ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದೀಪ್ ಶಾಸ್ತ್ರಿ ಲೇಖನ: ಜೆಡಿಎಸ್ ಮುಂದಿರುವ ರಾಜಕೀಯ ಸವಾಲು

ಬೇರೊಂದು ಪಕ್ಷದ ಜತೆ ಮೈತ್ರಿ ಮಾಡಿಕೊಂಡಾಗಲೆಲ್ಲ ಸಂಘಟನಾತ್ಮಕವಾಗಿ ಜೆಡಿಎಸ್ ದುರ್ಬಲಗೊಂಡಿದೆ
Last Updated 25 ಡಿಸೆಂಬರ್ 2020, 18:54 IST
ಅಕ್ಷರ ಗಾತ್ರ
ADVERTISEMENT
""

‘ಜೆಡಿಎಸ್ ಪಕ್ಷ ಬಿಜೆಪಿ ಜೊತೆ ವಿಲೀನ ಆಗುತ್ತದೆ’ ಎಂಬ ಗಾಳಿಸುದ್ದಿಯನ್ನು ಆರಿಸುವ ಕೆಲಸವನ್ನು ಜೆಡಿಎಸ್ ನಾಯಕರು ಕೊನೆಗೂ ಮಾಡಿದ್ದಾರೆ. ರಾಜಕೀಯದಲ್ಲಿ ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಎಂಬುದು ಸ್ಪಷ್ಟ. ಆ ಬೆಂಕಿ ಚಿಕ್ಕದ್ದಾಗಿರಬಹುದು, ಕಣ್ಣಿಗೆ ಬೀಳದಂತೆ ಇರಬಹುದು. ಆದರೆ, ಬೆಂಕಿ ಇದ್ದಿರಲೇಬೇಕು! ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದಂತೆ ಶ್ರದ್ಧಾಂಜಲಿ ಬರಹ ಬರೆಯುವುದು ವಿವೇಕದ ಕೆಲಸವಾಗದು. ಅದರಲ್ಲೂ, ಆಗಾಗ ಪುಟಿದೇಳುವುದು ಗೊತ್ತಿರುವ ಜೆಡಿಎಸ್‌ನಂತಹ ಪಕ್ಷದ ಬಗ್ಗೆ ಆ ರೀತಿ ಬರೆಯಬಾರದು. ಆದರೆ, ಮೂರನೆಯ ಸ್ಥಾನದಲ್ಲಿರುವ ಈ ಪಕ್ಷವು ಇಂದು ಎರಡು ದಾರಿಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಸ್ಥಿತಿಯಲ್ಲಿದೆ.

ಈ ಪಕ್ಷಕ್ಕೆ ಅಸ್ತಿತ್ವ ಇರುವುದು ಕರ್ನಾಟಕದಲ್ಲಿ ಮಾತ್ರ. ಪಕ್ಷ ಮುಂದೆ ಯಾವ ಹಾದಿಯಲ್ಲಿ ಸಾಗಬಹುದು? ಇದಕ್ಕೆ ಉತ್ತರಿಸಬೇಕು ಎಂದಾದರೆ, ಪಕ್ಷದ ಇತಿಹಾಸವನ್ನು ಅವಲೋಕಿಸಬೇಕು, ಪಕ್ಷದ ವರ್ತಮಾನವನ್ನು ವಿಶ್ಲೇಷಿಸಬೇಕು. ಹಿಂದಿನ ಜನತಾ ಪಕ್ಷದ ಒಂದು ತುಣುಕು ಇಂದಿನ ಜೆಡಿಎಸ್. ರಾಷ್ಟ್ರ ಮಟ್ಟದಲ್ಲಿ 1977ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಇಳಿಸಿದ ರಾಜಕೀಯ ಒಕ್ಕೂಟ ಈ ಜನತಾ ಪಕ್ಷ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಸೋಲರಿಯದ ಓಟವನ್ನು 1983ರಲ್ಲಿ ನಿಲ್ಲಿಸಿದ್ದು ಕೂಡ ಇದೇ ಪಕ್ಷ. ಒಂದೆಡೆ ಬಿಜೆಪಿ, ಇನ್ನೊಂದೆಡೆ ಕಮ್ಯುನಿಸ್ಟ್ ಪಕ್ಷ ನೀಡಿದ್ದ ಬಾಹ್ಯ ಬೆಂಬಲವನ್ನು ಪಡೆದು, 1983ರ ವಿಧಾನಸಭಾ ಚುನಾವಣೆಯ ನಂತರ ಜನತಾ ಪಕ್ಷವು ರಾಮಕೃಷ್ಣ ಹೆಗಡೆ ಅವರ ನೇತೃತ್ವದಲ್ಲಿ ಅಲ್ಪಮತದ ಸರ್ಕಾರ ರಚಿಸಿತು.

ಎರಡು ವರ್ಷಗಳ ನಂತರ ನಡೆದ ಚುನಾವಣೆಯಲ್ಲಿ ಹೆಗಡೆ ಅವರ ನಾಯಕತ್ವದಲ್ಲಿ ಜನತಾ ಪಕ್ಷ ಸ್ಪಷ್ಟ ಬಹುಮತ ಪಡೆದುಕೊಂಡಿತು. ಪಕ್ಷದೊಳಗಣ ಭಿನ್ನಮತ ಬಹುಬೇಗ ಬಯಲಿಗೆ ಬಂತು. ಅದರಲ್ಲೂ ಮುಖ್ಯವಾಗಿ ರಾಷ್ಟ್ರಮಟ್ಟದಲ್ಲಿ ಜನತಾಪಕ್ಷವು ‘ಜನತಾದಳ’ ಎಂಬ ಹೆಸರು ಪಡೆದ ನಂತರ ಇದು ಹೆಚ್ಚಾಯಿತು. ಕರ್ನಾಟಕದಲ್ಲಿ ದೇವೇಗೌಡರ ನೇತೃತ್ವದಲ್ಲಿನ ಒಂದು ಬಣವು ಜನತಾ ಪಕ್ಷದ ಮೂಲ ಅಸ್ಮಿತೆಯನ್ನು ಉಳಿಸಿಕೊಳ್ಳುವುದಾಗಿ ಹೇಳಿತು. 1994ರ ಚುನಾವಣೆಗೂ ತುಸು ಮೊದಲು ಮತ್ತೆ ಒಂದಾದ ಬಣಗಳು, ಕೆಲವು ವರ್ಷಗಳ ನಂತರ ಬೇರೆ ಬೇರೆ ಆದವು. ಆಗ ಹುಟ್ಟಿಕೊಂಡಿದ್ದು ಜೆಡಿಯು ಮತ್ತು ಜೆಡಿಎಸ್ ಪಕ್ಷಗಳು. 1996ರಲ್ಲಿ ರಾಷ್ಟ್ರಮಟ್ಟದಲ್ಲಿ ರಚನೆಯಾದ ನ್ಯಾಷನಲ್‌ ಫ್ರಂಟ್‌, ಒಕ್ಕೂಟ ಸರ್ಕಾರವನ್ನು ಮುನ್ನಡೆಸಲು ಜೆಡಿಎಸ್ ನಾಯಕ ದೇವೇಗೌಡರನ್ನು ಆಯ್ಕೆ ಮಾಡಿತು. ಅವರು ಸರಿಸುಮಾರು ಒಂದು ವರ್ಷ ದೇಶದ ಪ್ರಧಾನಿಯಾಗಿದ್ದರು.

ಕಳೆದ ನಾಲ್ಕು ದಶಕಗಳಲ್ಲಿ ಕರ್ನಾಟಕವು ಎರಡು ಪಕ್ಷಗಳ ನಡುವಿನ ಹೋರಾಟವನ್ನು ಕಂಡಿದೆ. ಇಂತಹ ರಾಜ್ಯದಲ್ಲಿ, 1977ರಲ್ಲಿ ರೂಪ ಪಡೆದ ನಂತರ ಕಾಂಗ್ರೆಸ್ಸಿಗೆ ಪ್ರಮುಖ ಎದುರಾಳಿಯಾಗಿ ಬೆಳೆದಿದ್ದು ಜನತಾಪಕ್ಷ. 1980ರಲ್ಲಿ ಹುಟ್ಟಿದ ಬಿಜೆಪಿ, ರಾಜ್ಯ ರಾಜಕಾರಣದಲ್ಲಿ ಮೂರನೆಯ ಸ್ಥಾನದಲ್ಲಿ ಇತ್ತು. 1990ರ ನಂತರ ಬಿಜೆಪಿ ನಿಧಾನವಾಗಿ ಬೆಳೆಯಲಾರಂಭಿಸಿತು. 2004ರಲ್ಲಿ ಕಾಂಗ್ರೆಸ್ಸಿಗೆ ಮುಖ್ಯ ಪ್ರತಿಸ್ಪರ್ಧಿಯಾಗಿ ಬೆಳೆದು, ಜೆಡಿಎಸ್ ಪಕ್ಷವನ್ನು ಮೂರನೆಯ ಸ್ಥಾನಕ್ಕೆ ತಳ್ಳಿತು.

ಆ ನಂತರದಲ್ಲಿ ಈ ಸಮೀಕರಣವೇ ಬಹುತೇಕ ಉಳಿದುಕೊಂಡು ಬಂದಿದೆ. 1994ರ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದಿದ್ದ ಜನತಾದಳ (ನಂತರದಲ್ಲಿ ಜೆಡಿಎಸ್‌) ಆ ಸಾಧನೆಯನ್ನು ಮತ್ತೊಮ್ಮೆ ತೋರಿಸಿಲ್ಲ. ನಂತರದಲ್ಲಿ ಅದು ಮೂರು ಬಾರಿ ಮೈತ್ರಿಕೂಟಗಳ ಮೂಲಕ ಆಡಳಿತದಲ್ಲಿ ಪಾಲು ಪಡೆದಿದೆ. ಮೂರೂ ಸಂದರ್ಭಗಳಲ್ಲಿ ಅದು ಮೈತ್ರಿಕೂಟದ ಅತಿದೊಡ್ಡ ಪಕ್ಷವಾಗಿರಲಿಲ್ಲ. 2004ರ ಚುನಾವಣೆಯ ನಂತರ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಧರ್ಮಸಿಂಗ್‌ ನೇತೃತ್ವದಲ್ಲಿ ಸರ್ಕಾರ ರಚಿಸಲಾಯಿತು. ಆಗ ಜೆಡಿಎಸ್‌ನಲ್ಲಿದ್ದ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾದರು. ಎರಡು ವರ್ಷಗಳ ನಂತರ ನಡೆದ ರಾಜಕೀಯ ಕ್ರಾಂತಿಯಂತಹ ಬೆಳವಣಿಗೆಯಲ್ಲಿ ‌ಎಚ್.ಡಿ. ಕುಮಾರಸ್ವಾಮಿ ಅವರು ಪಕ್ಷದ ಒಂದು ಗುಂಪಿನ ನೇತೃತ್ವ ವಹಿಸಿ, ಬಿಜೆಪಿ ಜೊತೆ ಕೈಜೋಡಿಸಿ ಮೈತ್ರಿ ಸರ್ಕಾರ ರಚಿಸಿದರು. ಆಗ ಮೈತ್ರಿಕೂಟದಲ್ಲಿ ಬಿಜೆಪಿ ಹೆಚ್ಚು ಸಂಖ್ಯೆ ಹೊಂದಿತ್ತಾದರೂ ಮುಖ್ಯಮಂತ್ರಿ ಸ್ಥಾನವನ್ನು ಮೊದಲ 20 ತಿಂಗಳ ಅವಧಿಗೆ ಜೆಡಿಎಸ್‌ಗೆ ಬಿಟ್ಟುಕೊಟ್ಟಿತು. ಮುಖ್ಯಮಂತ್ರಿ ಸ್ಥಾನವನ್ನು ಬಿಜೆಪಿಗೆ ಕೊಡಬೇಕಾದ ಸಮಯ ಬಂದಾಗ, ಕೊಟ್ಟ ಮಾತಿನಿಂದ ಜೆಡಿಎಸ್‌ ಹಿಂದೆ ಸರಿಯಿತು, ಸರ್ಕಾರ ಕುಸಿದುಬಿತ್ತು. 2018ರ ವಿಧಾನಸಭಾ ಚುನಾವಣೆಯ ನಂತರ ಸಂಖ್ಯಾಬಲದಲ್ಲಿ ದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್ ಜೊತೆ ಸೇರಿ ಜೆಡಿಎಸ್ ಸರ್ಕಾರ ರಚಿಸಿತು. ಆಗ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು.

ಪ್ರೊ. ಸಂದೀಪ್ ಶಾಸ್ತ್ರಿ

ಒಂದು ವರ್ಷಕ್ಕಿಂತ ತುಸು ಹೆಚ್ಚಿನ ಆಯಸ್ಸು ಹೊಂದಿದ್ದ ಈ ಸರ್ಕಾರ, ಆಡಳಿತಾರೂಢ ಮೈತ್ರಿಕೂಟದ ಹಲವು ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರುವುದರೊಂದಿಗೆ ಕುಸಿದುಬಿತ್ತು.

ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾತ್ರಧಾರಿ ಆಗಿದ್ದ ಜೆಡಿಎಸ್‌, ಈಗ ಸಣ್ಣ ಶಕ್ತಿಯಾಗಿ ಮೂರನೆಯ ಸ್ಥಾನದಲ್ಲಿದೆ. ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಇರದಿದ್ದಾಗ, ಎರಡು ಪ್ರಮುಖ ಪಕ್ಷಗಳಲ್ಲಿ (ಕಾಂಗ್ರೆಸ್ ಮತ್ತು ಬಿಜೆಪಿ) ಯಾವುದಾದರೊಂದು ಪಕ್ಷವು ಅಲ್ಪಾವಧಿಯ ರಾಜಕೀಯ ಲಾಭಕ್ಕಾಗಿ ಮೈತ್ರಿ ಯಾಚಿಸಿದಾಗಲೆಲ್ಲ ಜೆಡಿಎಸ್‌ ಪ್ರಧಾನ ಭೂಮಿಕೆಗೆ ಬಂದಿದ್ದಿದೆ. ಜೆಡಿಎಸ್ ಪಕ್ಷವು ಇಂತಹ ಮೈತ್ರಿ ಮಾಡಿಕೊಂಡಾಗಲೆಲ್ಲ ಸಂಘಟನಾತ್ಮಕವಾಗಿ ದುರ್ಬಲಗೊಂಡಿದೆ, ಅದರ ಜೊತೆ ಮೈತ್ರಿ ಸಾಧಿಸಿದ ಪಕ್ಷವು ಬಲಗೊಂಡಿದೆ. ಈಚಿನ ವರ್ಷಗಳಲ್ಲಿ ಜೆಡಿಎಸ್‌ನ ಹಿರಿಯ ನಾಯಕರು ಪಕ್ಷ ತೊರೆದು, ಬಿಜೆಪಿ ಅಥವಾ ಕಾಂಗ್ರೆಸ್‌ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಜೆಡಿಎಸ್ ಪಕ್ಷವು ಕುಟುಂಬದ ಸಂಘಟನೆಯಾಗಿ ಕುಗ್ಗಿಹೋಗಿದ್ದು ಇದಕ್ಕೆ ದೊಡ್ಡ ಕಾರಣ.

2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣಕ್ಕೆ ಇಳಿದ ಅಭ್ಯರ್ಥಿಗಳ ಪೈಕಿ ಶೇಕಡ 50ಕ್ಕಿಂತ ಹೆಚ್ಚಿನವರು ದೇವೇಗೌಡರ ಕುಟುಂಬದವರಾಗಿದ್ದರು! ಪಕ್ಷವು ಅನುಭವಿಸಿದ ಏಳು–ಬೀಳುಗಳು ಬಹಳ ಸ್ಪಷ್ಟವಾಗಿ ಪ್ರತಿಬಿಂಬಿತವಾಗಿವೆ – ಅಂದರೆ, ಪಕ್ಷದ ನಾಯಕರೂ ಮಾಜಿ ಪ್ರಧಾನಿಯೂ ಆಗಿರುವ ದೇವೇಗೌಡ ಅವರು ಲೋಕಸಭಾ ಚುನಾವಣೆಗಳಲ್ಲಿ ಮೂರು ಬಾರಿ ವಿಭಿನ್ನ ಕ್ಷೇತ್ರಗಳಿಂದ ಸೋಲು ಕಂಡಿದ್ದಾರೆ (ಹಾಸನ, ಕನಕಪುರ ಮತ್ತು ತುಮಕೂರು).

ಕಾಂಗ್ರೆಸ್ ಪಕ್ಷದ ಹಲವು ಹಿರಿಯ ನಾಯಕರು (ಸಿದ್ದರಾಮಯ್ಯ ಸೇರಿದಂತೆ) ತಮ್ಮ ರಾಜಕೀಯ ವೃತ್ತಿಜೀವನವನ್ನು ಆರಂಭಿಸಿದ್ದು ಜನತಾ ಪರಿವಾರದಲ್ಲಿ. ಪಕ್ಷ ಹಾಗೂ ಸರ್ಕಾರದಲ್ಲಿನ ಪ್ರಮುಖ ಸ್ಥಾನಗಳಲ್ಲಿ ಇರುವ ಹೆಚ್ಚಿನವರು ಹಿಂದೆ ಜನತಾ ಪಕ್ಷದಲ್ಲಿದ್ದವರು ಎಂಬ ಆರೋಪ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಂದಿತ್ತು. ‘ಕುಟುಂಬ’ದ ಹೊರಗಿನ ನಾಯಕರಿಗೆ ಲಭ್ಯವಾದ ತೀರಾ ಸೀಮಿತ ರಾಜಕೀಯ ಅವಕಾಶಗಳ ಕಾರಣದಿಂದಾಗಿಯೂ ಜೆಡಿಎಸ್‌ ಪಕ್ಷವು ರಾಜಕಾರಣದ ಅಂಚಿಗೆ ಸರಿದಿದೆ. ಹಳೆ ಮೈಸೂರು ಪ್ರಾಂತ್ಯದ ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳಲ್ಲಿ ಜೆಡಿಎಸ್ ನೆಲೆ ಕಳೆದುಕೊಳ್ಳುವ ಪ್ರಕ್ರಿಯೆಯು ವೇಗ ಪಡೆದುಕೊಳ್ಳಲು ಒಂದು ಕಾರಣ 2019ರ ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷ ಕಾಂಗ್ರೆಸ್ ಜೊತೆ ಮಾಡಿಕೊಂಡ ಮೈತ್ರಿ.

ರಾಜಕಾರಣದಲ್ಲಿ ತನ್ನ ಪಾತ್ರವನ್ನು ಮತ್ತೆ ಸ್ಪಷ್ಟಪಡಿಸಲು ಪಕ್ಷವು ರಾಜಕೀಯ ನೆಲೆಯನ್ನು ಮತ್ತೆ ಗಟ್ಟಿಗೊಳಿಸಿಕೊಳ್ಳಬೇಕು. ‘ಕುಟುಂಬದ ನಿಯಂತ್ರಣದಲ್ಲಿನ ಪಕ್ಷ’ವೆಂಬ ಚಿತ್ರಣದಿಂದ ಹೊರಬರಬೇಕು. ಇದನ್ನು ಮಾಡುವುದು ಕಷ್ಟವಾಗಿರಬಹುದು, ಆದರೆ ಅಸಾಧ್ಯವೇನೂ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT