ಗುರುವಾರ , ಮೇ 26, 2022
26 °C
‘ಜಲ ಸುರಕ್ಷತೆ’ಗಾಗಿ ಅಣೆಕಟ್ಟುಗಳನ್ನು ಅತಿ ಎಚ್ಚರಿಕೆಯಿಂದ ಕಾಯ್ದುಕೊಳ್ಳಬೇಕಾದ ಜರೂರಿದೆ

ಡಾ. ಎಚ್.ಆರ್.ಕೃಷ್ಣಮೂರ್ತಿ ಅಂಕಣ| ಅಣೆಕಟ್ಟು ಸುರಕ್ಷತೆಗೆ ಶಾಸನದ ಬಲ

ಡಾ. ಎಚ್.ಆರ್.ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಏಳು ದಶಕಗಳ ನಂತರ, ಅಣೆಕಟ್ಟುಗಳ ಸುರಕ್ಷತೆಗೆ ಸಂಬಂಧಿಸಿದ ಮಸೂದೆಗೆ ಈ ತಿಂಗಳ ಪ್ರಾರಂಭದಲ್ಲಿ ರಾಜ್ಯಸಭೆ ಅನು ಮೋದನೆ ನೀಡಿದೆ. 2019ರ ಆಗಸ್ಟ್ ತಿಂಗಳಿನಲ್ಲಿ ಇದನ್ನು ಲೋಕಸಭೆ ಅಂಗೀಕರಿಸಿತ್ತು. ರಾಷ್ಟ್ರಪತಿಯವರ ಅಂಕಿತದ ನಂತರ ‘ಅಣೆಕಟ್ಟು ಸುರಕ್ಷತಾ ಅಧಿನಿಯಮ- 2021’ ವಿಧ್ಯುಕ್ತವಾಗಿ ಜಾರಿಗೆ ಬರಲಿದೆ.


ಎಚ್.ಆರ್. ಕೃಷ್ಣಮೂರ್ತಿ

ಕೇಂದ್ರೀಯ ಜಲ ಆಯೋಗದ ಮೂಲದಂತೆ, ನಮ್ಮ ದೇಶದಲ್ಲಿ 5,745 ಬೃಹತ್ ಅಣೆಕಟ್ಟುಗಳಿವೆ. ಇವುಗಳಲ್ಲಿ 100 ವರ್ಷ ಮೀರಿರುವ ಸುಮಾರು 400 ಅಣೆಕಟ್ಟುಗಳಿದ್ದು, ಅವುಗಳ ಸುರಕ್ಷತೆಯ ಬಗ್ಗೆ ಅತಿ ಹೆಚ್ಚಿನ ಕಾಳಜಿ ವಹಿಸಬೇಕಾದ ತುರ್ತು ಅಗತ್ಯವಿದೆ. ಇದಕ್ಕೆ ಕಾರಣ ಇದುವರೆವಿಗೂ ಸಂಭವಿಸಿರುವ ಬೃಹತ್ ಅಣೆಕಟ್ಟುಗಳ ಬಿರಿತ, ಕುಸಿತ, ಒಡೆತ ಮುಂತಾದ ವೈಫಲ್ಯಗಳ 40 ಗಂಭೀರ ಪ್ರಕರಣಗಳು.

1979ರಲ್ಲಿ ಗುಜರಾತ್‍ನ ಮೋರ್ವಿ ಪಟ್ಟಣದ ಸಮೀಪವಿರುವ ಮಚು ಅಣೆಕಟ್ಟು ಒಡೆದು 12,000 ಮನೆಗಳು ಕೊಚ್ಚಿಹೋಗಿ, ಸುಮಾರು 2,000 ಮಂದಿ ಸಾವನ್ನಪ್ಪಿದರು. ಈ ಭೀಕರ ಅವಘಡದ ನಂತರ ಎಚ್ಚೆತ್ತ ಹಲವಾರು ರಾಜ್ಯ ಸರ್ಕಾರಗಳು, ರಾಜ್ಯ ಮಟ್ಟದಲ್ಲಿ ‘ಅಣೆಕಟ್ಟು ಸುರಕ್ಷತಾ ಸಂಸ್ಥೆ’ಗಳನ್ನು ಸ್ಥಾಪಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಂಡವು. ಇಂದು 18 ರಾಜ್ಯಗಳಲ್ಲಿ ಅಲ್ಲದೆ, ನ್ಯಾಷನಲ್ ಹೈಡ್ರೊಎಲೆಕ್ಟ್ರಿಕ್ ಪವರ್‌ ಕಾರ್ಪೊರೇಷನ್, ಭಾಕ್ರಾ- ಬಿಯಾಸ್, ದಾಮೋದರ್ ವ್ಯಾಲಿ, ಕೇರಳ ರಾಜ್ಯ ವಿದ್ಯುತ್ ಮಂಡಳಿ ಮತ್ತು ಉತ್ತರಾಖಂಡ ಜಲವಿದ್ಯುತ್ ನಿಗಮಗಳಲ್ಲಿ ಅಣೆಕಟ್ಟು ಸುರಕ್ಷತಾ ಸಂಸ್ಥೆಗಳು ಅಸ್ತಿತ್ವದಲ್ಲಿದ್ದರೂ ಅವುಗಳ ಕೆಲಸ ಕಾರ್ಯಗಳಲ್ಲಿ ಅನೇಕ ಕೊರತೆಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಸಂಸ್ಥೆಗಳು ಸಲಹೆಗಳನ್ನು ನೀಡಬಹುದೇ ವಿನಾ ಅಣೆಕಟ್ಟುಗಳ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅಧಿಕಾರ ಅವುಗಳಿಗಿಲ್ಲ.

ಬೃಹತ್ ಅಣೆಕಟ್ಟುಗಳ ಸುರಕ್ಷತೆಗೆ ಅಗತ್ಯವಾದ ವಿಧಿವಿಧಾನಗಳನ್ನು ರೂಪಿಸುವ ಉದ್ದೇಶದಿಂದ 2010 ರಲ್ಲಿ, ಅಂದಿನ ಯುಪಿಎ ಸರ್ಕಾರವು ಲೋಕಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಿತು. ಮುಂದೆ ಅದು ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಳಗಾಗಿ, ಅನೇಕ ತಿದ್ದುಪಡಿಗಳೊಂದಿಗೆ ಲೋಕಸಭೆಯಲ್ಲಿ ಮಂಡಿತಗೊಂಡರೂ 2014ರಲ್ಲಿ 15ನೆಯ ಲೋಕಸಭೆಯ ಅವಧಿ ಮುಗಿದ ಕಾರಣ ಮಸೂದೆಯ ಕಾಲಾವಧಿಯೂ ಕೊನೆಗೊಂಡಿತು. ಅಂದಿನ ಮಸೂದೆಯಲ್ಲಿದ್ದ ಎಲ್ಲ ಅಂಶಗಳ ಜೊತೆಗೆ ಮತ್ತಷ್ಟನ್ನು ಒಳಗೊಂಡಿರುವ ಹೊಸ ಮಸೂದೆಯು ಲೋಕಸಭೆ, ರಾಜ್ಯಸಭೆಯಲ್ಲಿ ಅನುಮೋದನೆಗೊಂಡು ರಾಷ್ಟ್ರಪತಿ ಅಂಕಿತಕ್ಕೆ ಕಾದಿದೆ. ಅಣೆಕಟ್ಟುಗಳ ಸುರಕ್ಷತೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದಿಷ್ಟ ಹಾಗೂ ಸ್ಪಷ್ಟವಾದ ಜವಾಬ್ದಾರಿಗಳನ್ನು ನೀಡಲು ಅಗತ್ಯವಾದ ಕಾನೂನು ಮತ್ತು ಸಾಂಸ್ಥಿಕ ಚೌಕಟ್ಟನ್ನು ಈ ಅಧಿನಿಯಮ ಒದಗಿಸಲಿದೆ. ಅಣೆಕಟ್ಟುಗಳ ವೈಫಲ್ಯ ದಿಂದಾಗುವ ಅವಘಡಗಳನ್ನು ತಡೆಯಲು ಬೃಹತ್ ಅಣೆ ಕಟ್ಟುಗಳ ಮೇಲೆ ಕಣ್ಗಾವಲು, ಪರಿಶೀಲನೆ, ದಿನನಿತ್ಯದ ಕಾರ್ಯಾಚರಣೆ, ನಿರ್ವಹಣೆಗೆ ಅಗತ್ಯವಾದ ಎಲ್ಲ ವ್ಯವಸ್ಥೆಗಳನ್ನೂ ಕಲ್ಪಿಸಲಿದೆ.

ಕೇಂದ್ರದ ಹಂತದಲ್ಲಿ ‘ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮಿತಿ’ ಮತ್ತು ‘ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರ’ ಎಂಬ ಎರಡು ಸಂಸ್ಥೆಗಳು ರಚನೆಯಾಗಲಿವೆ. ರಾಷ್ಟ್ರೀಯ ಸಮಿತಿ, ಅಣೆಕಟ್ಟುಗಳ ಸುರಕ್ಷತೆಗೆ ಸಂಬಂಧಿಸಿದ ನೀತಿ-ನಿಲುವುಗಳು, ವಿಧಿ ವಿಧಾನಗಳು, ಸುರಕ್ಷತೆ ಮತ್ತು ಅವಘಡ ನಿಯಂತ್ರಣ ಗಳಿಗೆ ಅಗತ್ಯವಾದ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಲಿದೆ. ರಾಷ್ಟ್ರೀಯ ಸುರಕ್ಷತಾ ಪ್ರಾಧಿಕಾರ ಈ ಎಲ್ಲ ನೀತಿ ನಿಯಮಗಳನ್ನು ಅನುಷ್ಠಾನಗೊಳಿಸಲಿದೆ. ಈ ಸಂಬಂಧ ಪ್ರಾಧಿಕಾರ ನೀಡುವ ಆದೇಶ ಎಲ್ಲ ರಾಜ್ಯ ಸರ್ಕಾರಗಳಿಗೂ ಕಡ್ಡಾಯವಾಗಿ ಅನ್ವಯವಾಗಲಿದೆ. ಇದೇ ರೀತಿ ರಾಜ್ಯ ಮಟ್ಟದಲ್ಲೂ ‘ರಾಜ್ಯ ಅಣೆಕಟ್ಟು ಸುರಕ್ಷತಾ ಸಂಸ್ಥೆ’ ಮತ್ತು ರಾಜ್ಯ ಅಣೆಕಟ್ಟು ಸುರಕ್ಷತಾ ಸಮಿತಿ ಅಸ್ತಿತ್ವಕ್ಕೆ ಬರಲಿವೆ. ಇವುಗಳ ಕರ್ತವ್ಯಗಳನ್ನು ಸ್ಪಷ್ಟವಾಗಿ ನಿರೂಪಿಸಲಾಗಿದ್ದು, ಒಟ್ಟಾರೆಯಾಗಿ ಅವು ರಾಜ್ಯದ ವ್ಯಾಪ್ತಿ ಯಲ್ಲಿನ ಅಣೆಕಟ್ಟುಗಳ ನಿಗಾವಣೆ, ಕಾರ್ಯಾಚರಣೆ, ನಿರ್ವಹಣೆಯ ಜವಾಬ್ದಾರಿಗಳನ್ನು ನಿರ್ವಹಿಸಲಿವೆ.

ದೇಶದಲ್ಲಿ 15 ಮೀಟರ್‌ಗಳಿಗಿಂತ ಎತ್ತರವಿರುವ ಅಥವಾ 10-15 ಮೀಟರ್‌ಗಳಷ್ಟು ಎತ್ತರವಿದ್ದು, ಕನಿಷ್ಠ 10 ಲಕ್ಷ ಘನ ಮೀಟರ್‌ಗಳಷ್ಟು ನೀರನ್ನು ಸಂಗ್ರಹಿಸಬಲ್ಲ ಅಣೆಕಟ್ಟುಗಳನ್ನು ಬೃಹತ್ ಅಣೆಕಟ್ಟು ಗಳೆಂದು ವರ್ಗೀಕರಿಸಲಾಗಿದೆ. ಈ ಅಧಿನಿಯಮವು ದೇಶದ ಅಂತಹ ಎಲ್ಲ ಅಣೆಕಟ್ಟುಗಳಿಗೆ ಅನ್ವಯವಾಗ ಲಿದೆ. ಅವುಗಳ ಸುರಕ್ಷತೆಗೆ ಇದುವರೆಗೆ ನೀತಿ ನಿಯಮ ಗಳೇ ಇರಲಿಲ್ಲವೆಂದಲ್ಲ. ವರ್ಷದಲ್ಲಿ ಎರಡು ಬಾರಿ, ಮಳೆಗಾಲದ ಮೊದಲು ಮತ್ತು ಆನಂತರ ಅಣೆಕಟ್ಟು ಗಳ ವಿವರವಾದ ಪರೀಕ್ಷೆ, ಕೋಡಿಯ ವ್ಯವಸ್ಥೆ, ಅಣೆಕಟ್ಟೆಯಲ್ಲಿರುವ ಸುರಂಗ, ಕೊಳವೆ ಮಾರ್ಗ, ವಿದ್ಯು ದುತ್ಪಾದನೆಗೆ ನೀರು ಹಾಯಿಸುವ ಪೈಪುಗಳು, ತೂಬು ಗೇಟುಗಳು, ನಿಗಾವಣೆಯ ಸಾಧನಗಳ ಸ್ಥಿತಿಗತಿ, ಇಡೀ ಅಣೆಕಟ್ಟೆಯ ಆರೋಗ್ಯ, ತುರ್ತು ಕಾರ್ಯಾಚರಣೆಯ ಯೋಜನೆಗಳು ಮುಂತಾದ ಎಲ್ಲ ಅಂಶಗಳನ್ನೂ ವ್ಯವ ಸ್ಥಿತವಾಗಿ ಮಾಡಬೇಕಾದ ಕ್ರಮವನ್ನು ‘ಅಣೆಕಟ್ಟು ಪುನರ್ವಸತೀಕರಣ ಮತ್ತು ಸುಧಾರಣಾ ಕೈಪಿಡಿ’ಯಲ್ಲಿ ಸ್ಪಷ್ಟವಾಗಿ ನಿರೂಪಿಸಲಾಗಿದೆ. ವರ್ಷದಲ್ಲಿ ಎರಡು ಬಾರಿ ಇಂತಹ ಪರೀಕ್ಷೆ ನಡೆಸಿ ವರದಿಯನ್ನು ಕೇಂದ್ರೀಯ ಜಲ ಆಯೋಗಕ್ಕೆ ಸಲ್ಲಿಸಬೇಕು. ಆದರೆ ಬಹುತೇಕ ರಾಜ್ಯಗಳು ಇಂತಹ ವಿವರವಾದ ಸುರಕ್ಷತಾ ಪರಿಶೀಲನೆ ಕೈಗೊಳ್ಳುವುದೂ ಇಲ್ಲ, ವರದಿಯನ್ನು ಸಲ್ಲಿಸುವುದೂ ಇಲ್ಲವೆನ್ನುವುದು, ಇಂತಹ ವರದಿಗಳನ್ನು ಪರಿಶೀಲಿಸುವ ಭಾರತದ ಮಹಾಲೇಖಪಾಲರ ಕಟುವಾದ ಟೀಕೆ. ಅಣೆಕಟ್ಟುಗಳ ಸುರಕ್ಷತೆಗೆ ಸಂಬಂಧಿಸಿದ ಈ ನಿರಾಶಾದಾಯಕ ಪರಿಸ್ಥಿತಿಯು 2021ರ ಅಧಿನಿಯಮ ಜಾರಿಗೆ ಬಂದ ನಂತರ ನಿಧಾನವಾಗಿಯಾದರೂ ಬದ ಲಾಗುವ ನಿರೀಕ್ಷೆಯಿದೆ.

2021ರ ಅಣೆಕಟ್ಟು ಸುರಕ್ಷತಾ ಮಸೂದೆಯನ್ನು ಕೆಲ ರಾಜ್ಯಗಳು ವಿರೋಧಿಸಿದ್ದು ಉಂಟು. ಈ ವಿರೋಧಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ರಾಜ್ಯದ ಭೌಗೋಳಿಕ ವ್ಯಾಪ್ತಿಯಲ್ಲಿರುವ ಅಣೆಕಟ್ಟುಗಳ ಸುರಕ್ಷತೆ, ನಿರ್ವಹಣೆಗೆ ಸಂಬಂಧಿಸಿದಂತೆ ಶಾಸನಗಳನ್ನು ಮಾಡುವ ರಾಜ್ಯಗಳ ಹಕ್ಕು, ಅಧಿಕಾರಗಳನ್ನು ಈ ಮಸೂದೆಯು ಮೊಟಕುಗೊಳಿಸುತ್ತದೆ ಎಂಬುದು ಮೊದಲನೆಯ ದೂರು. ಆದರೆ ದೇಶದ ಅಣೆಕಟ್ಟುಗಳ ಒಟ್ಟಾರೆ ಸುರಕ್ಷತೆಯ ದೃಷ್ಟಿಯಿಂದ ಇಂತಹ ಶಾಸನವನ್ನು ಮಾಡುವ ಸಂವಿಧಾನಾತ್ಮಕ ಅಧಿಕಾರ ತನಗಿದೆಯೆಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಇನ್ನೊಂದು ಕಾರಣವೆಂದರೆ, ಕೆಲವು ಅಣೆಕಟ್ಟು
ಗಳಿಗೆ ಸಂಬಂಧಿಸಿದಂತೆ ಇರುವ ವಿಚಿತ್ರ ಪರಿಸ್ಥಿತಿ. ಮುಲ್ಲ ಪೆರಿಯಾರ್ ಇದಕ್ಕೊಂದು ಉದಾಹರಣೆ.

ಮುಲ್ಲಪೆರಿಯಾರ್, 1887- 1895ರ ನಡುವೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಪೆರಿಯಾರ್ ನದಿಗೆ ಅಡ್ಡವಾಗಿ ಕಟ್ಟಿದ ಅಣೆಕಟ್ಟು. 1886ರಲ್ಲಿ ಬ್ರಿಟಿಷ್ ಆಡಳಿತವಿದ್ದ ಮದ್ರಾಸ್ ಪ್ರಾಂತ್ಯ ಮತ್ತು ಟ್ರಾವಂಕೂರ್ ಮಹಾರಾಜರ ನಡುವೆ ಏರ್ಪಟ್ಟ, ಇಂದಿಗೂ ಜೀವಂತವಾಗಿರುವ ಒಪ್ಪಂದದ ಪ್ರಕಾರ, ಮುಲ್ಲಪೆರಿಯಾರ್ ಕೇರಳದಲ್ಲಿದ್ದರೂ ಇಂದಿಗೂ ಅದರ ನಿರ್ವಹಣೆಯ ಜವಾಬ್ದಾರಿ ತಮಿಳುನಾಡಿನದು. ಹೀಗಾಗಿ ಇದು ಎರಡು ರಾಜ್ಯಗಳ ನಡುವೆ ನಿರಂತರವಾದ ವ್ಯಾಜ್ಯಕ್ಕೆ ಕಾರಣವಾಗಿದೆ. ಹೊಸ ಶಾಸನ ಜಾರಿಗೆ ಬಂದ ನಂತರ, ಮುಲ್ಲಪೆರಿಯಾರ್ ಅಣೆಕಟ್ಟೆಯ ಸುರಕ್ಷತೆ, ದಿನನಿತ್ಯದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರ ನಡೆಸುತ್ತದೆ. ಈ ಜವಾಬ್ದಾರಿಯಲ್ಲಿ ಕೇರಳ ಮತ್ತು ತಮಿಳುನಾಡಿಗೆ ಯಾವ ಪಾತ್ರವೂ ಇರುವುದಿಲ್ಲ. ತಮಿಳುನಾಡಿನ ಒಡೆತನದ, ಆದರೆ ಕೇರಳದಲ್ಲಿರುವ ಪರಂಬಿಕುಲಮ್, ತುನಕಡವು ಮತ್ತು ಪೆರುವರಿ ಪಲ್ಲಮ್ ಅಣೆಕಟ್ಟುಗಳದ್ದೂ ಇದೇ ಕಥೆ. ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್ ರಾಜ್ಯಗಳಲ್ಲೂ ಈ ರೀತಿಯ ಅಣೆಕಟ್ಟುಗಳಿವೆ. ಹೀಗಾಗಿ ಈ ಎಲ್ಲ ರಾಜ್ಯಗಳೂ ಈ ಮಸೂದೆಯನ್ನು ವಿಶೇಷವಾಗಿ ವಿರೋಧಿಸಿದ್ದವು.

ಅಮೆರಿಕ, ಚೀನಾದ ನಂತರ ಅತಿ ಹೆಚ್ಚು ಅಣೆ ಕಟ್ಟುಗಳನ್ನು ಹೊಂದಿರುವ ಭಾರತ, ಅಣೆಕಟ್ಟುಗಳ ಸುರಕ್ಷತೆಯ ದೃಷ್ಟಿಯಿಂದ ಮಾಡಬೇಕಿರುವ ಕೆಲಸಗಳು ಬಹಳಷ್ಟಿವೆ. ನೀರಿನ ಕೊರತೆ ನಿರಂತರವಾಗಿ ಏರುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ, ಪ್ರಜೆಗಳಿಗೆ ‘ಜಲ ಸುರಕ್ಷತೆ’ಯ ಭರವಸೆ ನೀಡಿರುವ ಸರ್ಕಾರ, ಸಣ್ಣ, ಮಧ್ಯಮ, ಬೃಹತ್ ಅಣೆಕಟ್ಟುಗಳೆಲ್ಲವನ್ನೂ ಅತಿ ಹೆಚ್ಚಿನ ಮುತುವರ್ಜಿ,
ಎಚ್ಚರಿಕೆಗಳಿಂದ ಕಾಯ್ದುಕೊಳ್ಳಬೇಕಾಗಿದೆ. ಹೊಸ ಮಸೂದೆ ದೀರ್ಘಾವಧಿಯಲ್ಲಿ ಈ ಉದ್ದೇಶ ಸಾಧನೆಗೆ ಎಷ್ಟರಮಟ್ಟಿಗೆ ನೆರವಾಗಲಿದೆಯೆಂಬುದನ್ನು ಕಾದು ನೋಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು