ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ| ಠೇವಣಿ, ಎಸ್‌ಸಿಎಸ್‌ಎಸ್‌ನಿಂದ ಬರುವ ಆದಾಯಕ್ಕೆ ತೆರಿಗೆ ಹೇಗೆ?

ಹಣಕಾಸು ಸಂಬಂಧಿತ ಪ್ರಶ್ನೆಗಳಿಗೆ ದೈತೋಟ ಸಲಹೆ
Last Updated 21 ಮಾರ್ಚ್ 2023, 22:11 IST
ಅಕ್ಷರ ಗಾತ್ರ

ಜಗದೀಶ್, ಊರು ತಿಳಿಸಿಲ್ಲ

l ಪ್ರಶ್ನೆ: ನಮ್ಮ ಮನೆಯಲ್ಲಿ ಗೃಹಿಣಿಯು ತನ್ನ ಹೆಸರಿನಲ್ಲಿ ಅಂಚೆ ಕಚೇರಿ ಠೇವಣಿಗಳಲ್ಲಿ ₹ 4.5 ಲಕ್ಷ ಮೊತ್ತದ ಮಾಸಿಕ ಆದಾಯ ಯೋಜನೆ (ಎಂ.ಐ.ಎಸ್) ಹಾಗೂ ₹ 15 ಲಕ್ಷ ಮೊತ್ತವನ್ನು ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ (ಎಸ್‌ಸಿಎಸ್‌ಎಸ್) ಹೂಡಿಕೆ ಮಾಡಿದ್ದು ಸುಮಾರು ₹ 2.50 ಲಕ್ಷದಿಂದ ₹ 3 ಲಕ್ಷದಷ್ಟು ವಾರ್ಷಿಕ ಆದಾಯ ಬರುತ್ತಿದೆ. ಇಂತಹ ಆದಾಯ ಗಳಿಸುವ ಮಹಿಳೆಯರಿಗೆ ಯಾವ ರೀತಿ ತೆರಿಗೆ ಬರುತ್ತದೆ? ಅವರು ಆದಾಯ ತೆರಿಗೆ ವಿವರ ಸಲ್ಲಿಸಬೇಕೇ? ₹ 7 ಲಕ್ಷದವರೆಗೆ ತೆರಿಗೆ ಬರುವುದಿಲ್ಲ ಎಂದು ಕೆಲವರು ಹೇಳಿದ್ದಾರೆ. ಮಹಿಳೆಯರು ಇನ್ನೂ ಯಾವ ಬಗೆಯಲ್ಲಿ ಉಳಿತಾಯ ಮಾಡಬಹುದು? ಮೇಲೆ ತಿಳಿಸಿರುವ ₹ 15 ಲಕ್ಷದ ಎಸ್‌ಸಿಎಸ್‌ಎಸ್ ಹಾಗೂ ₹ 4.50 ಲಕ್ಷದ ಎಂ.ಐ.ಎಸ್ ಅಲ್ಲದೆ ₹ 2 ಲಕ್ಷವನ್ನು ಮಹಿಳೆಯರಿಗಾಗಿನ ವಿಶೇಷ ಉಳಿತಾಯ ಯೋಜನೆಯಲ್ಲಿ ತೊಡಗಿಸಬಹುದೇ? ತಿಳಿಸಿಕೊಡಿ.

ಪ್ರಮೋದ ಶ್ರೀಕಾಂತ ದೈತೋಟ
ಪ್ರಮೋದ ಶ್ರೀಕಾಂತ ದೈತೋಟ

ಉತ್ತರ: ಮೇಲೆ ತಿಳಿಸಿರುವ ಎಸ್‌ಸಿಎಸ್‌ಎಸ್ ಹಾಗೂ ಎಂ.ಐ.ಎಸ್ ಹೂಡಿಕೆಗಳ ಮೇಲೆ ಬರುವ ಬಡ್ಡಿಗೆ ತೆರಿಗೆ ಇದ್ದರೂ, ಒಟ್ಟಾರೆ ವಿನಾಯಿತಿ ಮಿತಿಯೊಳಗೆ ಬರುವ ಆದಾಯದ ಮೇಲೆ ತೆರಿಗೆ ಇರುವುದಿಲ್ಲ. ಪ್ರಸ್ತುತ ಆರ್ಥಿಕ ವರ್ಷಕ್ಕೆ ಸಂಬಂಧಿಸಿ, ಸೆಕ್ಷನ್ 87ಎ ಅಡಿ ₹ 5 ಲಕ್ಷದತನಕ ತೆರಿಗೆ ಇರುವುದಿಲ್ಲ. ಇದಲ್ಲದೆ, ಅವರು ಹಿರಿಯ ನಾಗರಿಕ ಆಗಿರುವುದರಿಂದ ₹ 50 ಸಾವಿರದವರೆಗೆ ಯಾವುದೇ ಬಡ್ಡಿಗೆ ವಿನಾಯಿತಿ ಇದೆ.

ಇನ್ನು, ಹೊಸ ತೆರಿಗೆ ಪದ್ದತಿಗೆ ಸಂಬಂಧಪಟ್ಟಂತೆ, ₹ 7 ಲಕ್ಷದವರೆಗಿನ ಆದಾಯದ ಮೇಲಿರುವ ತೆರಿಗೆ ವಿನಾಯಿತಿ ಮುಂದಿನ ಆರ್ಥಿಕ ವರ್ಷದಿಂದ ಜಾರಿಗೆ ಬರುತ್ತದೆ. ಹೀಗಾಗಿ ಅವರು ಮುಂದಿನ ಆರ್ಥಿಕ ವರ್ಷದಲ್ಲಿ (2023–24) ಹೊಸ ತೆರಿಗೆ ಪದ್ಧತಿ ಅನುಸರಿಸುವ ಮೂಲಕ ಸಂಪೂರ್ಣ ಆದಾಯಕ್ಕೆ ತೆರಿಗೆಯಿಂದ ವಿನಾಯಿತಿ ಪಡೆದುಕೊಳ್ಳಬಹುದು. 2023ನೇ ಸಾಲಿನ ಬಜೆಟ್‌ನಲ್ಲಿ ‘ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್’ ಎಂಬ ಹೊಸ ಯೋಜನೆಯನ್ನು ಘೋಷಿಸಿದ್ದು ಇದು ಮಹಿಳೆಯರಿಗಾಗಿ ಇರುವ ವಿಶೇಷ ಉಳಿತಾಯ ಯೋಜನೆ. ಈ ಯೋಜನೆಯ ಅಡಿ ಶೇ 7.50ರಷ್ಟು ಬಡ್ಡಿ ಹಾಗೂ ಮಹಿಳೆಯರಿಗೆ ಗರಿಷ್ಠ ₹ 2 ಲಕ್ಷದವರೆಗೆ ಹೂಡಿಕೆ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಈ ಯೋಜನೆ 2025ರ ಮಾರ್ಚ್ 31ರ ವರೆಗೆ ಹೂಡಿಕೆಗೆ ಮುಕ್ತವಾಗಿರುತ್ತದೆ. ಇಂತಹ ಹೊಸ ಹೂಡಿಕೆಯ ಲಭ್ಯತೆಯ ಬಗ್ಗೆ ಸಮೀಪದ ಅಂಚೆ ಕಚೇರಿ ಅಥವಾ ಬ್ಯಾಂಕ್‌ಗಳಲ್ಲಿ ವಿಚಾರಿಸಿ.

ಕೃಷ್ಣಮೂರ್ತಿ ಟಿ, ಹನುಮಂತನಗರ, ಬೆಂಗಳೂರು

l ಪ್ರಶ್ನೆ: ನಾನು ಪೊಲೀಸ್ ಇಲಾಖೆಯಲ್ಲಿ 36 ವರ್ಷ ಆರು ತಿಂಗಳು ಸೇವೆ ಸಲ್ಲಿಸಿ, ಕಳೆದ ಸಪ್ಟೆಂಬರ್‌ನಲ್ಲಿ ನಿವೃತ್ತಿ ಹೊಂದಿರುತ್ತೇನೆ. ನಿವೃತ್ತಿಗೂ ಮುಂಚೆ ನಮ್ಮ ಇಲಾಖೆಯೇ ತೆರಿಗೆ ಕಡಿತ ಮಾಡುತ್ತಿತ್ತು. 2022ರ ಮಾರ್ಚ್‌ನಿಂದ ನಿವೃತ್ತಿಯವರೆಗೆ ₹ 87,037ರಂತೆ ಸಂಬಳ ಪಡೆದಿರುತ್ತೇನೆ. ಅನಂತರ, 2022ರ ಅಕ್ಟೋಬರ್‌ನಿಂದ ₹ 25,100ರಂತೆ ನಿವೃತ್ತಿ ವೇತನ ಬರುತ್ತಿದೆ. ಇದಲ್ಲದೆ ನಿವೃತ್ತಿಯ ನಂತರ ಜಿಪಿಎಫ್ ₹ 20.71 ಲಕ್ಷ, ಡಿಸಿಆರ್‌ಜಿ ₹ 8.53 ಲಕ್ಷ, ಕಮ್ಯುಟೇಷನ್ ಪೆನ್ಶನ್ ₹ 10.08 ಲಕ್ಷ, ರಜಾ ಸಂಬಳ ನಗದೀಕರಣ ₹ 6.53 ಲಕ್ಷ, ಇಜಿಐಎಸ್ ₹ 1.16 ಲಕ್ಷ ಸಿಗಲಿದೆ. ನಾನು ಇದರಲ್ಲಿ ಯಾವೆಲ್ಲ ಆದಾಯಕ್ಕೆ ತೆರಿಗೆ ಕಟ್ಟಬೇಕು?

ಉತ್ತರ: ನಿವೃತ್ತಿ ವೇತನವು ವೇತನದ ಭಾಗವೇ ಆಗಿರುವುದರಿಂದ ಇದು ಸರ್ಕಾರಿ ಅಥವಾ ಖಾಸಗಿ ನಿವೃತ್ತ ಉದ್ಯೋಗಿಗಳ ಕೈಯಲ್ಲಿ ತೆರಿಗೆಗೆ ಒಳಪಡುತ್ತದೆ. ಇದಕ್ಕೆ ಸಂಬಂಧಿಸಿ ಹೇಳುವುದಾದರೆ, ವೇತನದಾರರಿಗೆ ಯಾವೆಲ್ಲ ವಿನಾಯಿತಿಗಳು ಇವೆಯೋ ಅವೆಲ್ಲ ವಿನಾಯಿತಿಗಳನ್ನು ನೀವೂ ಪಡೆಯಬಹುದು. ಇದು ಪ್ರತಿ ವರ್ಷ ಇರುವ ಆದಾಯ. ನಿಮ್ಮ ವಿಚಾರದಲ್ಲಿ ಇದು ವರ್ಷಕ್ಕೆ ಸುಮಾರು ಮೂರೂ ಲಕ್ಷದ ಆಸುಪಾಸು ಇರುವುದರಿಂದ ಹಾಗೂ ಸ್ಟ್ಯಾಂಡರ್ಡ್ ಡಿಡಕ್ಷನ್ ಕಡಿತದ ಲಾಭ ಸಿಗುವುದರಿಂದ ಪಿಂಚಣಿ ಆದಾಯಕ್ಕೆ ಮಾತ್ರ ಸಂಬಂಧಿಸಿ ತೆರಿಗೆ ಏನೂ ಬರಲಾರದು.

ಇನ್ನು ನಿಮ್ಮ ನಿವೃತ್ತಿಯ ಸಂದರ್ಭದಲ್ಲಿ ಬಂದ ವಿವಿಧ ಆದಾಯಗಳನ್ನು ಗಮನಿಸಿದರೆ, ನೀವು ಸರ್ಕಾರಿ ಉದ್ಯೋಗಿ ಆಗಿದ್ದ ಕಾರಣ ಬಹುತೇಕ ಆದಾಯಗಳು ವಿನಾಯಿತಿಗೊಳಪಡುತ್ತವೆ.

1) ಪ್ರಾವಿಡೆಂಟ್ ಫಂಡ್: ಸರ್ಕಾರಿ ಉದ್ಯೋಗಿಗಳಿಗೆ ಪ್ರತ್ಯೇಕವಾದ ಪ್ರಾವಿಡೆಂಟ್ ಫಂಡ್ ಇದ್ದು ನಿವೃತ್ತಿಯ ಸಮಯದಲ್ಲಿ ಸಿಗುವ ಮೊತ್ತ ಆದಾಯ ತೆರಿಗೆಯ ಸೆಕ್ಷನ್ 10(11) ಹಾಗೂ (12) ರ ಪ್ರಕಾರ ವಿನಾಯಿತಿಗೊಳಪಟ್ಟಿದೆ.

2) ಡೆತ್ ಕಮ್ ರಿಟೈರ್‌ಮೆಂಟ್ ಗ್ರಾಚ್ಯುಟಿ: ಆದಾಯ ತೆರಿಗೆಯ ಸೆಕ್ಷನ್ 10(10)(i) ಪ್ರಕಾರ ಗ್ರಾಚ್ಯುಟಿ ಮೊತ್ತ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಹೊಂದಿದೆ.

3) ಕಮ್ಯುಟೇಷನ್ ಪೆನ್ಶನ್: ಸರ್ಕಾರಿ ನೌಕರರಿಗೆ ಸೆಕ್ಷನ್ 10(10ಎ)(i) ಇದರ ಪ್ರಕಾರ ಮುಂಗಡವಾಗಿ ಕಮ್ಯುಟೇಶನ್ ಮೂಲಕ ಪಡೆದ ಪಿಂಚಣಿ ಆದಾಯಕ್ಕೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಇದೆ.

4) ರಜಾ ಸಂಬಳ ನಗದೀಕರಣ: ಸರ್ಕಾರಿ ನೌಕರಿಯಲ್ಲಿ ಇದ್ದವರಿಗೆ ಆದಾಯ ತೆರಿಗೆಯ ಸೆಕ್ಷನ್ 10(10ಎಎ) (i) ಪ್ರಕಾರ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಇದೆ.

5) ಉದ್ಯೋಗಿಗಳ ವಿಮಾ ಯೋಜನೆ: ಈ ಯೋಜನೆಯ ಅಡಿ ಸಿಗುವ ಮೊತ್ತ ಆದಾಯ ತೆರಿಗೆಯ ಸೆಕ್ಷನ್ 10(10ಡಿ) ಅಡಿ ತೆರಿಗೆ ವಿನಾಯಿತಿಗೆ ಒಳಪಡುತ್ತದೆ.

ಈ ಎಲ್ಲ ಆದಾಯಗಳು ಸಂಪೂರ್ಣವಾಗಿ ತೆರಿಗೆ ವಿನಾಯಿತಿಗೆ ಒಳಪಟ್ಟರೂ, ನೀವು ಆದಾಯ ತೆರಿಗೆ ವಿವರ ಸಲ್ಲಿಸುವಾಗ ಈ ಸಂಬಂಧಪಟ್ಟ ನಿಯಮಗಳಡಿ ಬಂದಿರುವ ಮೊತ್ತವನ್ನು ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಘೋಷಿಸಬೇಕಾಗುತ್ತದೆ. ಇದಕ್ಕೆ ಪರಿಣತರ ಸಹಾಯ ಪಡೆದುಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT