುಮಾರಸ್ವಾಮಿ ‘ಆಪರೇಷನ್ ಕಮಲ’ದ ಆಡಿಯೊ ಬಾಂಬ್‌ ಸಿಡಿಸಿ ತಿಂಗಳು ಕಳೆದಿದೆ. ಅಂದು ವಿಧಾನಮಂಡಲದ ಉಭಯ ಸದನಗಳಲ್ಲಿ ಅಬ್ಬರಿಸಿ ಬೊಬ್ಬಿರಿದವರೆಲ್ಲ ಈಗ ಮೌನವ್ರತಿಗಳಾಗಿದ್ದಾರೆ.

ಅರ್ಥ ಸಚಿವರೂ ಆಗಿರುವ ಕುಮಾರಸ್ವಾಮಿ ಫೆ. 8ರಂದು, ಮಾದರಿ ಕರ್ನಾಟಕ ರೂಪಿಸುವ ತಮ್ಮ ಕನಸನ್ನು ಜನರೆದುರು ಹಂಚಿಕೊಳ್ಳುವ ಮಹದಾಕಾಂಕ್ಷೆಯ ಬಜೆಟ್‌ ಮಂಡನೆಯ ಸಿದ್ಧತೆಯಲ್ಲಿದ್ದರು. ಬಜೆಟ್‌ಗಿಂತ ಚರ್ಚೆಯ ಮುನ್ನೆಲೆಗೆ ಬಂದಿದ್ದು ‘ಆಡಿಯೊ ಬಾಂಬ್‌’.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ದೇವದುರ್ಗದ ಶಾಸಕ ಶಿವನಗೌಡ ನಾಯಕ ಸೇರಿಕೊಂಡು ಗುರುಮಠಕಲ್ ಕ್ಷೇತ್ರದ ಜೆಡಿಎಸ್‌ ಶಾಸಕ ನಾಗನಗೌಡ ಕಂದಕೂರ ಅವರನ್ನು ‘ಆಪರೇಷನ್ ಕಮಲ’ದ ಬಲೆಗೆ ಕೆಡಹುವ ಯತ್ನವನ್ನು ನಡೆಸಿದ್ದ ‘ರಹಸ್ಯ ಕಾರ್ಯಾಚರಣೆ’ ಅಂದಿನ ಪ್ರಮುಖ ಸುದ್ದಿಯಾಗಿಬಿಟ್ಟಿತು. ನಾಗನಗೌಡರಿಗೆ ಬಿಜೆಪಿಯವರು ಕೋಟಿಗಟ್ಟಲೆ ಹಣ ಹಾಗೂ ಮಂತ್ರಿ ಸ್ಥಾನದ ಆಮಿಷ ಒಡ್ಡಿ ಅವರ ಪುತ್ರ ಶರಣಗೌಡರ ಜತೆ ನಡೆಸಿದ ಮಾತುಕತೆ ಒಳಗೊಂಡ ಆಡಿಯೊವನ್ನು ಖುದ್ದು ಮುಖ್ಯಮಂತ್ರಿಯೇ ಜಗಜ್ಜಾಹೀರುಗೊಳಿಸಿದ್ದು ಇದಕ್ಕೆ ಕಾರಣವಾಗಿತ್ತು. 

ಶರಣಗೌಡರ ಜತೆಗೆ ಮಾತುಕತೆಯಾಡುವಾಗ ಅವರ ತಂದೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸುವ ವಿಚಾರ ಚರ್ಚೆಗೆ ಬರುತ್ತದೆ. ‘ರಾಜೀನಾಮೆಯನ್ನು ಸಭಾಧ್ಯಕ್ಷ ರಮೇಶ್‌ ಕುಮಾರ್ ಸ್ವೀಕರಿಸದೇ ಹೋದರೆ ಎಂಬ ಭಯ ಇದೆ’ ಎಂದು ಶರಣಗೌಡ ಆತಂಕ ವ್ಯಕ್ತಪಡಿಸುತ್ತಾರೆ. ‘ಅದನ್ನು ನಮಗೆ ಬಿಡಿ. ಸಭಾಧ್ಯಕ್ಷರನ್ನು ಈಗಾಗಲೇ ಸರಿ ಮಾಡಿಕೊಂಡಿದ್ದೇವೆ. ಅವರಿಗೂ ₹50 ಕೋಟಿ ಕೊಟ್ಟಿದ್ದೇವೆ’ ಎಂದು ಶಿವನಗೌಡ ಹೇಳಿದ್ದಾರೆ ಎನ್ನಲಾದ ಮಾತುಗಳು ಆಡಿಯೊದಲ್ಲಿವೆ. ಈ ಬೆಳವಣಿಗೆಯಿಂದಾಗಿ, ರಾಜ್ಯದ ಒಂದು ವರ್ಷದ ಹಣೆಬರಹ ನಿರ್ಧರಿಸುವ ಬಜೆಟ್‌ ಮೇಲೆ ಈ ಬಾರಿ ಚರ್ಚೆಯೇ ನಡೆಯಲಿಲ್ಲ. ಆಡಿಯೊದ ಎಳೆಎಳೆಯನ್ನು ಹಿಡಿದು ಎಳೆದಾಡಿದ ಸದಸ್ಯರು ಭಾವೋದ್ವೇಗ, ಆಕ್ರೋಶ ವ್ಯಕ್ತಪಡಿಸಿದರು. ಪ್ರಜಾಸತ್ತೆಯನ್ನು ಉಳಿಸಿಯೇ ತೀರುವೆವು ಎಂಬ ಹಟದ ನೆಲೆಯಲ್ಲಿ ವಾದ ಸರಣಿಗಳು ನಡೆದವು.

ಐದು ವರ್ಷಗಳ ಅವಧಿಗೆ ಜನರು ಚುನಾಯಿಸಿದ ಶಾಸಕರಿಗೆ ಆಮಿಷವೊಡ್ಡಿ, ಮಧ್ಯದಲ್ಲೇ ರಾಜೀನಾಮೆ ಕೊಡಿಸುವ ಹೀನ ‘ಆಪರೇಷನ್‌’ ಪದ್ಧತಿಗೆ ಕಡಿವಾಣ ಹಾಕಬೇಕು, ದೇಶಕ್ಕೆ ಮಾದರಿಯಾಗುವ ನಡೆಯತ್ತ ಸದನ ಹೆಜ್ಜೆ ಇಡಬೇಕು. ಆತಂಕದಲ್ಲಿರುವ ಪ್ರಜಾತಂತ್ರದ ಶುದ್ಧೀಕರಣ ಪ್ರಕ್ರಿಯೆಗೆ ಕರ್ನಾಟಕ ವಿಧಾನಸಭೆಯೇ ಮದ್ದರಿಯಬೇಕು ಎಂಬ ಮಾತುಗಳೂ ಹೊರಳಾಡಿದವು. ಸಭಾಧ್ಯಕ್ಷರು, ಮುಖ್ಯಮಂತ್ರಿ, ಸಚಿವರು, ಶಾಸಕಾಂಗ ಪಕ್ಷದ ನಾಯಕರು, ಶಾಸಕರು ಆಡಿದ ವೀರಾವೇಶದ ಮಾತುಗಳು ಡಾ. ರಾಜ್‌ಕುಮಾರ್ ಅಭಿನಯದ ‘ಬಬ್ರುವಾಹನ’ ಸಿನಿಮಾದ ಅದ್ಭುತ ದೃಶ್ಯಕಾವ್ಯದ ಚಿತ್ರಗಳನ್ನು ಕಣ್ಣಿಗೆ ಕಟ್ಟಿಕೊಡುವಂತಿದ್ದವು. ‘ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ, ಹೂಡು ಬಾಣಗಳ, ಮಾಡುವೆ ಮಾನಭಂಗ...’ ಎಂಬಷ್ಟರ ಮಟ್ಟಿಗೆ ಮಾತಿನ ಸಮರ ತಾರಕಕ್ಕೇರಿತ್ತು. 

ಸಭಾಧ್ಯಕ್ಷ ರಮೇಶ್ ಕುಮಾರ್, ‘ನಾನು ಈ ಕಸದ ಬುಟ್ಟಿಯನ್ನು ತಲೆ ಮೇಲೆ ಇಟ್ಟುಕೊಂಡು ಹೊರಗೆ ಹೋಗಲು ತಯಾರಿಲ್ಲ. ನನ್ನ ಹೆಂಡತಿ, ಮಕ್ಕಳಿಗೆ, ನನ್ನ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿರುವ ಅಣ್ಣನಿಗೆ ಹೇಗೆ ಮುಖ ತೋರಿಸಲಿ’ ಎಂದು ನೋವಿನಿಂದ ಹೇಳಿದರು. ‘ಈ ಬಗ್ಗೆ 15 ದಿನದೊಳಗೆ ತನಿಖೆ ನಡೆಸಿ, ಸತ್ಯಾಂಶ ಬಹಿರಂಗಪಡಿಸಿ. ಅದಕ್ಕಿಂತ ಹೆಚ್ಚು ದಿನ ನನ್ನನ್ನು ಆರೋಪಗಳೆಂಬ ಮುಳ್ಳಿನ ಮೇಲೆ ಕೂರಿಸಬೇಡಿ’ ಎಂದು ಕೋರಿಕೊಂಡರು. ಇದಕ್ಕೆ ಸಮ್ಮತಿಸಿದ ಮುಖ್ಯಮಂತ್ರಿ, ತನಿಖೆಗೆ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸುವುದಾಗಿ ತುಂಬಿದ ಸದನದಲ್ಲೇ ಘೋಷಿಸಿದರು.

ಸದನದೊಳಗಿನ ಅಬ್ಬರವೆಲ್ಲ ಗೊಬ್ಬರವಾಗಿ ‘ಮಾಸಿಕ’ ಮುಗಿದರೂ ಎಸ್‌ಐಟಿ ರಚನೆಯಾಗಿಲ್ಲ. ಯಾರ ಕೈಯನ್ನು ಯಾರು ಕಟ್ಟಿ ಹಾಕಿದರು; ಏಕೆ ಕಟ್ಟಿ ಹಾಕಿದರು ಎಂಬುದು ಮಾತ್ರ ಇನ್ನೂ ನಿಗೂಢ. ಈ ಪ್ರಕರಣದಲ್ಲಿ ಸಿಕ್ಕಿಕೊಳ್ಳುವ ಭಯದಲ್ಲಿರುವ ಯಡಿಯೂರಪ್ಪ, ‘ಯಾವುದೇ ತನಿಖೆ ಬೇಡ’ ಎಂದು ದುಂಬಾಲು ಬಿದ್ದರು. ಹಾಗಾಗಿ ಎಸ್‌ಐಟಿ ರಚನೆಯಾಗಿಲ್ಲ ಎಂಬುದು ಸರ್ಕಾರದ ವಾದ. ಬಿಜೆಪಿಯವರ ‘ಆಪರೇಷನ್‌’ಗೆ ನಿರ್ಬಂಧ ಹಾಕುವುದಷ್ಟೇ ಕುಮಾರಸ್ವಾಮಿ ಇಚ್ಛೆಯಾಗಿತ್ತು; ಅದರಾಚೆಗೆ ವ್ಯವಸ್ಥೆ ಸುಧಾರಣೆಯ ಅಪೇಕ್ಷೆ ಅವರಿಗೆ ಇರಲಿಲ್ಲ ಎಂಬುದು ಕಾಂಗ್ರೆಸ್ ಟೀಕೆ.

ತಿಂಗಳ ಬಳಿಕ ಇದಕ್ಕೆ ಪ್ರತಿಕ್ರಿಯಿಸಿರುವ ರಮೇಶ್‌ ಕುಮಾರ್, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿಯೂ ಹೇಳಿದ್ದಾರೆ. ಪ್ರಜಾತಂತ್ರವೇ ನಾಚಿ ತಲೆ ತಗ್ಗಿಸುವಂತಹ ಪರಿಸ್ಥಿತಿ ತಂದೊಡ್ಡಿದ ಈ ಪ್ರಕರಣದ ‘ಉತ್ತರದಾಯಿತ್ವ’ ಹೊರಬೇಕಾದವರು ಯಾರು ಎಂಬುದು ಸದ್ಯದ ಪ್ರಶ್ನೆ. ಆದರೆ, ಅಂದಿನ ಮಾತುಗಳನ್ನು ಕೇಳಿಸಿಕೊಂಡ ಜನರು ಮಾತ್ರ ‘ಯಾರು ತಿಳಿಯರು ‘ನಿಮ್ಮ’ ಭುಜಬಲದ ಪರಾಕ್ರಮ. ಸಮರದೋಳ್ ಆರ್ಜಿಸಿದ ಆ ‘ನಿಮ್ಮ’ ಮಾತುಗಳ ಮರ್ಮ’ ಎಂದು ಹೀಯಾಳಿಸುವುದು ಮಾತ್ರ ಬಾಕಿ ಇದೆ. 

‘ಆಪರೇಷನ್ ಆಡಿಯೊ’ ಬಗ್ಗೆ ಚರ್ಚೆ ನಡೆದಾಗ ಅನೇಕ ವಿಷಯಗಳು ಮುಂಚೂಣಿಗೆ ಬಂದವು. 1951ರಲ್ಲಿ ಮುಂಬೈ ಸಂಸದರಾಗಿದ್ದ ಎಚ್.ಜಿ. ಮುದ್ಗಲ್, ಬುಲಿಯನ್ ಮರ್ಚೆಂಟ್ಸ್‌ ಅಸೋಸಿಯೇಷನ್‌ಗೆ ಅನುಕೂಲ ಮಾಡಿಕೊಡಲು ಅಕ್ರಮವಾಗಿ ಹಣ ಸ್ವೀಕರಿಸಿದ ಆಪಾದನೆಗೆ ಗುರಿಯಾಗಿದ್ದರು. ಆಗ ಲೋಕಸಭಾಧ್ಯಕ್ಷರಾಗಿದ್ದ ಮಾವಳಂಕರ್ ವಿಚಾರಣೆಗಾಗಿ ಸದನ ಸಮಿತಿ ರಚಿಸಿದರು. ವರದಿ ಸಲ್ಲಿಸಿದ ಸಮಿತಿ, ಮುದ್ಗಲ್ ಅವರನ್ನು ಆರೋಪಿ ಎಂದು ನಿಶ್ಚಯ ಮಾಡಿತು. ಕಾಂಗ್ರೆಸ್ ಸಂಸದರಾಗಿದ್ದ ಅವರನ್ನು ಲೋಕಸಭೆಯಿಂದ ಉಚ್ಚಾಟಿಸುವ ನಿರ್ಣಯವನ್ನು ಅಂದಿನ ಪ್ರಧಾನಿ ಹಾಗೂ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಜವಾಹರಲಾಲ್ ನೆಹರೂ ಮಂಡಿಸಲು ಮುಂದಾಗಿದ್ದರು. ಅದು ಗೊತ್ತಾಗಿದ್ದೇ ತಡ ಮುದ್ಗಲ್ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಅದಾದ ಬಳಿಕ ಹೊಸ ನಿರ್ಣಯ ಮಂಡಿಸಿದ ನೆಹರೂ, ‘ತಮ್ಮನ್ನು ಉಚ್ಚಾಟನೆ ಮಾಡುತ್ತಾರೆ ಎಂಬ ಮುನ್ಸೂಚನೆಯಿಂದ ರಾಜೀನಾಮೆ ಕೊಡುವ ಪ್ರಯತ್ನ ಕೂಡ ಅಪರಾಧ ಎಂದು ಪ್ರತಿಪಾದಿಸಿದ್ದರು’ ಎಂದು ರಮೇಶ್‌ ಕುಮಾರ್ ನೆನಪಿಸಿಕೊಂಡಿದ್ದರು. 

‘ಸಭಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದರಿಂದಾಗಿ ಅವರ ಮೇಲೆ ಮಾಡಿರುವ ಆಪಾದನೆಯು 225 ಸದಸ್ಯರ ಹಕ್ಕುಚ್ಯುತಿಯಾಗಿದೆ. ಇಂತಹ ಯತ್ನಗಳು ಇಲ್ಲಿಗೇ ಕೊನೆಯಾಗಬೇಕು. ಅದಕ್ಕೆ ತಕ್ಕನಾದ ರೀತಿಯೊಳಗೆ ತನಿಖೆ ನಡೆಯಬೇಕು’ ಎಂದು ಆಡಳಿತ ಪಕ್ಷದ ಸದಸ್ಯರು ವಾದಿಸಿದ್ದರು. ‘ಸರ್ಕಾರವನ್ನು ಬೀಳಿಸುವ ಯತ್ನ ಮಾಡುತ್ತಿರುವವರಿಗೆ ತಕ್ಕ ಶಾಸ್ತಿಯಾಗುವಂತೆ ಮಾಡುತ್ತೇವೆ’ ಎಂದು ಸರ್ಕಾರದ ಸಮಾನ ಭಾಗಿದಾರರಾದ ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಘೋಷಿಸಿದ್ದರು. ಈ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿದ್ದ ಯಡಿಯೂರಪ್ಪ ಮಾತ್ರ ಗೋಣು ಮೇಲೆತ್ತಿರಲಿಲ್ಲ.

ಸದನದಲ್ಲಿ ಅಂದಿನ ಅಬ್ಬರ ನೋಡಿದವರಿಗೆ ಕರ್ನಾಟಕದಲ್ಲಿ 1999ರ ಆಸುಪಾಸಿನಲ್ಲಿ ಆರಂಭವಾಗಿ 2008ರಲ್ಲಿ ಉತ್ತುಂಗಕ್ಕೇರಿ, 2009ರಲ್ಲಿ ಮತ್ತಷ್ಟು ಪ್ರಜ್ವಲಿಸಿದ ಶಾಸಕರ ಖರೀದಿಯ ಲಜ್ಜೆಗೇಡಿ ಆಟಕ್ಕೆ ಕೊನೆ ಬೀಳಲಿದೆ ಎಂಬ ಭರವಸೆ ಮೂಡಿತ್ತು. ಆದರೆ, ಅದು ಆಗಲಿಲ್ಲ ಎಂಬುದು ಸದ್ಯದ ವಿಷಾದ. ವ್ಯವಸ್ಥೆಯನ್ನು ಕೆಡಿಸುವಲ್ಲಿರುವ ಉತ್ಸುಕತೆ ಹೊಸದಾಗಿ ಕಟ್ಟುವ ಕೆಲಸದಲ್ಲಿ ಇಲ್ಲ ಎಂಬುದಷ್ಟೇ ವಾಸ್ತವ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು