ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಾಜಕಾರಣ: ರಾಜ್ಯ ಚುನಾವಣೆಯಲ್ಲಿ ನಾಯಕತ್ವದ ಬಾಜಿ!

Published 27 ಏಪ್ರಿಲ್ 2023, 20:35 IST
Last Updated 27 ಏಪ್ರಿಲ್ 2023, 20:35 IST
ಅಕ್ಷರ ಗಾತ್ರ

ಈಚಿನ ದಿನಗಳಲ್ಲಿ ಸಂಸದೀಯ ಮಾದರಿಯಲ್ಲಿ ಚುನಾವಣಾ ಹಣಾಹಣಿಯಲ್ಲಿ ತೊಡಗುವುದು ನೆಚ್ಚಿನ ಆಯ್ಕೆಯಾಗುತ್ತಿದೆ ಎಂಬ ವಾದ ಇದೆ. 2014ರಲ್ಲಿ ನಡೆದ ಲೋಕನೀತಿ–ಸಿಎಸ್‌ಡಿಎಸ್‌ ಚುನಾವಣೋತ್ತರ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ, ಬಿಜೆಪಿಗೆ ಮತ ಚಲಾಯಿಸಿದ ನಾಲ್ಕನೆಯ ಒಂದರಷ್ಟು ಮಂದಿ ತಾವು ಆ ಪಕ್ಷದ ಪರವಾಗಿ ಮತ ಚಲಾವಣೆ ಮಾಡಿದ್ದಕ್ಕೆ ಕಾರಣ ನರೇಂದ್ರ ಮೋದಿ ಅವರು ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿದ್ದುದು ಎಂದು ಹೇಳಿದ್ದರು. 2019ರಲ್ಲಿ ಹೀಗೆ ಮತ ಚಲಾವಣೆ ಮಾಡಿದವರ ಪ್ರಮಾಣವು ಮೂರನೆಯ ಒಂದರಷ್ಟಕ್ಕೆ ಜಿಗಿಯಿತು. ಲೋಕಸಭಾ ಚುನಾವಣೆಗಳು ಹೆಚ್ಚೆಚ್ಚು ಪ್ರಮಾಣದಲ್ಲಿ, ತಮ್ಮ ಇಷ್ಟದ ಪ್ರಧಾನಿ ಯಾರಾಗಬೇಕು ಎಂಬುದನ್ನು ಹೇಳುವುದರ ಕಡೆ ವಾಲುತ್ತಿರುವುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತಿದೆ. ರಾಜ್ಯಗಳ ಮಟ್ಟದಲ್ಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ಇದೇ ರೀತಿ ಆಗುತ್ತಿದೆಯೇ? ಕರ್ನಾಟಕದಲ್ಲಿ ನಡೆದಿರುವ ಚುನಾವಣಾ ಹಣಾಹಣಿಯು ಏನನ್ನು ಸೂಚಿಸುತ್ತಿದೆ?

ಚುನಾವಣಾ ಕಣದಲ್ಲಿ ಇರುವ ಎರಡು ಪ್ರಮುಖ ಪಕ್ಷಗಳು ಬಿಜೆಪಿ ಮತ್ತು ಕಾಂಗ್ರೆಸ್. ಈ ಎರಡೂ ಪಕ್ಷಗಳು ತಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಘೋಷಿಸಿಲ್ಲ. ತಾವು ಬಹುಮತ ಸಾಧಿಸಿದ ಸಂದರ್ಭದಲ್ಲಿ, ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದನ್ನು ಈ ಎರಡು ಪಕ್ಷಗಳು ಹೇಳದೆ ಇರುವುದಕ್ಕೆ ಭಿನ್ನವಾದ ಕಾರಣಗಳು ಇವೆ. ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಎಂಬುದರಲ್ಲಿ ಜೆಡಿಎಸ್ ಪಕ್ಷಕ್ಕೆ ಯಾವ ಗೊಂದಲವೂ ಇಲ್ಲ. ಆದರೆ, ಈಗಿನ ಸಂದರ್ಭದಲ್ಲಿ ಜೆಡಿಎಸ್ ಪಕ್ಷವು ಬಹುಮತ ಸಾಧಿಸುವ ಸಾಧ್ಯತೆ ಬಹಳ ಕಡಿಮೆ. ಚುನಾವಣೆಯ ನಂತರದಲ್ಲಿ ವಿಧಾನಸಭೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದೆ ಇದ್ದ ಸಂದರ್ಭದಲ್ಲಿ, ಜೆಡಿಎಸ್ ಪಕ್ಷವು ಕಿಂಗ್‌ಮೇಕರ್ ಆಗಬಹುದು. ಆಗ ಆ ಪಕ್ಷದ ನಾಯಕನೇ ‘ಕಿಂಗ್’ ಕೂಡ ಆಗುತ್ತಾನೆ ಎಂಬುದರಲ್ಲಿ ಅನುಮಾನವಿಲ್ಲ.

ಎರಡು ಪ್ರಮುಖ ರಾಜಕೀಯ ಪಕ್ಷಗಳು ಕಟ್ಟಿರುವ ನಾಯಕತ್ವದ ಸಂಕಥನದ ಕಡೆ ಮತ್ತೆ ಗಮನ ಹರಿಸುವುದಾದರೆ, ಪಕ್ಷಗಳಲ್ಲಿ ಒಳಗೊಳಗೇ ಕೆಲಸ ಮಾಡುತ್ತಿರುವ ಕೆಲವು ಶಕ್ತಿಗಳು ಕಾಣುತ್ತವೆ. ಅವುಗಳ ಅವಲೋಕನವು ಕುತೂಹಲಕಾರಿಯೂ ಹೌದು. ಮೊದಲನೆಯದಾಗಿ ಬಿಜೆಪಿ ಕಡೆ ಗಮನ ಹರಿಸೋಣ. ಬಿಜೆಪಿಯು ದೇಶದ ಎಲ್ಲೆಡೆ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಸ್ಪಷ್ಟವಾಗಿ ಹೇಳಿದೆ (ಕರ್ನಾಟಕದಲ್ಲಿಯೂ ಅದು ಕಳೆದ ಬಾರಿ ಈ ವಿಚಾರವಾಗಿ ಸ್ಪಷ್ಟ ಘೋಷಣೆ ಮಾಡಿತ್ತು). ಕೆಲವು ಸಂದರ್ಭಗಳಲ್ಲಿ ಪಕ್ಷವು, ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದನ್ನು ಚುನಾವಣಾ ನಂತರದ ಹಂತದಲ್ಲಿ ತೀರ್ಮಾನಿಸಿದೆ. ಈ ಬಾರಿ ಕರ್ನಾಟಕದಲ್ಲಿ ಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಚುನಾವಣಾ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಈ ಬಾರಿ ಅವರು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಕ್ಷದ ಚುನಾವಣಾ ಸಮಿತಿಯ ಮುಖ್ಯಸ್ಥರಾಗಿ ಪ್ರಚಾರ ಅಭಿಯಾನದ ಅವಿಭಾಜ್ಯ ಅಂಗವಾಗಿದ್ದರೂ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಿಲ್ಲ.

ಕಳೆದ ಕೆಲವು ದಿನಗಳಿಂದ ಪಕ್ಷದ ಒಳಗೆ ಹಲವು ಧ್ವನಿಗಳು ಕೇಳಿಬಂದಿವೆ, ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಬೇಕು ಎಂದು ಅವು ಪಕ್ಷದ ವರಿಷ್ಠರ ಮೇಲೆ ಒತ್ತಡ ತಂದಿವೆ. ಇಲ್ಲಿ ಜಾತಿಯು ಪ್ರಬಲವಾಗಿ ಕೆಲಸ ಮಾಡುತ್ತಿದೆ. ಲಿಂಗಾಯತ ಸಮುದಾಯದ ಮತಗಳನ್ನು ಉಳಿಸಿಕೊಳ್ಳಬೇಕು ಎಂದಾದರೆ, ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಬೇಕಿರುವುದು ಮುಖ್ಯವಾದದ್ದು ಎಂದು ಲಿಂಗಾಯತ ಸಮುದಾಯಕ್ಕೆ ಸೇರಿದ, ಬಿಜೆಪಿಯ ಕೆಲವು ನಾಯಕರಿಗೆ ಅನ್ನಿಸಿದೆ. ಅದರಲ್ಲೂ, ಈ ಸಮುದಾಯಕ್ಕೆ ಸೇರಿದ ಕೆಲವು ಪ್ರಮುಖ ನಾಯಕರು ಪಕ್ಷದಿಂದ ಹೊರನಡೆದ ನಂತರದಲ್ಲಿ ಈ ರೀತಿ ಅನ್ನಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಪಕ್ಷದಲ್ಲಿ ಬೇರೆ ಹೆಸರುಗಳನ್ನು ಸೂಚಿಸುವ ಪರ್ಯಾಯ ದನಿಗಳೂ ಕೇಳಿಬಂದಿವೆ. ಬಿಜೆಪಿಯ ಅಸ್ತಿತ್ವವು ಲಿಂಗಾಯತ ಸಮುದಾಯದ ಆಚೆಗೂ ವಿಸ್ತರಣೆ ಕಾಣಬೇಕು ಎಂದು ಹೇಳುವವರು, ಲಿಂಗಾಯತ ಸಮುದಾಯಕ್ಕೆ ಸೇರಿರದ ವ್ಯಕ್ತಿಯೊಬ್ಬರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಪಕ್ಷದ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ (ಇವರು ಇತರೆ ಹಿಂದುಳಿದ ವರ್ಗಕ್ಕೆ ಸೇರಿದವರು), ಸಿ.ಟಿ. ರವಿ (ಒಕ್ಕಲಿಗ ಸಮುದಾಯಕ್ಕೆ ಸೇರಿದವರು) ಪಕ್ಷದಿಂದ ಮುಖ್ಯಮಂತ್ರಿ ಆಗಲಿ ಎಂದು ಆಶಿಸಿದ್ದಾರೆ.

ನಾಯಕರು ಒಂದಲ್ಲ ಒಂದು ಹೆಸರನ್ನು ತೇಲಿಬಿಡುವುದು, ಪ್ರತಿಸ್ಪರ್ಧಿ ಹೆಸರಿನ ಪ್ರಭಾವವನ್ನು ತಗ್ಗಿಸುವ ಉದ್ದೇಶದಿಂದಲೋ ಎಂಬುದು ಸ್ಪಷ್ಟವಿಲ್ಲ! ಹೀಗಿದ್ದರೂ, ಬಿಜೆಪಿಯಲ್ಲಿ ಇದುವರೆಗೆ ಆಗಿರುವ ಪ್ರಸಂಗಗಳನ್ನು ಗಮನಿಸಿ ಹೇಳುವುದಾದರೆ, ಅದರಲ್ಲೂ ಮುಖ್ಯವಾಗಿ ಕಳೆದ ಒಂಬತ್ತು ವರ್ಷಗಳಲ್ಲಿ ನಡೆದ ಬೆಳವಣಿಗೆಗಳ ಆಧಾರದಲ್ಲಿ ಹೇಳುವುದಾದಲ್ಲಿ, ಪ್ರಮುಖ ನೇಮಕಗಳ ಸಂದರ್ಭದಲ್ಲಿ ಪಕ್ಷದ ನಾಯಕತ್ವವು ಅಚ್ಚರಿಯ ಹೆಸರನ್ನು ಮುನ್ನೆಲೆಗೆ ತಂದಿರುವುದೇ ಹೆಚ್ಚು. ಹೀಗಾಗಿ, ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಗಲು ಬಯಸುತ್ತಿರುವವರು (ಅಂದರೆ, ಬಿಜೆಪಿಗೆ ಬಹುಮತ ಸಿಕ್ಕರೆ, ಮುಖ್ಯಮಂತ್ರಿ ತಾವಾಗುತ್ತೇವೆ ಎಂದು ಭಾವಿಸಿರುವವರು) ತಮ್ಮ ಹೆಸರು ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರಕ್ಕೆ ಬರದೆ ಇರಲಿ ಎಂದು ಬೇಡಿಕೊಳ್ಳುತ್ತಿರಬಹುದು! ಏಕೆಂದರೆ, ಈ ರೀತಿ ಹೆಸರು ಮಾಧ್ಯಮಗಳ ಮೂಲಕ ಪ್ರಚಾರ ಪಡೆದರೆ ಆಗ ಆ ಹೆಸರು ‘ಅಚ್ಚರಿಯ ಆಯ್ಕೆ’ಯಾಗಿ ಬರುವ ಸಾಧ್ಯತೆ ಕಡಿಮೆ ಆಗುತ್ತದೆ!

ಕಾಂಗ್ರೆಸ್ ಪಕ್ಷದಲ್ಲಿನ ಚಿತ್ರಣ ಕೂಡ ಬಿಜೆಪಿಯಲ್ಲಿನ ಚಿತ್ರಣದಷ್ಟೇ ಕುತೂಹಲ ಮೂಡಿಸುವಂತೆ ಇದೆ. ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬಹುಮತ ದೊರೆತಲ್ಲಿ ಮುಖ್ಯಮಂತ್ರಿ ಆಗುವ ಆಕಾಂಕ್ಷೆ ತಮಗಿದೆ ಎಂದು ಕೆಪಿಸಿಸಿ ಅಧ್ಯಕ್ಷ (ಡಿ.ಕೆ. ಶಿವಕುಮಾರ್) ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ (ಸಿದ್ದರಾಮಯ್ಯ) ಸ್ಪಷ್ಟಪಡಿಸಿದ್ದಾರೆ. ಆದರೆ ತಾವಿಬ್ಬರೂ ಜೊತೆಯಾಗಿ ಪ್ರಚಾರ ನಡೆಸದೆ ಇದ್ದರೆ, ಪಕ್ಷವು ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು ಎಂಬುದು ಇಬ್ಬರಿಗೂ ಗೊತ್ತಿದೆ. ಕೋಲಾರದಲ್ಲಿ ಮಾಡಿದ ಭಾಷಣದಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಆದ್ಯತೆಯು ಚುನಾವಣೆಯನ್ನು ಗೆಲ್ಲುವುದಾಗಿರಬೇಕು, ಇತರ ಎಲ್ಲ ವಿಷಯಗಳನ್ನು ನಂತರದಲ್ಲಿ ಬಗೆಹರಿಸಿಕೊಳ್ಳಬಹುದು ಎಂಬುದನ್ನು ಪಕ್ಷದ ಎಲ್ಲರಿಗೂ ಸ್ಪಷ್ಟವಾಗಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿನ ಎರಡು ಬೆಳವಣಿಗೆಗಳ ಬಗ್ಗೆ ಇಲ್ಲಿ ಗಮನ ಹರಿಸಬೇಕು. ಮೊದಲನೆಯದು, ಪಕ್ಷದ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸುವ ಹಂತದಲ್ಲಿ , ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಬೆಂಬಲಿಗರ ನಡುವೆ ಹಣಾಹಣಿ ಏರ್ಪಟ್ಟಿತ್ತು. ಟಿಕೆಟ್ ಹಂಚಿಕೆಯಲ್ಲಿ ಎರಡೂ ಕಡೆಯವರನ್ನು ಸಮಾಧಾನಪಡಿಸಲಾಗಿದೆ ಎಂದು ವರದಿಗಳು ಹೇಳುತ್ತವೆ. ಹೀಗಿದ್ದರೂ, ಚುನಾವಣೆ ಹೊತ್ತಿನಲ್ಲಿ ಬಂಡಾಯ ಚಟುವಟಿಕೆಗಳ ಪರಿಣಾಮವನ್ನು ತಳ್ಳಿಹಾಕಲು ಆಗದು. ಮುಖ್ಯಮಂತ್ರಿ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಬಲಿಸುವ ಮೂಲಕ ಶಿವಕುಮಾರ್ ಅವರು ರಾಜಕೀಯ ವಲಯದಲ್ಲಿ ಅಲೆಗಳನ್ನು ಸೃಷ್ಟಿಸಿದರು. ವಾಸ್ತವದಲ್ಲಿ ಇದು ಎಐಸಿಸಿ ಅಧ್ಯಕ್ಷರನ್ನು ಬೆಂಬಲಿಸಿ ಆಡಿದ್ದ ಮಾತಾಗಿರಲಿಲ್ಲ; ಬದಲಿಗೆ, ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಆಗಿರುವ ತಮ್ಮ ಎದುರಾಳಿ ಸಿದ್ದರಾಮಯ್ಯ ಅವರಿಗೆ ಶಿವಕುಮಾರ್ ಅವರು ನೀಡಿದ ಸಂದೇಶವಾಗಿತ್ತು ಎಂದು ಹಲವರು ಅರ್ಥೈಸಿದರು. ಹತ್ತು ಹಲವು ಅಡೆತಡೆಗಳು ಇರುವ ಓಟದ ಸ್ಪರ್ಧೆಯಲ್ಲಿ ಪಕ್ಷವು ಮೊದಲ ಅಡೆತಡೆಯನ್ನು (ಅಂದರೆ ಟಿಕೆಟ್ ಹಂಚಿಕೆ) ದಾಟಿಬಂದಿದೆ. ಮುಖ್ಯಮಂತ್ರಿ ವಿಚಾರದಲ್ಲಿ ತೀರ್ಮಾನ ಕೈಗೊಳ್ಳುವ ಮೊದಲು, ಚುನಾವಣಾ ಅಭಿಯಾನದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳುವುದು ಹಾಗೂ ಬಹುಮತ ಗಿಟ್ಟಿಸುವುದು ಎರಡು ಅಡೆತಡೆಗಳಾಗಿರುವಂತೆ ಕಾಣುತ್ತಿವೆ. ಈ ಸ್ಪರ್ಧೆಯಲ್ಲಿನ ಪ್ರತಿ ಅಡೆತಡೆಯೂ ಒಂದಿಷ್ಟು ಹಠಾತ್ ತಿರುವುಗಳನ್ನು ಮತ್ತು ಅನಿರೀಕ್ಷಿತ ಬದಲಾವಣೆಗಳನ್ನು ಹೊಂದಿರುತ್ತದೆ.

ಹೀಗಾಗಿ, ನಾಯಕತ್ವಕ್ಕಾಗಿನ ತಿಕ್ಕಾಟದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸಿನಲ್ಲಿ ನಡೆದಿರುವ ಛಾಯಾಸಮರವು ಗಮನ ಸೆಳೆದಿರುವ ಉಪಕಥೆಯಂತೆ ಇದೆ. ಅಂತಿಮ ಫಲಿತಾಂಶ ಯಾವ ರೀತಿ ಇರಲಿದೆ, ಪಕ್ಷವೊಂದು ಪಡೆಯಬಹುದಾದ ಬಹುಮತದ ಸ್ವರೂಪ ಅಥವಾ ಯಾವುದೇ ಪಕ್ಷಕ್ಕೆ ಬಹುಮತ ಸಿಗದೆ ಇರುವ ಸಾಧ್ಯತೆಯು ನಾಯಕತ್ವಕ್ಕಾಗಿ ನಡೆದಿರುವ ಬಾಜಿಯ ಮೇಲೆ ನಿರ್ಣಾಯಕ ಪ್ರಭಾವ ಬೀರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT