ಮಂಗಳವಾರ, ಮಾರ್ಚ್ 21, 2023
20 °C
ಅಮೆರಿಕ– ರಷ್ಯಾ ನಡುವೆ ಸಂಬಂಧ ಸುಧಾರಿಸುವುದು ಭಾರತದ ದೃಷ್ಟಿಯಿಂದ ಒಳ್ಳೆಯದು

ಸೀಮೋಲ್ಲಂಘನ: ಬೈಡನ್, ಪುಟಿನ್: ಆಂತರ್ಯ ಬಲ್ಲವರಾರು?

ಸುಧೀಂದ್ರ ಬುಧ್ಯ Updated:

ಅಕ್ಷರ ಗಾತ್ರ : | |

ಅಮೆರಿಕ ಮತ್ತು ರಷ್ಯಾದ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರೆ, ಮುಖಾಮುಖಿ ಯಾದಾಗ ಮುಗುಳ್ನಕ್ಕರೆ ಅದು ಆ ಕ್ಷಣಕ್ಕೆ ಜಗತ್ತಿನ ಪ್ರಮುಖ ಸುದ್ದಿಯಾಗಿ ಬಿತ್ತರವಾಗುತ್ತದೆ. ಒಂದೊಮ್ಮೆ ಉಭಯ ನಾಯಕರ ನಡುವೆ ಶೃಂಗಸಭೆ ಏರ್ಪಟ್ಟು ಅರ್ಧತಾಸು ಮಾತುಕತೆ ನಡೆದರೆ, ಜಾಗತಿಕ ರಾಜಕೀಯ ಚಾವಡಿಯಲ್ಲಿ ಆ ಕುರಿತು ವಾರಗಟ್ಟಲೆ ಚರ್ಚೆ ನಡೆಯುತ್ತದೆ.

ಹಾಗೆ ನೋಡಿದರೆ, ಶೀತಲ ಸಮರದ ದಿನಗಳಲ್ಲಿ ರಷ್ಯಾ ಮತ್ತು ಅಮೆರಿಕದ ನಾಯಕರು ಚರ್ಚೆಗೆ ತೆರೆದು ಕೊಂಡಿದ್ದು ಕಡಿಮೆಯೇ. ಗೋರ್ಬಚೆವ್ ಅವರು ಸೋವಿಯತ್ ಅಗ್ರ ನಾಯಕನ ಸ್ಥಾನಕ್ಕೆ ಬಂದ ಮೇಲೆ ಅಮೆರಿಕದ ಅಧ್ಯಕ್ಷ ರೇಗನ್ ಮತ್ತು ಗೋರ್ಬಚೆವ್ ನಡುವೆ ಪತ್ರ ಸಂವಾದ ಆರಂಭವಾಯಿತು. ನಂತರ ಶೃಂಗಸಭೆ ಏರ್ಪಟ್ಟಿತು. ಈ ನಾಯಕರು ಜಿನಿವಾದಲ್ಲಿ ಮೊದಲ ಬಾರಿಗೆ ಭೇಟಿಯಾದಾಗ, ‘ಅಧಿಕಾರಿಗಳ ಮಟ್ಟದ ಮಾತುಕತೆ ನಡೆಯುತ್ತಿರಲಿ, ನಾವು ಶುದ್ಧ ಗಾಳಿ ಸೇವಿಸುತ್ತಾ ಒಂದು ಸುತ್ತು ತಿರುಗಾಡಿ ಬರೋಣ’ ಎಂದು ಗೋರ್ಬಚೆವ್ ಅವರನ್ನು ರೇಗನ್ ಕರೆದೊಯ್ದಿ ದ್ದರು. ‘ಅಣುಯುದ್ಧವಾದರೆ ಅದರಲ್ಲಿ ಗೆದ್ದ ದೇಶ ಎಂಬುದು ಇರುವುದಿಲ್ಲ. ಎರಡೂ ಕಡೆ ನಾಶವನ್ನಷ್ಟೇ ಕಾಣಬಹುದು’ ಎಂಬುದು ಉಭಯ ನಾಯಕರಿಗೂ ಮನವರಿಕೆಯಾಗಿತ್ತು.

ಅದುವರೆಗೆ ಅಮೆರಿಕ ಹಾಗೂ ಸೋವಿಯತ್ ‘MAD’ (Mutual assured destruction) ಧೋರಣೆ ಅನುಸರಿಸುತ್ತಿದ್ದವು. ಅಂದರೆ ಎರಡೂ ದೇಶಗಳು ಸಮಪ್ರಮಾಣದ ಅಣ್ವಸ್ತ್ರಗಳನ್ನು ಇಟ್ಟುಕೊಳ್ಳುವುದು ಮತ್ತು ಒಂದೊಮ್ಮೆ ದಾಳಿಯಾದರೆ ಪ್ರತಿ ದಾಳಿ ಮಾಡಲು ಸಜ್ಜಾಗುವುದು. ಇದು ಈ ಎರಡು ದೇಶಗಳ ನಡುವೆ ಶಸ್ತ್ರ ಜಮಾವಣೆಯ ಪೈಪೋಟಿಗೆ ಕಾರಣವಾಗಿತ್ತು. ಸೋವಿಯತ್ ಪತನದ ಬಳಿಕ ಅಮೆರಿಕ ಮತ್ತು ರಷ್ಯಾ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದವು. ಕ್ಲಿಂಟನ್, ಬುಷ್ ಮತ್ತು ಒಬಾಮ ಅವರು ರಷ್ಯಾಕ್ಕೆ ಹೋಗಿ ಬಂದರು. ರಷ್ಯಾದ ನಾಯಕರು ಅಮೆರಿಕಕ್ಕೆ ಭೇಟಿ ನೀಡಿದರು.

2010ರಲ್ಲಿ ಒಬಾಮ ಅಧಿಕಾರದ ಅವಧಿಯಲ್ಲಿ ಅಮೆರಿಕ ಮತ್ತು ರಷ್ಯಾ ‘ಸಮಗ್ರ ಶಸ್ತ್ರ ನಿಯಂತ್ರಣ ಒಪ್ಪಂದ’ಕ್ಕೆ ಸಹಿ ಹಾಕಿದವು. 2016ರ ಅಧ್ಯಕ್ಷೀಯ ಚುನಾವಣೆಯ ಹೊತ್ತಿಗೆ ಅಮೆರಿಕದ ಚುನಾವಣೆಯನ್ನು ರಷ್ಯಾ ಪ್ರಭಾವಿಸುತ್ತಿದೆ ಎಂಬ ಆರೋಪ ಕೇಳಿಬಂತು. ಆದರೂ ಸಂವಹನಕ್ಕೆ ತಡೆ ಬೀಳಲಿಲ್ಲ. 2018ರಲ್ಲಿ ಟ್ರಂಪ್ ಮತ್ತು ಪುಟಿನ್ ಹೆಲ್ಸಿಂಕಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. 2020ರ ಚುನಾವಣೆಯಲ್ಲಿ ಬೈಡನ್ ಗೆದ್ದಾಗ, ಅಮೆರಿಕ ಮತ್ತು ರಷ್ಯಾದ ಸಂಬಂಧ ಹೇಗಿರಲಿದೆ ಎಂಬ ಪ್ರಶ್ನೆ ಮತ್ತೊಮ್ಮೆ ಉದ್ಭವಿಸಿತು. ಕಾರಣ, ಪುಟಿನ್ ಕುರಿತು ಬೈಡನ್ ಸದಭಿಪ್ರಾಯ ಹೊಂದಿರಲಿಲ್ಲ ಎನ್ನುವುದು.

ಇದೇ ಮಾರ್ಚ್‌ನಲ್ಲಿ ಅಧ್ಯಕ್ಷ ಬೈಡನ್, ‘ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿನ ಹಸ್ತಕ್ಷೇಪ ಮತ್ತು ಕ್ರಿಮಿಯಾ ಭಾಗದಲ್ಲಿ ನಡೆದಿರುವ ಮಾನವಹಕ್ಕು ಉಲ್ಲಂಘನೆಗೆ ಪ್ರತಿಯಾಗಿ ರಷ್ಯಾ ಬೆಲೆ ತೆರಬೇಕು’ ಎಂದು ಕಿಡಿಕಾರಿದರು. ಶಿಕ್ಷೆಯ ರೂಪದಲ್ಲಿ ರಷ್ಯಾದ 10 ರಾಜತಾಂತ್ರಿಕ ಅಧಿಕಾರಿಗಳನ್ನು ಅಮೆರಿಕ ಗಡಿ ಪಾರು ಮಾಡಿತು. ಪ್ರತಿಯಾಗಿ ಅಮೆರಿಕದ 8 ಉನ್ನತ ಅಧಿಕಾರಿಗಳಿಗೆ ರಷ್ಯಾ ನಿರ್ಬಂಧ ವಿಧಿಸಿತು. ಎರಡೂ ದೇಶಗಳ ರಾಯಭಾರಿಗಳು ತಮ್ಮ ದೇಶಗಳಿಗೆ ಮರಳಿ ದರು. ಈ ಬೆಳವಣಿಗೆ ಅಮೆರಿಕ ಮತ್ತು ರಷ್ಯಾ ಸಂಬಂಧ ಕುರಿತಂತೆ ಮುಂದೇನು ಎಂಬ ಪ್ರಶ್ನೆಯನ್ನು ಒಡ್ಡಿತು.

ಆದರೆ ಈಗ ಆತಂಕದ ಕಾರ್ಮೋಡ ಕೊಂಚ ಸರಿದಂತಿದೆ. ಜಿ-7 ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗಿ ಯಾಗಿದ್ದ ಬೈಡನ್, ಜಿನಿವಾದಲ್ಲಿ ಪುಟಿನ್ ಕೈ ಕುಲುಕಿದ್ದಾರೆ. ಸಂದರ್ಭಕ್ಕೆ ಸೋತು, ಬಿಗುಮಾನ ತೊರೆದು ಇಬ್ಬರು ನಾಯಕರು ಮಾತುಕತೆಗೆ ಕುಳಿತಿದ್ದರ ಹಿಂದೆ ಹಲವು ಲೆಕ್ಕಾಚಾರಗಳಿವೆ. ಇರಾನ್ ವಿಷಯದಲ್ಲಿ ಅಮೆರಿಕವು ಇರಾನ್ ಮಾತುಕತೆಗೆ ತೆರೆದುಕೊಳ್ಳಲಿ, ಅಣು ಒಪ್ಪಂದಕ್ಕೆ ಬದ್ಧವಾಗಲಿ ಎಂದು ಕಾಯುತ್ತಿದೆ. ಇರಾನ್ ಪರ ರಷ್ಯಾ ನಿಲ್ಲದಂತೆ ತಡೆಯುವುದು ಅಮೆರಿಕದ ಅಗತ್ಯ. 2014ರಲ್ಲಿ ಕ್ರಿಮಿಯಾವನ್ನು ರಷ್ಯಾ ವಶಮಾಡಿಕೊಂಡಾಗ ಪಶ್ಚಿಮ ದೇಶಗಳು ರಷ್ಯಾ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿದ್ದವು. ಅದರಿಂದ ಹೊರಬರುವುದು ರಷ್ಯಾಕ್ಕೆ ಜರೂರು. ಉಕ್ರೇನ್ ಬಿಕ್ಕಟ್ಟು ಬಗೆಹರಿಯುವುದು ಎರಡು ದೇಶಗಳಿಗೂ ಬೇಕಿದೆ.

ಇನ್ನು, ಅಫ್ಗಾನಿಸ್ತಾನದ ವಿಷಯ. ಈಗಾಗಲೇ ಅಮೆರಿಕ ತಾನು ಅಫ್ಗಾನಿಸ್ತಾನ ತೊರೆಯುವ ನಿರ್ಧಾರ ವನ್ನು ಘೋಷಿಸಿದೆ. ಒಂದೊಮ್ಮೆ ತಾನು ಅಲ್ಲಿಂದ ಕಾಲ್ತೆಗೆದ ಮೇಲೆ ಚೀನಾ ಮತ್ತು ಪಾಕಿಸ್ತಾನವು ಅಫ್ಗಾನಿಸ್ತಾನದಲ್ಲಿ ಬೇರೂರಬಹುದೇ ಎಂಬ ಆತಂಕ ಅಮೆರಿಕಕ್ಕಿದೆ. ಹಾಗಾಗಿ ಅಫ್ಗಾನಿಸ್ತಾನ ಕುರಿತ ನೀತಿಯಲ್ಲಿ ರಷ್ಯಾದೊಂದಿಗೆ ಸಹಮತ ಸಾಧ್ಯವಾದರೆ ಅಮೆರಿಕಕ್ಕೆ ನಿರಾಳ. ಉಳಿದಂತೆ, ಇಂಡೊ- ಪೆಸಿಫಿಕ್ ಭಾಗದಲ್ಲಿ ಅಮೆರಿಕದ ‘ಕ್ವಾಡ್’ ಒಕ್ಕೂಟ ರಚನೆಯಿಂದ ಅಳುಕಿರುವ ರಷ್ಯಾ, ಚೀನಾದೊಂದಿಗೆ ಹೆಣೆದುಕೊಳ್ಳುತ್ತಾ, ತಾನು ಉತ್ಪಾದಿಸುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಚೀನಾಕ್ಕೆ ಸರಬರಾಜು ಮಾಡುತ್ತಿದೆ. ಇದನ್ನು ತಡೆಯುವುದು ಅಮೆರಿಕದ ಉದ್ದೇಶ.

ಮಾತುಕತೆಯ ವೇಳೆ ಸಿರಿಯಾ ವಿಷಯವನ್ನು ಬೈಡನ್ ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಟರ್ಕಿಯ ಭಾಗದಿಂದ ಸಿರಿಯಾದ ವಾಯವ್ಯ ಗಡಿ ಪ್ರವೇಶಿಸುವ ಪರಿಹಾರ ಸಾಮಗ್ರಿಗಳನ್ನು ಹೊತ್ತ ವಿಶ್ವಸಂಸ್ಥೆಯ ಟ್ರಕ್ಕುಗಳಿಗೆ ಯಾವುದೇ ತಡೆ ಒಡ್ಡಬಾರದು ಎಂಬುದು ಅಮೆರಿಕದ ಆಗ್ರಹ. ಉಳಿದಂತೆ ಸೈಬರ್ ದಾಳಿ ನಿಯಂತ್ರಿಸುವುದು, ಮಾನವ ಹಕ್ಕು ಉಲ್ಲಂಘನೆ ತಡೆಯುವುದು ಇತ್ಯಾದಿ ವಿಷಯಗಳು ಉಭಯ ದೇಶಗಳ ನಾಯಕರನ್ನು ಹತ್ತಿರ ತಂದಿವೆ.

ಮೊದಲೆಲ್ಲಾ ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳು ನ್ಯಾಟೊ ಸಭೆಯಲ್ಲಿ ಅಥವಾ ಜಿ-7 ಶೃಂಗದಲ್ಲಿ ಭಾಗಿಯಾದರೆ ಮಾತುಕತೆಯ ಕೇಂದ್ರ ವಿಷಯ ರಷ್ಯಾ ಆಗಿರುತ್ತಿತ್ತು. ಆದರೆ ಈಗ ಆ ಸ್ಥಾನಕ್ಕೆ ಚೀನಾ ಬಂದಿದೆ. ಹಾಂಗ್‌ಕಾಂಗ್ ಮತ್ತು ತೈವಾನ್ ವಿಷಯದಲ್ಲಿ ಚೀನಾ ತೋರುತ್ತಿರುವ ಧಾಡಸಿತನ, ಕೊರೊನಾ ಕುರಿತ ಅನುಮಾನಾಸ್ಪದ ನಡೆ, ಉತ್ಪಾದನಾ ಶಕ್ತಿಯನ್ನು ಬಳಸಿಕೊಂಡು ಅದು ವಿಸ್ತರಿಸಿಕೊಳ್ಳುತ್ತಿರುವ ಜಾಗತಿಕ ಪ್ರಭಾವ, ಚೀನಾವನ್ನು ಪಶ್ಚಿಮ ರಾಷ್ಟ್ರಗಳ ಪ್ರತಿಸ್ಪರ್ಧಿಯಾಗಿಸಿದೆ. ಹಾಗಾಗಿ ಚೀನಾದ ಓಟವನ್ನು ತಡೆಯುವುದು ಪ್ರಥಮ ಆದ್ಯತೆಯಾಗಿದೆ. ಹೆಚ್ಚು ಅಪಾಯವೆನಿಸದ ರಷ್ಯಾದೊಂದಿಗೆ ಅಮೆರಿಕಕ್ಕೆ ಸಂಘರ್ಷ ಬೇಡವಾಗಿದೆ.

ಬೈಡನ್ ಮತ್ತು ಪುಟಿನ್ ಅವರ ಜಿನಿವಾ ಭೇಟಿಯ ಬಳಿಕ ಉಭಯ ದೇಶಗಳ ರಾಯಭಾರಿಗಳು ತಮ್ಮ ರಾಯಭಾರ ಕಚೇರಿಗಳಿಗೆ ಹಿಂದಿರುಗಿದ್ದಾರೆ. ಅಷ್ಟರಮಟ್ಟಿಗೆ ಸಂಘರ್ಷದ ಕಾರ್ಮೋಡ ಸರಿದಿದೆ. ಮುಂದೆ ಶಸ್ತ್ರನಿಗ್ರಹ ಮತ್ತು ಸೈಬರ್ ಸೆಕ್ಯುರಿಟಿ ಕುರಿತಾಗಿ ಮಾತುಕತೆ ನಡೆಯಲಿದೆ ಎಂದು ಶ್ವೇತಭವನ ಹೇಳಿದೆ. ಭಾರತದ ಮಟ್ಟಿಗೆ ಹೇಳುವುದಾದರೆ, ಅಮೆರಿಕ ಮತ್ತು ರಷ್ಯಾ ನಡುವೆ ಸಂಬಂಧ ಸುಧಾರಿಸಿದರೆ ಒಳ್ಳೆಯದೇ. ಅಮೆರಿಕದ ದಿಗ್ಬಂಧನದ ಕಾರಣದಿಂದ ರಷ್ಯಾದ ರಕ್ಷಣಾ ಉಪಕರಣಗಳ ಖರೀದಿಗೆ ಕೆಲವು ನಿರ್ಬಂಧಗಳಿವೆ. ಅವು ತೆರವಾಗುತ್ತವೆ. ಮುಖ್ಯವಾಗಿ ನಮಗೆ ಮಗ್ಗುಲ ಮುಳ್ಳಾಗಿರುವ ಚೀನಾಕ್ಕೆ ಆಧುನಿಕ ಉಪಕರಣಗಳ ಸರಬರಾಜು ತಗ್ಗುತ್ತದೆ.

2001ರಲ್ಲಿ ಪುಟಿನ್ ಮತ್ತು ಅಮೆರಿಕದ ಅಂದಿನ ಅಧ್ಯಕ್ಷ ಬುಷ್, ಸ್ಲೊವೇನಿಯಾ ಶೃಂಗದಲ್ಲಿ ಭೇಟಿಯಾದಾಗ, ಜಂಟಿ ಪತ್ರಿಕಾಗೋಷ್ಠಿಯ ವೇಳೆ ‘ಪುಟಿನ್ ಅವರನ್ನು ನಂಬುತ್ತೀರಾ’ ಎಂಬ ಪ್ರಶ್ನೆಗೆ ಬುಷ್ ‘ಆ ಮನುಷ್ಯನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದೇನೆ. ಪುಟಿನ್ ಆಂತರ್ಯ ಅರ್ಥವಾಗಿದೆ’ ಎಂದಿದ್ದರು. 2011ರಲ್ಲಿ ಅಂದಿನ ಉಪಾಧ್ಯಕ್ಷ ಬೈಡನ್, ಆಗ ರಷ್ಯಾದ
ಪ್ರಧಾನಿಯಾಗಿದ್ದ ಪುಟಿನ್ ಅವರನ್ನು ಭೇಟಿಯಾದಾಗ ಬುಷ್ ಧಾಟಿಯಲ್ಲೇ ‘ಪ್ರಧಾನಿ ಪುಟಿನ್, ನಾನು ನಿಮ್ಮ ಕಣ್ಣುಗಳನ್ನು ದಿಟ್ಟಿಸಿದ್ದೇನೆ. ನಿಮ್ಮಲ್ಲಿ ಆತ್ಮಸಾಕ್ಷಿ ಎಂಬುದು ಇದೆ ಎನಿಸುವುದಿಲ್ಲ’ ಎಂದಿದ್ದರು. ಇದೇ ಮಾರ್ಚ್‌ನಲ್ಲಿ ಪುಟಿನ್ ಓರ್ವ ‘ಕೊಲೆಗಡುಕ’ ಎಂದು ಬೈಡನ್ ಕರೆದಿದ್ದರು. ಜಿನಿವಾದಲ್ಲಿ ಕೈ ಕುಲುಕಿದಾಗ ಇಬ್ಬರ ಮುಖದಲ್ಲೂ ಮುಗುಳ್ನಗೆ ಇತ್ತು. ಯಾರ ಆಂತರ್ಯವನ್ನು ಯಾರು ಅರಿತಿದ್ದರೋ ಬಲ್ಲವರಾರು?

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು