ಮಂಗಳವಾರ, ಜನವರಿ 26, 2021
28 °C
‘ಟ್ರಂಪ್ ಅಳಿಯ’ ಅಷ್ಟೇ ಎಂಬ ಗೇಲಿಯಿಂದ ‘ಹಿಡನ್‌ ಜೀನಿಯಸ್‌’ ಎನ್ನಿಸಿಕೊಳ್ಳುವವರೆಗೂ ಬೆಳೆದವರು ಕುಶ್ನರ್‌

ಸುಧೀಂದ್ರ ಬುಧ್ಯ ಲೇಖನ: ಅಸಾಧ್ಯವನ್ನು ಸಾಧಿಸಿದ ಅನನುಭವಿ

ಸುಧೀಂದ್ರ ಬುಧ್ಯ Updated:

ಅಕ್ಷರ ಗಾತ್ರ : | |

ಇಸ್ರೇಲ್ ಪ್ರಧಾನಿ ನೆತನ್ಯಾಹು ಮತ್ತು ಅಮೆರಿಕದ ಅಧ್ಯಕ್ಷೀಯ ಸಲಹೆಗಾರ ಜರೇಡ್ ಕುಶ್ನರ್ ಡಿಸೆಂಬರ್ 21ರಂದು ಜೆರುಸಲೇಮ್‌ನಲ್ಲಿ ಆಲಿವ್ ಗಿಡವನ್ನು ನೆಟ್ಟರು. ಜೆರುಸಲೇಮ್‌ನಲ್ಲಿ ಆಲಿವ್ ಗಿಡವನ್ನು ನೆಡುವುದು ಇಸ್ರೇಲ್ ಜೊತೆಗಿನ ಆಳವಾದ ಸಂಬಂಧವನ್ನು ಮತ್ತು ಸಹಭಾಗಿತ್ವವನ್ನು ಸಂಕೇತಿಸುವ ಒಂದು ಪ್ರಕ್ರಿಯೆ. ಇದೇ ಸಂದರ್ಭದಲ್ಲಿ ನೆತನ್ಯಾಹು ‘ಡೊನಾಲ್ಡ್‌ ಟ್ರಂಪ್ ತೆಗೆದು ಕೊಂಡ ಧೈರ್ಯಶಾಲಿ ಮತ್ತು ಐತಿಹಾಸಿಕ ನಿರ್ಧಾರಕ್ಕಾಗಿ ಅವರಿಗೆ ಇಸ್ರೇಲ್ ಜನರ ಪರವಾಗಿ ವಂದನೆಗಳು. ಈ ಗಿಡ ನಿಮ್ಮ ಕೊಡುಗೆಯನ್ನು ಭವಿಷ್ಯದ ಪೀಳಿಗೆಗೆ ತಿಳಿಸುತ್ತದೆ’ ಎನ್ನುತ್ತಾ ಕುಶ್ನರ್ ಅವರಿಗೆ ಇಸ್ರೇಲ್ ಪರವಾಗಿ ಒಂದು ಬಿನ್ನವತ್ತಳೆಯನ್ನು ಸಮರ್ಪಿಸಿದರು. ಇಸ್ರೇಲ್ ಮತ್ತು ಅರಬ್ ಜಗತ್ತಿನ ನಡುವೆ ಒಂದು ಕೊಂಡಿಯಾಗಿ ಕುಶ್ನರ್ ಕೆಲಸ ಮಾಡಿದ್ದಕ್ಕಾಗಿ ಇಸ್ರೇಲ್ ಹೀಗೆ ಅವರನ್ನು ಗೌರವಿಸಿತು.

ಅಮೆರಿಕದ ಅಧ್ಯಕ್ಷರಾಗಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಟ್ರಂಪ್ ಸಾಧಿಸಿದ್ದೇನು ಎಂದು ನೋಡಿದರೆ, ಮೊದಲಿಗೆ ಕಾಣುವುದೇ ಅವರ ನಿಖರ ವಿದೇಶಾಂಗ ನೀತಿ. ಮಾತಿನಲ್ಲಿ ಕಾಠಿಣ್ಯ ತೋರಿದರೂ ಟ್ರಂಪ್ ಒಬ್ಬ ಯುದ್ಧಮೋಹಿ ಅಧ್ಯಕ್ಷ ಆಗಿರಲಿಲ್ಲ. ನಾಲ್ಕು ವರ್ಷಗಳ ಕೆಳಗೆ ಅವರು ಶ್ವೇತಭವನದ ಹೊಸ್ತಿಲಿಗೆ ಬಂದಾಗ, ಸುಖಾಸುಮ್ಮನೆ ಒಂದು ದಿಗಿಲು ಎದ್ದಿತ್ತು. ಅಮೆರಿಕ ಸಾಲು ಸಾಲು ಯುದ್ಧಕ್ಕೆ ಇಳಿಯಲಿದೆ, ಪ್ರಪಂಚಕ್ಕೆ ಗಂಡಾಂತರ ಎದುರಾಗಲಿದೆ ಎಂದು ಉದಾರವಾದಿ ಎನಿಸಿಕೊಂಡವರು ಆತಂಕದ ಬೀಜ ಬಿತ್ತಿದ್ದರು. ಆದರೆ ಈ ಬೀಜ ನಾಲ್ಕು ವರ್ಷಗಳಾದರೂ ಮೊಳೆಯಲಿಲ್ಲ.

ಉತ್ತರ ಕೊರಿಯಾ, ಇರಾನ್, ಇಸ್ಲಾಮಿಕ್ ಉಗ್ರರು... ಹೀಗೆ ಸ್ಫೋಟಕಗಳನ್ನು ಟ್ರಂಪ್ ತಮ್ಮದೇ ರೀತಿಯಲ್ಲಿ ಸಿಡಿಯದಂತೆ ಮಾಡಿದರು. ‘ಮಧ್ಯಪ್ರಾಚ್ಯದಲ್ಲಿ ಶಾಂತಿ ನಮ್ಮ ಆದ್ಯತೆ’ ಎಂದಾಗ ಟ್ರಂಪ್‌ಗೆ ತಲೆಕೆಟ್ಟಿದೆ ಎಂಬುದೇ ತಥಾಕಥಿತ ಉದಾರವಾದಿಗಳ ಉದ್ಗಾರವಾಗಿತ್ತು. ಜೆರುಸಲೇಮ್ ವಿಷಯದಲ್ಲಿ ಅವರು ಸ್ಪಷ್ಟ ನಿಲುವು ತೆಗೆದುಕೊಂಡು, ಅದನ್ನು ಇಸ್ರೇಲಿನ ರಾಜಧಾನಿಯಾಗಿ ಮಾನ್ಯ ಮಾಡಿ ಅಮೆರಿಕದ ರಾಯಭಾರ ಕಚೇರಿಯನ್ನು ಜೆರುಸಲೇಮ್‌ಗೆ ಸ್ಥಳಾಂತರಿಸುವ ಘೋಷಣೆ ಮಾಡಿದಾಗ, ‘ಇದರಿಂದ ಮಧ್ಯಪ್ರಾಚ್ಯ ಹೊತ್ತಿ ಉರಿಯಲಿದೆ. ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವಿನ ವೈಮನಸ್ಯ ಹೆಚ್ಚಾಗಲಿದೆ. ಶಾಂತಿ ದೂರದ ಮಾತು’ ಎಂಬುದು ಅಮೆರಿಕದ ಮುಖ್ಯವಾಹಿನಿ ಮಾಧ್ಯಮಗಳ ಆಂಬೋಣವಾಗಿತ್ತು. ಆದರೆ ಕಳೆದ ಮೂರು ತಿಂಗಳಿನಲ್ಲಿ ನಾಲ್ಕು ಮಹತ್ವದ ಶಾಂತಿ ಒಪ್ಪಂದಗಳಿಗೆ ಟ್ರಂಪ್ ಮಧ್ಯವರ್ತಿಯಾದರು. ಒಂದು ಕಾಲದಲ್ಲಿ ಇಸ್ರೇಲ್ ಅಸ್ತಿತ್ವವನ್ನು ನಿರಾಕರಿಸಿದ್ದ ಯುಎಇ, ಬಹರೇನ್, ಸುಡಾನ್ ಹಾಗೂ ಮೊರೊಕ್ಕೊಗಳು ಇಸ್ರೇಲ್ ಜೊತೆಗೆ ಒಪ್ಪಂದಕ್ಕೆ ಮುಂದಾದವು!

ಹಾಗೆ ನೋಡಿದರೆ, ಮಧ್ಯಪ್ರಾಚ್ಯದ ವಿಷಯದಲ್ಲಿ ಟ್ರಂಪ್ ಬಳಸಿದ ಪ್ರಮುಖ ಅಸ್ತ್ರ ಎಂದರೆ ಅದು ಜರೇಡ್ ಕುಶ್ನರ್. ಟ್ರಂಪ್ ಅಧ್ಯಕ್ಷರಾದ ಬಳಿಕ ಕುಶ್ನರ್ ಅವರನ್ನು ಹಿರಿಯ ಅಧ್ಯಕ್ಷೀಯ ಸಲಹೆಗಾರನನ್ನಾಗಿ ನೇಮಕ ಮಾಡಿದಾಗ, ಕುಶ್ನರ್ ಅವರ ಏಕೈಕ ಅರ್ಹತೆ ಎಂದರೆ ಅವರು ‘ಟ್ರಂಪ್ ಅಳಿಯ’ ಎಂದು ಗೇಲಿ ಮಾಡಲಾಗಿತ್ತು. ಆದರೆ ಕುಶ್ನರ್ ತಮ್ಮದೇ ಆದ ತಂಡ ರಚಿಸಿಕೊಂಡು ಮಧ್ಯಪ್ರಾಚ್ಯದ ಕಡೆ ಗಮನಹರಿಸಿದರು.

‘ಜೆರುಸಲೇಮ್ ಸಮಸ್ಯೆಗಳ ಮೂಲವಲ್ಲ, ಅದು ಪರಿಹಾರದ ಓಟೆ’ ಎಂಬುದು ಕುಶ್ನರ್ ನಿಲುವಾಗಿತ್ತು. ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ಬಿಕ್ಕಟ್ಟಿನ ಕುರಿತು ಎರಡು ಮಿಥ್ಯೆಗಳಿದ್ದವು. ಈ ಮಿಥ್ಯೆಗಳು ಹಲವು ದಶಕಗಳ ಕಾಲ ಮಧ್ಯಪ್ರಾಚ್ಯವನ್ನು ಯಥಾಸ್ಥಿತಿಯಲ್ಲಿ ಇಟ್ಟಿದ್ದವು. ಮೊದಲನೆಯದು, ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವೆ ಶಾಂತಿ ಒಪ್ಪಂದ ಏರ್ಪಡದ ಹೊರತು, ಅರಬ್ ಜಗತ್ತಿನ ಇತರ ರಾಷ್ಟ್ರಗಳೊಂದಿಗೆ ಇಸ್ರೇಲ್ ಸಂಬಂಧ ವೃದ್ಧಿಸಿಕೊಳ್ಳಲು ಸಾಧ್ಯವಾಗದು. ಎರಡನೆಯದು, ಅದು ಸಾಧ್ಯವಾಗಬೇಕಿದ್ದರೆ, ಪ್ಯಾಲೆಸ್ಟೀನ್ ಪ್ರಸ್ತಾಪವನ್ನು ಒಪ್ಪಿಕೊಳ್ಳು ವಂತೆ ಇಸ್ರೇಲ್ ಮೇಲೆ ಅಮೆರಿಕ ಒತ್ತಡ ಹೇರಬೇಕು. ಒಬಾಮ ಸೇರಿದಂತೆ ಎಲ್ಲರೂ ಈ ಮಿಥ್ಯೆಗಳಿಗೇ ಜೋತುಬಿದ್ದಿದ್ದರು. ಆದರೆ ಕುಶ್ನರ್ ಭಿನ್ನವಾಗಿ ಯೋಚಿಸಿದರು.

ಮಧ್ಯಪ್ರಾಚ್ಯ ಕುರಿತು ತಮ್ಮ ಕೆಲಸ ಆರಂಭಿಸುವ ಮುನ್ನ ಕುಶ್ನರ್ ‘ಈ ಬಗ್ಗೆ ಹಿಂದೆ ಕೆಲಸ ಮಾಡಿದ ಎಲ್ಲರ ಜೊತೆ ಮಾತನಾಡಿದ್ದೇನೆ, ಏನಿಲ್ಲವೆಂದರೂ ಬಿಕ್ಕಟ್ಟಿನ ಕುರಿತ 25 ಪುಸ್ತಕಗಳನ್ನು ಓದಿದ್ದೇನೆ’ ಎಂದಿ ದ್ದರು. ಅವರಲ್ಲೊಂದು ತಯಾರಿ ಇತ್ತು. ಕುಶ್ನರ್ ತಂಡ ‘ಶಾಂತಿಯಿಂದ ಸಮೃದ್ಧಿಯೆಡೆಗೆ ಯೋಜನೆ’ಯ ನೀಲ ನಕ್ಷೆ ರಚಿಸಿತು. ಈ ದ್ವಿರಾಷ್ಟ್ರ ಯೋಜನೆ ಪ್ಯಾಲೆಸ್ಟೀನಿಯನ್ನರಿಗೆ ಸ್ವತಂತ್ರ ರಾಷ್ಟ್ರವನ್ನು ನೀಡುವ ಪ್ರಸ್ತಾಪ ಹೊಂದಿತ್ತು. ಆದರೆ ಜೆರುಸಲೇಮ್ ವಿಷಯದಲ್ಲಿ ಆಚೀಚೆ ಸರಿಯದ ಪ್ಯಾಲೆಸ್ಟೀನ್, ಆ ಯೋಜನೆಯನ್ನು ತಿರಸ್ಕರಿ ಸಿತು. ‘ಇಸ್ರೇಲ್ ಬೆಳವಣಿಗೆಯ ವೇಗ ನೋಡಿದರೆ, ಈಗಲ್ಲದಿದ್ದರೆ ಇಬ್ಬರಿಗೂ ಸಮ್ಮತವಾಗುವ ಸಂಧಾನ ಮುಂದೆಂದೂ ಸಾಧ್ಯವಾಗದು. ಪ್ಯಾಲೆಸ್ಟೀನ್ ಈ ಕೊನೆಯ ಅವಕಾಶವನ್ನು ಬಿಟ್ಟುಕೊಡಬಾರದು’ ಎಂದು ಕುಶ್ನರ್ ಮನವೊಲಿಸುವ ಪ್ರಯತ್ನ ಮಾಡಿದರು. ಪ್ಯಾಲೆಸ್ಟೀನ್ ಜಗ್ಗಲಿಲ್ಲ.

ಅಸಾಧ್ಯವಾದುದನ್ನು ಸಾಧಿಸುವುದಕ್ಕಿಂತ, ಮೊದಲು ಸಾಧ್ಯವಿದ್ದದ್ದರ ಕಡೆಗೆ ಗಮನ ಹರಿಸಬೇಕು ಎಂದು ನಿರ್ಧರಿಸಿದ ಕುಶ್ನರ್, ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಪ್ಯಾಲೆಸ್ಟೀನ್ ಮೂಲಕವೇ ಹಾದು ಹೋಗಬೇಕಿಲ್ಲ ಎಂಬುದನ್ನು ಕಂಡುಕೊಂಡರು. ಒಬಾಮ ಆಡಳಿತದ ಅವಧಿಯಲ್ಲಿ ಏರ್ಪಟ್ಟ ಪರಮಾಣು ಒಪ್ಪಂದವು ಇರಾನಿಗೆ ಹೆಚ್ಚಿನ ಅಧಿಕಾರ, ಶ್ರೀಮಂತಿಕೆ ನೀಡಿ ಪ್ರಾಂತೀಯವಾಗಿ ಅದು ಹೆಚ್ಚು ಆಕ್ರಮಣಕಾರಿಯಾಗಲು ಪ್ರೋತ್ಸಾಹಿಸಿದೆ ಎಂದು ಕೊಲ್ಲಿ ರಾಷ್ಟ್ರಗಳು ಭೀತಿಗೊಂಡಿದ್ದವು. ಆದರೆ ಈ ಕಳವಳಗಳಿಗೆ ಒಬಾಮ ಕಿವುಡಾಗಿದ್ದರು. ಕುಶ್ನರ್ ಕಿವಿ ತೆರೆದು ಆಲಿಸಿದರು. ಪರಿಣಾಮವಾಗಿ ಟ್ರಂಪ್ ನೇತೃತ್ವದ ಆಡಳಿತ, ಇರಾನ್ ಅಣು ಒಪ್ಪಂದದಿಂದ ಹಿಂದೆ ಸರಿಯಿತು. ತಾಂತ್ರಿಕವಾಗಿ ಇಸ್ರೇಲ್ ಸಾಧಿಸಿದ ಪ್ರಗತಿ ಮತ್ತು ಇರಾನ್ ಅಣ್ವಸ್ತ್ರ ಯೋಜನೆಯನ್ನು ಗಟ್ಟಿದನಿಯಲ್ಲಿ ಜಾಗತಿಕ ವೇದಿಕೆಗಳಲ್ಲಿ ನೆತನ್ಯಾಹು ವಿರೋಧಿಸಿದ್ದರಿಂದ, ಮಧ್ಯಪ್ರಾಚ್ಯದಲ್ಲಿ ಇರಾನ್ ಪಾರಮ್ಯವನ್ನು ವಿರೋಧಿಸು ತ್ತಿದ್ದ ಅರಬ್ ರಾಷ್ಟ್ರಗಳು ಇಸ್ರೇಲ್ ಕಡೆಗೆ ಆಕರ್ಷಿತ ವಾಗಿದ್ದವು. ಈ ಬೆಳವಣಿಗೆಗಳಿಂದ ಸಂದರ್ಭವು ಪ್ಯಾಲೆಸ್ಟೀನ್ ಕಡೆಗಿಲ್ಲ ಎಂಬುದನ್ನು ಕುಶ್ನರ್ ಅರ್ಥ ಮಾಡಿಕೊಂಡರು. ಇಸ್ರೇಲ್ ಜೊತೆಗೆ ಅನಧಿಕೃತವಾಗಿ ಸಹಕರಿಸುತ್ತಿದ್ದ ಅರಬ್ ರಾಷ್ಟ್ರಗಳು ಪೂರ್ಣ ಪ್ರಮಾಣದ ರಾಜತಾಂತ್ರಿಕ ಮತ್ತು ವಾಣಿಜ್ಯಿಕ ಸಂಬಂಧ ಹೊಂದಲು ಕುಶ್ನರ್ ಸೇತುವೆಯಾದರು. ಪರಿಣಾಮವಾಗಿ ಈ ಶಾಂತಿ ಒಪ್ಪಂದಗಳು ಏರ್ಪಟ್ಟವು.

ಮೂಲತಃ ಯಹೂದಿಯಾಗಿರುವ ಕುಶ್ನರ್, ಇಸ್ರೇಲ್ ಪರವಾಗಿ ಕೆಲಸ ಮಾಡಿದರು; ಪ್ಯಾಲೆಸ್ಟೀನ್ ಅಳಲನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ ಎಂಬ ಆರೋಪಗಳಿದ್ದರೂ, ಕಾಲದೊಂದಿಗೆ ಹೆಜ್ಜೆ ಹಾಕದ, ಕುಶ್ನರ್ ಪ್ರಸ್ತಾಪವನ್ನು ಕೈಗೆತ್ತಿಕೊಂಡು ಅದನ್ನು ನಂತರ ಮಾತುಕತೆಯ ಮೂಲಕ ಸುಧಾರಿಸಿಕೊಳ್ಳುವ ಪ್ರಯತ್ನ ಮಾಡದ, ಯಹೂದಿ ದ್ವೇಷಕ್ಕೆ ಕಟ್ಟುಬಿದ್ದ ಪ್ಯಾಲೆಸ್ಟೀನ್ ತನ್ನ ಜಿಗುಟು ಸ್ವಭಾವದಿಂದ ದಿನೇದಿನೇ ಏಕಾಂಗಿಯಾಗುತ್ತಿದೆ ಎನ್ನುವುದೂ ಸತ್ಯ.


–ಸುಧೀಂದ್ರ ಬುಧ್ಯ

ಒಟ್ಟಿನಲ್ಲಿ, ಅಮೆರಿಕದ ಮತ್ತು ಜಗತ್ತಿನ ಮುಖ್ಯವಾಹಿನಿ ಮಾಧ್ಯಮಗಳು ಟ್ರಂಪ್ ಕುರಿತ ಅಸಹನೆಯಿಂದಾಗಿ, ಈ ಐತಿಹಾಸಿಕ ಒಪ್ಪಂದಗಳು ಏರ್ಪಟ್ಟಾಗ ಕುಶ್ನರ್ ಮತ್ತು ಅವರ ಸಹೋದ್ಯೋಗಿಗಳಿಗೆ ನೀಡಬೇಕಾದ ಮನ್ನಣೆಯನ್ನು ನೀಡದಿದ್ದರೂ, ಕುಶ್ನರ್ ಎಂಬ 39 ವರ್ಷದ ಈ ಅನನುಭವಿ ಮತ್ತು ಅವರ ತಂಡ ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ವಿಷಯದಲ್ಲಿ ರಾಜತಾಂತ್ರಿಕ ನಿಪುಣರು ಮತ್ತು ತಜ್ಞರು ಎನಿಸಿಕೊಂಡಿದ್ದವರಿಗಿಂತ ಹೆಚ್ಚಿನದನ್ನು ಸಾಧಿಸಿತು ಎನ್ನುವುದಂತೂ ಇತಿಹಾಸದಲ್ಲಿ ಉಳಿಯುತ್ತದೆ.

ಈ ಹಿಂದೆ ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ಯಾಗಿದ್ದ ನಿಕಿ ಹ್ಯಾಲೆ, ಕುಶ್ನರ್ ಅವರನ್ನು ‘ಹಿಡನ್ ಜೀನಿಯಸ್’ ಎಂದಿದ್ದರು. ಕುಶ್ನರ್ ಮಧ್ಯಪ್ರಾಚ್ಯ ಕುರಿತ ತಮ್ಮ ಯೋಜನೆಯನ್ನು ತೆರೆದಿಟ್ಟಾಗ, ಇದು ಅಸಾಧ್ಯ, ಅಪಾಯಕಾರಿ, ಅಪ್ರಾಯೋಗಿಕ, ಅಸಂಬದ್ಧ, ಬಾಲಿಶ ಎಂದೆಲ್ಲಾ ವಿಶ್ಲೇಷಿಸಿದ್ದ ತಜ್ಞರೂ ಈಗ ಕುಶ್ನರ್ ಕಾರ್ಯವನ್ನು ಅಂತರಂಗದಲ್ಲಿ ಒಪ್ಪಬಹುದು!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು