ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ ನಡೆದು ತಿಂಗಳು ಕಳೆದಿದೆ. ಆ ದಾಳಿಗೆ ಪ್ರತಿಯಾಗಿ ಭಾರತ ರಾಜತಾಂತ್ರಿಕ ಕ್ರಮಗಳನ್ನೂ ‘ಆಪರೇಷನ್ ಸಿಂಧೂರ’ದ ಮೂಲಕ ಸೇನಾ ಕಾರ್ಯಾಚರಣೆಯನ್ನೂ ನಡೆಸಿದ್ದೂ ಆಗಿದೆ. ಇಷ್ಟಾದರೂ ಒಂದಿಷ್ಟು ಅಸ್ಪಷ್ಟತೆ ಹಾಗೂ ಪ್ರಶ್ನೆಗಳು ಉಳಿದುಹೋಗಿವೆ.

ಸಾಮಾನ್ಯವಾಗಿ ಸೇನಾ ಕಾರ್ಯಾಚರಣೆಯ ಕುರಿತು ಸಂಪೂರ್ಣ ಮಾಹಿತಿ ಹೊರಬೀಳಲು ಒಂದಷ್ಟು ಸಮಯ ಬೇಕು. ಯಾವ ಹಂತದಲ್ಲಿ ಯಾವ ಮಾಹಿತಿಯನ್ನು ಎಷ್ಟು ಬಹಿರಂಗಗೊಳಿಸಬೇಕು, ಅದರಿಂದ ಆಗುವ ಪರಿಣಾಮ ಏನು ಎಂದು ಪರಿಶೀಲಿಸಲಾಗುತ್ತದೆ. ಸೇನೆಯ ಆತ್ಮಸ್ಥೈರ್ಯ ಹಾಗೂ ದೇಶದ ಭದ್ರತೆಗೆ ಹಾನಿಯಾಗದು, ಸರ್ಕಾರದ ಪ್ರತಿಷ್ಠೆ ಮುಕ್ಕಾಗದು ಎಂದಾಗ ಮಾತ್ರ ಅಂತಹ ಮಾಹಿತಿಗಳು ತಕ್ಷಣಕ್ಕೆ ಹೊರಬೀಳುತ್ತವೆ. ಉಳಿದ ಸತ್ಯಗಳು ಗೋಪ್ಯ ಕಡತಗಳಲ್ಲಿ ಅಡಗಿ ಕೂರುತ್ತವೆ.

‘ಆಪರೇಷನ್ ಸಿಂಧೂರ’ದ ಮೂಲಕ ಭಾರತದ ಸೇನೆ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ಪ್ರಚುರಪಡಿಸಿದೆ. ಭಾರತ ಕುರಿತ ತನ್ನ ವಿದೇಶಾಂಗ ನೀತಿಯ ಅಲಿಖಿತ ನಿಯಮವಾಗಿ ಭಯೋತ್ಪಾದನೆಯನ್ನು ಅಳವಡಿಸಿಕೊಂಡಿರುವ ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನು ಹಾಗೂ ಎಚ್ಚರಿಕೆಯನ್ನು ಭಾರತದ ಸೇನೆ ನೀಡಿದೆ. ದೇಶೀಯ ಶಸ್ತ್ರಾಸ್ತ್ರಗಳ ಬಲ ಹಾಗೂ ಕಾರ್ಯಕ್ಷಮತೆ ಈ ಕಾರ್ಯಚರಣೆಯ ಮೂಲಕ ಸಾಬೀತಾಗಿದೆ. ಆದರೆ, ನಾಲ್ಕು ದಿನಗಳ ಉದ್ವಿಗ್ನ ಸ್ಥಿತಿ ‘ಕದನ ವಿರಾಮ’ದ ಮೂಲಕ ಶಮನವಾದಾಗ, ಅದು ಅನೇಕ ಪ್ರಶ್ನೆಗಳನ್ನು ಕೂಡ ಹುಟ್ಟುಹಾಕಿದೆ!

ಮೇ 10ರ ಶನಿವಾರ ಸಂಜೆಯ ಹೊತ್ತಿಗೆ ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಮಾಧ್ಯಮದಲ್ಲಿ ‘ಅಮೆರಿಕದ ಮಧ್ಯಸ್ಥಿಕೆಯಲ್ಲಿ ರಾತ್ರಿಯಿಡೀ ನಡೆದ ಸುದೀರ್ಘ ಮಾತುಕತೆಯ ನಂತರ, ಭಾರತ ಮತ್ತು ಪಾಕಿಸ್ತಾನವು ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ’ ಎಂದು ಪ್ರಕಟಿಸಿದರು. ನಂತರ ಭಾರತ ಸರ್ಕಾರ ಕದನ ವಿರಾಮದ ನಿರ್ಧಾರವನ್ನು ಅನುಮೋದಿಸಿತು. ಪಾಕಿಸ್ತಾನದ ಸೇನಾ ವರಿಷ್ಠರ ಮೂಲಕ ಈ ಪ್ರಸ್ತಾಪ ಭಾರತದ ಸೇನಾ ವರಿಷ್ಠರಿಗೆ ಬಂತು. ಕದನ ವಿರಾಮ ಈ ಸಂಜೆಯಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಲಾಯಿತು. ಅತ್ತ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಏನನ್ನೋ ಗೆದ್ದ ಹುಮ್ಮಸ್ಸಿನಲ್ಲಿಯೇ ಅಮೆರಿಕಕ್ಕೆ ಧನ್ಯವಾದ ಅರ್ಪಿಸಿದರು!

ಮೇ 12ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಸೇನೆಯ ಪರಾಕ್ರಮ ಹಾಗೂ ‘ಆಪರೇಷನ್ ಸಿಂಧೂರ’ದ ಯಶಸ್ಸಿನ ಕುರಿತು ಮಾತನಾಡಿದರು. ‘ಉಗ್ರವಾದಕ್ಕೆ ನವಭಾರತದ ಉತ್ತರ ಆಪರೇಷನ್ ಸಿಂಧೂರ ಆಗಿರಲಿದೆ. ಯಾವುದೇ ಭಯೋತ್ಪಾದನೆಯ ದಾಳಿಯನ್ನು ಯುದ್ಧ ಎಂದು ಪರಿಗಣಿಸಲಾಗುತ್ತದೆ’ ಎಂದರು. ಆದರೆ, ಕದನ ವಿರಾಮದಲ್ಲಿ ಅಮೆರಿಕದ ಪಾತ್ರವಿತ್ತೇ ಎಂಬುದರ ಕುರಿತು ಹೇಳಲಿಲ್ಲ. ವಿದೇಶಾಂಗ ಸಚಿವರ ಹೇಳಿಕೆಯೂ ನೇರವಾಗಿ ಇರಲಿಲ್ಲ.

‘ಆಪರೇಷನ್ ಸಿಂಧೂರ’ ಆರಂಭವಾದಾಗ, ‘ಭಾರತ– ಪಾಕಿಸ್ತಾನದ ಸಂಘರ್ಷಕ್ಕೂ ನಮಗೂ ಸಂಬಂಧವಿಲ್ಲ’ (None of our business) ಎಂದಿದ್ದ ಅಮೆರಿಕ, ನಂತರ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿರಬಹುದು ಎಂದೇ ಭಾವಿಸಿದರೂ, ಅದಕ್ಕೆ ಕಾರಣವಿತ್ತೇ? ಪಾಕಿಸ್ತಾನ ಮತ್ತು ಚೀನಾದ ಸಂಬಂಧ ಈಗಾಗಲೇ ಒಂದು ಹಂತಕ್ಕೆ ಗಟ್ಟಿಗೊಂಡಿದೆ. ಚೀನಾದ ‘ಬೆಲ್ಟ್ ಆ್ಯಂಡ್ ರೋಡ್’ ಯೋಜನೆ ಅದಕ್ಕೆ ಮುಖ್ಯ ಕಾರಣ ಎನಿಸಿದರೂ, ಭಾರತವನ್ನು ಕಟ್ಟಿಹಾಕಲು, ಪಾಕಿಸ್ತಾನವನ್ನು ಬಳಸಬಹುದು ಎನ್ನುವ ದುರುದ್ದೇಶವೂ ಚೀನಾಕ್ಕಿದೆ. ಅಂತೆಯೇ ಒಂದು ಕಾಲದಲ್ಲಿ ತನ್ನ ಅಣತಿಗೆ ಕುಣಿಯುತ್ತಿದ್ದ ಪಾಕಿಸ್ತಾನ, ಇದೀಗ ಚೀನಾದ ಕೈದಾಳ ಆಗುವುದು ಅಮೆರಿಕಕ್ಕೆ ಬೇಕಿಲ್ಲ. ತಾನು ಪಾಕಿಸ್ತಾನವನ್ನು ಇತರ ದೇಶಗಳ ವಿರುದ್ಧ ಬಳಸಿದಂತೆಯೇ, ಚೀನಾ ಕೂಡ ಪಾಕಿಸ್ತಾವನ್ನು ತನ್ನ ವಿರುದ್ಧವೇ ಬಳಸಬಹುದು ಎಂಬ ದಿಗಿಲು ಕೂಡ ಅಮೆರಿಕಕ್ಕೆ ಇದ್ದಂತಿದೆ. ಪಾಕಿಸ್ತಾನವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಅಮೆರಿಕ ಎಲ್ಲ ರೀತಿಯ ಪ್ರಯತ್ನವನ್ನೂ ಮಾಡುತ್ತಿದೆ.

‘ಭಾರತ ಮತ್ತು ಪಾಕಿಸ್ತಾನ ನಡುವಿನ ಕದನವನ್ನು ನಾನು ಬಗೆಹರಿಸಿದೆ’ ಎಂದು ಟ್ರಂಪ್ ಪದೇ ಪದೇ ಹೇಳುತ್ತಿರುವುದಕ್ಕೆ ಮತ್ತೊಂದು ಮಗ್ಗುಲು ಕೂಡ ಇರಬಹುದು. ಉಕ್ರೇನ್ ಮತ್ತು ರಷ್ಯಾದ ಯುದ್ಧವನ್ನು ತಾನು ಅಧಿಕಾರಕ್ಕೆ ಬಂದ ಮರುದಿನವೇ ಕೊನೆಗಾಣಿಸುವುದಾಗಿ ಟ್ರಂಪ್ ಹೇಳಿದ್ದರು. ಇದೀಗ ಅಧಿಕಾರಕ್ಕೆ ಬಂದು ನೂರು ದಿನಗಳು ಕಳೆದರೂ, ಉಕ್ರೇನ್ ಅಧ್ಯಕ್ಷರ ವಿರುದ್ಧ ಚತುರೋಪಾಯ ಬಳಸಿದರೂ ಆ ಯುದ್ಧಕ್ಕೆ ಕೊನೆಹಾಡಲು ಸಾಧ್ಯವಾಗಿಲ್ಲ. ಆ ಕಾರಣದಿಂದ ಅಮೆರಿಕದ ಒಳಗೆ ಮತ್ತು ಜಾಗತಿಕ ಚಾವಡಿಯಲ್ಲಿ ಟ್ರಂಪ್ ಅವರಿಗೆ ಮುಖಭಂಗವಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ಅವರು ತಮ್ಮ ವಿರುದ್ಧದ ಟೀಕೆಗೆ ಗುರಾಣಿಯಾಗಿ ಹಿಡಿಯುತ್ತಿದ್ದಾರೆ.

ಕಳೆದ ವಾರ (ಮೇ 30) ಟ್ರಂಪ್ ಮತ್ತೊಮ್ಮೆ ಈ ಕುರಿತು ಮಾತನಾಡಿದ್ದಾರೆ. ಅಮೆರಿಕದ ಅಧ್ಯಕ್ಷ ಸ್ಥಾನದಂತಹ ಪ್ರತಿಷ್ಠಿತ, ಜವಾಬ್ದಾರಿಯುತ ಹುದ್ದೆಯಲ್ಲಿರುವ ಟ್ರಂಪ್ ಹೀಗೆ ಪದೇ ಪದೇ ತಮ್ಮ ಪಾತ್ರ ಇರದ ವಿಷಯದ ಕುರಿತು ಮಾತನಾಡಿಯಾರೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಒಂದೊಮ್ಮೆ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮದ ನಿಲುವು ತೆಗೆದುಕೊಳ್ಳಲಾಯಿತು ಎಂದರೆ, ಉಭಯ ದೇಶಗಳ ಸರ್ಕಾರದ ಹಂತದಲ್ಲಿ ಈ ಚರ್ಚೆ ನಡೆದಿದೆ ಎಂದಾಗುತ್ತದೆ. ಯಾವುದೇ ಷರತ್ತು ಇಲ್ಲದೇ ಕದನ ವಿರಾಮಕ್ಕೆ ಕೂಡಲೇ ಒಪ್ಪಿಕೊಳ್ಳುವ ಜರೂರು ಭಾರತಕ್ಕೆ ಇತ್ತೇ ಎಂಬ ಉಪಪ್ರಶ್ನೆಯೂ ಮೊಳೆಯುತ್ತದೆ.

ಟ್ರಂಪ್ ‘ವ್ಯಾಪಾರ ಮತ್ತು ತೆರಿಗೆಯ ಅಸ್ತ್ರವನ್ನು ಈ ಸಂದರ್ಭದಲ್ಲಿ ತಾನು ಬಳಸಿದೆ’ ಎನ್ನುತ್ತಿದ್ದಾರೆ. ಭಾರತ ಯುದ್ಧಮೋಹಿ ರಾಷ್ಟ್ರವಲ್ಲದ ಕಾರಣ, ಆರ್ಥಿಕತೆಯನ್ನು ಬಲಪಡಿಸುವುದು ಮತ್ತು ಅಭಿವೃದ್ಧಿಯತ್ತ ದಾಪುಗಾಲು ಹಾಕುವುದು ಭಾರತದ ಆದ್ಯತೆಯಾದ ಕಾರಣ, ಅಮೆರಿಕದ ಸಲಹೆಯನ್ನು ಪುರಸ್ಕರಿಸಿರುವ ಸಾಧ್ಯತೆ ಇದೆ. ಜೊತೆಗೆ ಉಕ್ರೇನ್– ರಷ್ಯಾ ನಡುವಿನ ಸಂಘರ್ಷವನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರವಹಿಸುವ ಕೆಲಸವನ್ನು ಭಾರತ ಈ ಹಿಂದೆ ಮಾಡಿತ್ತು. ರಷ್ಯಾದ ಪುಟಿನ್ ಅವರ ಎದುರು ‘ಇದು ಯುದ್ಧಕ್ಕೆ ಕಾಲವಲ್ಲ’ ಎಂಬ ಮಾತನ್ನು ಪ್ರಧಾನಿ ಮೋದಿ ಆಡಿದ್ದರು. ಮೋದಿ ಅವರ ಮಾತನ್ನು ಜಗತ್ತು ಪ್ರಶಂಸಿಸಿತ್ತು. ಪಾಕಿಸ್ತಾನದ ವಿಷಯದಲ್ಲಿ ಆ ಮಾತು ಭಾರತದ ಕೈ ಕಟ್ಟಿತೇ?

ಬಿಡಿ, ಪಾಕಿಸ್ತಾನ ತನ್ನ ಮೀಸೆ ಮಣ್ಣಾಗಿಲ್ಲ ಎಂದೇ ವಾದಿಸುತ್ತಿದೆ. ಪಾಕಿಸ್ತಾನದ ಸೇನಾ ವರಿಷ್ಠ ಮುನೀರ್ ಅವರಿಗೆ ಬಡ್ತಿ ನೀಡಿ ಫೀಲ್ಡ್ ಮಾರ್ಷಲ್ ಹುದ್ದೆಗೆ ಏರಿಸಲಾಗಿದೆ. ‘ಆಪರೇಷನ್ ಸಿಂಧೂರ’ವನ್ನು ಭಾರತದ ಆಕ್ರಮಣ ಎಂದು ಬಿಂಬಿಸಲು ಪಾಕಿಸ್ತಾನ ಪ್ರಯಾಸ ಪಡುತ್ತಿದೆ. ಜಾಗತಿಕ ವೇದಿಕೆಗಳಲ್ಲಿ ಭಯೋತ್ಪಾದನೆಯ ಪೋಷಣೆ ಸೇರಿದಂತೆ ಪಾಕಿಸ್ತಾನಕ್ಕೆ ಮುಜುಗರ ಆಗುವ ವಿಷಯ ಬಂದಾಗಲೆಲ್ಲಾ ಚೀನಾ ಅದಕ್ಕೆ ಬೆಂಬಲವಾಗಿ ನಿಲ್ಲುತ್ತಿದೆ. ಹಾಗಾಗಿ, ಪಾಕಿಸ್ತಾನದ ನೈಜ ಬಣ್ಣವನ್ನು ಇತರ ದೇಶಗಳಿಗೆ ಮನವರಿಕೆ ಮಾಡಿಕೊಡುವ ಕೆಲಸಕ್ಕೆ ಭಾರತ ಚಾಲನೆ ಕೊಟ್ಟಿದೆ.

‘ಕ್ವಾಡ್’ ಸದಸ್ಯ ರಾಷ್ಟ್ರವಾಗಿದ್ದರೂ, ಪಾಕಿಸ್ತಾನ ಹಾಗೂ ಚೀನಾದ ಜೊತೆಗೆ ಸಂಘರ್ಷ ಏರ್ಪಟ್ಟರೆ ಭಾರತದ ಬೆನ್ನಿಗೆ ಅಮೆರಿಕ ನಿಲ್ಲುವುದಿಲ್ಲ ಎನ್ನುವುದು ಇದೀಗ ಸಾಬೀತಾಗಿದೆ. ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸಬೇಕಿದೆ. ಇಂದಿನ ಯುದ್ಧಗಳಲ್ಲಿ ಆಧುನಿಕ ತಂತ್ರಜ್ಞಾನ ಪ್ರಮುಖ ಪಾತ್ರವಹಿಸುತ್ತದೆ. ಯುದ್ಧೋಪಕರಣಗಳಲ್ಲಿ ತಾಂತ್ರಿಕ ಶ್ರೇಷ್ಠತೆಯನ್ನು ಸಾಧಿಸಿದ ರಾಷ್ಟ್ರ ಮೇಲುಗೈ ಸಾಧಿಸುತ್ತದೆ. ಇದೀಗ ಭಾರತ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 1.9ರಷ್ಟನ್ನು ರಕ್ಷಣಾ ವೆಚ್ಚವಾಗಿ ಬಳಸುತ್ತಿದೆ. ಇದನ್ನು ಹೆಚ್ಚಿಸುವ ಅಗತ್ಯವಿದೆ.

‘ಆಪರೇಷನ್ ಸಿಂಧೂರ’ ಕುರಿತ ಇನ್ನಷ್ಟು ಮಾಹಿತಿ, ಕದನ ವಿರಾಮಕ್ಕೆ ಪೂರಕವಾಗಿ ತೆರೆಯ ಹಿಂದೆ ನಡೆದ ಮಾತುಕತೆಯ ವಿವರಗಳು ತಕ್ಷಣಕ್ಕೆ ಅಲ್ಲದಿದ್ದರೂ ಮುಂದಿನ ದಿನಗಳಲ್ಲಿ ಬಹಿರಂಗಗೊಳ್ಳಬಹುದು. ಸೇನೆಯ ಸಾಮರ್ಥ್ಯ ಕುರಿತು ಹೆಮ್ಮೆ ಇಟ್ಟುಕೊಳ್ಳುವ ಜೊತೆಗೆ, ಭದ್ರತೆಯಲ್ಲಿ ಆದ ಲೋಪ ಹಾಗೂ ಸೇನಾ ಕಾರ್ಯಾಚರಣೆಯ ವಿಷಯದಲ್ಲಿ ಕಲಿಯಬೇಕಾದ ಪಾಠಗಳ ಕುರಿತು ನಾವು ಗಂಭೀರವಾಗಿ ಯೋಚಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.