ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶ್ವಾಸನೆಗಳಿಗೆ ‘ಶ್ವಾಸ’ ತುಂಬುವಿರಾ ಯಡಿಯೂರಪ್ಪ...

ಕುಂಕುಮಧಾರಿ ಯಡಿಯೂರಪ್ಪನವರಿಗೆ ವಿಭೂತಿ ಶೋಭೆ ಯಾವಾಗ?
Last Updated 10 ಫೆಬ್ರುವರಿ 2020, 2:32 IST
ಅಕ್ಷರ ಗಾತ್ರ

ಆಡಳಿತದ ಚುಕ್ಕಾಣಿ ಹಿಡಿದವರಿಗೆ ರಾಜಕೀಯ ಸವಾಲುಗಳು ಎದುರಾಗುವುದು ಸಹಜ. ಸವಾಲು– ಸಂಘರ್ಷಗಳು ಇದ್ದಾಗ ಮತ್ತು ಭಿನ್ನಮತ ಭುಗಿಲೆದ್ದ ಹೊತ್ತಿನಲ್ಲಿಆಡಳಿತದ ಕಡೆಗೆ ಗಮನ ಕೊಡುವುದು ಕಷ್ಟ. ಆದರೆ, ಬಿಕ್ಕಟ್ಟುಗಳು ಶಮನವಾದ ನಂತರದ ಅವಧಿಯನ್ನು ಶಾಂತಿಕಾಲ ಅನ್ನಬಹುದು. ಸಂಘರ್ಷದ ಸಂದರ್ಭದಲ್ಲಿಏರುಪೇರಾಗಿದ್ದ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತರುವ, ಹೊಸನಾಡು ಕಟ್ಟುವ ಕಾಯಕಕ್ಕೆ ಇಂತಹ ಶಾಂತಿಕಾಲ ಬಳಕೆಯಾಗಬೇಕು.

ಬಿ.ಎಸ್‌. ಯಡಿಯೂರಪ್ಪ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ 2016ರಲ್ಲಿ ನಿಯುಕ್ತಿಗೊಂಡ ಬಳಿಕ ಇಂತಹದ್ದೊಂದು ಸಂಘರ್ಷದ, ಅಂತಃಕಲಹದ ಜಟಿಲ– ಕುಟಿಲ ಪರಿಸ್ಥಿತಿಗಳನ್ನು ಎದುರಿಸುತ್ತಲೇ ಬಂದರು. ಪಕ್ಷ ಸಂಘಟನೆ ಕೈಗೊಂಡು 2018ರ ಚುನಾವಣೆಯಲ್ಲಿ ಗದ್ದುಗೆಯ ಹತ್ತಿರ ತಲುಪಿದರು. ಬಹುಮತ ಸಿಗದೇ ಇದ್ದುದರಿಂದ ಅಧಿಕಾರ ಕೈತಪ್ಪಿತು. ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟವು ಅಧಿಕಾರ ಹಿಡಿಯಿತು. ಆದರೆ, ಯಡಿಯೂರಪ್ಪ ತಮ್ಮ ‘ಆಪರೇಷನ್‌’ ಪರಿಣತಿ ಬಳಸಿ ಮೈತ್ರಿ ಸರ್ಕಾರ ಕೆಡವಿ, ಪುನಃ ಆಡಳಿತದ ಚುಕ್ಕಾಣಿ ಹಿಡಿದರು. ಉಪಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಕುರ್ಚಿ ಭದ್ರಪಡಿಸಿಕೊಂಡರು. ಇಷ್ಟಕ್ಕೆಲ್ಲ ಬಹಳಷ್ಟು ಬಡಿದಾಡಿದ್ದಾರೆ. ಮತ್ತೊಂದು ಅಂತಃಕಲಹ ಶುರುವಾಗುವವರೆಗಿನ ಅಲ್ಪಕಾಲದ ಶಾಂತಿ ಈಗ ಅವರ ಮುಂದಿದೆ. ‘ಆಪರೇಷನ್ ಕಮಲ’ಕ್ಕೆ ಈಡಾದ ಶಾಸಕರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಂತೆ, ನಂಬಿ ಮತಹಾಕಿದವರಿಗೆ ಕೊಟ್ಟ ಮಾತನ್ನೂ ಉಳಿಸಿಕೊಳ್ಳಬೇಕಾಗಿದೆ.

ವಿಧಾನಸಭಾ ಚುನಾವಣೆ ವೇಳೆ ನೀಡಿದ್ದ ಆಶ್ವಾಸನೆಗಳಿಗೆ ಶ್ವಾಸ ಕೊಟ್ಟರೆ ರಾಜ್ಯದ ಜನ ಚಿರಕಾಲ ಅವರಿಗೆ ಉಪಕೃತರಾಗಿದ್ದಾರು. ‘ನಮ್ಮ ಕರ್ನಾಟಕಕ್ಕೆ ನಮ್ಮ ವಚನ: ನವಕರ್ನಾಟಕ ಸೃಷ್ಟಿ: ಬಿಜೆಪಿ ಪ್ರಣಾಳಿಕೆ ದೃಷ್ಟಿ’ ಎಂಬುದು 64 ಪುಟಗಳ ಪ್ರಣಾಳಿಕೆಯ ಆಕರ್ಷಕ ಘೋಷಣೆ.‘ರೈತರ ಬೆಳೆಗಳಿಗೆ ಒಂದೂವರೆ ಪಟ್ಟು ಹೆಚ್ಚು ಆದಾಯ, ಬಾಕಿ ಇರುವ ಎಲ್ಲ ನೀರಾವರಿ ಯೋಜನೆಗಳನ್ನು 2023ರೊಳಗೆ ಮುಕ್ತಾಯಗೊಳಿಸಲು ₹1.5 ಲಕ್ಷ ಕೋಟಿ ಅನುದಾನ’ ಅದರ ಪ್ರಮುಖ ಘೋಷಣೆಗಳು.

ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ (2008–2013) ಲೋಕಾಯುಕ್ತ ಬಲಿಷ್ಠವಾಗಿದ್ದ ಕಾರಣಕ್ಕೆ ಅನೇಕರು ಜೈಲಿಗೆ ಹೋಗಿದ್ದರು. ‘ಲೋಕಾಯುಕ್ತಕ್ಕೆ ನಮ್ಮ ಮೊದಲ ಸಂಪುಟ ಸಭೆಯಲ್ಲಿ ಪೂರ್ಣ ಅಧಿಕಾರ ನೀಡಲಾಗುವುದು ಹಾಗೂ 24/7 ಮಾದರಿಯಲ್ಲಿ ಕಾರ್ಯನಿರ್ವಹಿಸುವ ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಆರಂಭಿಸಲಾಗುವುದು’ ಎಂಬ ದಿಟ್ಟ ಘೋಷಣೆಯನ್ನೂ ಬಿಜೆಪಿಯ ಪ್ರಣಾಳಿಕೆ ಹೊಂದಿತ್ತು.

ಈ ಹಿಂದೆ ಒಮ್ಮೆ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳಲು ಗಣಿ ಮಾಫಿಯಾವೇ ಪ್ರಮುಖ ಕಾರಣ
ವಾಗಿತ್ತು. ಅದರ ಅರಿವಿದ್ದರೂ, ‘ಅಧಿಕಾರಕ್ಕೇರಿದ 30 ದಿನದೊಳಗೆ ಮರಳು, ಭೂಮಿ, ಗಣಿ ಮಾಫಿಯಾ
ದಂತಹ ಮಾಫಿಯಾರಾಜ್ ಕೊನೆಗಾಣಿಸಲು ಶಾಶ್ವತ ವಿಶೇಷ ಕಾರ್ಯಪಡೆ ರಚನೆ’ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಯಡಿಯೂರಪ್ಪ ಅಧಿಕಾರ ಹಿಡಿದು ಈಗ 180ಕ್ಕೂ ಹೆಚ್ಚು ದಿನಗಳು ಕಳೆದುಹೋಗಿವೆ. ಲೋಕಾಯುಕ್ತ ಬಲಪಡಿಸುವ, ಮಾಫಿಯಾರಾಜ್‌ ಮಟ್ಟ ಹಾಕುವ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ.

ಅಧಿಕಾರ ಶಾಶ್ವತವಲ್ಲ; ಇದ್ದಷ್ಟು ದಿನ ಮಾಡಿದ ಕೆಲಸವಷ್ಟೇ ಚಿರಸ್ಥಾಯಿಯಾಗಿ ಉಳಿಯಲಿದೆ. ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಎಸ್‌. ಬಂಗಾರಪ್ಪ, ವೀರಪ್ಪ ಮೊಯಿಲಿ, ಎಚ್.ಡಿ. ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಅವರನ್ನು ಇಂತಹ ಕಾಣ್ಕೆಗಳಿಗಾಗಿ ಜನ ನೆನೆಯುತ್ತಾರೆ. ಯಡಿಯೂರಪ್ಪ ಅವರು ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಭಾಗ್ಯಲಕ್ಷ್ಮಿ, ಸಂಧ್ಯಾ ಸುರಕ್ಷಾದಂತಹ ಭರವಸೆಯ ಯೋಜನೆಗಳನ್ನು ಜಾರಿಗೊಳಿಸಿದ್ದರು. ಆದರೆ, ಆ ಅವಧಿಯಲ್ಲಿನ ಭ್ರಷ್ಟಾಚಾರ ಆರೋಪಗಳು, ಗಣಿ ಅಕ್ರಮ, ಸಾಲುಸಾಲಾಗಿ ಸಚಿವರು ಜೈಲಿಗೆ ಹೋಗಿದ್ದರಿಂದಾಗಿ ಸರ್ಕಾರದ ಸಾಧನೆಯ ಮೇಲೆ ದೂಳು ಕವಿದುಬಿಟ್ಟಿತು.

ಸಾಧನೆ ಮಾಡಿದ ಬಹುತೇಕರು ತಮ್ಮ ಮಕ್ಕಳನ್ನು ಅಧಿಕಾರ ಕೇಂದ್ರದಿಂದ ದೂರ ಇಟ್ಟಿದ್ದರು. ಯಡಿಯೂರಪ್ಪನವರು ಹಚ್ಚಿಕೊಟ್ಟ ಚಾಳಿ, ನಂತರ ಬಂದ ಸಿದ್ದರಾಮಯ್ಯ ಕಾಲದಲ್ಲಿ ಮುಂದುವರಿಯಿತು. ಕುಮಾರಸ್ವಾಮಿ ಕಾಲದಲ್ಲಿ ಮಕ್ಕಳ ಕೈಯಲ್ಲಿ ಅಧಿಕಾರ ಇರದಿದ್ದರೂ ಕುಟುಂಬದವರೇ ಪಾರುಪತ್ಯ ನಡೆಸುತ್ತಿದ್ದುದು ಸುಳ್ಳೇನಲ್ಲ. ಯಡಿಯೂರಪ್ಪನವರು ಹಿಂದೆ ಜೈಲಿಗೆ ಹೋಗಲು, ಲೋಕಾಯುಕ್ತರಾಗಿದ್ದ ನ್ಯಾ. ಸಂತೋಷ ಹೆಗ್ಡೆ ವರದಿ ಎಷ್ಟು ಕಾರಣವೋ ಅಷ್ಟೇ ಬಲಿಷ್ಠ ಕಾರಣ ಮಕ್ಕಳು–ಅಳಿಯಂದಿರ ಹಸ್ತಕ್ಷೇಪ. ಈಗಲೂ ಮತ್ತೆ ಅಂತಹುದೇ ಟೀಕೆಗಳು ಬಿಜೆಪಿಯ ಗರ್ಭಗುಡಿಯಿಂದ ಹೊರಬರುತ್ತಿವೆ. ಬಿ.ವೈ.ವಿಜಯೇಂದ್ರ ಹಸ್ತಕ್ಷೇಪವು ಸರ್ಕಾರ ಮತ್ತು ಎಲ್ಲ ಸಚಿವರ ಖಾತೆಗಳೊಳಗೂ ಇಣುಕುತ್ತಿದೆ ಎಂಬ ಟೀಕೆ ಇದೆ. ಇದನ್ನು ಹೋಗಲಾಡಿಸಿ, ‘ಮುಖ್ಯಮಂತ್ರಿ ಅಧಿಕಾರ ನಿಮ್ಮ ಕೈಯಲ್ಲೇ ಇರಬೇಕು’ ಎಂಬರ್ಥದ ಮಾತನ್ನು ಬಿಜೆಪಿಯ ವರಿಷ್ಠರಲ್ಲಿ ಒಬ್ಬರಾದ ಅಮಿತ್ ಶಾ ಹೇಳಿದ್ದಾರಂತೆ.

ಹೀಗೆ ಹೇಳುವಾಗ ಕವಿ ಗೋಪಾಲಕೃಷ್ಣ ಅಡಿಗರ ‘ಧೃತರಾಷ್ಟ್ರನಪ್ಪುಗೆಗೆ ಭಗ್ನ ಬಲಭೀಮ’ ಎಂಬ ಸಾಲೊಂದು ನೆನಪಿಗೆ ಬರುತ್ತದೆ. ತನ್ನ ಮಗ ದುರ್ಯೋಧನನಿಗೆ ತಕ್ಕ ಎದುರಾಳಿಯಂತಿದ್ದ ಭೀಮಸೇನನನ್ನು ಭೇಟಿಯಾಗಬೇಕೆಂದು ಧೃತರಾಷ್ಟ್ರ ಕರೆ ಕಳುಹಿಸಿದ್ದ. ಎದುರಿಗೆ ತಾನೇ ನಿಂತರೆ ಪುಡಿಯಾಗುತ್ತೇನೆ ಎಂದರಿತಿದ್ದ ಭೀಮ, ತನ್ನ ಪ್ರತಿಮೆ ಮಾಡಿಸಿ ಅದನ್ನು ಅಪ್ಪಿಕೊಳ್ಳುವಂತೆ ಮಾಡಿದ್ದ. ಆತನ ರಾಕ್ಷಸ ಹಿಡಿತಕ್ಕೆ, ಭೀಮನ ಕಂಚಿನ ಪ್ರತಿಮೆಯೇ ಪುಡಿಪುಡಿಯಾಗುತ್ತದೆ. ಧೃತರಾಷ್ಟ್ರ ಅಂಧನಾಗಿದ್ದರಿಂದ ಎದುರಿಗಿರುವುದು ಪ್ರತಿಮೆಯೋ, ನಿಜ ಭೀಮನೋ ಎಂದು ಗೊತ್ತಾಗಿರುವುದಿಲ್ಲ. ಯಡಿಯೂರಪ್ಪನವರು ಪುತ್ರಪ್ರೇಮದ ಬಲೆಗೆ ಬಿದ್ದು, ಹಿಂದೆ ತನ್ನ ಬೆನ್ನಿಗೆ ನಿಂತಿದ್ದವರನ್ನು ಈ ಸ್ಥಿತಿಗೆ ದೂಡದಿರುವ ಎಚ್ಚರ ವಹಿಸಬೇಕಾದ ಕಾಲ ಇದಾಗಿದೆ.

ನಮ್ಮ ಹಿರಿಯ ಕವಿಯೊಬ್ಬರು ಯಡಿಯೂರಪ್ಪನವರನ್ನು ‘ಆಧುನಿಕ ಬಸವಣ್ಣ’ ಎಂದು ಬಣ್ಣಿಸಿದ್ದರು. ಲಿಂಗಾಯತ–ವೀರಶೈವ ಸಮುದಾಯದ ಪ್ರಶ್ನಾತೀತ ನಾಯಕರಾಗಿರುವ ಯಡಿಯೂರಪ್ಪನವರು ಬಸವಣ್ಣ
ನವರ ನಿಜಾದರ್ಶಗಳನ್ನು ಪಾಲನೆ ಮಾಡಬೇಕಾದ ಹೊಣೆಯನ್ನೂ ಈ ಮೂಲಕ ಆ ಕವಿ ಹೊರಿಸಿದ್ದಾರೆ.

ಬ್ರಾಹ್ಮಣನಾಗಿ ಹುಟ್ಟಿದರೂ ಬ್ರಾಹ್ಮಣ್ಯದ ವಿರುದ್ಧ ಸಿಡಿದೆದ್ದವರು ಬಸವಣ್ಣ. ಅದು ಎಷ್ಟರಮಟ್ಟಿಗೆ ಎಂದರೆ, ‘ಚೆನ್ನಯ್ಯನ ಮನೆಯ ದಾಸನ ಮಗನು/ಕಕ್ಕಯ್ಯನ ಮನೆಯ ದಾಸಿಯ ಮಗಳು/ಇವರಿಬ್ಬರು ಹೊಲದಲಿ ಬೆರಣಿಗೆ ಹೋಗಿ/ಸಂಗವ ಮಾಡಿದರು/ಇವರಿಬ್ಬರಿಗೆ ಹುಟ್ಟಿದ ಮಗ ನಾನು/ಕೂಡಲಸಂಗಮ ದೇವ ಸಾಕ್ಷಿಯಾಗಿ’ ಎಂದು ಬಣ್ಣಿಸಿಕೊಳ್ಳುತ್ತಾರೆ. ಅಸ್ಪೃಶ್ಯರು ಓಡಾಡಿದ ಜಾಗೆಯಲ್ಲಿ ಓಡಾಡಬಾರದೆಂಬಷ್ಟು ಕಠೋರ ಜಾತಿ ಪದ್ಧತಿ ಇದ್ದ ಕಾಲದೊಳಗೆ ಬ್ರಾಹ್ಮಣರು ಕೀಳಾಗಿ ಕಂಡಿದ್ದಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯನಂತಹವರ ಮನೆಯ ದಾಸ–ದಾಸಿಯರಿಗೆ ಹುಟ್ಟಿದವನು ಎಂದು 12ನೇ ಶತಮಾನದಲ್ಲೇ ಸಾರಿ ಹೇಳುವುದಿದೆಯಲ್ಲ, ಅದು ಪಾದರಸವನ್ನು ಕುಡಿದೂ ಬದುಕುವ ಶಕ್ತಿ ಇರುವವರಿಗೆ ಮಾತ್ರ ಸಾಧ್ಯವಾಗುವಂಥದ್ದು.

ಲಿಂಗಾಯತರ ನಾಯಕ ಎಂದು ಹೇಳಿಕೊಳ್ಳುವ ಯಡಿಯೂರಪ್ಪನವರು ಆ ದಾರಿಯಲ್ಲಿದ್ದಾರೆಯೇ ಎಂಬ ಪ್ರಶ್ನೆಯೂ ಇದೆ. ಯಡಿಯೂರಪ್ಪನವರು ಹಣೆಯಲ್ಲಿ ಕುಂಕುಮಶೋಭಿತರೇ ವಿನಾ ಶರಣತ್ವದ ಕುರುಹಿನಂತಿರುವ ವಿಭೂತಿ ಪಟ್ಟೆಯನ್ನು ಹಣೆ ಮೇಲೆ ಬಳಿದುಕೊಂಡವರಲ್ಲ. ಅವರು ವೋಟಿಗಾಗಿ ಲಿಂಗಾಯತ ಮತ್ತು ಅಧಿಕಾರಕ್ಕಾಗಿ ಹಿಂದುತ್ವವನ್ನು ಅನುಸರಿಸುವಂತೆ ತೋರುತ್ತಾರೆ. ಬಿಜ್ಜಳನ ಆಸ್ಥಾನದಲ್ಲಿ ಮಹಾಮಂತ್ರಿಯಾಗಿದ್ದ ಬಸವೇಶ್ವರರು, ತಮ್ಮ ಜೀವನವನ್ನು ಜನರಿಗಾಗಿಯೇ ಮೀಸಲಿಟ್ಟವರು. ಯಡಿಯೂರಪ್ಪ ನಿಜಶರಣನಾಗಬೇಕಾದರೆ ‘ಲಿಂಗಿಬ್ರಾಹ್ಮಣ್ಯ’ವನ್ನು ತೊರೆಯಬೇಕು.

‘ಊರ ಮುಂದೆ ಹಾಲ ಹಳ್ಳ ಹರಿವುತ್ತಿರಲು/ಒರೆಯಾವಿನ ಬೆನ್ನ ಹರಿಯಲದೇಕಯ್ಯಾ/ಲಜ್ಜೆಗೆಡಲೇಕೆ ನಾಣುಗೆಡಲೇಕೆ/ಕೂಡಲಸಂಗಮದೇವನುಳ್ಳನ್ನಕ್ಕ/ ಬಿಜ್ಜಳನ ಭಂಡಾರವೆನಗೇಕಯ್ಯಾ’ ಎಂದು‌ಬಸವಣ್ಣ
ನವರು ಹೇಳುತ್ತಾರೆ. ಯಡಿಯೂರಪ್ಪ ಮನೆಯ ಮುಂದೆ ಹಾಲಹಳ್ಳವೇ ಹರಿಯುತ್ತಿದೆ. ಹಾಗಿರುವಾಗ ಆಸ್ತಿ–ಪಾಸ್ತಿ, ಹಣ–ಸಂಪತ್ತಿನ ಮಾಯೆಯಿಂದ ಹೊರಬರಲಿ. ‘ದೂಷಕನವನೊಬ್ಬ ದೇಶವ ಕೊಟ್ಟಡೆ/ಆಸೆ ಮಾಡಿ ಅವನ ಹೊರೆಯಲಿರಬೇಡ’ ಎಂಬ ಬಸವಣ್ಣನವರ ಮಾತು ಅನುಸರಣೆಯಲ್ಲಿ ಬಂದರೆ ರಾಜ್ಯ ಉದ್ಧಾರವಾದೀತು. ಹೈದರಾಬಾದ್‌ ಕರ್ನಾಟಕಕ್ಕೆ ‘ಕಲ್ಯಾಣ’ ಕರ್ನಾಟಕ ಎಂದು ಹೆಸರು ಬದಲಿಸಿದರೆ ಸಾಲದು. ಯಡಿಯೂರಪ್ಪ ಅವರು, ಸಮಗ್ರ ಕರ್ನಾಟಕವನ್ನೇ ಕಲ್ಯಾಣವಾಗಿಸುವ ಸಂಕಲ್ಪ ತೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT