ಮಂಗಳವಾರ, ಮೇ 18, 2021
28 °C

ಪರಿಪೂರ್ಣ ಯುದ್ಧಸಿದ್ಧತೆ

ಗುರುರಾಜ ಕರಗಜಿ Updated:

ಅಕ್ಷರ ಗಾತ್ರ : | |

ಬ್ರಹ್ಮದತ್ತನ ಸೈನ್ಯ ಮಿಥಿಲೆಯ ಕಡೆಗೆ ಹೊರಟಿತು. ಮಹೋಷಧಕುಮಾರನ ಗುಪ್ತಚರರು, ಯಾವ ಸಮಯಕ್ಕೆ ಸೈನ್ಯ ಯಾವ ನಗರಕ್ಕೆ ಬಂದಿತು ಎಂಬುದನ್ನು ಕ್ಷಣಕ್ಷಣದ ವರದಿಯಂತೆ ಒಪ್ಪಿಸುತ್ತಿದ್ದರು. ಈ ವಿಷಯ ರಾಜ ವಿದೇಹನಿಗೂ ತಿಳಿಯಿತು. ಬ್ರಹ್ಮದತ್ತ ರಾತ್ರಿಯ ಮೊದಲ ಜಾವದಲ್ಲಿಯೇ ಮಿಥಿಲಾನಗರಕ್ಕೆ ಮುತ್ತಿಗೆ ಹಾಕಿದ. ಸೇನಾಪತಿ ಆನೆಗಳ ಪ್ರಾಕಾರ, ಕುದುರೆಗಳ ಪ್ರಾಕಾರ, ರಥಗಳ ಪ್ರಾಕಾರಗಳನ್ನು ರಚಿಸಿ ಸೈನಿಕರನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿಲ್ಲಿಸಿದ. ಈ ಸೈನ್ಯದ ಗಲಾಟೆ ಆಕಾಶವನ್ನು ಮುಟ್ಟಿತು. ರಾಜ ವಿದೇಹ ಈ ಗಲಾಟೆಯನ್ನು ಕೇಳಿ, ಕಿಟಕಿಯಿಂದ ಸೈನ್ಯದ ಸಾಗರವನ್ನು ನೋಡಿ ಭಯಭೀತನಾದ. ಬೋಧಿಸತ್ವನಾದ ಮಹೋಷಧಕುಮಾರ, ಈ ರಾಜ ಸಾವಿಗೆ ಹೆದರಿದ್ದಾನೆ, ನಾನೇ ಇವನ ಭಯವನ್ನು ದೂರ ಮಾಡ ಬೇಕೆಂದುಕೊಂಡು, ‘ರಾಜಾ, ಯಾವ ಭಯವೂ ಬೇಡ. ಸೈನ್ಯದ ಸಂಖ್ಯೆ ಮುಖ್ಯವಲ್ಲ, ಅದನ್ನು ನಡೆಸುವ ಬುದ್ಧಿ ಮುಖ್ಯ. ನಾವೇ ಯುದ್ಧವನ್ನು ಗೆಲ್ಲುತ್ತೇವೆ. ನೀವು ವಿರಾಮವಾಗಿ ಕಾಮಭೋಗಗಳಲ್ಲಿ ವಿರಮಿಸಿ’ ಎಂದ.

ಕುಮಾರ ನಗರ ಮಧ್ಯಕ್ಕೆ ಬಂದು ನಾಗರಿಕರಿಗೆ ಹೇಳಿದ, ‘ನೀವೆಲ್ಲ ಸಂಭ್ರಮ ಪಡಿ. ಒಂದು ವಾರ ಇದು ವಿಶೇಷ ಹಬ್ಬ. ಗಂಧ, ಮಾಲೆ, ವಿಲೇಪನ ಹಾಗೂ ಪಾನ, ಭೋಜನಾದಿಗಳ ಖರ್ಚು ರಾಜರದ್ದು. ನೀವು ನ್ಯತ್ಯ, ಸಂಗೀತಗಳಲ್ಲಿ ತನ್ಮಯರಾಗಿ’. ಜನ ಸಂತೋಷದಿಂದ ಕುಣಿದು ಕುಪ್ಪಳಿಸಿ, ಹಾಡಿ, ಕುಣಿದು ಉತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದರು. ಇದನ್ನು ಹೊರಗಿನಿಂದ ಕಂಡ ಬ್ರಹ್ಮದತ್ತ ಆಶ್ಚರ್ಯಪಟ್ಟ. ಹೊರಗೆ ಸೈನ್ಯ ಮುತ್ತಿಗೆ ಹಾಕಿದ್ದರೆ ಇವರು ಒಳಗೆ ಉತ್ಸವ ಮಾಡುತ್ತಿದ್ದಾರಲ್ಲ. ಏನು ವಿಶೇಷವಿದ್ದಿರಬೇಕು? ಒಂದಿಬ್ಬರು ಗುಪ್ತಚರರು ನುಸುಳು ದಾರಿಯಲ್ಲಿ ಒಳಗೆ ಹೋಗಿ ನೋಡಿಕೊಂಡು ಬಂದು ಹೇಳಿದರು, ‘ರಾಜಾ, ಈ ಜನರಿಗೆ ಯುದ್ಧಭಯವೇ ಇಲ್ಲ. ಅವರು ಸಂತೋಷದಿಂದ ಕುಣಿದಾಡುತ್ತಿದ್ದಾರೆ’. ರಾಜನಿಗೆ ಮತ್ತಷ್ಟು ಕೋಪ ಬಂದಿತು. ‘ಸೈನಿಕರೇ ಈಗಲೇ ನುಗ್ಗಿಬಿಡಿ, ಸೈನಿಕರನ್ನು ಕೊಂದು, ರಾಜನ ತಲೆಯನ್ನು ಕತ್ತರಿಸಿ ತನ್ನಿ’ ಎಂದು ಆಜ್ಞೆ ಮಾಡಿದ. ಅವರು ಕಂದಕಗಳಿಗೆ ಹಾರಿದರು. ಕುಮಾರ ಮೊದಲೇ  ಮಾಡಿಸಿಟ್ಟ ನೀರಿನ ಕಂದಕ, ಕೆಸರಿನ ಕಂದಕ, ಮರಳಿನ ಕಂದಕಗಳನ್ನು ಪಾರಾಗುವುದು ಅಸಾಧ್ಯವೆನ್ನಿಸಿತು. ಅದೇ ಸಮಯದಲ್ಲಿ ಕೋಟೆಯ ಮೇಲಿದ್ದ ಸೈನಿಕರು ಇವರ ಮೇಲೆ ಬಾಣ ಮತ್ತು ಬೆಂಕಿಯ ಮಳೆಗರೆಯುತ್ತಿದ್ದರು. ಬ್ರಹ್ಮದತ್ತನ ಸೈನಿಕರಿಗೆ ಜೀವ ಉಳಿಸಿಕೊಂಡು ಹೋದರೆ ಸಾಕಂತಾಯಿತು. ಒಂದು ವಾರವಾದರೂ ಸೈನಿಕರಿಗೆ ಕೋಟೆಯನ್ನು ಮುಟ್ಟುವುದು ಅಸಾಧ್ಯವಾಯಿತು.

ಕೇವಟ್ಟನ ಸಲಹೆಯಂತೆ ರಾಜ ನಗರಕ್ಕೆ ಹೊರಗಿನಿಂದ ನೀರಿನ ಸರಬರಾಜನ್ನು ಬಂದು ಮಾಡಿದ. ಹೊರಗಿನಿಂದ ಯಾವ ಧಾನ್ಯವೂ ಕೋಟೆಯ ಒಳಗೆ ಹೋಗದಂತೆ ನೋಡಿದ. ನೀರು-ಧಾನ್ಯಗಳಿಲ್ಲದೆ ಅವರು ಶರಣಾಗತರಾಗುತ್ತಾರೆ ಎಂಬ ಉಪಾಯ ಅವನದು. ಆದರೆ ಮಹೋಷಧಕುಮಾರ ನಗರದ ಕೆರೆಗಳನ್ನು ತುಂಬಿಸಿಕೊಂಡು, ಗೋದಾಮುಗಳನ್ನು ಧಾನ್ಯಗಳಿಂದ ಭರ್ತಿಮಾಡಿಕೊಂಡು ನಿಶ್ಚಿಂತನಾಗಿದ್ದ. ಜನರಿಗೆ ಯಾವ ತೊಂದರೆಯೂ ಇರಲಿಲ್ಲ. ಆದರೆ ಹೊರಗೆ ಬ್ರಹ್ಮದತ್ತನಿಗೆ ತನ್ನ ದೊಡ್ಡ ಸೈನ್ಯವನ್ನು ಸಾಕುವುದು ದೊಡ್ಡ ಹೊರೆಯಾಯಿತು. ಇದು ಮುಗಿಯುವ ಯುದ್ಧವಲ್ಲ ಎನ್ನಿಸಿ ಚಿಂತಾಕ್ರಾಂತನಾದಾಗ ಮಂತ್ರಿ ಕೇವಟ್ಟ ಹೊಸ ಉಪಾಯವನ್ನು ನೀಡಿದ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು