ಶನಿವಾರ, ಸೆಪ್ಟೆಂಬರ್ 18, 2021
27 °C
ಅವಕಾಶಗಳ ಬಾಗಿಲು ಮುಚ್ಚಿದಾಗ ಅಧಿಕಾರಿಗಳ ‘ಅನುಭವ ಕಥನ’ಗಳು ಅನಾವರಣಗೊಳ್ಳುತ್ತವೆ

ಬೋಲ್ಟನ್ ಬಿಚ್ಚಿಟ್ಟ ಗುಟ್ಟುಗಳೇನು?

ಸುಧೀಂದ್ರ ಬುಧ್ಯ Updated:

ಅಕ್ಷರ ಗಾತ್ರ : | |

ಚುನಾವಣಾ ಸಮಯವೇ ಹಾಗೆ. ಅದುವರೆಗೂ ಅವಿತು ಕುಳಿತ ಅನೇಕ ಸಂಗತಿಗಳು ಹೊರಗೆ ಬರುತ್ತವೆ. ಅಭ್ಯರ್ಥಿಯ ವೈಯಕ್ತಿಕ ವಿವರ, ಕಾರ್ಯವೈಖರಿ, ಆಡಳಿತಕ್ಕೆ ಸಂಬಂಧಪಟ್ಟ ರಹಸ್ಯಗಳು ದಿಢೀರ್ ಅನಾವರಣಗೊಳ್ಳುತ್ತವೆ. ಅಮೆರಿಕದ ಮಟ್ಟಿಗೆ ಹೇಳುವುದಾದರೆ, ಅಧ್ಯಕ್ಷೀಯ ಚುನಾವಣೆಯ ವೇಳೆ ಅಧ್ಯಕ್ಷರ ಕುರಿತು, ಸಂಭಾವ್ಯ ಅಭ್ಯರ್ಥಿಗಳ ಕುರಿತು ಹತ್ತಾರು ಪುಸ್ತಕಗಳು ಪ್ರಕಟವಾಗುತ್ತವೆ. ಕೆಲವು ಪುಸ್ತಕಗಳು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗುತ್ತವೆ. ಇದೀಗ ಬಿಡುಗಡೆಯಾಗಿರುವ ಜಾನ್ ಬೋಲ್ಟನ್ ಅವರ ‘ದಿ ರೂಮ್ ವೇರ್ ಇಟ್ ಹ್ಯಾಪನ್ಡ್’ ಅಂತಹುದೇ ಒಂದು ಪುಸ್ತಕ.

ಜಾನ್ ಬೋಲ್ಟನ್ ಅವರು ಡೊನಾಲ್ಡ್‌ ಟ್ರಂಪ್ ಅವರ ಅವಧಿಯಲ್ಲಿ 18 ತಿಂಗಳ ಕಾಲ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಕಾರ್ಯನಿರ್ವಹಿಸಿ ಹುದ್ದೆಯಿಂದ ವಜಾಗೊಂಡವರು. ಈ ಹಿಂದೆ ಮೂವರು ಅಧ್ಯಕ್ಷರಿಗೆ ನಿಕಟವರ್ತಿಯಾಗಿ ಕೆಲಸ ಮಾಡಿದವರು. ಪಕ್ಕಾ ಸಂಪ್ರದಾಯವಾದಿ ಮತ್ತು ರಾಜಕೀಯವಾಗಿ ರಿಪಬ್ಲಿಕನ್ ಪಕ್ಷಕ್ಕೆ ಅಂಟಿಕೊಂಡವರು. ಈ ಹಿನ್ನೆಲೆಯಿರುವ ಬೋಲ್ಟನ್ ಇದೀಗ ಟ್ರಂಪ್ ಜೊತೆ ಕಾರ್ಯನಿರ್ವಹಿಸಿದ ತಮ್ಮ ಅನುಭವ ಕಥನವನ್ನು ಹೊರತಂದಿದ್ದಾರೆ. ಈ ಪುಸ್ತಕದ ಬಿಡುಗಡೆಯನ್ನು ತಡೆಯಲು ಟ್ರಂಪ್ ಆಡಳಿತವು ನ್ಯಾಯಾಲಯದ ಮೊರೆ ಹೋದದ್ದರಿಂದ ಮತ್ತು ಇದು ಚುನಾವಣಾ ವರ್ಷವೂ ಆದ್ದರಿಂದ ಪುಸ್ತಕದ ಕುರಿತು ಹೆಚ್ಚಿನದೇ ಚರ್ಚೆ ನಡೆಯುತ್ತಿದೆ. ಪುಸ್ತಕವು ದಾಖಲೆ ಮಾರಾಟ ಕಂಡಿದೆ.

ಒಂದೇ ಸಾಲಿನಲ್ಲಿ ಹೇಳಬೇಕೆಂದರೆ, ‘ಟ್ರಂಪ್, ಅಧಿಕಾರವನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವ ಒಬ್ಬ ಅಪಕ್ವ ರಾಜಕಾರಣಿ’ ಎಂಬುದು ಪುಸ್ತಕದ ತಿರುಳು. ಬೋಲ್ಟನ್ ತಾವು ಹತ್ತಿರದಿಂದ ಕಂಡ ಟ್ರಂಪ್ ವ್ಯಕ್ತಿತ್ವವನ್ನು, ಅವರ ತಿಳಿವಳಿಕೆಯ ಮಟ್ಟವನ್ನು, ಇಟ್ಟ ತಪ್ಪು ಹೆಜ್ಜೆಗಳನ್ನು ಈ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ. ‘ಟ್ರಂಪ್ ಅಧ್ಯಕ್ಷರಾದಾಗ ಅವರಿಗೆ ಇಂಗ್ಲೆಂಡ್ ಅಣ್ವಸ್ತ್ರ ಹೊಂದಿರುವ ರಾಷ್ಟ್ರ ಎಂಬುದು ತಿಳಿದಿರಲಿಲ್ಲ. ಫಿನ್‌ಲ್ಯಾಂಡ್ ಅನ್ನು ರಷ್ಯಾದ ಭಾಗ ಎಂದು ತಿಳಿದಿದ್ದರು. ಶಿಷ್ಟಾಚಾರ, ಕಾನೂನುಬದ್ಧ ಎಂಬ ಪದಗಳು ಟ್ರಂಪ್ ಬಳಿ ಸುಳಿಯುವುದಿಲ್ಲ. ಕೇವಲ ವೈಯಕ್ತಿಕ ಲಾಭ ಮತ್ತು ರಾಜಕೀಯ ಏಳಿಗೆಯ ದೃಷ್ಟಿಯಿಂದಲೇ ಟ್ರಂಪ್ ಎಲ್ಲವನ್ನೂ ನೋಡುತ್ತಾರೆ’.

‘ಅಮೆರಿಕದ ಯಾವುದೇ ಅಧ್ಯಕ್ಷರಾದರೂ ಚೀನಾ ಕುರಿತ ಅಮೆರಿಕದ ಧೋರಣೆಯನ್ನು ಮಹತ್ವದ್ದು ಎಂದು ಪರಿಗಣಿಸುತ್ತಾರೆ. ಆದರೆ ಟ್ರಂಪ್ ಅಮೆರಿಕದ ಹಿತಾಸಕ್ತಿಯನ್ನು ಪಕ್ಕಕ್ಕಿಟ್ಟು ಕೇವಲ ಚುನಾವಣಾ ದೃಷ್ಟಿಯಿಂದ ಚೀನಾದೊಂದಿಗೆ ವ್ಯವಹರಿಸಿದರು. ಅಮೆರಿಕದಿಂದ ಕೃಷಿ ಸಂಬಂಧಿ ಉತ್ಪನ್ನಗಳನ್ನು ಚೀನಾ ಕೊಳ್ಳುವಂತಾದರೆ ರಿಪಬ್ಲಿಕನ್ ಪಕ್ಷವನ್ನು ಬೆಂಬಲಿಸುವ 12 ರಾಜ್ಯಗಳಿಗೆ ಅನುಕೂಲವಾಗುತ್ತದೆ ಮತ್ತು ಅವು 2020ರ ಚುನಾವಣೆಯಲ್ಲಿ ತನ್ನ ಪರ ನಿಲ್ಲುತ್ತವೆ ಎಂಬ ಲೆಕ್ಕಾಚಾರ ಟ್ರಂಪ್ ತಲೆಯಲ್ಲಿತ್ತು. 2019ರ ಜಿ20 ರಾಷ್ಟ್ರಗಳ ಶೃಂಗಸಭೆಯ ವೇಳೆ ಷಿ ಜಿನ್‌ಪಿಂಗ್ ಎದುರು 2020ರ ಚುನಾವಣೆಯ ವಿಷಯ ಪ್ರಸ್ತಾಪಿಸಿ, ಚೀನಾದ ಆರ್ಥಿಕ ಸಾಮರ್ಥ್ಯವನ್ನು ಹೊಗಳಿ, ತಮ್ಮ ಗೆಲುವಿಗೆ ಹಾರೈಸುವಂತೆ ಟ್ರಂಪ್ ಕೇಳಿದ್ದರು’.

‘ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಅವರನ್ನು ಖುಷಿಪಡಿಸಲು, ಅಮೆರಿಕ- ದಕ್ಷಿಣ ಕೊರಿಯಾದ ಜಂಟಿ ಸಮರಾಭ್ಯಾಸವನ್ನು ರದ್ದು
ಗೊಳಿಸುವುದಾಗಿ ಟ್ರಂಪ್ ಘೋಷಿಸಿದರು. ಅಷ್ಟಲ್ಲದೆ ಕಿಮ್ ಎದುರು ‘ಇದರಿಂದ ಅಮೆರಿಕಕ್ಕೆ ಹಣ ಉಳಿತಾಯ ಆಗಲಿದೆ’ ಎಂದು ನಾಚಿಕೆಬಿಟ್ಟು ಹೇಳಿದ್ದರು. 2020ರ ತಮ್ಮ ಪ್ರತಿಸ್ಪರ್ಧಿ ಜೋ ಬಿಡೆನ್ ಅವರ ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿ ನೀಡಿದರಷ್ಟೇ ಆರ್ಥಿಕ ನೆರವು ನೀಡುವುದಾಗಿ ಉಕ್ರೇನ್ ಸರ್ಕಾರದ ಮೇಲೆ ಒತ್ತಡ ತಂದರು’.

ಹೀಗೆ ಟ್ರಂಪ್ ಆಡಳಿತದ ಎಡವಟ್ಟುಗಳನ್ನು ಬೋಲ್ಟನ್ ಪಟ್ಟಿ ಮಾಡಿದ್ದಾರೆ.

ಪುಸ್ತಕದಲ್ಲಿ ಭಾರತಕ್ಕೆ ಸಂಬಂಧಿಸಿದ ಕೆಲವು ಸಂಗತಿಗಳು ಪ್ರಸ್ತಾಪವಾಗಿವೆ. ‘ಇರಾನ್ ಜೊತೆಗಿನ ಪರಮಾಣು ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಾಗ, ಇರಾನ್ ಮೇಲೆ ಅಮೆರಿಕ ನಿರ್ಬಂಧ ಹೇರಿತ್ತು. ಆರು ತಿಂಗಳ ಅವಧಿಗೆ ಭಾರತವೂ ಸೇರಿದಂತೆ ಎಂಟು ರಾಷ್ಟ್ರಗಳಿಗೆ ಒಂದಷ್ಟು ಸಡಿಲಿಕೆ ನೀಡಿತ್ತು. ತೈವಾನ್, ಗ್ರೀಸ್ ಮತ್ತು ಇಟಲಿಯು ಇರಾನಿನ ತೈಲ ಖರೀದಿಯನ್ನು ತ್ವರಿತವಾಗಿ ನಿಲ್ಲಿಸಿದವು. ಆದರೆ ಭಾರತ ತೈಲ ಖರೀದಿ ಮುಂದುವರಿಸಿತು. ದಿಗ್ಬಂಧನದ ನಡುವೆಯೂ ಭಾರತವು ಇರಾನಿನಿಂದ ತೈಲ ಆಮದು ಮಾಡಿಕೊಂಡ ಬಗ್ಗೆ ಟ್ರಂಪ್ ಅವರಿಗೆ ಅಸಮಾಧಾನವಿತ್ತು. ಜೊತೆಗೆ ಬಾಲಾಕೋಟ್ ಪ್ರಕರಣ ದೊಡ್ಡ ಬಿಕ್ಕಟ್ಟಾಗಿರಲಿಲ್ಲ. ಭಾರತ ಮತ್ತು ಪಾಕಿಸ್ತಾನ ಅಣ್ವಸ್ತ್ರ ರಾಷ್ಟ್ರಗಳಾಗಿರುವುದರಿಂದ ಆ ಸಂದರ್ಭವನ್ನು ಅಮೆರಿಕ ಉಪೇಕ್ಷಿಸಲಿಲ್ಲ. ಅಮೆರಿಕದ ರಾಜತಾಂತ್ರಿಕ ಅಧಿಕಾರಿ ನಿಕ್ಕಿ ಹ್ಯಾಲೆ ಭಾರತಕ್ಕೆ ಭೇಟಿ ನೀಡಿ ದಲೈಲಾಮಾ ಅವರನ್ನು ಭೇಟಿಯಾಗಬೇಕೆಂದು ಬಯಸಿದ್ದರು. ಆದರೆ ಚೀನಾ ಅದನ್ನು ಹೇಗೆ ಗ್ರಹಿಸೀತು ಎಂಬ ಆತಂಕ ಟ್ರಂಪ್ ಅವರಲ್ಲಿತ್ತು. ಹಾಗಾಗಿ ಅನುಮತಿಸಲಿಲ್ಲ’ ಎಂಬ ಕೆಲವು ಚದುರಿದ ಉಲ್ಲೇಖಗಳು ಭಾರತದ ಕುರಿತಾಗಿ ಪುಸ್ತಕದಲ್ಲಿವೆ.

ಇಂತಹ ಪುಸ್ತಕಗಳು ಬಂದಾಗ ಆಡಳಿತದಲ್ಲಿರುವವರು ಪುಸ್ತಕದಲ್ಲಿರುವ ಉಲ್ಲೇಖಗಳನ್ನು ನಿರಾಕರಿಸುತ್ತಾರೆ. ಬರೆದವರು ‘ಅನುಭವಕ್ಕೆ ಬಂದ ಸಂಗತಿಗಳನ್ನು ಹೇಳದಿದ್ದರೆ ತಪ್ಪಾಗುತ್ತದೆ’ ಎಂದು ಕೃತಿಯನ್ನು ಸಮರ್ಥಿಸಿಕೊಳ್ಳುತ್ತಾರೆ. ಈ ಕೃತಿಯ ಕುರಿತು ಅಂತಹ ನಿರೀಕ್ಷಿತ ಪ್ರತಿಕ್ರಿಯೆಯೇ ಬಂದಿದೆ. ಪುಸ್ತಕವು ಟ್ರಂಪ್ ಪ್ರಮಾದಗಳನ್ನು ತೆರೆದಿಟ್ಟಿದೆಯಾದರೂ ಚುನಾವಣೆಯ ದೃಷ್ಟಿಯಿಂದ ದೊಡ್ಡ ಸಂಚಲನ ಉಂಟುಮಾಡಲಾರದು.

ಹಾಗೆ ನೋಡಿದರೆ, ಆಡಳಿತಕ್ಕೆ ಹತ್ತಿರವಿದ್ದವರು ಇಂತಹ ಪುಸ್ತಕ ಬರೆಯುವುದು ಅಪರೂಪವೇನೂ ಅಲ್ಲ. ಭಾರತದಲ್ಲೂ ಇಂತಹ ಹಲವು ಪುಸ್ತಕಗಳು ಬಂದಿವೆ. ಮನಮೋಹನ್ ಸಿಂಗ್ ಅವರ ಆಡಳಿತ ಅವಧಿಯಲ್ಲಿ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬಾರು ಬರೆದ ಪುಸ್ತಕ ಹೆಚ್ಚಿನ ಚರ್ಚೆ ಹುಟ್ಟುಹಾಕಿತ್ತು. ಆ ಕೃತಿಯಲ್ಲಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಪರ್ಯಾಯವಾಗಿ ಇದ್ದ ಮತ್ತೊಂದು ಶಕ್ತಿಕೇಂದ್ರದ ಕುರಿತು ಬರೆಯಲಾಗಿತ್ತು. ಒತ್ತಡಕ್ಕೆ ಮಣಿದು ಪ್ರಧಾನಿ ಕೈಕಟ್ಟಿ ಕೂರಬೇಕಾಗಿ ಬಂದ ಸಂದರ್ಭಗಳ ಬಗ್ಗೆ, ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿಯಾಗಿದ್ದ ಪಿ.ಸಿ.ಪಾರಕ್ ಪುಸ್ತಕ ಪ್ರಕಟಿಸಿದ್ದರು. 2014ರ ಚುನಾವಣೆಯ ಪೂರ್ವದಲ್ಲಿ ಈ ಎರಡೂ ಪುಸ್ತಕಗಳು ಬಿಡುಗಡೆಯಾಗಿದ್ದವು.

ಸಾಮಾನ್ಯವಾಗಿ ಅಧಿಕಾರದಲ್ಲಿದ್ದಷ್ಟು ದಿನ ಎಲ್ಲ ಗುಟ್ಟುಗಳನ್ನೂ ಅಧಿಕಾರಿಗಳು ಉದರದಲ್ಲಿ ಪೋಷಿಸು ತ್ತಾರೆ. ಅವಕಾಶಗಳ ಬಾಗಿಲು ಮುಚ್ಚಿತು ಎಂದಾಗಲಷ್ಟೇ ಅವು ಹೊರಗೆ ಬರುತ್ತವೆ. ಆದರೆ ಕೆಲವರಷ್ಟೇ ಇದಕ್ಕೆ ಅಪವಾದ. ಅಂತಹ ಒಂದು ಹೆಸರು ದಿವಂಗತ ಎಚ್.ವೈ.ಶಾರದಾ ಪ್ರಸಾದ್. ಅವರು ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ ಮತ್ತು ರಾಜೀವ್‌ ಗಾಂಧಿಯವರಿಗೆ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದವರು. ಈ ಎಲ್ಲರ ಬಹುತೇಕ ಭಾಷಣಗಳಿಗೆ ಹೂರಣ ತುಂಬಿದ್ದವರು. ಇಂದಿರಾ ಅವರೊಂದಿಗೆ ಕೆಲ ಗಂಟೆಗಳ ಕಾಲ ಮಾತನಾಡಿದವರು, ಕಾರಿನಲ್ಲಿ ನಾಲ್ಕಾರು ಮೈಲಿ ಜೊತೆಗೆ ಕ್ರಮಿಸಿದವರೆಲ್ಲಾ ಅವರ ಬಗ್ಗೆ ಕೃತಿಗಳನ್ನು ಬರೆದರು. ಆದರೆ ಪ್ರಧಾನಿ ಕಾರ್ಯಾಲಯದಲ್ಲೇ 16 ವರ್ಷ ಕಳೆದರೂ ಶಾರದಾ ಪ್ರಸಾದ್, ‘ಅನುಭವ ಕಥನ’ ಎಂದು ಆಡಳಿತಕ್ಕೆ ಸಂಬಂಧಿಸಿದ ಯಾವುದೋ ರಹಸ್ಯದ ಕುರಿತಾಗಲೀ ಒಡನಾಡಿದ ವ್ಯಕ್ತಿಗಳ ಖಾಸಗಿ ಬದುಕು, ಕಾರ್ಯವೈಖರಿಯ ಕುರಿತಾಗಲೀ ಬರೆಯಲಿಲ್ಲ.

ತುರ್ತುಪರಿಸ್ಥಿತಿಗೆ ಇತ್ತೀಚೆಗಷ್ಟೇ 45 ತುಂಬಿತು. ತುರ್ತುಪರಿಸ್ಥಿತಿ ಘೋಷಣೆಯಾದ ರಾತ್ರಿ ಊಟ ಮುಗಿಸಿ ಶಾರದಾ ಪ್ರಸಾದ್ ಹೊರಟಾಗ ಪತ್ನಿ ಕಮಲಮ್ಮನವರಿಗೆ ‘ಕೆಲಸವಿದೆ ಹೋಗಿಬರುತ್ತೇನೆ’ ಎಂದಿದ್ದರಂತೆ. ಕೆಲ ಗಂಟೆಗಳಲ್ಲಿ ‘ಎಮರ್ಜೆನ್ಸಿ ಘೋಷಣೆಯಾಗಿದೆ’ ಎಂದು ರೇಡಿಯೊ ಉಲಿದಾಗಲಷ್ಟೇ ಕಮಲಮ್ಮನವರಿಗೆ ಆ ತುರ್ತು ಕೆಲಸ ಏನೆಂದು ತಿಳಿದದ್ದು! ಮಹತ್ವದ ಸಂಗತಿಗಳಿಗೆ ಕಣ್ಣು, ಕಿವಿಯಾಗಿ ಮೌನಕ್ಕೆ ಶರಣಾಗುವವರು ಅಪರೂಪ. ಶಾರದಾ ಪ್ರಸಾದರ ಮೌನದಲ್ಲಿ ಅದೆಷ್ಟು ರಹಸ್ಯಗಳು ಹುದುಗಿದ್ದವೋ ಏನೋ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು