ಬುಧವಾರ, ಸೆಪ್ಟೆಂಬರ್ 22, 2021
28 °C
ತೈಲ ಸೋರಿಕೆಯಿಂದ ಆಗುವ ಸಾಗರ ಮಾಲಿನ್ಯ ತಡೆಗೆ ಕಾನೂನಿನ ಲಗಾಮಿಲ್ಲವೇ?

ಟಿ.ಆರ್.ಅನಂತರಾಮು ಲೇಖನ | ಸಾಗರಕ್ಕಂಟಿದ ತೈಲ ಕಂಟಕ

ಟಿ.ಆರ್.ಅನಂತರಾಮು Updated:

ಅಕ್ಷರ ಗಾತ್ರ : | |

ಸಾಗರ ಮತ್ತು ತೈಲ

ರಷ್ಯಾದ ಸೈಬೀರಿಯ ಪ್ರಾಂತ್ಯದಲ್ಲಿರುವ ನಗರ ನೋರಿಲ್ಸ್‌ಕ್‌, ಜಗತ್ತಿಗೆ ಅಷ್ಟೇನೂ ಪರಿಚಿತವಲ್ಲದಿದ್ದರೂ ಈಗ ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡಿದೆ. ಚಳಿಗಾಲದಲ್ಲಿ ಕೆಲವೊಮ್ಮೆ ಉಷ್ಣಾಂಶ ಮೈನಸ್ 50 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಈ ನಗರವು ಜಗತ್ತಿನ ಏಕಾಂತ ನಗರಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ. ಹಿಂದೆ ಸ್ಟಾಲಿನ್ ಆಳ್ವಿಕೆಯಲ್ಲಿ, ರಾಷ್ಟ್ರದ್ರೋಹ ಮಾಡಿದರೆಂಬ ಆರೋಪ ಹೊತ್ತವರನ್ನು ಇಲ್ಲಿಗೆ ಕಳಿಸಲಾಗುತ್ತಿತ್ತು. ಈಗ ಅದೇ ಸಂತತಿ ಮುಂದುವರಿದು, ಸುಮಾರು ಎರಡು ಲಕ್ಷ ಮಂದಿ ಅಲ್ಲೇ ನೆಲೆಸಿದ್ದಾರೆ, ಹೊರಜಗತ್ತನ್ನು ನೋಡುವುದು ಬಲು ಅಪರೂಪ. ರಸ್ತೆಗಳಿಲ್ಲ, ವಿಮಾನ ಹಾರಾಟ ಮಾತ್ರ. ಚಳಿಗಾಲದಲ್ಲಿ ಗಟ್ಟಿ ಬರ್ಫ ಜಲಜಾಲಗಳನ್ನೆಲ್ಲ ಕಲ್ಲಂತೆ ಮಾಡಿದಾಗ, ಅದೇ ರಸ್ತೆಯಾಗುವುದುಂಟು.

ಈ ಪಟ್ಟಣಕ್ಕೆ ಅಪಖ್ಯಾತಿ ತಂದಿರುವುದು ಅಲ್ಲಿನ ನಿಕ್ಕಲ್ ಕಂಪನಿ. ಜಗತ್ತಿಗೆ ಬೇಕಾದಷ್ಟು ನಿಕ್ಕಲ್ ಮತ್ತು ಪೆಲಾಡಿಯಮ್ ಲೋಹಗಳನ್ನು ಉತ್ಪಾದನೆ ಮಾಡುತ್ತಿದೆ. ಅಲ್ಲಿನ ಬಹುತೇಕ ಜನರಿಗೆ ಇದೇ ಆಶ್ರಯ, ರಷ್ಯಾದ ಬೊಕ್ಕಸಕ್ಕೂ ಭಾರಿ ಹಣ ತಂದುಕೊಡುತ್ತಿದೆ. ಆದರೆ ನಗರವನ್ನು ಮಾಲಿನ್ಯದ ಮಡು ಮಾಡಿದೆ. ಇಲ್ಲೊಂದು ಉಷ್ಣಸ್ಥಾವರವಿದೆ. ತುರ್ತು ಪರಿಸ್ಥಿತಿಗೆ ಒದಗಿಬರಲೆಂದು 21 ಲಕ್ಷ ಲೀಟರ್ ಡೀಸೆಲ್ ಸಂಗ್ರಹಿಸಿ ಇಟ್ಟಿತ್ತು. ಕಳೆದ ಮೇ ತಿಂಗಳ ಕೊನೆಯ ಹೊತ್ತಿಗೆ ಟ್ಯಾಂಕ್‍ನಿಂದ ಅಷ್ಟೂ ಡೀಸೆಲ್ ಸೋರಿ ಪಕ್ಕದ ಹಿಮನದಿ ಮೂಲದ ಪ್ಯಾಸಿನೋ ಎಂಬ ಸಿಹಿನೀರಿನ ಸರೋವರಕ್ಕೆ ಹರಿದುಬಂತು. ಇದು ತುಂಬಿದರೆ ಮುಂದೆ ನದಿಗೆ ಹರಿಯಬೇಕು, ಅದು ಉತ್ತರ ಧ್ರುವ ಸಾಗರವನ್ನು ಸೇರಬೇಕು.

ಯಾವುದೇ ಪರಿಸರ ಕಾನೂನಿಗೆ ಬಗ್ಗದೆ ಸೆಟೆದು ನಿಂತ ನಿಕ್ಕಲ್ ಕಂಪನಿಯ ಧೋರಣೆಗೆ ಪಾಠ ಕಲಿಸಲು ಅಧ್ಯಕ್ಷ ಪುಟಿನ್ ಇನ್ನೂರು ಕೋಟಿ ಡಾಲರ್ (₹ 15,058 ಕೋಟಿ) ದಂಡ ವಿಧಿಸಿದರು. ಸುಮಾರು 700 ಮಂದಿಯ ಪಡೆ, ಡೀಸೆಲ್ ಮೆತ್ತಿದ್ದ ನೀರನ್ನು ತ್ವರಿತವಾಗಿ ಹತೋಟಿಗೆ ತರಲು ಎಂಥೆಂಥದೋ ತಡೆ ಬಲೆಗಳನ್ನು ಹಾಕಿತು. ಆದರೆ ಅದು ಫಲ ಕೊಡಲಿಲ್ಲ. ಕಂಪನಿ ಇದರಲ್ಲಿ ತನ್ನ ತಪ್ಪೇನಿಲ್ಲವೆಂದೂ ಜಾಗತಿಕ ತಾಪ ಏರಿಕೆಯಿಂದ ಟ್ಯಾಂಕ್ ಮೇಲಿದ್ದ ಹಿಮಗಡ್ಡೆ ಕರಗಿ ಈ ಅವಘಡ ಘಟಿಸಿದೆಯೆಂದೂ ವಾದಿಸಿತು. ರಷ್ಯಾದ ‘ಗ್ರೀನ್ ಪ್ಯಾಟ್ರೋಲ್’ ಎಂಬ ಪರಿಸರ ಸಂಸ್ಥೆ ತ್ವರಿತವಾಗಿ ಡ್ರೋನ್ ಹಾರಿಸಿ, ಆ ಸರೋವರದ ನೀರು ರಕ್ತದಂತೆ ಕೆಂಪಾಗಿದೆಯೆಂದು ತೋರಿಸಿದಾಗ ಕಂಪನಿ ತನ್ನನ್ನು ಸಮರ್ಥಿಸಿಕೊಳ್ಳಲಾಗಲಿಲ್ಲ. ಇದೇ ಕಂಪನಿ 2011ರಲ್ಲಿ ಅದೇ ನಗರದಲ್ಲಿ ದೊಡ್ಡ ಪ್ರಮಾಣದ ಗಂಧಕದ ಡೈ ಆಕ್ಸೈಡ್ ಬಿಡುಗಡೆ ಮಾಡಿದಾಗ, ಆ ಸಂಸ್ಥೆಯ ಸ್ಥಾವರಗಳೂ ಸೇರಿದಂತೆ ಇಡೀ ನಗರ ಹುಳಿಮಳೆಯಿಂದ ತೊಯ್ದಿತ್ತು.


ಟಿ.ಆರ್.ಅನಂತರಾಮು

ಸಾಗರದ ಮೇಲೆ ತೈಲ ಸುರಿದಾಗ ಅದು ಯಾವ ಭಾಗದಲ್ಲಿ ಘಟಿಸಿದೆ ಎಂಬುದು ಮುಖ್ಯ. ಉಷ್ಣವಲಯ ಸಾಗರಗಳಲ್ಲಿ ತೈಲ ಸೋರಿಕೆಯಾದರೆ ಕೊನೆಯ ಪಕ್ಷ ಭಾಷ್ಪವಾಗಲು ದೀರ್ಘಕಾಲ ತೆಗೆದುಕೊಳ್ಳುವುದಿಲ್ಲ. ಆದರೆ ಉತ್ತರ ಧ್ರುವಪ್ರದೇಶದ ಸುತ್ತಮುತ್ತ ಇಂಥ ಅವಘಡಗಳಾದಾಗ ತೈಲದ ಜಿಡ್ಡು ಸುಲಭವಾಗಿ ಭಾಷ್ಪವಾಗುವುದಿಲ್ಲ. ಏಕೆಂದರೆ ಇಲ್ಲಿ ಉಷ್ಣತೆಯು ವರ್ಷದ ಹೆಚ್ಚಿನ ಕಾಲ ಸೊನ್ನೆಯಿಂದ ಕೆಳಗೆ 20 ಡಿಗ್ರಿ ಸೆ.ಗೆ ಇಳಿದಿರುತ್ತದೆ. ‘ಗ್ರೀನ್ ಪ್ಯಾಟ್ರೋಲ್’ ಅಂದಾಜು ಮಾಡಿರುವಂತೆ, ಈ ಭಾಗ ತೈಲದಿಂದ ಮುಕ್ತವಾಗಬೇಕಾದರೆ ಕನಿಷ್ಠ ನೂರಕ್ಕಿಂತ ಹೆಚ್ಚು ವರ್ಷಗಳು ಬೇಕು. ರಷ್ಯಾದ ಮಟ್ಟಿಗೆ ಸೈಬೀರಿಯ ಪ್ರದೇಶದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ತೈಲ ಸೋರಿಕೆಯಾದದ್ದು ಇದೇ ಮೊದಲು. ಅದಕ್ಕಾಗಿ ಸೈಬೀರಿಯದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಬೇಕಾಯಿತು.

ಸಾಗರಗಳಿಗೆ ತೈಲ ಸೋರಿಕೆಯಾಗುತ್ತಿರುವುದು ಇದೇ ಮೊದಲೇನಲ್ಲ. 1991ರ ಖಾರಿ ಯುದ್ಧದಲ್ಲಿ ಕುವೈತ್‍ನಿಂದ ಇರಾಕಿ ಸೈನ್ಯಪಡೆ ಮರಳಿ ಬರುವಾಗ ಅಮೆರಿಕದ ಪಡೆಯನ್ನು ಕಂಗೆಡಿಸಲೆಂದು ಇರಾಕ್, ಪರ್ಷಿಯಾದ ಕೊಲ್ಲಿಗೆ ಕುವೈತ್‍ನ ತೈಲ ಸಂಗ್ರಹಗಳಿಂದ 24 ಕೋಟಿ ಟನ್ ತೈಲವನ್ನು ಸುರಿದಿತ್ತು. ತೈಲದ ಜಿಡ್ಡಿಗೆ ಸಿಕ್ಕಿ ಸುಮಾರು 82,000 ಸಾಗರ ಹಕ್ಕಿಗಳು ರೆಕ್ಕೆ ಬಿಚ್ಚದೆ ಅಲ್ಲೇ ಸತ್ತವು. ಬಹುಶಃ ಯುದ್ಧದ ಇತಿಹಾಸದಲ್ಲಾಗಲೀ ಅಥವಾ ಸಾಗರ ಸಂಪನ್ಮೂಲದ ದುರ್ಬಳಕೆಯ ದೃಷ್ಟಿಯಿಂದಾಗಲೀ ಇದು ಮಾನವಕೃತ ಮಹಾದುರಂತ. ಹಾಗೆಯೇ ಇಡೀ ತೈಲ ಚರಿತ್ರೆಯಲ್ಲಿ ಬ್ರಿಟಿಷ್ ಪೆಟ್ರೋಲಿಯಂ ಕಂಪನಿ ಮಾಡಿದ ತೈಲ ಮಾಲಿನ್ಯಕ್ಕೆ ಯಾವುದೂ ಸಾಟಿ ಅಲ್ಲ. ಜಗತ್ತಿನಲ್ಲೇ ತೈಲ ಮತ್ತು ಅನಿಲ ಉತ್ಪಾದನೆಯಲ್ಲಿ ಈ ಕಂಪನಿ ಆರನೆಯ ಸ್ಥಾನದಲ್ಲಿದೆ. ಎಂಬತ್ತು ದೇಶಗಳಲ್ಲಿ ತೈಲ ವಹಿವಾಟು ನಡೆಸುತ್ತಿದೆ. ಮೆಕ್ಸಿಕೊ ಕೊಲ್ಲಿಯಲ್ಲಿ ಇದು ತೈಲ ಶೋಧಿಸುತ್ತ ಹೆಚ್ಚು ಕಡಿಮೆ ಸಾಗರ ತಳದಿಂದ ನೆಲಕ್ಕೆ ಐದು ಕಿಲೊಮೀಟರಿಗೂ ಮಿಕ್ಕು ಕೊಳವೆಗಳನ್ನು ಇಳಿಸಿದೆ. 2010ರಲ್ಲಿ ಡ್ರಿಲ್ಲಿಂಗ್ ಯಂತ್ರವೊಂದು ಸ್ಫೋಟವಾಗಿ, ಅದು ಹೊರಚೆಲ್ಲಿದ ತೈಲ 2,100 ಕಿಲೊಮೀಟರ್ ತೀರದುದ್ದಕ್ಕೂ ಮಾಲಿನ್ಯ ಉಂಟು ಮಾಡಿತು. ದಿನಕ್ಕೆ ಅದು ಚೆಲ್ಲುತ್ತಿದ್ದುದು 9.5 ಕೋಟಿ ಲೀಟರ್ ಎಂದರೆ ಆರ್ಥಿಕವಾಗಿ ಆದ ನಷ್ಟ ದಿಗ್ಭ್ರಮೆಗೊಳಿಸುತ್ತದೆ.

ಬ್ರಿಟಿಷರು ಅಂಥ ಆಪತ್ತಿನಲ್ಲೂ ದಿನಕ್ಕೆ ಸುಮಾರು ಎರಡೂವರೆ ಕೋಟಿ ಲೀಟರ್ ತೈಲವನ್ನು ಕೊಳವೆಯಿಂದ ಟ್ಯಾಂಕ್‍ಗೆ ಹರಿಸುವಲ್ಲಿ ಯಶಸ್ವಿಯಾದರು. ಕೊನೆಗೆ ಇದು ಅಮೆರಿಕದ ನ್ಯಾಯಾಲಯದ ಕಟಕಟೆ ಹತ್ತಿತು. ಇಡೀ ತೀರ ಪ್ರದೇಶದ ಜಲಚರಗಳಿಗೂ ಮತ್ತು ಜನಕ್ಕೂ ತೀವ್ರವಾದ ನಷ್ಟ ಉಂಟುಮಾಡಿದೆ ಎಂದು ತೀರ್ಪು ಕೊಟ್ಟು ಸುಮಾರು 6,500 ಕೋಟಿ ಡಾಲರ್ (₹ 4,89,385 ಕೋಟಿ) ಪರಿಹಾರ ಕೊಡಬೇಕೆಂದು ಆಜ್ಞೆ ಮಾಡಿತು. ಇದೇ ಪ್ರದೇಶವನ್ನು 2014ರಲ್ಲಿ ಸಮೀಕ್ಷೆಗೆ ಒಳಪಡಿಸಿದಾಗ ಸುಮಾರು ಎಂಟು ಲಕ್ಷ ಪಕ್ಷಿಗಳ ಕಳೇಬರಗಳು ಕಂಡವು. ಅರವತ್ತೈದು ಸಾವಿರ ಕಡಲಾಮೆಗಳು ಅಂಗಾತವಾಗಿ ಸತ್ತುಬಿದ್ದಿದ್ದವು. ಈ ದುರಂತವನ್ನೇ ಚಲನಚಿತ್ರ ಮಾಡಿ ಹಾಲಿವುಡ್ ಚಿತ್ರ ಕಂಪನಿಯೊಂದು 2016ರಲ್ಲಿ 12 ಕೋಟಿ ಡಾಲರ್‌ ಅನ್ನು ಬಾಕ್ಸ್ ಆಫೀಸಿನಲ್ಲಿ ಗಳಿಸಿದ್ದು ಬೇರೆಯ ಸಂಗತಿಯೇ.

ಇಂಥ ಘಟನೆಗಳು ಕಳೆದ 50ರ ದಶಕದಿಂದ ಹತ್ತು ಬಾರಿಯಾದರೂ ಸಂಭವಿಸಿವೆ. ಪ್ರತಿಬಾರಿಯೂ ತೈಲ ಸಾಗಿಸುವ ಕಂಪನಿಗಳು ಏನಾದರೂ ಕಾರಣ ನೀಡಿ ದೊಡ್ಡ ಪ್ರಮಾಣದ ದಂಡವನ್ನು ತಪ್ಪಿಸಿಕೊಳ್ಳುತ್ತಿವೆ. ಹಾಗಾದರೆ ಇವಕ್ಕೇನೂ ಕಾನೂನಿನ ಲಗಾಮುಗಳಿಲ್ಲವೇ ಎಂಬ ಪ್ರಶ್ನೆ ಏಳುತ್ತದೆ. ವಿಶ್ವಸಂಸ್ಥೆಯು 1958ರಲ್ಲೇ ಜಿನಿವಾ ಸಮ್ಮೇಳನದಲ್ಲಿ ಸಾಗರ ಕಾನೂನು ರಚಿಸಲು ಪ್ರಸ್ತಾಪ ಮಾಡಿತು. ಆದರೆ ಆಗ ಇದ್ದ ಸಮಸ್ಯೆಯೇ ಬೇರೆ. ಅದು, ಯಾವ ದೇಶ ತನ್ನ ಸುತ್ತ ಇರುವ ಸಾಗರವನ್ನು ಎಷ್ಟು ಬಳಸಿಕೊಳ್ಳಬೇಕು? ವಿಶಿಷ್ಟ ಆರ್ಥಿಕ ವಲಯದಲ್ಲಿ ಏನೇನು ಕಾರ್ಯಗಳನ್ನು ಮಾಡಬಹುದು? ಸಾಗರ ತಳದ ಸಂಪನ್ಮೂಲವನ್ನು ಪಡೆಯುವಾಗ ಆಗುವ ಮಾಲಿನ್ಯವನ್ನು ಹೇಗೆ ಆಯಾ ದೇಶಗಳೇ ನಿಭಾಯಿಸಬೇಕು ಎಂಬುದರತ್ತ ಮಾತ್ರ ಗಮನ ಕೇಂದ್ರೀಕರಿಸಿತು. ಈ ಚೌಕಟ್ಟಿನಲ್ಲಿ ಮುಂದೆ ಸಾಗರದ ಪರಿಸರವನ್ನು ರಕ್ಷಿಸಲು ಮತ್ತು ಸಂರಕ್ಷಣೆ ಮಾಡಲು ಇನ್ನಷ್ಟು ಅಂಶಗಳನ್ನು 1982ರಲ್ಲಿ ಸೇರಿಸಿತು. ತೈಲದಿಂದ ಆಗುವ ಸಾಗರ ಮಾಲಿನ್ಯ ಕುರಿತು ಈಗಲೂ ಯಾವುದೇ ಸ್ಪಷ್ಟ ನಿರ್ದೇಶನಗಳಿಲ್ಲ.

ಇಲ್ಲಿ ಎರಡು ಅಂಶಗಳು ಮುನ್ನೆಲೆಗೆ ಬರುತ್ತವೆ. ಒಂದು, ಸಾಗರದ ತಳದಿಂದ ಎತ್ತಿದ ತೈಲ ನಿರುಪಯೋಗಿಯಾಗಿ ಸಾಗರದ ಜೀವಿಗಳಿಗೆ ಕುತ್ತಾಗುವುದು. ಇನ್ನೊಂದು, ಆರ್ಥಿಕವಾಗಿ ಲೆಕ್ಕಹಾಕಿದರೆ, ಹೊರತೆಗೆದ ತೈಲವೆಲ್ಲವೂ ನಷ್ಟದ ಬಾಬತ್ತೇ. ಈಗ ಬಳಸುತ್ತಿರುವ ತೈಲದ ಹೆಚ್ಚಿನ ಪಾಲು ಸುಮಾರು ಆರು ಕೋಟಿ ವರ್ಷಗಳಷ್ಟು ಹಿಂದಿನದು ಎಂಬುದನ್ನು ಮರೆಯಬಾರದು. ‘ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ’ ಇದು ಈಗಿನ ಸ್ಥಿತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು