ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಾಜಕಾರಣ: ಗಣರಾಜ್ಯ- ಒಂದು ರಾಜಕೀಯ ಅವಲೋಕನ

ನಾವು ಸಮಾಜದಲ್ಲಿ ತೀವ್ರವಾದ ಧ್ರುವೀಕರಣಕ್ಕೆ ಸಾಕ್ಷಿಯಾಗುತ್ತಿದ್ದೇವೆಯೇ?
Last Updated 25 ಜನವರಿ 2022, 19:32 IST
ಅಕ್ಷರ ಗಾತ್ರ

ಭಾರತವು ಮತ್ತೊಂದು ಗಣರಾಜ್ಯೋತ್ಸವದ ಸಂಭ್ರಮ ದಲ್ಲಿದೆ. ದೇಶವು ಗಣರಾಜ್ಯವಾಗಿ ರೂಪುಗೊಂಡು ಅದಾಗಲೇ ಏಳು ದಶಕಗಳನ್ನು ಪೂರೈಸಿರುವ ಈ ಸಂದರ್ಭವು ಸಾಗಿ ಬಂದಿರುವ ದಾರಿ ಹಾಗೂ ಮುಂದೆ ಕ್ರಮಿಸಬೇಕಾದ ಹಾದಿಯ ಬಗ್ಗೆ ಅವಲೋಕನ ಮಾಡಿಕೊಳ್ಳಲು ಒಂದು ಒಳ್ಳೆಯ ಸಮಯವೂ ಆಗಿದೆ.

ಐದು ವರ್ಷಗಳ ಹಿಂದೆ (2017ರಲ್ಲಿ) ಸಿಎಸ್‍ಡಿಎಸ್- ಲೋಕನೀತಿಯ ಸಾರ್ವಜನಿಕ ಅಭಿಪ್ರಾಯದ ವಿಶ್ಲೇಷಣೆ ಆಧಾರಿತ ಸಮೀಕ್ಷೆಯನ್ನು ಆಧರಿಸಿದ ಭಾರತದಪ್ರಜಾಪ್ರಭುತ್ವದ ಬಗೆಗಿನ ಸ್ಥಿತಿಗತಿ ವರದಿಯ ಒಟ್ಟಾರೆ ಅಭಿಪ್ರಾಯದ ಹೇಳಿಕೆಯು ಇವತ್ತಿಗೂ ಪ್ರಸ್ತುತ
ವಾಗಿದೆ. ಆ ವರದಿ ಹೇಳಿರುವ ಪ್ರಕಾರ, ‘ಬಹುತೇಕರಿಗೆ, ಮೂಲಭೂತ ಅಗತ್ಯಗಳಿಗಾಗಿ ಸರ್ಕಾರವನ್ನು ಆಶ್ರಯಿ ಸುವುದು ಇರುವ ಏಕೈಕ ಆಯ್ಕೆ’ಯಾಗಿದೆ. ಪರಿಸ್ಥಿತಿ ಹೀಗಿರುವಾಗ, ನಾಗರಿಕರು ಪ್ರೀತಿಸುವ, ಎತ್ತಿಹಿಡಿಯುವ ಪ್ರಜಾತಂತ್ರ ವ್ಯವಸ್ಥೆಯ ನ್ಯಾಯ ಮತ್ತು ಅಭಿವೃದ್ಧಿಯ ಆಯಾಮಗಳಿಗೆ ಪ್ರಭುತ್ವವು ಎಷ್ಟು ಸ್ಪಂದನೆ ತೋರುತ್ತದೆ ಎನ್ನುವುದು ಮಹತ್ವದ್ದಾಗುತ್ತದೆ. ಕೋವಿಡ್-19 ಸಾಂಕ್ರಾಮಿಕ ಹಾಗೂ ಅದು ನಾಗರಿಕರ ಬದುಕಿನ ಮೇಲೆ ಬೀರಿದ ಪರಿಣಾಮದ ವೈಖರಿಯು ಭಾರತದ ಜನರ ಆಕಾಂಕ್ಷೆಗಳಿಗೆ ಹಾಗೂ ನಿರೀಕ್ಷೆಗಳಿಗೆ ಕೈಗನ್ನಡಿ ಹಿಡಿಯುತ್ತದೆ.

ಒಂದು ಪ್ರಜಾಪ್ರಭುತ್ವ ಗಣರಾಜ್ಯವಾಗಿ ಈ ಹಿಂದಿನ ಎಪ್ಪತ್ತು ವರ್ಷಗಳಲ್ಲಿ ದೇಶವು ಪ್ರಗತಿ ಪಥದಲ್ಲಿ ಸಾಗಿ ಬಂದಿರುವುದನ್ನು ಗಮನಿಸಿದಾಗ, ನಾವು ಹೆಮ್ಮೆ ಪಡಬಹುದಾದ ಬಹಳಷ್ಟು ವಿಷಯಗಳಿವೆ. ದೇಶದಲ್ಲಿ ಪ್ರಜಾತಾಂತ್ರಿಕ ಪ್ರಕ್ರಿಯೆಯು ಆಳಕ್ಕೆ ಬೇರು ಬಿಡುತ್ತಿರು ವುದನ್ನು ಹಾಗೂ ಪ್ರಜಾತಾಂತ್ರಿಕ ಆವರಣವು ವಿಸ್ತಾರ ಗೊಳ್ಳುತ್ತಿರುವುದನ್ನು ಗಮನಿಸಬಹುದಾಗಿದೆ. ಎಲ್ಲಾ ಜನ ವರ್ಗಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದಾಗಿ ಚುನಾವಣೆಗಳಲ್ಲಿ ಹೆಚ್ಚಿನ ಜನರು ಮತ ಚಲಾವಣೆ ಮಾಡುತ್ತಿದ್ದಾರೆ. ಸ್ಪರ್ಧಾತ್ಮಕವಾದ ಪಕ್ಷವಾರು ವ್ಯವಸ್ಥೆ ಹೊರಹೊಮ್ಮಿರುವು ದರಿಂದ ರಾಜ್ಯದ ಚುನಾವಣೆಯೇ ಆಗಲಿ ಅಥವಾ ರಾಷ್ಟ್ರ ಮಟ್ಟದ ಚುನಾವಣೆಯೇ ಆಗಲಿ ತೀವ್ರ ಪೈಪೋಟಿ ಕಂಡುಬರುತ್ತಿದೆ. ಕೇಂದ್ರ ಹಾಗೂ ರಾಜ್ಯಗಳ ನಡುವಿನ ಸಂಬಂಧದ ಮೂಲಕ ಒಕ್ಕೂಟ ವ್ಯವಸ್ಥೆಯು ಹೊಸ ಚಲನಶೀಲತೆಯನ್ನು ಕಂಡಿದೆ. ‘ಭಾರತದ ರಾಜ್ಯಗಳು’ ಹೆಚ್ಚೆಚ್ಚು ಪ್ರಮಾಣದಲ್ಲಿ ‘ಭಾರತದ ರಾಜಕಾರಣದ ಹೊಸ ಕೇಂದ್ರ’ವಾಗಿ ರೂಪುಗೊಳ್ಳುತ್ತಿವೆ. ರಾಷ್ಟ್ರೀಯ ರಾಜಕಾರಣದ ಮೇಲೆ ರಾಜ್ಯ ಮಟ್ಟದ ಚುನಾವಣೆಯ ಪ್ರಾಮುಖ್ಯ ಮತ್ತು ಪ್ರಭಾವವು ಪ್ರಮುಖ ಚರ್ಚಾ ವಿಷಯವಾಗಿ ಗಮನ ಸೆಳೆಯುತ್ತಿವೆ.

ಈ ಆಶಾದಾಯಕ ಸಂಗತಿಗಳ ನಡುವೆಯೇ ಭಾರತ ಗಣರಾಜ್ಯದಲ್ಲಿನ ರಾಜಕೀಯ ವ್ಯವಸ್ಥೆಯು ಇಲ್ಲಿ ಮುಖ್ಯವಾದ ಲೋಪಗಳಿರುವುದನ್ನೂ ಸೂಚಿಸುತ್ತದೆ. ಹಾಗಾದರೆ, ‘ಭಾರತದಲ್ಲಿ ಇರುವುದು ‘ಕೇವಲ ಚುನಾ ವಣಾ’ ಪ್ರಜಾಪ್ರಭುತ್ವವೇ?’- ಎಂಬುದು ಕೇಳಿಬರುವ ಮುಖ್ಯ ಪ್ರಶ್ನೆಯಾಗಿದೆ. ದೇಶವು ಗಣರಾಜ್ಯಗೊಂಡು ಎರಡು ವರ್ಷಗಳಾದ ಮೇಲೆ ನಾವು ಒಂದು ದೇಶವಾಗಿ (1952) ಮೊತ್ತಮೊದಲ ಸಾರ್ವತ್ರಿಕ ಚುನಾವಣೆ ಯನ್ನು ಕಂಡೆವು. ಅಲ್ಲಿಂದೀಚೆಗೆ ಏಳು ದಶಕಗಳ ಅವಧಿಯಲ್ಲಿ ನಾವು 17 ಲೋಕಸಭಾ ಚುನಾವಣೆಗಳನ್ನು ಎದುರಿಸಿದ್ದೇವೆ. ದೇಶದ ಪ್ರತಿಯೊಂದು ರಾಜ್ಯವೂ ಸರಿಸುಮಾರು ಇಷ್ಟೇ ಸಂಖ್ಯೆಯ ವಿಧಾನಸಭಾ ಚುನಾವಣೆಗಳನ್ನು ಎದುರಿಸಿದೆ. ಚುನಾವಣೆ ಎಂಬುದು ಭಾರತದಲ್ಲಿ ಹಬ್ಬದಂತಾಗಿದ್ದು, ಇದು ಭಾರತದ ಪ್ರಜಾಪ್ರಭುತ್ವ ಸಕ್ರಿಯವಾಗಿರುವುದನ್ನು ಸಂಕೇತಿಸುವ ಅತ್ಯಂತ ಎದ್ದು ಕಾಣುವ ಚಿಹ್ನೆಯೂ ಆಗಿದೆ. ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಚುನಾವಣೆಯ ದಿನವು ಭಾರತದ ನಾಗರಿಕರು ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಹಕ್ಕನ್ನು ಚಲಾಯಿಸುವ ದಿನವಾಗಿರುವುದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತ ಚಲಾಯಿಸುತ್ತಿರುವುದಕ್ಕೆ ಕಾರಣವಿರಬಹುದು. ಆದರೆ ನಾವು ಭಾರತ ಗಣರಾಜ್ಯದಲ್ಲಿನ ಪ್ರಜಾತಾಂತ್ರಿಕ ಕಾರ್ಯನಿರ್ವಹಣೆಯಲ್ಲಿ ನಾಗರಿಕರ ಸಕ್ರಿಯ ಪಾಲ್ಗೊಳ್ಳುವಿಕೆಗಾಗಿ ಹೊಸ ದಾರಿಗಳನ್ನು ಹಾಗೂ ಅವಕಾಶಗಳನ್ನು ಹೆಚ್ಚಿಸಲು ಏನನ್ನಾದರೂ ಮಾಡಿದ್ದೇವೆಯೇ? ನಮ್ಮ ಗಣರಾಜ್ಯ ವ್ಯವಸ್ಥೆಯಲ್ಲಿ ‘ಸಂಸ್ಥೆ’ಗಳ ಬಗ್ಗೆ ಗಮನ ಕೇಂದ್ರೀಕರಿಸುವ ನಾವು ಅಧಿಕಾರದಲ್ಲಿರುವವರ ಪ್ರಯತ್ನಗಳ ಫಲಶ್ರುತಿಗಳ ಬಗ್ಗೆ ಅಷ್ಟೇ ಮಟ್ಟದಲ್ಲಿ ಗಮನ ಹರಿಸುತ್ತೇವೆಯೇ?

ಪ್ರಜಾಪ್ರಭುತ್ವದ ಪರಿಕಲ್ಪನೆಯು (ಐಡಿಯಾ) ಜನಮಾನಸಕ್ಕೆ ಮನವರಿಕೆಯಾಗಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಸಿಎಸ್‍ಡಿಎಸ್- ಲೋಕ ನೀತಿ ನಡೆಸಿರುವ ಸಮೀಕ್ಷೆಗಳಲ್ಲಿ ಕಂಡುಬಂದಿರುವಂತೆ, ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿಯೇ ಉಳಿಯು ವುದು ಅಗತ್ಯ ಎಂದು ಸಾರ್ವಜನಿಕರು ನಿರಂತರವಾಗಿ ಅಭಿಪ್ರಾಯಪಡುತ್ತಾ ಬಂದಿದ್ದಾರೆ. ಆದರೆ, ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಯನ್ನು ಮೌಲ್ಯಮಾಪನ ಮಾಡುವಾಗ (ಅವಲೋಕನ ಮಾಡುವಾಗ) ಇಷ್ಟೇ ತೀವ್ರವಾದ ಬೆಂಬಲ ಇಲ್ಲದಿರುವುದನ್ನು ಯಾರಾದರೂ ಗಮನಿಸಬಹುದಾಗಿದೆ. ಹೀಗಾಗಿ, ಇಲ್ಲಿ‘ಪ್ರಜಾಪ್ರಭುತ್ವದ ಪರಿಕಲ್ಪನೆ’ಯು ಬಹಳಷ್ಟು ಪ್ರಬಲವಾಗಿ ನೆಲೆಯೂರಿದ್ದರೂ ‘ಪ್ರಜಾಪ್ರಭುತ್ವದ ಕಾಣ್ಕೆ’ (ಇಮ್ಯಾಜಿ ನೇಷನ್ ಆಫ್ ಡೆಮಾಕ್ರಸಿ) ನಿರೀಕ್ಷೆಯಷ್ಟು ಶಕ್ತಿಯುತ ವಾಗಿಲ್ಲ. ಅಂದರೆ, ಭರವಸೆ ಹಾಗೂ ಕಾರ್ಯಾನುಷ್ಠಾನದ ನಡುವೆ ದೊಡ್ಡ ಕಂದಕ ಇದೆ ಎಂಬುದನ್ನು ಇದು ತೋರಿಸುತ್ತದೆ. ಹಾಗಾದರೆ ನಾವು ‘ಬಂಡಿಗಟ್ಟಲೆ ಭರವಸೆಗಳು’ ಹಾಗೂ ‘ಕಾರ್ಯಾನುಷ್ಠಾನದಲ್ಲಿ ಕೊರತೆ’ಗೆ ಸಾಕ್ಷಿಯಾಗಿರುವ ಗಣರಾಜ್ಯವಾಗಿದ್ದೇವೆಯೇ? ವಿಶೇಷವಾಗಿ ಬಹುತೇಕ ರಾಜ್ಯಗಳಲ್ಲಿ ಮತದಾರರು ಹಿಂದಿನ ಆಡಳಿತಾರೂಢ ಪಕ್ಷವನ್ನು ಪುನಃ ಚುನಾಯಿಸದೇ ಇರುವುದಕ್ಕೆ ಇದೇ ಕಾರಣವಿರಬಹುದೇ?

ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಚರ್ಚೆಗಳನ್ನು ನೋಡಿದರೆ, ನಾವು ಸಮಾಜದಲ್ಲಿ ತೀವ್ರವಾದ ಧ್ರುವೀಕರಣಕ್ಕೆ ಸಾಕ್ಷಿಯಾಗುತ್ತಿದ್ದೇವೆಯೇ ಎಂಬ ಪ್ರಶ್ನೆ ತಲೆದೋರುತ್ತದೆ. ನಾವು, ‘ನಮಗೆಲ್ಲರಿಗೂ’ ಎಂಬ ವಿಶಾಲ ಮನೋಧೋರಣೆಯನ್ನು ಬದಿಗಿಟ್ಟು ಸಂಕುಚಿತ ದೃಷ್ಟಿಯಲ್ಲಿ ‘ನಮಗೆ ಮಾತ್ರ’ ಹಾಗೂ ‘ಅವರು’ ಎಂಬುದರ ಬಗ್ಗೆ ತುಂಬಾ ಗಮನ ಕೊಡುತ್ತಿದ್ದೇವೆಯೇ? ಗಣರಾಜ್ಯದ ಏಕತೆ ಮತ್ತು ಸಮಗ್ರತೆಗೆ ಸಂಪೂರ್ಣ ಬದ್ಧವಾಗಿದ್ದುಕೊಂಡೇ ವೈವಿಧ್ಯವನ್ನು ಗುರುತಿಸುವುದು, ಗೌರವಿಸುವುದು ಹಾಗೂ ಅದನ್ನು ಸಂಭ್ರಮಿಸುವುದು ಮುಖ್ಯವಾಗುತ್ತದೆ. ಆದರೆ ಈಗ ಸಾರ್ವಜನಿಕ ಚರ್ಚೆ ಗಳಲ್ಲಿ ಮನಸ್ಸಿನಲ್ಲಿ ಪೂರ್ವಭಾವಿಯಾಗಿ ಅದಾಗಲೇ ಮಾಡಿಕೊಂಡಿರುವ ತೀರ್ಮಾನವನ್ನು ಸಮರ್ಥಿಸಿಕೊಳ್ಳುವಂತಹ ಧ್ರುವೀಕರಣದ ತೀವ್ರತೆಯ ನಿಲುವು ಗಳೇ ಹೆಚ್ಚಾಗಿ ಕಂಡುಬರುತ್ತಿವೆ. ಜನಸಮುದಾಯಗಳ ನಡುವಿನ ಅಂತರ ಹೆಚ್ಚಾಗುತ್ತಿರುವುದು ಈ ತೀವ್ರ ಧ್ರುವೀಕರಣ ಸ್ಥಿತಿಯ ಕಣ್ಣಿಗೆ ರಾಚುವ ಉಪ-ಉತ್ಪನ್ನವಾಗಿದೆ.

ಭಾರತದ ನಾಗರಿಕರಿಗೆ ಕಳೆದ ಎರಡು ವರ್ಷಗಳು ಅತ್ಯಂತ ಕಷ್ಟದ ದಿನಗಳಾಗಿವೆ. ಕೋವಿಡ್ ಸಾಂಕ್ರಾ ಮಿಕವು ತನ್ನ ಕಬಂಧಬಾಹುವನ್ನು ಎಲ್ಲೆಡೆಗೆ ಚಾಚಿ ಜನರ ದಿನನಿತ್ಯದ ಬದುಕಿನ ಮೇಲೆ ದುಷ್ಪರಿಣಾಮ ಬೀರಿದೆ. ಈ ಎರಡು ವರ್ಷಗಳಲ್ಲಿ ಅದೆಷ್ಟೋ ಜನರ ಬದುಕಿನ ಮಾರ್ಗಗಳು ನಾಟಕೀಯ ಪರಿವರ್ತನೆಗಳನ್ನು ಕಂಡಿವೆ. ಜನರು ತಮ್ಮ ಆದ್ಯತೆಗಳನ್ನು ಪುನರ್
ವ್ಯಾಖ್ಯಾನಿಸಿಕೊಂಡಿದ್ದಾರೆ. ಆರೋಗ್ಯದೆಡೆಗಿನ ಕಾಳಜಿಯು ನಿಚ್ಚಳವಾಗಿ ಕಂಡುಬರುತ್ತಿದೆ. ಕೌಟುಂಬಿಕ ಬಾಂಧವ್ಯ ಮತ್ತು ಭಾವನಾತ್ಮಕ ಬೆಂಬಲದಂತಹ ಸಂಗತಿಗಳಿಗೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ.

ಸಮಾಜದ ಎಲ್ಲಾ ಜನವರ್ಗಗಳಲ್ಲಿ ಆದ್ಯತೆಗಳು ಹಾಗೂ ಜೀವನಶೈಲಿಯಲ್ಲಿ ಬದಲಾವಣೆಯಾಗಿರುವ ಈ ಸಂದರ್ಭದಲ್ಲಿ ಭಾರತದ ಗಣರಾಜ್ಯವು ಹೊಸ ಭವಿಷ್ಯದ ಆಕಾಂಕ್ಷೆಗಳಿಗೆ ಹಾಗೂ ಸವಾಲುಗಳಿಗೆ ಸನ್ನದ್ಧವಾಗುತ್ತಿದೆಯೇ? ಭಾರತದ ಪ್ರಜೆಗಳು ಇಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಇಲ್ಲಿಯವರೆಗೆ ನಂಬಿಕೆ ಇರಿಸಿಕೊಂಡೇ ಬಂದಿದ್ದಾರೆ. ಈ ನಂಬಿಕೆಯೊಂದಿಗೇ ನಾಗರಿಕರು ‘ಪ್ರಜಾ ಪ್ರಭುತ್ವದ ಫಲ’ಕ್ಕಾಗಿ ತಾಳ್ಮೆಯಿಂದ ಕಾಯುತ್ತಿದ್ದಾರೆ; ಆಕಾಂಕ್ಷೆಗಳನ್ನು ಎದುರಿಗಿಟ್ಟುಕೊಂಡು ನೋಡಿದರೆ ಮಾಡಿರುವ ಸಾಧನೆಯಲ್ಲಿ ಹಿಂದೆ ಬಿದ್ದಿದ್ದರೂ ಏಳು ದಶಕಗಳ ಹಿಂದೆ ಗಣರಾಜ್ಯದಲ್ಲಿ ಸ್ಥಾಪನೆಗೊಂಡ ಸಾಂವಿಧಾನಿಕ ವ್ಯವಸ್ಥೆಯು ಭವ್ಯ ಪ್ರಜಾತಾಂತ್ರಿಕ ಭವಿಷ್ಯ ದೊಂದಿಗೆ ‘ನಂಬಿಕೆಯ ಫಲ’ವನ್ನು ಕಂಡೇ ಕಾಣಲಿದೆ ಎಂಬ ಆಶಾಭಾವದೊಂದಿಗೆ ಬದುಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT