ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವನ್ನು ಅರಿಯುವ ವಿಶೇಷ ಶಕ್ತಿ ದೊರೆಯಿತು

Last Updated 11 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ನಮಗೂ ಈ ಎಲ್ಲಾ ಅನನುಕೂಲ ವಾತಾವರಣಗಳು ಸವಾಲುಗಳೇ ಆಗಿದ್ದುವು. ಮುಖ್ಯವಾಗಿ ಇಂತಹ ಅರಣ್ಯ ಪ್ರದೇಶಗಳ ಯುದ್ಧಾನುಭವ ನಮ್ಮ ಸೈನಿಕರಲ್ಲಿರಲಿಲ್ಲ. ಈ ವಿಭಾಗದಲ್ಲಿ ನಮಗೆ ವಿಶೇಷ ತರಬೇತಿಯ ಅವಶ್ಯಕತೆಯೂ ಇತ್ತು. ಇದಕ್ಕೆಂದೇ ನಾವು Counter insurgency and jungle warfare school (CIJW) ನಲ್ಲಿ ತರಬೇತಿಗೆ ಅಣಿಯಾದೆವು. ಈ ತರಬೇತಿ ಕೇಂದ್ರ ವಾರಂಗ್ಟೆ ಎಂಬ ಪ್ರದೇಶದಲ್ಲಿತ್ತು. ಈ ರೀತಿಯ ತರಬೇತಿ ಶಾಲೆ ಇಡೀ ವಿಶ್ವದಲ್ಲಿ ಇದು ಮಾತ್ರ ಇತ್ತೆಂಬುದೂ ಗಮನಿಸಬೇಕಾದ ವಿಷಯ. ತರಬೇತಿ ನೀಡಲು ಬಂದಿರುವ ತರಬೇತುದಾರರೂ ಸಹ, ಗೆರಿಲ್ಲಾಗಳು ಮತ್ತು ಅರಣ್ಯ ಪ್ರದೇಶದಲ್ಲಿ ಯುದ್ಧ ಮಾಡಿ ಪರಿಣಿತರಾದವರೇ ಆಗಿರುತ್ತಿದ್ದರು. ಇಂದು CIJW ಎನ್ನುವುದು ವಿಶ್ವ ಪ್ರಸಿದ್ಧಿ ಪಡೆದ ಸೈನಿಕ ತರಬೇತಿ ಕೇಂದ್ರ. ಇಲ್ಲಿಗೆ ಪ್ರಪಂಚದಾದ್ಯಂತ ದೇಶಗಳು ತಮ್ಮ ಸೈನಿಕರನ್ನು ಈ ವಿಭಾಗದ ಯುದ್ಧ ತರಬೇತಿಗೆ ಕಳಿಸುತ್ತಾರೆ.

ಹೀಗೆ ತರಬೇತಿಯನ್ನೇನೋ ಪಡೆದೆವು. ಆದರೆ ಸಮಸ್ಯೆಗಳು ಮುಗಿದಿರಲಿಲ್ಲ. ನಮ್ಮ ಕಣ್ಣಿಗೆ ಬೀಳದ ಶತ್ರುಗಳ ಭಯ ಸದಾ ನಮ್ಮನ್ನು ಕಾಡುತ್ತಿತ್ತು. ಎದುರಿಗೆ ಏನೂ ಇಲ್ಲ ವೆಂಬ ಭಾವನೆಯೊಂದಿಗೆ ನಾವು ಚಲಿಸುತ್ತಿದ್ದರೆ, ಎಲ್ಲಿಂದಲೋ ಶತ್ರು ಗಳ ಆಕ್ರಮಣವಾಗುತ್ತಿತ್ತು. ಇದೊಂದು ರೀತ ಒಂದು ಕೈ ಕಟ್ಟಿ ಹಾಕಿ, ಕಣ್ಣಿಗೆ ಬಟ್ಟೆ ಕಟ್ಟಿ ಯುದ್ಧ ಮಾಡಲು ಇಳಿದ ರೀತಿಯ ಸನ್ನಿವೇಶವಾಗಿತ್ತು. ಇದಕ್ಕೆ ಸರಿಯಾಗಿ ಅಲ್ಲಿನ ಜನರೂ ನಮಗಷ್ಟು ಸಹಕಾರ ನೀಡುತ್ತಿರಲಿಲ್ಲ.ಈ ನಡುವೆ ಮಾನವ ಹಕ್ಕುಗಳ ಉಲ್ಲಂಘನೆ ಆಗದಂತೆ ಕೆಲಸ ಮಾಡಬೇಕಿತ್ತು. ಇದು ಒಂದು ರೀತಿಯಲ್ಲಿ ’ಅತ್ತ ದರಿ ಇತ್ತ ಪುಲಿ’ ಎಂಬ ಸನ್ನಿವೇಶ. ಇದರೊಂದಿಗೆ ನಮ್ಮ ಶತ್ರುಗಳ ಬಗ್ಗೆ ಮಾಹಿತಿ ಕಲೆ ಹಾಕುವುದೂ ಸವಾಲೇ ಆಗಿತ್ತು. ಏಕೆಂದರೆ ಅಲ್ಲಿನ ಬುಡಕಟ್ಟು ಜನಾಂಗದವರಲ್ಲಿ ಯಾರು ಎಲ್ಲಿದ್ದಾರೆ, ಯಾರನ್ನು ಯಾರು ನಿಯಂತ್ರಿಸುತ್ತಿದ್ದಾರೆ ಎಂಬುದೇ ಅರ್ಥವಾಗದ ಸನ್ನಿವೇಶ.

ಈ ಎಲ್ಲಾ ಸಹಜ ಸವಾಲುಗಳೊಂದಿಗೆ ನಮಗಲ್ಲಿ ಮತ್ತೊಂದು ದೊಡ್ಡ ‘ಶತ್ರು’ವಿತ್ತು!. ಅದುವೇ ಮಲೇರಿಯಾ ಮತ್ತು ರಕ್ತವನ್ನು ಹೀರುವ ಜಿಗಣೆಗಳು!. ಎರಡನೇ ಪ್ರಪಂಚ ಯುದ್ಧದಲ್ಲೂ ಶತ್ರು ಸೈನಿಕರಿಂದ ಹತರಾದಷ್ಟೇ ಅನೇಕರು ಮಲೇರಿಯಾದಿಂದಲೂ ಸತ್ತಿದ್ದರು. ಇಷ್ಟೇ ಸಾಲದೆಂಬಂತೆ ಅಲ್ಲಿನ ನೀರೂ ಕುಲುಷಿತವಾಗಿತ್ತು. ಇದನ್ನು ಕುಡಿದ ನಮ್ಮಸೈನಿಕರಿಗೆ ಹೊಟ್ಟೆ ಹಾಳಾಗುತ್ತಿತ್ತು. ಗಾಯದ ಮೇಲೆ ಬರೆ ಎಳೆದಂತೆ ಅನೇಕರ ಲಿವರ್ ಸಹಾ ದೊಡ್ಡದಾಗುವ ಸಂಕಟ ಎದುರಾಗಿತ್ತು.

ಹೀಗೆ ನಮ್ಮ ಸೈನ್ಯದಲ್ಲಿ ಮೊದಲ ಅರ್ಧದಷ್ಟು ಡಝನ್ ಸಾವುಗಳೂ ಮಲೇರಿಯಾದಿಂದಲೇ ಆದದ್ದು ವಿಪರ್ಯಾಸ. ಸೈನಿಕರಿಗೆ ಈ ರೋಗದ ವಿರುದ್ಧ ಹೋರಾಡುವುದೇ ಸವಾಲು ಮತ್ತು ಈ ಬಗ್ಗೆ ತಿಳುವಳಿಕೆ ಹೇಳುವುದು ನಮಗೆ ಮತ್ತೊಂದು ದೊಡ್ಡ ಸಾಹಸಮಯ ಕೆಲಸವಾಗಿತ್ತು. ಕೆಲ ನಾಗಾ ಜನಾಂಗದವರು ಬರ್ಮಾ ಕಡೆಯಿಂದ ಭೂಗತರಾಗಿ ಇದ್ದುಕೊಂಡೇ ನಮ್ಮ ಮೇಲೆ ಅನಿರೀಕ್ಷಿತ ಆಕ್ರಮಣ ಮಾಡುತ್ತಿದ್ದರು. ನಮ್ಮಮೇಲೆ ಆಕ್ರಮಣ ಮಾಡಿ ಓಡಿ ಹೋಗುವುದು ಸಾಮಾನ್ಯವಾಗಿತ್ತು. ಕಾಡಿನೊಳಗೇ ಹುಟ್ಟಿ ಬೆಳೆದ ಇವರಿಗೆ ಅಲ್ಲಿ ಆಕ್ರಮಣ ಕಷ್ಟವೇನೂ ಆಗಿರಲಿಲ್ಲ. ಆದರೆ ನಮಗೆ ಅದು ಅಸಾಧ್ಯವಾಗಿತ್ತು. ಹೀಗೆ ನಮ್ಮ ನಾಗಾಲ್ಯಾಂಡ್ ನಲ್ಲಿನ ಕರ್ತವ್ಯ, ಯುದ್ಧ ಒಂದು ರೀತಿಯ ಬೆಕ್ಕು ಮತ್ತು ಇಲಿಯ ನಡುವಿನ ಹೋರಾಟದಂತೆ ಭಾಸವಾಗುತ್ತಿತ್ತು!

ಸೊಳ್ಳೆಗಳು, ಜಿಗಣೆಗಳೊಂದಿಗೆ, ಅರಣ್ಯದಂತಹ ಪ್ರದೇಶಗಳಲ್ಲಿ, ನೀರೂ ಸರಿ ಇರದ ಕುಗ್ರಾಮಗಳಲ್ಲಿ ನಮ್ಮ ಹೋರಾಟ ನಡೆದಿತ್ತು. ಈ ನಡುವೆ ತಿನ್ನಲು ಆಹಾರದ ಕೊರತೆಯೂ ಕಾಡುತ್ತಿತ್ತು. ಸಿಕ್ಕಿದ್ದನ್ನು ತಿನ್ನಲೇ ಬೇಕಾದ ಅನಿವಾರ್ಯತೆ. ಚಲನೆಯಲ್ಲಿರುವ ಯಾವುದೇ ಪ್ರಾಣಿಯೂ ನಮಗೆ ಆಹಾರವಾಗುತ್ತಿತ್ತು. ಹಾವು, ಇಲಿಗಳು, ಬಿಳಿ ಇರುವೆಗಳು, ಜೇನು ನೊಣಗಳು, ಬಿದಿರು, ಕಳಲೆಗಳು, ಗಡ್ಡೆ ಗೆಣಸುಗಳು...ಹೀಗೆ ಎಲ್ಲವನ್ನೂ ತಿನ್ನುತ್ತಿದ್ದೆವು-ಅನಿವಾರ್ಯವಾಗಿ!

ಈ ಎಲ್ಲದರ ನಡುವೆಯೂ ನಮಗೆ ನಮಗರಿವಿಲ್ಲದೇ ಆರನೆಯ ಇಂದ್ರಿಯ ಕೆಲಸ ಮಾಡಲಾಗರಂಭಿಸಿತ್ತು. ಹೀಗೇ ಚಲನೆಯಲ್ಲಿರುವಾಗಲೂ ನಮಗೆ ಸಾವು, ಅಪಾಯ ಬಂದೆರಗುವ ಸ್ಥಿತಿ ಅದು ಹೇಗೋ ತಿಳಿಯುವ ಒಂದು ವಿಶೇಷ ಶಕ್ತಿ ನಮ್ಮೊಳಗೇ ಬೆಳೆದಿತ್ತು. ಯಾವುದೇ ಒಂದು ಚಿಕ್ಕ ತಪ್ಪೂ ನಮ್ಮ ಜೀವಕ್ಕೇ ಅಪಾಯ ತರುವ ಸಂಭವವೂ ಇರುತ್ತಿತ್ತು.

ಹೀಗೆ ಒಂದೆರಡಲ್ಲದ, ಕೇವಲ ಸವಾಲುಗಳ ನಡುವೆಯೇ, ಬಾರತದ ಗಣತಂತ್ರ ವ್ಯವಸ್ಥೆಯ ಚುನಾವಣೆ ಯಶಸ್ವಿಯಾಗಿ ಮುಗಿಯಿತು. ಸೈನ್ಯಕ್ಕೆ ಒದಗಿಸುವ ಯಾವ ಜವಾಬ್ದಾರಿಯಲ್ಲೂ ಎಂದೂ ಲೋಪವಾಗದ ಹಾಗೆ ಒದಗಿಸಿದ ಕೆಲಸ ಯಶಸ್ವಿಯಾಗುತ್ತದೆ. ಏಕೆಂದರೆ ಸೈನಿಕ ತನ್ನ ಜೀವವನ್ನು ಒತ್ತೆ ಇಟ್ಟಾದರೂ ದೇಶ ಕಾಯುತ್ತಾನೆ-ಆರೋಗ್ಯ, ಕುಟುಂಬ ಎಲ್ಲವೂ ಆತನಿಗೆ ನಗಣ್ಯ.

ಹೀಗೆ ಚುನಾವಣೆ ಮುಗಿಯುವ ವೇಳೆಗೆ, ನಾಗಾಲ್ಯಾಂಡ್ ನಲ್ಲಿರುವಾಗಲೂ ನಾನು ಇನ್ನೂ ಹಲವು ಕೋರ್ಸ್‌ಗಳನ್ನು ಮಾಡಿಕೊಂಡೆ. ಇಷ್ಟರಲ್ಲಿ ನನಗೆ ವಾರ್ಷಿಕ ವೈದ್ಯಕೀಯ ತಪಾಸಣೆ ಮಾಡಿಸಬೇಕಾಗಿ ಬಂತು. ಅಲ್ಲಿ ನನಗೊಂದು ಅಚ್ಚರಿ ಮತ್ತು ಆಘಾತದ ವಿಷಯ ಕಾದಿತ್ತು. ನನ್ನ ಕರುಳು ಊದಿಕೊಂಡಿತ್ತು!. ಕೆಟ್ಟ ನೀರು, ಅತಿಯಾದ ಖಾರದಆಹಾರಗಳಿಂದ ಈ ಅನಾರೋಗ್ಯ ನನ್ನ ಮಟ್ಟಿಗೆ ಆಘಾತಕಾರಿಯಾಗಿತ್ತು. ಈ ನಡುವೆ ನಾಗಾಲ್ಯಾಂಡ್‍ನಲ್ಲಿ ಅತ್ಯಂತ ಯಶಸ್ವಿಯಾಗಿ ಚುನಾವಣೆ ನಡೆಯಿತು ಮತ್ತು ಇದರ ಸಂಪೂರ್ಣ ಯಶಸ್ಸು ನಮ್ಮ ವೀರ ಯೋಧರಿಗೆ ಸಲ್ಲಬೇಕು. ಆದರೆ ಇದೇ ಹಂತದ ವಿವಿಧ ಮಟ್ಟದ ಕಾರ್ಯಾಚರಣೆಯಲ್ಲಿ ನಮ್ಮ ಕೆಲ ಯೋಧರೂ ಹುತಾತ್ಮರಾದರು. ಚುನಾವಣೆಯ ದಿನವೇ, ನಮ್ಮ ಯೋಧರ ತಂಡವೊಂದು ಚುನಾವಣೆಯ ಮತ ಪೆಟ್ಟಿಗೆಯನ್ನು ಒಯ್ಯುತ್ತಿರುವಾಗ ವಿರೋಧಿಗಳು ನಡೆಸಿದ ಗುಂಡಿನ ದಾಳಿಯಿಂದ ಓರ್ವ ಸೈನಿಕನೂ ಸತ್ತ. ಹೀಗೆ ಇದೊಂದು ಸುಮಾರು ಮೂರು ವರ್ಷಗಳ ನಿರಂತರ ಹೋರಾಟವಾಗಿತ್ತು. ಕೊನೆಗೂ ಮೂರು ವರ್ಷಗಳ ಹಗಲಿರುಳೂ ನಡೆಸುತ್ತಿದ್ದ ಕಾರ್ಯಾಚರಣೆಯಿಂದ ನಮಗೊಂದು ಬಿಡುವು ಸಿಕ್ಕಿ, ನಮಗೆ ಶಾಂತಿ ವಲಯಕ್ಕೆ (peace station)ಗೆ ಹೋಗಲು ಅವಕಾಶ ಒದಗಿತು.

ಮುಂದಿನ ನಮ್ಮ ಪಯಣ ಪನಾಗರ್ ನತ್ತ ಹೊರಟಿತು. 1976ರಲ್ಲಿ ನಮ್ಮ ಬೆಟಾಲಿಯನ್‍ಗೆ ನಾಗಾಲ್ಯಾಂಡ್‍ನ್ನು ತೊರೆದು ಪಶ್ಚಿಮ ಬಂಗಾಲದ ಪನಾಗರ್‍ನತ್ತ ಹೊರಡಲು ಆದೇಶ ಬಂದಿತು. ಪನಾಗರ್ ಪ್ರದೇಶ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್ ಸೈನ್ಯದ ಮೇಲೆ ಆಕ್ರಮಣಕ್ಕೆ ಬಳಸಲಾಗಿದ್ದ ಅತ್ಯಂತ ಹಳೇ ಪ್ರದೇಶವಾಗಿತ್ತು. ಮತ್ತು ಈ ಪ್ರದೇಶ ಲಾಂಜ್ ಮತ್ತು ವಾಯು ಪಡೆಯ ಸಿಗ್ನಲ್‍ಗಳನ್ನು ಸ್ವೀಕರಿಸುವ ತಾಣವಾಗಿಯೂ, ಯುದ್ಧ ಸಾಮಗ್ರಿಗಳ ಸಾಗಾಟದ ಕೇಂದ್ರ ಸ್ಥಾನವಾಗಿಯೂ ಸೈನ್ಯದ ಮಟ್ಟಿಗೆ ಬಹಳ ಪ್ರಮುಖ ಪ್ರದೇಶವಾಗಿತ್ತು. ಇಲ್ಲಿಂದಲೇ ಯುದ್ಧ ಸಾಮಗ್ರಿಗಳು ಬರ್ಮಾ ಮತ್ತು ಚೈನಾಕ್ಕೆ ಸಾಗಾಟವಾಗುತ್ತಿದ್ದುವು. ಇತ್ತೀಚೆಗೆ ಅಮೇರಿಕಾದಿಂದ ಅತ್ಯಾಧುನಿಕವಾದ ಸೂಪರ್ ಹಕ್ರ್ಯೂಲಸ್ ಸಹಾ ಇಲ್ಲಿಗೆ ಬಂದಿಳಿದಿದೆ. ಈ ಎಲ್ಲದರ ಜೊತೆಗೇ ಭಾರತೀಯ ಸೈನ್ಯದ ಅತೀ ದೊಡ್ಡ ಮದ್ದು ಗುಂಡು ಗಳ ಸಂಗ್ರಹಿಸಿಟ್ಟಿದ್ದ ಗೋದಾಮೂ ಇಲ್ಲೇ ಇತ್ತು.

ಪನಾಗರ್‍ಬಗ್ಗೆ ಸೈನ್ಯದ ವ್ಯವಸ್ಥೆಯ ದೃಷ್ಟಿಯಿಂದ ಇರುವ ವ್ಯವಸ್ಥೆಗಳಿಗೂ ಭಿನ್ನವಾದ ಒಂದು ಅಚ್ಚರಿ ಇದೆ. ಪನಾಗರ್ ಎಂಬ ಶಬ್ದದ ಅರ್ಥವೇ ಹಾವುಗಳ ತಾಣ ಎಂಬುದು. ನೀವು ನಂಬಲಿಕ್ಕೂ ಕಷ್ಟವಾಗುವ ಹಾಗೆ ಇಲ್ಲಿ ಹಾವುಗಳದ್ದೇ ಸಾಮ್ರಾಜ್ಯ!. ಅತೀ ಹೆಚ್ಚು ಹುಲ್ಲುಗಾವಲಿರುವ ಪ್ರದೇಶ ಇದಾಗಿತ್ತು. ಹಾವುಗಳು ಎಲ್ಲೆಂದರಲ್ಲಿ ಕಾಣ ಸಿಗುತ್ತಿದ್ದುವು. ಕಛೇರಿಯಲ್ಲಿ ಕುರ್ಚಿ, ಮೇಜುಗಳ ಮೇಲೆ, ಸ್ನಾನ ಶೌಚಗ್ರಹಗಳಲ್ಲಿ, ಬಾಗಿಲು ಕಿಟಕಿಗಳಲ್ಲಿ ಎಲ್ಲೆಂದರಲ್ಲಿ ಹಾವುಗಳು. ನಾವು ಬೆಳಗ್ಗಿನ ವಾಯು ವಿಹಾರ ಅಥವಾ ಅಭ್ಯಾಸಕ್ಕೆ ಹೋಗುವಾಗ ಎಷ್ಟೋ ಸಲ ಹಾವುಗಳನ್ನೇ ಮೆಟ್ಟಿದ್ದು ಅಥವಾ ವಾಹನಗಳ ಅಡಿ ಹಾವುಗಳು ಬಿದ್ದು ಸಾಯುವುದು ಮಾಮೂಲಿ ವಿಷಯವಾಗಿತ್ತು. ಹೀಗೆ ಈ ಊರು ಸಂಪೂರ್ಣ ‘ಹಾವುಮಯ’ವಾಗಿತ್ತು.

ಅತ್ಯಂತ ಹೆಚ್ಚು ಉಷ್ಣಾಂಶದ ಈ ಪ್ರದೇಶದಲ್ಲಿ ವಾಸಿಸುವ ಸೈನಿಕರ ಬದುಕು ತೀರಾ ಅಸಹನೀಯವಾಗಿತ್ತು. ಎರಡನೇ ಮಹಾ ಯುದ್ಧದ ವೇಳೆ ನಿರ್ಮಿಸಲಾಗಿದ್ದ ಶೆಡ್‍ಗಳಿಗೇ ಅಲ್ಪ ಸ್ವಲ್ಪ ನವೀಕರಿಸಿ ಉಳಿಯಲು ಕೊಟ್ಟಿದ್ದರು. ಒಟ್ಟಾರೆಯಾಗಿ ನಿತ್ಯವೂ ಶತ್ರು ಸೈನಿಕರ ಸವಾಳುಗಳನ್ನೆದುರಿಸಿದಷ್ಟೇ ಪರಿಸ್ಥಿತಿಯ ಸವಾಲುಗಳನ್ನೂ ಎದುರಿಸುವುದು ನಮ್ಮ ಯೋಧರಿಗೆ ಅನಿವಾರ್ಯವಾಗಿತ್ತು-ಈ ಬಗ್ಗೆ ಭಾರತೀಯ ಸೈನ್ಯದ ಬಗ್ಗೆ ಸದಾ ಹೆಮ್ಮೆ ನನಗೆ.

ಈ ಹಂತದಲ್ಲೂ, ಅಂದರೆ 1977ರ ಆರಂಭದಲ್ಲಿ ನಾನು ಪುಣೆಯಲ್ಲಿ ಮತ್ತೊಂದು ಕೋರ್ಸ್ ಮುಗಿಸಿದೆ. ಸೀನಿಯರ್ ಆಫೀಸರ್ ಇಂಟೆಲಿಜೆನ್ಸ್ ಕೋರ್ಸ್‍ನಲ್ಲಿ ನಾನೂ ತರಬೇತಿಯನ್ನು ಪಡೆದೆ. ಈ ಕೋರ್ಸ್ ಮುಗಿಯುತ್ತಲೇ ನಾನು ಒಂದು ದೀರ್ಘ ರಜೆ ಪಡೆದೆ ಮತ್ತು ಬಹು ದೊಡ್ಡ ಸಮಯದ ಬಳಿಕ ನಾನು ತಾಯ್ನಾಡಿಗೆ ಮರಳಿದೆ-ನನಗೆ ವಿವಾಹ ಯೋಗ ಕೂಡಿಬಂದಿತ್ತು!

ಕಾರ್ಕಳದಲ್ಲಿ ವಾಸಿಸುತ್ತಿದ್ದ ವೈದ್ಯರ ಕುಟುಂಬವೊಂದರ ಮಗಳಾಗಿದ್ದ ಅನುರಾಧಾಳನ್ನು ನನ್ನ ಮನೆಯವರು ಮತ್ತು ಅವರ ಮನೆಯವರು ಸೇರಿ, ನನ್ನ ಬಾಳ ಸಂಗಾತಿಯನ್ನಾಗಿ ಆಯ್ಕೆ ಮಾಡಿದ್ದರು. ಮನೆಯ ಎಲ್ಲಾ ಹಿರಿಯರೇ ಸೇರಿ ಮಾಡಿದ ಈ ತೀರ್ಮಾನಕ್ಕೆ ನನ್ನ ಯಾವುದೇ ವಿರೋಧ ಇರಲಿಲ್ಲ. ಅನುರಾಧಾಳ ಅಜ್ಜ ಸಹಾ ವೈದ್ಯರಾಗಿದ್ದರು. ವಿಜಯಾ ಬ್ಯಾಂಕ್‍ನ ಸ್ಥಾಪಕರಲ್ಲಿ ಅವರೂ ಒಬ್ಬರಾಗಿದ್ದರು. ಇವಳ ತಂದೆಯೂ ಅಂದಿನ ಮದ್ರಾಸ್‍ನಲ್ಲಿ ಎಂಬಿಬಿಎಸ್ ಮಾಡಿ, ನಂತರ ಆಸ್ಟ್ರಿಯಾದ ವಿಯೆನ್ನಾದಲ್ಲಿ ಡಿಜಿಓ ಮಾಡಿ ತನ್ನ ತಂದೆಯ ಕ್ಲಿನಿಕ್‍ನಲ್ಲಿ ಸೇವೆ ಮಾಡಲಾರಂಭಿಸಿದ್ದರು. ವಿಶೇಷ ಎಂದರೆ ಈಗ ಅದೇ ಆಸ್ಪತ್ರೆಯಲ್ಲಿ ನನ್ನ ಭಾವ (ಪತ್ನಿ ಅನುರಾಧಾಳ ಸಹೋದರ) ವೈದ್ಯಕೀಯ ಸೇವೆ ಮಾಡುತ್ತಿದ್ದಾರೆ. ಈ ಮೂಲಕ ಇದು ಮೂರು ತಲೆಮಾರುಗಳಿಂದ ರೋಗಿಗಳ ಶುಶ್ರೂಷೆ ಮಾಡುತ್ತಿರುವ ಆಸ್ಪತ್ರೆಯಾಗಿಯೂ ದಾಖಲಾಗಿದೆ.

ಮುಂದಿನ ವಾರ: ಸೈನಿಕನ ಹೆಂಡತಿಯಾಗಿ ಹೊಂದಾಣಿಕೆಯ ಬದುಕು

ನಿರೂಪಣೆ: ಅರೆಹೊಳೆ ಸದಾಶಿವರಾವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT