ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಕರ್ನಾಟಕದ ಸಂವಿಧಾನ ‘ಕನ್ನಡದ ಬಾವುಟ’

Last Updated 4 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಕರ್ನಾಟಕವನ್ನು ಒಡೆದು ಹೋಳು ಮಾಡಿ ಪ್ರತ್ಯೇಕ ರಾಜ್ಯವನ್ನು ರೂಪಿಸುವ ಒತ್ತಾಯ ಗಟ್ಟಿಯಾಗಿ ಕೇಳಿಸಿದಾಗಲೆಲ್ಲ, ಕುವೆಂಪು ಪ್ರತಿಪಾದಿಸಿದ ‘ಸಾಂಸ್ಕೃತಿಕ ಕರ್ನಾಟಕ’ದ ಕವಿತೆ ಹಾಗೂ ಬಿಎಂಶ್ರೀ ಸಂಪಾದಿಸಿದ ‘ಕನ್ನಡ ಬಾವುಟ’ ಕವಿತೆಗಳ ಗುಚ್ಛ ಕನ್ನಡಿಗರ ಪಾಲಿಗೆ ಆಸರೆಯಾಗಿ ಆಶಾಭಾವನೆಯಾಗಿ ಒದಗಿಬರುತ್ತವೆ.

ಎರಡು ಕರ್ನಾಟಕಗಳು ಹಾಗೂ ಅಖಂಡ ಕರ್ನಾಟಕ ಕುರಿತಾದ ವಾದವಿವಾದಗಳು ಜೋರಾಗಿದ್ದ ಸಂದರ್ಭದಲ್ಲಿ ಕುವೆಂಪು ತಾವು ಕಂಡ ಸಾಂಸ್ಕೃತಿಕ ಕರ್ನಾಟಕವನ್ನು ಕವಿತೆಯ ರೂಪದಲ್ಲಿ ಪ್ರತಿಪಾದಿಸಿದರು. ‘ಇಂದು ಬಂದು ನಾಳೆ ಸಂದು, ಹೋಹ ಮಂತ್ರಿಮಂಡಲ’ ತಮ್ಮದಲ್ಲವೆಂದು ಹೇಳುತ್ತಲೇ ಅವರು ಕಟ್ಟಿಕೊಟ್ಟ ಪರ್ಯಾಯ ಹಾಗೂ ಶಾಶ್ವತ ಮಂತ್ರಿಮಂಡಲ ಅಚ್ಚರಿಯನ್ನೂ ಹೆಮ್ಮೆಯನ್ನೂ ಹುಟ್ಟಿಸುವಂತಹದ್ದು. ಆ ಸಂಪುಟ ಹೀಗಿದೆ:

ನೃಪತುಂಗನೆ ಚಕ್ರವರ್ತಿ

ಪಂಪನಿಲ್ಲಿ ಮುಖ್ಯಮಂತ್ರಿ

ರನ್ನ ಜನ್ನ ನಾಗವರ್ಮ

ರಾಘವಾಂಕ ಹರಿಹರ

ಬಸವೇಶ್ವರ ನಾರಾಣಪ್ಪ

ಸರ್ವಜ್ಞ, ಷಡಕ್ಷರ

ಇದು ನಾಡವರು ಮಾಡಿಕೊಂಡ ಸಚಿವ ಸಂಪುಟವಲ್ಲ – ‘ಸರಸ್ವತಿಯೆ ರಚಿಸಿದೊಂದು / ನಿತ್ಯ ಸಚಿವ ಮಂಡಲ / ತನಗೆ ರುಚಿರ ಕುಂಡಲ’ ಎಂದು ಕವಿ ಉದ್ಗರಿಸುತ್ತಾರೆ. ‘ಅಖಂಡ ಕರ್ನಾಟಕ ಅಲ್ತೊ ನಮ್ಮ ಕೀರ್ತಿಶನಿಯ ರಾಜಕೀಯ ನಾಟಕ’ ಎಂದೂ ಎಚ್ಚರಿಸುತ್ತಾರೆ. ಬಹುಶಃ, ಇಂಥದೊಂದು ಸಾರಸ್ವತ ಸಚಿವ ಸಂಪುಟದ ಕಲ್ಪನೆ ಇಷ್ಟು ಪರಿಣಾಮಕಾರಿಯಾಗಿ ಬೇರೆ ಯಾವ ಭಾಷೆಗಳಲ್ಲೂ ಇರಲಿಕ್ಕಿಲ್ಲವೇನೊ? ‘ಕವಿಗಳು ವಿಶ್ವದ ಅನಧಿಕೃತ ಶಾಸನಕರ್ತರು’ ಎನ್ನುವ ಮಾತು ಕುವೆಂಪು ಅವರ ಕವಿತೆಯಲ್ಲಿ ನಿಜವಾಗಿಬಿಟ್ಟಿದೆ.

ಸಚಿವ ಸಂಪುಟ ರಚಿಸುವಾಗ ಪ್ರಾದೇಶಿಕ ಪ್ರಾತಿನಿಧ್ಯ ಗಮನಿಸುವುದು ಸರಿಯಷ್ಟೆ. ಈ ಹಿನ್ನೆಲೆಯಲ್ಲೂ ನೃಪತುಂಗ ಮತ್ತು ಪಂಪನ ಸಂಪುಟವನ್ನು ಗಮನಿಸಬೇಕು. ಚಕ್ರವರ್ತಿಯಾದ ನೃಪತುಂಗ ಮಾನ್ಯಖೇಟ ಅಥವಾ ಮಳಖೇಡದವನು. ಅಂದರೆ ಕಲಬುರ್ಗಿ ಜಿಲ್ಲೆಯವನು. ಮುಖ್ಯಮಂತ್ರಿಯಾದ ಪಂಪ ಧಾರವಾಡ ಜಿಲ್ಲೆಯ ಅಣ್ಣಿಗೇರಿಯವನು. ರನ್ನನೋ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಬೆಳಗಲಿಯ ಮಣ್ಣಿನವನು. ಜನ್ನನ ಜನ್ಮಸ್ಥಳ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕೊಂಡಗೂಳಿ. ಬಸವೇಶ್ವರ ಕೂಡ ವಿಜಯ‍ಪುರ ಜಿಲ್ಲೆಗೆ ಸೇರಿದವನೇ – ಬಾಗೇವಾಡಿ ಬಸವಣ್ಣನ ಊರು. ರಾಘವಾಂಕ ಮತ್ತು ಹರಿಹರರು ಹಂಪೆಯಒಕ್ಕಲು. ಇನ್ನು ನಾರಾಣಪ್ಪನದು (ಕುಮಾರವ್ಯಾಸ) ಧಾರವಾಡ ಜಿಲ್ಲೆಯ ಕೋಳಿವಾಡ. ಧಾರವಾಡಕ್ಕೆ ನೆರೆಯ ಗದಗ ಅವನ ಕರ್ಮಭೂಮಿ. ಸರ್ವಜ್ಞ ಕವಿಯದು ಹಾವೇರಿ ಜಿಲ್ಲೆಯ ಮಾಸೂರು. ಷಡಕ್ಷರ ಕವಿಯ ಜನ್ಮಭೂಮಿ ಮಂಡ್ಯ ಜಿಲ್ಲೆಯ ಧನಗೂರು, ಕರ್ಮಭೂಮಿ ಚಾಮರಾಜನಗರ ಜಿಲ್ಲೆಯ ಯಳಂದೂರು.

ಕುವೆಂಪು ಮೂಲಕ ಸರಸ್ವತಿ ರಚಿಸಿದ ಮಂತ್ರಿಮಂಡಲದಲ್ಲಿ, ಹೈದರಾಬಾದ್‌ ಕರ್ನಾಟಕ ಹಾಗೂ ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ಹೆಚ್ಚಾಗಿರುವುದನ್ನು ಸ್ಪಷ್ಟವಾಗಿ ಗುರ್ತಿಸಬಹುದು. ಹೆಚ್ಚುಕಡಿಮೆಯ ಪ್ರಶ್ನೆಯೇನು ಬಂತು, ಇದು ಸಂಪೂರ್ಣವಾಗಿ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್‌ ಕರ್ನಾಟಕದ ಏಕಸ್ವಾಮ್ಯವುಳ್ಳ ಸಚಿವ ಸಂಪುಟ. ಷಡಕ್ಷರ ಕವಿಯನ್ನು ಹೊರತುಪಡಿಸಿದರೆ ಉಳಿದವರೆಲ್ಲ ಅಲ್ಲಿಯವರೇ! ತನ್ನನ್ನು ಸಯ್ಯಡಿಯವನೆಂದು ಹೇಳಿಕೊಳ್ಳುವ ನಾಗವರ್ಮನಂತೂ ಆಂಧ್ರದ ವೆಂಗಿಪೊಳುವಿಗೆ ಸೇರಿದವನು. ಹಾಗಾದರೆ, ಇದು ಅಸಮತೋಲನವನ್ನು ಹೊಂದಿರುವ ಸಂಪುಟವಾ?

ಕನ್ನಡಕ್ಕೆ ಸಂಬಂಧಿಸಿದ ಎಲ್ಲವೂ ‘ಮೈಸೂರುಮಯ’ವಾಗಿದ್ದ ಸಂದರ್ಭದಲ್ಲಿ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್‌ ಕರ್ನಾಟಕದ ಮಹಾಕವಿಗಳ ಮೂಲಕ ಕನ್ನಡ ಸಾಂಸ್ಕೃತಿಕ ಲೋಕದ ಅಸ್ಮಿತೆಯನ್ನು ಕುವೆಂಪು ಚಿತ್ರಿಸಿದ್ದು ಹಾಗೂ ಆ ಚಿತ್ರಣಕ್ಕೆ ಯಾರ ತಕರಾರು ವ್ಯಕ್ತಗಾಗದೆ ಹೋದುದು ಚಾರಿತ್ರಿಕ ದೃಷ್ಟಿಯಿಂದ ಮುಖ್ಯವಾದುದು. ಈ ಸಂಪುಟದ ಸದಸ್ಯರು ಪ್ರಾದೇಶಿಕ ಚೌಕಟ್ಟುಗಳನ್ನು ಮೀರಿ ಕನ್ನಡಿಗರೆದೆಯಲ್ಲಿ ಕನ್ನಡದ ತಂತುಗಳನ್ನು ಅನವರತ ಮಿಡಿಯುತ್ತಿರುವುದು ಕವಿತೆಯ ಶಕ್ತಿಯಂತಿದೆ. ಬಹುಶಃ, ಪ್ರಸ್ತುತ ಎದ್ದಿರುವ ಕರ್ನಾಟಕದ ಪ್ರತ್ಯೇಕತೆಯ ಆಗ್ರಹಕ್ಕೆ ಈ ದಾರ್ಶನಿಕ ದೃಷ್ಟಿಕೋನವೇ ಉತ್ತರವಾಗಿರಬಹುದು. ಈ ಸಂಪುಟವನ್ನು ಒಪ್ಪಿಕೊಂಡರೆ, ‘ಬೂಟಾಟದ ರಾಜಕೀಯ ನಾಟಕ’ಗಳನ್ನು ತಿರಸ್ಕರಿಸುವುದು ಸುಲಭ.

ಕುವೆಂಪು ಅವರದು ‘ಅಖಂಡ ಕರ್ನಾಟಕ’ದ ಪರಿಕಲ್ಪನೆ. ಏಕೀಕರಣದ ಪರವಾಗಿ ಅವರ ಒಲವು. ಆದರೆ, ಅವರ ಗುರುಗಳಾದ ಬಿ.ಎಂ. ಶ್ರೀಕಂಠಯ್ಯನವರಿಗೆ ಏಕೀಕರಣದ ಬಗ್ಗೆ ಅಂಥ ಆಸಕ್ತಿಯೇನೂ ಇರಲಿಲ್ಲ. ಇದಕ್ಕೆ ಕಾರಣ ಅವರ ರಾಜಸೇವಾಸಕ್ತ ಪ್ರಭಾವಳಿಯಿರಬಹುದು. ಆದರೆ, ಕವಿಯಾಗಿ ಅವರು ಕೂಡ ಏಕೀಕರಣದ ಕನಸು ಕಂಡಿದ್ದರು ಎನ್ನುವುದಕ್ಕೆ ‘ಕನ್ನಡದ ಬಾವುಟ’ ಕೃತಿ ಕನ್ನಡಿಯಂತಿದೆ. ನಾಡು–ನುಡಿಯ ಬಗ್ಗೆ ಹೆಮ್ಮೆಯನ್ನೂ ಪುಳಕವನ್ನೂ ಮೂಡಿಸುವ ಈ ಸಂಕಲನಕ್ಕೀಗ ಎಂಬತ್ತು ವರ್ಷಗಳು ತುಂಬಿವೆ (ಪ್ರಥಮ ಮುದ್ರಣ: 1938). ಆದರೂ ಶ್ರೀಕಂಠಯ್ಯನವರು ಸಂಪಾದಿಸಿದ ಪುಸ್ತಕ ‘ಅಖಂಡ ಕರ್ನಾಟಕ’ ಪ್ರಜ್ಞೆಯ ಅಪೂರ್ವ ರೂಪಕದಂತೆ ಈಗಲೂ ಪ್ರಸ್ತುತ.

‘ಕನ್ನಡದ ಬಾವುಟ’ ಸಂಕಲನದ ಪ್ರಕಟಣೆಯ ಹಿಂದಿನ ಉದ್ದೇಶವನ್ನು ಬಿ.ಎಂ.ಶ್ರೀ ಅವರು ಮುನ್ನುಡಿಯಲ್ಲಿ ಹೇಳಿಕೊಂಡಿರುವುದು ಹೀಗೆ: ‘ಕನ್ನಡ ನಾಡು ಎಚ್ಚತ್ತು ಕೂಡಿಕೊಳ್ಳುತ್ತಿರುವ ದೊಡ್ಡ ಸಡಗರದಲ್ಲಿ ಕನ್ನಡ ನಾಡಿನ ಹೆಮ್ಮೆಯನ್ನು ಹಾಡಿರುವ ಕವಿಗಳಿಂದ ಆಯ್ದ ತಿರಳೊಂದನ್ನು ಹಂಚಬೇಕೆಂಬ ಬಯಕೆ ಬಹುಕಾಲದಿಂದ ಕಡೆದು ಕುದಿಯುತ್ತಿತ್ತು‌. ಕನ್ನಡ ತಾಯ ಪದದಲ್ಲಿ ಹಿಂದಿನ ಹಿರಿಯ ಕವಿಗಳೂ ಈಗಿನ ಕವಿಗಳೂ ಒಪ್ಪಿಸಿದ ಹೂವುಗಳನ್ನು ಬಾಚಿ ತೆಗೆದು, ಮೂವತ್ತು ವರ್ಷಗಳಿಂದ ನನ್ನ ಎದೆಯಲ್ಲಿ ತುಂಬಿ ಚಿಮ್ಮುತ್ತಿದ್ದವುಗಳನ್ನು ಇಲ್ಲಿ ದಂಡೆಗಟ್ಟಿದ್ದೇನೆ. ತಾಯಡಿಯ ಹೂವುಗಳಿವು: ನಾನು ನಾರು: ಕನ್ನಡದ ಸತ್ತ್ವವೂ ತಿರುಳೂ ಪೋಣಿಕೆಯ ಕಣ್ಣು’.

‘ಹಿಂದಿನ ಮಹತ್ತ್ವದ ಧ್ಯೇಯ ಮತ್ತು ಯೋಜನೆಗಳು, ನಾಡ ನಾಡಿಯ ಮಿಡಿತ – ನನಗೆ ತಿಳಿದಂತೆ ಯಾವ ಯಾವುದು ಕನ್ನಡ ಬಾವುಟದಡಿಯಲ್ಲಿ ಹೊಮ್ಮಿದ ಎರಡು ಸಾವಿರ ವರ್ಷದ ಜೀವಾಳವೋ ಅದನ್ನೆ ತೆನೆಗಳಾಗಿ ಆಯ್ದು ತೆಕ್ಕೆ ಮಾಡಿ ಕನ್ನಡಿಗರ ಕೈಗೆ ಒಪ್ಪಿಸಿದ್ದೇನೆ’ ಎನ್ನುವ ಕವಿ, ನಾಡವರಲ್ಲೆಲ್ಲಕನ್ನಡದ ಹೆಮ್ಮೆ ಹರಡಲಿ, ಅವರಿಂದ ಕನ್ನಡ ಬೆಳಗಲಿ ಎಂದು ಆಶಿಸಿದ್ದಾರೆ.

‘ಕನ್ನಡದ ಬಾವುಟ’ ನಾಲ್ಕು ತೆನೆಗಳ ರೂಪದಲ್ಲಿ ಹರಡಿಕೊಂಡಿದೆ. ‘ಒಂದನೆಯ ತೆನೆ’ಯಲ್ಲಿ ಶಾಸನಗಳ ಮೂಲಕ ನಾಡು–ನುಡಿಯ ಸ್ವರೂಪವನ್ನು ಕಟ್ಟಿಕೊಡುವ ಪ್ರಯತ್ನವಿದ್ದರೆ, ‘ಎರಡನೆಯ ತೆನೆ’ಯಲ್ಲಿ ಪೂರ್ವ ಕವಿಗಳ ಕಾವ್ಯಭಾಗಗಳಿವೆ. ‘ಮೂರನೆಯ ತೆನೆ’ಯಲ್ಲಿ ನಾಡಪದಗಳೂ ‘ನಾಲ್ಕನೆಯ ತೆನೆ’ಯಲ್ಲಿ ಹೊಸ ಕವಿತೆಗಳೂ ಇವೆ. ನಾಲ್ಕೂ ತೆನೆಗಳ ಉದ್ದೇಶ ಸ್ಪಷ್ಟ: ನಾಡು–ನುಡಿಯ ಬಗ್ಗೆ ಅರಿವು ಮೂಡಿಸುವುದು, ಕನ್ನಡಪ್ರಜ್ಞೆಯ ದೀಪ್ತಗೊಳಿಸುವುದು.

ಬಿ.ಎಂ.ಶ್ರೀ. ಸಂಪಾದಿಸಿದ್ದು ಕವಿತೆಗಳ ಗುಚ್ಛವನ್ನು ಮಾತ್ರವಲ್ಲ – ಕಾವ್ಯದ ಹೆಸರಿನಲ್ಲವರು ಕನ್ನಡ ಕಾವ್ಯ ಚರಿತ್ರೆಯನ್ನೂ ಕನ್ನಡ ಸಂಸ್ಕೃತಿ ಚರಿತೆಯನ್ನೂ ದಾಖಲಿಸಿದಂತಿದೆ. ಕುವೆಂಪು ಕಾಣಿಸಿದ ಮಂತ್ರಿಮಂಡಲದ ಸದಸ್ಯರಿಂದ ಹಿಡಿದು –ಆಂಡಯ್ಯ, ಕೇಶಿರಾಜ, ಚಾಮರಸ, ಹೊನ್ನಮ್ಮ, ದಾಸರು, ಜಾನಪದರು, ತೀನಂಶ್ರೀ, ಬೇಂದ್ರೆ, ಗೋಕಾಕ್, ಶಾಂತಕವಿ, ಪಂಜೆ, ಹುಯಿಲಗೋಳರು, ಗೋವಿಂದ ಪೈ, ಜಿ.ಪಿ. ರಾಜರತ್ನಂ... ಹೀಗೆ ಪ್ರಜಾ(ಕಾವ್ಯ) ಪ್ರತಿನಿಧಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಗೋವಿಂದ ವೈದ್ಯ ಎನ್ನುವ ಕವಿಯ, ‘ಕಂಠೀರವ ನರಸಿಂಹರಾಜ ವಿಜಯ’ ಕಾವ್ಯದೊಂದು ಭಾಗ ಹೀಗಿದೆ: ‘ಜಾತಿಸಂಕರವಿಲ್ಲ ಜಡದೇಹಿಗಳಿಲ್ಲ/ ನೀತಿ ಹೀನರು ಚೋರರಿಲ್ಲ / ಘಾತುಕರಿಲ್ಲ ದುರ್ಜನರಿಲ್ಲ ಕರ್ಣಾಟಕ / ರೀತಿಯನೆಂತು ಬಣ್ಣಿಪೆನು’.

ನಾಡಿನ ಹಿರಿಮೆಯ ಜೊತೆಗೆ ವಿಮರ್ಶೆಯನ್ನೂ ಒಳಗೊಂಡಿರುವುದು ‘ಕನ್ನಡದ ಬಾವುಟ’ದ ವಿಶೇಷ. ‘ಕನ್ನಡನಾಡಿನ ಸ್ಥಿತಿಯನ್ನು ನೆನೆದು’ ಕವಿತೆಯಲ್ಲಿ – ‘ನಾವೆಲ್ಲ ಒಂದು ಮನೆಯವರಣ್ಣ ತಮ್ಮದಿರು,/ ನಮ್ಮೆಲ್ಲರನು ಪಡೆದುದೊಂದೆ ನಾಡಿನ ಬಸಿರು,/ ಎಂದು ನಾವರಿದೆವೇ ನಮಗೆ ಇನ್ನಾರೆದುರು!’ ಎನ್ನುವ ಶ್ರೀನಿವಾಸರ (ಮಾಸ್ತಿ) ಉದ್ಗಾರವನ್ನು ವಿಮರ್ಶೆಯ ರೂಪದಲ್ಲೇ ನೋಡಬೇಕು. ಬೇಂದ್ರೆಯವರ ‘ಕನಸಿನೊಳಗೊಂದು ಕಣಸು’, ರಂ.ಶ್ರೀ. ಮುಗಳಿಯವರ ‘ಎಂಥ ನಾಡಿದು’, ತೀನಂಶ್ರೀಯವರ ‘ಕನ್ನಡಿಗನ ಕೊರಗು’ – ಇವೆಲ್ಲವೂ ನಾಡಪ್ರೇಮದ ಜೊತೆಗೆ ಆತ್ಮವಿಮರ್ಶೆಯ ವಿವೇಕವನ್ನೂ ಎಚ್ಚರಗೊಳಿಸುವ ಕವಿತೆಗಳು.

‘ಹೈದರಾಬಾದು’ (ಡಿ.ಕೆ. ಭೀಮಸೇನರಾವ್), ‘ಕೊಡಗು’ (ಸಾಲಿ ರಾಮಚಂದ್ರರಾಯ), ‘ತೆಂಕಣಗಾಳಿಯಾಟ’ (ಪಂಜೆ), ‘ಶಿವನಸಮುದ್ರ’ (ಡಿ.ವಿ. ಗುಂಡಪ್ಪ), ‘ಲಾಲ್‌ಬಾಗ್’ (ವಿ.ಸೀ.) – ಈ ಕವಿತೆಗಳು ಕನ್ನಡಪ್ರಜ್ಞೆಯ ಹಲವು ಚಾಚುಗಳನ್ನು ಸೂಚಿಸುವಂತಿವೆ. ಕರ್ನಾಟಕದ ವೈವಿಧ್ಯಕ್ಕೆ ಉದಾಹರಣೆಯಾಗಿ, ಕರ್ನಾಟಕದ ಭೌತಿಕ ಚಹರೆಯನ್ನು ಚಿತ್ರಿಸುವಂತಿರುವ ಬಿ.ಎಂ.ಶ್ರೀ. ಅವರ ‘ಶ್ರೀ ಕೃಷ್ಣರಾಜ ರಜತಮಹೋತ್ಸವ ಪ್ರಗಾಥ’ದ ಭಾಗವೊಂದನ್ನು ನೋಡಬಹುದು: ‘ಪಡುಗಡಲಿನ ತೆರೆ ಮುದ್ದಾಡುವ ಕರೆ, ಹೊಳೆ ಹಾಲಿಳಿಯುವ ಘಟ್ಟದೆರೆ, / ಪಂಪನ ರನ್ನನ ಪುಟವಿಡಿಸಿದ ಕಡೆ, ಹಂಪೆಯ ತಾಂಡವವಾಡಿದೆಡೆ, / ಹೊಯ್ಸಳರೆತ್ತಲು ಕಡೆಯಿಸಿ ನಿಲಿಸಿದ ಗುಡಿಗಳ ಸೊಬಗಿನ ಕಣ್ಣ ಸೆಳೆ / ಜಲಜಲನುಕ್ಕುವ ಕಾಲುವೆ ಬಯಲಲಿ ಪಚ್ಚೆಯ ಪಯಿರಿನ ತುಂಬು ಬೆಳೆ– / ಮಂಗಳಮಯ ತಾನೆತ್ತಲು ನಾಡು, / ಸಿಂಗರದಾ ಸಿರಿಗನ್ನಡನಾಡು’.

ಎಂಬತ್ತು ವರ್ಷಗಳ ಹಿಂದೆ ಪ್ರಕಟಗೊಂಡ ‘ಕನ್ನಡದ ಬಾವುಟ’ ಕೃತಿಯನ್ನು, ಕುವೆಂಪು ಪ್ರತಿಪಾದಿಸಿದ ‘ಸಾಂಸ್ಕೃತಿಕ ಕರ್ನಾಟಕ’ದ ಸಂವಿಧಾನದ ರೂಪದಲ್ಲಿ ನೋಡಬಹುದು. ಪ್ರತ್ಯೇಕ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಈ ಕೃತಿಯ ಓದು ನಮ್ಮ ಚರ್ಚೆಗೊಂದು ಹೊಸ ಕಣ್ಣು ನೀಡಬಲ್ಲುದು. ಕನ್ನಡದ ವೈವಿಧ್ಯವನ್ನು ಹಿಡಿದಿಟ್ಟಿರುವ ಸೂತ್ರ ಯಾವುದು ಎನ್ನುವುದರ ದರ್ಶನವನ್ನು ‘ಕನ್ನಡದ ಬಾವುಟ’ ಮಾಡಿಸಬಲ್ಲದು. ಈ ದರ್ಶನವನ್ನೇ ಬೇಂದ್ರೆಯವರು ಕೊಂಚ ವಾಚ್ಯವಾಗಿ, ಆದರೆ ಸ್ಪಷ್ಟವಾಗಿ ಹೇಳಿದ್ದು – ‘ಒಂದೇ ಒಂದೇ ಒಂದೇ ಕರ್ನಾಟಕ ಒಂದೇ / ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೇ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT