ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒರೆಯೊಳಗಿದೆ ಕತ್ತಿ; ಯಾರಿಗೆ ಇರಿತ?

ಮೇಲ್ನೋಟಕ್ಕೆ ಏಕತೆ ಮಂತ್ರ; ಆಂತರ್ಯದಲ್ಲಿ ರಣತಂತ್ರ
Last Updated 16 ಏಪ್ರಿಲ್ 2019, 20:04 IST
ಅಕ್ಷರ ಗಾತ್ರ

ಇಂಡಿಯಾದ ಹಣೆಬರಹ ಬರೆವ ‘ಜನತಂತ್ರದ ಹಬ್ಬ’ದ ಸಡಗರ ನಾಡಿನುದ್ದಕ್ಕೂ ಹರಡಿದೆ. ಹಗೆಗಳಂತೆ ಕಾದಾಡುತ್ತಿದ್ದವರು, ಒಂದಿನಿತು ಅವಕಾಶ ಸಿಕ್ಕಿದರೂ ಪರಸ್ಪರರ ಕಾಲೆಳೆಯುವ ರಾಜಕಾರಣ ಮಾಡುತ್ತಿದ್ದವರು ತೋರುನೋಟಕ್ಕೆ ‘ಶಾಶ್ವತ’ ಮಿತ್ರರಂತೆ ತಕಧಿಮಿತೋಂ ಎಂದು ಹಾಡಿಹೊಗಳಿಕೊಂಡು ನಾಟ್ಯ ಮಾಡುತ್ತಲೂ ಇದ್ದಾರೆ.

ಬಿಜೆಪಿಯನ್ನು ಮಣಿಸಿ, ಮೋದಿ ಮತ್ತೊಮ್ಮೆ ‘ಕರೆ’ಯನ್ನು ಮೂಲೋತ್ಪಾಟನೆ ಮಾಡುವುದೇ ತಮ್ಮ ಧ್ಯೇಯವೆಂಬ ರೀತಿಯೊಳಗೆ ಮೈತ್ರಿಕೂಟದ ನಾಯಕಮಣಿಗಳಾದ ಎಚ್.ಡಿ. ದೇವೇಗೌಡ, ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಜಿ.ಪರಮೇಶ್ವರ, ಜಿ.ಟಿ. ದೇವೇಗೌಡ, ಡಿ.ಕೆ. ಶಿವಕುಮಾರ್‌ ಅವರೆಲ್ಲ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಒಂದೇ ವೇದಿಕೆಯೊಳಗೆ ಕೈ ಕೈ ಹಿಡಿದುಕೊಂಡು ‘ಏಕತೆಯ ಮಂತ್ರ’ ಪಠಿಸುತ್ತಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿ ಗಾದಿಯಲ್ಲಿ ಕಾಣಲು ಇಷ್ಟವಿಲ್ಲದ ಅನೇಕ ಪ್ರಮುಖರು, ‘ಮೋದಿ’ ಹೆಸರಿನಲ್ಲಿ ಒಂದಾದಂತೆ ವರ್ತಿಸುತ್ತಿದ್ದಾರೆ.

ಮತವು ಮಾರಾಟದ ಸರಕಾಗಿ ದಶಕಗಳೇ ಸಂದು ಹೋದವು. ಅಭ್ಯರ್ಥಿಯ ಗೆಲುವಿಗೆ ಅವರ ದಕ್ಷತೆ, ಅನುಭವ, ಹೋರಾಟದ ಮನೋಭಾವ, ಸಾಮಾಜಿಕ ಕಳಕಳಿಗಳು ಮಾನದಂಡವಾಗುವ ಬದಲು, ಜಾತಿ ಬೆಂಬಲವೇ ಗೆಲುವಿನ ಮಂತ್ರದಂಡವಾಗುವ ಪರಿಪಾಟ ಬಂದು ಬಹಳ ಕಾಲವಾಯಿತು.

ತಮ್ಮ ಪ್ರತಿಸ್ಪರ್ಧಿಯಾಗಬಲ್ಲ ‘ಪ್ರಭಾವಿ’ಯನ್ನು ಸೋಲಿಸುವುದು, ಇಲ್ಲವೇ ಲೋಕಸಭೆಗೆ ಕಳುಹಿಸುವ ಉಪಾಯವನ್ನು ಹೂಡುವುದು ರಾಜಕಾರಣಿಗಳಿಗೆ ಹೊಸತಲ್ಲ. ವಿಧಾನಸಭೆ ಚುನಾವಣೆಯಲ್ಲಂತೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳನ್ನು ಸೋಲಿಸಲು ಆಯಾ ಪಕ್ಷದಲ್ಲಿನ ನಾಯಕರೇ ಹರಸಾಹಸ ಮಾಡುವುದುಂಟು. ಜೆ.ಎಚ್‌. ಪಟೇಲ್‌, ಯಡಿಯೂರಪ್ಪ ಹಿಂದೆಲ್ಲ ಸೋತಾಗ ಇಂತಹವೇ ನಡೆದಿವೆ.

2013ರಲ್ಲಿ ಪರಮೇಶ್ವರ ಸೋಲಲು, ವರ್ಷದ ಹಿಂದೆ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪರಾಜಿತರಾಗಿದ್ದರ ಹಿಂದೆಯೂ ಇದೇ ತರ್ಕಗಳು ಕೆಲಸ ಮಾಡಿದ್ದವು. ಬೆನ್ನ ಹಿಂದೆ ಚೂರಿ ಇಟ್ಟುಕೊಂಡು ಜತೆಯಾಗಿ ಓಡಾಡುವುದು, ಅವಕಾಶ ಸಿಕ್ಕಾಗ ಏಡಿಗಳಂತೆ ಜಗ್ಗಿಸಿ, ಮಕಾಡೆ ಮಲಗಿಸಿಬಿಡುವುದು ಎಲ್ಲ ರಾಜಕಾರಣಿಗಳ ಜಾಯಮಾನ. ಇಲ್ಲದಿದ್ದರೆ ಧನ–ಜನ ಬಲದ ಪೈಪೋಟಿಯಲ್ಲಿ ಅಧಿಕಾರದ ಗದ್ದುಗೆಗೆ ಏರುವುದು ಅಸಾಧ್ಯ ಎಂಬುದು ನೇತಾರರಿಗೆ ಗೊತ್ತಿರದ ರಹಸ್ಯವೂ ಅಲ್ಲ.

ಈಗಲೂ ಅಷ್ಟೆ; ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಬೀಳಿಸಲು ಬಿಜೆಪಿ ಎಷ್ಟರಮಟ್ಟಿಗೆ ಷಡ್ಯಂತ್ರ ಹೆಣೆಯುತ್ತಿದೆಯೋ ಅದಕ್ಕೆ ಸರಿಸಾಟಿಯಾದ ತಂತ್ರಗಾರಿಕೆಯನ್ನು ಕಾಂಗ್ರೆಸ್‌ನ ಕೆಲವು ದಿಗ್ಗಜರು ರೂಪಿಸುತ್ತಿರುವುದನ್ನು ತಿಳಿಸಲು ಪತ್ತೇದಾರರು ಬೇಕಾಗಿಲ್ಲ. ಲೋಕಸಭೆ ಚುನಾವಣೆಗೆ ಮುನ್ನ ನಡೆದ ವಿದ್ಯಮಾನಗಳೇ ಈ ‘ಸರ್ಕಾರ ಪತನಾಸ್ತ್ರ’ ಬಳಕೆಯಾಗುತ್ತಿರುವುದಕ್ಕೆ ಸಾಕ್ಷಿಯಾಗುತ್ತವೆ.

ಸಮ್ಮಿಶ್ರ ಸರ್ಕಾರದ ಮೂಗುದಾರ ಹಿಡಿದಿರುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಅವರನ್ನು ದೀರ್ಘಕಾಲ ಮುಖ್ಯಮಂತ್ರಿ ಹುದ್ದೆಯಲ್ಲಿ ನೋಡುವುದು ಸುತರಾಂ ಇಷ್ಟವಿಲ್ಲ. ತಮ್ಮ ಅಸ್ತಿತ್ವ ಕಮರಿಹೋಗುತ್ತದೆ ಎಂಬ ಆತಂಕದಲ್ಲಿರುವ ಅವರು, ಹೀಗೇ ಮೈತ್ರಿ ಸರ್ಕಾರ ಮುಂದುವರಿದರೆ ಕಾಂಗ್ರೆಸ್‌ ಕಳೆದುಹೋಗುತ್ತದೆ ಎಂಬ ‘ಭೂತ’ವನ್ನೂ ತೋರಿಸುತ್ತಿದ್ದಾರೆ. ‘ಜೂನ್‌ 10ರ ಬಳಿಕ ಮೈತ್ರಿ ಸರ್ಕಾರ ಇರುವುದಿಲ್ಲ; ವಿರೋಧ ಪಕ್ಷದ ನಾಯಕ ಸ್ಥಾನ ನನಗೆ ಕಾಯಂ’ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ತಮ್ಮ ರಾಜಕೀಯ ಭವಿಷ್ಯವನ್ನೇ ಅಂಧಕಾರಕ್ಕೆ ದೂಡಿದ್ದ ದೇವೇಗೌಡರನ್ನು ಗೆಲ್ಲಿಸಲು ಅವರಿಗೇನೂ ಉತ್ಸಾಹವಿರಲಿಲ್ಲ. ಆದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕಟ್ಟಪ್ಪಣೆ, ಮೈತ್ರಿಯ ಸಂದರ್ಭದ ಅನಿವಾರ್ಯಕ್ಕೆ ಸಿಲುಕಿಬಿದ್ದಿರುವ ಅವರು, ಗೌಡರ ಕೈ ಹಿಡಿದು ಮುನ್ನಡೆಸುವ ಹೊಣೆ ಹೊತ್ತುಕೊಂಡು ಓಡಾಡುತ್ತಿದ್ದಾರೆ. ಕಾಂಗ್ರೆಸ್‌ ಗೆಲ್ಲಿಸಿಕೊಳ್ಳುವ ಜತೆಗೆ ತಮ್ಮ ಹಿಂದಿನ ಗುರು–ಶತ್ರು ಗೌಡರು ಹಾಗೂ ಅವರ ಮೊಮ್ಮಕ್ಕಳ ಗೆಲ್ಲಿಸುವ ‘ಧರ್ಮ ಸಂಕಟ’ ಅವರದ್ದಾಗಿದೆ. ಹೀಗಾಗಿ ಒರೆಯಲ್ಲಿರುವ ಕತ್ತಿಯ ಮೊನಚು ಮುರಿದಿಟ್ಟು ಬಿಜೆಪಿಯನ್ನು ಸೋಲಿಸುವ ಪಣತೊಟ್ಟಿದ್ದಾರೆ.

ಸದ್ಯಕ್ಕೆ ಅವರ ಮುಂದಿರುವುದು ಮೈಸೂರು, ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರವನ್ನು ಗೆಲ್ಲಿಸಿಕೊಳ್ಳುವ ತವಕ. ಇದಕ್ಕೆ ಗೌಡರು ಎಷ್ಟರಮಟ್ಟಿಗೆ ನೆರವಾಗುತ್ತಾರೋ ಸಿದ್ದರಾಮಯ್ಯನವರು ಅಷ್ಟರಮಟ್ಟಿಗೆ ತುಮಕೂರು, ಮಂಡ್ಯ, ಹಾಸನದಲ್ಲಿ ತಮ್ಮ ‘ಶಕ್ತಿ’ಯನ್ನು ಪ್ರಯೋಗಿಸಲಿದ್ದಾರೆ. ಪರಸ್ಪರರ ನಂಬಿಕೆ, ನಡವಳಿಕೆಯ ಮೇಲೆ ನಡೆಯುತ್ತಿರುವ ಕೊಡುಕೊಳುವಿಕೆ ಸಫಲವಾಗಿದೆಯೇ ಇಲ್ಲವೇ ಎಂಬುದು ಫಲಿತಾಂಶ ಹೊರಬಿದ್ದ ಮೇಲಷ್ಟೇ ಗೊತ್ತಾಗಲಿದೆ. ಅದು ಮೈತ್ರಿ ಸರ್ಕಾರದ ಮೇಲೆಯೂ ಪರಿಣಾಮ ಬೀರಲಿದೆ ಎಂಬುದು ವಾಸ್ತವ. ಮೈತ್ರಿಯಲ್ಲಿ ನಾಯಕರು ಒಂದಾದಂತೆ ಕಾಣಿಸುತ್ತಿದ್ದರೂ ಸ್ಥಳೀಯ ಮಟ್ಟದ ನಾಯಕರಲ್ಲಿ ಹೇಳಿಕೊಳ್ಳುವಂಥ ಒಗ್ಗಟ್ಟಿಲ್ಲ. ಒಳಗಿಂದೊಳಗೆ ಕತ್ತಿ ಮಸೆಯುವುದು ಅನೇಕ ಕ್ಷೇತ್ರಗಳಲ್ಲಿ ಮುಂದುವರಿದಿದೆ.

ಬಿಜೆಪಿ ಪಾಳಯ ಕೂಡ ಇದಕ್ಕಿಂತ ಭಿನ್ನವಾದ ವಾತಾವರಣ ಹೊಂದಿಲ್ಲ. ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜತೆಗೆ ಗುರುತಿಸಿಕೊಂಡಿರುವ ಕೆಲವು ರಾಜ್ಯ ನಾಯಕರಿಗೆ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗುವುದು ಬೇಕಿಲ್ಲ. ಇದರ ಬೆನ್ನಲ್ಲೇ ನಡೆಯುತ್ತಿರುವ ಒಳಗಿನ ಮಸಲತ್ತು ಬೇರೆಯೇ ರೀತಿಯೊಳಗೆ ಕೆಲಸ ಮಾಡುತ್ತಿದೆ ಎಂಬುದನ್ನು ಬಿಜೆಪಿ ನಾಯಕರೇ ಒಪ್ಪಿಕೊಳ್ಳುತ್ತಾರೆ. ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ ಅನಂತಕುಮಾರ್‌, ಚಿಕ್ಕೋಡಿಯಲ್ಲಿ ರಮೇಶ ಕತ್ತಿ ಅವರಿಗೆ ಟಿಕೆಟ್‌ ಕೈ ತಪ್ಪಿರುವ ಅಸಮಾಧಾನ ಯಡಿಯೂರಪ್ಪನವರಲ್ಲೂ ಧುಮುಗುಡುತ್ತಿದೆ. ಮಿಷನ್ 22 ಗುರಿ ತಲುಪುವುದು ಕಷ್ಟ ಎಂಬ ಬೇಸರವೂ ಅವರಲ್ಲಿ ಕಾಣಿಸುತ್ತಿದೆ. ಗುರಿ ತಲುಪದೇ ಇದ್ದರೆ ಮುಖ್ಯಮಂತ್ರಿ ಗಾದಿ ಏರುವುದು ಅನಿಶ್ಚಿತ ಎಂಬುದು ಅವರಿಗೆ ಗೊತ್ತಾದಂತಿದೆ.

ಬೆಂಗಳೂರು ದಕ್ಷಿಣ, ಚಿಕ್ಕೋಡಿ, ಹಾಸನ, ಬಳ್ಳಾರಿ, ಕೋಲಾರ ಜಿಲ್ಲೆಗಳಲ್ಲಿ ಕೊನೆ ಗಳಿಗೆಯಲ್ಲಿ ಹೊಸ ಅಭ್ಯರ್ಥಿಗಳನ್ನು ಇಳಿಸಿರುವುದು ಆ ಪಕ್ಷದ ನಾಯಕರಲ್ಲಿ ಸಿಟ್ಟು ತರಿಸಿದೆ. ಸ್ಥಳೀಯ ಮಟ್ಟದಲ್ಲಿ ಪ್ರಭಾವಿಗಳಾಗಿರುವ ನಾಯಕರು ಮೇಲ್ನೋಟಕ್ಕೆ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಕೊನೆಕ್ಷಣದಲ್ಲಿ ಈ ನಾಯಕರು ನೀಡಬಹುದಾದ ಒಳಪೆಟ್ಟು ಪಕ್ಷಕ್ಕೆ ಮರ್ಮಾಘಾತ ನೀಡಬಹುದೆಂಬ ಆತಂಕವೂ ನಾಯಕರಲ್ಲಿದೆ.

‘ನಮ್ಮವರು ನಮಗಿಲ್ಲ; ನಮಗೆ ನಾವೇ ಎಲ್ಲ, ಕಟ್ಟ ಕಡೆಗೆ ನಂಬಿದವರೇ ನಮಗೆ ಕಾರುವರು ವಿಷದ ಹೊಗೆ ಆಂತರ್ಯದೊಳಗೆ...’ ಎಂದು ಕವಿ ಜಿ.ಎಸ್‌.ಶಿವ
ರುದ್ರಪ್ಪನವರು 1951ರಲ್ಲಿ ಬರೆದ ‘ಆಟ’ ಕವಿತೆ ಸದ್ಯದ ರಾಜಕೀಯ ಪರಿಸ್ಥಿತಿಯ ದರ್ಶನ ಮಾಡಿಸುವಂತಿದೆ.

ರಾಜಕಾರಣಿಗಳಿಗೆ ಎಷ್ಟಿದ್ದರೂ ಸಾಲದು. ಪುಕ್ಸಟ್ಟೆ ಸಿಗುವಂತಿದ್ದರೆ ನಮಗೆ, ನಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೂ ಎಂದು ಹಾತೊರೆಯುವುದು ಇವತ್ತಿನ ರಾಜಕಾರಣ. ಕುಟುಂಬ ರಾಜಕಾರಣವನ್ನು ಎಲ್ಲರೂ ಮಾತಿನಲ್ಲಿ ವಿರೋಧಿಸುತ್ತಾರೆ. ಆದರೆ, ಕ್ರಿಯೆಯಲ್ಲಿ ಅದನ್ನೇ ಮಾಡುತ್ತಾರೆ. ಇದಕ್ಕೆ ಪಕ್ಷ, ಜಾತಿಯ ಸೋಂಕಿಲ್ಲ.

‘ಬೇಕು ಬೇಕದುಬೇಕು ಬೇಕಿದೆನಗಿನ್ನೊಂದು/ ಬೇಕೆನುತ ಬೊಬ್ಬಿಡುತಲಿಹ ಘಟವನಿದನು/ಏಕೆಂದು ರಚಿಸಿದನೊ ಬೊಮ್ಮನೀ ಬೇಕು ಜಪ/ಸಾಕೆನಿಪುದೆಂದಿಗಲೊ– ಮಂಕುತಿಮ್ಮ’ ಎಂಬ ಡಿ.ವಿ.ಜಿಯವರ ಕಗ್ಗವು ಇಂದಿನ ಪರಿಸ್ಥಿತಿಗೆ ನಿದರ್ಶನದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT