ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮೋಲ್ಲಂಘನ| ಸೋತು ಗೆದ್ದ ಸಮರೋತ್ತರ ಕಥನ

ಜರ್ಮನಿಯ ಈ ಕಥನವು ತಲ್ಲಣದ ಸಂದರ್ಭದಲ್ಲಿ ಪುಟಿದೇಳುವ ಸ್ಥೈರ್ಯ ನೀಡಬಲ್ಲದು
Last Updated 18 ಮೇ 2020, 21:52 IST
ಅಕ್ಷರ ಗಾತ್ರ

ಎರಡನೇ ವಿಶ್ವಯುದ್ಧದಲ್ಲಿ ಜರ್ಮನಿಯ ನಾಜಿ ಪಡೆ ಸಂಪೂರ್ಣ ಸೋಲೊಪ್ಪಿಕೊಂಡು, ಭೇಷರತ್ ಶರಣಾಗತಿಯ ಒಪ್ಪಂದಕ್ಕೆ ಸಹಿ ಹಾಕಿ ಈ ಮೇ 8ಕ್ಕೆ 75 ವರ್ಷಗಳಾದವು. 1945ರ ಮೇ 8ರಂದು ಲಂಡನ್ ನಗರದಲ್ಲಿ ಆರೋಗ್ಯ ಸಚಿವಾಲಯದ ಮಹಡಿ ಏರಿದ ಇಂಗ್ಲೆಂಡ್ ಪ್ರಧಾನಿ ಚರ್ಚಿಲ್ ‘ನಮ್ಮ ಸುದೀರ್ಘ ಇತಿಹಾಸದಲ್ಲಿ ಇದಕ್ಕಿಂತ ಮಹತ್ವದ ದಿನವನ್ನು ನಾವು ನೋಡಿಲ್ಲ’ ಎಂದು ಅಲ್ಲಿ ಸೇರಿದ್ದ ಸಾವಿರಾರು ಜನರ ಮುಂದೆ ಸಂತಸ ಹಂಚಿಕೊಂಡಿದ್ದರು. ಅಂದು ಯಹೂದಿಗಳ ಸಂತಸಕ್ಕೆ ಪಾರವೇ ಇರಲಿಲ್ಲ. ಐರೋಪ್ಯ ರಾಷ್ಟ್ರಗಳಲ್ಲಿ ಜನ ಕುಣಿದು ಸಂಭ್ರಮಪಟ್ಟಿದ್ದರು.

1942ರಲ್ಲೇ ಅಮೆರಿಕ, ಇಂಗ್ಲೆಂಡ್, ಚೀನಾ ಮತ್ತು ಸೋವಿಯತ್ ಒಕ್ಕೂಟವು ಜರ್ಮನಿಯನ್ನು ಮಣಿಸುವುದು ತಮ್ಮ ಪ್ರಥಮ ಆದ್ಯತೆ ಎಂದು ಘೋಷಿಸಿದ್ದವಾದರೂ ಅದು ಸುಲಭವಾಗಿರಲಿಲ್ಲ. ರೂಸ್ವೆಲ್ಟ್, ಚರ್ಚಿಲ್ ಮತ್ತು ಸ್ಟಾಲಿನ್ ಸೇರಿ ಜರ್ಮನಿಯನ್ನು ಕಟ್ಟಿಹಾಕುವ ತಂತ್ರ ಹೆಣೆದರು. ಇಟಲಿ ಮೊದಲಿಗೆ ಶರಣಾಯಿತು. ಮುಸೊಲಿನಿ ಹತ್ಯೆ ನಡೆಯಿತು. ಜರ್ಮನಿಯ ಶಕ್ತಿ ಉಡುಗಿತು. ಅತ್ತ ಅಮೆರಿಕದ ಅಧ್ಯಕ್ಷ ರೂಸ್ವೆಲ್ಟ್ ತೀರಿಕೊಂಡು, ಆ ಜಾಗಕ್ಕೆ ಹ್ಯಾರಿ ಟ್ರೂಮನ್ ಬಂದರೂ ಯುದ್ಧದಲ್ಲಿ ಲಕ್ಷ್ಯ ಜರ್ಮನಿಯೇ ಆಗಿತ್ತು. ರೈನ್ ನದಿಯನ್ನು ದಾಟಿಬಂದ ಅಮೆರಿಕದ ಸೇನೆಯು ಜರ್ಮನಿಯ ಸೇನಾ ತುಕಡಿಗಳನ್ನು ವಶಪಡಿಸಿ
ಕೊಂಡಿತು. ಬರ್ಲಿನ್ ನಗರವು ರೆಡ್ ಆರ್ಮಿ ವಶಕ್ಕೆ ಬಂತು. ಸರ್ವಾಧಿಕಾರಿಯಾಗಿ ಕ್ರೌರ್ಯ ಮೆರೆದ ಹಿಟ್ಲರ್ 1945ರ ಏಪ್ರಿಲ್ 30ರಂದು ಆತ್ಮಹತ್ಯೆ ಮಾಡಿಕೊಂಡ! ಹಿಟ್ಲರ್ ಉತ್ತರಾಧಿಕಾರಿ ‘ಜರ್ಮನಿಯ ಜನರ ಪ್ರಾಣ ರಕ್ಷಣೆ ನನ್ನ ಮೊದಲ ಆದ್ಯತೆ. ಹಾಗಾಗಿ ಯಾವುದೇ ಕರಾರು ಇಲ್ಲದೆ ಜರ್ಮನಿ ಶರಣಾಗಲಿದೆ. ಮೇ 8ರ ರಾತ್ರಿ 11:01 ಗಂಟೆಗೆ ಬಂದೂಕಿನ ಸದ್ದು ನಿಲ್ಲುತ್ತದೆ’ ಎಂದು ಘೋಷಿಸಿದ.

ಎರಡನೇ ವಿಶ್ವಯುದ್ಧದಲ್ಲಿ ಜರ್ಮನಿಯ ಶರಣಾಗತಿ ಒಂದು ಮೈಲಿಗಲ್ಲು ಅಧ್ಯಾಯವಾದರೆ, ಸೋತು ಬಸವಳಿದಿದ್ದ ಜರ್ಮನಿಯ ಪುನರ್‌ನಿರ್ಮಾಣವು ಆಧುನಿಕ ಜಗತ್ತಿನ ಸ್ಫೂರ್ತಿದಾಯಕ ಅಧ್ಯಾಯ. ಯುದ್ಧದ ಕಾರಣದಿಂದ ಯುರೋಪಿನ ಬಹುಭಾಗ ನಾಶವಾಗಿತ್ತು. ನಾಗರಿಕ ವಸತಿಗಳ ಮೇಲೆ ದಾಳಿ ನಡೆದ ಪರಿಣಾಮವಾಗಿ ಜನಜೀವನ ವ್ಯಸ್ತಗೊಂಡಿತ್ತು. 1945ನ್ನು ‘ಇಯರ್ ಝೀರೊ’ ಎಂದು ಕರೆಯಲಾಗುತ್ತದೆ. ಸೊನ್ನೆಯಿಂದಲೇ ಆರಂಭಿಸಬೇಕಾದ ಪರಿಸ್ಥಿತಿಯಿತ್ತು. ಜರ್ಮನಿಯ ಸೇನೆ ತೋರಿದ ಕ್ರೌರ್ಯವನ್ನು ನೆರೆಯ ರಾಷ್ಟ್ರಗಳ ಜನ ಮನ್ನಿಸಲು ಸಿದ್ಧರಿರಲಿಲ್ಲ. ಜರ್ಮನ್ನರು ಸಂಶಯ, ಅಪನಂಬಿಕೆಯ ಕೂರಂಬು ಎದುರಿಸಬೇಕಾಯಿತು. ‘ಯುರೋಪಿಗೆ ಕೇಡು ಬಗೆದ, ಜನರನ್ನು ದುಃಖಕ್ಕೆ ದೂಡಿದ ಜರ್ಮನಿ ಅದಕ್ಕೆ ತಕ್ಕ ಬೆಲೆ ತೆರಲೇಬೇಕು’ ಎಂದು ಗೆದ್ದ ರಾಷ್ಟ್ರಗಳ ಸೇನಾ ಮುಖ್ಯಸ್ಥರು ಮಾತನಾಡಿದ್ದರು. ಸಿಟ್ಟಿಗೆ ಗುರಿಯಾದವರು ಮಹಿಳೆಯರು. ಜರ್ಮನಿಯಲ್ಲಿ ಅನಾಥ ಶಿಶುಗಳ ಸಂಖ್ಯೆ ಏರಿಕೆಯಾಯಿತು. 1945ರಿಂದ 1947ರವರೆಗೆ ಗರ್ಭಪಾತ ಮಾಡಿಸಿಕೊಂಡ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳವಾಯಿತು.

ಜರ್ಮನಿಯ ಮೇಲೆ ಹೆಚ್ಚಿನ ನಿಗಾ ಇಡಲು ಅದನ್ನು ನಾಲ್ಕು ವಲಯಗಳನ್ನಾಗಿ ವಿಭಾಗಿಸಲಾಯಿತು. ಫ್ರಾನ್ಸ್, ಅಮೆರಿಕ, ಇಂಗ್ಲೆಂಡ್, ಸೋವಿಯತ್ ರಷ್ಯಾ ಒಂದೊಂದು ವಲಯವನ್ನು ನಿರ್ವಹಿಸತೊಡಗಿದವು. ಯುದ್ಧದ ಪರಿಣಾಮವಾಗಿ ಆರ್ಥಿಕ ಸಂಕಷ್ಟ ಎದುರಾಯಿತು. ಆಹಾರದ ಅಭಾವ ಕಾಡಿತು. ಯುದ್ಧದಲ್ಲಿ ರೈಲು, ರಸ್ತೆಗಳು, ಬಂದರು, ಸೇತುವೆಗಳು ನಾಶವಾಗಿದ್ದವು. ಕೈಗಾರಿಕೆಗಳು ಸ್ಥಗಿತಗೊಂಡಿ
ದ್ದವು. 1946ರ ಸೆ.6ರಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಬೇರ್ನ್, ಜರ್ಮನಿಯ ಸ್ಟುಟ್ಗಾರ್ಟ್‌
ನಲ್ಲಿ ಮಹತ್ವದ ಭಾಷಣ ಮಾಡಿದರು. ಅದನ್ನು ‘ಸ್ಪೀಚ್ ಆಫ್ ಹೋಪ್’ ಎಂದು ಕರೆಯಲಾಯಿತು. ಶಸ್ತ್ರಗಳ ಉತ್ಪಾದನೆ ಸೇರಿದಂತೆ ಜರ್ಮನಿಗೆ ಸಾಮರಿಕ ಶಕ್ತಿ ತುಂಬಬಲ್ಲ ಎಲ್ಲ ಬಗೆಯ ಕೈಗಾರಿಕೆಗಳನ್ನು ನಾಶಪಡಿಸಲಾಯಿತು. ಕೃಷಿಪ್ರಧಾನ ರಾಷ್ಟ್ರವನ್ನಾಗಿ ಬೆಳೆಸಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು. ಇಂಗ್ಲೆಂಡ್, ಫ್ರಾನ್ಸ್, ಅಮೆರಿಕದ ಹಿಡಿತದಲ್ಲಿದ್ದ ಜರ್ಮನಿಯ ಭೂಭಾಗಗಳು ಒಂದಾಗಿ ಪಶ್ಚಿಮ ಜರ್ಮನಿ ಮೈದಳೆಯಿತು.

1948ರಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾರ್ಜ್ ಮಾರ್ಷಲ್ ‘ಯುರೋಪಿನಲ್ಲಿ ಕಮ್ಯುನಿಸಂ ಪ್ರಭಾವ ಹೆಚ್ಚುತ್ತಿದೆ. ಆದರೆ ಅದಕ್ಕೆ ಕಾರಣ ರಷ್ಯಾ ಅಲ್ಲ, ಯುರೋಪಿನಲ್ಲಿ ಹೆಚ್ಚುತ್ತಿರುವ ಬಡತನ’ ಎಂಬ ಸಂಗತಿಯನ್ನು ತಮ್ಮ ವರದಿಯಲ್ಲಿ ಉಲ್ಲೇಖಿಸಿದರು. ಯುರೋಪಿನ ಆರ್ಥಿಕ ಪುನಶ್ಚೇತನಕ್ಕೆ ಜರ್ಮನಿಯ ಪುನರ್‌ನಿರ್ಮಾಣ ಅವಶ್ಯವಾಗಿತ್ತು. ಒಂದು ಹಂತದಲ್ಲಿ ಪಶ್ಚಿಮ ಜರ್ಮನಿಯು ಐರೋಪ್ಯ ರಾಷ್ಟ್ರಗಳಿಗೆ ಅಗತ್ಯ ಸರಕುಗಳನ್ನು ರಫ್ತು ಮಾಡುವ ಉತ್ಪಾದನಾ ಕೇಂದ್ರವಾಗಿತ್ತು. ಅಮೆರಿಕ ದೊಡ್ಡ ಮೊತ್ತವನ್ನು ಪಶ್ಚಿಮ ಜರ್ಮನಿಯಲ್ಲಿ ತೊಡಗಿಸಿ ಕೈಗಾರಿಕೆಗಳನ್ನು ನವೀಕರಿಸುವ, ಮುಕ್ತ ವಹಿವಾಟು ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡಿತು. ಸೋಲು, ದುಗುಡ ಮರೆತ ಪಶ್ಚಿಮ ಜರ್ಮನಿ ಇತರ ದೇಶಗಳೊಂದಿಗೆ ಸೌಹಾರ್ದಯುತವಾಗಿ ಹೆಜ್ಜೆ ಹಾಕಲು ಸಂಕಲ್ಪಿಸಿತು.

1951ರಲ್ಲಿ ಪಶ್ಚಿಮ ಜರ್ಮನಿ ಅಧ್ಯಕ್ಷ ಅಡೆನೌರ್, ಯಹೂದಿಗಳ ಮೇಲೆ ನಡೆದ ದೌರ್ಜನ್ಯ ಮತ್ತು ಅವರಿಗಾದ ಆಸ್ತಿ ನಷ್ಟವನ್ನು ತುಂಬಿಕೊಡುವ ‘ಮರುಪಾವತಿ ಒಪ್ಪಂದ’ವನ್ನು ಇಸ್ರೇಲ್ ಪ್ರಧಾನಿ ಡೇವಿಡ್ ಬೆನ್ ಗುರಿಯನ್ ಅವರೊಂದಿಗೆ ಮಾಡಿಕೊಂಡರು. ಜರ್ಮನಿಯು ಫ್ರಾನ್ಸ್ ಜೊತೆಗೆ ಸಂಬಂಧ ಸುಧಾರಿಸಿಕೊಂಡಿತು. 1957ರಿಂದ 1966ರವರೆಗೆ ಪಶ್ಚಿಮ ಬರ್ಲಿನ್ ಮೇಯರ್ ಆಗಿ ನಂತರ ವಿದೇಶಾಂಗ ಮಂತ್ರಿಯಾದ ವಿಲ್ಲಿ ಬ್ರಾಂತ್, ಪೂರ್ವ ಯುರೋಪ್ ದೇಶಗಳ ಜೊತೆ ಸಖ್ಯ ಬೆಳೆಸಲು ಮುಂದಾದರು. ಪೋಲೆಂಡಿನ ವಾರ್ಸಾ ಘೇಟ್ಟೋ ಯುದ್ಧ ಸ್ಮಾರಕದೆದುರು ಮಂಡಿಯೂರಿ ಕೂತು ಜರ್ಮನಿಯ ಪರವಾಗಿ ಕ್ಷಮೆ ಯಾಚಿಸಿದರು. ಶಾಂತಿಗೆ ಪೂರಕವಾದ ಈ ಸಮನ್ವಯದ ಕೆಲಸಕ್ಕಾಗಿ 1971ರಲ್ಲಿ ಬ್ರಾಂತ್ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಯಿತು.

ಈ ಎಲ್ಲ ಬೆಳವಣಿಗೆಗಳೂ ಪಶ್ಚಿಮ ಜರ್ಮನಿಯ ಮರುನಿರ್ಮಾಣಕ್ಕೆ ಪೂರಕವಾಗಿದ್ದವು. ಸೋವಿಯತ್ ಪತನದ ನಂತರ ಪೂರ್ವ ಜರ್ಮನಿಯ ಜನ ಹಾತೊರೆದು ಪಶ್ಚಿಮ ಜರ್ಮನಿಯೊಂದಿಗೆ ಒಂದಾದರು. ಯುರೋಪಿಯನ್ ಎಕನಾಮಿಕ್ ಕಮ್ಯುನಿಟಿ, ನ್ಯಾಟೊ ಎಲ್ಲದರಲ್ಲೂ ಸಕ್ರಿಯವಾಗಿ ಪಾಲ್ಗೊಂಡ ಜರ್ಮನಿ ನಾಲ್ಕನೆಯ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಿತು. ಐರೋಪ್ಯ ಒಕ್ಕೂಟದ ಪ್ರಭಾವಿ ರಾಷ್ಟ್ರವಾಗಿ ಎದ್ದುನಿಂತಿತು. ಅನುಷ್ಠಾನಕ್ಕೆ ಬಂದ ಆರ್ಥಿಕ ಸುಧಾರಣಾ ಕ್ರಮಗಳು, ಕಾರ್ಮಿಕಸ್ನೇಹಿ ನೀತಿ, ಶಿಕ್ಷಣ ಕ್ಷೇತ್ರದಲ್ಲಿ ಆದ ಬದಲಾವಣೆಗಳು ತ್ವರಿತ ಬೆಳವಣಿಗೆಗೆ ಪೂರಕವಾಗಿದ್ದವು. ಆಟೊಮೊಬೈಲ್ ಕ್ಷೇತ್ರದಲ್ಲಿ ಅದು ಸಾಧಿಸಿದ ಪ್ರಗತಿಗೆ ಜಗತ್ತು ಬೆರಗಾಯಿತು. ಐರೋಪ್ಯ ಒಕ್ಕೂಟದ ಇತರ ರಾಷ್ಟ್ರಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾದರೂ ಜರ್ಮನಿಯ ಬೆಳವಣಿಗೆಗೆ ಅದು ಅಡ್ಡಿಯಾಗಲಿಲ್ಲ.

ಇದೇ ಮೇ 8ರಂದು ಸೈನಿಕ ಸ್ಮಾರಕದಲ್ಲಿ ಯೋಧರಿಗೆ ನಮನ ಸಲ್ಲಿಸಿ ಜರ್ಮನಿ ಅಧ್ಯಕ್ಷ ಫ್ರಾಂಕ್ ವಾಲ್ಟರ್ ಸ್ಟೈನ್ಮಿಯರ್ ‘75 ವರ್ಷಗಳ ಹಿಂದೆ ಜರ್ಮನಿ ಏಕಾಂಗಿಯಾಗಿತ್ತು. ಸಾಮರಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಸೋತಿತ್ತು. ನೈತಿಕ ಪತನ ಕಂಡಿತ್ತು. ಪ್ರಪಂಚದ ಎದುರು ಖಳನಾಯಕನಾಗಿ ನಿಂತಿತ್ತು. ಮೇ 8ನ್ನು ಹಲವು ವರ್ಷಗಳವರೆಗೆ ಸೋಲಿನ ದಿನವನ್ನಾಗಿ ಜರ್ಮನ್ನರು ನೆನೆಯುತ್ತಿದ್ದರು. ಆದರೆ ಇದು ಜರ್ಮನಿಯ ಪಾಲಿಗೆ ವಿಮೋಚನಾ ದಿನ’ ಎಂದರು. ನಿಜ, ಜನಾಂಗೀಯ ಕ್ರೌರ್ಯದ ಕರಾಳ ಇತಿಹಾಸವನ್ನು ಹಿಂದೆ ಬಿಟ್ಟು, ಭವಿಷ್ಯದೆಡೆಗೆ ದೃಷ್ಟಿನೆಟ್ಟು ಮುಂದೆ ನಡೆದ ಜರ್ಮನಿಗೆ 1945ರ ಮೇ 8, ಮರುಹುಟ್ಟು ನೀಡಿದ ದಿನ. ಜರ್ಮನಿಯ ಸಮರೋತ್ತರ ಕಥನವು ತಲ್ಲಣದ ಸಂದರ್ಭದಲ್ಲಿ ಪುಟಿದೇಳುವ ಸ್ಥೈರ್ಯ ನೀಡಬಲ್ಲದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT