ಶನಿವಾರ, ಜನವರಿ 25, 2020
22 °C
ಸೇನಾನಿಯ ಸ್ವಗತ

ಬಾಂಗ್ಲಾ ವಿಮೋಚನೆ ಹೋರಾಟ: ಪಾಕ್ ಸೈನಿಕರಿಗೆ ಊಟ ಕೊಡಿಸಿದ ಭಾರತೀಯ ಸೇನೆ

ಬ್ರಿಗೇಡಿಯರ್‌ ಐ. ಎನ್‌. ರೈ Updated:

ಅಕ್ಷರ ಗಾತ್ರ : | |

ಹೌದು, ಯುದ್ಧ ಮುಗಿದ ಮೇಲೂ ನಡೆಯುವ ಅನಾಹುತಗಳ ಒಂದೆರಡು ಉದಾಹರಣೆಗಳನ್ನು ದಾಖಲಿಸಲೇ ಬೇಕು. ನಾವೆಲ್ಲರೂ ಕ್ಯಾಂಪ್ ನಲ್ಲಿದ್ದ ಸಂದರ್ಭದಲ್ಲಿ ಅನತಿ ದೂರದಲ್ಲಿ ಒಂದು ಹ್ಯಾಂಡ್ ಪಂಪ್ ಅಳಡಿಸಿದ ಬೋರ್‍ವೆಲ್ ಇತ್ತು. ಅದೊಂದೇ ನಮಗೆ ನೀರಿನ ಆಸರೆ ಆಗಿತ್ತು. ಹೀಗೇ ಒಂದು ದಿನ ಆರು ಯೋಧರು ಅಲ್ಲಿಗೆ ಸ್ನಾನಕ್ಕೆಂದು ತೆರಳಿದ್ದರು. ಆಗ ಪಾಕ್ ಸೈನ್ಯ ಎಲ್ಲಿಂದಲೋ ಒಂದು ಗ್ರೆನೇಡ್‍ನ್ನು ಎಸೆದದ್ದು ನೇರವಾಗಿ ಈ ಹ್ಯಾಂಡ್ ಪಂಪ್‍ನ ಮೇಲೇ ಬಿದ್ದು ಸ್ಪೋಟಿಸಿತು!. ದುರಂತ ನೋಡಿ, ಇಡೀ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ್ದ ಸೈನಿಕರು, ವಿರಾಮದ ವೇಳೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಇದನ್ನು ನಿರೀಕ್ಷಿಸಿರಲಿಲ್ಲ.  ಈ ಸ್ಫೋಟದಿಂದ ಸ್ಥಳದಲ್ಲಿಯೇ ನಾಲ್ವರು ಸೈನಿಕರು ಹುತಾತ್ಮರಾದರು.

ಒಬ್ಬ ಯೋಧ ರಜೆಯ ಮೇಲೆ ಊರಿಗೆ ತೆರಳಿದ್ದ. ಆತ ಮರಳಿ ಕ್ಯಾಂಪ್‍ಗೆಂದು ಬಂದ. ಒಂದೊಂದೇ ಪೋಸ್ಟ್ ನಿಂದ ದಾರಿ ಕೇಳುತ್ತಾ ಕೇಳುತ್ತಾ ಆ ದುರ್ಗಮ ಹಾದಿಯಲ್ಲಿ ಬರುತ್ತಿದ್ದ. ಎಲ್ಲೋ ದಾರಿ ತಪ್ಪಿದ ಆತ ಹೋಗುತ್ತಾ ಹೋಗುತ್ತಾ ಸೇರಿದ್ದು ಶತ್ರು ಸೈನ್ಯದ ಕ್ಯಾಂಪ್‍ನ್ನು. ಆತನನ್ನು ಅಲ್ಲಿ ವಶ ಪಡಿಸಿಕೊಂಡರು. ಆತ ಊರಿನಿಂದ ಬರುವಾಗ ತಿನ್ನಲು ಕಡಲೆ, ರೋಟಿಯಂತಹ ಅನೇಕ ತಿನಿಸುಗಳನ್ನೂ ತಂದಿದ್ದ!. ಆತನನ್ನು ವಶ ಪಡಿಸಿಕೊಂಡ ಪಾಕ್ ಸೈನ್ಯ ನಮಗೆ ಸಂದೇಶ ಕಳಿಸಿತ್ತು-‘ನಿಮ್ಮ ಒಬ್ಬ ಯೋಧ ನಮ್ಮಲ್ಲಿಗೆ ಸುರಕ್ಷಿತವಾಗಿ  ಬಂದಿದ್ದಾನೆ. ಆತ ತಂದಿದ ತಿನಿಸುಗಳೂ ನಮ್ಮನ್ನು ಸುರಕ್ಷಿತವಾಗಿ ತಲುಪಿವೆ. ಅವ ನಮ್ಮಲ್ಲಿದ್ದಾನೆ, ತಿನಿಸು ನಮ್ಮೊಳಗಿವೆ’ .ಎಂದು ಸಂದೇಶ ಕಳಿಸಿದ್ದರು-ಹೀಗೆ ಯುದ್ಧ ಕಾಲದ ಸಂಕಟಗಳಲ್ಲೂ ಆಗಾಗ ಇಂತಹ ವಿನೋದಗಳು ಆಗುತ್ತಲೇ ಇರುತ್ತವೆ. ಆತ ಮತ್ತೆ ಮೂರು ವರ್ಷದ ನಂತರ ಅಲ್ಲಿಂದ ಬಿಡುಗಡೆಯಾಗಿ ಭಾರತಕ್ಕೆ ಮರಳಿದ ಎಂಬುದೇ ಸಮಾಧಾನ.

ವಶ ಪಡಿಸಿಕೊಂಡಿದ್ದ ಪಾಕ್ ಯೋಧರನ್ನು ನಾವಿರುವ ಹಳ್ಳಿಗೆ ಕರೆದುಕೊಂಡು ಬಂದು, ಅಲ್ಲಿನ ನಾಗರಿಕರಿಗೆ ಕೇಳಿ ಊಟ ಕೊಡಿಸಿದೆವು. ಆಗ ಶತ್ರು ಸೈನಿಕರಿಗೆ ಊಟ ಕೊಡುವ ವಿಧಾನ ನೋಡಿದ ನಾಗರಿಕರು ಅದನ್ನೇ ಪ್ರಶ್ನಿಸಿದಾಗ, ನಾವೂ ಅವರಿಗೆ ಹೇಳುತ್ತಿದ್ದೆವು-ಆತ ಅವನ ದೇಶಕ್ಕಾಗಿ ಹೋರಾಡಿದ ನಮ್ಮ ಹಾಗೇ ಇರುವ ಸೈನಿಕ ಎಂದು ಹೇಳಿ, ವಶಕ್ಕೆ ತೆಗೆದುಕೊಂಡಿದ್ದವರ ಹಸಿವನ್ನೂ ತಣಿಸಿದ್ದೆವು.

ಹೀಗೆ ಕೊನೆಗೂ ಢಾಕಾದಲ್ಲಿ ಶತ್ರು ಸೈನಿಕರ ಶರಣಾಗತಿಯೊಂದಿಗೆ ಬಾಂಗ್ಲಾ ವಿಮೋಚನೆ ಆಯ್ತು. ಎಲ್ಲೆಡೆಯೂ ಸಂಭ್ರಮ. ಶರಣಾಗತನಾಗುವ ಸೈನಿಕನಿಗೆ ಇದೊಂದು ಭೀಕರ ಅನುಭವ. ತಮ್ಮ ಗನ್‍ನ್ನು ಮುಂದೆ ನೆಲದ ಮೇಲಿಟ್ಟು, ಒಂದು ಹೆಜ್ಜೆ ಹಿಂದೆ ಸರಿದು ಶರಣಾಗತನಾಗುವ ವಿಧಾನವನ್ನು ಯಾವ ಸೈನಿಕನೂ ಬಯಸುವುದಿಲ್ಲ!. ಇದು ಸೈನಿಕನ ಜೀವನದ ಅತ್ಯಂತ ನೋವಿನ, ಹತಾಶೆಯ ಹಾಗೂ ಅವಮಾನದ ಕ್ಷಣ.

ಹೀಗೆ ಕದನ ವಿರಾಮವಾಗುತ್ತಲೇ ನಾವು ನಮ್ಮ ನಮ್ಮ ಕ್ಯಾಂಪ್‍ಗೆ ಸೇರುವ ಸಮಯ. ಎಲ್ಲರೂ ಹೊರಟೆವು. ಭಾರತ ಯುದ್ಧ ಗೆದ್ದು ಬಾಂಗ್ಲಾ ಉದಯವಾಗಿತ್ತು. ಎಲ್ಲೆಂದರಲ್ಲಿ ಸಂಭ್ರಮ ಮನೆ ಮಾಡಿತ್ತು. ನಾವೂ ಕ್ಯಾಂಪ್‍ಗೆ ಮರಳುವಾಗ ನಮಗೆ ವೀರೋಚಿತ ಸ್ವಾಗತ. ಮಹಿಳೆಯರೆಲ್ಲಾ ಆರತಿ ಬೆಳಗಿ ಸ್ವಾಗತಿಸಿದರು. ಎಲ್ಲರ ಪ್ರೀತಿ ಭರಪೂರ ಹರಿಯುತ್ತಿತ್ತು. ಆ ಸಂದರ್ಭದಲ್ಲಿ ಅಲ್ಲ ಸುನಿಲ್ ದತ್ ಮತ್ತು ನರ್ಗಿಸ್ ದತ್ ಸಹಾ ಬಂದು, ನಮ್ಮನ್ನು ಸ್ವಾಗತಿಸುವ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಇದೆಲ್ಲವೂ ಸ್ಮರಣೀಯ ಘಳಿಗೆಯಾಗಿ ದಾಖಲಾಯ್ತು.

ಕ್ಯಾಂಪ್‍ಗೆ ಹಿಂತಿರುಗುವ ವೇಳೆ ನಮ್ಮಲ್ಲಿ ಮತ್ತೂ ಒಂದು ಸವಾಲಿತ್ತು. ನಮ್ಮದೇ ಸೈನಿಕರು ಹಾಕಿದ ಮೈನ್‍ಗಳನ್ನು ತೆಗೆಯ ಬೇಕಿತ್ತು. ಈಗಾಗಲೇ ಹೇಳಿದ ಹಾಗೆ ಮೈನ್‍ಗಳನ್ನು ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೇಜರ್ ತಿರಾತ್ ಸಿಂಗ್, ಒಂದೇ ತಟ್ಟೆಯಲ್ಲಿ ನನ್ನೊಂದಿಗೆ ಊಟ ಮಾಡಿದ್ದ ಮೇಜರ್ ಕರಂ ಸಿಂಘ್ ಹುತಾತ್ಮರಾಗಿದ್ದರು. ಅವರು ಮೈನ್‍ಗಳನ್ನು ಹಾಕಿದ ಸ್ಥಳ ಗೊತ್ತಿರಲಿಲ್ಲ. ಆ ಸಂದರ್ಭದಲ್ಲಿ ಸೈನ್ಯವನ್ನು ಸೇರಿಕೊಂಡಿದ್ದ ಮತ್ತೋರ್ವ ಯೋಧ ಮೇಜರ್ ಮಲ್ಕಿಯಾತ್ ಸಿಂಘ್ ಗಿಲ್ ಮೈನ್ ಗಳನ್ನು ದಾಖಲೆ ನೋಡಿ ತೆಗೆಸಬೇಕಾಗಿತ್ತು. ಇಲ್ಲಿ ಇನ್ನೂ ಒಂದು ಸವಾಲಿತ್ತು. ಹೀಗೆ ಭೂಮಿ ಅಡಿ ಹುದುಗಿದ್ದ ಮೈನ್‍ಗಳನ್ನು ಕೆಲ ಸಂದರ್ಭ ಇಲಿಗಳು ಹೊತ್ತೊಯ್ದು ಬೇರೆಡೆ ಇಟ್ಟು ಬಿಡುತ್ತಿದ್ದುವು!. ಇಲ್ಲೂ ಹಾಗೇ ಆಯ್ತು. ದಾಖಲೆಗಳ ಪ್ರಕಾರ ಮೈನ್‍ಗಳನ್ನು ತೆಗೆಸುತ್ತಿದ್ದ ವೇಳೆ, ಅನಿರೀಕ್ಷಿತವಾಗಿ ಒಂದು ಮೈನ್ ಸ್ಪೋಟಗೊಂಡಿತು. ಪರಿಣಾಮವಾಗಿ ಆ ಕೆಲಸದಲ್ಲಿದ್ದ ಮೇಜರ್ ಮಲ್ಕಿಯಾತ್ ಸಿಂಗ್ ಗಿಲ್‍ನ ಒಂದು ಪಾದ ಸಿಡಿದು ಹೋಯ್ತು. ಮುಂದೆ ಅನೇಕ ವರ್ಷಗಳ ನಂತರ ನಾವಿಬ್ಬರೂ ಮತ್ತೆ ಭೇಟಿಯಾದೆವು. ನಿವೃತ್ತಿಯ ನಂತರ ಮೇಜರ್ ಮಾಲ್ಕಿಯಾರ್ ಸಿಂಗ್ ಕೆನಡಾಕ್ಕೆ ಹೋಗಿ ನೆಲೆಸಿದರು.

ಹೀಗೆ ಕೊನೆಗೂ ಯುದ್ಧ ಮುಗಿಸಿ, ವಿಜಯೋತ್ಸಾಹ, ಉತ್ಸವದ ವಾತಾವರಣದ ನಡುವೆ, ನೋವು ನಲಿವುಗಳ ಸಮ್ಮಿಶ್ರಣದೊಂದಿಗೆ ನಾವು ನಮ್ಮ ಜಲಂಧರ್ ಕ್ಯಾಂಪ್ ಗೆ ಮರಳಿದೆವು. ಮತ್ತೆ 18 ತಿಂಗಳ ಕಾಲ ನಮಗೆ ಬೇರೆ ಯಾವುದೇ ಹೊಸ ಜವಾಬ್ದಾರಿಗಳಿರಲಿಲ್ಲ. ಈ ಹಂತದಲ್ಲಿ ನಾನು ಒಟ್ಟೂ ಮೂರು ಕೋರ್ಸ್‍ಗಳನ್ನು ಮುಗಿಸಿದೆ. ಇದು ನನ್ನ ಸೈನಿಕ ಜೀವನದಲ್ಲಿಯೂ ಕಲಿಕೆಯ ಆಸಕ್ತಿಯನ್ನು ಮತ್ತೆ ಜೀವಂತವಾಗಿಸಿದುವು. ಈ ಮೂರೂ ಕೋರ್ಸ್‍ಗಳು ನನ್ನ ಸೈನಿಕ ಜೀವನದಲ್ಲಿನ ಪ್ರತೀ ಹಂತದ ಬೆಳವಣಿಗೆಗೆ ಬಹಳ ಸಹಕಾರಿಯಾಗಿದ್ದುವು. ಪಿಟಿ, ಐಸಿಜೆಒ ಮತ್ತು ಆರ್‍ಎಸ್ ಓ ಎಂಬ ಮೂರು ಕೋರ್ಸ್‍ಗಳನ್ನು ಮುಗಿಸಿದೆ.

ಹೀಗೇ ಒಂದು ಘಟನೆ ನೆನಪಾಗುತ್ತದೆ. ನಾವೆಲ್ಲರೂ ಆ ಜನರ ಮುಗ್ಧ ಸ್ವಾಗತ ಕಂಡು ಹೆಮ್ಮೆ, ಸಂತಸ ಮತ್ತು ನಮ್ಮ ಅತೀ ಆತ್ಮೀಯರ ಅಗಲುವಿಕೆಯ ನೋವಿನೊಂದಿಗೆ ಜೀವನದ ಸಹಜ ಸ್ಥಿತಿ ಎಂಬಂತೆ ಎಲ್ಲವನ್ನೂ ಸ್ವಾಗತಿಸುತ್ತಿದ್ದೆವು. ಹೀಗೆ ಎಲ್ಲರೂ ಒಟ್ಟಾಗಿ ಹಳ್ಳಿ ಪ್ರವೇಶಿಸುವಾಗ ನಮ್ಮೊಂದಿಗೆ ಒಬ್ಬ ಕಸ ಗುಡಿಸುವ ಸಹಾಯಕನೂ ಇದ್ದ. ಅಭಿಮಾನದಿಂದ ಜನರೆಲ್ಲಾ ಎಲ್ಲರನ್ನೂ ಎತ್ತಿ ಕುಪ್ಪಳಿಸುತ್ತಾ ಸ್ವಾಗತ ಮಾಡುವಾಗ್ ಅವನನ್ನೂ ಹಾರ ಹಾಕಿ ಸ್ವಾಗತಿಸಿದರು. ಆತ ತಾನು ಯೋಧನಲ್ಲ ಎಂದು ಹೇಳುತ್ತಿದ್ದರೂ ಎಲ್ಲಾ ಯೋಧರಿಗೂ ಸಿಗುವ ಸ್ವಾಗತ ಅವನಿಗೂ ದೊರೆತಾಗ ಅವನಿಗೆ ಮುಜುಗರ ಆಯಿತು. ಆದರೆ ಸೈನ್ಯದಲ್ಲಿ ಯಾವುದೇ ದರ್ಜೆ ನಗಣ್ಯ ಮತ್ತು ಆತನಿಗೂ ಈ ಸ್ವಾಗತ ಆರ್ಹವೇ ಎಂಬುದು ನಮ್ಮ ಅಭಿಪ್ರಾಯ-ಇಂದಿಗೂ!

ಈಗ ನಮ್ಮೆದುರಿದ್ದ ಸವಾಲು ದೊಡ್ಡದು. ನಮ್ಮ ಸೈನ್ಯದಲ್ಲಾದ ಅನೇಕ ಕೊರತೆಗಳನ್ನು ಸರಿದೂಗಿಸಿಕೊಳ್ಳಬೇಕಿತ್ತು-ಸರಿಪಡಿಸಿಕೊಳ್ಳಬೇಕಾಗಿತ್ತು. ಅನೇಕ ಹೊಸ ಯೋಧರನ್ನು ನಾವು ತರಬೇತುಗೊಳಿಸಿ, ಅವರನ್ನು ಮುಂದಿನ ನಮ್ಮ ಸೈನ್ಯದ ಅಗತ್ಯತೆಗಳಿಗೆ ಅಣಿಗೊಳಿಸಬೇಕಾಗಿತ್ತು. ಆ ಕೆಲಸದಲ್ಲಿ ನಾವು ನಿರತರಾದೆವು.

ನಿರೂಪಣೆ: ಅರೆಹೊಳೆ ಸದಾಶಿವರಾವ್‌

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು