ಗುರುವಾರ , ಫೆಬ್ರವರಿ 25, 2021
19 °C

ಸಿ.ಡಿ. ಹೊತ್ತಿಸಿದ ಕಿಡಿ: ಭೂಚಕ್ರದ ಸುಳಿಯಲ್ಲಿ ನಲುಗಲಿದ್ದಾರೆಯೇ ಯಡಿಯೂರಪ್ಪ?

ವೈ.ಗ.ಜಗದೀಶ್‌ Updated:

ಅಕ್ಷರ ಗಾತ್ರ : | |

ಅಧಿಕಾರ ಹಿಡಿಯಲು, ಹಿಡಿದ ಪದವಿಯನ್ನು ಉಳಿಸಿಕೊಳ್ಳಲು ಎದುರಾಳಿಗಳನ್ನು ಹಣಿವ, ತಂತ್ರಗಳನ್ನು ಹೆಣೆವ ಸಾಹಸದಲ್ಲೇ ಮುಖ್ಯಮಂತ್ರಿ ಅವಧಿಯ ಬಹುಸಮಯ ವ್ಯಯಿಸಿರುವ ಬಿ.ಎಸ್‌.ಯಡಿಯೂರಪ್ಪ ಅವರಿಗೆ ‘ಸಿ.ಡಿ’ಯೇ ‘ಶಾಪ’ವಾದಂತಿದೆ.

2008ರಲ್ಲಿ ಈಗಿನಂತೆಯೇ ಹರಸಾಹಸ ಪಟ್ಟು ಮುಖ್ಯಮಂತ್ರಿ ಪಟ್ಟಕ್ಕೇರಿದ್ದರು. ಐದು ವರ್ಷ ಪೂರ್ಣಗೊಳಿಸುವ ಮೊದಲೇ ಅಧಿಕಾರ ಬಿಟ್ಟು ಕೆಳಗಿಳಿದರು. ಆಗಲೂ ಕಾರಣವಾಗಿದ್ದು ‘ಸಿ.ಡಿ. ಮಹಾತ್ಮೆ’.

2006ರಲ್ಲಿ ಜೆಡಿಎಸ್‌–ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರ ವಿರುದ್ಧ, ಅಂದು ಸಚಿವರಾಗಿದ್ದ ಗಾಲಿ ಜನಾರ್ದನ ರೆಡ್ಡಿ, ‘ಜಂತಕಲ್‌ ಗಣಿಗಾರಿಕೆ ಗುತ್ತಿಗೆ ನೀಡಲು ಕುಮಾರಸ್ವಾಮಿ ₹150 ಕೋಟಿ ಪಡೆದಿದ್ದು, ಅದರ ಸಿ.ಡಿ. ನನ್ನ ಬಳಿ ಇದೆ’ ಎಂದು ಹೇಳಿದ್ದರು. ಇದು ರಾಜಕೀಯದಲ್ಲಿ ಕೋಲಾಹಲವನ್ನೇ ಎಬ್ಬಿಸಿತ್ತು. ಕುಮಾರಸ್ವಾಮಿ ಅವರು ಗಣಿ ಅಕ್ರಮದ ತನಿಖೆಯನ್ನು ಲೋಕಾಯುಕ್ತಕ್ಕೆ ಒಪ್ಪಿಸಿದರು. 2011ರಲ್ಲಿ ಲೋಕಾಯುಕ್ತರು ವರದಿ ಕೊಟ್ಟರು. ಅದರಲ್ಲಿ ಯಡಿಯೂರಪ್ಪ ಹೆಸರು ಇದ್ದುದರಿಂದ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕಾಯಿತು. 2018ರ ಚುನಾವಣೆ ಬಳಿಕ ಅತಂತ್ರ ಪರಿಸ್ಥಿತಿ ಸೃಷ್ಟಿಯಾದಾಗ ಯಡಿಯೂರಪ್ಪ ಮತ್ತೆ ಅದೇ ಹಳೆಯ ತಂತ್ರವನ್ನೇ ಅನುಸರಿಸಿದರು.

‘ಶಾಸಕರನ್ನು ಕರೆತರಲು, ಸರ್ಕಾರ ರಚಿಸಲು ಸಿ.ಪಿ.ಯೋಗೇಶ್ವರ್‌ ₹ 9 ಕೋಟಿ ಸಾಲ ಮಾಡಿಕೊಂಡಿದ್ದಾರೆ’ ಎಂದು ಸಚಿವ ರಮೇಶ ಜಾರಕಿಹೊಳಿ ಅವರೇ ಹೇಳಿದ್ದಾರೆ. ಶಾಸಕರನ್ನು ಖುಲ್ಲಂಖುಲ್ಲಾ ‘ವ್ಯಾಪಾರ’ ಮಾಡಿಯೇ ಈ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂದು ಹೇಳಲು ಹೆಚ್ಚಿನ ದಾಖಲೆಗಳೇನೂ ಬೇಕಾಗಿಲ್ಲ. ಅಧಿಕಾರಕ್ಕೆ ಏರಲು ಒಳದಾರಿಗಳನ್ನು ಕಂಡುಕೊಂಡ ಯಡಿಯೂರಪ್ಪ, ಅದನ್ನು ಉಳಿಸಿಕೊಳ್ಳಲು ಶತಾಯಗತಾಯ ಹೆಣಗಾಡುತ್ತಿದ್ದಾರೆ. ಹೀಗಾಗಿಯೇ, ಸರ್ಕಾರ ರಚಿಸಲು ನೆರವಾದವರಿಗೆ ಸಚಿವ ಸ್ಥಾನ ನೀಡಲೇಬೇಕಾದ ತುರ್ತು ಯಡಿಯೂರಪ್ಪನವರಿಗೆ ಇತ್ತು. 

ಸಚಿವ ಸಂಪುಟ ವಿಸ್ತರಣೆ ಮುಗಿಯುತ್ತಿದ್ದಂತೆ ‘ಸಿ.ಡಿ. ಸುಳಿ’ ಯಡಿಯೂರಪ್ಪನವರ ಸುತ್ತ ತಿರುಗುತ್ತಿದೆ. ‘ಯಡಿಯೂರಪ್ಪಗೆ ಸಂಬಂಧಿಸಿದ ಈ ಸಿ.ಡಿ.ಯಲ್ಲಿ ಕಣ್ಣಿನಲ್ಲಿ ನೋಡಲಾಗದ ದೃಶ್ಯಗಳಿವೆ’ ಎಂದು ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಸಚಿವರೂ ಆಗಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ‘ಸಿ.ಡಿ.ಯನ್ನು ಇಷ್ಟರಲ್ಲೇ ಬಿಡುಗಡೆ ಮಾಡುತ್ತೇವೆ’ ಎಂದು ಪರಿಷತ್ತಿನ ಸದಸ್ಯ ಎಚ್.ವಿಶ್ವನಾಥ್‌ ಹೇಳಿದ್ದಾರೆ. ‘ಯಾವುದೇ ಸಿ.ಡಿ. ಇಲ್ಲ; ಇದ್ದರೆ ಬಿಡುಗಡೆ ಮಾಡಲಿ’ ಎಂದು ಯಡಿಯೂರಪ್ಪ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ, ಕೆಲ ಕೇಂದ್ರ ಸಚಿವರೂ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ಸವಾಲು ಹಾಕಿದ್ದಾರೆ.

‘ಸಿ.ಡಿ.ಯನ್ನು ತೋರಿಸಿ ‘ಬ್ಲ್ಯಾಕ್‌ಮೇಲ್‌’ ಮಾಡಿ ಒಬ್ಬರು ಸಚಿವ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ನನ್ನ ಬಳಿ ಸಿ.ಡಿ. ಇದ್ದಿದ್ದರೆ ನಾನು ಉಪಮುಖ್ಯಮಂತ್ರಿ ಆಗುತ್ತಿದ್ದೆ’ ಎಂದೂ ಯತ್ನಾಳ ಹೇಳಿದ್ದಾರೆ.

‘ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿಯಾಗಿರುವ ಎನ್.ಆರ್.ಸಂತೋಷ್‌ ಆತ್ಮಹತ್ಯೆಯ ಯತ್ನಕ್ಕೂ ಸಿ.ಡಿಗೂ ನಂಟಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದುಂಟು. ‘ಅಂತಹದ್ದೊಂದು ಸಿ.ಡಿ. ಇರುವುದು ನಿಜ. ಈ ಸಿ.ಡಿಯ ರಸಗವಳ ಎಷ್ಟರಮಟ್ಟಿಗೆ ಸ್ಫೋಟಕವಾಗಿದೆ ಎಂಬುದು ಸಿ.ಡಿ. ಮಾಡಿದವರಿಗೆ, ಅದನ್ನು ಬಿಜೆಪಿ ವರಿಷ್ಠರಿಗೆ ತಲುಪಿಸಿದವರಿಗೆ ಮಾತ್ರ ಗೊತ್ತು’ ಎಂಬುದು ಸಂಘನಿಷ್ಠ ಬಿಜೆಪಿ ನಾಯಕರ ಅಂಬೋಣ.

ಸಿ.ಡಿ. ಇಟ್ಟುಕೊಂಡು ಬೆದರಿಸಿದರೆ ಸಚಿವ ಪದವಿಯನ್ನು ಯಡಿಯೂರಪ್ಪ ಅಥವಾ ಬಿಜೆಪಿ ವರಿಷ್ಠರು ದಯಪಾಲಿಸುತ್ತಾರೆ ಎಂಬ ಆರೋಪದಲ್ಲಿ ನಿಜಾಂಶ ಇದ್ದರೆ ಅದಕ್ಕಿಂತ ಹೇಯ ಸ್ಥಿತಿ ಮತ್ತೊಂದಿಲ್ಲ. ಇದು ಬಿಜೆಪಿಯನ್ನೇ ನಂಬಿ ಮತ ಹಾಕಿದ ಕರ್ನಾಟಕದ ಮತದಾರರಿಗೆ ಆ ಪಕ್ಷದ ನೇತಾರರು ಮಾಡಿದ ಅವಮಾನ. ಸಿ.ಡಿ. ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಮಂತ್ರಿಯಾದವರು ಮುಂದೆ ನಾಡನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತಾರೆ, ಎಷ್ಟರ ಮಟ್ಟಿಗೆ ಲೂಟಿ ಹೊಡೆಯುತ್ತಾರೆ ಎಂಬುದು ಊಹಿಸಲು ಅಸಾಧ್ಯ. ಏಕೆಂದರೆ ಮುಖ್ಯಮಂತ್ರಿ ಅಥವಾ ಸಚಿವ ಪದವಿ ಎಂಬುದು ರಾಜಸತ್ತೆಯಲ್ಲಿ ಅಯಾಚಿತವಾಗಿ ಒದಗಿ ಬರುವ ಉತ್ತರಾಧಿಕಾರವಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಾಂವಿಧಾನಿಕ ಆಶಯಗಳನ್ನು, ಜನರ ಆಶೋತ್ತರಗಳನ್ನು ಈಡೇರಿಸುವುದಾಗಿ ಪ್ರಮಾಣ ಮಾಡಿ ಸ್ವೀಕರಿಸುವ ಅಧಿಕಾರ. ಅಂತಹ ಅಧಿಕಾರವನ್ನು ದುಡ್ಡು ಕೊಟ್ಟು ಖರೀದಿಸುವ ಪರಿಪಾಟ ಇದೆ. ಆದರೆ, ಇದೇ ಮೊದಲ ಬಾರಿಗೆ ಸಿ.ಡಿ. ತೋರಿಸಿ ಸಚಿವ ಸ್ಥಾನ ಗಿಟ್ಟಿಸಿಕೊಂಡ ಅಸಹ್ಯಕ್ಕೂ ಕರ್ನಾಟಕ ಸಾಕ್ಷಿಯಾಗಿರುವುದು ದುರಂತ.

ಸಂಪುಟ ವಿಸ್ತರಣೆಯಲ್ಲಿ ಯಡಿಯೂರಪ್ಪ ಮೇಲುಗೈ ಸಾಧಿಸಿದ್ದಾರೆ ಎಂಬ ವ್ಯಾಖ್ಯಾನ ರಾಜಕೀಯ ವಲಯದಲ್ಲಿ ನಡೆದಿದೆ. ಯಡಿಯೂರಪ್ಪನವರನ್ನು ಸತ್ವಪರೀಕ್ಷೆಗೆ ಸಿಲುಕಿಸಿ, ಅವರನ್ನು ಬಲಿ ಹಾಕುವ ತಂತ್ರಗಾರಿಕೆಯ ಭಾಗವಾಗಿ ಈ ಎಲ್ಲ ವಿದ್ಯಮಾನಗಳೂ ನಡೆಯುತ್ತಿವೆ. ಯೋಗೇಶ್ವರ್‌ಗೆ ಮಂತ್ರಿ ಸ್ಥಾನ ಕೊಡಲು ಯಡಿಯೂರಪ್ಪಗೆ ಸುತರಾಂ ಇಷ್ಟವಿರಲಿಲ್ಲ. ಕಾಣದ ಕೈಗಳ ಒತ್ತಡಕ್ಕೆ ಅವರು ಮಣಿದು ಕೊಟ್ಟಿದ್ದು ಸತ್ಯ. ಮುರುಗೇಶ ನಿರಾಣಿ, ಅರವಿಂದ ಲಿಂಬಾವಳಿ ಸೇರ್ಪಡೆ ಕೂಡ ಯಡಿಯೂರಪ್ಪಗೆ ಒಲ್ಲದ ವಿಷಯವಾಗಿತ್ತು.

ಸರ್ಕಾರ ರಚಿಸಲು ನೆರವಾದವರಿಗೆ ಸಚಿವ ಪಟ್ಟ ಕೊಡುವುದಷ್ಟೇ ಯಡಿಯೂರಪ್ಪನವರಿಗೆ ಕೊಟ್ಟ ಅವಕಾಶವಾಗಿತ್ತು. ವರಿಷ್ಠರ ನಿರ್ದೇಶನ ಮೀರಿ ಪರಾಕ್ರಮ ತೋರಿದ್ದೇ ಯಡಿಯೂರಪ್ಪ ಅವರಿಗೆ ಈಗ ಮುಳುವಾಗಬಹುದು. ಅದೇ ಕಾರಣಕ್ಕೆ ಬಿಜೆಪಿ ನಿಷ್ಠ ಶಾಸಕರು ಮೊದಲ ಬಾರಿಗೆ ಧ್ವನಿ ಎತ್ತಿ ಮಾತನಾಡತೊಡಗಿದ್ದಾರೆ. ಪಕ್ಷದ ದೆಹಲಿ ನಾಯಕರು ಬೆನ್ನಿಗೆ ಇಲ್ಲದಿದ್ದರೆ ಯತ್ನಾಳ ಸೇರಿದಂತೆ ಯಾರೊಬ್ಬರೂ ಇ‌ಷ್ಟು ದೊಡ್ಡ ಧ್ವನಿಯಲ್ಲಿ ಕೂಗೆಬ್ಬಿಸುತ್ತಿರಲಿಲ್ಲ. ಇದರ ಹಿಂದೆ ಯಡಿಯೂರಪ್ಪನವರ ‘ನೈತಿಕ’ ಬಲ ಕುಗ್ಗಿಸುವ ಹುನ್ನಾರ ಮೇಲ್ನೋಟಕ್ಕೆ ಕಾಣಿಸುತ್ತಿದೆ.

ಈ ಬೆಳವಣಿಗೆಗಳ ಮಧ್ಯೆಯೇ ಒಂದು ತಿಂಗಳಿಂದೀಚೆಗೆ ಹೈಕೋರ್ಟ್ ಕೊಟ್ಟ ಆದೇಶಗಳನ್ನೂ ಸೂಕ್ಷ್ಮವಾಗಿ ಅವಲೋಕಿಸಬೇಕು.

ಯಡಿಯೂರಪ್ಪನವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದ ಮೂರು ಡಿನೋಟಿಫೈ ಪ್ರಕರಣಗಳಿಗೆ ಹೈಕೋರ್ಟ್ ಮತ್ತೆ ಜೀವ ಕೊಟ್ಟಿದೆ. ಮಠದಹಳ್ಳಿ, ಬೆಳ್ಳಂದೂರು ಹಾಗೂ ದೇವನಹಳ್ಳಿ ಪ್ರಕರಣಗಳಲ್ಲಿ ವಿಚಾರಣೆ ರದ್ದತಿ ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಮನವಿ ವಜಾಗೊಳಿಸಿರುವ ಹೈಕೋರ್ಟ್‌, ತನಿಖೆ ನಡೆಸುವಂತೆ ಲೋಕಾಯುಕ್ತ, ಎಸಿಬಿಗೆ ಸೂಚಿಸಿದೆ. ಶಿವರಾಮ ಕಾರಂತ ಬಡಾವಣೆಯ 257 ಎಕರೆ ಡಿನೋಟಿಫೈ ಪ್ರಕರಣದ ವಿಚಾರಣೆ ಸದ್ಯವೇ ಸುಪ್ರೀಂ ಕೋರ್ಟ್‌ನಲ್ಲಿ ಎದುರಾಗಲಿದೆ.

ಸಿ.ಡಿ. ಸುಳಿಯ ಜತೆಗೆ ಭೂಚಕ್ರವೂ ಯಡಿಯೂರಪ್ಪ ಕುರ್ಚಿಯ ಸುತ್ತ ಗಿರಕಿ ಹೊಡೆಯಲಾರಂಭಿಸಿದೆ. 2011ರ ಘಟನಾವಳಿಗಳು ಪುನರಾವರ್ತನೆಯಾಗುವ ಸೂಚನೆಗಳು ಕಾಣಿಸುತ್ತಿವೆ. ವರಿಷ್ಠರ ನಡೆಯನ್ನು ಧಿಕ್ಕರಿಸಿ ಅಧಿಕಾರ ಉಳಿಸಿಕೊಳ್ಳುವ ಎದೆಗಾರಿಕೆಯನ್ನು ಯಡಿಯೂರಪ್ಪ ತೋರುತ್ತಿದ್ದರೆ, ಕೋರ್ಟ್‌ಗಳ ಆದೇಶಗಳನ್ನೇ ಕುಣಿಕೆಗಳಾಗಿ ಬಳಸಿ ಮುಖ್ಯಮಂತ್ರಿ ಕುರ್ಚಿಯ ಕಾಲುಗಳನ್ನೇ ಅಲುಗಾಡಿಸುವುದು ವರಿಷ್ಠರ ಅಪೇಕ್ಷೆ ಇದ್ದಂತಿದೆ. ಹೀಗಾಗಿಯೇ, ಸರ್ಕಾರ ರಚನೆಗೆ ನೆರವಾದವರಿಗೆ ಭರವಸೆ ಕೊಟ್ಟಂತೆ ಸಚಿವ ಸ್ಥಾನ ಕೊಡಲಿ ಎಂಬ ಅವಕಾಶವನ್ನು ಆ ಪಕ್ಷದ ವರಿಷ್ಠರು ಕೊಟ್ಟಿದ್ದರು.

ಪಕ್ಷವನ್ನು ಕಣ್ಣಳತೆಯಲ್ಲೇ ಆಡಿಸುವ ನರೇಂದ್ರ ಮೋದಿ, ಅಮಿತ್ ಶಾ ಅವರು, ತಮ್ಮ ಮೂಗಿನ ನೇರಕ್ಕೆ ಯಡಿಯೂರಪ್ಪ ನಡೆಯುವುದನ್ನು ಸಹಿಸಲಾರರು. ಇದೇನಿದ್ದರೂ ಕಡಿಯುವ ಮೊದಲು ಕುರಿಗೆ ಹಾಕುವ ಹಸಿ ಹುಲ್ಲಷ್ಟೇ ಎಂಬ ಮಾತುಗಳೂ ಬಿಜೆಪಿ ಗರ್ಭಗುಡಿಯಲ್ಲಿ ಕೇಳಿಸುತ್ತಿವೆ.

ಮಾತು ಮಾತಿಗೆ ‘ಶರಣ’ ಎನ್ನುವ ಯಡಿಯೂರಪ್ಪನವರಿಗೆ, ‘ಹೊನ್ನು ಮಾಯೆ ಎಂಬರು, ಹೊನ್ನು ಮಾಯೆಯಲ್ಲ/ಹೆಣ್ಣು ಮಾಯೆ ಎಂಬರು, ಹೆಣ್ಣು ಮಾಯೆಯಲ್ಲ/ಮಣ್ಣು ಮಾಯೆ ಎಂಬರು, ಹೆಣ್ಣು ಮಾಯೆಯಲ್ಲ/ ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ... ’ ಎಂಬ ಅಲ್ಲಮ ಪ್ರಭುದೇವರ ವಚನ ಯಾವಾಗ ಆದರ್ಶವಾಗಿ ಕಂಡೀತೋ ಆ ಸಿದ್ಧಲಿಂಗೇಶ್ವರನೇ ಬಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು