ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಸಾಲೆ: ಪೆದ್ರೊ! ‘ತಿಥಿ’ ನಂತರದ ಹೊಸ ‘ಹುಟ್ಟು’

ಕನ್ನಡದ ಹಿತ್ತಲಲ್ಲಿ ಅರಳಿರುವ ವಿಶ್ವದರ್ಜೆಯ ಸಿನಿಮಾ ಸೌಗಂಧಿಕಾ
Last Updated 27 ಫೆಬ್ರುವರಿ 2022, 19:47 IST
ಅಕ್ಷರ ಗಾತ್ರ

ಬೂಸಾನ್‌ ಸಿನಿಮೋತ್ಸವ, ಬಿಎಫ್‌ಐ ಲಂಡನ್‌ ಫೆಸ್ಟಿವಲ್‌ ಸೇರಿದಂತೆ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರದರ್ಶನ ಕಂಡಿರುವ ‘ಪೆದ್ರೊ’ ನಿಸ್ಸಂದೇಹವಾಗಿ ‘ತಿಥಿ’ ಚಿತ್ರದ ನಂತರ ಕನ್ನಡದಲ್ಲಿ ರೂಪುಗೊಂಡಿರುವ ವಿಶ್ವದರ್ಜೆಯ ಸಿನಿಮಾ.

‘ಪೆದ್ರೊ’ ವಿಶೇಷ ಅಚ್ಚರಿ ಹುಟ್ಟಿಸುವುದು ಮೂರು ಕಾರಣಗಳಿಗಾಗಿ. ಮೊದಲ ಅಚ್ಚರಿ, ಸಿನಿಮಾದ ವ್ಯಾಕರಣ; ಬಿಂಬ, ಸಂಗೀತ, ಶಬ್ದಗಳೆಲ್ಲ ಅಭಿನ್ನವಾಗಿ ಮೈದಳೆದಿರುವುದು. ಎರಡನೆಯದು, ನಿರೂಪಣೆಯ ಸೊಬಗು. ಪದ್ಯದ ಧ್ವನಿಶಕ್ತಿಯಲ್ಲಿ ನಿರೂಪಣೆ
ಗೊಂಡಿರುವ ಕಥೆಯಲ್ಲಿ ಪ್ರಜ್ಞಾಪೂರ್ವಕವಾಗಿ ಉಳಿಸಿರುವ ಖಾಲಿ ಜಾಗಗಳು ಸಿನಿಮಾದ ಸಾಧ್ಯತೆಯನ್ನು ಹೆಚ್ಚಿಸಿರುವುದರಿಂದಾಗಿ, ನೋಡುಗನಲ್ಲಿ ಸಿನಿಮಾ ಬೆಳೆಯುತ್ತಲೇ ಹೋಗುತ್ತದೆ. ನೋಡುವ ಕ್ಷಣಕ್ಕೆ ಒಗಟಿನಂತೆ ಕಾಣಿಸುವ ಕೆಲವು ದೃಶ್ಯಗಳು, ಸಿನಿಮಾದ ಒಟ್ಟಂದದಲ್ಲಿ ಹೊಸ ಅರ್ಥಗಳನ್ನು ಬಿಟ್ಟುಕೊಡುತ್ತವೆ.

ಯಾವುದೋ ಒಂದು ಸಂಗತಿ ನೋಡುಗನಿಗೆ ಮುಖ್ಯವೆಂದು ತೋರುವ ಸಂದರ್ಭದಲ್ಲೇ, ಆ ವಿಷಯವನ್ನು ಲಂಬಿಸದೆ ಹೊಸ ಆವರಣವೊಂದಕ್ಕೆ ನಡೆದುಬಿಡಲು ನಿರ್ದೇಶಕನಿಗೆ ಅಪಾರ ಆತ್ಮವಿಶ್ವಾಸ ಬೇಕು. ಆ ಆತ್ಮವಿಶ್ವಾಸವೇ ಸಿನಿಮಾದ ಮೂರನೇ ಅಚ್ಚರಿ. ಟೈಟಲ್‌ ಕಾರ್ಡ್‌ನ ಬೆನ್ನಿಗೇ ಆರಂಭವಾಗುವ ಮಳೆಯ ಚಿತ್ರಿಕೆಗಳು ಹಾಗೂ ಶಬ್ದವಷ್ಟೇ ಸಾಕು– ನಟೇಶ್‌ ಹೆಗಡೆ ಅವರ ಸಿನಿಮಾ ವ್ಯಾಕರಣದ ಪರಿಣತಿಯನ್ನು ದೃಢೀಕರಿಸಲು. ಕಣ್ಣುಗಳ ತುಂಬ ಹೊಳಪು ಹಾಗೂಆರ್ದ್ರತೆ ತುಂಬಿಕೊಂಡಿರುವ, ಚೊಚ್ಚಿಲ ಸಿನಿಮಾ ಸಂಭ್ರಮದಲ್ಲಿರುವ ಈ ನಿರ್ದೇಶಕನ ಪ್ರಾಯ ಇಪ್ಪತ್ತಾರು ವರ್ಷಗಳಷ್ಟೇ ಎನ್ನುವುದೂ ಅಚ್ಚರಿಯ ಸಂಗತಿಯೇ.

ಪೆದ್ರೊ ಕಥಾನಾಯಕನ ಹೆಸರು. ಕ್ರಿಶ್ಚಿಯನ್‌ ಕುಟುಂಬದ ಪೆದ್ರೊನ ಹೆಸರನ್ನು ಪೆದ್ದ ಎಂದು ಓದಿಕೊಂಡರೂ ವ್ಯತ್ಯಾಸವೇನೂ ಆಗುವುದಿಲ್ಲ. ಊರಿನ ಪಾಲಿಗವನು ಅನಪೇಕ್ಷಿತ ಭಾನಗಡಿಗಳನ್ನು ಸೃಷ್ಟಿಸುವ ಹುಂಬ. ಕಂಬಗಳನ್ನೇರಿ ವಿದ್ಯುತ್‌ ಸರಬರಾಜಿಗಿರುವ ಅಡೆತಡೆಗಳನ್ನು ಸರಿಪಡಿಸುವುದು ಅವನ ಕಸುಬು. ಇಂಥ ಪೆದ್ರೊನನ್ನು ಕೇಂದ್ರವಾಗುಳ್ಳಸಿನಿಮಾದಲ್ಲಿ ಮುಖ್ಯವಾಗಿ ನಾಲ್ಕು ಎಳೆಗಳನ್ನು ಗುರ್ತಿಸಬಹುದು. ಒಂದು, ಪೆದ್ರೊನ ಕುಟುಂಬಕ್ಕೆ ಸಂಬಂಧಿಸಿದ್ದು. ಪೆದ್ರೊನ ತಮ್ಮ ಬಸ್ತ್ಯಾಂವನ ಷಂಡತನವನ್ನು ಮುಚ್ಚಿಟ್ಟು ಅವನಿಗೆ ಮದುವೆ ಮಾಡಲಾಗಿದೆ. ಗಂಡನಿಂದ ಉಂಟಾದ ಕೊರತೆಯನ್ನು ಅವನ ಅಣ್ಣನಿಂದ ಜೂಲಿ ತುಂಬಿಕೊಂಡಿದ್ದಾಳೆ. ಅವಳಿ
ಗೊಬ್ಬ ಮಗನೂ ಇದ್ದಾನೆ. ಆ ಮಗು ತನ್ನದೆನ್ನುವುದು ಪೆದ್ರೊವಿನ ನಂಬಿಕೆ. ಅಣ್ಣ ಮತ್ತು ಹೆಂಡತಿಯ ಚಕ್ಕಂದದಿಂದ ಉಂಟಾದ ತನ್ನ ಸಂಕಟವನ್ನು ಕಂಠಪೂರ್ತಿ ಕುಡಿದಾಗ ಅವನು ಕಾರಿಕೊಳ್ಳುತ್ತಾನೆ.

ಮತ್ತೊಂದು ಎಳೆಯಲ್ಲಿ, ಎಲೆಕ್ಟ್ರಿಷಿಯನ್‌ ಪೆದ್ರೊ, ಹೆಗಡೆಯವರ ಒತ್ತಾಯದ ಮೇರೆಗೆ ಕೋವಿ ಹಿಡಿದು ಅವರ ತೋಟದ ಕಾವಲಿಗೆ ನಿಂತಿದ್ದಾನೆ. ಹೀಗೆ, ತೋಟ ಕಾಯುವ ಸಂದರ್ಭದಲ್ಲಿ ತನ್ನ ನಾಯಿಯನ್ನು ಕೊಂದ ಹಂದಿಯ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿ, ಅವನು ಹಾರಿಸಿದ ಗುಂಡು ಆಕಳೊಂದರ ಸಾವಿಗೆ ಕಾರಣವಾಗುತ್ತದೆ. ಮೂರನೆಯ ಕೇಂದ್ರ, ಪೆದ್ರೊನೊಂದಿಗೆ ಸಂಬಂಧ ಹೊಂದಿರುವ ಹೆಣ್ಣಿಗೆ ಹೆಗಡೆ ಅವರೊಂದಿಗೂ ಸಲಿಗೆಯಿದೆ. ಬಸ್ತ್ಯಾಂವನ ಷಂಡತನವನ್ನು ತಿಳಿದೂ ಹೆಗಡೆಯವರು ಅವನಿಗೆ ಮದುವೆ ಮಾಡಿಸಿದ್ದಾರೆ, ಅವರೇ ಫಲಾನುಭವಿಯಾಗಿದ್ದಾರೆ. ಈ ಮೂರೂ ಸಂಗತಿಗಳು ತಳಕು ಹಾಕಿಕೊಂಡು ಪೆದ್ರೊ ವಿರುದ್ಧ ಒಟ್ಟಾಗುವ ಊರು ಅವನನ್ನು ಏಕಾಂಗಿಯಾಗಿಸುವುದು ನಾಲ್ಕನೇ ಎಳೆ.

ಗ್ರಾಮಭಾರತದ ವಿದ್ಯಮಾನಗಳಿಗೆ ಹಿಡಿದಿರುವ ಕನ್ನಡಿಯ ರೂಪದಲ್ಲಿ ‘ಪೆದ್ರೊ’ ಸಿನಿಮಾವನ್ನು ನೋಡಬಹುದು. ಊರಿನ ಎಲ್ಲರ ಕೆಲಸಗಳಿಗೆ ಒದಗಿಬಂದರೂ, ಕ್ರಿಶ್ಚಿಯನ್‌ ಎನ್ನುವ ಕಾರಣಕ್ಕಾಗಿ ಪೆದ್ರೊ ಊರಿನವರ ಕಣ್ಣಿಗೆ ‘ನಮ್ಮವನಲ್ಲ.’ ಆಕಳಿನ ಸಾವಿಗೆ ಆಕಸ್ಮಿಕವಾಗಿ ಕಾರಣವಾಗುವ ಮೂಲಕ ಈ ಅನ್ಯತೆ ಮತ್ತಷ್ಟು ಗಾಢವಾಗಿ, ಧರ್ಮಪ್ರಜ್ಞೆ ಜಾಗೃತಗೊಳ್ಳುತ್ತದೆ. ತನ್ನ ವಿರುದ್ಧ ಊರನ್ನು ಎತ್ತಿಕಟ್ಟುವ ಹೋಟೆಲ್‌ ಮಾಲೀಕನ ಉಂಗುರ ಲಪಟಾಯಿಸುವ ಪೆದ್ರೊನಿಗೆ ಕಳ್ಳನ ಪಟ್ಟವೂ ದೊರೆಯುತ್ತದೆ. ನಗರಕ್ಕೆ ಹೋಗಿ ಉದ್ಧಾರವಾಗಬೇಕೆಂದು ಬಯಸುವ ಅವನು, ನೆಚ್ಚಿದ ಹೆಣ್ಣು ತನ್ನೊಂದಿಗೆ ಬರಲು ನಿರಾಕರಿಸಿದಾಗ ಹತಾಶನಾಗುತ್ತಾನೆ. ಆ ಹತಾಶೆಯಲ್ಲೇ ಅವಳಿಗೂ ಹೆಗಡೆಯವರಿಗೂ ಸಂಬಂಧವಿದೆ ಎನ್ನುವ ಮಾತು ಆಡುವ ಮೂಲಕ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುತ್ತಾನೆ. ಪೆದ್ರೊ ಊರಿನ ಪಾಲಿಗಷ್ಟೇ ಅನ್ಯನಾಗುವುದಿಲ್ಲ, ಮನೆಯವರಿಂದಲೂ ತಿರಸ್ಕಾರಕ್ಕೆ ಗುರಿಯಾಗುತ್ತಾನೆ. ಊರು ಹೇರಿದ ಅಘೋಷಿತ ಬಹಿಷ್ಕಾರವನ್ನು ಸೂಚಿಸುವಂತೆ ಕೂದಲು ಕತ್ತರಿಸಲು ಕ್ಷೌರಿಕ ನಿರಾಕರಿಸಿದಾಗ ಕ್ರುದ್ಧನಾಗುವ ಪೆದ್ರೊ ಅವನ ಮೇಲೆ ಹಲ್ಲೆ ನಡೆಸುತ್ತಾನೆ. ಆ ಘಟನೆ ಪೆದ್ರೊನ ಶವಪೆಟ್ಟಿಗೆಗೆ ಹೊಡೆದ ಇನ್ನೊಂದು ಮೊಳೆ.

ಪೆದ್ರೊನ ಕಥನದ ಮೂಲಕ ನಿರ್ದೇಶಕರು ಗ್ರಾಮಭಾರತದಲ್ಲಿ ಕೋಮುವಿಷ ಜ್ವರದಂತೆ ಏರುತ್ತಿರುವುದನ್ನು
ಸೂಚಿಸುತ್ತಿದ್ದಾರೆ. ಇಡೀ ಊರು ವಿರೋಧಿಸಿದರೂ ಪೆದ್ರೊನ ಬಗ್ಗೆ ಸುಭಗನಂತೆ ಕಾಣಿಸುವ ಹೆಗಡೆ ಸಹಾನುಭೂತಿ ತೋರಿಸುವುದಕ್ಕೆ ಅವರು ಹೊಂದಿರುವ ಕಳ್ಳಸಂಬಂಧವೇ ಕಾರಣವಿದ್ದಂತಿದೆ. ಕೊನೆಗೆ ಪೆದ್ರೊನ ಅಂತ್ಯಕ್ಕೆ ರೂಪುಗೊಳ್ಳುವ ಪಿತೂರಿಯಲ್ಲಿ ಕೂಡ ಅವರ ನೆರಳಿದೆ.ಧರ್ಮಪ್ರಜ್ಞೆಯೊಂದಿಗೆ ಕಾಮ ಲೋಭಗಳ ಜಗತ್ತೂ ತಳಕು ಹಾಕಿಕೊಂಡಿರುವುದನ್ನು ಹೆಗಡೆಯವರ ಪಾತ್ರದ ಹಿನ್ನೆಲೆಯಲ್ಲಿ ಗುರ್ತಿಸಬಹುದು.ಹೀಗೆ ಕೂಡಿಸಿಕೊಳ್ಳಬಹುದಾದ ಕಥೆಯ ಹಲವು ಸಾಧ್ಯತೆಗಳನ್ನು ನಟೇಶ್‌ ನೇರವಾಗಿ ಹೇಳುವುದಿಲ್ಲ. ಅವರು ಎಳೆಗಳನ್ನು ಕಾಣಿಸುವ ಕೆಲಸವನ್ನಷ್ಟೇ ಮಾಡಿ, ಕೂಡಿಸಿಕೊಳ್ಳುವ ಕೆಲಸವನ್ನು ಪ್ರೇಕ್ಷಕರಿಗೇ ಬಿಟ್ಟಿದ್ದಾರೆ. ಗೋಹತ್ಯೆಯ ಸುತ್ತ ಕಥೆ ಬೆಳೆಸುವ ಹಾಗೂ ಅಲ್ಪಸಂಖ್ಯಾತರು ಅನುಭವಿಸುತ್ತಿರುವ ಅಸುರಕ್ಷತೆಯ ತಳಮಳಗಳನ್ನು ಚಿತ್ರಿಸುವ ಸಾಧ್ಯತೆಯಿದ್ದರೂ, ಅದನ್ನು ಸೂಚ್ಯವಾಗಿಯಷ್ಟೇ ತೋರಿಸಿ ಮುಂದುವರೆಯುವ ಸಂಯಮ ಈ ಕಾಲಕ್ಕೆ ಅಪರೂಪದ್ದು ಹಾಗೂ ಅಗತ್ಯವಾದುದು. ನಾಯಿಯ ಸಾವಿರಬಹುದು, ಹಸುವಿನ ಅಂತ್ಯ ಇರಬಹುದು– ಘಟನೆ ಸೂಚ್ಯವಾಗಿಯಷ್ಟೇ ಕಾಣಿಸುತ್ತದೆ. ಹಸುವನ್ನೇ ತೋರಿಸದೆ, ಅದರ ಕಾಲುಗಳನ್ನು ಹಗ್ಗದಿಂದ ಕಟ್ಟುವ ದೃಶ್ಯವಷ್ಟೇ ಸಿನಿಮಾದಲ್ಲಿದೆ. ಕ್ಷೌರಿಕನ ಅಂಗಡಿಯಲ್ಲಿ ತಲೆಗೂದಲು ಕತ್ತರಿಸುವ ದೃಶ್ಯವಿದ್ದರೂ ಕ್ಷೌರಿಕನ ಮುಖವೇ ಕಾಣಿಸುವುದಿಲ್ಲ. ಅವನ ಮೇಲೆ ನಡೆಯುವ ಹಲ್ಲೆ ಕಾಣಿಸುವುದೂ ಕನ್ನಡಿಯ ಮೂಲಕವಷ್ಟೇ. ಸಿನಿಮಾದಲ್ಲಿನ ಕೆಲವು ಪಾತ್ರಗಳ ಮುಖಗಳು ಅಸ್ಪಷ್ಟವಾಗಿಯೇ ಉಳಿಯುತ್ತವೆ. ಕ್ಲೋಸಪ್‌ ದೃಶ್ಯಗಳೂ ತೀರಾ ಕಡಿಮೆ ಎನ್ನುವಷ್ಟಿವೆ. ಯಾವುದನ್ನೂ ರೂಕ್ಷವಾಗಿ ಹೇಳದೆ ರೂಪಕಗಳ ಮೂಲಕ ಹೇಳಲು ಪ್ರಯತ್ನಿಸಿರುವುದು ಹಾಗೂ ಪರಿಚಿತ ಬಿಂಬಗಳಿಗೆ ಪ್ರತಿಯಾಗಿ ಭಿನ್ನ ದೃಶ್ಯಗಳನ್ನು ಕಟ್ಟುವ ಚಿತ್ರತಂಡದ ಪ್ರಯತ್ನ ಕನ್ನಡದ ಮಟ್ಟಿಗೆ ಹೊಸತಾಗಿದೆ, ಯಶಸ್ವಿಯೂ ಆಗಿದೆ. ರಾಜ್‌ ಶೆಟ್ಟಿ ಪೋಷಿಸಿರುವ ಹೋಟೆಲ್‌ ಮಾಲೀಕ ದತ್ತುವಿನ ಪಾತ್ರ ಹೊರತುಪಡಿಸಿದರೆ, ಉಳಿದೆಲ್ಲ ಪಾತ್ರಗಳೂ ಕನ್ನಡ ಚಿತ್ರಜಗತ್ತಿಗೆ ಜನಪ್ರಿಯ ಸೂತ್ರಗಳಿಂದ ಹೊರತಾದವುಗಳೇ ಆಗಿವೆ. ಸಿನಿಮಾದ ಈ ಭಿನ್ನ ವ್ಯಾಕರಣಕ್ಕೆ ಪೂನಾ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ ಗರಡಿಯಿಂದ ಹೊರಬಂದಿರುವ ವಿಕಾಸ್‌ ಅರಸ್‌ ಅವರ ಛಾಯಾಗ್ರಹಣ, ಶ್ರೇಯಾಂಕ್‌ ನಂಜಪ್ಪ ಅವರ ಧ್ವನಿ ವಿನ್ಯಾಸದ ಕೊಡುಗೆಯೂ ಇದೆ; ಪರೇಶ್‌ ಕಮ್ದಾರ್‌ ಹಾಗೂ ನಟೇಶ ಅವರ ಸಂಕಲನದ ಕಸುಬುದಾರಿಕೆಯೂ ಪೆದ್ರೊ ಪಾತ್ರದ ಅಸಹಾಯಕತೆಯನ್ನು ಕಣ್ಣುಗಳಲ್ಲೇ ತೇಲಿಸುವ ಗೋಪಾಲ್‌ ಹೆಗಡೆ ಅವರ ನಟನೆಯೂ ಮುಖ್ಯವಾದುದು.

ಯಾವ ಕನ್ನಡ ಚಿತ್ರದೊಂದಿಗೂ ಸುಲಭಕ್ಕೆ ಹೋಲಿಕೆಗೆ ಸಿಗುವುದಿಲ್ಲ ಎನ್ನುವುದು ‘ಪೆದ್ರೊ’ದ ಅಗ್ಗಳಿಕೆ. ಕನ್ನಡ ಸಿನಿಮಾಗಳಲ್ಲಿನ ಕನ್ನಡತನ ಶಾಬ್ದಿಕವಾಗಿಯಷ್ಟೇ ಉಳಿದಿರುವ ಸಂದರ್ಭದಲ್ಲಿ, ಮಾತು ಮತ್ತು ನೋಟ ಎರಡರಲ್ಲೂ ಕನ್ನಡತನ ಸಾಧ್ಯವಾಗಿರುವುದು ಸಿನಿಮಾದ ಮತ್ತೊಂದು ವಿಶೇಷ. ಕನ್ನಡದ ಹಿತ್ತಲಿನ ಈ ಪ್ರಯೋಗ, ಸಿನಿಮಾಭಾಷೆಯ ಪರಿಣಾಮಕಾರಿ ಬಳಕೆಯಿಂದಾಗಿ ‘ಜಾಗತಿಕ ಸಿನಿಮಾ’ದ ಗುಣಮಟ್ಟ ಪಡೆದುಕೊಂಡಿದೆ.

ನಮಗೆ ಅಭ್ಯಾಸವಾಗಿರುವ ಸಿನಿಮಾ ವೀಕ್ಷಣೆಯ ಮನಃಸ್ಥಿತಿಗಿಂತಲೂ ಭಿನ್ನವಾದ ಸಿದ್ಧತೆಯನ್ನು ‘ಪೆದ್ರೊ’ ಅಪೇಕ್ಷಿಸುತ್ತದೆ. ಅಂದಹಾಗೆ, ಮಾರ್ಚ್‌ 3ರಿಂದ 10ರವರೆಗೆ ನಡೆಯಲಿರುವ ‘ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ’ಕ್ಕೆ ‘ಪೆದ್ರೊ’ ಆಯ್ಕೆಯಾಗಿಲ್ಲ.

ರಘುನಾಥ ಚ.ಹ.
ರಘುನಾಥ ಚ.ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT