ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಡಸಾಲೆ: ಕರ್ನಾಟಕಕ್ಕೆ ಸಾಂಸ್ಕೃತಿಕ ಗ್ಯಾರಂಟಿ ಮರೀಚಿಕೆಯೆ? ರಘುನಾಥ ಚ.ಹ ಅವರ ಲೇಖನ

ಸಾಮಾಜಿಕ ಕಾಳಜಿಯ ‘ಕರ್ನಾಟಕ ಮಾಡೆಲ್‌’ ಸಾಹಿತ್ಯ–ಸಂಸ್ಕೃತಿಗೆ ಅಪಥ್ಯ
Published : 20 ಸೆಪ್ಟೆಂಬರ್ 2023, 0:24 IST
Last Updated : 20 ಸೆಪ್ಟೆಂಬರ್ 2023, 0:24 IST
ಫಾಲೋ ಮಾಡಿ
Comments

ಸಾಮಾಜಿಕ ಸ್ಪಂದನಗಳಿಲ್ಲದ ಸರ್ಕಾರ ಸಮಾಜದ ನೇರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ. ಆ ಕಾರಣದಿಂದಲೇ, ಪ್ರಾಮಾಣಿಕವಲ್ಲದೆ ಹೋದರೂ ತೋರಿಕೆಗಾದರೂ ಜನಪರತೆಯ ಮುಖವಾಡವೊಂದನ್ನು ಧರಿಸಲು ಸರ್ಕಾರಗಳು ಪ್ರಯತ್ನಿಸುತ್ತಿರುತ್ತವೆ. ಸಮಾಜದ ಹಂಗಿನಿಂದ ದೂರವುಳಿಯುವುದು ಯಾವುದೇ ಸರ್ಕಾರಕ್ಕೆ ಅಸಾಧ್ಯ. ಈ ಹಂಗು ಸಂಸ್ಕೃತಿಗೆ ಸಂಬಂಧಿಸಿದಂತೆ ಸರ್ಕಾರವೊಂದಕ್ಕೆ ಅನಿವಾರ್ಯವಾಗಿರುವುದಿಲ್ಲ. ಆ ಕಾರಣದಿಂದಾಗಿಯೇ ಬಹುತೇಕ ಸರ್ಕಾರಗಳು ಸಾಂಸ್ಕೃತಿಕವಾಗಿ ಜಡವಾಗಿರುತ್ತವೆ. ಸ್ಪಷ್ಟವಾದ ಸಾಂಸ್ಕೃತಿಕ ನೀತಿಯನ್ನು ಹೊಂದಿರುವ ಸರ್ಕಾರವನ್ನು ಕರ್ನಾಟಕ ಈವರೆಗೆ ಕಂಡಿಲ್ಲ. ಈ ಸಾಂಸ್ಕೃತಿಕ ನಿರ್ಲಕ್ಷ್ಯಕ್ಕೆ ಈಗಿನ ಸರ್ಕಾರವೇನೂ ಹೊರತಾಗಿರುವಂತೆ ಕಾಣಿಸುತ್ತಿಲ್ಲ.

ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳುಗಳಾದವು. ಈ ಅವಧಿಯಲ್ಲಿ ‘ಕನ್ನಡ ಸಂಸ್ಕೃತಿ’ಗೆ ಸಂಬಂಧಿಸಿದಂತೆ ಸರ್ಕಾರ ಗಮನಾರ್ಹವಾದುದೇನನ್ನೂ ಮಾಡಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಹಿಂದಿನ ಸರ್ಕಾರದ ಅವಧಿಯಲ್ಲಿಯೇ ಅಧ್ಯಕ್ಷರ ನೇಮಕವಾಗಿರಲಿಲ್ಲ. 2022ರ ಅಕ್ಟೋಬರ್‌ನಲ್ಲಿ, ಮೂರು ವರ್ಷಗಳ ಅಧಿಕಾರಾವಧಿ ಪೂರ್ಣಗೊಂಡಿದ್ದರಿಂದ ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರು ತಮ್ಮ ಸ್ಥಾನದಿಂದ ನಿರ್ಗಮಿಸಿದ್ದರು. ಚುನಾವಣೆ ಸನ್ನಿಹಿತವಿದ್ದುದರಿಂದ, ಅಕಾಡೆಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸುವ ಗೋಜಿಗೆ ಬಿಜೆಪಿ ನೇತೃತ್ವದ ಸರ್ಕಾರ ಹೋಗಿರಲಿಲ್ಲ. ನಂತರದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೂ ಸಾಹಿತ್ಯ–ಸಾಂಸ್ಕೃತಿಕ ಸಂಸ್ಥೆಗಳಿಗೆ ಜೀವದುಂಬುವ ಕೆಲಸ ನಡೆದಿಲ್ಲ. ಸುಮಾರು ಒಂದು ವರ್ಷದಿಂದ ಅಕಾಡೆಮಿ ಮತ್ತು ಪ್ರಾಧಿಕಾರಗಳು ನಿಷ್ಕ್ರಿಯ ಸ್ಥಿತಿಯಲ್ಲಿವೆ.

ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಹೊಸತರಲ್ಲಿ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷತೆಗೆ ಪ್ರಯತ್ನಿಸುತ್ತಿರುವ ಸಾಹಿತಿಗಳ ಹೆಸರುಗಳು ದೊಡ್ಡ ಮಟ್ಟದಲ್ಲಿ ಚಲಾವಣೆಯಲ್ಲಿದ್ದವು. ಈ ಲಾಬಿಯ ತೀವ್ರತೆಯಿಂದಾಗಿಯೋ ಏನೋ, ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರ ನೇಮಕಕ್ಕೆ ತಜ್ಞರ ಶೋಧನಾ ಸಮಿತಿಯೊಂದನ್ನು ನೇಮಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದರು. ಆ ಸಮಿತಿಯ ನೇಮಕ ಯಾವ ಹಂತದಲ್ಲಿದೆ ಎನ್ನುವುದರ ಶೋಧಕ್ಕೂ ಒಂದು ಸಮಿತಿ ಅಗತ್ಯವಾಗಿರುವಂತಿದೆ.

ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿಯೇ ಸರ್ಕಾರ ತನ್ನೆಲ್ಲ ಶಕ್ತಿ ಮತ್ತು ಸಮಯ ಮೀಸಲಿರಿಸಿರುವಂತಿದೆ. ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ‘ಶಕ್ತಿ’, ಇನ್ನೂರು ಯುನಿಟ್‌ವರೆಗೆ ಉಚಿತ ಗೃಹವಿದ್ಯುತ್‌ ಬಳಕೆಯ ‘ಗೃಹಜ್ಯೋತಿ’, ಕುಟುಂಬದ ಯಜಮಾನಿಗೆ ಮಾಸಿಕ ₹ 2,000 ನೀಡುವ ‘ಗೃಹಲಕ್ಷ್ಮಿ’, ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ತಲಾ 10 ಕೆ.ಜಿ. ಅಕ್ಕಿ ನೀಡುವ ‘ಅನ್ನಭಾಗ್ಯ’ ಯೋಜನೆಗಳು ರಾಜ್ಯದೊಳಗೆ ಮಾತ್ರವಲ್ಲ, ದೇಶದ ಗಮನವನ್ನೂ ಸೆಳೆದಿವೆ. ‘ಕರ್ನಾಟಕ ಮಾಡೆಲ್‌’ ಈಗ ‘ಭಾರತ ಮಾಡೆಲ್‌’ ಆಗುವ ಸೂಚನೆಗಳು ಕಾಣಿಸುತ್ತಿವೆ. ಇದೆಲ್ಲವೂ ಸರಿಯೇ. ಈ ಸಾಮಾಜಿಕ ಕಾಳಜಿ ಸಾಂಸ್ಕೃತಿಕವಾಗಿಯೂ ಪ್ರಕಟಗೊಳ್ಳುವುದು ಬೇಡವೆ?

ಸರ್ಕಾರದ ಸಾಂಸ್ಕೃತಿಕ ಮರೆವೆಯ ಹಿನ್ನೆಲೆಯಲ್ಲಿ ಎರಡು ತೀರ್ಮಾನಗಳಿಗೆ ಬರಲು ಸಾಧ್ಯವಿದೆ. ಒಂದು, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕಾರಣದಿಂದಾಗಿ ಸಂಸ್ಕೃತಿಯೂ ಸೇರಿದಂತೆ ಉಳಿದ ಕ್ಷೇತ್ರಗಳಿಗೆ ಸಂಪನ್ಮೂಲ ಹೊಂದಿಸುವುದು ಸರ್ಕಾರಕ್ಕೆ ಕಷ್ಟವಾಗಿರಬಹುದು. ಎರಡನೆಯ ಸಾಧ್ಯತೆ, ಸಾಂಸ್ಕೃತಿಕ ಕ್ಷೇತ್ರ ಆದ್ಯತೆಯ ಸಂಗತಿಯಾಗಿ ಸರ್ಕಾರಕ್ಕೆ ಕಾಣಿಸದಿರುವುದು. ಸಾಧ್ಯತೆಗಳೇನೇ ಇರಲಿ, ‘ಕನ್ನಡ ಮತ್ತು ಸಂಸ್ಕೃತಿ’ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರ ತನ್ನ ನಿರ್ಧಾರವನ್ನು ಸ್ಪಷ್ಟಪಡಿಸುವುದು ಅಗತ್ಯ. ಸರ್ಕಾರದ ಪಾಲಿಗೆ ಅಕಾಡೆಮಿ, ಪ್ರಾಧಿಕಾರಗಳು ಬಿಳಿಯಾನೆಗಳಂತೆ ಕಾಣಿಸಿದರೆ, ಅದನ್ನು ಸರ್ಕಾರ ಸ್ಪಷ್ಟವಾಗಿ ಹೇಳಬೇಕಾಗಿದೆ ಹಾಗೂ ಅವುಗಳನ್ನು ರದ್ದುಗೊಳಿಸುವ ದಿಟ್ಟ ನಿರ್ಧಾರ ಕೈಗೊಳ್ಳಬೇಕಾಗಿದೆ. ಸಂಪನ್ಮೂಲಗಳ ಕಾರಣದಿಂದಾಗಿ, ಸಾಂಸ್ಕೃತಿಕ ಕ್ಷೇತ್ರದ ಬಗ್ಗೆ ಸದ್ಯಕ್ಕೆ ಗಮನಹರಿಸುವುದು ಸಾಧ್ಯವಿಲ್ಲ ಎನ್ನುವುದಾದರೆ, ಆ ವಿಷಯವನ್ನಾದರೂ ಸರ್ಕಾರ ಹೇಳಬೇಕು. ಅಸ್ಪಷ್ಟತೆಯಲ್ಲಿ ದಿನದೂಡುವುದು ಜನಪರ ಸರ್ಕಾರಕ್ಕೆ ಶೋಭೆಯಲ್ಲ.

ಅಕಾಡೆಮಿ, ಪ್ರಾಧಿಕಾರಗಳ ನಿಷ್ಕ್ರಿಯತೆಯಂತೆಯೇ ‘ಸಾಂಸ್ಕೃತಿಕ ನೀತಿ’ಗೆ ಸಂಬಂಧಿಸಿದ ಡೋಲಾಯಮಾನ ನಿಲುವೂ ಸರ್ಕಾರದ ಸಾಂಸ್ಕೃತಿಕ ಜಡತ್ವಕ್ಕೆ ನಿದರ್ಶನವಾಗಿದೆ. 2014ರ ಜೂನ್ ತಿಂಗಳಲ್ಲಿ ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯ ಸಮಿತಿ ‘ಸಾಂಸ್ಕೃತಿಕ ನೀತಿ ನಿರೂಪಣಾ ವರದಿ’ ಸಲ್ಲಿಸಿದಾಗ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದರು; ಸಮಿತಿಯ ಶಿಫಾರಸುಗಳಿಗೆ ಸರ್ಕಾರದಿಂದ ತಾತ್ವಿಕ ಒಪ್ಪಿಗೆಯೂ ದೊರೆತಿತ್ತು. ನಂತರ ಮುಖ್ಯಮಂತ್ರಿಗಳು ಹಾಗೂ ಆಡಳಿತ ಪಕ್ಷಗಳು ಬದಲಾಗುತ್ತಾ ಬಂದು, ಸಾಂಸ್ಕೃತಿಕ ನೀತಿ ನನೆಗುದಿಯಲ್ಲಿಯೇ ಉಳಿದಿದೆ. ಪ್ರಸ್ತುತ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಮರಳಿರುವಾಗ, ಸುಮಾರು ಹತ್ತು ವರ್ಷಗಳ ತರುವಾಯವಾದರೂ ‘ಸಾಂಸ್ಕೃತಿಕ ನೀತಿ’ ಅನುಷ್ಠಾನಕ್ಕೆ ಬರಬಹುದೇ? ಈ ಪ್ರಶ್ನೆಗೆ ಸರ್ಕಾರ ಕ್ರಿಯೆಯ ಮೂಲಕ ಉತ್ತರಿಸಬೇಕಾಗಿದೆ.

ಕಾಂಗ್ರೆಸ್‌ ಮಾತ್ರವಲ್ಲ, ಬಿಜೆಪಿ ನೇತೃತ್ವದ ನಿಕಟಪೂರ್ವ ಸರ್ಕಾರವೂ ಕನ್ನಡ ನಾಡುನುಡಿಗೆ ಸಂಬಂಧಿಸಿದಂತೆ ಬದ್ಧತೆ ವ್ಯಕ್ತಪಡಿಸಿದ್ದು ಅಷ್ಟರಲ್ಲೇ ಇದೆ. ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ನೀಡುವ ಅನುದಾನದಲ್ಲಿ ಕಡಿತಗೊಳಿಸಿದ್ದನ್ನು ಬಿಜೆಪಿಯ ‘ಸಾಂಸ್ಕೃತಿಕ ಸಾಧನೆ’ಗಳ ಪಟ್ಟಿಗೆ ಸೇರಿಸಬೇಕು. ಅನುದಾನ ಕಡಿತಗೊಂಡಿದ್ದರಿಂದಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನ ಹಾಗೂ ಪ್ರಶಸ್ತಿಗಳು ಸ್ಥಗಿತಗೊಂಡಿದ್ದವು. ಸಿನಿಮಾ ಕ್ಷೇತ್ರದಲ್ಲೂ ಉತ್ಸಾಹವಿಲ್ಲ. ಹೊಸ ಪ್ರಯತ್ನಗಳನ್ನು ಪ್ರೋತ್ಸಾಹಿಸುವ ರಾಜ್ಯ ಸರ್ಕಾರದ ಪ್ರಶಸ್ತಿ ಹಾಗೂ ಸಬ್ಸಿಡಿ ಸವಲತ್ತುಗಳು ನಾಲ್ಕೈದು ವರ್ಷಗಳಿಂದ ಸ್ಥಗಿತಗೊಂಡಿವೆ.

ಕೊರೊನಾ ಸಂಕಷ್ಟದ ಸಮಯದಲ್ಲಿ, ‘ಮರಾಠಾ ಅಭಿವೃದ್ಧಿ ಪ್ರಾಧಿಕಾರ’ವನ್ನು ರಚಿಸಿ, ಒಮ್ಮೆಗೇ ₹ 50 ಕೋಟಿ ನೀಡಿದ್ದ ‘ಸಾಂಸ್ಕೃತಿಕ ರಾಜಕಾರಣ’ ಬಿಜೆ‍ಪಿಯದ್ದು. ಕನ್ನಡದ ಕೆಲಸಗಳ ಬಗ್ಗೆ ಪ್ರಾಮಾಣಿಕ ಮುತುವರ್ಜಿ ಇಲ್ಲದೆ ಹೋದರೂ, ಸಾಂಸ್ಕೃತಿಕ ನೀತಿಯನ್ನು ಪಕ್ಷದ ಆಶಯಗಳಿಗೆ ಸಂಬಂಧಿಸಿದಂತೆ ಬದಲಾಯಿಸಿಕೊಳ್ಳುವುದರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅತ್ಯುತ್ಸಾಹಿಯಾಗಿತ್ತು. ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ, ಪರಿಶೀಲನಾ ಸಮಿತಿಯನ್ನೇ ತಜ್ಞರ ಪರಿಷ್ಕರಣಾ ಸಮಿತಿಯನ್ನಾಗಿ ಮಾರ್ಪಡಿಸಿದ್ದ ಬಿಜೆಪಿ ನೇತೃತ್ವದ ಸರ್ಕಾರದ ಧೋರಣೆ ಪ್ರಜಾಸತ್ತಾತ್ಮಕವಾಗಿರಲಿಲ್ಲ, ಶೈಕ್ಷಣಿಕ ಮಾನದಂಡಗಳನ್ನೂ ಹೊಂದಿರಲಿಲ್ಲ. ಇಡೀ ಪ್ರಕರಣದಲ್ಲಿ ಪಕ್ಷ ಹಾಗೂ ಅದರ ಅಂಗಸಂಸ್ಥೆಗಳಿಗೆ ಉತ್ತರದಾಯಿಯಾಗಿ ಸರ್ಕಾರ ನಡೆದುಕೊಂಡಿತು. ದೇಶದ ಗಮನಸೆಳೆದ ‘ಹಿಜಾಬ್‌ ವಿವಾದ’ಕ್ಕೆ ಸಂಬಂಧಿಸಿದಂತೆಯೂ ಸರ್ಕಾರದ ನಿಲುವು ವಿವೇಕ ಮತ್ತು ಅಂತಃಕರಣದಿಂದ ಕೂಡಿದುದಾಗಿರಲಿಲ್ಲ.

ಹಿಂದಿನ ಸರ್ಕಾರ ತನ್ನ ಪಕ್ಷದ ಸಿದ್ಧಾಂತಗಳಿಗೆ ಅನುಗುಣವಾಗಿ ಸಂಸ್ಕೃತಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಮಾಡಿದ ಬದಲಾವಣೆಗಳನ್ನು ಸರಿಪಡಿಸುವುದಾಗಿ ಚುನಾವಣೆಗೆ ಮೊದಲಿನಿಂದಲೂ ಕಾಂಗ್ರೆಸ್‌ ನಾಯಕರು ಹೇಳುತ್ತಾ ಬಂದಿದ್ದರು. ಅದಕ್ಕೆ ಪೂರಕವಾಗಿ, ಬಿಜೆ‍ಪಿ ಸಿದ್ಧಾಂತಗಳನ್ನು ಒಪ್ಪದ ಲೇಖಕರು ಹಾಗೂ ಕಲಾವಿದರು ಚುನಾವಣೆಯಲ್ಲಿ ಕಾಂಗ್ರೆಸ್‌ ಪರವಾಗಿ ಕೆಲಸ ಮಾಡಿದ್ದರು. ಆದರೆ, ಉದ್ದೇಶಿತ ಬದಲಾವಣೆಗೆ ಸಂಬಂಧಿಸಿದಂತೆ ಅಧಿಕಾರ ಇಲ್ಲದಿದ್ದಾಗ ಪುಟಿಯುತ್ತಿದ್ದ ಉತ್ಸಾಹ, ಅಧಿಕಾರ ಇರುವಾಗ ವ್ಯಕ್ತವಾಗುತ್ತಿಲ್ಲ. ಪಠ್ಯದಲ್ಲಿನ ವಿವಾದಾತ್ಮಕ ಅಂಶಗಳನ್ನು ಬದಿಗಿಟ್ಟು ಬೋಧಿಸುವಂತೆ ಹೇಳಲು ಸರ್ಕಾರ ಬಹಳಷ್ಟು ಸಮಯ ತೆಗೆದುಕೊಂಡಿತು. ಪಠ್ಯ ಪರಿಷ್ಕರಣೆಗೆ ಹೊಸ ಸಮಿತಿ ನೇಮಿಸುವುದಾಗಿ ಹೇಳಿ ಸಾಕಷ್ಟು ಸಮಯವಾಗಿದ್ದರೂ, ಆ ದಿಸೆಯಲ್ಲಿ ನಿರೀಕ್ಷಿತ ಕೆಲಸ ಆದಂತಿಲ್ಲ. ಪಠ್ಯ ಪರಿಷ್ಕರಣೆ ಎನ್ನುವುದು ತರಾತುರಿಯಲ್ಲಿ ಮಾಡಿ ಮುಗಿಸುವ ಕೆಲಸವಲ್ಲ ಎನ್ನುವುದು ಸರ್ಕಾರದಲ್ಲಿ ಇರುವವರಿಗೆ ತಿಳಿಯದ್ದೇನಲ್ಲ.

ಯಾವುದೇ ಸರ್ಕಾರ ತನ್ನನ್ನು ಜನಪರ ಎಂದು ಬಿಂಬಿಸಿಕೊಳ್ಳುವ ಭರದಲ್ಲಿ ಸಾಂಸ್ಕೃತಿಕ ಕಾಳಜಿಯನ್ನು ಮರೆಯಬಾರದು. ಸಮಾಜ ಅಥವಾ ನಾಡೊಂದರ ಆರೋಗ್ಯದ ಲಕ್ಷಣಗಳಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆಯೂ ಸೇರಿದೆ ಎನ್ನುವುದರಲ್ಲಿ ಸರ್ಕಾರಕ್ಕೆ ನಂಬಿಕೆಯಿಲ್ಲದಿದ್ದರೆ ಅದು ತಪ್ಪೇನಲ್ಲ. ಆದರೆ, ಸರ್ಕಾರ ತನ್ನ ಆದ್ಯತೆಗಳನ್ನು ಸ್ಪಷ್ಟಪಡಿಸಬೇಕು. ಆಗ, ಆಡಳಿತಯಂತ್ರ ಕೈಬಿಟ್ಟ ಸಾಹಿತ್ಯ–ಸಂಸ್ಕೃತಿಯನ್ನು ಜನ ಗಣ ಮನವೇ ಕೈಗೆತ್ತಿಕೊಂಡೀತು. ಕೊನೆಗೂ ಸಂಸ್ಕೃತಿ ಉಳಿಯುವುದು ಜನರಿಂದಲೇ ವಿನಾ ಸರ್ಕಾರದಿಂದಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT