ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತಿ ಬಿಂಬ| ಬಿಹಾರ: ಕರ್ನಾಟಕಕ್ಕೆ ತೋರಲಿ ದಾರಿ

ನಾಡು–ನುಡಿಯ ಹಿತ ಕಾಯುವ ಪರ್ಯಾಯವೊಂದರ ಕಟ್ಟೋಣಕ್ಕೆ ಸಕಾಲ
Last Updated 15 ನವೆಂಬರ್ 2020, 19:30 IST
ಅಕ್ಷರ ಗಾತ್ರ

ರಾಷ್ಟ್ರೀಯ ಪಕ್ಷಗಳ ದಬ್ಬಾಳಿಕೆಗೆ ಸಿಲುಕಿದ ಪ್ರಾದೇಶಿಕ ಪಕ್ಷಗಳು ಸೊರಗಿ, ಕರಗಿ ಹೋಗುತ್ತಿರುವ ಕಾಲಮಾನ
ದಲ್ಲಿ ಬಿಹಾರ ಚುನಾವಣೆಯ ಫಲಿತಾಂಶವು, ಕತ್ತಲ ಕಾಲಕ್ಕೆ ಕಂದೀಲಿನ ಕೋಲ್ಮಿಂಚು ಹೊಳೆಯಿಸಿದೆ. ಪರ್ಯಾಯ ರಾಜಕಾರಣವೊಂದರ ಕಟ್ಟೋಣಕ್ಕೆ ಇಂಬು ಕೊಡು ವಂತಹ ಭರವಸೆಗಳು ಚರ್ಚೆಯ ಜಗುಲಿಗೆ ಬಂದಿವೆ.

‘ದೈವತ್ವ’ಕ್ಕೆ ಏರಿಸಲ್ಪಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಪ್ರಭಾವಿಯಾಗಿ ಉಳಿಯಲು ಯತ್ನಿಸುತ್ತಲೇ ಇರುವ ನಿತೀಶ್‌ ಕುಮಾರ್ ಎಂಬ ದಿಗ್ಗಜ ಜೋಡಿಯ ಮುಂದೆ ಇನ್ನೂ 31ರ ಪ್ರಾಯದ ತೇಜಸ್ವಿ ಯಾದವ್‌ ನಡೆಸಿದ ಚಮತ್ಕಾರವು ಪ್ರಾದೇಶಿಕ ಪಕ್ಷ ಹಾಗೂ ಪರ್ಯಾಯ ರಾಜಕಾರಣಕ್ಕೆ ತವಕಿಸುತ್ತಿರುವವರಿಗೆ ಒಂದು ಮಾರ್ಗದರ್ಶನವಾದೀತು. ಇಬ್ಬರು ಪ್ರಭಾವಿ ನಾಯಕರು ‘ವಿಶ್ವಗುರು ಭಾರತ’ದ ಭ್ರಮೆಯನ್ನು ಹರಳುಗಟ್ಟಿಸುತ್ತಾ ಜನರನ್ನು ಹುಸಿ ನಂಬುಗೆಯ ಕೊಂಡದೊಳಗೆ ತಳ್ಳುತ್ತಲೇ ಚುನಾವಣೆಯನ್ನು ಮುನ್ನಡೆಸಿದರು. ರಾಷ್ಟ್ರೀಯವಾದ, ಚೀನಾ–ಪಾಕಿಸ್ತಾನದ ಅತಿಕ್ರಮಣ ಕಾರಿ ವರ್ತನೆ, ಆರ್ಥಿಕ ಸುಧಾರಣೆ ಮುಂತಾದವುಗಳ ಬಗ್ಗೆ ಭಾಷಣ–ಭೀಷಣದ ಪ್ರತಾಪವನ್ನು ತೋರದ ತೇಜಸ್ವಿ ಯಾದವ್‌, ಶಿಕ್ಷಣ, ಆರೋಗ್ಯ, ನೀರಾವರಿ, ಉದ್ಯೋಗ ದಂತಹ, ಜನರ ಮೇಲೆ ನೇರ ಪ್ರಭಾವ ಬೀರುವ ಸಂಗತಿ ಗಳತ್ತಲೇ ಬೆಳಕು ಚೆಲ್ಲುತ್ತಾ ಹೋದರು. ವಲಸಿಗರು ಹಾಗೂ ನಿರುದ್ಯೋಗಿಗಳನ್ನು ಕಾಡುತ್ತಿರುವ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರದ ದಾರಿಗಳನ್ನು ಬಿಡಿಸಿಟ್ಟರು. ಅಧಿಕಾರ ಹಿಡಿಯಲು ತೇಜಸ್ವಿಗೆ ಸಾಧ್ಯವಾಗಿಲ್ಲ. ಆದರೆ, 75 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅತಿಹೆಚ್ಚು ಸ್ಥಾನ ಹೊಂದಿದ ಪಕ್ಷವೆಂಬ ಹೆಗ್ಗಳಿಕೆಯನ್ನು ರಾಷ್ಟ್ರೀಯ ಜನತಾದಳಕ್ಕೆ ತಂದುಕೊಟ್ಟರು.

ಮೋದಿ ಅವರ ಅಷ್ಟೆಲ್ಲ ಪ್ರಭಾವಲಯವನ್ನೂ ಮೀರಿ, ಸ್ಥಳೀಯ ವಿಷಯಗಳನ್ನೇ ಮುಂದಿಟ್ಟುಕೊಂಡು ರಾಜಕೀಯ ನಡೆಸಿದರೆ ಜನಮನಕ್ಕೆ ಹತ್ತಿರವಾಗಬಹುದು ಎಂಬುದು ಚುನಾವಣೆ ತೋರಿಸಿಕೊಟ್ಟ ಪಾಠ. ಒಕ್ಕೂಟ ವ್ಯವಸ್ಥೆಯೊಳಗೆ ರಾಜ್ಯದ ಹಿತದ ಪ್ರಶ್ನೆ ಬಂದಾಗಲೆಲ್ಲ ಪ್ರಾದೇಶಿಕ ಪಕ್ಷಗಳೇ ನ್ಯಾಯ ಒದಗಿಸುತ್ತವೆ ಎಂಬುದರಲ್ಲಿ ಅಸತ್ಯವೇನಿಲ್ಲ.

ದೂರಗಾಮಿ ರಾಜಕೀಯ ಲಾಭದ ಮೇಲೆ ಕಣ್ಣಿಡುವ ರಾಜಕೀಯ ಪಕ್ಷಗಳಿಗೆ ರಾಜ್ಯಗಳ ಹಿತರಕ್ಷಣೆ ಆದ್ಯತೆಯಲ್ಲ. ದೇಶದಲ್ಲಿ ಸರ್ಕಾರ ನಡೆಸಲು ಯಾರು ಹೆಗಲು ಕೊಡುತ್ತಾರೆ ಎಂಬುದರತ್ತ ಅವುಗಳ ಲಕ್ಷ್ಯ. ಸ್ಥಳೀಯ ಭಾಷೆ, ಸಂಸ್ಕೃತಿ, ವೈಶಿಷ್ಟ್ಯ, ನೆಲ–ಜಲದ ವಿಷಯದಲ್ಲಿ ಸಮಾನ ನ್ಯಾಯದತ್ತ ನಿರ್ಲಕ್ಷ್ಯವೇ ಅವುಗಳ ಜಾಯಮಾನ. ಹಾಗಾಗಿಯೇ ತಮಿಳುನಾಡು, ಅವಿಭಜಿತ ಆಂಧ್ರಪ್ರದೇಶ ಪಡೆದಷ್ಟು ಪ್ರಯೋಜನವನ್ನು ಕರ್ನಾಟಕ ಪಡೆಯಲಾಗಿಲ್ಲ.

ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳ ಅಧಿಕಾರ ಇದ್ದಾಗಲೂ ಕೆಲವು ಲಾಭಗಳಾಗಿದ್ದು ಇದೆ. ಕೇಂದ್ರ
ವನ್ನು ಜಬರಿಸುವಷ್ಟು ಧೈರ್ಯವಾದರೂ ನಮ್ಮಮುಖ್ಯಮಂತ್ರಿಗೆ ಇರುತ್ತದೆ. ಹಿಂದಿನ ಅವಧಿಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ, ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ ಕೊಡಲು ಕೇಂದ್ರ ಸರ್ಕಾರ ಹಿಂದೇಟು ಹಾಕಿತ್ತು. ದೆಹಲಿಗೆ ಬಂದು ಧರಣಿ ಕೂರುವುದಾಗಿ ಯಡಿಯೂರಪ್ಪ ಎಚ್ಚರಿಸಿದಾಗ, ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಶಾಸ್ತ್ರೀಯ ಭಾಷೆ ಸ್ಥಾನ ಘೋಷಿಸಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೂ ಕೇಂದ್ರದಿಂದ ರಬೇಕಾದ ಅನುದಾನ ಬಾರದೇ ಇದ್ದಾಗ ಹೋರಾಟದ ಎಚ್ಚರಿಕೆ ನೀಡಿದ್ದು ಇದೆ.

ಲೋಕಸಭೆ ಚುನಾವಣೆ ವೇಳೆ ‘ಒಂದು ಮತ ಎರಡು ಸರ್ಕಾರ’ ಎಂದು ಬಿಜೆಪಿ ನಾಯಕರು ಪ್ರತಿಪಾದಿಸಿದ್ದರು. ರಾಜ್ಯ ಅಭಿವೃದ್ಧಿಯಾಗಬೇಕಾದರೆ ಒಂದೇ ಎಂಜಿನ್‌ ಇರಬೇಕು ಎಂಬ ಮಂಕುಬೂದಿಯನ್ನೂ ಎರಚಿದ್ದರು. ಈಗ ರಾಜ್ಯದ ಪಾಲಿಗೆ ನ್ಯಾಯವಾಗಿ ಬರಬೇಕಾದ ಜಿಎಸ್‌ಟಿ ಪರಿಹಾರದ ಮೊತ್ತ, ತೆರಿಗೆ ಪಾಲು, ನೈಸರ್ಗಿಕ ವಿಕೋಪ ಅನುದಾನಕ್ಕೂ ಅಂಗಲಾಚುವ ದುಃಸ್ಥಿತಿ ಬಂದೊದಗಿದೆ. ಯಡಿಯೂರಪ್ಪ ದಮ್ಮಯ್ಯ ಎಂದರೂ ಬಿಡಿಗಾಸು ಬಿಚ್ಚುತ್ತಿಲ್ಲ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌. ಇವರು ಕರ್ನಾಟಕದಿಂದಲೇ ರಾಜ್ಯಸಭೆಗೆ ಆರಿಸಿಹೋಗಿದ್ದಾರೆ.

ಇಂತಹ ಹೊತ್ತಿನಲ್ಲಿ ನಾಡಿನ ಹಿತ ಕಾಯುವ ಪ್ರಾದೇಶಿಕ ಪಕ್ಷವೊಂದರ ಜರೂರು ಇದೆ. ಪ್ರಾದೇಶಿಕ ಪಕ್ಷ ಎಂದತಕ್ಷಣ ಎದುರಿಗೆ ಕಾಣುವುದು ಕುಟುಂಬ ರಾಜಕಾರಣದ ಅಪಸವ್ಯವೇ. ಆಂಧ್ರದಲ್ಲಿ ಜಗನ್ಮೋಹನ ರೆಡ್ಡಿ, ತೆಲಂಗಾಣದಲ್ಲಿ ಚಂದ್ರಶೇಖರರಾವ್‌, ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್‌, ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ, ಬಿಹಾರದಲ್ಲಿ ತೇಜಸ್ವಿ ಯಾದವ್‌ ಈ ಮುಖಗಳೇ ಧುತ್ತನೆ ಕಣ್ಣೆದುರು ಬಂದು ನಿಲ್ಲುತ್ತವೆ. ಕರ್ನಾಟಕದ ಮಟ್ಟಿಗೆ ಬಿಜೆಪಿಯು ಕುಟುಂಬ ರಾಜಕಾರಣದ ದಿರಿಸನ್ನೇ ಹೊದ್ದುಕೊಂಡಿದೆ. ಪರ್ಯಾಯ ಅಥವಾ ಪ್ರಾದೇಶಿಕ ರಾಜಕಾರಣವೆಂದರೆ, ‘ವಂಶವಾಹಿ ಪ್ರಜಾಪ್ರಭುತ್ವ’ವನ್ನು ಬದಿಗೊತ್ತಿ ‘ಜನವಾಹಿ ಪ್ರಜಾತಂತ್ರ’ವನ್ನು ಕಟ್ಟಬೇಕಾದ ನೆಲೆಯಿಂದ ಯೋಚಿಸಬೇಕಾಗಿದೆ.

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವೆಂದರೆ ಸದ್ಯಕ್ಕೆ ಜೆಡಿಎಸ್‌ ಮಾತ್ರ. ಪ್ರೊ. ಎಂ.ಡಿ.ನಂಜುಂಡಸ್ವಾಮಿಯವರ ರೈತಸಂಘ, ಪಿ.ಲಂಕೇಶ್‌ ಮತ್ತು ಪೂರ್ಣಚಂದ್ರ ತೇಜಸ್ವಿ ಅವರ ಪ್ರಗತಿರಂಗದ ಪ್ರಯೋಗವನ್ನು ತುಸು ಭಿನ್ನವಾಗಿ ನೋಡಬೇಕು. ಆದರೆ ಅದರಲ್ಲಿ ಯಶ ಸಿಗಲಿಲ್ಲ. ನಾಡಿನಲ್ಲಿ ಪರ್ಯಾಯದ ಅನೇಕ ಪ್ರಯೋಗಗಳು ನಡೆದಿವೆ. ಮಾತೃಪಕ್ಷದಲ್ಲಿ ತಮಗೆ ಬೆಲೆ ಸಿಗದೇಹೋದಾಗ ಸಿಡಿದು ಹೊರಬಂದು ಹೊಸ ಪಕ್ಷ ಕಟ್ಟಿದವರಿದ್ದಾರೆ. ತಮ್ಮ ಪಕ್ಷಕ್ಕೆ ಜನರಿಂದ ಬೆಲೆ ಸಿಗದೇ ಇದ್ದಾಗ ಮಾತೃಪಕ್ಷಕ್ಕೆ ಜಿಗಿದು ತಮ್ಮ ಭವಿಷ್ಯ ಕಂಡುಕೊಂಡವರೂ ಇದ್ದಾರೆ.

ಎಸ್‌.ಬಂಗಾರಪ್ಪನವರ ಕ್ರಾಂತಿರಂಗ, ಕರ್ನಾಟಕ ವಿಕಾಸ ಪಕ್ಷ, ಕರ್ನಾಟಕ ಕಾಂಗ್ರೆಸ್ ಪಕ್ಷ, ಯಡಿಯೂರಪ್ಪನವರ ಕರ್ನಾಟಕ ಜನತಾಪಕ್ಷ, ರಾಮಕೃಷ್ಣ ಹೆಗಡೆ ಅವರ ನವನಿರ್ಮಾಣ ವೇದಿಕೆ, ದೇವೇಗೌಡರ ಸಮಾಜವಾದಿ ಜನತಾ ‍‍ಪಕ್ಷ ಇವೆಲ್ಲವೂ ಭದ್ರವಾಗಿ ನೆಲೆಯೂರಲೇ ಇಲ್ಲ.

‘ಕನ್ನಡ, ಕನ್ನಡಿಗ, ಕರ್ನಾಟಕ’ದ ಭವಿಷ್ಯವನ್ನು ಉಜ್ವಲವಾಗಿಸುವ ದೂರಗಾಮಿ ಕನಸಾಗಲಿ, ನೆಲ–ಜಲದ ಬಗ್ಗೆ ನಿರ್ದಿಷ್ಟ ಯೋಜನೆಯಾಗಲಿ, ಕನ್ನಡ ಅಸ್ಮಿತೆಯನ್ನು ಕಾಪಿಟ್ಟುಕೊಳ್ಳುವ ತವಕವಾಗಲಿ ಈ ಪರ್ಯಾಯದ ಹಿಂದೆ ಇರಲಿಲ್ಲ. ತಮಗೆ ಆದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುವ, ತಾವು ಗೆಲ್ಲುವುದಕ್ಕಿಂತ ತಮಗೆ ‘ದ್ರೋಹ’ ಎಸಗಿದವರ ಎರಡೂ ಕಣ್ಣು ತೆಗೆಯುವ ಹುಮ್ಮಸ್ಸು ಮಾತ್ರ ಬಲಿಷ್ಠವಾಗಿದ್ದುದು ಕಾಣಿಸುತ್ತದೆ.

1994ರಲ್ಲಿ ಬಲಿಷ್ಠವಾಗಿ ಹೊರಹೊಮ್ಮಿದ ಜನತಾದಳ, 1996ರ ಲೋಕಸಭೆ ಚುನಾವಣೆಯಲ್ಲಿ 16 ಸ್ಥಾನಗಳನ್ನು ಗೆದ್ದಿತ್ತು. ಇಡೀ ಜನಸಮೂಹ ವನ್ನು ಪ್ರಭಾವಿಸುವ ನಾಯಕರಿದ್ದ ಪಕ್ಷವೆಂದರೆ ಅದು ಜನತಾದಳ ಎಂಬಂತಾಗಿತ್ತು. ನಂತರ ಅದು ಬೇರೆ ಬೇರೆ ಚೂರುಗಳಾಗಿ, ನಾಯಕರು ದಿಕ್ಕಾಪಾಲಾಗಿ ಚದುರಿಹೋದರು. ಕುಟುಂಬದ ಮೇಲಿನ ಗೌಡರ ಮೋಹವೇ ಇದಕ್ಕೆ ಕಾರಣ ಎಂದು ಅವರ ವಿರೋಧಿಗಳು ಟೀಕಿಸಿದರೆ, ಪಕ್ಷವನ್ನು ಉಳಿಸಿಕೊಂಡಿದ್ದೇ ಕುಟುಂಬ ಎಂಬುದು ಗೌಡರ ವಾದ.

ಕುಟುಂಬ ರಾಜಕಾರಣವು ಜೆಡಿಎಸ್‌ನ ದೊಡ್ಡ ಮಿತಿ. ಅದರ ಜತೆಗೆ ದಶಕದಿಂದೀಚೆಗೆ ಹೊಸಬರನ್ನು, ಪಕ್ಷದ ತಾತ್ವಿಕತೆ ಹಾಗೂ ಅದರ ದಾರ್ಶನಿಕತೆಗೆ ಹೊಳಪು ಕೊಡುವ ನಾಯಕರನ್ನು ಬೆಳೆಸಲು ಅಥವಾ ಪಕ್ಷದಲ್ಲಿ ಉಳಿಸಿಕೊಳ್ಳಲು ದೇವೇಗೌಡರು ಮುಂದಾಗಿಲ್ಲ. ಚುನಾವಣೆಯಲ್ಲಿ ಕುಟುಂಬದವರಿಗೆ ಮಣೆ ಹಾಕುವುದು, ರಾಜ್ಯಸಭೆ, ಪರಿಷತ್ತಿನ ಸದಸ್ಯತ್ವದ ಆಯ್ಕೆ, ನಾಮನಿರ್ದೇಶನದ ಪ್ರಶ್ನೆಬಂದಾಗ ರಮೇಶಗೌಡ, ತಿಪ್ಪೇಸ್ವಾಮಿ, ಶರವಣ ಅಂತಹವರಷ್ಟೇ ಕಾಣಿಸುವುದು ಈ ಪಕ್ಷದ ವೈಫಲ್ಯ ಎಂಬ ಟೀಕೆಯೂ ಉಂಟು. ಅತಂತ್ರ ರಾಜಕೀಯ ಸನ್ನಿವೇಶಗಳಲ್ಲಿ ಅನುಕೂಲಸಿಂಧು ರಾಜಕಾರಣಕ್ಕೆ ಹೊಂದಿಕೊಳ್ಳುವುದು ಜೆಡಿಎಸ್‌ಗೆ ಅಂಟುಜಾಡ್ಯವೇ ಆಗಿಬಿಟ್ಟಿದೆ.

ಈ ಹೊತ್ತಿನೊಳಗೆ ಬಿಹಾರ ಚುನಾವಣೆಯ ಪಾಠವನ್ನು ಮುಂದಿಟ್ಟುಕೊಂಡು ಜೆಡಿಎಸ್‌ ಹೊಸ ಹೆಜ್ಜೆ ಇಟ್ಟರೆ, ಆ ದಿಕ್ಕಿನತ್ತ ಯೋಚಿಸುವವರು ಪರ್ಯಾಯ ಸೃಷ್ಟಿಯ ಕಡೆಗೆ ದೂರದೃಷ್ಟಿಯ ಯೋಜನೆ ರೂಪಿಸಿಕೊಂಡರೆ, ರಾಷ್ಟ್ರೀಯ ಪಕ್ಷಗಳಿಗೆ ಭಿನ್ನವಾದ ರಾಜಕಾರಣವನ್ನು ಕರ್ನಾಟಕದಲ್ಲಿ ಆಗುಮಾಡುವುದು ಕಷ್ಟವೇನಲ್ಲ. ನಾಡಿನ–ನಾಡವರ ಹಿತ ಕಾಯುವ ಮನಸ್ಸುಗಳು ಸ್ವಾರ್ಥ ಮರೆತು ಒಂದಾದರೆ ಪರ್ಯಾಯವೊಂದರ ಬೆಳಕು ಹೊರಚಿಮ್ಮೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT