ಮಂಗಳವಾರ, ಜೂನ್ 22, 2021
27 °C
ಡಬಲ್ ಎಂಜಿನ್‌ ಸರ್ಕಾರದಿಂದ ಹೊಗೆ ಬಂದಿತೇ ವಿನಾ ಆಮ್ಲಜನಕ ಬರಲಿಲ್ಲ!

ಕೆಟ್ಟ ಎಂಜಿನ್‌: ಬಟ್ಟಬಯಲಿನಲಿ ಬೋಗಿ

ವೈ.ಗ.ಜಗದೀಶ್‌ Updated:

ಅಕ್ಷರ ಗಾತ್ರ : | |

ಒಂದು ಕಾಲದಲ್ಲಿ ಅದೊಂದು ನಂಬಿಕೆ ಇತ್ತು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ನೇತೃತ್ವದ ಸರ್ಕಾರ ಇದ್ದರೆ ಅಭಿವೃದ್ಧಿಯ ಹೊಳೆ ಧುಮ್ಮಿಕ್ಕುತ್ತದೆ; ಲಕ್ಷ್ಮಿ ಕಾಲು ಮುರಿದುಕೊಂಡು ರಾಜ್ಯದಲ್ಲೇ ಬಿದ್ದಿರುತ್ತಾಳೆ; ಕೇಳುವ ಮುನ್ನವೇ ನೆರವಿನ ಮಹಾಪೂರವೇ ಹರಿದುಬರುತ್ತದೆ...

ಏಕೆಂದರೆ ಅರ್ಧ ಶತಮಾನದ ಈಚೆಗಿನ ರಾಜಕೀಯ ಇತಿಹಾಸವನ್ನು ಗಮನಿಸಿದರೆ, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ನೇತೃತ್ವದ ಸರ್ಕಾರ ಇದ್ದದ್ದು ಅಪರೂಪ. ಇದ್ದರೂ ಒಂದು ವರ್ಷವಷ್ಟೇ. ಅವಿಭಜಿತ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಬೇರೆ ಪಕ್ಷಗಳ ನೇತೃತ್ವದ ಸರ್ಕಾರ ಇದ್ದರೂ ಅಲ್ಲಿಯ ಪ್ರಾದೇಶಿಕ ಪಕ್ಷಗಳು ಕೇಂದ್ರದಲ್ಲಿ ಅಧಿಕಾರ ನಡೆಸುವ ಪಕ್ಷಗಳ ಜತೆ ಕೂಡಿಕೆ ರಾಜಕಾರಣ ಮಾಡಿಕೊಳ್ಳುವುದನ್ನು ಕರಗತ ಮಾಡಿಕೊಂಡಿರುತ್ತಿದ್ದವು. ರಾಜಕೀಯ ನೆಂಟಸ್ತಿಕೆಯ ಕಾರಣಕ್ಕೆ ಆ ರಾಜ್ಯಗಳ ಅಭಿವೃದ್ಧಿಗೆ ತೊಡಕಾಗಲಿಲ್ಲ. ಕರ್ನಾಟಕ ಮಾತ್ರ ಈ ವಿಷಯದಲ್ಲಿ ಹತಭಾಗ್ಯವನ್ನೇ ಉಂಡುಟ್ಟು ಸೆಣಸುತ್ತಲೇ ಬಂದಿದೆ.

ಅದೇ ಕಾರಣಕ್ಕೋ ಏನೋ ಕರ್ನಾಟಕದ ಜನರು 2019ರಲ್ಲಿ ಎಡವಿ ಬಿದ್ದರು. ಹೀಗಾಗಿ, ಈಗ ಸೊಂಟ ಮುರಿದುಕೊಂಡು ಏಳಲು ನರಳಾಡಬೇಕಾದ ಸ್ಥಿತಿ ಬಂದಿದೆ. ಲೋಕಸಭೆ ಚುನಾವಣೆ ಹೊತ್ತಿಗೆ ಇಲ್ಲಿದ್ದ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿಕೂಟ ನೇತೃತ್ವದ ಸರ್ಕಾರದ ಒಳಜಗಳ ಕಂಡು ಜನ ಬೇಸತ್ತಿದ್ದರು. ಕೇಂದ್ರ–ರಾಜ್ಯದಲ್ಲಿ ಬೇರೆ ಪಕ್ಷಗಳ ನೇತೃತ್ವದ ಸರ್ಕಾರಗಳು ಇದ್ದಾಗಿನ ದುಃಸ್ಥಿತಿ ಕಂಡು ಪಶ್ಚಾತ್ತಾಪವನ್ನೂ ಪಟ್ಟಿದ್ದರು.

ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದ ಬಿಜೆಪಿ ನಾಯಕರು ‘ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ರಾಜ್ಯದಲ್ಲೂ ಬಿಜೆಪಿ ನೇತೃತ್ವದ ಸರ್ಕಾರ ಬರಲಿದೆ. ಹೀಗೆ ಡಬಲ್ ಎಂಜಿನ್ ಸರ್ಕಾರದಿಂದ ಅಭಿವೃದ್ಧಿಯೇ ಧರೆಗಿಳಿಯಲಿದೆ’ ಎಂದು ಬಣ್ಣದ ಭರವಸೆಗಳನ್ನು
ಉರುಳಿಸಿದ್ದರು. 28 ಕ್ಷೇತ್ರಗಳ ಪೈಕಿ 25 ಅನ್ನು ಬಿಜೆಪಿ ಗೆದ್ದರೆ, ಒಂದರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೆದ್ದಿದ್ದರು. ಕಾಂಗ್ರೆಸ್–ಜೆಡಿಎಸ್‌ ತಲಾ ಒಂದು ಸ್ಥಾನವನ್ನಷ್ಟೇ ಪಡೆದವು. ಹೀಗೆ ಬಿಜೆಪಿ ಮೇಲಿನ ಮಮಕಾರ ಹಾಗೂ ಆ ಪಕ್ಷದ ನಾಯಕರ ಮಾತಿನ ಮೇಲೆ ನಂಬಿಕೆ ಇಟ್ಟು ಮತಗಳನ್ನೆಲ್ಲ ಧಾರೆ ಎರೆದುಬಿಟ್ಟರು.

ಆದರೆ, ಎರಡು ವರ್ಷ ಕಳೆಯುವಷ್ಟರಲ್ಲಿ ಬಿಜೆಪಿ ನಾಯಕರ ಭರವಸೆ ಎಷ್ಟು ಪೊಳ್ಳೆಂಬುದು, ಬಣ್ಣದ ಮಾತು ನಂಬಿ ಮತ ಹಾಕಿದವರಿಗಷ್ಟೇ ಅಲ್ಲ, ಮತ ಹಾಕಿಸಿದ ‘ನಿಷ್ಠಾವಂತ’ರಿಗೂ ಅರ್ಥವಾಗಿ ಹೋಯಿತು.

ಕೋವಿಡ್‌ನಂತಹ ಸಾಂಕ್ರಾಮಿಕ ರೋಗ ನಾಡಿನ ಮೂಲೆಮೂಲೆಯನ್ನೂ ವ್ಯಾಪಿಸಿ ಕುಟುಂಬವನ್ನೇ ಅಥವಾ ಕುಟುಂಬದ ಯಜಮಾನನನ್ನೇ ಆಪೋಶನ ತೆಗೆದುಕೊಳ್ಳುತ್ತಾ, ಸಮಾಜವನ್ನೇ ಸ್ಮಶಾನಸದೃಶ ವಾಸ್ತವಕ್ಕೆ ದೂಡುತ್ತಿದೆ. ಡಬಲ್ ಎಂಜಿನ್ ಸರ್ಕಾರದ ಭರವಸೆ ಕೊಟ್ಟ ನರೇಂದ್ರ ಮೋದಿ, ನಾಡು– ದೇಶದ ಜನರ ಹಿತ ಕಾಯಲು ಬೇಕಾದ ನಿರ್ಣಯ ಕೈಗೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ.

ಡಬಲ್ ಎಂಜಿನ್ ಸರ್ಕಾರ ಹೋಗಲಿ, ಸಿಂಗಲ್ ಎಂಜಿನ್ ಸರ್ಕಾರ ಇದೆಯೇ ಎಂಬ ಅನುಮಾನ ದಟ್ಟವಾಗತೊಡಗಿದೆ. ಒಕ್ಕೂಟ ವ್ಯವಸ್ಥೆಯನ್ನು ಎಳೆಯುವ ಎಂಜಿನ್‌, ಕೊರೊನಾ ಸೃಷ್ಟಿಸಿದ ಭೀಕರ ಸಂಕಷ್ಟಗಳ ಮಧ್ಯೆ ಕೆಟ್ಟು ನಿಂತಂತೆ ಭಾಸವಾಗತೊಡಗಿದೆ. ನರೇಂದ್ರ ಮೋದಿ– ಅಮಿತ್ ಶಾ ಜೋಡಿ ಡಬಲ್ ಎಂಜಿನ್ ರೈಲಿನಂತೆ ಮುಂದೆ ನಿಂತು, ಕರ್ನಾಟಕವನ್ನು ವಿಶ್ವದಲ್ಲೇ ಅಭಿವೃದ್ಧಿಶೀಲ ರಾಜ್ಯದ ಬೋಗಿಯಾಗಿಸಿ ಎಳೆದೊಯ್ಯಲಿದೆ ಎಂದು ನಂಬಿ, ‘ಆಪರೇಷನ್ ಕಮಲ’ ನಡೆಸಿ ಸರ್ಕಾರ ರಚಿಸಿದ ಬಿ.ಎಸ್‌.ಯಡಿಯೂರಪ್ಪ ಮಾತ್ರ, ಎಂಜಿನ್‌ ಇಲ್ಲದ ಬೋಗಿಯನ್ನು ಬಟ್ಟ ಬಯಲಿನಲ್ಲಿ ನಿಲ್ಲಿಸಿಕೊಂಡು ಉಧೋ ಉಧೋ ಎಲ್ಲಮ್ಮ ಎಂದು ಅಂಗಲಾಚುವ ಸ್ಥಿತಿಗೆ ತಲುಪಿದ್ದಾರೆ.

ಕೋವಿಡ್ ಕಾಲದಲ್ಲಿ ರಾಜ್ಯಗಳ ನೆರವಿಗೆ ನಿಲ್ಲಬೇಕಾದುದು ಕೇಂದ್ರ ಸರ್ಕಾರದ ಸಾಂವಿಧಾನಿಕ ಜವಾಬ್ದಾರಿ. ಪಕ್ಷ ಯಾವುದೇ ಇದ್ದರೂ ಯಾತನೆಯ ಸಮಯದಲ್ಲಿ ರಾಜಕೀಯ ಮಾಡುವುದು ಕ್ರೌರ್ಯದ ಪರಮಾವಧಿ. 2009ರಲ್ಲಿ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿತ್ತು. ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ಮಹಾಪ್ರವಾಹ ಬಂದು ಜನ ನೆಲ–ನೆಲೆ ಕಳೆದುಕೊಂಡಿದ್ದರು. ಆಗ ರಾಜ್ಯಕ್ಕೆ ಭೇಟಿ ಕೊಟ್ಟ ಅಂದಿನ ಪ್ರಧಾನಿ ಮನಮೋಹನ ಸಿಂಗ್‌, ಅಧಿಕಾರದಲ್ಲಿರುವ ಪಕ್ಷ ಯಾವುದು ಎಂದು ನೋಡದೆ ಸ್ಥಳದಲ್ಲೇ ₹1,500 ಕೋಟಿ ನೆರವು ಘೋಷಿಸಿದ್ದರು. ಡಬಲ್ ಎಂಜಿನ್ ಸರ್ಕಾರ ಕೊಡುತ್ತೇವೆ ಎಂದು ವಾಗ್ದಾನ ಕೊಟ್ಟ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್, ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಸರ್ಕಾರ ಬಂದ ಮೇಲೆ ರಾಜ್ಯದ ದುರಿತ ಕಾಲದಲ್ಲಿ ನೆರವಿಗೆ ನಿಲ್ಲುವುದು ಹೋಗಲಿ, ಕರ್ನಾಟಕದ ಜನ ಅಥವಾ ಮುಖ್ಯಮಂತ್ರಿಯ ಅಹವಾಲು ಆಲಿಸುವ ಪರಿಪಾಟವನ್ನೇ ನಿಲ್ಲಿಸಿದರು. ದಶಕದ ನಂತರ ಮತ್ತೆ ಅಂತಹುದೇ ಪ್ರವಾಹ ಬಂದು ಊರು–ಕೇರಿಗಳೆಲ್ಲ ಕೊಚ್ಚಿ ಹೋದಾಗ, ಪ್ರಧಾನಿ ‘ಟ್ವೀಟ್‌’ ಮಾಡಿ ಸಮಾಧಾನ ಹೇಳುವ ಔದಾರ್ಯವನ್ನಷ್ಟೇ ತೋರಿದರು.

ಕೋವಿಡ್ ಕಾಲದಲ್ಲಿ ಕೂಡ ರಾಜ್ಯಕ್ಕೆ ಬೇಕಾದ ಸಹಾಯಹಸ್ತ ಚಾಚುವುದರಲ್ಲಿ ಮೋದಿ ನೇತೃತ್ವದ ಸರ್ಕಾರ ಔದಾರ್ಯ ತೋರುವುದು ಹೋಗಲಿ; ಕರ್ತವ್ಯವನ್ನೇ ನಿಭಾಯಿಸಲಿಲ್ಲ. ಕರ್ನಾಟಕ ಸರ್ಕಾರ ಆಮ್ಲಜನಕ ಕೇಳಿದರೆ ತಾರಮ್ಮಯ್ಯ ಮಾಡಿತು. ‘ಅಗತ್ಯದಷ್ಟು ಆಮ್ಲಜನಕ ಕೊಡದೇ ಇದ್ದರೆ ಆಸ್ಪತ್ರೆ–ಆರೋಗ್ಯ ಕೇಂದ್ರಗಳನ್ನು ಮುಚ್ಚುವ ದಯನೀಯ ಸ್ಥಿತಿ ಬರುತ್ತದೆ’ ಎಂದು ಯಡಿಯೂರಪ್ಪ ಅವರು ಪ್ರಧಾನಿ ಮುಂದೆ ಗೋಗರೆದರು. ಡಬಲ್ ಎಂಜಿನ್‌ನಿಂದ ಹೊಗೆ ಬಂದಿತೇ ವಿನಾ ಆಮ್ಲಜನಕ ಬರಲಿಲ್ಲ. ಕರ್ನಾಟಕಕ್ಕೆ 1,200 ಟನ್ ಆಮ್ಲಜನಕ ಒದಗಿಸಿ ಎಂದು ಹೈಕೋರ್ಟ್ ಹೇಳಿದರೂ ಅದನ್ನು ಪ್ರಶ್ನಿಸಿದ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ಮೊರೆ ಹೋಗಿ ತಮ್ಮದೇ ಪಕ್ಷದ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವ್ಯಾಜ್ಯ ಹೂಡಿತು. ಒಕ್ಕೂಟ ವ್ಯವಸ್ಥೆಯ ನಂಬಿಕೆಗಳನ್ನೇ ಬುಡಮೇಲು ಮಾಡಿತು.

ಲಸಿಕೆ, ರೆಮ್‌ಡಿಸಿವಿರ್ ಚುಚ್ಚುಮದ್ದಿನ ವಿಷಯದಲ್ಲಿ ಕೂಡ ಕರ್ನಾಟಕವನ್ನು ಅಪೂಟು ಕಡೆಗಣಿಸಿತು. ‘ಮಗನನ್ನು ಹದ್ದುಬಸ್ತಿನಲ್ಲಿಡಿ’ ಎಂದು ಹೇಳಿದ್ದನ್ನು ಕೇಳುತ್ತಿಲ್ಲ ಎಂಬ ಕಾರಣಕ್ಕೆ ಯಡಿಯೂರಪ್ಪನವರ ಮೇಲೆ ಮೋದಿ ಮತ್ತು ಶಾ ಅವರಿಗೆ ಸಿಟ್ಟಿರಬಹುದು; ಒಪ್ಪಿಕೊಳ್ಳೋಣ. ಆದರೆ, ಮೋದಿ ಪ್ರಧಾನಿಯಾಗುವಾಗ ಬೆಂಬಲಿಸಿದರಲ್ಲ; ಆ ಮತದಾರರ ಪ್ರಾಮಾಣಿಕ ನಂಬಿಕೆಯನ್ನಾದರೂ ಮೋದಿ ಅಥವಾ ಮತ ಪಡೆದ ಸಂಸದರು ಅಥವಾ ಅಂದು ಪಕ್ಷದ ಅಧ್ಯಕ್ಷರಾಗಿದ್ದ ಅಮಿತ್ ಶಾ ನೆನಪಿಸಿಕೊಳ್ಳಬೇಕಲ್ಲ.

ಇಲ್ಲಿಯವರೆಗೆ ಕರ್ನಾಟಕದ ಬಿಜೆಪಿ ನಾಯಕರು ಉತ್ತರಪ್ರದೇಶ, ಗುಜರಾತ್ ಮಾದರಿ ಎಂದು ಹೇಳುತ್ತಿದ್ದರು. ಈಗ, ಕೋವಿಡ್ ನಿಯಂತ್ರಣಕ್ಕೆ ಮಹಾರಾಷ್ಟ್ರ, ಕೇರಳ ಮಾದರಿ ಅನುಸರಿಸುವುದಾಗಿ ಸ್ವತಃ ಸಚಿವ ಅರವಿಂದ ಲಿಂಬಾವಳಿ ಹೇಳುತ್ತಿದ್ದಾರೆ. ಹಿಂದೆಲ್ಲ, ಕೋವಿಡ್ ಹರಡಲು ಮಹಾರಾಷ್ಟ್ರ, ಕೇರಳವೇ ಕಾರಣ ಎಂದು ದೂರುತ್ತಿದ್ದ ಬಿಜೆಪಿಯವರಿಗೆ ಈಗಲಾದರೂ ಅಲ್ಲಿನ ರಾಜ್ಯಗಳ ಸತ್ಕಾರ್ಯದ ಅರಿವಾಗಿರುವುದು ಸಮಾಧಾನದ ಸಂಗತಿ.

ಒಕ್ಕೂಟ ವ್ಯವಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತು ಪ್ರಧಾನಿಯಾದವರು ದೇಶಕ್ಕೆ ಮಾದರಿಯನ್ನು ಹಾಕಿಕೊಡಬೇಕು. ಸೈದ್ಧಾಂತಿಕ ಭಿನ್ನತೆ ಇದ್ದರೂ ಆ ಮಾದರಿಯನ್ನು ಎಲ್ಲ ರಾಜ್ಯಗಳೂ ಅನುಸರಿಸುವಂತೆ ಇರಬೇಕು. ಆದರೆ, ಮೋದಿ ಮಾದರಿ ಇಲ್ಲದಿರುವುದನ್ನು ಗಮನಿಸಿದ ಅವರ ಪಕ್ಷದವರೇ ಮಹಾರಾ‌ಷ್ಟ್ರ– ಕೇರಳ ಮಾದರಿಗಳ ಜಪ ಮಾಡುತ್ತಿದ್ದಾರೆ. ವಿಶ್ವಗುರು ಆಗಲು ಹೊರಟ ಮೋದಿ, ಈಗ ಅವರದ್ದೇ ಪಕ್ಷ ಆಡಳಿತ ನಡೆಸುತ್ತಿರುವ ರಾಜ್ಯಗಳಿಗೆ ಮಾದರಿಯಾಗಲು ಸಾಧ್ಯವಾಗದೇ ಇರುವುದು ಕೋವಿಡ್ ಕಲಿಸಿದ ಪಾಠವಾಗಿರಬೇಕು; ಇಲ್ಲವೇ ಸತ್ಯದರ್ಶನದ ಸಮಯದ ಬಾಗಿಲಿನಲ್ಲಿ ಅವರೆಲ್ಲ ಬಂದು ನಿಂತಿರಬೇಕು. ಅದನ್ನು ಇತಿಹಾಸ ಮಾತ್ರ ಹೇಳಬಲ್ಲದು.

ವೈ.ಗ.ಜಗದೀಶ್‌

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು