ಶನಿವಾರ, ಜೂನ್ 6, 2020
27 °C
ಇವರಿಗೆ ಮನೆ ಎನ್ನುವ ಜಾಗ ಇರಲಿಲ್ಲ, ತಮ್ಮನ್ನು ಒಳಗೆ ಬಚ್ಚಿಟ್ಟುಕೊಳ್ಳುವ ಆಯ್ಕೆಯೂ ಇರಲಿಲ್ಲ

ಒಗ್ಗೂಡಿಯೂ ಭಿನ್ನವಾಗಿಯೇ ಇರುವ ಸ್ಥಿತಿ!

ಪ್ರೊ. ಸಂದೀಪ್ ಶಾಸ್ತ್ರಿ Updated:

ಅಕ್ಷರ ಗಾತ್ರ : | |

Prajavani

ಇಂದಿನ ‘ಜನರಾಜಕಾರಣ’ ಅಂಕಣವು ಭಿನ್ನ ದಾರಿಯನ್ನು ಹಿಡಿದಿದೆ. ಕೋವಿಡ್–19 ಸಾಂಕ್ರಾಮಿಕ ಕಾಯಿಲೆ ಹಾಗೂ ಹಿಂದೆಂದೂ ಕಾಣದಂತಹ ಲಾಕ್‌ಡೌನ್‌ ಕಾರಣದಿಂದಾಗಿ ರಾಜಕೀಯ ಮತ್ತು ಸಮಾಜದ ಮೇಲೆ ಭಿನ್ನ ನೋಟ– ಅಂದರೆ, ಜನಸಾಮಾನ್ಯನ ನೋಟ ಹರಿಸಬೇಕಾದ ಅನಿವಾರ್ಯ ಎದುರಾಗಿದೆ. ಈಗ ಎದುರಾಗಿರುವ ಅಸಾಮಾನ್ಯ, ಅಸದೃಶ ಆರೋಗ್ಯ ಬಿಕ್ಕಟ್ಟನ್ನು ಎದುರಿಸುವಲ್ಲಿ ಅಪಾರ ಧೈರ್ಯ ತೋರಿದ ಸಾಮಾನ್ಯ ಭಾರತೀಯನಿಗೆ ಇಂದಿನ ಈ ಅಂಕಣ ಅರ್ಪಣೆ.

ಕೋವಿಡ್‌–19 ಬಿಕ್ಕಟ್ಟು ಹತ್ತು ಹಲವು ವಿಚಾರಗಳ ಬಗ್ಗೆ ಚರ್ಚೆಯಾಗುವಂತೆ ಮಾಡಿದೆ. ಸಾರ್ವಜನಿಕರ ನಡುವೆ ಚಲಾವಣೆಯಲ್ಲಿ ಇರುವ ಮಾತುಗಳ ಬಗ್ಗೆ ಹೇಳುವುದಾದರೆ; ವೈರಾಣು ಹರಡುವುದನ್ನು ತಡೆಯುವ, ಅದರ ದುಷ್ಪರಿಣಾಮಗಳನ್ನು ಮಿತಿಗೊಳಿಸುವ ಹೋರಾಟದಲ್ಲಿ ನಾವೆಲ್ಲ ಒಂದಾಗಿರಬೇಕಾದ ಅಗತ್ಯದ ಬಗ್ಗೆ ಇದು ಗಮನ ಸೆಳೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮತ್ತೆ ಮತ್ತೆ ಮಾತನಾಡಿದಾಗಲೆಲ್ಲ, ಜನ ಸಂಪೂರ್ಣ ಬೆಂಬಲ ನೀಡಬೇಕು ಎಂದು ಕೇಳಿಕೊಂಡಿದ್ದಾರೆ. ಈ ಪರಿಸ್ಥಿತಿಯಲ್ಲಿ ಜನ ತೋರಿದ ಸ್ಪಂದನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲಾಕ್‌ಡೌನ್‌ ಮನವಿಯನ್ನು ಹಾಗೂ ಲಾಕ್‌ಡೌನ್‌ ಅವಧಿಯಲ್ಲಿ ಬರುವ ಸವಾಲುಗಳನ್ನು ಜನ ಒಪ್ಪಿಕೊಳ್ಳುವಂತೆ ಮಾಡುವಲ್ಲಿ ‘ಮಾತಿನ ಮೋಡಿಗಾರ’ ಪ್ರಧಾನಿಯವರು ಯಶಸ್ಸು ಕಂಡಿದ್ದಾರೆ. ಈ ಬಿಕ್ಕಟ್ಟು ನಮ್ಮನ್ನು ಗಮನಾರ್ಹವಾಗಿ ಒಗ್ಗೂಡಿಸಿದೆ. ಆದರೆ, ದೇಶದ ವಾಸ್ತವವನ್ನು ಬಿಂಬಿಸುವ, ತೀಕ್ಷ್ಣವಾದ ಸಾಮಾಜಿಕ ಭಿನ್ನತೆಗಳನ್ನು ಕೂಡ ಇದು ತೋರಿಸಿಕೊಟ್ಟಿದೆ.

ನಮ್ಮ ದೃಷ್ಟಿಕೋನದಲ್ಲಿಯೇ ಇರುವ ಭಿನ್ನತೆಯನ್ನು ತೋರಿಸುವ ಒಂದು ಉದಾಹರಣೆ ಇಲ್ಲಿದೆ. ಲಾಕ್‌ಡೌನ್‌ ಅವಧಿ ಇನ್ನೂ ಕೆಲವು ವಾರಗಳಮಟ್ಟಿಗೆ ವಿಸ್ತರಣೆ ಆಗುತ್ತದೆ ಎಂದು ಪ್ರಧಾನಿಯವರು ಏಪ್ರಿಲ್‌ 14ರಂದು ಪ್ರಕಟಿಸಿದರು. ಆಗ ಮುಂಬೈನಲ್ಲಿ ನಡೆದ ಒಂದು ಘಟನೆ ವಿಶ್ವದ ಗಮನ ಸೆಳೆಯಿತು. ರೈಲು ಸಂಚಾರ ಇದೆ ಎಂಬ ನಂಬಿಕೆಯಿಂದ ಬಾಂದ್ರಾ ರೈಲು ನಿಲ್ದಾಣದಲ್ಲಿ ಸಹಸ್ರಾರು ಜನ ಅಂದು ಸೇರಿದ್ದಕ್ಕೆ ಇತರರು ಹೇಗೆ ಪ್ರತಿಕ್ರಿಯಿಸಿದರು? ಇದಕ್ಕೆ ತಕ್ಷಣ ವ್ಯಕ್ತವಾದ ಪ್ರತಿಕ್ರಿಯೆ ಎರಡು ರೀತಿಯಲ್ಲಿತ್ತು: ಮೊದಲನೆಯದು, ‘ಅಂತರ ಕಾಯ್ದುಕೊಳ್ಳುವ’ ನಿಯಮವನ್ನು ಗಾಳಿಗೆ ತೂರಿ ಅಷ್ಟೊಂದು ಜನ ಅಲ್ಲಿ ಸೇರಿದ್ದಕ್ಕೆ ಆಘಾತ ಮತ್ತು ಸಿಟ್ಟು.

ಎರಡನೆಯದು, ರೈಲುಗಳು ಮತ್ತೆ ಸಂಚಾರ ಆರಂಭಿಸಿವೆ ಎನ್ನುವ ಗಾಳಿಸುದ್ದಿ ಕೇಳಿ ಅಷ್ಟೊಂದು ಜನ ನಿಲ್ದಾಣಕ್ಕೆ ಬಂದಿದ್ದಾರೆ ಎಂದಾದರೆ, ಅವರು ಎದುರಿಸುತ್ತಿರುವ ಸಮಸ್ಯೆಗಳು ಏನಿರಬಹುದು ಎಂಬ ಬಗ್ಗೆ ಮೌನ ಅವಲೋಕನ. ತಮ್ಮ ಊರುಗಳಿಗೆ ಮರಳಲು ಜನ (ಅವರಲ್ಲಿ ವಲಸೆ ಕಾರ್ಮಿಕರೇ ಹೆಚ್ಚಿದ್ದರು) ಅಷ್ಟೊಂದು ಆತುರದಲ್ಲಿ ನಿಲ್ದಾಣಕ್ಕೆ ಧಾವಿಸಿದ್ದೇಕೆ? ಅನುಭವಕ್ಕೆ ಬರಬಹುದಾದ ಇತರ ಕೆಲವು
ಪ್ರತಿಕ್ರಿಯೆಗಳೂ ಆಗ ಇದ್ದವು.

ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲಿಲ್ಲ ಎಂದು ಅಲ್ಲಿನ ಸಮ್ಮಿಶ್ರ ಸರ್ಕಾರವನ್ನು ದೂಷಿಸಿದ್ದು; ಸರಿಯಾಗಿ ಕೆಲಸ ಮಾಡಲಿಲ್ಲ ಎಂದು ರಾಜಕೀಯ ನಾಯಕತ್ವವನ್ನು ಟೀಕಿಸಿದ್ದು; ಅಷ್ಟು ಚಿಕ್ಕ ಅವಧಿಯಲ್ಲಿ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನ ಅಲ್ಲಿ ಸೇರುತ್ತಾರೆ ಎಂಬುದನ್ನು ಗುಪ್ತದಳ ಗ್ರಹಿಸಲಿಲ್ಲ ಎಂದು ಅದರ ವೈಫಲ್ಯದ ಮೇಲೆ ಗಮನ ನೀಡುವುದು; ರೈಲು ಸಂಚಾರ ಪುನರಾರಂಭದ ಬಗ್ಗೆ ಸುಳ್ಳು ಸುದ್ದಿ ಹರಡಿದ್ದವು ಎಂದು ಕೆಲವು ಎಲೆಕ್ಟ್ರಾನಿಕ್‌ ವಾಹಿನಿಗಳನ್ನು ಹೊಣೆ ಮಾಡುವುದು... ಇವೆಲ್ಲ ಆಗ ವ್ಯಕ್ತವಾದ ಕೆಲವು ಪ್ರತಿಕ್ರಿಯೆಗಳಾಗಿದ್ದವು. ಆದರೆ, ಜನರ ನಡುವೆ ವ್ಯಕ್ತವಾದ ‘ಮೊದಲನೆಯ’ ಹಾಗೂ ‘ಎರಡನೆಯ’ ಪ್ರತಿಕ್ರಿಯೆಗಳು ಗಮನ ಸೆಳೆಯುವಂಥವು.

ಈ ಎರಡು ಭಿನ್ನ ಪ್ರತಿಕ್ರಿಯೆಗಳನ್ನು ವಿವರಿಸುವುದು ಹೇಗೆ? ಕಾಲ ಸರಿದಂತೆಲ್ಲ ನಮ್ಮ ಸಮಾಜ ಧ್ರುವೀಕೃತಗೊಂಡಿದೆ. ಆ ಧ್ರುವೀಕರಣವು ಕೋವಿಡ್–19 ಬಿಕ್ಕಟ್ಟು ಹಾಗೂ ಅದರ ಪರಿಣಾಮಗಳ ಕಾರಣದಿಂದಾಗಿ ಹೆಚ್ಚು ಸ್ಪಷ್ಟವಾಗಿ, ಎದ್ದು ಕಾಣುವಂತೆ ಗೋಚರವಾಗುತ್ತಿದೆ. ಅಷ್ಟೊಂದು ಜನ ಅಲ್ಲಿ ಸೇರಿದ್ದನ್ನು ಕಂಡು ಕೋಪಗೊಂಡವರು, ಗಾಬರಿಗೊಂಡವರು ‘ಮಧ್ಯಮ ವರ್ಗದ್ದು ಮತ್ತು ಮೇಲ್ವರ್ಗದ್ದು’ ಎನ್ನಬಹುದಾದ
ಸಂವೇದನೆಗಳನ್ನು ತೋರಿಸಿದ್ದರು ಎಂದು ಹೇಳಬಹುದು.

ಮನೆಯಲ್ಲೇ ಇರಬೇಕು ಎಂಬುದನ್ನು ಕರ್ತವ್ಯದಂತೆ ಪಾಲಿಸಿ, ಸಂಬಂಧಪಟ್ಟ ಅಧಿಕಾರಿಗಳು ರೂಪಿಸಿದ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಿದ ಈ ವರ್ಗವು, ಎಚ್ಚರಿಕೆಯ ಮಾತುಗಳನ್ನೆಲ್ಲ ಗಾಳಿಗೆ ತೂರಿ ದೊಡ್ಡ ಸಂಖ್ಯೆಯಲ್ಲಿ ಗುಂಪುಗೂಡುವ ಜನ ದೇಶದಲ್ಲಿ ಇದ್ದಾರೆ ಎಂಬುದನ್ನು ಕಂಡು ಆಘಾತಕ್ಕೆ ಒಳಗಾಗಿತ್ತು. ಇಂತಹ ಸಾಂಕ್ರಾಮಿಕಗಳ ಸಂದರ್ಭದಲ್ಲಿ ಶಿಸ್ತು ಮತ್ತು ಸ್ವಯಂ ನಿಯಂತ್ರಣವನ್ನು ಪಾಲಿಸಬೇಕು ಎಂದು ಈ ವರ್ಗದ ಜನ ಭಾವಿಸಿದ್ದರು. ಈ ವರ್ಗದ ಜನರಿಗೆ ತಮ್ಮದೇ ಆದ ವಾಸಸ್ಥಳ ಎಂಬುದೊಂದು (ಅದನ್ನು ಮನೆ ಎಂದು ಕರೆಯಬಹುದು) ಇತ್ತು, ಕೆಲವು ಸಮಸ್ಯೆಗಳನ್ನು ಎದುರಿಸಿದರೂ ಲಾಕ್‌ಡೌನ್‌ ಎನ್ನುವ ಸಂಕಷ್ಟದ ಪರಿಸ್ಥಿತಿಯನ್ನು ದಾಟಲು ಬೇಕಿರುವ ಸಂಪನ್ಮೂಲ ಹಾಗೂ ಶಕ್ತಿ ಇತ್ತು.

ದೊಡ್ಡ ಸಂಖ್ಯೆಯಲ್ಲಿ ಒಂದೆಡೆ ಸೇರುವ ಮುನ್ನ ಎರಡು ಬಾರಿ ಆಲೋಚನೆಯನ್ನು ಕೂಡ ಮಾಡಿರದ ಜನ ಇದ್ದಾರೆ ಎನ್ನುವುದನ್ನು ಕಂಡು ಮಧ್ಯಮ ಹಾಗೂ ಮೇಲ್ವರ್ಗದ ಈ ಜನ ಆಘಾತಕ್ಕೆ ಒಳಗಾಗಿದ್ದರು. ಇದೇ ‘ಮಧ್ಯಮ ಹಾಗೂ ಮೇಲ್ವರ್ಗಕ್ಕೆ’ ಸೇರಿದ್ದರೂ, ನೆಲದ ಮಾತಿಗೆ ಕಿವಿಗೊಡುವ ಶಕ್ತಿ ಇರುವ ಕೆಲವರು ಖಂಡಿತ ಇದ್ದಿರಬಹುದು. ಇವರಿಗೆ ದೇಶದ ವಾಸ್ತವಗಳ ಕುರಿತು ಸಂವೇದನೆ ಇದ್ದಿರಬಹುದು. ಜನ ಹೀಗೆ ಸೇರಿದ್ದನ್ನು ಕಂಡು ಇವರಲ್ಲಿ ಕಳವಳ ಮೂಡಿದ್ದರೂ, ಅದಕ್ಕೆ ಪ್ರತಿಯಾಗಿ ಒಂದು ಪ್ರಶ್ನೆಯನ್ನು ಕೂಡ ಕೇಳಿದ್ದರು. ‘ಪ್ರತಿನಿತ್ಯವೂ ಜೀವ ಉಳಿಸಿಕೊಳ್ಳಬೇಕು ಎಂಬ ನಿಟ್ಟಿನಿಂದ ನೋಡಿದಾಗ, ಲಾಕ್‌ಡೌನ್‌ ಅವಧಿಯು ಈ ಜನರಿಗೆ ಎಷ್ಟು ಕಷ್ಟವಾಗಿದ್ದಿರಬಹುದು? ತಮ್ಮ ಊರುಗಳಿಗೆ, ಗ್ರಾಮಗಳಿಗೆ ಮರಳಬೇಕು ಎಂದು ಇವರು ರೈಲು ನಿಲ್ದಾಣಕ್ಕೆ ಇಷ್ಟೊಂದು ಧಾವಂತದಲ್ಲಿ ಬಂದರಲ್ಲ’ ಎನ್ನುವ ಪ್ರಶ್ನೆಯನ್ನು ಇವರು ಎತ್ತಿದ್ದರು.

ಆರ್ಥಿಕವಾಗಿ ತೀರಾ ಕೆಳಗಿನ ಹಂತದಲ್ಲಿ ಇರುವವರೇ ಲಾಕ್‌ಡೌನ್‌ನಿಂದಾಗಿ ಅತ್ಯಂತ ಹೆಚ್ಚು ಏಟು ತಿನ್ನುವವರು (ಅಲ್ಪಾವಧಿಯಲ್ಲಿ ಹಾಗೂ ದೀರ್ಘಾವಧಿಯಲ್ಲಿ) ಕೂಡ ಆಗಿರುತ್ತಾರೆ ಎಂದು ಹಲವರು ಈಗಾಗಲೇ ಹೇಳುತ್ತಿದ್ದಾರೆ. ಆರ್ಥಿಕವಾಗಿ ತೀರಾ ಕೆಳಹಂತದಲ್ಲಿ ಇರುವವರು ಲಾಕ್‌ಡೌನ್‌ ಕಾರಣದಿಂದಾಗಿ ತಮ್ಮ ಉದ್ಯೋಗವನ್ನು ತಕ್ಷಣಕ್ಕೆ ಕಳೆದುಕೊಂಡು, ಜೀವನೋಪಾಯವನ್ನೂ ಇಲ್ಲವಾಗಿಸಿಕೊಂಡರು. ಇವರ ಬಳಿ ಇದ್ದ ಸಂಪನ್ಮೂಲಗಳು ತೀರಾ ಸೀಮಿತವಾಗಿದ್ದವು. ನಾಳಿನ ಬಗ್ಗೆ ಮಾತ್ರ ಚಿಂತೆ ಇದ್ದಿದ್ದಲ್ಲ ಇವರಿಗೆ, ಈ ದಿನವನ್ನು ಕಳೆಯುವುದು ಹೇಗೆ ಎನ್ನುವ ಚಿಂತೆಯೂ ಇವರಲ್ಲಿ ಇತ್ತು. ಇವರಿಗೆ ತಮ್ಮದೇ ಆದ ಮನೆ ಎನ್ನುವ ಜಾಗ ಇರಲಿಲ್ಲ. ಹಾಗಾಗಿ, ತಮ್ಮನ್ನು ಒಳಗೆ ಬಚ್ಚಿಟ್ಟು
ಕೊಳ್ಳುವ ಆಯ್ಕೆಯೇ ಇವರಿಗೆ ಇರಲಿಲ್ಲ.

ಬಾಂದ್ರಾ ನಿಲ್ದಾಣದಲ್ಲಿ ಸೇರಿದ್ದ ಜನರ ಮುಖದಲ್ಲಿ ಗಾಢವಾಗಿ ತೋರುತ್ತಿದ್ದ ಆತಂಕವನ್ನೂ ನಿರಾಸೆಯನ್ನೂ ಕೆಲವರು ಗುರುತಿಸಿದ್ದಾರೆ. ಕೋವಿಡ್–19 ಸಾಂಕ್ರಾಮಿಕ ಮತ್ತು ಅದರ ತಕ್ಷಣದ ಪರಿಣಾಮಗಳು ನಮ್ಮಲ್ಲಿ ಇರುವ ಎರಡು ಬಗೆಯ ಭಾರತಗಳತ್ತ ಬೊಟ್ಟು ಮಾಡಿ ತೋರುತ್ತಿವೆ. ಸಮಾಜವು ಎರಡು ಧ್ರುವಗಳ ನಡುವೆ ಹಂಚಿಹೋಗಿರುವುದು ಅತ್ಯಂತ ಸ್ಪಷ್ಟವಾಗಿ ಕಾಣಿಸುತ್ತಿದೆ. ಒಗ್ಗಟ್ಟಿನ ಮೂಲಕ ಈ ಬಿಕ್ಕಟ್ಟಿನ ಬಿಗಿಹಿಡಿತದಿಂದ ತಪ್ಪಿಸಿಕೊಳ್ಳಲು ಹಾತೊರೆಯುತ್ತಿರುವ ಸಮಾಜವನ್ನು ಒಂದಾಗಿಸಲು ಇರುವ ನಿಜವಾದ ಅಡ್ಡಿ ಇದೇ ಆಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು