ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈ.ಗ.ಜಗದೀಶ್ ಬರಹ: ಹುಸಿ ಪಠ್ಯವೂ ಹಸಿ ಸುಳ್ಳೂ

ಸಂವಿಧಾನಕ್ಕಿಂತ ‘ಸಂಘ’ವೇ ಘನವೆಂದು ಘೋಷಿಸಿದರೆ ‘ಸಂತೋಷ’
Last Updated 15 ಜುಲೈ 2022, 19:31 IST
ಅಕ್ಷರ ಗಾತ್ರ

ಸತ್ಯದ ಬದಲು ಸುಳ್ಳಿನ ವಿಜೃಂಭಣೆ, ವಿವೇಕದ ಮೇಲೆ ಅವಿವೇಕದ ಆಕ್ರಮಣ, ಧರ್ಮದ ಮಾರ್ಗದಲ್ಲಿ ಅಧರ್ಮದ ತಾಂಡವ ಶುರುವಾದರೆ, ಅಂತಹ ಸಮಾಜ ನರಳುವಿಕೆಯ ಕಡೆಗೆ, ಜನಾಂಗೀಯ ದ್ವೇಷದ ದಿಕ್ಕಿಗೆ ಸಾಗಿದ್ದನ್ನು ಚರಿತ್ರೆ ತೋರಿಸಿದೆ. ಸರಿಸುಮಾರು ನೂರು ವರ್ಷಗಳ ಹಿಂದೆ ವಿಶ್ವವನ್ನೇ ತನ್ನ ಅಂಗೈಯಲ್ಲಿ ಕುಣಿಸಲು ಮುಂದಾಗಿದ್ದ ಹಿಟ್ಲರ್‌, ಇಂತಹದೇ ದಾರಿಯಲ್ಲಿ ನಡೆದಿದ್ದ. ಆತನ ಆಪ್ತ ಜೋಸೆಫ್‌ ಗೋಬೆಲ್ಸ್‌, ಸುಳ್ಳುಗಳನ್ನು ಹೆಣೆದು ಜನರನ್ನು ಮರುಳು ಮಾಡಿ ನಾಜಿ ಪಂಥವನ್ನು ಗಟ್ಟಿಗೊಳಿಸಿದ್ದ. ಆ ಉದ್ದೇಶಕ್ಕಾಗಿಯೇ
ಗೋಬೆಲ್ಸ್‌ನಿಗೆ ‘ಪ್ರಾಪಗ್ಯಾಂಡ’ ಸಚಿವ ಸ್ಥಾನವೂ ಸಿಕ್ಕಿತ್ತು. ಪ್ರಾಪಗ್ಯಾಂಡ ಎಂದರೆ ಪ್ರಚಾರ, ಪ್ರಸರಣ ಎಂಬ ಅರ್ಥವಿದೆಯಾದರೂ ಎದುರಾಳಿಗಳ ಬಗ್ಗೆ ಸುಳ್ಳು ಹೇಳುವುದು, ತಮ್ಮ ಸಿದ್ಧಾಂತವನ್ನು ಪ್ರಚಾರ ಮಾಡುವುದು ಎಂಬ ವಿಶಾಲಾರ್ಥವೂ ಇದೆ.

ಒಂದು ವರ್ಷದ ಈಚೆಗಿನ ಕರ್ನಾಟಕದ ವಿದ್ಯಮಾನಗಳನ್ನು ಗಮನಿಸಿದರೆ, ಗೋಬೆಲ್ಸ್‌ನ ಉತ್ತರಾಧಿಕಾರಿಗಳು ಹೇಗೆ ನಾಡನ್ನು ವಿಭ್ರಮೆಯ ಕಡೆಗೆ ಕರೆದೊಯ್ದು, ತಮ್ಮ ಕೋಮುವಾದಿ ಸಿದ್ಧಾಂತವನ್ನು ಮುಗ್ಧರ ನರನಾಡಿಗಳಲ್ಲಿ ತುಂಬುತ್ತಿದ್ದಾರೆ ಎಂಬುದು ಗೋಚರಿಸುತ್ತದೆ. ಸರ್ಕಾರದ ಕಾಮಗಾರಿಗಳಲ್ಲಿನ ಗುತ್ತಿಗೆಯಲ್ಲಿ ಶೇ 40ರಷ್ಟು ಕಮಿಷನ್‌ ಪಡೆಯಲಾಗುತ್ತಿದೆ ಎಂದು ಗುತ್ತಿಗೆದಾರರೇ ಹೇಳಿದಾಗ, ‘ಅದೆಲ್ಲ ಸುಳ್ಳು; ಕಾಂಗ್ರೆಸ್‌ನವರ ಚಿತಾವಣೆ’ ಎಂದು ಸಚಿವರಾದ ಗೋವಿಂದ ಕಾರಜೋಳ ಮತ್ತು ಸಿ.ಸಿ.ಪಾಟೀಲ ಸಮರ್ಥನೆಗೆ ಇಳಿದರು. ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದಾಗ ‘ಅಕ್ರಮ ನಡೆದೇ ಇಲ್ಲ; ನಡೆದಿದ್ದರೆ ಕಾಂಗ್ರೆಸ್‌ನವರ ಪಿತೂರಿ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಪ್ರಮಾದಗಳನ್ನೇ ಎಸಗಲಾಗಿದೆ ಎಂದು ದಾಖಲೆ ಸಮೇತ ತೋರಿಸಿದಾಗ, ‘ಯಾವುದೇ ಪಠ್ಯವನ್ನೂ ಬದಲಾವಣೆ ಮಾಡಿಲ್ಲ. ತಪ್ಪು ಮಾಡಿದ್ದು ಬರಗೂರರ ಸಮಿತಿ. ಅದನ್ನು ಸರಿಪಡಿಸುವ ಕೆಲಸ ಮಾಡಿದ್ದೇವೆ. ಇಲಾಖೆಯ ಸಾಧನೆ ಸಹಿಸಲಾಗದೆ ಪಠ್ಯಪುಸ್ತಕ ವಿವಾದವನ್ನು ಕಾಂಗ್ರೆಸ್‌ ಮುನ್ನೆಲೆಗೆ ತಂದಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಪ್ರತಿಪಾದಿಸಿದರು.

ಇದನ್ನೆಲ್ಲ ಕಾಂಗ್ರೆಸ್‌ನವರು ಮಾಡಿದ್ದರೆ ಅದು ಅಪರಾಧವೇ. ಕಾಂಗ್ರೆಸ್‌ನವರು ಭ್ರಷ್ಟರು, ಆಡಳಿತ
ನಿರ್ವಹಿಸುವಲ್ಲಿ ಅಸಮರ್ಥರು ಎಂಬ ಕಾರಣಕ್ಕೆ, 2018ರಲ್ಲಿ ನಡೆದ ಚುನಾವಣೆಯಲ್ಲಿ ಅವರನ್ನು ಜನ ಅಧಿಕಾರದಿಂದ ಕೆಳಕ್ಕೆ ದೂಡಿದ್ದಲ್ಲವೇ? ಅಧಿಕಾರ ನಿಮ್ಮ ಬಳಿಯೇ ಇರುವಾಗ, ಕಾಂಗ್ರೆಸ್‌ನವರು ತಪ್ಪೆಸಗಿದ್ದರೆ ಅವರನ್ನು ಹೆಡೆಮುರಿ ಕಟ್ಟಲಾಗದಷ್ಟು
ನಿಮ್ಮ ಕಾನೂನುಗಳು ದುರ್ಬಲವಾಗಿವೆಯೇ? ಅಥವಾ ಅವರಿಂತ ಹೆಚ್ಚು ತಪ್ಪು ಮಾಡಿದ್ದೇವೆ ಎಂಬ ಪಶ್ಚಾತ್ತಾಪದ ಬೇಗುದಿಯಲ್ಲಿ ನೀವೇ ಬೇಯುತ್ತಿದ್ದೀರಾ? ಈ ಪ್ರಶ್ನೆಗಳಿಗೆ ಸಚಿವರು, ಆಡಳಿತ ಪಕ್ಷದ ಶಾಸಕರು, ದೆಹಲಿಯಲ್ಲಿ ಕುಳಿತು ಕರ್ನಾಟಕ ಸರ್ಕಾರವನ್ನು ತಮ್ಮ ಮೂಗುದಾರದಡಿ ತಿರುಗಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್ ಅವರೇ ಉತ್ತರಿಸಬೇಕು.

ಪಠ್ಯಪುಸ್ತಕ ಪರಿಶೀಲನೆಗೆ ರಚಿಸಿದ್ದ ಸಮಿತಿಯು ಕಾನೂನುಬಾಹಿರವಾಗಿ ಪಠ್ಯಪರಿಷ್ಕರಣೆ ಮಾಡಿತಲ್ಲದೆ, ಉದ್ದೇಶಪೂರ್ವಕವಾಗಿ ಇತಿಹಾಸವನ್ನೇ ತಿರುಚಿತು. ಮಕ್ಕಳ ವಿದ್ಯಾರ್ಜನೆಗೆ ಪೂರಕವಾಗಬೇಕಾದ ಪಠ್ಯಪುಸ್ತಕಗಳನ್ನು ‘ವೈದಿಕ’ ಆಲೋಚನೆಗೆ ತಕ್ಕಂತೆ ಕೆಡವಿ ಕಟ್ಟಿದ್ದಲ್ಲದೆ, ಮಕ್ಕಳನ್ನು ಇರುಳಿನ ಕಡೆಗೆ ದೂಡಿತು. ತಪ್ಪನ್ನು ಸರಿಪಡಿಸುತ್ತೇವೆ ಎಂದು ಹೇಳಬೇಕಾಗಿದ್ದ ಸಚಿವರು, ಊರಬೀದಿ
ಯಲ್ಲೆಲ್ಲ ಸುಳ್ಳನ್ನೇ ಬಿತ್ತುತ್ತಾ ಬಂದರು.

‍‘ಹೊಸ ಧರ್ಮಗಳ ಉದಯ’ ಎಂಬ ಪಾಠದ ಕುರಿತು ಪರಿಶೀಲನೆ ನಡೆಸಿ ವರದಿ ನೀಡಲು ರಚಿಸಿದ್ದ ಸಮಿತಿ, ಯಾವುದೇ ಆದೇಶ ಇಲ್ಲದಿದ್ದರೂ ತಾನೇ ಸರ್ಕಾರವೆಂದು ಭಾವಿಸಿಕೊಂಡು ಪರಿಷ್ಕರಣೆಯನ್ನೂ ಮಾಡಿತು. ಸಚಿವ ನಾಗೇಶ್‌, ಇದಕ್ಕೆ ಘಟನೋತ್ತರ ಅನುಮೋದನೆಯನ್ನೂ ಕೊಡಿಸಿದರು. ಇದನ್ನು ಗಮನಿಸಿದರೆ, ರಾಜ್ಯದಲ್ಲಿ ಸಾಂವಿಧಾನಿಕವಾಗಿ ಚುನಾಯಿತವಾದ ಸರ್ಕಾರ ಇದೆಯೇ ಅಥವಾ ಸಂವಿಧಾನಕ್ಕಿಂತ ‘ಸಂಘ’ವೇ ಘನವೆಂದು ನಂಬುವವರು ಆಡಳಿತದಲ್ಲಿ ಇದ್ದಾರೆಯೇ ಎಂಬ ಗುಮಾನಿ ಹುಟ್ಟುತ್ತದೆ. ಯಾರನ್ನೋ ‘ಸಂತೋಷ’ಪಡಿಸಲು ಸಂಘವೇ ಘನವೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಂಬುವುದಾದರೆ, ಅದನ್ನು ಸಾರ್ವಜನಿಕವಾಗಿ ಘೋಷಿಸಿಬಿಡಲಿ.

ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಅವಾಂತರ ಎಸಗಿರುವುದನ್ನು ಸಾಕ್ಷ್ಯಸಮೇತ ನೀಡಲಾಗಿತ್ತು. ಭಗತ್‌ ಸಿಂಗ್ ಕುರಿತ ಪಠ್ಯ ಕೈಬಿಟ್ಟಿರುವುದನ್ನು ಪರಿಶೀಲನಾ ಸಮಿತಿಯ ಅಧ್ಯಕ್ಷರೇ ದೃಢಪಡಿಸಿದ್ದರು. ವೈದಿಕ ಧರ್ಮದ ಆಚರಣೆಗಳನ್ನು ವಿರೋಧಿಸಿ ಹೋರಾಟ ನಡೆಸಿ, ಮಹಿಳೆಯರು ಹಾಗೂ ಹಿಂದುಳಿದವರಿಗೆ ಸ್ವಾಭಿಮಾನದ ಬದುಕು ಕಲ್ಪಿಸಿದ್ದ ನಾರಾಯಣ ಗುರು ಅವರ ಪಾಠವನ್ನು ಒಂದು ಪ್ಯಾರಾಕ್ಕೆ ಇಳಿಸಲಾಗಿತ್ತು. ಈ ಪಠ್ಯವು ಪಠ್ಯಪುಸ್ತಕ ಸಂಘದ ಅಂತರ್ಜಾಲದಲ್ಲೂ ಇತ್ತು. ಹಾಗಿದ್ದರೂ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ಈ ಎಲ್ಲವೂ ಚುನಾವಣೆಯ ಗಿಮಿಕ್‌. ಶಾಲಾ ಪಠ್ಯಪುಸ್ತಕ ಇನ್ನೂ ಹೊರಗೆ ಬಂದಿಲ್ಲ. ಅದಾಗಲೇ ಭಗತ್‌ ಸಿಂಗ್‌, ನಾರಾಯಣ ಗುರು ಅವರ ಪಠ್ಯ ಕೈ ಬಿಡಲಾಗಿದೆ ಎಂದು ಹೇಳುತ್ತಿದ್ದಾರೆ’ ಎಂದಿದ್ದರು. ಜೂನ್‌ 3ರಂದು ಪ್ರತಿಕ್ರಿಯಿ
ಸಿದ್ದ ಬಿ.ಸಿ.ನಾಗೇಶ್‌, ‘ಇದು ಕೇಸರೀಕರಣವೂ ಅಲ್ಲ, ಏನೂ ಅಲ್ಲ. ಪಠ್ಯದಲ್ಲಿ ನಾರಾಯಣ ಗುರು, ಭಗತ್‌ ಸಿಂಗ್‌ ಅವರ ವಿಚಾರವನ್ನು ಕೈಬಿಟ್ಟಿಲ್ಲ’ ಎಂದು ಹೇಳಿದ್ದರು.

ಬಸವಣ್ಣ, ಕನಕದಾಸರನ್ನು ಕುರಿತ ಪಾಠವನ್ನು ಕಡಿತಗೊಳಿಸಿದ್ದಲ್ಲದೆ, ಮರುಪರಿಷ್ಕರಣೆ ಸಂದರ್ಭದಲ್ಲಿ ಸಿದ್ಧಗಂಗಾ ಹಾಗೂ ಆದಿಚುಂಚನಗಿರಿ ಶ್ರೀಗಳ ಕುರಿತ ವಿವರಗಳನ್ನು ಒಂದೇ ವಾಕ್ಯಕ್ಕೆ ಇಳಿಸಲಾಗಿತ್ತು.

‘ಪರಿಷ್ಕರಣೆಯಾಗಿರುವ ಪಠ್ಯದಲ್ಲಿ ಬಸವಣ್ಣ ಅವರ ವಿಚಾರಗಳು ಪೂರ್ಣ ಪ್ರಮಾಣದಲ್ಲಿಯೇ ಇವೆ’ ಎಂದು ನಾಗೇಶ್‌ ಹೇಳಿದ್ದರು. ‘ತಿರುಚಿದ ಇತಿಹಾಸವನ್ನೇ ಮಕ್ಕಳಿಗೆ ಓದಿಸುತ್ತಿದ್ದರು. ಅದನ್ನೇ ಎಷ್ಟು ದಿನ ಸಹಿಸಿಕೊಳ್ಳಲು ಸಾಧ್ಯ’ ಎಂದು ಸಚಿವ ಸುನಿಲ್‌ ಕುಮಾರ್‌ ಪ್ರಶ್ನಿಸಿದ್ದರೆ, ‘ನಾರಾಯಣ ಗುರು ಅವರ ಪರಿಚಯ ಕುರಿತ ಪಾಠ ಕೈಬಿಟ್ಟಿಲ್ಲ’ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ವಾದಿಸಿದ್ದರು.

ಲಿಂಗಾಯತ, ಕುರುಬ ಸಮುದಾಯದ ಮಠಾಧೀಶರು ಹೋರಾಟದ ಎಚ್ಚರಿಕೆ ಕೊಟ್ಟ ಮೇಲೆ, ಬಸವಣ್ಣ ಹಾಗೂ ಕನಕದಾಸರ ಕುರಿತ ಪೂರ್ಣಪಾಠ ಸೇರಿಸುವಂತೆ ಮುಖ್ಯಮಂತ್ರಿ ಅವರೇ ಷರಾ ಬರೆದರು. ನಾರಾಯಣ ಗುರು ಕುರಿತ ಪಠ್ಯವನ್ನು ಮೊದಲಿದ್ದಂತೆ ಸಮಾಜವಿಜ್ಞಾನದಲ್ಲೇ ಸೇರಿಸಬೇಕು ಎಂದು ಸಚಿವ ಸುನಿಲ್ ಕುಮಾರ್ ಅವರ ಆಗ್ರಹ ಪತ್ರಕ್ಕೆ ನಾಗೇಶ್‌ ಅನುಮೋದನೆಯನ್ನೂ ಕೊಟ್ಟರು. ಪರಿಶಿಷ್ಟ ಜಾತಿಯನ್ನು ಪ್ರತಿನಿಧಿಸುವ ಶಾಸಕರು, ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ ಮೇಲೆ, ಅಂಬೇಡ್ಕರ್ ಅವರ ಹೆಸರಿನ ಮೊದಲು, ಹಿಂದಿನ ಪಠ್ಯಗಳಲ್ಲಿದ್ದ ‘ಸಂವಿಧಾನಶಿಲ್ಪಿ’ ಎಂಬ ಪದ ಸೇರಿಸಲು ಸರ್ಕಾರ ಒಪ್ಪಿಕೊಂಡಿತು.

ಹೀಗೆ ಸುಳ್ಳುಗಳ ಸರಮಾಲೆಯನ್ನೇ ಪೋಣಿಸಿ ಸತ್ಯ ಮರೆಮಾಚುವ ಯತ್ನವನ್ನು ಸಚಿವರೇ ಮಾಡಿದರು. ಅದರಲ್ಲಿ ಪೂರ್ಣ ಜಯ ಸಿಗಲಿಲ್ಲ; ಆದರೆ ತಪ್ಪು ಮಾಹಿತಿಗಳಿರುವ ಪಾಠವನ್ನು ಮಕ್ಕಳಿಗೆ ಬೋಧಿಸುವುದಕ್ಕೆ ತಡೆಯನ್ನೂ ಹಾಕಲಿಲ್ಲ. ‘ಸತ್ಯವೇ ದೇವರು’ ಎಂದು ಗಾಂಧೀಜಿ ಹೇಳಿದ್ದರು. ಆದರೆ, ಗಾಂಧೀಜಿ ಮಾತುಗಳು ಇವರಿಗೆ ರುಚಿಸುವುದು ಕಡುಕಷ್ಟ.

ಗೋವನ್ನು ಮಾತೆ ಎಂದು ಪೂಜಿಸುವುದಾಗಿಯೂ ಅದರ ರಕ್ಷಣೆಗೆ ಪ್ರಾಣತ್ಯಾಗಕ್ಕೂ ಸಿದ್ಧ ಎಂಬುದಾಗಿಯೂ ಬಿಜೆಪಿಯವರು ಮಾತುಮಾತಿಗೆ ಹೇಳುತ್ತಾರೆ. ರಾಜ್ಯದಲ್ಲಿ ಮನೆಮಾತಾಗಿರುವ ಗೋವಿನ ಹಾಡಿನ ‘ಸತ್ಯವೇ ನಮ್ಮ ತಾಯಿತಂದೆ, ಸತ್ಯವೇ ನಮ್ಮ ಬಂಧು ಬಳಗ, ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು’ ಎಂಬ ‘ಪುಣ್ಯಕೋಟಿ’ಯ ಮಾತು ಜನಜನಿತ. ಗೋವಿನ ಸತ್ಯವನ್ನು ಕಂಡು ಬದಲಾದ ಅರ್ಬುತನೆಂಬ ವ್ಯಾಘ್ರ, ತನ್ನ ಆಹಾರವೇ ಆಗಿದ್ದ ಹಸುವನ್ನು ತಿನ್ನುವುದು ಬಿಟ್ಟು ಬೆಟ್ಟದಿಂದ ಹಾರಿ ಪ್ರಾಣ ಬಿಡುತ್ತದೆ. ಗೋಮಾತೆಯನ್ನು ಪೂಜಿಸುವವರು ಇಂತಹ ವ್ಯಾಘ್ರರಾಗುವುದು ಬೇಡ; ಗೋವಿನ ಸತ್ಯನಿಷ್ಠೆಯನ್ನಾದರೂ ಪಾಲಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT