ಬುಧವಾರ, ಫೆಬ್ರವರಿ 1, 2023
26 °C
ರಾಜಕಾರಣದ ಹಲವು ಹತ್ತು ಬಗೆಯ ಗಣಿಗಾರಿಕೆಯೆಂದರೆ ಸಾಮಾನ್ಯವೇ?

ಕೃಷ್ಣಮೂರ್ತಿ ಹನೂರು ಅಂಕಣ| ಗಣಿಯ ಆಳದ ಉಸಿರಾಟದಲ್ಲಿ...

ಕೃಷ್ಣಮೂರ್ತಿ ಹನೂರು Updated:

ಅಕ್ಷರ ಗಾತ್ರ : | |

Prajavani

ನಿತ್ಯ ದುಡಿದೇ ಬದುಕಬೇಕಾದವರ ಅತಿ ವಾಸ್ತವ ಚಿತ್ರಣ ಕಟ್ಟಿಕೊಡುವುದರ ಹೆಸರಿನಲ್ಲಿ ಬಡತನದ ಕೃತಕ ದಾರುಣ ದೃಶ್ಯಗಳನ್ನು ತೋರಿಸಿ ಪ್ರೇಕ್ಷಕರ ಕರುಣೆ ಗಿಟ್ಟಿಸುವ ಉದ್ದೇಶ ಇಲ್ಲಿ ಇಲ್ಲ. ಕೋಟಿಗಟ್ಟಲೆ ವೆಚ್ಚ ಮಾಡಿ, ಬೃಹತ್‌ ಸೆಟ್ಟುಗಳನ್ನು ನಿರ್ಮಿಸಿ, ಅದಕ್ಕೆ ಭಾರಿ ಪ್ರಚಾರ ಕೊಟ್ಟು ಪ್ರೇಕ್ಷಕರನ್ನು ಹುಚ್ಚೆಬ್ಬಿಸುವ ಪರಿಪಾಟವನ್ನು ನಮ್ಮ ವ್ಯಾಪಾರಿ ಸಿನಿಮಾರಂಗ ರೂಢಿಸಿಕೊಂಡಿದೆ. ಆದರೆ, ಇದ್ಯಾವುದರ ಹಂಗಿಲ್ಲದೆ ಈ ದೇಶದ ಕೋಟ್ಯಂತರ ಜನಸಮೂಹದ ಗತಿಗೆಟ್ಟ ಬದುಕು ಇರುವುದೇ ಹೀಗೆಂದು ಹೇಳುವ ‘ರಿಕ್ಟರ್ ಸ್ಕೇಲ್ 7.6’ ಎಂಬ ಮಲಯಾಳಂ ಚಲನಚಿತ್ರವು ತದೇಕಚಿತ್ತದಿಂದ ನೋಡುವಂತಿದೆ.


ಕೃಷ್ಣಮೂರ್ತಿ ಹನೂರು

ಧರ್ಮ ಕರ್ಮದ ಕಾರಣಕ್ಕೋ ದೈವ ತಮ್ಮನ್ನು ಇಟ್ಟಿರುವುದು ಹೀಗೆಯೇ ಎಂಬುದರ ನಿಮಿತ್ತವೋ ಈ ಸಿನಿಮಾದ ನಾಯಕ ಹೆಚ್ಚೆಂದರೆ ಬೀದಿ ಭವಿಷ್ಯದವನನ್ನು ಒಮ್ಮೆ ಶಾಸ್ತ್ರ ಕೇಳುತ್ತಾನೆ. ಶಾಸ್ತ್ರದವನಾದರೋ, ‘ನಿನ್ನ ಸ್ಥಿತಿಗೆ ದೇವರನ್ನು, ಹಿರಿಯರನ್ನು ಮರೆತಿರುವುದೇ ಕಾರಣ, ಅದಕ್ಕೆ ಶಾಂತಿಯಾಗಬೇಕು’ ಎಂದು, ನಿಮಿತ್ತ ಹೇಳಿದ್ದಕ್ಕೆ ಕಾಣಿಕೆ ಕೊಡು ಎಂದು ಕೈಯೊಡ್ಡುತ್ತಾನೆ. ಶಾಸ್ತ್ರ ಕೇಳಿದ ಕಥಾನಾಯಕ ಮುದುಕನ ದುಃಸ್ಥಿತಿ ಅಂದರೆ, ಅವನ ಕಾಲು ಕೊಂಚ ಕುಂಟಾಗಿ ಯಾರೂ ನೋಡುವವರಿಲ್ಲದೆ, ತಲೆ ಕೆಟ್ಟ ಈ ಮುದುಕ ಎಲ್ಲಾದರೂ ಹೋಗಿಬಿಡುವನೋ ಎಂದು ಬೆಳಗ್ಗೆ ಗಣಿ ಕೂಲಿಗೆ ಹೋಗುವ ಮಗ ತಂದೆಯ ಕಾಲಿಗೆ ಸರಪಳಿ ಬಿಗಿದು ಅದರ ಇನ್ನೊಂದು ತುದಿಯನ್ನು ಮಂಚಕ್ಕೆ ಕಟ್ಟಿ ಹೋಗುತ್ತಾನೆ!

ನಿತ್ಯ ದುಡಿಮೆಯ ಈ ತಂದೆ ಮಗನ ವಾಸದ ಸೂರು ಅಂದರೆ ಒಂದು ಗುಡಿಸಲು. ಅದರೊಳಗೆ ಅತ್ತ ಸೌದೆಯ ಒಲೆ, ಇತ್ತ ಮುದುಕ ಮಲಗುವ ಮಂಚ. ಇದರ ಕೆಳಗೆ ದುಡಿದು ಬಂದ ಮಗ ಮಲಗುತ್ತಾನೆ. ಒಂದು ಬಡಕಲು ಬೆಕ್ಕಿನ ಮರಿ ಮಾತ್ರ ಅತ್ತಿತ್ತ ಸುಳಿದಾಡುತ್ತದೆ. ಆಗಾಗ ಹೊತ್ತೆ ಸೆತ್ತೆಯಿಂದ ಹಾವು ಹರಿದು ಬರುತ್ತದೆ. ಒಬ್ಬನೇ ಮುದುಕನಿಗೆ ಯಾರೂ ಇಲ್ಲದ ಪಾಳುಬಿದ್ದಂತಿರುವ ಈ ಗುಡಿಸಲೊಳಗೆ ಹರಿದಾಡುವ ಹಾವು ಕಂಡಲ್ಲಿ ಭಯವಿಲ್ಲ. ಹಾಗಾಗಿ ಮುದುಕ ಹಾವಿನತ್ತ ಸಂತೋಷದಿಂದ ಕಣ್ಣರಳಿಸಿ ‘ಆಡು ಪಾಂಬೆ, ಆಡು ಪಾಂಬೆ’ ಎಂದು ಹಾಡುತ್ತಾನೆ. ಇದಿಲ್ಲದಿದ್ದರೆ ಎದ್ದು ನಿಂತು ಮೈ ಮುರಿಯುತ್ತಾನೆ. ಆ ಕ್ರಮ ಮಾತ್ರ ಶಿವನ ತಾಂಡವ ನೃತ್ಯದ ತುಣುಕಿನಂತೆ, ಎದ್ದೇಳುವ ಬೆಂಕಿಯ ಕಿಡಿಯಂತೆ ಗೋಚರವಾಗುತ್ತದೆ.

ಕುಟುಂಬ ಸಂಬಂಧಕ್ಕೆ ಆರ್ಥಿಕ ಸುವ್ಯವಸ್ಥೆ ಅಥವಾ ಅವ್ಯವಸ್ಥೆ ಕಾರಣವೇ? ಇದರ ವ್ಯಾಖ್ಯಾನ ಕಷ್ಟ. ಮನುಷ್ಯ ಸಮೂಹಜೀವಿಯೇ ಇಲ್ಲಾ ಅವನ ಅಂತರಂಗದಾಳದ ಅಹಂನಿಂದ ತಾನೊಬ್ಬನೇ ಅಂದುಕೊಳ್ಳುತ್ತಾನೆಯೇ? ಆರ್ಥಿಕ ಸಬಲತೆ, ಸಾಮೂಹಿಕ ಜೀವನದಿಂದ ಮನುಷ್ಯ ತಾನು ಸುಖಿ ಎಂದುಕೊಳ್ಳಬಹುದು. ಆದರೆ ಈ ತಾತ್ಕಾಲಿಕ ಸ್ಥಿತಿ ಯಾವ ಬಗೆಯದೆಂದರೆ, ಇದ್ದರೆ ಬೇಡವೆಂತಲೂ ಇಲ್ಲದಿದ್ದರೆ ಬೇಕೆಂತಲೂ ಕಾಡುವ ದ್ವಂದ್ವವೂ ಇರಬಹುದು. ಈ ಪರಿಕ್ರಮದಲ್ಲಿ ತಂದೆ ಮಕ್ಕಳು, ಪತಿ ಪತ್ನಿ, ಸಹೋದರ ಸಂಬಂಧಗಳ ಕೂಡುವಿಕೆ ಮತ್ತು ಬಿಡುಗಡೆಯ ಸಂಘರ್ಷಗಳು ಇರುವವರಲ್ಲೂ ಇಲ್ಲದವರಲ್ಲೂ ನಿರಂತರ ನಡೆಯುತ್ತಲೇ ಇರುತ್ತವೆ. ಇದಕ್ಕೆ ಭೌತಿಕ ಮತ್ತು ಮಾನಸಿಕ ಹಿನ್ನೆಲೆಯ ಹಲವು ಹತ್ತು ಕಾರಣಗಳಿರುತ್ತವೆ.

ಈ ರಿಕ್ಟರ್ ಸ್ಕೇಲ್ 7.6 ಮಲಯಾಳಂ ಚಿತ್ರದ ಆರಂಭದಲ್ಲಿ, ದುಡಿಮೆಗೆ ಹೋಗುವ ಮಗ ಬೆಳಗ್ಗೆ ಅಪ್ಪನಿಗೆ ಅನ್ನ ಬೇಯಿಸಿ ಹಾಕುತ್ತಾನೆ ಸರಿ; ಆದರೆ ಕೂಲಿಗೆ ಹೋಗುವಾಗ ತಂದೆಯ ಕಾಲಿಗೆ ಸರಪಳಿ ಬಿಗಿಯುವಲ್ಲಿ ತಂದೆ ಗದ್ದಲವೆಬ್ಬಿಸುವುದಿಲ್ಲ, ಬದಲಾಗಿ ತಾನೇ ಬಲಗಾಲು ನೀಡುತ್ತಾನೆ. ಇದು ಅನಿವಾರ್ಯ ಬಂಧನ.

ಹುಲುಮಾನವರಿಗೆ, ಬಲುಮಾನವರಿಗೆ ತಮ್ಮ ವ್ಯಥೆ, ಸಂತೋಷದ ವೇಳೆ ಒದಗಬಹುದಾದ ನೆರವುಗಳಲ್ಲಿ ಮದ್ಯಪಾನವೂ ಒಂದು! ತಂದೆ ಅವನ ವಯಸ್ಕ ಮಿತ್ರರೊಂದಿಗೆ ಕೂಡಿ ಜನಪದ ಹಾಡು ಗುನುಗಿದರೆ, ಮಗ ಆಗಾಗ ಮಿತ್ರರೊಡನೆ ರಾತ್ರಿಯ ಕತ್ತಲಲ್ಲಿ ಗಂಟಲಿಗೆ ಹೆಂಡ ಇಳಿಸುವಾಗ ಎದೆಯಾಳದ ಸತ್ಯ ಎದ್ದೆದ್ದು ಕುಣಿಯುತ್ತದೆ. ಯಾರಿಗಾದರೂ ಸರಿ ಆ ಕ್ಷಣವು ಕುಟುಂಬದೊಂದಿಗೋ ಇಲ್ಲ ಸಮಾಜದೊಂದಿಗೋ ಇರುವ ಸಂಬಂಧದ ಬಿಕ್ಕಟ್ಟನ್ನು, ಸಿಟ್ಟನ್ನು ರಟ್ಟು ಮಾಡುತ್ತದೆ. ಅಂಥ ವೇಳೆ ಈ ಚಿತ್ರದ ಪಾತ್ರಧಾರಿ ಮಗನಿಗೆ ಕುಡಿಯುವಾಗ ಎದುರು ಕಾಣುವ ಶತ್ರು ಅಂದರೆ ಮಂಚದಲ್ಲಿ ಬಿದ್ದ ಅಪ್ಪನೇ. ಈ ಐಲು ಅಪ್ಪ ಇರುವವರೆಗೆ ತನಗೊಂದು ಹೆಣ್ಣು ಸಿಗುವುದಿಲ್ಲ ಎಂಬ ಅಸಹನೆಯನ್ನು ಮಿತ್ರರ ಮುಂದೆ ಮಂಡಿಸುತ್ತ, ಸಿಟ್ಟು ಏರಿ, ಅಂಥವನನ್ನು ಕೊಂದು ಹಾಕುವುದೇ ಮಾರ್ಗ ಎಂಬ ನಿರ್ಧಾರಕ್ಕೆ ಬಂದರೂ ಅದು ನೆರವೇರದ ಕಾರ್ಯ. ಹೀಗೆಂದವನು ಬೆಳಗೆದ್ದು ಅಪ್ಪನಿಗಾಗಿ ಅನ್ನ ಬೇಯಿಸುತ್ತಾನೆ!

ತಂದೆ ಮಗನ ಜಗಳದ ನಡುವೆ ಮುದುಕನಿಗೆ ಕೇಳುವ ಸಂತೋಷದ ಕರೆ ಅಂದರೆ ಗುಡಿಸಲ ಆಚೆ ನಿಂತು ತನ್ನನ್ನು ಕರೆಯುವ ಪುಟ್ಟ ಹುಡುಗನ ಆತ್ಮೀಯ ದನಿ. ಇದೆಂಥಾ ಮನಮುಟ್ಟುವ ದೃಶ್ಯವೆಂದರೆ ಅಲ್ಲಿ ಹುಡುಗನೇ ಇಲ್ಲ, ಗುಡಿಸಲಾಚೆಯಿಂದ ಅವನ ಕರೆ ಮಾತ್ರ ಕೇಳಿಬರುವುದು. ತಡಿಕೆ ಸಂದಿಯಿಂದಲೇ ಮುದುಕ ಹುಡುಗನಿಗೆ ಕ್ಯಾಂಡಿ ಕೊಳ್ಳಲು ಇದ್ದ ಒಂದು ಕಾಸು ಕೊಡುವನು. ಇದರೊಂದಿಗೆ ಅದಾಗಲೇ ಒಬ್ಬ ಹೆಣ್ಣುಮಗಳು ಒಂದು ಹೊತ್ತು ಊಟ ತರುತ್ತಾಳೆ. ಮುದುಕನಿಗೆ ಅದು ಆಪ್ಯಾಯಮಾನ. ಆ ಹಿಡಿಯನ್ನದ ರುಚಿಗೆ ಹೆಣ್ಣುಮಗಳ ಕೈ ಸ್ಪರ್ಶವಿದೆ. ಹೆಣ್ಣುಮಗಳು ಹಾಗೆಯೇ ಒಮ್ಮೆ ಮುದುಕನ ಮಗನನ್ನೂ ಕಂಡು ಆಡುವ ಮಾತು, ಸೂಸುವ ಒಂದೆರಡು ನಗು ಅದಾಗ ಗುಡಿಸಲಿಗೆ ಜೀವ ತುಂಬಿಕೊಂಡಂತಾಗುತ್ತದೆ. ಇದು ಬಣ್ಣ ಬಣ್ಣದ ಪ್ರೇಮಗೀತೆಗಳ ಭಾವವನ್ನು ದಾಟಿದ ಸೂಕ್ಷ್ಮ ದೃಶ್ಯ. ಜೀವ ಭಾವಗಳೆಂಬವು ಗುಡಿಸಲಲ್ಲೂ ಒಂದೇ ಅರಮನೆಯಲ್ಲೂ ಒಂದೇ. ಕುವೆಂಪು ಅವರ ಐತ, ಪೀಂಚಲರ ದೇಹ ಭಾವ ಮತ್ತು ಶಿವಶಿವೆಯರ ದೈವಾಂಶವನ್ನು ಮುಚ್ಚಿಕೊಂಡ ಗುಡಿಸಲ ಮಟ್ಟಾಳೆಯಂತೆ! ಜಗತ್ತಿನ ಕ್ರೌರ್ಯದ ಪ್ರತಿರೂಪವನ್ನು ಅದರೊಳಗೇ ಜಿನುಗುವ ಪ್ರೀತಿಯನ್ನು ಗುಡಿಸಲಲ್ಲಷ್ಟೇ ತೋರಿಸುವ ಉದ್ದೇಶ ನಿರ್ದೇಶಕಿಗಿರುವಂತಿದೆ.

ಚಿತ್ರದ ಕೊನೆಯ ದೃಶ್ಯ ಮತ್ತಷ್ಟು ಮಾನವೀಯ. ಮಗನಿಗೆ ಅವನ ದುಡಿಮೆಯ ಸ್ಥಳದಲ್ಲಿ ಬಹುಶಃ ಮದ್ದು ಸಿಡಿದು ಕಾಲು ಮುರಿಯುತ್ತದೆ. ಆದರೆ ಗಣಿ ಮದ್ದಿನ ಸಿಡಿತದ ದೃಶ್ಯ ಕಾಣುವುದಿಲ್ಲ. ಸ್ನೇಹಿತರು ಕಾಲು ಮುರಿದ ಮಗನನ್ನು ಗುಡಿಸಲಿಗೆ ಹೊತ್ತು ತಂದು ಹಾಕುತ್ತಾರೆ. ಅಪ್ಪ ತನ್ನ ಕುಂಟುಕಾಲಿನಿಂದ ಸುಧಾರಿಸಿಕೊಂಡು ಮಂಚದಿಂದ ಇಳಿದರೆ, ಮಗ ಆ ಜಾಗಕ್ಕೆ ಭರ್ತಿ ಆಗುತ್ತಾನೆ. ಕಾಲು ಮುರಿಯುವ ದುರಂತ, ಅದರ ದುಃಖಕ್ಕಿಂತ ಅವರಿಗೆ ದುಡಿಮೆಯೇ ಅನಿವಾರ್ಯ ಗತಿ; ಸಂಕಟಕ್ಕೆ ಹೊತ್ತಿಲ್ಲ. ಕಾಲು ಮುರಿದುಕೊಂಡ ಮಗನಿಗೆ ಅಪ್ಪ ಅನ್ನ ಬೇಯಿಸಿ ಇಟ್ಟು ಸುತ್ತಿಗೆ ಹೆಗಲಿಗಿಟ್ಟು ಗುಡಿಸಲ ಹೊರಗಾಗಿ ನಡೆಯುವಲ್ಲಿ ಅವನು ಕಾಣಿಸುವುದೇ ಇಲ್ಲ. ಯಾಕೆಂದರೆ ಅಲ್ಲೆಲ್ಲ ಆಳಕ್ಕೆ, ಇನ್ನೂ ಆಳಕ್ಕೆ ತೋಡಿದ ಕಲ್ಲು, ಮಣ್ಣಿನ ಗಣಿಯ ಗುಂಡಿಗಳೇ ಪ್ರೇಕ್ಷಕರಿಗೆ ಕಾಣಿಸುತ್ತವೆ.

ಒಂದು ಗಂಟೆ ಹನ್ನೆರಡು ನಿಮಿಷದ ಈ ಚಿತ್ರದಲ್ಲಿರುವುದು ಗುಡಿಸಲ ಒಂದೇ ದೃಶ್ಯ. ವಸ್ತ್ರವಿನ್ಯಾಸವಿಲ್ಲ.
ಯಾಕೆಂದರೆ ಪಾತ್ರಧಾರಿಗಳು ಕೂಲಿಕಾರ್ಮಿಕರು. ಸತ್ಯಜಿತ್ ರೇ ಅವರ ‘ಪಥೇರ್ ಪಾಂಚಾಲಿ’ಯಲ್ಲಿ ಒಂದೆಡೆಯಾದರೂ ತೀವ್ರ ದುಃಖದ ಅಳುವಿನ ದೃಶ್ಯವಿದೆ. ರಿಕ್ಟರ್ ಸ್ಕೇಲ್ 7.6 ಚಿತ್ರದಲ್ಲಿ ಅಂಥ ದೃಶ್ಯವೇ ಇಲ್ಲ. ದುಃಖ ಸತ್ತಂತಿದೆ. ಈ ಚಿತ್ರದ ನಿರ್ದೇಶಕಿ ಜೀವಾ, ಹೆಣ್ಣುಮಗಳು. ಚೋಮನದುಡಿ ಚಿತ್ರ ಭೂ ಹಂಚಿಕೆ ಸಮಸ್ಯೆಯದು. ರಿಕ್ಟರ್ ಸ್ಕೇಲ್ ಗಣಿಗಾರಿಕೆಯ ಭೂಕಂಪನದಲ್ಲಿ ದುಡಿದು ಕಾಲು ಮುರಿದುಕೊಳ್ಳುವವರ ಭಂಗದ ಕಥೆ.

ರಾಜಕಾರಣದ ಹಲವು ಹತ್ತು ಬಗೆಯ ಗಣಿಗಾರಿಕೆಯೆಂದರೆ ಸಾಮಾನ್ಯವೇ? ಬಡವರು ಅಲ್ಲಿ ಕೂಲಿಗಳು, ಶ್ರೀಸಾಮಾನ್ಯರು ಅದರ ಮೂಕಪ್ರೇಕ್ಷಕರು. ಕೋಟ್ಯಧಿ ಪತಿಗಳು ಅದರ ಒಡೆಯರು, ಲೋಕನಾಯಕರು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು