ಬುಧವಾರ, ಜುಲೈ 6, 2022
22 °C
ಅನ್ಯ ದೇಶಗಳನ್ನು ಅವಲಂಬಿಸುತ್ತಲೇ ಬಂದ ಕಥೆಯೊಂದೇ ಅಲ್ಲ ಅಫ್ಗಾನಿಸ್ತಾನದ್ದು

ಜನರಾಜಕಾರಣ | ಇತಿಹಾಸವು ವರ್ತಮಾನವನ್ನು ಹೇಳುತ್ತಿದೆ!

ಪ್ರೊ. ಸಂದೀಪ್ ಶಾಸ್ತ್ರಿ Updated:

ಅಕ್ಷರ ಗಾತ್ರ : | |

ಅಫ್ಗಾನಿಸ್ತಾನದಲ್ಲಿ ಆಗುತ್ತಿರುವ ವಿದ್ಯಮಾನಗಳನ್ನು ಗಮನಿಸಿದಾಗ, ಅಂತರರಾಷ್ಟ್ರೀಯ ಸಮುದಾಯ ನಡೆಸಿದ ಪ್ರಯತ್ನದ ವಾಸ್ತವಗಳು, ಪರಿಣಾಮಗಳು ಕಣ್ಣಿಗೆ ರಾಚುತ್ತವೆ. ಜನರ ಹಕ್ಕುಗಳನ್ನು ‘ರಕ್ಷಿಸಲು’ ಅಂತರರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಿದ್ದು, ನಂತರ ‘ಮುಖ ಉಳಿಸಿಕೊಳ್ಳಲು’, ಸ್ವಹಿತಾಸಕ್ತಿಗಳ ನೆಪ ಹೇಳಿ ಅಲ್ಲಿಂದ ಹಿಂದಕ್ಕೆ ನಡೆದಿದ್ದು ಈಗ ಎಲ್ಲರಿಗೂ ಗೊತ್ತಾಗಿದೆ. ಆದರೆ, ಮಿಲಿಟರಿ ಸಾಹಸವೊಂದರ ನಂತರ ಅಲ್ಲಿನ ಸಾಮಾನ್ಯ ಜನರಿಗೆ ಏನಾಗುತ್ತದೆ ಎಂಬುದೇ ಒಂದು ದುರಂತ ಕಥೆ. ನಾಶದ ಬಗ್ಗೆ ಪುಸ್ತಕಗಳಲ್ಲಿ ಹೇಳುವುದು ನಿಜ ಜೀವನದಲ್ಲಿಯೂ ಆಗುತ್ತದೆಯಲ್ಲ? ಅಂಥದ್ದಕ್ಕೆ ಅಫ್ಗಾನಿಸ್ತಾನದ ಕಥೆಯು ಅತ್ಯುತ್ತಮ ಉದಾಹರಣೆ.

ಸರಿಸುಮಾರು ಐದು ದಶಕಗಳ ಹಿಂದೆ (1973ರಿಂದ 1977ರವರೆಗೆ) ನನಗೆ ಕಾಬೂಲ್‌ನಲ್ಲಿ ವಾಸಿಸುವ, ಅಲ್ಲಿ ಶಿಕ್ಷಣ ಪಡೆಯುವ ಅವಕಾಶ ಸಿಕ್ಕಿತ್ತು. ನನ್ನ ತಂದೆ ಅಲ್ಲಿ ವಿಶ್ವಸಂಸ್ಥೆಯ ಕೆಲಸವೊಂದರಲ್ಲಿ ಇದ್ದರು. ಆ ನಾಲ್ಕು ವರ್ಷಗಳಲ್ಲಿ ದೇಶದ ಉದ್ದಗಲವನ್ನು ಸುತ್ತುವ ಅವಕಾಶ ನನಗೆ ಒಮ್ಮೆ ದೊರೆತಿತ್ತು. ನಾವು ಅಲ್ಲಿಗೆ 1973ರಲ್ಲಿ ಹೋದ ಕೆಲವು ಕಾಲದಲ್ಲೇ, ಅಲ್ಲಿನ ರಾಜ ಝಾಹಿರ್ ಶಾನ ಆಡಳಿತವು ಮೊಹಮ್ಮದ್ ದಾವೂದ್‌ ನಡೆಸಿದ ರಕ್ತರಹಿತ ಕ್ರಾಂತಿಯಿಂದಾಗಿ ಕೊನೆಗೊಂಡಿತು. 70ರ ದಶಕದ ಮಧ್ಯಭಾಗದಲ್ಲಿ ಅಫ್ಗಾನಿಸ್ತಾನವು ಸಾಂಸ್ಕೃತಿಕವಾಗಿ ಇರಾನ್ ಮಾದರಿಯನ್ನು (ಇರಾನ್‌ನ ಶಾ ಕಾಲದ ಸಂಸ್ಕೃತಿ) ಅನುಸರಿಸುತ್ತಿತ್ತು. ಪುರುಷರು, ಮಹಿಳೆಯರು ಪಾಶ್ಚಿಮಾತ್ಯ ಫ್ಯಾಷನ್ ಉಡುಗೆ ತೊಡುವುದು ಸಾಮಾನ್ಯವಾಗಿತ್ತು. ಆಧುನಿಕತೆಯ ತಂಗಾಳಿಯೊಂದು ಅಲ್ಲಿನ ಸಮಾಜದಲ್ಲಿ ಬೀಸುತ್ತಿರುವಂತೆ ಕಾಣುತ್ತಿತ್ತು.

ಎಪ್ಪತ್ತರ ದಶಕದಲ್ಲಿ ಶೀತಲ ಸಮರವು ಉತ್ತುಂಗದಲ್ಲಿತ್ತು. ಅಮೆರಿಕ ಮತ್ತು ಅಂದಿನ ಸೋವಿಯತ್ ಒಕ್ಕೂಟದ ನಡುವಿನ ಸಂಘರ್ಷವು ತೀವ್ರವಾಗಿತ್ತು. ಅಫ್ಗಾನಿಸ್ತಾನದಲ್ಲಿ ಅಮೆರಿಕ ಹಾಗೂ ಸೋವಿಯತ್‌ ಒಕ್ಕೂಟದ ಅಸ್ತಿತ್ವ ಕಣ್ಣಿಗೆ ಕಾಣಿಸುವಂತಿತ್ತು. ಉತ್ತರದ ಗಡಿಗಳನ್ನು ಸಂಪರ್ಕಿಸುವ ರಸ್ತೆಗಳನ್ನು ಸೋವಿಯತ್ ಕಡೆಯವರು, ಪೂರ್ವದ ಕಡೆಗೆ ಹಾಗೂ ಇರಾನ್‌ ಗಡಿಯ ಕಡೆಗೆ ಸಾಗುವ ರಸ್ತೆಗಳನ್ನು ಅಮೆರಿಕದ ಕಡೆಯವರು ನಿರ್ಮಿಸುತ್ತಿದ್ದರು. ಸೋವಿಯತ್ ದೇಶದವರು ಕಾಬೂಲ್‌ ವಿಮಾನ ನಿಲ್ದಾಣವನ್ನು, ಅಮೆರಿಕದವರು ಕಂದಹಾರ್ ವಿಮಾನ ನಿಲ್ದಾಣವನ್ನು ನಿರ್ಮಿಸಿದ್ದರು. ಸಾಮಾನ್ಯ ವ್ಯಕ್ತಿಗೆ ಕೂಡ ಅಮೆರಿಕ ಹಾಗೂ ಸೋವಿಯತ್ ನಡುವಿನ ಸ್ಪರ್ಧೆಯು ಗೊತ್ತಾಗುತ್ತಿತ್ತು. ವಿಶ್ವದ ಎರಡು ಸೂಪರ್ ಪವರ್ ರಾಷ್ಟ್ರಗಳಿಂದ ತಮಗೆ ಬೇಕಿದ್ದನ್ನು ಪಡೆದುಕೊಳ್ಳಬಹುದು, ನಂತರ ಒಂದು ದೇಶವನ್ನು ಇನ್ನೊಂದರ ವಿರುದ್ಧ ಎತ್ತಿಕಟ್ಟಬಹುದು ಎಂದು ಆಫ್ಗನ್ ಜನ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು! ಈ ನಡೆಯ ಪರಿಣಾಮಗಳು ನಂತರದ ವರ್ಷಗಳಲ್ಲಿ ಹೆಚ್ಚು ಸ್ಪಷ್ಟವಾದವು.

ಎಪ್ಪತ್ತರ ದಶಕದಲ್ಲಿ ಅಫ್ಗಾನಿಸ್ತಾನದಲ್ಲಿ ಭಾರತೀಯರ ಹೆಜ್ಜೆ ಗುರುತುಗಳು ಎದ್ದುಕಾಣುವಂತೆ ಇದ್ದವು. ಆ ದಿನಗಳಲ್ಲಿ ಸರಿಸುಮಾರು ಐನೂರು ಭಾರತೀಯ ಕುಟುಂಬಗಳು ಕಾಬೂಲ್‌ನಲ್ಲಿ ವಾಸವಿದ್ದವು. ಭಾರತದ ತಾಂತ್ರಿಕ ನೆರವು ಮತ್ತು ಸಹಕಾರ ಯೋಜನೆಯ ಭಾಗವಾಗಿ ಆ ಕುಟುಂಬಗಳು ಅಲ್ಲಿದ್ದವು. ಅಲ್ಲಿ ಭಾರತದ ರಾಯಭಾರ ಕಚೇರಿಯು ಕೇಂದ್ರೀಯ ವಿದ್ಯಾಲಯವೊಂದನ್ನು ನಡೆಸುತ್ತಿತ್ತು. ನಾನು 8ನೆಯ ತರಗತಿಯಿಂದ 11ನೆಯ ತರಗತಿಯವರೆಗೆ ಅಲ್ಲಿಯೇ ವಿದ್ಯಾಭ್ಯಾಸ ಮಾಡಿದೆ.

ಭಾರತವು ಕಾಬೂಲ್‌ನಲ್ಲಿ ಮಕ್ಕಳ ಆಸ್ಪತ್ರೆಯೊಂದನ್ನು ನಿರ್ಮಿಸಿತ್ತು. ಆಸ್ಪತ್ರೆ ಉದ್ಘಾಟನೆಯಾದ ಮೊದಲ ಐದು ವರ್ಷಗಳವರೆಗೆ ಅಲ್ಲಿ ವೈದ್ಯರು, ದಾದಿಯರು ಹಾಗೂ ವೈದ್ಯಕೀಯ ಉಪಕರಣಗಳ ಲಭ್ಯತೆ ಇರುವಂತೆ ಭಾರತವೇ ನೋಡಿಕೊಂಡಿತ್ತು. ಐದು ವರ್ಷಗಳು ಪೂರ್ಣಗೊಂಡ ನಂತರದಲ್ಲಿ, ಸೋವಿಯತ್ ಒಕ್ಕೂಟವು ನೆರವು ನೀಡಲು ಮುಂದೆ ಬಂತು.

ವಿಶ್ವದ ಬೇರೆ ಬೇರೆ ಕಡೆಗಳಿಂದ ನೆರವು ಯಾಚಿಸುವುದು ಆಫ್ಗನ್ ಸರ್ಕಾರಕ್ಕೆ ಅಭ್ಯಾಸವಾಗಿಬಿಟ್ಟಿದೆ ಎಂಬುದನ್ನು ಹೇಳಲು ಈ ವಿಷಯ ಪ್ರಸ್ತಾಪಿಸಲಾಗಿದೆ. ಶೀತಲ ಸಮರದ ದಿನಗಳಲ್ಲಿ ಆಫ್ಗನ್ ಸರ್ಕಾರವು ಇತರ ರಾಷ್ಟ್ರಗಳ ಮೇಲೆ ಬಹುವಾಗಿ ಅವಲಂಬಿತವಾಗಿತ್ತು. ಇತಿಹಾಸ ಮರುಕಳಿಸುತ್ತ ಇರುತ್ತದೆ.

ನಾನು ಕಡೆಯ ಬಾರಿಗೆ ಕಾಬೂಲ್‌ಗೆ ಹೋಗಿದ್ದು 1979ರಲ್ಲಿ. ಆಗ ಸೋವಿಯತ್ ಒಕ್ಕೂಟವು ಅಫ್ಗಾನಿಸ್ತಾನಕ್ಕೆ ಪ್ರವೇಶ ಪಡೆದಿತ್ತು. ನನ್ನ ತಂದೆಯವರಿಗೆ ವಿಶ್ವಸಂಸ್ಥೆ ಅಲ್ಲಿ ವಹಿಸಿದ್ದ ಕೆಲಸ ಪೂರ್ಣಗೊಂಡಿತ್ತು. 1979ರ ಬೇಸಿಗೆಗೂ ಮೊದಲು, ಸೋವಿಯತ್ ಆಕ್ರಮಣಕ್ಕೂ ಮೊದಲು, ದೇಶದಲ್ಲಿ ಸೋವಿಯತ್ ಒಕ್ಕೂಟದ ಪ್ರವೇಶ ಆಗಿದೆ ಎಂಬುದು ಗೊತ್ತಾಗುತ್ತಿತ್ತು. 1973ರಲ್ಲಿ ಮಹಮದ್ ದಾವೂದ್ ಅಧಿಕಾರಕ್ಕೆ ಬಂದ ಕ್ರಾಂತಿಯು ರಕ್ತರಹಿತವಾಗಿತ್ತು. ಆದರೆ, 1978ರಲ್ಲಿ ಕಮ್ಯುನಿಸ್ಟ್‌ ಪ್ರೇರಿತ ಕ್ರಾಂತಿಯ ಸಂದರ್ಭದಲ್ಲಿ ಬಹಳಷ್ಟು ರಕ್ತಪಾತ ನಡೆಯಿತು. ದಾವೂದ್, ಅವರ ಇಡೀ ಕುಟುಂಬ, ಬೆಂಬಲಿಗರು ಹತ್ಯೆಗೀಡಾದರು. ಇದು ಸೋವಿಯತ್ ಆಕ್ರಮಣಕ್ಕೆ ಮುನ್ನುಡಿಯಾಯಿತು.

ಆಫ್ಗನ್ ಸರ್ಕಾರವು (ಆಗ ಕೈಗೊಂಬೆ ಕಮ್ಯುನಿಸ್ಟ್ ಸರ್ಕಾರ ಅಲ್ಲಿತ್ತು) ಮಧ್ಯಪ್ರವೇಶಿಸುವಂತೆ ತನ್ನನ್ನು ಕೋರಿದೆ ಎಂದು ಸೋವಿಯತ್ ಒಕ್ಕೂಟ ಹೇಳಿತ್ತು! ಇದು ಶೀತಲ ಸಮರದ ಉತ್ತುಂಗ ಸ್ಥಿತಿ. ಈ ಸಂದರ್ಭದಲ್ಲಿ ಅಮೆರಿಕನ್ನರು ಅಲ್ಲಿನ ಬಂಡುಕೋರರಿಗೆ ಶಸ್ತ್ರಾಸ್ತ್ರ ನೀಡಿದರು. ಇವರು ಮುಂದೆ ಮುಜಾಹಿದೀನ್‌ಗಳ ರೂಪ ಪಡೆದುಕೊಂಡರು. ಸೋವಿಯತ್ ಸೈನಿಕರು ಅಲ್ಲಿಂದ ಹಿಂದೆ ಸರಿದ ನಂತರದಲ್ಲಿ, ಕಮ್ಯುನಿಸ್ಟ್ ವಿರೋಧಿ ಹೋರಾಟಗಾರರಿಗೆ ಅಮೆರಿಕ ಹಿಂದೆ ನೀಡಿದ್ದ ಶಸ್ತ್ರಾಸ್ತ್ರವನ್ನು ಅಮೆರಿಕದ ವಿರುದ್ಧವೇ ಬಳಸಲಾಯಿತು. ಈಗ ಅದೇ ಬಗೆಯ ಪ್ರಸಂಗವು ಮತ್ತೆ ಅಲ್ಲಿ ನಡೆಯುತ್ತಿದೆ.

ಬೇರೆ ದೇಶಗಳ ಮೇಲೆ ಹೆಚ್ಚೆಚ್ಚು ಅವಲಂಬಿತ ಆಗುತ್ತಾ ಬಂದ ರಾಷ್ಟ್ರವೊಂದರ ಕಥೆಯೊಂದೇ ಅಲ್ಲ ಅಫ್ಗಾನಿಸ್ತಾನದ್ದು. ಈ ದೇಶದಲ್ಲಿ ಭ್ರಷ್ಟಾಚಾರ ಕೂಡ ತೀರಾ ಹೆಚ್ಚಾಗಿತ್ತು. ಶ್ರೀಮಂತರು ಹಾಗೂ ಬಡವರ ನಡುವಣ ಅಂತರವು ಕಣ್ಣಿಗೆ ರಾಚುವಂತೆ ಇತ್ತು ಅಲ್ಲಿ. ಆ ದೇಶದಲ್ಲಿ ಯಾರಿಗಾದರೂ ಒಂದು ಸ್ಥಾನ ಸಿಕ್ಕರೆ, ಅದಕ್ಕೆ ಕಾರಣಗಳನ್ನು ಹುಡುಕುವಾಗ ಸ್ವಜನಪಕ್ಷಪಾತದ ವಿವರಣೆ ಸಿಕ್ಕೇ ಸಿಗುತ್ತಿತ್ತು.

ಅಫ್ಗಾನಿಸ್ತಾನದ ಪ್ರಮುಖ ಕುಟುಂಬಗಳ ಪಟ್ಟಿಯೊಂದನ್ನು ಸಿದ್ಧಪಡಿಸಿದರೆ, ಅವರ ಅಸ್ತಿತ್ವವನ್ನು ಪಾಶ್ಚಿಮಾತ್ಯ ರಾಷ್ಟ್ರವೊಂದರಲ್ಲಿ ಕಾಣುವುದು ಕಷ್ಟವೇ ಅಲ್ಲ. ಆ ಪಾಶ್ಚಿಮಾತ್ಯ ರಾಷ್ಟ್ರದಲ್ಲಿ ಆ ಕುಟುಂಬದ ಸದಸ್ಯರು ಐಷಾರಾಮಿ ಜೀವನವನ್ನು ಅನುಭವಿಸುತ್ತಿರುತ್ತಾರೆ. ತಾವು ಅಫ್ಗಾನಿಸ್ತಾನದಲ್ಲಿ ಅಧಿಕಾರದಲ್ಲಿ ಇದ್ದ ದಿನಗಳಲ್ಲಿ ಸಂಪಾದಿಸಿದ ಸಂಪನ್ಮೂಲಗಳನ್ನು ಅಲ್ಲಿ ಬಳಸಿಕೊಳ್ಳುತ್ತಿರುತ್ತಾರೆ.

ದೇಶದಲ್ಲಿ ಅಮೆರಿಕದ ಮಿಲಿಟರಿಯು ನೆಲೆ ಕಂಡುಕೊಂಡ ನಂತರದಲ್ಲಿ, ಅಲ್ಲಿನ ಅಧಿಕಾರವನ್ನು ಅನುಭವಿಸಿದ ಜನ ಮತ್ತೆ ಇದೇ ರೀತಿಯ ಕೆಲಸವನ್ನು ಮಾಡಿದ್ದಾರೆ ಎಂಬಂತೆ ಕಾಣಿಸುತ್ತಿದೆ. ತನ್ನ ರಾಜಕೀಯ ಹಾಗೂ ಆಳುವ ವರ್ಗದವರ ಸ್ವಹಿತಾಸಕ್ತಿ ಕಾಯ್ದುಕೊಳ್ಳುವ, ಸ್ವಾರ್ಥ ಸಾಧನೆಯ ಕೆಲಸಗಳಿಗೆ ಅಫ್ಗಾನಿಸ್ತಾನ ದೇಶ ಇಂದು ಬೆಲೆ ತೆರುತ್ತಿದೆ. ಅಧಿಕಾರವನ್ನು ಅನುಭವಿಸಿದ ಮೇಲ್ವರ್ಗದ ಜನ, ಜಾಗತಿಕ ಮಟ್ಟದ ದೊಡ್ಡ ಶಕ್ತಿಗಳ ಪಾಲಿಗೆ ಈ ದೇಶವನ್ನು ಒಂದು ಅಸ್ತ್ರವನ್ನಾಗಿ ಮಾಡಿದರು. ನಾಯಕತ್ವದಲ್ಲಿ ಇದ್ದವರು ತೋರಿದ ಕಾಳಜಿರಹಿತ ಧೋರಣೆಗೆ ಈಗ ಅಲ್ಲಿನ ಮುಗ್ಧ ಜನ ಬೆಲೆ ತೆರುತ್ತ ಇದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು