ಅಧಿಕಾರದಲ್ಲಿ ಇರುವಷ್ಟು ಕಾಲ ಜನರ ಹಿತಕ್ಕಾಗಿ ದುಡಿಯುವುದು ಜನಪರ ನಾಯಕನ ಲಕ್ಷಣ. ಮುಂದೆಯೂ ಕುರ್ಚಿಯಲ್ಲಿ ಇರಬಹುದಾದ ದಿನಗಳ ಲೆಕ್ಕಾಚಾರದಲ್ಲಿ ವರ್ತಮಾನದ ತವಕ ತಲ್ಲಣಗಳನ್ನು ನಿರ್ಲಕ್ಷಿಸಬಾರದು. ಜನಹಿತ ಮರೆತ ನಾಯಕರನ್ನು ಜನರೂ ನಿರ್ಲಕ್ಷಿಸಿರುವ ಉದಾಹರಣೆಗಳನ್ನು ಕಾಂಗ್ರೆಸ್ ನಾಯಕರು ಮರೆಯಬಾರದು.

ಕವಿ ಪಂಪನ ‘ಆದಿಪುರಾಣ’ ಮಹಾಕಾವ್ಯದಲ್ಲಿ ಭರತ–ಬಾಹುಬಲಿಯ ಪ್ರಸಂಗವಿದೆ. ಚಕ್ರವರ್ತಿ ಭರತನು ತನ್ನ ಬಳಿಯಿದ್ದ ಚಕ್ರದ ಸಹಾಯದಿಂದ ಷಟ್ಖಂಡಮಂಡಳವನ್ನು ಅನಾಯಾಸವಾಗಿ ಗೆದ್ದು, ಗರ್ವದಿಂದ ಇರುತ್ತಾನೆ. ವೃಷಭಾದ್ರಿ ನೆತ್ತಿಯಲ್ಲಿ ‘ವಿಶ್ವವಿಶ್ವಂಭರಾವಿಜಯ’ ಎಂದು ತನ್ನ ಕೀರ್ತಿಯನ್ನು ಕೆತ್ತಿಸಲು ಮುಂದಾಗುತ್ತಾನೆ. ಆದರೆ, ಅಲ್ಲಿ ಗತಿಸಿದ ನೂರಾರು ಚಕ್ರವರ್ತಿಗಳ ಕುರಿತ ಮೆಚ್ಚುಗೆ ಮಾತುಗಳು, ಪಡೆದ ಪ್ರಶಸ್ತಿ, ಬಿರುದಾವಳಿಗಳ ಕೆತ್ತನೆಗಳನ್ನು ನೋಡಿ ಭರತೇಶ್ವರನ ಗರ್ವರಸವು ಕ್ಷಣವೇ ಕರಗಿ ಹೋಗುತ್ತದೆ. ಆದರೂ ಹಿಂದಿನ ದೊರೆಯೊಬ್ಬನ ಹೆಸರನ್ನು ತನ್ನ ದಂಡದಿಂದ ಅಳಿಸಿ, ಅಲ್ಲಿ ತನ್ನ ಹೆಸರನ್ನು ಬರೆಯಿಸಿ ಅಯೋಧ್ಯೆಯ ಕಡೆ ನಡೆಯುತ್ತಾನೆ.

ಅಯೋಧ್ಯೆ ದ್ವಾರ ಎದುರಾಗುತ್ತಿದ್ದಂತೆಯೇ ಅವನ ಬಳಿ ಇದ್ದ ಚಕ್ರ ಮುಂದೆ ಚಲಿಸದೇ ನಿಂತು ಬಿಡುತ್ತದೆ. ಅಚ್ಚರಿಗೊಂಡ ಭರತ ಕಾರಣ ಕೇಳಿದಾಗ, ಹೊರಗಿನ ಸಮಸ್ತರನ್ನು ಗೆದ್ದರೂ ಒಳಗಿರುವ ಆತನ ಸಹೋದರ ಬಾಹುಬಲಿ ಶರಣಾಗದೇ ಇದ್ದುದರಿಂದ ಜೈತ್ರಯಾತ್ರೆ ಪೂರ್ಣವಾಗಲಿಲ್ಲವೆಂಬುದು ಗೊತ್ತಾಗುತ್ತದೆ. ವಿಜಯೋನ್ಮತ್ತನಾದ ಭರತನಿಗೆ ಅವರನ್ನೂ ಗೆಲ್ಲಬೇಕೆಂಬ ತವಕ. ಅಣ್ಣತಮ್ಮಂದಿರ ಮಧ್ಯೆ ಯುದ್ಧ ನಡೆದರೆ ಸಾವು ನೋವು ಸಂಭವಿಸುತ್ತದೆ ಎಂದರಿತ ಮಂತ್ರಿಗಳು, ದೃಷ್ಟಿಯುದ್ಧ, ಮಲ್ಲಯುದ್ಧ, ಬಾಹುಯುದ್ಧ ನಡೆಸಲು ಸೂಚಿಸುತ್ತಾರೆ. ಭರತ–ಬಾಹುಬಲಿಯ ಮಧ್ಯೆ ಯುದ್ಧಗಳು ನಡೆದಾಗ, ಎಲ್ಲದರಲ್ಲೂ ಬಾಹುಬಲಿ ಗೆಲ್ಲುತ್ತಾನೆ. ಬಾಹುಯುದ್ಧದಲ್ಲಿ ಬಾಹುಬಲಿಯು ಅಣ್ಣನನ್ನು ಒಂದೇ ಸಲ ಮೇಲಕ್ಕೆತ್ತಿ ನೆಲಕ್ಕೆ ಬಡಿಯುತ್ತಾನೆ. ತಕ್ಷಣವೇ ಎಚ್ಚತ್ತ ಬಾಹುಬಲಿ, ಚಕ್ರವರ್ತಿಯಾದ ತನ್ನ ಅಣ್ಣನನ್ನು ಹೀಗೆ ಮಾಡುವುದು ಸರಿಯಲ್ಲವೆನಿಸಿ ಗೆದ್ದರೂ ಸುಮ್ಮನಾಗುತ್ತಾನೆ. ಕೋಪದಿಂದ ರೊಚ್ಚಿಗೆದ್ದ ಭರತ, ತನ್ನ ಬಳಿ ಇದ್ದ ಚಕ್ರವನ್ನು ಆತನ ಮೇಲೆ ಪ್ರಯೋಗಿಸುತ್ತಾನೆ. ಅದು ಕೂಡ ಬಾಹುಬಲಿಗೆ ಮೂರು ಸುತ್ತು ಬಂದು ನಿಂತು ಬಿಡುತ್ತದೆ. ಆಗ ಬಾಹುಬಲಿ, ‘ನೆಲಸುಗೆ ನಿನ್ನ ವೃಕ್ಷದೊಳ್ ನಿಶ್ಚಲಮೀ ಈ ಭಟಖಡ್ಗಮಂಡಲೋತ್ಪಲವನ ವಿಭ್ರಮಭ್ರಮರಿಯಪ್ಪ ಮನೋಹರಿ ರಾಜಲಕ್ಷ್ಮಿ ಭೂವಲಯಮನಯ್ಯವಿತ್ತುದುಮನಾಂ ನಿನಗಿತ್ತು ದೇನಣ್ಣ’ ಎಂದು ಅಣ್ಣನಿಗೆ ಹೇಳಿ ತಪಸ್ಸಿಗೆ ನಡೆದುಬಿಡುತ್ತಾನೆ.

ಇಂದು ನಾಡು, ದೇಶ, ವಿದೇಶಗಳಲ್ಲಿ ಅಧಿಕಾರಕ್ಕಾಗಿ ಕಚ್ಚಾಟ, ತಾವೇ ಗೆದ್ದೆವೆಂದು ಬೀಗುವ, ಅಧಿಕಾರವೊಂದೇ ಶಾಶ್ವತವೆಂದು ನಂಬಿರುವ ‘ಮಹಾನಾಯಕರು, ವಿಶ್ವಗುರು’ಗಳ ಮಧ್ಯೆ ಬಾಹುಬಲಿಯ ಆದರ್ಶ ಯಾರಿಗೆ ಬೇಕಾಗಿದೆ? ಎಲ್ಲರೂ ಭರತನ ರೀತಿಯಲ್ಲಿ ತಾವೇ ‘ವಿಶ್ವವಿಶ್ವಂಭರಾ ವಿಜಯ’ ಎಂದು ತವಕಿಸುವ, ದಾಖಲೆ ಬರೆಯುವ ಮಹತ್ವಾಕಾಂಕ್ಷೆಯಲ್ಲಿದ್ದಾರೆ.

ಕರ್ನಾಟಕದಲ್ಲಿಯೂ ನಾಯಕತ್ವದ ಕಚ್ಚಾಟ ದಿನೇ ದಿನೇ ತಾರಕಕ್ಕೇರುತ್ತಿದೆ. 2023ರಲ್ಲಿ ನಡೆದಿದೆ ಎಂದು ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಯಲ್ಲಿರುವ ‘ಅಧಿಕಾರ ಹಂಚಿಕೆಯ ಸೂತ್ರ’ದ ಸಂಗತಿ ಆಗಾಗ ಮುನ್ನೆಲೆಗೆ ಬಂದು, ಮತ್ತೆ ಮರೆಯಾಗುತ್ತಲೇ ಇದೆ. ನವೆಂಬರ್ಗೆ ಸರ್ಕಾರ ಎರಡೂವರೆ ವರ್ಷ ಪೂರ್ಣಗೊಳಿಸುತ್ತಿದ್ದು, ಸೂತ್ರ ಹರಿದಂತಿರುವ ‘ಅಧಿಕಾರದ ಗಾಳಿಪಟ’ ತೊಯ್ದಾಡಲಾರಂಭಿಸಿದೆ.

ಮೈಸೂರು ದಸರಾ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂದಿನ ದಸರಾಕ್ಕೂ ತಾವೇ ಚಾಲನೆ ನೀಡುವುದಾಗಿ ಹೇಳಿದ್ದರು. ಇದಕ್ಕೆ ಪ್ರತಿಯಾಗಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಬಲಿಗರು ಪ್ರತಿತಂತ್ರ ಹೆಣೆಯಲು ಆರಂಭಿಸಿದರು. ಹಾಸನಾಂಬೆ ದರ್ಶನ ಪಡೆದ ಸಿದ್ದರಾಮಯ್ಯ, ‘ನಾಯಕತ್ವ ಬದಲಾವಣೆಯೂ ಇಲ್ಲ; ನವೆಂಬರ್ ಕ್ರಾಂತಿಯೂ ಇಲ್ಲ’ ಎಂದು ಹೇಳಿ, ಅಧಿಕಾರ ಬಿಟ್ಟುಕೊಡದಿರುವ ಸಂದೇಶ ರವಾನಿಸಿದ್ದಾರೆ. ತಮ್ಮ ಕುರಿತ ಪುಸ್ತಕ ಬಿಡುಗಡೆ ವೇಳೆ ಮಾತನಾಡಿದ ಶಿವಕುಮಾರ್, ‘ಸಮ್ಮಿಶ್ರ ಸರ್ಕಾರ ಬಿದ್ದುಹೋಗುವ ವೇಳೆ ಉಪಮುಖ್ಯಮಂತ್ರಿ ಹುದ್ದೆಯೋ ಜೈಲೋ ಎಂಬ ಆಯ್ಕೆ ಇಡಲಾಗಿತ್ತು. ಪಕ್ಷನಿಷ್ಠನಾಗಿ ಜೈಲುವಾಸ ಆಯ್ಕೆ ಮಾಡಿಕೊಂಡೆ’ ಎಂದಿದ್ದಾರೆ. 2019ರಲ್ಲೇ ಅವಕಾಶದ ಬಾಗಿಲನ್ನು ಬಿಜೆಪಿ ತೆರೆದಿತ್ತು ಎಂಬುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿ, ತಮಗೂ ಆಯ್ಕೆಯ ದಾರಿಗಳಿವೆ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.

ಇವೆಲ್ಲದರ ನಡುವೆಯೇ, ಬಿಹಾರ ಚುನಾವಣೆ ಬಳಿಕ ಸಚಿವ ಸಂಪುಟ ಪುನರ್ರಚನೆ ವಿಷಯವನ್ನು ಚರ್ಚಿಸಲಾಗುವುದು ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಸಚಿವರು ತಮ್ಮ ಸ್ಥಾನ ಉಳಿಸಿಕೊಳ್ಳಲು, ಆಕಾಂಕ್ಷಿಗಳು ತಮ್ಮ ಸುತ್ತಲೇ ನೆರೆದಿರುವಂತೆ ನೋಡಿಕೊಳ್ಳುವ ತಂತ್ರಗಾರಿಕೆಯ ಭಾಗವಾಗಿಯೂ ಈ ವಿಷಯವನ್ನು ಮುನ್ನೆಲೆಗೆ ತರಲಾಗಿದೆ ಎಂಬುದು ರಹಸ್ಯವೇನಲ್ಲ. ಯಾವುದೇ ಕಾರಣಕ್ಕೂ ನಾಯಕತ್ವ ಬಿಟ್ಟುಕೊಡದಿರುವ ಛಲಕ್ಕೆ ಬಿದ್ದಿರುವ ಸಿದ್ದರಾಮಯ್ಯ, ಬಹುಸಂಖ್ಯೆಯಲ್ಲಿರುವ ತಮ್ಮ ಗುಂಪು ಚದುರದಂತೆ ಹಿಡಿದಿಟ್ಟುಕೊಳ್ಳುವ ಚಾಣಾಕ್ಷತೆಯನ್ನು ತೋರಿಸಿದ್ದಾರೆ. ಅದೇ ಕಾರಣಕ್ಕಾಗಿಯೇ, ಮುಖ್ಯಮಂತ್ರಿ ಆಯ್ಕೆಗೆ ಹೈಕಮಾಂಡ್ ಆಶೀರ್ವಾದದ ಜತೆಗೆ ಶಾಸಕರ ಬೆಂಬಲವೂ ಮುಖ್ಯವಾಗುತ್ತದೆ ಎಂಬ ಹೊಸ ದಾಳವನ್ನೂ ಅವರು ಉರುಳಿಸಿದ್ದಾರೆ. ಶಾಸಕರ ಬಲಕ್ಕಿಂತ ಹೈಕಮಾಂಡ್ ಬಲವನ್ನೇ ನೆಚ್ಚಿಕೊಂಡಿರುವ ಶಿವಕುಮಾರ್, ಇದಕ್ಕೆ ಪರ್ಯಾಯವಾಗಿ ‘ವರಿಷ್ಠರ ತೀರ್ಮಾನವೇ ಮುಖ್ಯ’ ಎಂಬ ಪ್ರತಿದಾಳವನ್ನೂ ಒಗೆದಿದ್ದಾರೆ. ಈ ಎಲ್ಲ ಮಾತು–ನಡವಳಿಕೆಗಳನ್ನು ಗಮನಿಸಿದರೆ, ಬಿಹಾರ ವಿಧಾನಸಭೆ ಫಲಿತಾಂಶವು ರಾಜ್ಯ ರಾಜಕೀಯದ ಮೇಲೂ ನಿರ್ಣಾಯಕ ಪರಿಣಾಮ ಬೀರುವ ಲಕ್ಷಣಗಳು ಕಾಣಿಸುತ್ತಿವೆ. ರಾಜ್ಯವಾಳುವವರು ಅಲ್ಲಿಯವರೆಗಾದರೂ ಅಭಿವೃದ್ಧಿ ಕಾರ್ಯಗಳತ್ತ ಲಕ್ಷ್ಯ ಕೊಡಬೇಕಾದುದು ಅವರ ಕರ್ತವ್ಯ.

2019–2023ರ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಇದೇ ಮಾದರಿಯ ಅಸ್ಥಿರತೆ ರಾಜ್ಯವನ್ನು ಬಾಧಿಸಿತ್ತು. ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರನ್ನು ಅಕಾಲದಲ್ಲೇ ಕೆಳಗಿಳಿಸಲಾಯಿತು. ನಂತರ, ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿ ವರಿಷ್ಠರು ಅಧಿಕಾರದ ಕುರ್ಚಿಯಲ್ಲಿ ಕೂರಿಸಿದರೂ ಈಗ ಇಳಿಯುತ್ತಾರೆ, ಆಗ ಇಳಿಯುತ್ತಾರೆ ಎಂಬ ಅನಿಶ್ಚಿತ ಸ್ಥಿತಿಯನ್ನು ಕಾಯ್ದುಕೊಂಡೇ ಬರಲಾಗಿತ್ತು. ಅಸ್ಥಿರ ಸರ್ಕಾರ ಎಂಬುದು ಸುಗಮ ಆಡಳಿತಕ್ಕೆ ಧಕ್ಕೆ ತರುವ ಜತೆಗೆ, ಇದ್ದಷ್ಟು ದಿನ ತಮ್ಮ ತಿಜೋರಿ ತುಂಬಿಸಿಕೊಳ್ಳುವ ಮನಃಸ್ಥಿತಿಗೆ ಆಡಳಿತಾರೂಢರನ್ನು ದೂಡುತ್ತದೆ. ಅಧಿಕಾರ ಇರುವಾಗಲೇ ಮೂರು ತಲೆಮಾರಿಗೆ ಆಗುವಷ್ಟು ಹಣ ಮಾಡಿಕೊಳ್ಳಬೇಕೆಂಬ ಹಪಹಪಿಗೆ ಅಧಿಕಾರಸ್ಥರು ಬಿದ್ದರೆ, ಅದಕ್ಕಾಗಿಯೇ ಕಾಯುತ್ತಿರುವ ಅಧಿಕಾರಿ ವರ್ಗ ಕೂಡ ಹೊನ್ನಿನ ಚೀಲವನ್ನು ತುಂಬಿಸಿಕೊಳ್ಳುವತ್ತಲೇ ಸಕಲ ಶ್ರಮವನ್ನು ವಿನಿಯೋಗಿಸತೊಡಗುತ್ತದೆ.

ಬಿಜೆಪಿ ಅವಧಿಯ ರಾಜಕೀಯವನ್ನು ನೋಡಿಯೇ ನಾಡಿನ ಜನ ಭಾರಿ ಬಹುಮತವನ್ನು ಕಾಂಗ್ರೆಸ್ಗೆ ಕೊಟ್ಟರು. ಜನ ಕೊಟ್ಟ ಅಧಿಕಾರವನ್ನು ಜನಕಲ್ಯಾಣಕ್ಕೆ ಬಳಸಬೇಕೇ ವಿನಾ ಅಧಿಕಾರಕ್ಕಾಗಿ ನಿತ್ಯವೂ ಗುದ್ದಾಡುವುದಕ್ಕಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ತಮ್ಮ ಹೈಕಮಾಂಡ್ ಮುಂದೆ ಮಾಡಿಕೊಂಡಿದ್ದಾರೆ ಎನ್ನಲಾದ ‘ಒಪ್ಪಂದ’ದಂತೆ ಅವರಿಬ್ಬರು ಅಧಿಕಾರವನ್ನಾದರೂ ಹಂಚಿಕೊಳ್ಳಲಿ; ಸೂತ್ರವನ್ನಾದರೂ ಹರಿದುಕೊಳ್ಳಲಿ. ಆದರೆ ಅದನ್ನು ಪಕ್ಷದ ಆಂತರಿಕ ಬಿಕ್ಕಟ್ಟಾಗಿ ಪರಿಗಣಿಸಿ ಬಗೆಹರಿಸಿಕೊಳ್ಳಬೇಕೇ ಹೊರತು, ಜನಸಾಮಾನ್ಯರ ಸಮಸ್ಯೆ ಎಂಬಂತೆ ಬಿಂಬಿಸುವುದು ಮುತ್ಸದ್ದಿಗಳಿಗೆ ತಕ್ಕ ನಡೆಯಲ್ಲ. ‘ನಾಯಕತ್ವ ಬದಲಿಲ್ಲ, ಸಂಪುಟ ಪುನರ್ ರಚನೆ ಇಲ್ಲ’ ಎಂದು ನಿತ್ಯವೂ ಜಾಗಟೆ ಬಾರಿಸುವುದರಿಂದ ಜನರಿಗೆ ಕಿರಿಕಿರಿ ಹೆಚ್ಚಾಗುತ್ತದೆಯೇ ವಿನಾ ನಾಡಿನ ಹಿತಕ್ಕೆ ಏನೂ ಪ್ರಯೋಜನವಿಲ್ಲ.

ಅಧಿಕಾರ ಯಾವತ್ತೂ ಶಾಶ್ವತವಲ್ಲ. ಅಧಿಕಾರವನ್ನು ಬಳಸಿ ಜನರಿಗೆ, ರಾಜ್ಯಕ್ಕೆ ಏನು ಮಾಡಿದ್ದಾರೆ ಎಂಬುದಷ್ಟೇ ಚರಿತ್ರೆಯಲ್ಲಿ ಉಳಿದಿದೆ. ಅಧಿಕಾರದಲ್ಲಿದ್ದಾಗ ಎಷ್ಟು ಶಿಲಾನ್ಯಾಸ, ಉದ್ಘಾಟನೆಗಳ ಕಲ್ಲುಗಳನ್ನು ನೆಟ್ಟಿದ್ದೀರಿ, ಎಷ್ಟು ದಿನ ಅಧಿಕಾರದಲ್ಲಿದ್ದೀರಿ, ದಿನಗಳ ಎಣಿಕೆಯಲ್ಲಿ ಯಾರ ದಾಖಲೆ ಮುರಿದಿದ್ದೀರಿ ಎಂಬುದು ಜನರಿಗೆ ಬೇಕಿಲ್ಲ. ಅದೇನಿದ್ದರೂ ನಿಮ್ಮ ತೃಪ್ತಿಗೆ, ನಿಮ್ಮನ್ನು ಮೆಚ್ಚಿಸಲು ಬಯಸುವ ವಂದಿಮಾಗಧರಿಗಷ್ಟೇ ಪ್ರಮುಖ. ಜನಮಾನಸದಲ್ಲಿ ಉಳಿಯುವ ಎಷ್ಟು ಕೆಲಸವನ್ನು ತಾವು ಮಾಡಿದ್ದೇವೆ ಎಂಬುದನ್ನು ಅಧಿಕಾರರೂಢರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಎಸ್. ಬಂಗಾರಪ್ಪ, ವೀರಪ್ಪ ಮೊಯಿಲಿ, ಎಚ್.ಡಿ. ದೇವೇಗೌಡ, ಎಸ್.ಎಂ. ಕೃಷ್ಣ, ಬಿ.ಎಸ್. ಯಡಿಯೂರಪ್ಪ, ಹಿಂದಿನ ಅವಧಿಯ ಸಿದ್ದರಾಮಯ್ಯನವರನ್ನು ಅವರು ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಗಳಿಗಾಗಿ ಜನ ನೆನಪಿಸಿಕೊಳ್ಳುತ್ತಾರೆಯೇ ಹೊರತು, ಎಷ್ಟು ವರ್ಷ ಅಧಿಕಾರದಲ್ಲಿದ್ದರು ಎಂಬ ಸಂಕಲನ–ವ್ಯವಕಲನದಲ್ಲಿ ಅಲ್ಲ. ಅಧಿಕಾರದ ಕಿತ್ತಾಟ ಹೀಗೆ ಮುಂದುವರಿದರೆ, ಜನರಿಗೆ ಹಿತಾನುಕೂಲ ಕಲ್ಪಿಸಿರುವ ‘ಪಂಚ ಗ್ಯಾರಂಟಿ’ಗಳ ಹೊಳಪು ಕೂಡ ಮರೆಯಾದೀತು.

ಈಗಿನ ಪರಿಸ್ಥಿತಿ ಹೇಗಿದೆ ಎಂದರೆ, ಜನರು ಪ್ರವಾಹ ತುಂಬಿದ ನದಿಯಲ್ಲಿ ನಿಂತಿದ್ದಾರೆ. ಅಧಿಕಾರವೆಂಬ ದೋಣಿಯಲ್ಲಿರುವವರಿಗೆ ದಡ ಸೇರುವ ಛಲ. ಅಧಿಕಾರದ ಆಸೆಯಲ್ಲಿ ಹುಟ್ಟು ಹಿಡಿದು ಕಾಯುತ್ತಿರುವವರಿಗೆ ಹೇಗಾದರೂ ದೋಣಿ ಏರುವ ತವಕ. ಇದು ಸದ್ಯದ ಕಾಂಗ್ರೆಸ್ನ ಜಾತಕ. ನದಿಯಲ್ಲಿರುವವರನ್ನು ಕೈ ಹಿಡಿದು ಮೇಲೆತ್ತಬೇಕಿರುವುದು ಆಗಲೇಬೇಕಾದ ಕಾಯಕ.

ಮಳೆಯಿಂದಾಗಿ ಜನ ಸಂಕಷ್ಟದಲ್ಲಿದ್ದಾರೆ. ಮಳೆ ಇಲ್ಲದ ಕಡೆಯ ರೈತರು ಬರದ ಆತಂಕದಲ್ಲಿದ್ದಾರೆ. ನಿರೀಕ್ಷಿತ ಉದ್ಯೋಗ ಸೃಷ್ಟಿಯಾಗದೇ ಯುವಕರು ಬೀದಿಗಿಳಿದಿದ್ದಾರೆ. ಹೃದ್ರೋಗ ಪ್ರಕರಣಗಳು ಹೆಚ್ಚುತ್ತಿದ್ದು, ವಯಸ್ಸಿನ ಭೇದವಿಲ್ಲದೇ ಕಿರಿಯರು–ಹಿರಿಯರು ಪತಂಗಗಳಂತೆ ಕುಸಿದು ಬಿದ್ದು ಸಾಯುತ್ತಿದ್ದಾರೆ. ಮಹಿಳೆಯರು, ಮುಗ್ಧ ಕಂದಮ್ಮಗಳ ಮೇಲಿನ ಅತ್ಯಾಚಾರ, ಕಿರುಕುಳ ಪ್ರಕರಣಗಳು ಹೆಚ್ಚುತ್ತಲೇ ಇವೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಕೊನೆಯೆಂಬುದೇ ಇಲ್ಲ. ಇಂತಹ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದನ್ನು ಬಿಟ್ಟು ಅಧಿಕಾರದ ಆಟದಲ್ಲಿ ಮಗ್ನರಾದರೆ ಜನ ಕ್ಷಮಿಸಲಾರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.