ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕನ್ನಡ ಎಂಬುದು ಹಾಲುಂಡಿಯೋ; ಹಾಲು ಕರೆಯುವ ಕಾಮಧೇನೋ...

Last Updated 1 ನವೆಂಬರ್ 2020, 10:47 IST
ಅಕ್ಷರ ಗಾತ್ರ

ಸಾಮಾಜಿಕ ಮಾಧ್ಯಮಗಳ ಪ್ರೊಫೈಲ್‌ ಫ್ರೇಮ್‌ ಬದಲಿಸಿದ್ದೇವೆ. ಅದರಲ್ಲಿ ‘ನಾನು ಕನ್ನಡಿಗ‘ ’ಕನ್ನಡ ದೇಶದೊಳ್’ ‘ಕನ್ನಡ ಕುವರ’ ಹೀಗೆ ಭಾವುಕ ನೆಲೆಯಲ್ಲಿ ನಾಡ ನುಡಿಯ ಅಭಿಮಾನವನ್ನು ಬೀಗಿದ್ದೇವೆ. ಆದರೂ ಹುಯಿಲಗೋಳ ನಾರಾಯಣರಾಯರ ಆಶಯದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬ ಕೋರಿಕೆಯನ್ನು ಇನ್ನೂ ಒಂದು ಶತಮಾನ ಕಳೆದರೂ ಫಲಶ್ರುತಿಗೊಳಿಸುತ್ತೇವೆ ಎನ್ನುವ ಲಕ್ಷಣ ಕಾಣಿಸುತ್ತಿಲ್ಲ.

ಕನ್ನಡಕ್ಕೊಂದು ರಾಜಕೀಯ ಶಕ್ತಿಯನ್ನು ನೀಡಲು ಆರೂವರೆ ದಶಕದಿಂದಲೂ ನಮಗೆ ಸಾಧ್ಯವೇ ಆಗಿಲ್ಲ. ಇಂತಹ ಅಸಹಾಯಕ ಸ್ಥಿತಿಯಲ್ಲಿ ನಾವು ‘ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ/ ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ’ ಎಂಬ ಗೋವಿಂದ ಪೈ ಅವರ ಗೀತೆಯನ್ನು ಇಂದು – ಮುಂದೂ‌‌ ಪ್ರಾರ್ಥಿಸುವುದರಲ್ಲಿಯೇ ಕಾಲ ಕಳೆಯಬೇಕಾಗುತ್ತದೆ ಎಂದು ವರ್ತಮಾನದ ಸ್ಥಿತಿ ಹೇಳುವಂತಿದೆ.

ಇಂತಹ ದಯನೀಯ ಸ್ಥಿತಿಯನ್ನು ಪ್ರದರ್ಶಿಸುತ್ತಿರುವ ನಾವು ಭಾಷಾ ರಾಜಕಾರಣದಲ್ಲಿ ಕನ್ನಡದ ಸಾಮರ್ಥ್ಯವನ್ನು ಮೆರೆಸಲು ಸಾಧ್ಯವಾಗುತ್ತಿಲ್ಲ. ಇವತ್ತೂ ಬ್ಯಾಂಕಿಂಗ್‌ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಿಂದಿಯಂತೆ ಕನ್ನಡಕ್ಕೂ ಮಾನ್ಯತೆ ನೀಡಿ ಎನ್ನುವ ಮನವಿಯನ್ನು ವ್ಯವಸ್ಥೆಯ ಮುಂದೆ ಇಡುತ್ತಿದ್ದೇವೆ. ಹೀಗಿರುವಾಗ ಕನ್ನಡವನ್ನು ಅನ್ನದ ಭಾಷೆಯಾಗಿ ಸಶಕ್ತಗೊಳಿಸಲು ಹೇಗೆ ಸಾಧ್ಯವಾಗುತ್ತದೆ? ಕನ್ನಡ ಎನ್ನುವುದು ಬರಿ ಮಣ್ಣಿನ ಕಣ ಅಲ್ಲ. ಅದು ಸಂಸ್ಕೃತಿ; ಬಹುಜನರ ದೀರ್ಘ ಪರಂಪರೆ. ಕುವೆಂಪು ಹೇಳುವಂತೆ ‘ಸರ್ವ ಜನಾಂಗದ ಶಾಂತಿಯ ತೋಟ’. ಇಲ್ಲಿ ನೆಮ್ಮದಿಯ ಬಾಳ್ವೆಗೆ ಕನ್ನಡಕ್ಕೆ ಅನ್ನದ ಶಕ್ತಿಬೇಕು. ಹಾಗಾಗಿ ಮತ್ತೆ ಮತ್ತೆ ನಾವು ಅನ್ನದ ಭಾಷೆಯಾಗಿ ರೂಪಿಸುವ ಶಪಥಗೈಯುತ್ತಲೇ ಬಂದಿದ್ದೇವೆ.

ಅನ್ನದ ಭಾಷೆಯಾಗಿ ರೂಪುಗೊಳ್ಳಬೇಕಾದ ಕನ್ನಡದ ಪರಿಸ್ಥಿತಿ ಸದ್ಯ ಅತಂತ್ರದಲ್ಲಿ ಬಳಲುತ್ತಿದೆ. ಪ್ರಾಥಮಿಕ ಶಾಲೆಯಲ್ಲಿ ಭಾಷೆಯಾಗಿಯೂ ಕನ್ನಡವನ್ನು ಸಮರ್ಥವಾಗಿ ಕಲಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಬೆಂಗಳೂರಿನ ಒಂದು ಮಗುವಿನ ಪೋಷಕರು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ. ಆ ದೂರಿನ ಸಾರ ಕನ್ನಡವನ್ನು ಕನ್ನಡದಲ್ಲಿಯೇ ಕಲಿಸುವಂತೆ ನಿಯಮ‌‌‌ ಹಾಕಬೇಕು ಎಂದು ಅವರು ಕೋರಿದ್ದಾರೆ. ಅವರ ಮಗುವಿಗೆ ಕನ್ನಡ ಭಾಷೆಯನ್ನು ಇಂಗ್ಲಿಷ್‌ ಮೂಲಕ ಶಿಕ್ಷಕರು ಬೋಧಿಸಿದ್ದಾರೆ. ಈ ಬಗ್ಗೆ ಶಾಲೆಯ ಆಡಳಿತಕ್ಕೆ ತಮ್ಮ ಆಕ್ಷೇಪವನ್ನೂ ತಿಳಿಸಿದ್ದಾರೆ. ಪರಿಹಾರ ಸಿಗದ ಹಿನ್ನೆಲೆಯಲ್ಲಿ ಪ್ರಾಧಿಕಾರಕ್ಕೆ ಅವರು ದೂರು ಸಲ್ಲಿಸಿದ್ದಾರೆ.

ಹೀಗಾದರೆ ಕನ್ನಡವನ್ನು ನಮ್ಮ ಮಕ್ಕಳು ಹೇಗೆ ಕಲಿಯುತ್ತಾರೆ? ಹಿಂದಿಯನ್ನು ಹಿಂದಿ ಮೂಲಕವೇ, ಇಂಗ್ಲಿಷನ್ನು ಇಂಗ್ಲಿಷ್‌ ಮೂಲಕವೇ ಕಲಿಸುವ ಶಾಲೆಗಳು ಕನ್ನಡಕ್ಕೆ ಏಕೆ ಆಸರೆಯಾಗಿ ಇಂಗ್ಲಿಷ್‌ ಬಳಸಬೇಕು? ಸಾಹಿತ್ಯ ಮತ್ತು ಪರಂಪರೆಯ ಹಿನ್ನೆಲೆಯಲ್ಲಿ ಕನ್ನಡದಷ್ಟು ಶಕ್ತಿಯುತ ಭಾಷೆ ಮತ್ತೊಂದು ಇಲ್ಲ. ಅದರ ಹಿರಿಮೆ ಗರಿಮೆಯನ್ನು ಕೊಂಡಾಡುತ್ತೇವೆ. ಪ್ರಾಚೀನ ಭೌಗೋಳಿಕ ವಿಸ್ತೀರ್ಣವನ್ನು ‘ಕಾವೇರಿಯಿಂದ ಮಾ ಗೋದಾವರಿ ವರಮಿರ್ದ ನಾಡದ ಕನ್ನಡದೊಳ್’ ಎಂದು ವಿಸ್ತಾರದ ಎಲ್ಲೆಯನ್ನು ಗುರುತಿಸುತ್ತೇವೆ. ಭಾಷಾ ಅಸ್ತಿತ್ವದ ಚಾರಿತ್ರಿಕ ದಾಖಲೆಯನ್ನು ಕ್ರಿಸ್ತ ಪೂರ್ವ ಕಾಲಘಟ್ಟದಲ್ಲಿ ಹುಡುಕಿದ್ದೇವೆ. ಇದಕ್ಕೊಂದು ಶಾಸ್ತ್ರೀಯ ಸ್ಥಾನಮಾನವನ್ನೂ ಕಲ್ಪಿಸಿಕೊಂಡಿದ್ದೇವೆ. ಆದರೂ ಕನ್ನಡವನ್ನು ಕನ್ನಡದಂತೆಯೇ ಏಕೆ ಬೋಧಿಸಲು ಸಾಧ್ಯ ಆಗುತ್ತಿಲ್ಲ ಎಂದು ರೋದಿಸುತ್ತಲೂ ಇದ್ದೇವೆ.

ಕೋರ್‌ ವಿಷಯವಾಗಿ ಕನ್ನಡಕ್ಕೆ ಕೊಕ್‌!
ಪದವಿಪೂರ್ವ ಶಿಕ್ಷಣ ಕಲಾ ವಿಭಾಗದಲ್ಲಿ ಐಚ್ಛಿಕ ಕನ್ನಡವನ್ನು ತೆಗೆದುಹಾಕಲಾಗುತ್ತಿದೆ. ಕಾರಣ ನಿರೀಕ್ಷಿತ ಮಟ್ಟದಲ್ಲಿ ಮಕ್ಕಳು ಕನ್ನಡ ಐಚ್ಛಿಕ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತಿಲ್ಲ. ರಾಜ್ಯದಲ್ಲಿ ಬೇರೆ ಕೋರ್‌ ವಿಷಯಗಳಂತೆ ಕನ್ನಡ ಸಾಹಿತ್ಯವನ್ನು ಮಕ್ಕಳು ಓದಲು ಏಕೆ ಆಸಕ್ತಿ ತೋರುತ್ತಿಲ್ಲ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಕೇಂದ್ರ ಲೋಕಸೇವಾ ಆಯೋಗ ನಡೆಸುವ ಐಎಎಸ್‌ನಂತಹ ಪರೀಕ್ಷೆಯಲ್ಲಿಯೇ ಕನ್ನಡ ಸಾಹಿತ್ಯಕ್ಕೆ ಮನ್ನಣೆ ನೀಡಿದ್ದರೂ ಪಿಯುಸಿ ಓದುವ ಮಕ್ಕಳಿಗೆಕನ್ನಡದ ಬಗ್ಗೆ ಪ್ರೀತಿಯನ್ನು ಮೂಡಿಸಲು ನಮ್ಮ ಶಾಲೆಗಳಿಂದ ಯಾಕೆ ಸಾಧ್ಯ ಆಗುತ್ತಿಲ್ಲ?

ಅನ್ಯರಾಜ್ಯಗಳಲ್ಲಿ ಕನ್ನಡ ಅಧ್ಯಯನ ಕೇಂದ್ರಗಳು ತಮ್ಮ ಉಳಿವಿಗಾಗಿ ಏದುಸಿರು ಬಿಡುತ್ತಿವೆ. ಹೊರ ರಾಜ್ಯದ ಆ ಕೇಂದ್ರಗಳಲ್ಲಿ ಓದುವವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆರ್ಥಿಕ ನೆರವು ನೀಡುತ್ತಿದೆ. ಹೈದರಾಬಾದ್‌ನ ಉಸ್ಮಾನಿಯಾ, ಮಧುರೈ ಕಾಮರಾಜ ವಿಶ್ವವಿದ್ಯಾಲಯ, ಮುಂಬೈ ಹಾಗೂ ಚೆನ್ನೈನ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಎಂಎ ವಿದ್ಯಾರ್ಥಿಗಳಿಗೆಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಶಿಷ್ಯ ವೇತನ ನೀಡಿದರೂ ಆ ಕೇಂದ್ರಗಳಲ್ಲಿಯೂನಿರೀಕ್ಷಿತ ಮಟ್ಟದಲ್ಲಿ ದಾಖಲಾತಿ ಆಗುತ್ತಿಲ್ಲ. ಅಂದರೆ ಅನ್ನದ ಭರವಸೆಯನ್ನು ನೀಡುವಲ್ಲಿ ಎಲ್ಲೋಕನ್ನಡ ವಿಫಲವಾಗಿದೆ ಎಂದು ಅರ್ಥವೇ?

ಭಾಷೆಯಾಗಿಯೂ ಕನ್ನಡ ಕಡ್ಡಾಯ ಅಲ್ಲ!
ರಾಜ್ಯ ಕಾಲೇಜು ಶಿಕ್ಷಣ ಇಲಾಖೆ ನಿಯಮದ ಪ್ರಕಾರ, ಪದವಿ ಶಿಕ್ಷಣ ಅಂದರೆ ಸಾಮಾನ್ಯ ಪದವಿ ಬಿ.ಎ, ಬಿಎಸ್ಸಿ, ಬಿಕಾಂನ ಮೂರು ವರ್ಷದಲ್ಲಿ ಎರಡು ವರ್ಷ ಕಡ್ಡಾಯವಾಗಿ ಎರಡು ಭಾಷೆಗಳನ್ನು ಅಧ್ಯಯನ ಮಾಡಬೇಕು. ಅಲ್ಲಿ ಇಂಗ್ಲಿಷ್‌ ಕಡ್ಡಾಯ ಪಠ್ಯವಾದರೆ ಮತ್ತೊಂದು ಭಾಷೆಯ ಆಯ್ಕೆಗೆ ಯಾವುದೇ ನಿರ್ಬಂಧ ಇಲ್ಲ. ಇದನ್ನೇ ಬಳಸಿಕೊಂಡು ಕೆಲ ವಿಶ್ವವಿದ್ಯಾಲಯಗಳು ಹೆಚ್ಚುವರಿಯಾಗಿ ಇಂಗ್ಲಿಷ್‌ ಪಠ್ಯ ಪರಿಚಯಿಸಿದವು. ಹಾಗಾಗಿ ಕಡ್ಡಾಯ ಇಂಗ್ಲಿಷ್‌ ಜೊತೆ ಮತ್ತೊಂದು ಭಾಷೆ, ಕನ್ನಡ, ಹಿಂದಿ, ಅಡಿಷನಲ್‌ ಇಂಗ್ಲಿಷ್‌, ತಮಿಳು, ತೆಲುಗು, ಉರ್ದು ಹೀಗೆ ಯಾವುದೋ ಒಂದು ಭಾಷೆಯನ್ನು ಅಧ್ಯಯನ ಮಾಡಬಹುದು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಂಜಿನಿಯರಿಂಗ್‌, ಎಂಬಿಬಿಎಸ್, ಬಿಡಿಎಸ್‌ ಮತ್ತು ಡೆಂಟಲ್‌ ಸೇರಿದಂತೆ ಬೇರೆ ಬೇರೆ ವೃತ್ತಿಪರ ಶಿಕ್ಷಣದಲ್ಲಿ ಒಂದು ವರ್ಷ (ಎರಡು ಸೆಮಿಸ್ಟರ್) ಕನ್ನಡ ಬೋಧಿಸಬೇಕು ಎನ್ನುವ ಸಲಹೆಯನ್ನು ಸರ್ಕಾರಕ್ಕೆ ನೀಡಿತ್ತು. ಅಂದಿನ ಸರ್ಕಾರ ಕೂಡ 2002ರಲ್ಲಿಯೇ ಅದಕ್ಕೊಂದು ನಿಯಮವನ್ನು ರೂಪಿಸಿತು. ಅದನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಅನುಷ್ಠಾನಗೊಳಿಸಲು ಅಣಿಯಾದವು. ಕನ್ನಡಿಗರಿಗೆ ಮಾತ್ರವಲ್ಲದೆ ಕನ್ನಡೇತರರಿಗೂ ಕನ್ನಡ ಕಲಿಸುವ ಉನ್ನತ ಆಶಯ ಇದರಲ್ಲಿತ್ತು. ಆದರೆ ಅದರಲ್ಲಿ ಕಡ್ಡಾಯವಾಗಿ ಪಾಸಾಗಬೇಕು ಎನ್ನುವ ನಿಯಮವನ್ನು ರೂಪಿಸಲಿಲ್ಲ. ಹಾಗಾಗಿ ಪಠ್ಯ ಇದ್ದರೂ ಲೆಕ್ಕಕ್ಕೇ ಇಲ್ಲ. ಕಡ್ಡಾಯ ಇಲ್ಲದ ಮೇಲೆ ಕಲಿಯುವ ಪ್ರಶ್ನೆ ವಿದ್ಯಾರ್ಥಿಗಳಿಗೆ ಎದುರಾಗುವುದಿಲ್ಲ. ಶೈಕ್ಷಣಿಕ ಸಂಸ್ಥೆಗೆ ಕನ್ನಡ ಅಧ್ಯಾಪಕರನ್ನು ನೇಮಕ ಮಾಡಿಕೊಳ್ಳುವ ಅನಿವಾರ್ಯತೆ ಬರಲಿಲ್ಲ. ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ರೂಪಿಸಿದ ನೀತಿ ಪರಿಣಾಮಕಾರಿಯಾಗಿ ಜಾರಿಯಾಗಲೇ ಇಲ್ಲ. ರಾಜ್ಯದಲ್ಲಿ ವೈದ್ಯಕೀಯ ಓದಿದ ಅನ್ಯರಾಜ್ಯದ ವ್ಯಕ್ತಿ, ಕನ್ನಡ ಕಲಿಯದಿದ್ದರೆವೈದ್ಯಕೀಯ ತರಬೇತಿ ಅವಧಿಯಲ್ಲಿ ಸಾಮಾನ್ಯ ಕನ್ನಡ ರೋಗಿಗೆ ಚಿಕಿತ್ಸೆ ಹೇಗೆ ನೀಡುತ್ತಾರೆ? ರಾಜ್ಯದಲ್ಲಿ ಭಾಷೆಯಾಗಿ ಇಂಗ್ಲಿಷ್‌ ಕಡ್ಡಾಯಕ್ಕಿಂತ ಕನ್ನಡ ಕಡ್ಡಾಯ ಮಾಡುವ ಪರ್ಯಾಯ ಚಿಂತನೆ ಅಗತ್ಯವಿದೆ.

ಪರಿಹಾರ ಮಾರ್ಗವಾದರೂ ಏನು?
ರಾಜ್ಯದಲ್ಲಿ ಕನ್ನಡ ಚಳವಳಿ ನಾಡು ನುಡಿಯ ಬಾಹ್ಯ ಚಹರೆಗೆ ನಿರಂತರವಾಗಿ ಸ್ಪಂದಿಸುತ್ತಿದೆ. ನೆಲ– ಜಲದ ವಿಷಯಕ್ಕೆ ತಕ್ಕ ಉತ್ತರವನ್ನೂ ನೀಡುತ್ತಲೇ ಬಂದಿದೆ. ಅದಕ್ಕಾಗಿ ಯಾವುದೇ ತ್ಯಾಗಕ್ಕೂ ಕನ್ನಡ ಚಳವಳಿಯ ಕಲಿಗಳು ಸಿದ್ಧವಾಗುತ್ತಾರೆ. ಇಂಗ್ಲಿಷ್‌ ನಾಮಫಲಕಗಳಿಗೆ ಮಸಿ ಬಳಿದು ಕನ್ನಡನಾಡಿನಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ನೀಡಬೇಕು ಎಂದೂ ಹೇಳುತ್ತಾರೆ. ಕನ್ನಡದ ಬಗ್ಗೆ ನಿರ್ಲಕ್ಷ್ಯ ತೋರುವ ವ್ಯವಸ್ಥೆಗೆ ಆಗಾಗ ತಕ್ಕ ಪಾಠವನ್ನೂ ಕಲಿಸುತ್ತಿದ್ದಾರೆ. ಇಂತಹ ರೂಪು ಬದಲಿಸುವ ಚಳವಳಿ ಮನದೊಳಗಿನ ನಾಮಫಲಕದಲ್ಲೂ ಕನ್ನಡವೇ ರಾರಾಜಿಸುವಂತೆ ಮಾಡಬೇಕಿದೆ. ನಮ್ಮ ಮಕ್ಕಳ ಮನೋಭಿತ್ತಿಯಲ್ಲಿ ಈ ನೆಲದ ಬೀಜವನ್ನು ಕನ್ನಡ ಪಠ್ಯದ ಮೂಲಕ ಬಿತ್ತಿದರೆ ಸಾಕು. ಕಲಿಕಾ ಮಾಧ್ಯಮ ಯಾವುದಾದರೇನು? ಅದು ತನ್ನ ಪರಿಣಾಮವನ್ನು ಬೀರುತ್ತದೆ. ವೃತ್ತಿ ಶಿಕ್ಷಣವೂ ಸೇರಿದಂತೆ ಎಲ್ಲ ರೀತಿಯ ಪದವಿ ತರಗತಿಗಳಲ್ಲಿ ಕಡ್ಡಾಯ ಕನ್ನಡ ಪಠ್ಯ ಜಾರಿಯಾಗಲೇಬೇಕು. ಕನ್ನಡೇತರರಿಗೆ ಪರಿಚಯಾತ್ಮಕ ಕನ್ನಡ ಪಠ್ಯ ಅವರ ವ್ಯವಹಾರಿಕ ಅನುಕೂಲಕ್ಕೆ ಕಲಿಯುವಂತೆ ಮಾಡಲೇಬೇಕು. ಇದು ಕನ್ನಡ ಓದಿಗೆ ವಿಪುಲ ಉದ್ಯೋಗ ಅವಕಾಶ ಇದೆ ಎಂದರೆ ಕನ್ನಡ ಎಂಎ ಓದಲೂ ಪೈಪೋಟಿ ನಿರ್ಮಾಣ ಆಗುತ್ತದೆ. ಇದರ ಜೊತೆ ಕನ್ನಡ ವರ್ತಮಾನ ಪತ್ರಿಕೆ ಮತ್ತು ನಿಯತಕಾಲಿಕಗಳನ್ನು ಓದಿಸುವ ನಿಟ್ಟಿನಲ್ಲಿಯೂ ಚಿಂತಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT