ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್: ಒಳಗಿನ ಬಿಕ್ಕಟ್ಟು

ಬಿಜೆಪಿಗೆ ಅರ್ಥಪೂರ್ಣ ಪರ್ಯಾಯ ಕೊಡಲು ಬೇಕಿರುವ ತಂತ್ರಗಾರಿಕೆ, ಹಂಬಲವನ್ನು ಕಾಂಗ್ರೆಸ್ ಕಳೆದುಕೊಂಡಿದೆಯೇ?
Last Updated 27 ಜುಲೈ 2020, 20:56 IST
ಅಕ್ಷರ ಗಾತ್ರ

ಕೆಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಆಳವಾದ ಬಿಕ್ಕಟ್ಟೊಂದು ಸೃಷ್ಟಿಯಾಗಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಕರ್ನಾಟಕದಲ್ಲಿ ಆಗಿರುವುದು ಪಕ್ಷದಲ್ಲಿನ ಆಳವಾದ ಕಾಯಿಲೆಯೊಂದರ ಲಕ್ಷಣಗಳು ಮಾತ್ರ. ಪಕ್ಷದ ಕಾರ್ಯಕರ್ತರಲ್ಲಿ ಮೂಡಿದ ನಿರಾಸೆಯ ಭಾವವನ್ನು ಗಂಭೀರವಾಗಿ ಪರಿಗಣಿಸದೆ ಇರುವ ಧೋರಣೆಯನ್ನು ಪಕ್ಷದ ನಾಯಕತ್ವವು ತಾಳಿದಂತಿದೆ. ರಾಷ್ಟ್ರ ಮಟ್ಟದಲ್ಲಿ ಹಾಗೂ ಹಲವು ರಾಜ್ಯಗಳಲ್ಲಿ ಪಕ್ಷವು ವಿರೋಧ ಪಕ್ಷಗಳ ಸಾಲಿನಲ್ಲಿ ಕುಳಿತುಕೊಳ್ಳಬೇಕಾಗಿ ಬಂದಿರುವುದು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ. ಅಧಿಕಾರದಿಂದ ಹೊರಗೆ ಇದ್ದ ಅನುಭವ ಈ ಪಕ್ಷಕ್ಕೆ ಇಲ್ಲ. ಈ ಪಕ್ಷದ ನಾಯಕರ ವರ್ತನೆಗಳು ಆಳುವ ಪಕ್ಷದವರ ವರ್ತನೆಗಳಂತೆಯೇ ಈಗಲೂ ಇವೆ. ಬಿಜೆಪಿ ಮತ್ತು ಅದರ ನಾಯಕತ್ವವು ‘ಕಾಂಗ್ರೆಸ್‌ಮುಕ್ತ ಭಾರತ’ ನಿರ್ಮಾಣ ಮಾಡುವತನ್ನ ಘೋಷಣೆಯನ್ನು ಮುಂದಕ್ಕೆ ಒಯ್ಯುವ ತೀರ್ಮಾನ ಕೈಗೊಂಡಿರುವಾಗ, ಕಾಂಗ್ರೆಸ್ ನಾಯಕರ ಇಂತಹ ಧೋರಣೆಗಳು ಇನ್ನಷ್ಟು ಬಿಕ್ಕಟ್ಟನ್ನು ಸೃಷ್ಟಿಸುತ್ತವೆ.

ಕಾಂಗ್ರೆಸ್ ಪಕ್ಷವು ತನ್ನನ್ನು ‘ನೂರಾಮೂವತ್ತೈದು ವರ್ಷಗಳಷ್ಟು ಹಳೆಯ ಪಕ್ಷ’ ಎಂದು ಕರೆದುಕೊಳ್ಳುವಲ್ಲಿ ಹೆಮ್ಮೆಪಟ್ಟುಕೊಳ್ಳುತ್ತಿದೆ. 1885ರಲ್ಲಿ ರಚನೆಯಾದ ಪಕ್ಷದ ಗುಣಸ್ವಭಾವಗಳ ವಾರಸುದಾರನೇ 2020ರಲ್ಲಿ ಕಾಣುತ್ತಿರುವ ಕಾಂಗ್ರೆಸ್ ಪಕ್ಷ?ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ತನ್ನ ಉದ್ದೇಶ ಈಡೇರಿದ ನಂತರ ಪಕ್ಷದ ವಿಸರ್ಜನೆ ಆಗಬೇಕು ಎಂದು ಗಾಂಧೀಜಿ ಹೇಳಿದ್ದರು. ಆ ಮಾತು ಪಕ್ಕಕ್ಕಿಡಿ.1969, 1978, 1996, 1999ರಲ್ಲಿ ವಿಭಜನೆ ಕಂಡಿತು. ಅದನ್ನೂ ಪಕ್ಕಕ್ಕೆ ಇರಿಸಿ. ಈಗಿನ ಪಕ್ಷವು, 1990ರ ದಶಕದಲ್ಲಿ ಕಾಣುತ್ತಿದ್ದ ಕಾಂಗ್ರೆಸ್ಸಿನ ದುರ್ಬಲ ಪ್ರತಿಬಿಂಬದಂತಿದೆ. ಒಂದೇ ಪಕ್ಷದ ಪ್ರಾಬಲ್ಯದ ಕಾಲಘಟ್ಟ ಕೊನೆಗೊಂಡು, ಬಹುಪಕ್ಷಗಳ ವ್ಯವಸ್ಥೆ ದೇಶದಲ್ಲಿ ಆರಂಭವಾಗಿದೆ ಎಂಬ ವಾಸ್ತವಕ್ಕೆ ಕಾಂಗ್ರೆಸ್ ಕಿವಿಗೊಟ್ಟಿಲ್ಲ. ಒಂದಕ್ಕೊಂದು ಸಂಬಂಧ ಇರುವ ಮೂರು ಅಂಶಗಳ ಜೊತೆ ಕಾಂಗ್ರೆಸ್ಸಿನ ಈಗಿನ ಬಿಕ್ಕಟ್ಟು ಜೋಡಣೆಯಾಗಿದೆ.

ಪಕ್ಷವು ಎದುರಿಸುತ್ತಿರುವ ನಾಯಕತ್ವದ ಕೊರತೆಯು ಬಿಕ್ಕಟ್ಟಿಗೆ ಕಾರಣವೂ ಹೌದು, ಬಿಕ್ಕಟ್ಟುಗಳ ಪರಿಣಾಮವೂ ಹೌದು ಎಂಬುದರಲ್ಲಿ ಅನುಮಾನವೇ ಇಲ್ಲ. 2019ರ ಚುನಾವಣಾ ಸೋಲಿನ ನಂತರ ರಾಹುಲ್ ಗಾಂಧಿ ಅವರು ನಾಯಕತ್ವದ ಹೊಣೆಯಿಂದ ದೂರ ಸರಿದಾಗ, ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಅವಕಾಶ ಕಾಂಗ್ರೆಸ್ಸಿಗೆ ಇತ್ತು. ವಂಶಪಾರಂಪರ್ಯ ರಾಜಕಾರಣದ ನಂತರದ ಕಾಲಘಟ್ಟದ ನಾಯಕತ್ವವನ್ನು ಕಟ್ಟುವ ಸಮಯ ಅದಾಗಿತ್ತು. ಆದರೆ, ಮಾಡುವ ಕೆಲಸವನ್ನು ಮುಂದಕ್ಕೆ ಹಾಕುತ್ತ ಬಂದ ಪಕ್ಷವು, ಕಠಿಣ ಕ್ರಮಕ್ಕೆ ಮುಂದಾಗಲೇ ಇಲ್ಲ. ನಾಯಕತ್ವವನ್ನು ‘ವಂಶ’ವೇ ತಾತ್ಕಾಲಿಕವಾಗಿ ನಿಭಾಯಿಸಲಿ ಎಂಬ ತೀರ್ಮಾನಕ್ಕೆ ಅದು ಬಂತು. ತಾತ್ಕಾಲಿಕವೆಂಬುದು ಶಾಶ್ವತವಾಗುವ ಸಾಧ್ಯತೆ ಭಾರತದ ರಾಜಕಾರಣದಲ್ಲಿ ಬಹಳ ಇರುತ್ತದೆ ಎಂಬುದನ್ನು ಕಂಡಿದ್ದೇವೆ!

‘ನೆಹರೂ–ಗಾಂಧಿ ಕುಟುಂಬ’ದ ನಾಯಕತ್ವವು ಪಕ್ಷದ ಒಗ್ಗಟ್ಟು ಕಾಪಾಡಿಕೊಳ್ಳಲು ಅಗತ್ಯವೆಂದು ಪಕ್ಷಕ್ಕೆ ಅನಿಸಿದ್ದರೂ, ತಳಮಟ್ಟದಲ್ಲಿನ ಸತ್ಯದ ಮೇಲೆಯೂ ಗಮನ ಹರಿಸಬೇಕಿತ್ತು. ಈ ನಾಯಕತ್ವವು ಪಕ್ಷಕ್ಕೆ ಚುನಾವಣೆಗಳಲ್ಲಿ ಜಯ ತಂದುಕೊಟ್ಟಿಲ್ಲ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಡದಲ್ಲಿನ ಗೆಲುವು ಇದಕ್ಕೆ ಅಪವಾದ ಇರಬಹುದು. ಆದರೆ ಈ ಗೆಲುವುಗಳ ಹಿಂದೆ ಬೇರೆ ಕಾರಣಗಳೂ ಇದ್ದವು. ಎರಡನೆಯ ಹಂತದ ನಾಯಕತ್ವವನ್ನು, ವಿಶೇಷವಾಗಿ ರಾಜ್ಯಗಳ ಮಟ್ಟದಲ್ಲಿ ಬೆಳೆಸುವುದು ಅಗತ್ಯ ಎಂಬುದನ್ನು ಪಕ್ಷದ ನಾಯಕತ್ವ ಅರ್ಥ ಮಾಡಿಕೊಳ್ಳಬೇಕಿತ್ತು. ಈ ನಿಟ್ಟಿನಲ್ಲಿ ಒಂದು ಪ್ರಯತ್ನ ನಡೆಸಿದಂತೆ ಕಾಣುತ್ತದೆಯಾದರೂ, ಅದು ತಾರ್ಕಿಕ ಅಂತ್ಯ ತಲುಪಲಿಲ್ಲ. ರಾಹುಲ್ ಅವರು ಪಕ್ಷದ ಅಧ್ಯಕ್ಷ ಸ್ಥಾನ ತ್ಯಜಿಸಿದ ನಂತರ, ಪಕ್ಷದಲ್ಲಿ ಅವರ ಪಾತ್ರ ಮುಂದೆ ಏನಿರುತ್ತದೆ ಎಂಬ ವಿಚಾರದಲ್ಲಿ ಸ್ಪಷ್ಟತೆ ಇರಲಿಲ್ಲ. ನಾಯಕತ್ವದ ಕೊರತೆಯ ಕಾರಣದಿಂದಾಗಿ ಪಕ್ಷಕ್ಕೆ ಒಂದು ದಿಕ್ಕು ತೋಚುತ್ತಿಲ್ಲ. ಆಡಳಿತಾರೂಢ ಬಿಜೆಪಿಗೆ ಸವಾಲು ಒಡ್ಡಲು ಇದು ಅಡ್ಡಿಯಾಗಿ ನಿಂತಿದೆ.

ಎರಡನೆಯದಾಗಿ, ಪಕ್ಷದಲ್ಲಿನ ತೀರ್ಮಾನ ಕೈಗೊಳ್ಳುವ ಪ್ರಕ್ರಿಯೆಗಳು ಪಕ್ಷದ ಕಾರ್ಯಕರ್ತರ ಭಾವನೆಗಳಿಗೆ ಅಥವಾ ತಳಮಟ್ಟದಲ್ಲಿ ಇರುವ ಅಭಿಪ್ರಾಯಕ್ಕೆ ಸ್ಪಂದಿಸುತ್ತ ಇರುವಂತೆ ಕಾಣುತ್ತಿಲ್ಲ. ಆಲಿಸುವ ಗುಣ ಇರುವ ನಾಯಕರು ಈಚಿನ ವರ್ಷಗಳಲ್ಲಿ ನೇರವಾಗಿ ಚುನಾವಣೆಯಲ್ಲಿ ಗೆದ್ದಿಲ್ಲದಿರುವುದು ಹಾಗೂ ಅವರು ದೆಹಲಿ ದರ್ಬಾರಿಗೆ ಸೀಮಿತವಾಗಿರುವುದು ಇದಕ್ಕೆ ನೇರ ಕಾರಣ. ಹೈಕಮಾಂಡ್ ಸಂಸ್ಕೃತಿಯು ಪ್ರಭಾವಶಾಲಿ ಸ್ಥಾನಗಳವರೆಗೆ ಬಂದು ಕುಳಿತಿದೆ. ನಾಯಕತ್ವಕ್ಕೆ ವಿವರ ನೀಡುವ ಕಲೆಯನ್ನು ಸಿದ್ಧಿಸಿಕೊಂಡಿರುವವರು, ತಳಮಟ್ಟದಲ್ಲಿ ಇರುವ ರಾಜಕೀಯ ವಾಸ್ತವಕ್ಕಿಂತ ಬೇರೆಯದೇ ಆದ ಚಿತ್ರಣವನ್ನು ನೀಡುತ್ತಿದ್ದಾರೆ.

ಬಹುಜನರ ಅಭಿಪ್ರಾಯ ಹಾಗೂ ಸಲಹೆಗಾರರ ದನಿಯ ನಡುವೆ ಬೆಸುಗೆ ಇಲ್ಲದಿರುವ ಕಾರಣಕ್ಕೂ ಪಕ್ಷದಲ್ಲಿ ಈಗಿನ ಬಿಕ್ಕಟ್ಟು ಸೃಷ್ಟಿಯಾಗಿದೆ. ಗುಂಪುಗಾರಿಕೆ ಹೆಚ್ಚಾಗಿದೆ. ಸ್ಥಳೀಯ ನಾಯಕರು ತಮ್ಮ ಸಣ್ಣ ರಾಜಕೀಯ ಕೋಟೆಗಳನ್ನು ಭದ್ರ ಮಾಡಿಕೊಳ್ಳುವಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅವರು ಪಕ್ಷದ ಹಿತಾಸಕ್ತಿಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಅಂದರೆ, ಪಕ್ಷದಲ್ಲಿನ ಅಧಿಕಾರಕ್ಕಾಗಿ ನಡೆಯುತ್ತಿರುವ ಸಂಘರ್ಷವು ವಿವಿಧ ಬಣಗಳ ನಡುವಿನ ತಿಕ್ಕಾಟವೇ ಆಗಿದೆ. ಅದು ಹಳಬರದ್ದಿರಬಹುದು, ಯುವ ನಾಯಕರದ್ದಿರಬಹುದು, ನಿಷ್ಠಾವಂತರು ಎಂದು ಹೇಳಿಕೊಂಡವರದ್ದಿರಬಹುದು, ಹೊಸದಾಗಿ ಬಂದವರದ್ದಿರಬಹುದು ಅಥವಾ ಸೌಲಭ್ಯಗಳನ್ನು ಪಡೆದ ಮೇಲಿನ ಹಂತದ ನಾಯಕರದ್ದೂ ಆಗಿರಬಹುದು.

ಕೊನೆಯಲ್ಲಿ ಇದೊಂದು ಮಾತು ಹೇಳಬೇಕು. ಪಕ್ಷವು ತನ್ನ ದೃಷ್ಟಿ ಯಾವ ಕಡೆಗೆ ಇರಬೇಕು, ತನ್ನ ನಡೆ ಯಾವ ದಿಕ್ಕಿನಲ್ಲಿ ಇರಬೇಕು ಎಂಬುದರ ಮೇಲಿನ ಗಮನವನ್ನೇ ಕಳೆದುಕೊಂಡಂತೆ ಕಾಣುತ್ತಿದೆ. ದಿನಗಳು ಕಳೆದಂತೆಲ್ಲ, ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷದ ಸ್ಥಾನವನ್ನು ರಾಜ್ಯಗಳ ಮಟ್ಟದ ಪಕ್ಷಗಳಿಗೆ ಹಾಗೂ ನಾಯಕರಿಗೆ ಬಿಟ್ಟುಕೊಡುತ್ತಿದೆ. ಬಿಜೆಪಿಗೆ ಇರುವ ಪ್ರಧಾನ ವಿರೋಧ ಪಕ್ಷ ಕಾಂಗ್ರೆಸ್. ಆದರೆ, ಸರ್ಕಾರವನ್ನು ಉತ್ತರದಾಯಿ ಆಗಿಸಲು ಸಿಕ್ಕ ಅವಕಾಶಗಳನ್ನು ಕಾಂಗ್ರೆಸ್ ಕೈಬಿಟ್ಟಿದೆ. ಸಂಸತ್ತಿನ ಒಳಗೆ ಹಾಗೂ ಸಾರ್ವಜನಿಕ ಜೀವನದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರು ಪರಿಸ್ಥಿತಿಗಳಿಗೆ ಪ್ರತಿಕ್ರಿಯೆ ನೀಡುತ್ತ ಇದ್ದಾರೆಯೇ ವಿನಾ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿಲ್ಲ.

ಅವರು ಸರ್ಕಾರವನ್ನು ಎದುರಿಸುವಾಗ ಕೂಡ, ಸರಿಯಾಗಿ ಯೋಜನೆ ಹಾಕಿಕೊಂಡಿರುವುದಿಲ್ಲ, ಪೂರ್ಣ ಮನಸ್ಸಿನಿಂದ ಆ ಕೆಲಸ ಮಾಡುವುದಿಲ್ಲ, ಬದ್ಧತೆ ಇರುವುದಿಲ್ಲ. ಬಹುತೇಕ ಸಂದರ್ಭಗಳಲ್ಲಿ ಗಮನ ಒಂದೇ ಕಡೆ ಕೇಂದ್ರೀಕರಿಸಿ ಕೆಲಸ ಮಾಡುವುದಿಲ್ಲ.

ಕಾಂಗ್ರೆಸ್ ಪಕ್ಷವು ಸರಿಯಾದ ರೀತಿಯಲ್ಲಿ ಸಂಘಟಿತ ಆಗದೆ ಇದ್ದರೆ, ತನ್ನ ಪ್ರಸ್ತುತತೆಯನ್ನು ಗಟ್ಟಿಯಾಗಿ ಹೇಳಿಕೊಳ್ಳುವುದು ಆ ಪಕ್ಷಕ್ಕೇ ಕಷ್ಟವಾಗಲಿದೆ. ಹಾಗೆಯೇ, ಅದು ವಿರೋಧ ಪಕ್ಷ ಎನ್ನುವ ತನ್ನ ಸ್ಥಾನವನ್ನು ರಾಜ್ಯಗಳ ಮಟ್ಟದ ಪಕ್ಷಗಳಿಗೆ ಬಿಟ್ಟುಕೊಡಬೇಕಾಗುತ್ತದೆ. ಬಿಜೆಪಿಗೆ ಅರ್ಥಪೂರ್ಣ ಪರ್ಯಾಯವನ್ನು ಕೊಡಲು ಬೇಕಿರುವ ತಂತ್ರಗಾರಿಕೆ, ಯೋಜನೆ, ರಾಜಕೀಯ ಹಂಬಲ... ಇವುಗಳನ್ನು ಕಾಂಗ್ರೆಸ್ ಕಳೆದುಕೊಂಡಿರುವಂತೆ ಕಾಣುತ್ತಿದೆ. ರಾಜಕೀಯದ ದಂಡವನ್ನು ಅದು ಬೇರೆ ಪಕ್ಷಗಳಿಗೆ ಹಸ್ತಾಂತರ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT