ಭಾನುವಾರ, ಜುಲೈ 3, 2022
27 °C
ಕೊರೊನಾ ಕಾಲಘಟ್ಟದ ಗಾಂಭೀರ್ಯಕ್ಕೆ ತಕ್ಕಂತೆ ಇರಬೇಕಿದೆ ಶೈಕ್ಷಣಿಕ ಯೋಜನೆ

ಕಲಿಕಾ ಚೌಕಟ್ಟು: ಪರಿವರ್ತನೆಗೆ ಸಕಾಲ

ಅರವಿಂದ ಚೊಕ್ಕಾಡಿ Updated:

ಅಕ್ಷರ ಗಾತ್ರ : | |

ಶಿಕ್ಷಣ ವ್ಯವಸ್ಥೆ ಇರುವುದರಿಂದ, ಶಾಲಾ ಕಾಲೇಜಿಗೆ ಮಕ್ಕಳು ಹೋಗುವುದರಿಂದ ಏನೋ ಒಂದು ಆಗುತ್ತದೆ ಎಂಬುದು ನಿಜ. ಆದರೆ ಏನು ಉದ್ದೇಶವಿದೆಯೋ ಅದೇ ಆಗುತ್ತದೆಯೇ ಎಂದರೆ ಉತ್ತರಿಸುವುದು ಕಷ್ಟ. ಉದ್ದೇಶವನ್ನೇ ಸಾಧಿಸಬೇಕಾದರೆ ಅದಕ್ಕೆ ಸೂಕ್ತವಾಗುವ ಹಾಗೆ ಯೋಜನೆ ಇರಬೇಕು ಮತ್ತು ಅದನ್ನು ಶಿಸ್ತುಬದ್ಧವಾಗಿ ಜಾರಿಗೊಳಿಸಬೇಕು. ಆಗ ನಿರೀಕ್ಷಿತ ಪರಿಣಾಮ ಸಿಗುತ್ತದೆ. ಒಟ್ಟಾರೆ, ಶಿಸ್ತು ಇಲ್ಲದೆ ಇಂತಹ ಪರಿಣಾಮ ಉಂಟಾಗುವಂತೆ ಮಾಡಬೇಕು ಎಂದರೆ ಅದು
ಆಗುವುದಿಲ್ಲ.


ಅರವಿಂದ ಚೊಕ್ಕಾಡಿ

ವರ್ತಮಾನದ ಶಿಕ್ಷಣದ ಬಹಳ ದೊಡ್ಡ ಸಮಸ್ಯೆ ಇರುವುದು, ಶಿಕ್ಷಣವನ್ನು ಹೇಗೆ ಕೊಂಡೊಯ್ಯಬೇಕೆಂಬ ಕಲ್ಪನೆಯೇ ಇಲ್ಲದೆ ಅದನ್ನು ಕೊಂಡೊಯ್ಯುತ್ತಿರು
ವುದು. ಉದಾಹರಣೆಗೆ, ಒಂದು ಪಠ್ಯಪುಸ್ತಕದ ಎಲ್ಲಾ ಪಾಠಗಳನ್ನು ಜೂನ್‌ನಿಂದ ಮಾರ್ಚ್‌ತನಕ ಪ್ರತೀ ತಿಂಗಳು/ಪ್ರತೀ ವಾರ/ಪ್ರತೀ ದಿನ ಹೇಗೆ ಹಂಚಿಕೆ ಮಾಡಿಕೊಂಡು ಮುಗಿಸಬೇಕು ಎನ್ನುವುದು ಒಂದು ಯೋಜನೆಯಾಗಿದೆ. ಅಷ್ಟೇ ಪಾಠಗಳನ್ನು ನವೆಂಬರ್‌ ನಿಂದ ಮಾರ್ಚ್‌ ಒಳಗೆ ಮುಗಿಸಲು ಹೇಗೆ ಹಂಚಿಕೆ ಮಾಡಬೇಕು ಎಂದು ಮತ್ತೊಂದು ಯೋಜನೆ ಮಾಡಲಾಗುತ್ತದೆ. ಇಲ್ಲಿ ಭಾಗಿಸುವ ಕೆಲಸ ಮಾತ್ರ ನಡೆ ಯುವುದು. ಹತ್ತು ಪಾಠಗಳನ್ನು ಹತ್ತು ತಿಂಗಳುಗಳಲ್ಲಿ ಮುಗಿಸಬೇಕಾದರೆ ತಿಂಗಳಿಗೆ ಒಂದು ಪಾಠವನ್ನು ಮುಗಿಸಬೇಕು. ಹಾಗಾದರೆ ಹತ್ತು ಪಾಠಗಳನ್ನು ಐದು ತಿಂಗಳುಗಳಲ್ಲಿ ಮುಗಿಸಬೇಕಾದರೆ ತಿಂಗಳಿಗೆ ಎರಡು ಪಾಠಗಳನ್ನು ಮುಗಿಸಬೇಕು. ಎರಡೂವರೆ ತಿಂಗಳಿನಲ್ಲಿ ಮುಗಿಸಬೇಕಾದರೆ ತಿಂಗಳಿಗೆ ನಾಲ್ಕು ಪಾಠಗಳನ್ನು ಮಾಡಬೇಕು. ಇದು ಲೆಕ್ಕಾಚಾರ. ಆದರೆ ಬೋಧನಾ ಪದ್ಧತಿಯ ಪ್ರಕಾರ, ಒಂದು ತಿಂಗಳಿನಲ್ಲಿ ಮುಗಿಸಲೆಂದು ಸಿದ್ಧಪಡಿಸಿದ ಪಾಠವನ್ನು ಹದಿನೈದು ದಿನಗಳಲ್ಲಿ ಮುಗಿಸಲು ಆಗುತ್ತದೆಯೇ? ಆಗುತ್ತದೆ ಎಂದಾದರೆ ಅದಕ್ಕೆ ಮೂಲತಃ ಒಂದು ತಿಂಗಳ ಅವಧಿಯನ್ನು ಹಂಚಿಕೆ ಮಾಡಿದ್ದೇಕೆ? ಆಗುವುದಿಲ್ಲ ಎನ್ನುವುದಾದರೆ ‘ಮುಗಿಸುವ’ ಪಾಠ ಬೋಧನೆಯಲ್ಲಿ ಅಳವಡಿಸ ಬೇಕಾದ ಬೋಧನಾ ವಿಧಾನ ಏನು? ಈ ಬಗ್ಗೆ ಸ್ಪಷ್ಟತೆಯೇ ಇಲ್ಲದಿರುವುದು ವರ್ತಮಾನದ ಶಿಕ್ಷಣದ ಬಹುದೊಡ್ಡ ಸಮಸ್ಯೆಯಾಗಿದೆ. ಇಲ್ಲಿ ಹೇಗೆ ಕಲಿಸಬೇಕು ಎಂಬ ಪ್ರಶ್ನೆಗೆ ಶಿಕ್ಷಕರಿಗೂ ಹೇಗೆ ಕಲಿತುಕೊಳ್ಳಬೇಕು ಎಂಬ ಪ್ರಶ್ನೆಗೆ ವಿದ್ಯಾರ್ಥಿಗಳಿಗೂ ಉತ್ತರವೇ ದೊರಕುವುದಿಲ್ಲ.

ವರ್ತಮಾನದ ಶಿಕ್ಷಣದ ಇನ್ನೊಂದು ಸಮಸ್ಯೆ ಕಲಿಕಾ ಸಿದ್ಧತೆಗೆ ಸಂಬಂಧಿಸಿದೆ. ಕೊರೊನಾದಿಂದ ತತ್ತರಿಸಿ ಹೆಚ್ಚು ಕಡಿಮೆ ಎರಡು ವರ್ಷಗಳ ಕಾಲ ವಿದ್ಯಾರ್ಥಿಗಳು ಅಸಹಜ ಶೈಕ್ಷಣಿಕ ಸನ್ನಿವೇಶವನ್ನು ಎದುರಿಸಿದ್ದಾರೆ. ಏನೂ ಇಲ್ಲದ್ದಕ್ಕೆ ಇಷ್ಟಾದರೂ ಆಯಿತು ಎಂಬಂತೆ ಆನ್‌ಲೈನ್ ಶಿಕ್ಷಣ ಕೆಲಸ ಮಾಡಿದೆಯೇ ಹೊರತು ಆನ್‌ಲೈನ್ ಶಿಕ್ಷಣವು ಸಹಜ ತರಗತಿಗಳಿಗೆ ಪರ್ಯಾಯವೆಂದು ಯಾರೂ ಭಾವಿಸಿಲ್ಲ. ಸುಮಾರು ಎರಡು ವರ್ಷಗಳ ಅಸಹಜ ಶೈಕ್ಷಣಿಕ ಸನ್ನಿವೇಶ ದಲ್ಲಿ ವಿದ್ಯಾರ್ಥಿಗಳು ಕಲಿಕಾ ಸಮಸ್ಯೆಗಳನ್ನು ಮಾತ್ರ ಎದುರಿಸಿರುವುದಲ್ಲ. ಅವರ ವಯಸ್ಸು ಬೆಳೆದಿರುತ್ತದೆ. ಮಕ್ಕಳ ಬಾಲ್ಯ ಕಾಲದಲ್ಲಿ ಕೊರೊನಾ ಸಾಂಕ್ರಾಮಿಕ ಕಾಣಿಸಿಕೊಂಡಿತು, ತಾರುಣ್ಯದಲ್ಲಿ ಶಾಲೆ ಮತ್ತೆ ಸಹಜ ರೀತಿಯಲ್ಲಿ ಶುರುವಾಯಿತು ಎಂಬಂತಹ ಸನ್ನಿವೇಶ ಇರುತ್ತದೆ. ತಾರುಣ್ಯದ ಪ್ರಾರಂಭದಲ್ಲಿ ಸಹಜ ಶಿಕ್ಷಣದ ಅನುಭವವೇ ಮಕ್ಕಳಿಗೆ ಇರುವುದಿಲ್ಲ. ಕೆಲವರಲ್ಲಿ ತಾರುಣ್ಯದ ಗುಂಗು ಬಂದಿರುತ್ತದೆ. ಆ ಗುಂಗು ಬಂದಾಗ ಸಹಜ ತರಗತಿಗಳು ಇರಲಿಲ್ಲ. ಮಕ್ಕಳು ಯಾವುದೋ ಒಂದು ಮನೋಸ್ಥಿತಿಗೆ ಹೊಂದಿಕೊಂಡುಬಿಟ್ಟಿರು ತ್ತಾರೆ. ಕೆಲವು ವಿದ್ಯಾರ್ಥಿಗಳು ಆದಾಯ ಗಳಿಕೆಯನ್ನು ಮಾಡಿರುತ್ತಾರೆ. ಹಣ ಸಂಪಾದನೆಯ ಶಕ್ತಿ ತನಗಿದೆ ಎನ್ನುವುದು ಕಲಿಕೆಯ ಕುರಿತ ಅವರ ಚಿಂತನೆಯನ್ನೇ ಬದಲಿಸಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಮನೆಯ ಶಿಸ್ತೂ ಶಾಲೆಯ ಶಿಸ್ತೂ ಒಂದೇ ಅಲ್ಲ. ಮನೆಯ ಶಿಸ್ತಿಗೆ ಹೊಂದಿಕೊಂಡ ಮಕ್ಕಳಿಗೆ ಶಾಲೆಯ ಶಿಸ್ತು ಹಿಂಸೆಯನ್ನು ಉಂಟುಮಾಡುತ್ತಾ ಇರುತ್ತದೆ. ಮಕ್ಕಳ‌ ಮನಃಸ್ಥಿತಿಯಲ್ಲೇ ಬಹಳಷ್ಟು‌ ಪಲ್ಲಟಗಳಾಗಿವೆ ಎಂಬುದು ಕೂಡ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.

ಇಂತಹ ಸಂದರ್ಭದಲ್ಲಿ‌ ಮೊದಲು ಆಗಬೇಕಾದದ್ದು ಮಕ್ಕಳನ್ನು‌ ನಿಧಾನವಾಗಿ, ಆದರೆ ಆಪ್ತವೂ ಪರಿಣಾಮ ಕಾರಿಯೂ ಆಗುವ ಹಾಗೆ ಶಾಲೆಯ ಕಲಿಕಾ ಶಿಸ್ತಿಗೆ ಒಳ ಪಡಿಸುವ ಕೆಲಸ.

ಕಲಿಕಾ ಶಿಸ್ತು ಎರಡು ಬಗೆಯದು. ಮೊದಲನೆಯದು, ಬಾಹ್ಯ ಶಿಸ್ತು.‌ ಎರಡನೆಯದು, ಆಂತರಿಕ ಶಿಸ್ತು. ನಿಜವಾಗಿ ಬೇಕಾಗಿರುವುದು ಆಂತರಿಕ ಶಿಸ್ತು. ಆದರೆ ವಿದ್ಯಾರ್ಥಿಗಳ ವಿಚಾರಕ್ಕೆ ಬಂದಾಗ ಬಾಹ್ಯ ಶಿಸ್ತನ್ನು ಸಬಲೀಕರಣ ಗೊಳಿಸುವ ಮೂಲಕ ಆಂತರಿಕ ಶಿಸ್ತು ತಾನಾಗಿ ಬರುವಂತೆ ಮಾಡುವುದೂ ಒಂದು ವಿಧಾನವಾಗಿದೆ. ಉದಾಹರಣೆಗೆ, ಪುಸ್ತಕಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡುವ ಮಕ್ಕಳಲ್ಲಿ ಅಚ್ಚುಕಟ್ಟುತನದ ಆಂತರಿಕ ಶಿಸ್ತು ಇರುತ್ತದೆ ಎಂದು ಶೈಕ್ಷಣಿಕ ಮನೋವಿಜ್ಞಾನವು ಹೇಳುತ್ತದೆ. ಆಗ, ಅಚ್ಚು ಕಟ್ಟುತನದ ಆಂತರಿಕ ಶಿಸ್ತು ಇಲ್ಲದ ಮಕ್ಕಳಲ್ಲಿ ಪುಸ್ತಕವನ್ನು ಅಚ್ಚುಕಟ್ಟಾಗಿ ಇಡುವ, ಬಟ್ಟೆಗಳನ್ನು ಜೋಡಿಸುವ ಚಟುವಟಿಕೆಗಳಲ್ಲೆಲ್ಲ ಅಚ್ಚುಕಟ್ಟುತನವನ್ನು ಬೆಳೆಸುತ್ತಾ ಹೋಗಿ ಕ್ರಮೇಣ ಅದೇ ಆಂತರಿಕ ಶಿಸ್ತಾಗುವಂತೆ ಮಾಡಬೇಕು. ಇದು ಏಕಾಏಕಿ ಆಗುವುದಿಲ್ಲ. ಸಮಯ ತೆಗೆದುಕೊಳ್ಳು
ತ್ತದೆ. ಮತ್ತೆ ಮತ್ತೆ ಹೇಳಬೇಕು.‌ ಮತ್ತೆ ಮತ್ತೆ ಮಾಡಿಸ ಬೇಕು. ಹಾಗೆ ವಿದ್ಯಾರ್ಥಿಗಳ ಹಿಂದೆ ನಿಲ್ಲುತ್ತಾ ಹೋದ ಹಾಗೆ ನಿಧಾನವಾಗಿ ಕಲಿಕೆಗೆ ಬೇಕಾದ ಮಾನಸಿಕ ಶಿಸ್ತಿನ ಸಿದ್ಧತೆ ಅವರಲ್ಲಿ ಬರುತ್ತದೆ.

ಮಕ್ಕಳು ಜೀವಂತ ವ್ಯಕ್ತಿಗಳು. ಒಂದು ಕಡತಕ್ಕೆ ಷರಾ ಬರೆದು ಮುಗಿಸಿದ ಹಾಗೆ ಅವರಲ್ಲಿ ವರ್ತನಾ ಪರಿವರ್ತನೆ ಯನ್ನು ತರಲು ಸಾಧ್ಯವಿಲ್ಲ. ಸಮಯ ಬೇಕಾಗುತ್ತದೆ, ಅದನ್ನು ಮಾಡಲು ಶಿಕ್ಷಕರಿಗೆ ಸಮಯ ಕೊಡಬೇಕು.

ಈ ಅವಶ್ಯಕತೆಯನ್ನು ಗಮನಿಸದೆ ಕೊರೊನೋತ್ತರ ಶೈಕ್ಷಣಿಕ ಸಂದರ್ಭದಲ್ಲಿ ಸಹ ಅದನ್ನೂ ಮಾಡಿ, ಇದನ್ನೂ ಮಾಡಿ, ಘಟಕ ಪರೀಕ್ಷೆ, ಪ್ರಗತಿಪತ್ರ, ಸೆಮಿಸ್ಟರ್ ಪರೀಕ್ಷೆ, ಕ್ರೀಡೆ, ಕ್ವಿಝ್, ಸಾಂಸ್ಕೃತಿಕ ಚಟುವಟಿಕೆ, ರಾಷ್ಟ್ರೀಯ ಹಬ್ಬಗಳ ಆಚರಣೆ, ನಡುವೆ ತರಗತಿಗೆ ಹೋಗುವ ಬದಲು ಶಿಕ್ಷಕರು ತರಬೇತಿಗೆ ಹೋಗಿ, ಅಲ್ಲಿ ಆ ಕೆಲಸ, ಈ ಕೆಲಸ, ದಾಖಲೆ ವಹಿ, ವರದಿ ಕಳಿಸಿ ಎಂದು ಸನ್ನಿವೇಶದ ಗಾಂಭೀರ್ಯವನ್ನೇ ಗಮನಿಸದೆ ಎಂದಿನಂತೆ ವರ್ತಿಸುತ್ತಾ ಹೋದರೆ, ದೊಡ್ಡ ಪ್ರಮಾಣದಲ್ಲಿ ಒಂದು ತಲೆಮಾರಿನ ವಿದ್ಯಾರ್ಥಿಗಳ ಮೇಲೆ ಶೈಕ್ಷಣಿಕ ಹೊಡೆತ ಉಂಟಾಗುತ್ತದೆ.

ಕಲಿಕೆ ನಡೆಸಿದ ನಂತರ ಕಲಿಕೆ ಎಷ್ಟು ಪ್ರಮಾಣದಲ್ಲಿ ನಡೆದಿದೆ ಎಂದು ಮೌಲ್ಯಮಾಪನ ಮಾಡಿ ಫಲಿತಾಂಶ ವನ್ನು ಪಡೆಯುವುದು ಯಾವುದೇ ಶಿಕ್ಷಣ ವ್ಯವಸ್ಥೆಯ ಅಗತ್ಯವಾದ ಪ್ರಕ್ರಿಯೆಯಾಗಿದೆ. ನಮ್ಮಲ್ಲಿ ಬಹುಮಟ್ಟಿಗೆ ಸರ್ವ ಶಿಕ್ಷಣ ಅಭಿಯಾನ ಬಂದ ನಂತರ, ಕಲಿಕೆಗೆ ಪರಿಗಣನೆ ಇಲ್ಲ, ಫಲಿತಾಂಶಕ್ಕೆ ಮಾತ್ರ ಪರಿಗಣನೆ ಎಂಬ ಧೋರಣೆ ಬಂದಿದೆ. ಕೇವಲ ಪ್ರಶ್ನೋತ್ತರಗಳ ಯಾಂತ್ರಿಕ ಅಭ್ಯಾಸದಿಂದ ಬರುವ ಅಂಕಗಳನ್ನು ಶೈಕ್ಷಣಿಕ ಸಾಧನೆಯಾಗಿ ಸ್ವೀಕರಿಸುವ ವ್ಯವಸ್ಥೆ ಈಗಾಗಲೇ ಊರ್ಜಿತದಲ್ಲಿದೆ. ಆದರೆ ಸುಮಾರು ಎರಡು ವರ್ಷಗಳ ಕಲಿಕಾ ಅಡಚಣೆಯ ನಂತರ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಕ್ರಿಯೆ ಪ್ರಾರಂಭ ಆದಾಗಲೂ ಈ ಪದ್ಧತಿಯ ದಾರುಣ ಸ್ಥಿತಿಯ ಬಗ್ಗೆ ಚಿಂತಿಸದೆ ಫಲಿತಾಂಶವನ್ನು ಬೆನ್ನು ಹತ್ತುವ ಪದ್ಧತಿಯನ್ನೇ ಯಥಾಪ್ರಕಾರ ಪಾಲಿಸುತ್ತೇವೆ ಎನ್ನುವುದು ನಮ್ಮ ಚಿಂತನಾ ಶೂನ್ಯತೆಯನ್ನು ಸೂಚಿಸುತ್ತದೆ. ಈಗಾಗಲೇ ಕೆಲವು ಪೋಷಕರಿಗಾದರೂ ಬರಿಯ ಫಲಿತಾಂಶದಿಂದ ಉಪಯೋಗವಿಲ್ಲ, 625ಕ್ಕೆ 625 ಎನ್ನುವುದೇ ಮಕ್ಕಳ ಭವಿಷ್ಯವನ್ನು ರೂಪಿಸುವುದಿಲ್ಲ, ಕಲಿಕಾನುಭವಗಳೇ ಬೇಕಾಗುತ್ತವೆ ಎನ್ನುವುದು ಗೊತ್ತಾಗಿದೆ. ಆದಷ್ಟು ಬೇಗ ಇದು ಎಲ್ಲರಿಗೂ ಗೊತ್ತಾಗಬೇಕು.

ಈ ಕ್ಷಣದ ಮಟ್ಟಿಗೆ ಮಕ್ಕಳನ್ನು ಕಲಿಕೆಗೆ ಸಿದ್ಧಗೊಳಿಸುವ ಮಾನಸಿಕ ಚಟುವಟಿಕೆಗಳು ಮುಖ್ಯವಾಗಿವೆ. ಪ್ರಾರಂಭ ದಲ್ಲಿ ಅತೀ ಸರಳವಾದ ಕೆಲವು ಅಗತ್ಯಗಳನ್ನು ಹೇಳಿ, ಆ ಚೌಕಟ್ಟಿನ ವ್ಯಾಪ್ತಿಗೆ ವಿದ್ಯಾರ್ಥಿಗಳು ಬರಬೇಕು.‌ ನಂತರದ ಹಂತದಲ್ಲಿ ಮಾನಸಿಕ ಚಟುವಟಿಕೆಗಳನ್ನು‌ ಕೊಂಚ ಉನ್ನತೀಕರಿಸಬೇಕು. ಕಲಿಕಾ ಸನ್ನಿವೇಶಕ್ಕೆ ಪೂರ್ತಿ ಯಾಗಿ ವಿದ್ಯಾರ್ಥಿಗಳನ್ನು ಹೊಂದಿಸುವುದು ಇಂದಿನ ಅಗತ್ಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು