ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಾಜಕಾರಣ | ಬಿಜೆಪಿ–ಜೆಡಿಎಸ್‌ ಮೈತ್ರಿಯ ಲೆಕ್ಕಾಚಾರ

ಈ ಮೈತ್ರಿಯಿಂದಾಗಿ ಯಾವ ಪಕ್ಷಕ್ಕೆ ಹೆಚ್ಚಿನ ಲಾಭ ಆಗಬಹುದು?
Published 27 ಸೆಪ್ಟೆಂಬರ್ 2023, 23:42 IST
Last Updated 27 ಸೆಪ್ಟೆಂಬರ್ 2023, 23:42 IST
ಅಕ್ಷರ ಗಾತ್ರ

ಬಿಜೆಪಿಯು ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಎನ್‌ಡಿಎ ಎದುರಾಳಿ ಆಗಲಿದೆ. ಮೇಲ್ನೋಟಕ್ಕೆ ಹೇಳುವುದಾದರೆ, ಬಿಜೆಪಿ ಮತ್ತು ಜೆಡಿಎಸ್‌ ತಮ್ಮಿಬ್ಬರ ಎದುರಾಳಿ ಕಾಂಗ್ರೆಸ್ಸನ್ನು ಹಣಿಯಲು ಒಂದಾಗಿವೆ. ಆದರೆ, ಜೆಡಿಎಸ್ ಹಾಗೂ ಬಿಜೆಪಿ ಒಂದಾಗುವುದಕ್ಕೆ ಹಲವು ಅನಿವಾರ್ಯ ಕಾರಣಗಳು ಇವೆ ಎಂಬುದು ಆಳವಾದ ಅವಲೋಕನದಿಂದ ಗೊತ್ತಾಗುತ್ತದೆ.

ಆರಂಭದಲ್ಲಿ ಬಿಜೆಪಿ ಕುರಿತು ಗಮನ ಹರಿಸೋಣ. ಬಿಜೆಪಿಯು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ತೀರ್ಮಾನಿಸಿರುವುದು ನಾಲ್ಕು ವಿಷಯಗಳನ್ನು ಸ್ಪಷ್ಟಪಡಿಸುತ್ತದೆ. ಮೊದಲನೆಯದಾಗಿ, 2019ರಲ್ಲಿ ಇದ್ದಂತಹ ಬಲ ಈಗ ತನಗೆ ಇಲ್ಲ ಎಂಬುದನ್ನು ಬಿಜೆಪಿ ಒಪ್ಪಿಕೊಂಡಿದೆ. 2019ರಲ್ಲಿ ಬಿಜೆಪಿಯು ರಾಜ್ಯದ 28 ಲೋಕಸಭಾ ಸ್ಥಾನಗಳ ಪೈಕಿ 25ರಲ್ಲಿ ಗೆಲುವು ಕಂಡಿತ್ತು. ಈಗ ಪಕ್ಷವು ಗರಿಷ್ಠ 24 ಸ್ಥಾನಗಳಲ್ಲಿ (ಅಂದರೆ, ಜೆಡಿಎಸ್‌ಗೆ ನಾಲ್ಕು ಸ್ಥಾನಗಳನ್ನು ಬಿಟ್ಟುಕೊಡಲಾಗುತ್ತದೆ ಎಂಬ ಅಂದಾಜಿನೊಂದಿಗೆ) ಸ್ಪರ್ಧಿಸಬಹುದು. ಅಂದರೆ ಬಿಜೆಪಿಯು ಹಿಂದಿನ ಚುನಾವಣೆಯಲ್ಲಿ ಗೆದ್ದುಕೊಂಡಿದ್ದಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಈ ಬಾರಿ ಸ್ಪರ್ಧಿಸಲಿದೆ. ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿನ ಸೋಲು, ಬಿಜೆಪಿಗೆ ಪುನರ್‌ ಅವಲೋಕನಕ್ಕೆ ಕಾರಣವಾಗಿರಬಹುದು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ಕಾರಣ, ತನ್ನ ಹಿಂದಿನ ಸಾಧನೆಗೆ ಹತ್ತಿರವಾಗಲು ಬಿಜೆಪಿಯು ಎಲ್ಲ ಕಾಂಗ್ರೆಸ್ ವಿರೋಧಿ ಮತಗಳನ್ನು ಒಗ್ಗೂಡಿಸಬೇಕಾಗಿದೆ.

ದಕ್ಷಿಣ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳುವ ಕೆಲಸವನ್ನು ಬಿಜೆಪಿಯು ಕರ್ನಾಟಕದಿಂದ ಆರಂಭಿಸಿತು. ತಮಿಳುನಾಡಿನಲ್ಲಿ ಬಿಜೆಪಿ ಹೊಂದಿದ್ದ ಮೈತ್ರಿಯೊಂದು ಮುರಿದುಬಿದ್ದಿದೆ. ಹೀಗಾಗಿ ಕರ್ನಾಟಕದಲ್ಲಿ ಒಳ್ಳೆಯ ಸಾಧನೆ ತೋರಬೇಕಿರುವುದು ಬಿಜೆಪಿ ಪಾಲಿಗೆ ಮಹತ್ವದ್ದು.

ಎರಡನೆಯ ವಿಷಯ, ಮೈತ್ರಿಕೂಟ ರಾಜಕಾರಣದಲ್ಲಿ ಬಿಜೆಪಿಯ ತಂತ್ರಗಾರಿಕೆಯು ದೀರ್ಘಾವಧಿಯಲ್ಲಿ ಎರಡು ಪಕ್ಷಗಳ ನಡುವೆ ಮಾತ್ರ ಹಣಾಹಣಿ ಇರುವಂತಹ ಪರಿಸ್ಥಿತಿಯನ್ನು ಸೃಷ್ಟಿಸುವತ್ತ ಗಮನ ಹರಿಸಿದೆ. ಆ ಎರಡು ಪಕ್ಷ–ಗುಂಪುಗಳ ಪೈಕಿ ಒಂದು ತಾನೇ ಆಗಿರಬೇಕು ಎಂಬುದು ಕೂಡ ಬಿಜೆಪಿಯ ತಂತ್ರಗಾರಿಕೆಯ ಭಾಗ. ಕರ್ನಾಟಕದಲ್ಲಿ ಎರಡು ಪಕ್ಷಗಳ ನಡುವಣ ಹಣಾಹಣಿಯನ್ನು (ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ) ಸೃಷ್ಟಿಸುವುದು ತನಗೆ ಅನುಕೂಲಕರ ಎಂದು ಬಿಜೆಪಿಗೆ ಅನ್ನಿಸಿದೆ. ಇದನ್ನು ಸಾಧ್ಯವಾಗಿಸುವ ಅತ್ಯುತ್ತಮ ಮಾರ್ಗವೆಂದರೆ, ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು, ಆ ಪಕ್ಷದ ಮತಗಳು ತನ್ನತ್ತ ವರ್ಗಾವಣೆ ಆಗುವಂತೆ ನೋಡಿಕೊಳ್ಳುವುದು ಹಾಗೂ ದೀರ್ಘಾವಧಿಯಲ್ಲಿ ಮೈತ್ರಿ ಪಕ್ಷವನ್ನು ದುರ್ಬಲಗೊಳಿಸುವುದು. ಇದು ಮುಂದೊಂದು ದಿನ ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತ್ರ ನೇರ ಹಣಾಹಣಿ ಇರುವಂತೆ ಸಂದರ್ಭವನ್ನು ಸೃಷ್ಟಿಸುತ್ತದೆ.

ಮೂರನೆಯ ವಿಚಾರ, ಕರ್ನಾಟಕದಲ್ಲಿ ಹೊಂದಾಣಿಕೆಯ ವಿಚಾರವಾಗಿ ಬಿಜೆಪಿ ಈ ಹಿಂದೆ ಅನುಸರಿಸಿದ ತಂತ್ರಗಳು ಕುತೂಹಲಕಾರಿ ಅಂಶಗಳನ್ನು ಹೇಳುತ್ತವೆ. 1998ರಲ್ಲಿ ಬಿಜೆಪಿಯು ರಾಮಕೃಷ್ಣ ಹೆಗಡೆ ಅವರ ಲೋಕಶಕ್ತಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿತು. ಈ ಮೈತ್ರಿಯ ಉದ್ದೇಶವು ಆಡಳಿತಾರೂಢ ಜನತಾದಳದ ಮತಗಳನ್ನು ಸೆಳೆಯುವುದಾಗಿತ್ತು. ಅದರಲ್ಲೂ ಮುಖ್ಯವಾಗಿ, ಉತ್ತರ ಕರ್ನಾಟಕದಲ್ಲಿನ ಲಿಂಗಾಯತ ಸಮುದಾಯದ ಮತಗಳನ್ನು ಕ್ರೋಡೀಕರಿಸಲು ಬಿಜೆಪಿಯು ಈ ಅವಕಾಶವನ್ನು ಬಳಸಿಕೊಂಡಿತು. ಹೆಗಡೆ ಅವರು ಲಿಂಗಾಯತ ಸಮುದಾಯದ ನಡುವೆ ಗಣನೀಯ ಮಟ್ಟದಲ್ಲಿ ಸ್ವೀಕಾರಾರ್ಹ ನಾಯಕ ಆಗಿದ್ದರು. ಈ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ಮತಗಳು ಗಣನೀಯ ಪ್ರಮಾಣದಲ್ಲಿ ವರ್ಗಾವಣೆ ಆದವು. 1998ರ ಚುನಾವಣೆಯಲ್ಲಿ ಬಿಜೆಪಿಯು ತನ್ನ ಅದುವರೆಗಿನ ಅತ್ಯುತ್ತಮ ಸಾಧನೆ (13 ಸ್ಥಾನಗಳು ಬಿಜೆಪಿಗೆ, ಮೈತ್ರಿಕೂಟಕ್ಕೆ ಒಟ್ಟು 16 ಸ್ಥಾನಗಳು) ತೋರಿತು. 1999ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ (ಅಂದರೆ ಪಕ್ಷದ ರಾಜ್ಯ ಘಟಕಕ್ಕೆ) ಜೆಡಿ(ಯು) ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಮನಸ್ಸು ಇರಲಿಲ್ಲ. ಆಗ ಜೆಡಿ(ಯು)ನಲ್ಲಿ ಲೋಕಶಕ್ತಿ ವಿಲೀನ ಆಗಿತ್ತು. ಹೀಗಿದ್ದರೂ ಪಕ್ಷದ ರಾಷ್ಟ್ರೀಯ ನಾಯಕತ್ವದ ಒತ್ತಾಯಕ್ಕೆ ಮಣಿದು ಮೈತ್ರಿ ಮುಂದುವರಿಯಿತು. ಆದರೆ ಆ ಚುನಾವಣೆಯಲ್ಲಿ ಬಿಜೆಪಿಯ ಸಂಖ್ಯಾಬಲ ಏಳಕ್ಕೆ ಇಳಿಯಿತು.

ಇದರ ನಡುವೆಯೂ, ಲಿಂಗಾಯತ ಸಮುದಾಯದ ಮತಗಳ ಕ್ರೋಡೀಕರಣ ಆಗಿತ್ತು. 2004ರಲ್ಲಿ ಬಿಜೆಪಿ ಲೋಕಸಭಾ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸಿ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಈ ಬಾರಿಯೂ ಇದೇ ಮಾದರಿಯ ಮತಗಳ ಧ್ರುವೀಕರಣದ ಆಲೋಚನೆಯನ್ನು ಬಿಜೆಪಿ ಹೊಂದಿದೆಯೇ? ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಬಿಜೆಪಿಯು ಹಳೆ ಮೈಸೂರು ಪ್ರದೇಶದಲ್ಲಿ ಒಕ್ಕಲಿಗ ಸಮುದಾಯದ ಮತಗಳನ್ನು ತನ್ನತ್ತ ಸೆಳೆದುಕೊಳ್ಳುವ ಆಸೆಯಲ್ಲಿ ಇದೆಯೇ? ಈ ಪ್ರದೇಶದಲ್ಲಿ ಬಿಜೆಪಿಯು ದುರ್ಬಲವಾಗಿಯೇ ಇದೆ. ಒಕ್ಕಲಿಗ ಸಮುದಾಯದ ಮತಗಳನ್ನು ಜೆಡಿಎಸ್‌ನಿಂದ ತನ್ನ ಕಡೆಗೆ ಸೆಳೆದು, ಭವಿಷ್ಯದ ಚುನಾವಣೆಗಳಲ್ಲಿ ಕಾಂಗ್ರೆಸ್ ಜೊತೆ ನೇರ ಹಣಾಹಣಿಗೆ ಇಳಿದಾಗ ಆ ಮತಗಳ ಕ್ರೋಡೀಕರಣವನ್ನು ಬಳಸಿಕೊಳ್ಳಬಹುದು ಎಂಬ ಆಲೋಚನೆ ಬಿಜೆಪಿಗೆ ಇರಬಹುದು.

ನಾಲ್ಕನೆಯ ವಿಚಾರ, ರಾಜ್ಯದಲ್ಲಿ ಮೈತ್ರಿಗೆ ಮುಂದಾಗಿರುವುದು ರಾಜ್ಯ ಬಿಜೆಪಿ ಘಟಕದ ಬಗ್ಗೆ ಕೇಂದ್ರ ನಾಯಕತ್ವಕ್ಕೆ ಇರುವ ಅವಿಶ್ವಾಸವನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಬಿ.ಎಸ್. ಯಡಿಯೂರಪ್ಪ ಅವರೊಬ್ಬರನ್ನು ಹೊರತುಪಡಿಸಿದರೆ ರಾಜ್ಯ ಘಟಕದ ಬೇರೆ ಯಾವ ಪ್ರಮುಖರಿಗೂ ಮೈತ್ರಿಯ ಸೂಚನೆ ಇದ್ದಂತಿರಲಿಲ್ಲ. ಅಲ್ಲದೆ, ಈ ಮೈತ್ರಿಯ ಬಗ್ಗೆ ಅವರು ಹೆಚ್ಚು ಉತ್ಸುಕರಾಗಿದ್ದಂತೆಯೂ ಕಾಣಲಿಲ್ಲ. ವಿರೋಧ ಪಕ್ಷದ ನಾಯಕ ಯಾರು ಎಂಬುದನ್ನು ಇನ್ನೂ ತೀರ್ಮಾನಿಸದೆ ಇರುವುದು ಹಾಗೂ ಪಕ್ಷದ ರಾಜ್ಯ ಘಟಕಕ್ಕೆ ಹೊಸ ಅಧ್ಯಕ್ಷರ ಘೋಷಣೆ ಆಗದಿರುವುದು ಕೇಂದ್ರ ನಾಯಕತ್ವ ಹೊಂದಿರುವ ಅವಿಶ್ವಾಸವನ್ನು ತೋರಿಸುತ್ತಿದೆ.

ಜೆಡಿಎಸ್‌ ಈ ಮೈತ್ರಿಗೆ ಹತಾಶ ಮನಃಸ್ಥಿತಿಯಿಂದ ಒಪ್ಪಿಕೊಂಡಿರುವಂತಿದೆ. 1996ರ ನಂತರದಲ್ಲಿ ಪಕ್ಷವು ಲೋಕಸಭಾ ಚುನಾವಣೆ ವಿಚಾರದಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ. 2019ರಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್, ತನಗೆ ಸಿಕ್ಕಿದ್ದ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹುಡುಕುವುದಕ್ಕೇ ಕಷ್ಟಪಟ್ಟಿತ್ತು. ವಾಸ್ತವದಲ್ಲಿ, ಪಕ್ಷವು ತನಗೆ ಸಿಕ್ಕಿದ್ದ ಒಂದು ಸ್ಥಾನವನ್ನು ಕಡೆಯ ಕ್ಷಣದಲ್ಲಿ ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟಿತ್ತು. 

ಜೆಡಿಎಸ್ ಪಕ್ಷವು ಎರಡು ವಿಚಾರಗಳ ಬಗ್ಗೆ ಹೆಚ್ಚು ಜಾಗರೂಕವಾಗಿ ಇರಬೇಕು. ಮೊದಲನೆಯದು, ಮತಗಳ ವರ್ಗಾವಣೆಗೆ ಸಂಬಂಧಿಸಿದ ವಿಚಾರ. ನಾಯಕರ ಮಟ್ಟದಲ್ಲಿ ಮೈತ್ರಿ ಆಗಿರುವಾಗ, ಕಾರ್ಯಕರ್ತರು ಹಾಗೂ ಬೆಂಬಲಿಗರ ಮಟ್ಟದಲ್ಲಿ ಅದು ಮತಗಳ ವರ್ಗಾವಣೆಯಾಗಿ ಪರಿಣಮಿಸಲಿದೆಯೇ? ಲೋಕನೀತಿ–ಸಿಎಸ್‌ಡಿಎಸ್‌ ನಡೆಸಿದ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಜೆಡಿ(ಯು) 1999ರಲ್ಲಿ ಶೇ 50ರಷ್ಟು ಮತಗಳನ್ನು ಮಾತ್ರ ಬಿಜೆಪಿ ಕಡೆ ವರ್ಗಾವಣೆ ಆಗುವಂತೆ ಮಾಡಿತ್ತು ಹಾಗೂ ಇನ್ನುಳಿದ ಶೇ 50ರಷ್ಟು ಮತಗಳು ಕಾಂಗ್ರೆಸ್ ಕಡೆ ವರ್ಗಾವಣೆಯಾಗಿದ್ದವು. ಬಿಜೆಪಿಯು ಕಾರ್ಯಕರ್ತರನ್ನು ಆಧರಿಸಿದ ಪಕ್ಷವಾದ ಕಾರಣ, ಜೆಡಿ(ಯು) ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಮತಗಳ ವರ್ಗಾವಣೆ ಬಹಳ ಕಡಿಮೆ ಇತ್ತು. ಜೆಡಿಎಸ್ ಪಾಲಿಗೂ ಇದೇ ಆಗಬಹುದೇ?

ಎರಡನೆಯ ವಿಚಾರ, ಈ ಮೈತ್ರಿಯ ಮೂಲಕ ಜೆಡಿಎಸ್ ಪಕ್ಷವು ಬಿಜೆಪಿಗೆ ಹಳೆ ಮೈಸೂರು ಪ್ರದೇಶದಲ್ಲಿ ಪ್ರವೇಶ ಪಡೆಯಲು, ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಅವಕಾಶ ಮಾಡಿಕೊಡಲಿದೆಯೇ? ಈ ಮೈತ್ರಿಯಿಂದಾಗಿ ಹೆಚ್ಚಿನ ಲಾಭ ಆಗುವುದು ಬಿಜೆಪಿಗೆ ಎಂಬುದು ಸ್ಪಷ್ಟ. ಈ ಮೈತ್ರಿಕೂಟದ ರಚನೆಯು ಕಾಂಗ್ರೆಸ್ಸಿಗೆ ಗುರಿ ಮುಟ್ಟುವ ಕೆಲಸವನ್ನು ಕಷ್ಟವಾಗಿಸಲಿದೆ. ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಳ್ಳೆಯ ಸಾಧನೆ ತೋರಬೇಕಿರುವುದು ರಾಜ್ಯ ಸರ್ಕಾರದ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದು. ಪಕ್ಷವು ತಳಮಟ್ಟದಲ್ಲಿ ಪ್ರದರ್ಶಿಸುವ ಒಗ್ಗಟ್ಟಿನ ಸ್ವರೂಪದ ಮೇಲೆ ಹಲವು ಸಂಗತಿಗಳು ತೀರ್ಮಾನವಾಗಲಿವೆ. ಅಲ್ಲದೆ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಅವುಗಳ ಯಶಸ್ಸು ಖಂಡಿತವಾಗಿಯೂ ಪರಿಣಾಮ ಉಂಟುಮಾಡಲಿದೆ. ಚುನಾವಣಾಪೂರ್ವ ಹಣಾಹಣಿ ಕೂಡ ಚುನಾವಣಾ ಹಣಾಹಣಿಯಷ್ಟೇ ಕುತೂಹಲಕಾರಿ ಆಗಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT