ಶನಿವಾರ, ಅಕ್ಟೋಬರ್ 31, 2020
27 °C
ಸಮಾಲೋಚನೆಯ ಸಂಸ್ಕೃತಿ ಇಲ್ಲದಿದ್ದರೆ ರಾಜಕೀಯ ಭಿನ್ನಾಭಿಪ್ರಾಯಗಳು ಮುನ್ನೆಲೆಗೆ ಬರುತ್ತವೆ

ಒಕ್ಕೂಟ ನ್ಯಾಯಪಾಲನೆ ಅಂದರೆ...

ಪ್ರೊ. ಸಂದೀಪ್ ಶಾಸ್ತ್ರಿ Updated:

ಅಕ್ಷರ ಗಾತ್ರ : | |

Prajavani

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ ಇತ್ತೀಚಿನ ಕೆಲವು ಬೆಳವಣಿಗೆಗಳು, ದೇಶದ ಒಕ್ಕೂಟ ವ್ಯವಸ್ಥೆ ಕುರಿತ ಚರ್ಚೆಯನ್ನು ಮತ್ತೊಮ್ಮೆ ಕೇಂದ್ರಸ್ಥಾನಕ್ಕೆ ತಂದಿರಿಸಿವೆ. ಎರಡು ಹಂತಗಳಲ್ಲಿನ ಸರ್ಕಾರಗಳ ನಡುವೆ ಪರಿಣಾಮಕಾರಿ ಸಮನ್ವಯ ಹಾಗೂ ಸೌಹಾರ್ದ ಸಹಕಾರ ಸಂಬಂಧವು ಒಕ್ಕೂಟ ವ್ಯವಸ್ಥೆಯೆಂಬ ಪರಿಕಲ್ಪನೆಯ ಆತ್ಮ ಇದ್ದಂತೆ. ರಾಜ್ಯಪಾಲರ ಕಚೇರಿ (ಅಂದರೆ ರಾಜಭವನ), ಕೋವಿಡ್–19 ಸಾಂಕ್ರಾಮಿಕವನ್ನು ದೇಶವು ನಿಭಾಯಿಸಿದ ಬಗೆ, ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಕೃಷಿ ವಲಯಕ್ಕೆ ಸಂಬಂಧಿಸಿದ ಹೊಸ ಕಾನೂನುಗಳಿಗೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಗಳನ್ನು ಗಮನಿಸಿದಾಗ, ಕೇಂದ್ರ–ರಾಜ್ಯಗಳ ನಡುವಿನ ಸಂಬಂಧಕ್ಕೆ ಎದುರಾಗಿರುವ ಸವಾಲುಗಳ ಬಗ್ಗೆ ಒಳನೋಟವೊಂದು ಸಿಗುತ್ತದೆ.


ಸಂದೀಪ್ ಶಾಸ್ತ್ರಿ

ಸ್ವಾತಂತ್ರ್ಯ ದೊರೆತ ಸಂದರ್ಭದಿಂದಲೂ ರಾಜಭವನದ ಬಗ್ಗೆ ಚರ್ಚೆಗಳು ನಡೆದಿವೆ. ಕೇಂದ್ರದಲ್ಲಿ ಯಾವ ಪಕ್ಷ ಸರ್ಕಾರವನ್ನು ಮುನ್ನಡೆಸುತ್ತಿದ್ದರೂ ರಾಜ್ಯಪಾಲರನ್ನು ರಾಜ್ಯಗಳ ಮಟ್ಟದಲ್ಲಿ ಕೇಂದ್ರದ ಪ್ರತಿನಿಧಿಯಾಗಿಯೇ ಕಾಣಲಾಗುತ್ತಿದೆ. ರಾಜ್ಯಪಾಲರ ಕಚೇರಿಗೆ ಸಂಬಂಧಿಸಿದ ವಿವಾದಗಳು ಎರಡು ಅಂಶಗಳ ಜೊತೆ ಜೋಡಣೆ ಆಗಿರುತ್ತವೆ: ಒಂದು, ರಾಜ್ಯಪಾಲರಾಗಿ ನೇಮಕಗೊಂಡವರ ಪೂರ್ವಾಪರ, ಎರಡನೆಯದು, ಅವರನ್ನು ನೇಮಕ ಮಾಡಿದ ಬಗೆ. ರಾಜಕಾರಣದಲ್ಲಿ ತೊಡಗಿಕೊಂಡವರನ್ನು ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ರಾಜ್ಯಪಾಲರನ್ನಾಗಿ ನೇಮಕ ಮಾಡುವುದಿಲ್ಲ ಎಂಬ ಭರವಸೆಯನ್ನು (ಪಂಡಿತ್ ಜವಾಹರಲಾಲ್ ನೆಹರೂ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಅವರಂತಹ) ನಾಯಕರು ಸಂವಿಧಾನ ರೂಪಿಸುತ್ತಿದ್ದ ಸಂದರ್ಭದಲ್ಲಿ ನೀಡಿದ್ದರು. ಆದರೆ, ಈ ಭರವಸೆಯನ್ನು ಕೇಂದ್ರದಲ್ಲಿ ಅಧಿಕಾರ ಹಿಡಿದ ಎಲ್ಲ ಪಕ್ಷಗಳೂ ಹುಸಿಗೊಳಿಸಿವೆ. ಭಾರತವು ಒಂದೇ ರಾಜಕೀಯ ಪಕ್ಷದ ಪಾರಮ್ಯವನ್ನು ಕಂಡ 1989ಕ್ಕಿಂತ ಮೊದಲಿನ ಅವಧಿಯಲ್ಲಿ ರಾಜ್ಯಪಾಲರಾಗಿ ನೇಮಕಗೊಂಡ ಬಹುತೇಕರು ನಿವೃತ್ತ ಅಥವಾ ಸೋಲುಂಡ ರಾಜಕಾರಣಿಗಳಾಗಿದ್ದರು ಅಥವಾ ನಿವೃತ್ತ (ನಿಷ್ಠಾವಂತ) ಅಧಿಕಾರಿಗಳಾಗಿದ್ದರು. ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ನಿಷ್ಠೆ ಬದಲಿಸಿದವರೂ ಈ ಪೈಕಿ ಇದ್ದರು.

1989ರಿಂದ 2015ರ ನಡುವಿನ ಅವಧಿಯಲ್ಲಿ ರಾಜ್ಯಪಾಲರಾಗಿ ನೇಮಕಗೊಂಡ 263 ಜನರಲ್ಲಿ ಶೇಕಡ 63ರಷ್ಟು ಮಂದಿ ಮಾಜಿ ರಾಜಕಾರಣಿಗಳು ಎಂಬುದನ್ನು ಇತ್ತೀಚೆಗೆ ನಡೆದ ಅಧ್ಯಯನವೊಂದು ಕಂಡುಕೊಂಡಿದೆ. ಇನ್ನುಳಿದ ಶೇಕಡ 34ರಷ್ಟು ಮಂದಿ ನಿವೃತ್ತ ಅಧಿಕಾರಿಗಳು ಅಥವಾ ನಿವೃತ್ತ ಮಿಲಿಟರಿ ಅಧಿಕಾರಿಗಳು. 2015ರ ನಂತರವೂ ಇದೇ ಪರಿಸ್ಥಿತಿ ಮುಂದುವರಿದಿದೆ. ರಾಜ್ಯಪಾಲರಾಗಿ ನೇಮಕ ಮಾಡುವ ಮೊದಲು ರಾಜ್ಯಗಳ ಜೊತೆ ಸಮಾಲೋಚನೆ ಕೂಡ ಇರುವುದಿಲ್ಲ. ಆದರೆ, ಸಮಾಲೋಚನೆ ನಡೆಸುವ ಸಂಪ್ರದಾಯ ಇಟ್ಟುಕೊಳ್ಳಲಾಗುತ್ತದೆ ಎಂಬ ಆಶ್ವಾಸನೆಯನ್ನು ಸಂವಿಧಾನ ರಚನಾ ಸಭೆಗೆ ನೀಡಲಾಗಿತ್ತು. ಅದನ್ನು ಹುಸಿಗೊಳಿಸಿದ್ದೇ ಹೆಚ್ಚು. ಇವೆಲ್ಲದರ ಪರಿಣಾಮವಾಗಿ ರಾಜಭವನಗಳು ಹಲವು ವಿವಾದಗಳಿಗೆ ಗುರಿಯಾಗಿವೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳು ಆಡಳಿತದಲ್ಲಿ ಇದ್ದಾಗ ಇವು ಸಂಘರ್ಷದ ವೇದಿಕೆಗಳೂ ಆಗಿರುತ್ತವೆ.

ಕೇಂದ್ರ ಮತ್ತು ರಾಜ್ಯಗಳ ನಡುವೆ ಉತ್ತಮ ಸಮನ್ವಯ ಹಾಗೂ ಸಮಾಲೋಚನೆಯ ಅಗತ್ಯವಿದೆ ಎಂಬುದನ್ನು ಸಾಂಕ್ರಾಮಿಕಕ್ಕೆ ಸರ್ಕಾರ ಕೊಟ್ಟ ಪ್ರತಿಕ್ರಿಯೆಯು ತೋರಿಸಿದೆ. ಲಾಕ್‌ಡೌನ್‌ ಜಾರಿಗೊಳಿಸುವ ತೀರ್ಮಾನವನ್ನು ತೆಗೆದುಕೊಂಡಾಗ ರಾಜ್ಯಗಳಿಗೂ ಆಘಾತವಾಗಿತ್ತು. ಲಾಕ್‌ಡೌನ್‌ಗೆ ಸಿದ್ಧತೆ ಮಾಡಿಕೊಳ್ಳಲು ಹೆಚ್ಚು ಸಮಯವಿರಲಿಲ್ಲ. ಇದರಿಂದಾಗಿ ಬಹಳಷ್ಟು ಗೊಂದಲಗಳು, ವಿವಾದಗಳು ಮೂಡಿದವು. ನಂತರ, ಲಾಕ್‌ಡೌನ್‌ ವಿಸ್ತರಿಸುವಾಗಲೆಲ್ಲ ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ನಡುವೆ ಸಮಾಲೋಚನೆ ಆಗುತ್ತಿತ್ತು. ಹೀಗಿದ್ದರೂ, ಅಂತರ್‌ರಾಜ್ಯ ಸಂಚಾರ ಒಳಗೊಂಡಂತೆ ಕೆಲವು ವಿಚಾರಗಳಲ್ಲಿ ರಾಜ್ಯಗಳು ಕೈಗೊಳ್ಳುತ್ತಿದ್ದ ಕ್ರಮಗಳ ವಿಚಾರವಾಗಿ ಗಂಭೀರ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿದ್ದವು. ಸಮಾಲೋಚನೆಯ ಸಂಸ್ಕೃತಿಗೆ ಒತ್ತು ನೀಡಿದ್ದಿದ್ದರೆ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವಲ್ಲಿ, ಸಂಘರ್ಷ ತಿಳಿಗೊಳಿಸುವಲ್ಲಿ ನೆರವಾಗುತ್ತಿತ್ತು.

ರಾಷ್ಟ್ರೀಯ ಶಿಕ್ಷಣ ನೀತಿ– 2020ನ್ನು ಅಂಗೀಕರಿಸಿರುವುದಾಗಿ ಕೇಂದ್ರವು ಘೋಷಿಸಿದ ನಂತರ ಅದರ ಬಗ್ಗೆ ಬಹಳಷ್ಟು ಚರ್ಚೆಗಳು ಆಗಿವೆ. ಶಿಕ್ಷಣವು ಕೇಂದ್ರ–ರಾಜ್ಯಗಳ ಸಮವರ್ತಿ ಪಟ್ಟಿಯಲ್ಲಿದೆ. ಸಮವರ್ತಿ ಪಟ್ಟಿಯಲ್ಲಿರುವ ವಿಚಾರಗಳು ಕೇಂದ್ರ ಹಾಗೂ ರಾಜ್ಯಗಳೆರಡರ ವ್ಯಾಪ್ತಿಗೂ ಬರುತ್ತವೆ. ಇಂತಹ ವಿಚಾರಗಳಲ್ಲಿ ಕೇಂದ್ರ ಒಂದು ಹೆಜ್ಜೆ ಮುಂದಿರಿಸಿದೆ ಅಂದರೆ, ಅದು ರಾಜ್ಯಗಳ ಜೊತೆ ಸಮಾಲೋಚಿಸಿ ಮುಂದಡಿ ಇರಿಸಿದೆ ಎಂಬ ನಂಬಿಕೆ ಇರುತ್ತದೆ. ಆದರೆ, ಶಿಕ್ಷಣ ನೀತಿ ರೂಪಿಸುವಾಗ ಈ ಅಧಿಕೃತ ಪ್ರಕ್ರಿಯೆಯನ್ನು ನಡೆಸಿದಂತಿಲ್ಲ. ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಪ್ರಮುಖ ಶಿಫಾರಸುಗಳನ್ನು ನೀತಿ ಮಾಡಿದೆಯಾದರೂ, ರಾಜ್ಯಗಳ ಜೊತೆಗಿನ ಅರ್ಥಪೂರ್ಣ ಸಮಾಲೋಚನೆಯ ಕೊರತೆಯ ಪರಿಣಾಮವಾಗಿ ನೀತಿಯ ಪೂರ್ಣ ಅನುಷ್ಠಾನಕ್ಕೆ ತೊಡಕು ಉಂಟಾಗಬಹುದು.

ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಿದ ಸಮಿತಿಯಲ್ಲಿ ದೇಶದ ಮಹಾನ್ ಮೇಧಾವಿಗಳು ಇದ್ದರು. ಆದರೆ, ರಾಜ್ಯಗಳಿಗೆ ಪ್ರಾತಿನಿಧ್ಯವೇ ಇರದಂತೆ ಕೇಂದ್ರವೇ ಎಲ್ಲ ಸದಸ್ಯರನ್ನು ನೇಮಿಸಿತು. ಇದರಿಂದಾಗಿ ಅಸಮತೋಲನವೊಂದು ಸೃಷ್ಟಿಯಾಗುತ್ತದೆ. ಅದರಲ್ಲೂ ಸಮವರ್ತಿ ಪಟ್ಟಿಯಲ್ಲಿನ ವಿಚಾರವೊಂದರ ಬಗ್ಗೆ ನೀತಿ ರೂಪಿಸುವಾಗ, ಅದರ ಅನುಷ್ಠಾನಕ್ಕೆ ದೇಶದೆಲ್ಲೆಡೆ ಸಮ್ಮತಿಯನ್ನು ಬಯಸುತ್ತಿರುವಾಗ ಈ ನಡೆಯು ಅಸಮತೋಲನ ಸೃಷ್ಟಿಸುತ್ತದೆ. ಈ ನೀತಿಯಲ್ಲಿ ಒಳ್ಳೆಯ ಶಿಫಾರಸುಗಳಿವೆ, ಅವುಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಿದರೆ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಯೇ ಆಗಬಹುದು. ಆದರೆ, ನೀತಿಯು ರಾಜಕೀಯ ಸಂಘರ್ಷಕ್ಕೆ ಸಿಲುಕಿದಂತಿದೆ. ರಾಜ್ಯಗಳನ್ನು ಮೊದಲೇ ವಿಶ್ವಾಸಕ್ಕೆ ತೆಗೆದುಕೊಂಡಿದ್ದಿದ್ದರೆ ಈ ಸ್ಥಿತಿಯನ್ನು ತಡೆಯಬಹುದಿತ್ತು. ಬೇರೆ ಬೇರೆ ಭಾಗೀದಾರರಿಂದ ಸಲಹೆಗಳನ್ನು ಪಡೆದು ನೀತಿಯನ್ನು ಸಿದ್ಧಪಡಿಸಿರಬಹುದು. ಆದರೆ, ಅವರನ್ನು ನೀತಿ ರೂಪಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರೆ ಒಳ್ಳೆಯದಿತ್ತು.

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ಕಾನೂನುಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ಕೂಡ ಕೇಂದ್ರ ಸರ್ಕಾರವು ಕೈಗೊಂಡ ಏಕಪಕ್ಷೀಯ ತೀರ್ಮಾನಕ್ಕೆ ಇನ್ನೊಂದು ನಿದರ್ಶನವಾಗಿ ಕಾಣುತ್ತಿವೆ. ಈ ತೀರ್ಮಾನ ಕೈಗೊಂಡಿರುವುದು ಕೂಡ ಸಮವರ್ತಿ ಪಟ್ಟಿಯಲ್ಲಿರುವ ಕ್ಷೇತ್ರವೊಂದಕ್ಕೆ ಸಂಬಂಧಿಸಿಯೇ ಆಗಿದೆ. ಈ ಕಾನೂನು ರೂಪಿಸುವ ಹಂತದಲ್ಲೇ ರಾಜ್ಯಗಳನ್ನೂ ಜೊತೆಯಲ್ಲಿ ಸೇರಿಸಿಕೊಂಡಿದ್ದಿದ್ದರೆ, ಕಾನೂನಿಗೆ ಸಂಬಂಧಿಸಿದ ಬಹುತೇಕ ಆತಂಕಗಳನ್ನು, ವಿರೋಧಗಳನ್ನು ನಿವಾರಿಸಬಹುದಿತ್ತು. ಆದರೆ, ಸಮಾಲೋಚನೆಯ ಸಂಸ್ಕೃತಿ ಇಲ್ಲದಿರುವ ಕಾರಣ, ನೀತಿಗಳಿಗೆ ಸಂಬಂಧಿಸಿದ ವಿವರಗಳು ಹಿಂದಕ್ಕೆ ಸರಿಯುತ್ತವೆ, ರಾಜಕೀಯ
ಭಿನ್ನಾಭಿಪ್ರಾಯಗಳು ಮುಂದಕ್ಕೆ ಬಂದು ನಿಂತಿರುತ್ತವೆ.

ಭಾರತದ ಮಟ್ಟಿಗೆ ಬಹುಪಕ್ಷೀಯ ಆಡಳಿತ ವ್ಯವಸ್ಥೆ ಎಂಬುದು ವಾಸ್ತವ ಎನ್ನುವುದನ್ನು ಗುರುತಿಸುವುದು ಬಹುಮುಖ್ಯವಾದುದು. ದೇಶದ ಒಟ್ಟು 28 ರಾಜ್ಯಗಳ ಪೈಕಿ ಅರ್ಧದಷ್ಟು ರಾಜ್ಯಗಳಲ್ಲಿ (ಅಂದರೆ 14 ರಾಜ್ಯಗಳಲ್ಲಿ) ಬಿಜೆಪಿ ಮತ್ತು ಅದರ ರಾಜಕೀಯ ಮೈತ್ರಿಪಕ್ಷಗಳು ಆಡಳಿತ ನಡೆಸುತ್ತಿವೆ. ಇನ್ನುಳಿದ ಅರ್ಧದಷ್ಟು ರಾಜ್ಯಗಳಲ್ಲಿ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ (ಎನ್‌ಡಿಎ) ಭಾಗವಲ್ಲದ ರಾಜಕೀಯ ಪಕ್ಷಗಳು ಆಡಳಿತ ನಡೆಸುತ್ತಿವೆ. ಬೇರೆ ಬೇರೆ ರಾಜ್ಯಗಳಲ್ಲಿ ಈ ರೀತಿ ಬೇರೆ ಬೇರೆ ಪಕ್ಷಗಳು ಅಧಿಕಾರ ಹಂಚಿಕೆ ಮಾಡಿಕೊಳ್ಳುವುದರ ಕಾರಣ, ನಾವು ಒಕ್ಕೂಟ ವ್ಯವಸ್ಥೆಯ ನಿಯಮಗಳಿಗೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹೆಚ್ಚಿನ ಸಮಾಲೋಚನೆ ಕೂಡ ಬೇಕಾಗುತ್ತದೆ. ಹಾಗೆ ಆದಾಗ ಮಾತ್ರ, ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ನ್ಯಾಯ ಇರುತ್ತದೆ. ದೇಶದಲ್ಲಿ ಪರಿಣಾಮಕಾರಿ ಆಡಳಿತ ಕೂಡ ಇರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು