ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸಂತ ಶೆಟ್ಟಿ ಅಂಕಣ| ಮೊದಲು ಕನ್ನಡ ಶಾಲೆ ಉಳಿಯಲಿ

Last Updated 24 ಜೂನ್ 2022, 19:30 IST
ಅಕ್ಷರ ಗಾತ್ರ

ಕೋವಿಡ್ ಜೊತೆಯಲ್ಲಿ ಬದುಕಲು ಶುರುಮಾಡಿ ಎರಡು ವರ್ಷಗಳಾಯಿತು. ಆರ್ಥಿಕತೆ, ಜನಜೀವನದ ಮೇಲೆ ಕೋವಿಡ್‍ನ ಪ್ರಭಾವಗಳ ಕುರಿತು ಹಲವು ವರದಿಗಳು ಬಂದಿವೆ. ಆದರೆ ಈ ಎರಡು ವರ್ಷಗಳಲ್ಲಿ ದೇಶದ ಉದ್ದಗಲದ ಶಾಲೆಗಳಲ್ಲಿ ಮಕ್ಕಳ ಕಲಿಕೆ ಯಾವ ಮಟ್ಟದಲ್ಲಿತ್ತು ಅನ್ನುವ ಕುರಿತು ವಿವರವಾದ ಅಧ್ಯಯನ ನಡೆದಿರಲಿಲ್ಲ. ಇತ್ತೀಚೆಗೆ ಬಿಡುಗಡೆಯಾದ ರಾಷ್ಟ್ರೀಯ ಸಾಧನೆ ಸಮೀಕ್ಷೆ– 2021 ಮೂಲಕ ಅದು ನೆರವೇರಿದೆ.

ವಸಂತ ಶೆಟ್ಟಿ
ವಸಂತ ಶೆಟ್ಟಿ

ದೇಶದ 720 ಜಿಲ್ಲೆಗಳಿಗೆ ಸೇರಿದ 34 ಲಕ್ಷ ವಿದ್ಯಾರ್ಥಿಗಳು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. 2017ರಲ್ಲಿ ನಡೆದ ಹಿಂದಿನ ಸಮೀಕ್ಷೆಗೆ ಹೋಲಿಸಿದಾಗ ಮಕ್ಕಳ ಕಲಿಕೆಯ ಮಟ್ಟ ಬಹಳಷ್ಟು ಕುಸಿದಿರುವುದನ್ನು ಈ ಸಮೀಕ್ಷೆ ಎತ್ತಿತೋರಿದೆ.

ಸಮೀಕ್ಷೆಯು 3, 5ನೇ ತರಗತಿಯ ಮಕ್ಕಳನ್ನು ಭಾಷೆ, ಗಣಿತ ಮತ್ತು ಪರಿಸರ ಅಧ್ಯಯನ ವಿಷಯಗಳಲ್ಲೂ, 8ನೇ ತರಗತಿಯ ಮಕ್ಕಳನ್ನು ಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನದ ವಿಷಯಗಳಲ್ಲೂ ಹಾಗೂ 10ನೇ ತರಗತಿಯ ಮಕ್ಕಳನ್ನು ಭಾಷೆ, ಗಣಿತ, ಇಂಗ್ಲಿಷ್, ವಿಜ್ಞಾನ ಮತ್ತು ಸಮಾಜ ವಿಜ್ಞಾನದ ವಿಷಯಗಳಲ್ಲಿ ಕಲಿಕೆಯ ಮಟ್ಟವನ್ನು ಅಳೆಯುವ ಕೆಲಸ ಮಾಡಿತು. ನಾಲ್ಕು ತರಗತಿಗಳ ಮಟ್ಟದಲ್ಲೂ 2017ರ ಹೋಲಿಕೆಯಲ್ಲಿ ಕಲಿಕೆಯ ಮಟ್ಟ ಕುಸಿದಿರುವುದನ್ನು ಈ ಸಮೀಕ್ಷೆ ದಾಖಲಿಸಿದೆ. ಪಟ್ಟಣಗಳ ಹೋಲಿಕೆಯಲ್ಲಿ ಹಳ್ಳಿಯ ಶಾಲೆಗಳಲ್ಲಿ, ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಹೋಲಿಕೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಲ್ಲಿ ಕಲಿಕೆಯ ಮಟ್ಟ ಕುಸಿದಿರುವು ದನ್ನು ಈ ಸಮೀಕ್ಷೆ ಗುರುತಿಸಿದೆ.

ಕರ್ನಾಟಕದಲ್ಲಿ ಏಳು ಸಾವಿರ ಸರ್ಕಾರಿ, ಖಾಸಗಿ ಮತ್ತು ಕೇಂದ್ರೀಯ ಶಾಲೆಗಳ ಎರಡು ಲಕ್ಷಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡ ಸಮೀಕ್ಷೆಯಲ್ಲಿ ಮೂರನೇ ತರಗತಿಯ ಐವತ್ತು ಪ್ರತಿಶತಕ್ಕೂ ಹೆಚ್ಚು ಪಾಲು ಮಕ್ಕಳಲ್ಲಿ ಭಾಷೆ, ಗಣಿತ ಮತ್ತು ಪರಿಸರ ಅಧ್ಯಯನದಲ್ಲಿಕನಿಷ್ಠ ಮಟ್ಟದ ಕಲಿಕೆ ಸಾಧ್ಯವಾಗುತ್ತಿಲ್ಲ ಎಂದು ಕಂಡರೆ, ಐದನೇ ತರಗತಿಯ ಮುಕ್ಕಾಲುಪಾಲು ಮಕ್ಕಳಿಗೆ ಗಣಿತ ಮತ್ತು ಪರಿಸರ ಅಧ್ಯಯನದ ಪಾಠಗಳನ್ನು ಕಲಿಯಲು ಹೆಚ್ಚಿನ ನೆರವು ಬೇಕಿದೆ ಎಂದು ಸಮೀಕ್ಷೆ ತಿಳಿಸುತ್ತಿದೆ.

ಎಂಟು ಮತ್ತು ಹತ್ತನೆಯ ತರಗತಿ ತಲುಪುವ ಹೊತ್ತಿಗೆ ಕನಿಷ್ಠ ಕಲಿಕೆಯ ಮಟ್ಟವನ್ನು ತಲುಪದ, ವಿಜ್ಞಾನ, ಗಣಿತ ಕಲಿಯಲು ಹೆಚ್ಚಿನ ನೆರವು ಬೇಡುವ ಮಕ್ಕಳ ಪ್ರಮಾಣ ಸರಾಸರಿ ಶೇ 80ಕ್ಕೆ ಏರಿರುವುದನ್ನು ಕಾಣಬಹುದು. ಸರಾಸರಿ ಶೇ 49ರಷ್ಟು ಮಕ್ಕಳು ಕೋವಿಡ್ ಕಾಲದಲ್ಲಿ ಕಲಿಯಲು ಯಾವುದೇ ಡಿಜಿಟಲ್ ಸಾಧನ ತಮ್ಮ ಬಳಿ ಇರಲಿಲ್ಲ ಅಂತಲೂ ಹೇಳಿರುವುದನ್ನು ಸಮೀಕ್ಷೆ ದಾಖಲಿಸಿದೆ.

ಈ ವರದಿಯ ಅಂಶಗಳನ್ನು ಗಮನಿಸಿದಾಗ, ತಮ್ಮ ಕಲಿಕೆಯ ಜೀವನದ ಎರಡು ಅಮೂಲ್ಯ ವರ್ಷಗಳನ್ನು ಕಳೆದುಕೊಂಡಿರುವ ಮಕ್ಕಳು ಶಾಲೆಗೆ ಹಿಂತಿರುಗಿ, ಕಲಿಕೆಯಲ್ಲಿ ತಮಗಾಗಿರುವ ಹಿನ್ನಡೆಯನ್ನು ಸರಿದೂಗಿಸಿ
ಕೊಳ್ಳುವ ತುರ್ತಿನಲ್ಲಿದ್ದಾರೆ ಅಂದರೆ ತಪ್ಪಾಗದು. ಈ ಮಕ್ಕಳ ಪಾಲಕರು ಸಹ ಶಾಲೆಗಳು ಶುರುವಾಗಿ, ಮಕ್ಕಳು ಕಲಿಕೆಯ ಹಳಿಗೆ ಬೀಳಲಿ ಅನ್ನುವ ಕಾತರದಲ್ಲಿದ್ದಾರೆ. ಹೀಗಿರುವಾಗ ಕಲಿಕೆಯ ಮಟ್ಟ ಎರಡು ವರ್ಷಗಳಷ್ಟು ಹಿಂದಕ್ಕೆ ಹೋಗಿರುವುದನ್ನು ಸರಿಪಡಿಸಿಕೊಳ್ಳುವುದು ಸರ್ಕಾರದ ಆದ್ಯತೆ ಆಗಬೇಕಿದೆ.

ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯಕ್ರಮದಲ್ಲಿ ಸೂಕ್ತ ರೀತಿಯಲ್ಲಿ ವಿಜ್ಞಾನ ಮತ್ತು ಗಣಿತದ ಪ್ರಾಯೋಗಿಕ ಕಲಿಕೆಗೆ ಒತ್ತು ನೀಡುವ ಮೂಲಕ, ಕಳೆದುಹೋದ ಎರಡು ವರ್ಷಗಳ ಕಲಿಕೆಯನ್ನು ಸಾಧ್ಯವಾದಷ್ಟು ಪ್ರಮಾಣದಲ್ಲಿ ಮಕ್ಕಳಿಗೆ ದಕ್ಕುವಂತೆ ಮಾಡುವ ದೊಡ್ಡ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಆದರೆ ಶಾಲೆಗಳು ಶುರುವಾಗಿ ತಿಂಗಳಾಗುತ್ತ ಬಂದರೂ ಇನ್ನೂ ಪಠ್ಯಪುಸ್ತಕಗಳು ಸರಿಯಾಗಿ ಶಾಲೆಗೆ ತಲುಪದಿರುವುದು, ಪಠ್ಯಪುಸ್ತಕದ ತಿದ್ದುಪಡಿಯನ್ನು ಸೈದ್ಧಾಂತಿಕ ತಿಕ್ಕಾಟದ ನೆಲೆಯಾಗಿಸಿಕೊಂಡು ರಾಜಕೀಯ ಹಗ್ಗಜಗ್ಗಾಟದ ಚರ್ಚೆಗಳಲ್ಲೇ ದಿನಗಳು ಉರುಳುತ್ತಿರುವುದನ್ನು ಕಂಡರೆ, ಕುಸಿದಿರುವ ಮಕ್ಕಳ ಕಲಿಕೆಯ ಮಟ್ಟದ ಬಗ್ಗೆ ಯಾರಿಗಾದರೂ ಕಾಳಜಿ ಇದೆಯೇ ಅನ್ನುವ ಪ್ರಶ್ನೆ ಏಳುತ್ತದೆ.

ಇಪ್ಪತ್ತು ವರ್ಷಗಳ ಹಿಂದೆ ಹತ್ತಿರ ಹತ್ತಿರ ಎಂಬತ್ತು ಪ್ರತಿಶತಕ್ಕೂ ಹೆಚ್ಚು ಮಕ್ಕಳು ಕರ್ನಾಟಕದಲ್ಲಿ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಓದುತ್ತಿದ್ದರು. ಆ ಪ್ರಮಾಣ ದಿನೇದಿನೇ ಕಡಿಮೆಯಾಗುತ್ತ ಈಗ ಐವತ್ತು ಪ್ರತಿಶತದ ಹತ್ತಿರದಲ್ಲಿದೆ. ಕರ್ನಾಟಕದ ನಲವತ್ತು ಪ್ರತಿಶತಕ್ಕೂ ಹೆಚ್ಚಿನ ಮಕ್ಕಳು ಈಗಾಗಲೇ ಇಂಗ್ಲಿಷ್‌ ಮಾಧ್ಯಮದ ಶಾಲೆಗಳಿಗೆ ಹೊರಟುಹೋಗಿದ್ದಾರೆ. ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಸೃಷ್ಟಿಯಾಗಿರುವ ಇಂಗ್ಲಿಷ್‌ ಮಾಧ್ಯಮದ ಸುತ್ತಲಿನ ಸಮೂಹಸನ್ನಿಯಿಂದ ಹಳ್ಳಿ, ಪಟ್ಟಣಗಳಲ್ಲಿ ಇಂಗ್ಲಿಷ್‌ ಮಾಧ್ಯಮದ ಶಾಲೆಗಳು ಹಾದಿಗೊಂದು, ಬೀದಿಗೊಂದು ಎಂಬಂತೆ ಕಣ್ತೆರೆದಿವೆ. ಮಕ್ಕಳ ಭವಿಷ್ಯಕ್ಕೆ ಇದೊಂದೇ ಸರಿದಾರಿ ಅನ್ನುವ ಭ್ರಮೆಯಲ್ಲಿ ಲಕ್ಷಾಂತರ ಪಾಲಕರು ತಮ್ಮ ದುಡಿಮೆಯ ಬಹುಪಾಲನ್ನು ಈ ವ್ಯವಸ್ಥೆಗೆ ಸುರಿದು ಬಡವರಾಗುತ್ತಿದ್ದಾರೆ. ಇಂತಹ ಶಾಲೆಗಳ ಮಕ್ಕಳ ಕಲಿಕೆಯ ಮಟ್ಟ ಯಾವ ರೀತಿಯಲ್ಲೂ ಮೇಲಿಲ್ಲ ಅನ್ನುವುದನ್ನು ಸಮೀಕ್ಷೆಯ ಅಂಕಿಅಂಶಗಳು ಹೇಳುತ್ತಿವೆ.

ತಂತ್ರಜ್ಞಾನ ಪ್ರಪಂಚದಲ್ಲಿ ಆಗುತ್ತಿರುವ ವೇಗದ ಬದಲಾವಣೆಗಳು ಆರ್ಟಿಫಿಶಿಯಲ್ ಇಂಟೆಲಿಜನ್ಸ್ ಮತ್ತು ಆಟೊಮೇಶನ್ ಮೂಲಕ ಈಗಿರುವ ಲಕ್ಷಾಂತರ ಉದ್ಯೋಗಗಳನ್ನು ಇಲ್ಲವಾಗಿಸುವ ಸಾಧ್ಯತೆಗಳ ಮುನ್ನೋಟವೊಂದನ್ನು ನೀಡುತ್ತಿವೆ. ಉಕ್ರೇನ್- ರಷ್ಯಾದ ಯುದ್ಧ ಮುಗಿದಾಗ ದೊಡ್ಡ ಮಟ್ಟದ ಜಾಗತಿಕ ರಾಜಕೀಯ ಪಲ್ಲಟಗಳು ಸಂಭವಿಸುವ ಸಾಧ್ಯತೆಗಳು ಮತ್ತು ಅದರಿಂದ ಈಗಿರುವ ಜಾಗತೀಕರಣದ ಮಾದರಿಯೂ ಬುಡಮೇಲಾಗಿ ದೇಶ-ದೇಶಗಳ ನಡುವಿನ ಸಂಬಂಧಗಳು ಹೊಸ ನೆಲೆಯಲ್ಲಿ ರೂಪುಗೊಳ್ಳುವ ಕುರಿತು ಹಲವಾರು ಚರ್ಚೆಗಳು ಜಗತ್ತಿನಲ್ಲಿ ನಡೆಯುತ್ತಿವೆ.

ಪರಿಸರದಲ್ಲಿ ಆಗುತ್ತಿರುವ ತೀವ್ರವಾದ ಬದಲಾವಣೆಗಳು, ಮುಂದೆಯೂ ಕೋವಿಡ್‍ನಂತಹ ಸಾಂಕ್ರಾಮಿಕ ಪಿಡುಗು ಪ್ರಪಂಚವನ್ನು ಕಾಡುವ ಎಲ್ಲ ಸಾಧ್ಯತೆಗಳನ್ನು ಮುಕ್ತವಾಗಿರಿಸಿದೆ. ಈ ಹೊತ್ತಿನಲ್ಲಿ ನಾವು ಈಗಲೂ ಹೊರದೇಶದ ಸೇವಾ ಗುತ್ತಿಗೆಯ ಕೆಲಸಗಳು, ಅಮೆರಿಕ ಕೇಂದ್ರಿತ ಬಂಡವಾಳದ ಹರಿವಿನ ಮೇಲೆಯೇ ಭವಿಷ್ಯ ಅರಸುತ್ತೇವೆ ಎಂದುಕೊಂಡು ಇಂಗ್ಲಿಷ್‌ ಮಾಧ್ಯಮದ ಬಾಯಿಪಾಠದ ಕಲಿಕೆಯತ್ತಲೇ ಹೋಗುತ್ತೇವೆಯೋ ಇಲ್ಲ ಮಕ್ಕಳು ಆಲೋಚಿಸುವ, ಕನಸು ಕಾಣುವ ಭಾಷೆಯಲ್ಲಿ, ಜಗದ ಅಗತ್ಯಗಳನ್ನು ಕಟ್ಟಿಕೊಳ್ಳಲಾಗುವ ಗಟ್ಟಿಯಾದ ಕಲಿಕೆಯ ವ್ಯವಸ್ಥೆಯೊಂದರ ಮೂಲಕ ಏಳಿಗೆಯತ್ತ ಸಾಗುವಂತೆ ಮಾಡುತ್ತೇವೆಯೋ ಅನ್ನುವುದು ಈ ಹೊತ್ತಿನ ಮುಖ್ಯ ಚರ್ಚೆಯಾಗಬೇಕಿದೆ.

ಕನ್ನಡ ಮಾಧ್ಯಮವೆನ್ನುವ ಹಡಗು ತೂತಾಗಿ ನಿಧಾನಕ್ಕೆ ಮುಳುಗುವಂತೆ ಕಾಣುತ್ತಿರುವಾಗ, ಅಲ್ಲಿ ಏನು ಕಲಿಸಬೇಕು ಅನ್ನುವ ಸೈದ್ಧಾಂತಿಕ ಚರ್ಚೆಯೇ ದೊಡ್ಡದಾಗಿ ರುವುದು ದುರಂತವೇ ಸರಿ. ಕನ್ನಡ ಮಾಧ್ಯಮದ ಶಾಲೆಗಳಿದ್ದರಲ್ಲವೇ ಅಲ್ಲಿ ಏನು ಕಲಿಸಬೇಕು ಅನ್ನುವ ಚರ್ಚೆ?

ಭಾರತದಂತಹ ದೇಶ ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳನ್ನು ಇನ್ನು ಹತ್ತು ವರ್ಷ ನಿರಂತರವಾಗಿ ಸೃಷ್ಟಿಸದಿದ್ದರೆ ಒಂದು ಮಧ್ಯಮ ಆದಾಯದ ದೇಶವಾಗುವುದು ಸಾಧ್ಯವಿಲ್ಲ. ಈಗಿರುವ ಯುವಜನರ ಬಲ ಒಂದು ತೊಂದರೆಯಾಗದೇ ಶಕ್ತಿಯಾಗಬೇಕು ಅಂದರೆ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಯಾಗಲೇ ಬೇಕು. ಹೀಗೆ ಉದ್ಯೋಗ ಸೃಷ್ಟಿಸುವಂತಹ ವಾತಾವರಣ ಕಟ್ಟಲು ಭಾರತದಂತಹ ದೇಶಕ್ಕೆ ಜ್ಞಾನ-ವಿಜ್ಞಾನದ ಬಲವೊಂದರಿಂದಲೇ ಸಾಧ್ಯ ಮತ್ತು ಅದಾಗಲು ಕಲಿಕೆ, ಅದರಲ್ಲೂ ಭಾರತದ ಭಾಷೆಗಳಲ್ಲಿ ಕಲಿಕೆಯ ವ್ಯವಸ್ಥೆಯನ್ನು ಸರಿಯಾಗಿಸಿಕೊಳ್ಳುವುದು ಬಹಳ ಮುಖ್ಯ. ಪಠ್ಯಪುಸ್ತಕಗಳ ಕುರಿತ ಯಾವುದೇ ಚರ್ಚೆ ಯಾವ ರೀತಿಯಲ್ಲಿ ಗಣಿತ ಮತ್ತು ವಿಜ್ಞಾನದ ಪಠ್ಯಕ್ರಮವನ್ನು ಇನ್ನಷ್ಟು ಸರಳವಾಗಿಸಿ ಮಕ್ಕಳ ಕಲಿಕೆಯ ಮಟ್ಟ ಹೆಚ್ಚಿಸಬಹುದು ಅನ್ನುವತ್ತ ಹರಿಯಬೇಕಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಈ ಕುರಿತು ಮಾತನಾಡಿರುವುದು ಒಳ್ಳೆಯ ಬೆಳವಣಿಗೆಯಾದರೂ ಅದನ್ನು ಜಾರಿ ಮಾಡುವತ್ತ ಇನ್ನೂ ಯಾವುದೇ ನಿರ್ದಿಷ್ಟ ಯೋಜನೆಗಳು ಕಂಡುಬಂದಿಲ್ಲ.

ನಾಡಿನ ಎಲ್ಲ ಮಕ್ಕಳಿಗೂ ತಲುಪುವಂತಹ ಪರಿಣಾಮ ಕಾರಿಯಾದ ಕಲಿಕೆಯನ್ನು ಮಕ್ಕಳ, ಪಾಲಕರ, ಶಿಕ್ಷಕರ ಮತ್ತು ಪರಿಸರದ ನುಡಿಯಾಗಿರುವ ಕನ್ನಡದಂತಹ ಭಾಷೆಯಲ್ಲಷ್ಟೇ ಕಟ್ಟಲು ಸಾಧ್ಯ. ಈ ಸತ್ಯ ಕೈಬಿಟ್ಟು, ಕಲಿಕೆಯನ್ನು ಕೇವಲ ಸೈದ್ಧಾಂತಿಕ ತಿಕ್ಕಾಟದ ಕಣ್ಣಿನಿಂದ ನೋಡುತ್ತಾ ಹೋದರೆ ಇನ್ನೈದು ವರ್ಷ ಬಿಟ್ಟು ಸಮೀಕ್ಷೆ ಮಾಡಿದಾಗಲೂ ನಾವು ಎಲ್ಲಿದ್ದೆವೋ ಅಲ್ಲಿಯೇ ಇರುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT