ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಎಆರ್:ವಿದೇಶಿ ಹೂಡಿಕೆ ಹೆಚ್ಚಳ

Last Updated 1 ಜುಲೈ 2012, 19:30 IST
ಅಕ್ಷರ ಗಾತ್ರ

ಷೇರು ಪೇಟೆಯ ವಿಸ್ಮಯಕಾರಿ ಗುಣವೆಂದರೆ ದಿಢೀರ್ ದಿಕ್ಕು ಬದಲಿಸುವುದು. ಬದಲಾವಣೆಯ ವೇಗವು ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಾಗಿರುತ್ತವೆ ಎನ್ನುವುದಕ್ಕೆ  ಕಳೆದ ಶುಕ್ರವಾರದ ಬೆಳವಣಿಗೆ ಉತ್ತಮ ನಿದರ್ಶನ.

ಮುಂಬೈ ಷೇರು    ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕವು ಕಳೆದ ಒಂದು ತಿಂಗಳಲ್ಲಿ 991 ಅಂಶಗಳಷ್ಟು ಏರಿಕೆ ಪಡೆದಿದೆ. ಇಂತಹ ಏರಿಕೆಯಲ್ಲಿ ಶುಕ್ರವಾರ ಒಂದೇ ದಿನದ ಏರಿಕೆಯು 439 ಅಂಶಗಳಷಿದ್ದು, ಮಾಸಿಕ ಏರಿಕೆಯಲ್ಲಿ ಸಿಂಹಪಾಲು ಪಡೆದಿದೆ. ಇಂತಹ ಬೃಹತ್ ಏರಿಕೆಗೆ ಮೂಲ ಕಾರಣ ಸರ್ಕಾರ ಜಾರಿಗೊಳಿಸಲಿರುವ `ಜನರಲ್ ಆ್ಯಂಟಿ ಅವೈಡೆನ್ಸ್ ರೂಲ್ಸ್~ (ಜಿಎಎಆರ್).
 
ಈ ನಿಯಮಾವಳಿಯು ಜಾರಿಗೊಳಿಸಿದ ನಂತರದ ದಿನಗಳಲ್ಲಿ ಅನ್ವಯಿಸುತ್ತದೆಯೇ ಹೊರತು ಹಿಂದಿನ ದಿನಗಳಿಗೆ ಅನ್ವಯವಾಗುವುದಿಲ್ಲ ಎಂಬ ಸಮಜಾಯಿಷಿಯು ವಿದೇಶಿ ವಿತ್ತೀಯ ಸಂಸ್ಥೆಗಳಿಗೆ ಪ್ರೇರಣೆಯಾಯಿತು. ಇದರೊಂದಿಗೆ ಯೂರೋ ವಲಯದ ನಾಯಕರು ಇಟಲಿ ಮತ್ತು ಸ್ಪೇನ್‌ಗಳ ಹೊರೆ ಇಳಿಸುವತ್ತ ಸಂಯುಕ್ತ ಕ್ರಮದ ನಿರ್ಧಾರವೂ ಏರಿಕೆಗೆ ಪೂರಕವಾಯಿತು.

ಈ ಕಾರಣಗಳಿಂದ ಪ್ರಬಲವಾದ ವಿದೇಶಿ ವಿನಿಮಯದ ಒಳಹರಿವು ಷೇರುಪೇಟೆಗೆ ಹರಿದು ಬಂದ ಕಾರಣ ರೂಪಾಯಿಯ ಬೆಲೆಯ ಚೇತರಿಕೆ ಕಂಡು ರೂ 55.60ಕ್ಕೆ ಏರಿಕೆ ಕಂಡು ಎರಡೂವರೆ ವರ್ಷಗಳಲ್ಲಿ ಗರಿಷ್ಠ ಏರಿಕೆಯ ದಾಖಲೆ ನಿರ್ಮಿಸಿತು. ವಿತ್ತೀಯ ಕೊರತೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಇಂತಹ ಚೇತರಿಕೆ ವರದಾನವಾಗಿದೆ. ಮುಂದಿನ ದಿನಗಳಲ್ಲಿ ಸುಧಾರಣಾ ಕ್ರಮಗಳು ಜಾರಿಯಾಗಿ ಬೆಳವಣಿಗೆಗೆ ಪೂರಕವಾಗುವುದೆಂಬ ಆಶಾಭಾವನೆಯು ವಿದೇಶಿ ವಿತ್ತೀಯ ಸಂಸ್ಥೆಗಳ ಒಳಹರಿವಿಗೆ ಕಾರಣವಾಗಿದೆ.

ಹಿಂದಿನವಾರ ಒಟ್ಟು 457 ಅಂಶಗಳಷ್ಟು ಏರಿಕೆ ದಾಖಲಿಸಿರುವ ಸಂವೇದಿ ಸೂಚ್ಯಂಕವು ತನ್ನೊಂದಿಗೆ ಮಧ್ಯಮ ಶ್ರೇಣಿ ಸೂಚ್ಯಂಕವನ್ನು 143 ಅಂಶಗಳಷ್ಟು ಮತ್ತು ಕೆಳಮಧ್ಯಮ ಶ್ರೇಣಿ ಸೂಚ್ಯಂಕವನ್ನು 136 ಅಂಶಗಳಷ್ಟು ಏರಿಕೆ ಕಾಣುವಂತೆ ಮಾಡಿ ಮುಂದಾಳತ್ವವಹಿಸಿದೆ.

ಶುಕ್ರವಾರದಂದು ವಿದೇಶಿ ವಿತ್ತೀಯ ಸಂಸ್ಥೆಗಳು ರೂ 3 ಸಾವಿರ ಕೋಟಿ ಒಳಹರಿವಿನ ಕಾರಣ, ಒಟ್ಟು ರೂ 2186 ಕೋಟಿ ಒಳಹರಿವು ಬಂದಿದ್ದು, ಸ್ವದೇಶಿ ವಿತ್ತೀಯ ಸಂಸ್ಥೆಗಳು. ರೂ178 ಕೋಟಿ ಖರೀದಿ ಮಾಡಿದವು. ಷೇರುಪೇಟೆ ಬಂಡವಾಳ ಮೌಲ್ಯವು ರೂ61.52 ಲಕ್ಷ ಕೋಟಿಗೆ ಏರಿದೆ.

ಬೋನಸ್ ಷೇರಿನ ವಿಚಾರ
*ಅಟಲ್ ಆಟೊ ವಿತರಿಸಲಿರುವ 1:2 ಅನುಪಾತದ ಬೋನಸ್‌ಗೆ ಜುಲೈ 5 ನಿಗದಿತ ದಿನವಾಗಿದೆ.

*ಆರ್ಬಿಟ್ ಎಕ್ಸ್‌ಪೋರ್ಟ್ಸ್ ಕಂಪೆನಿ ವಿತರಿಸಲಿರುವ 1:2ರ ಅನುಪಾತದ ಬೋನಸ್‌ಗೆ ಜುಲೈ 10 ನಿಗದಿತ ದಿನವಾಗಿದೆ.

*`ಟಿ~ ಗುಂಪಿನ ಕಂಪೆನಿ ರೊಟಮ್ ಕಮರ್ಷಿಯಲ್ಸ್ ಲಿ. ಜುಲೈ 5 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

ಲಾಭಾಂಶ ವಿಚಾರ

ಕಂಟ್ರೋಲ್ ಪ್ರಿಂಟ್ ಶೇ 20, ಡಿಲ್ ಶೇ 150, ಗಾರ್‌ವಾರೆ ಪೊಲಿಸ್ಟರ್ಸ್‌ ಶೇ 15. ಗಟಿ ಶೇ 30, ಗುಜರಾತ್ ರಿಕ್ಲೇಂ ಶೇ 260, ಕೆಪಿಆರ್ ಮಿಲ್ಸ್ ಶೇ 20, ಮೈತಾನ್ ಅಲ್ಲಾಯ್ಸ ಶೇ 20, ಡಬ್ಲ್ಯು.ಪಿ.ಐ.ಎಲ್. ಶೇ 20.

ಮುಖ ಬೆಲೆ ಸೀಳಿಕೆ ವಿಚಾರ

ಗೃಹ ಫೈನಾನ್ಸ್ ಲಿ. ಕಂಪೆನಿ ಷೇರಿನ ಮುಖ ಬೆಲೆಯನ್ನು ರೂ10 ರಿಂದ ರೂ2ಕ್ಕೆ ಸೀಳಲು ಜುಲೈ 25 ನಿಗದಿತ ದಿನವಾಗಿದೆ.

ಆಸ್ತಿ ಜಪ್ತಿಗೆ ಆದೇಶ
ಈ ಕಂಪೆನಿಯು 2004 ರಲ್ಲಿ ಶೇ 48ರ ಭಾಗಿತ್ವವನ್ನು ಮಾಯಾಜಾಲ ಎಂಟರ್‌ಟೇನ್‌ಮೆಂಟ್‌ನಲ್ಲಿ ಪಡೆದಿದ್ದು ಮಾಯಾಜಾಲ ಎಂಟರ್‌ಪ್ರೈಸಸ್ ಹೊಂದಿರುವ 30 ಎಕರೆ ಪ್ರದೇಶವನ್ನು ರಿಯಲ್ ಎಸ್ಟೇಟ್ ಯೋಜನೆಗಳಿಗೆ ಉಪಯೋಗಿಸ ಲಿರುವುದರಿಂದ, ಇದರಿಂದ ಹೊರಬರುವ ಚಿಂತನೆಯಲ್ಲಿತ್ತು.

ಪೆಂಟಾಮೀಡಿಯಾ ಗ್ರಾಫಿಕ್ಸ್ ಕಂಪೆನಿಯು ದುಬೈನ ದಲಾ ಅಲ್‌ಬಾರಕ ಸಂಸ್ಥೆಯಿಂದ 13.36 ದಶಲಕ್ಷ ಡಾಲರ್ ಸಾಲ ಪಡೆದಿತ್ತು. ಈ ಸಂಸ್ಥೆ ಮದ್ರಾಸ್ ಹೈಕೋರ್ಟಿನಲ್ಲಿ ತಗಾದೆ ಸಲ್ಲಿಸಿತ್ತು. ಹೈಕೋರ್ಟ್ ಪೆಂಟಾಮೀಡಿಯಾ ಗ್ರಾಫಿಕ್‌ನ ಆಸ್ತಿಯನ್ನು ಜಫ್ತಿ ಮಾಡಲು ಆದೇಶಿಸಿದೆ.

ಅಂಕಿ ಅಂಶಗಳ ಪ್ರಭಾವ
ಶುಕ್ರವಾರದಂದು ಕಂಪೆನಿಗಳಾದ ಎಲ್. ಎಸ್. ಇಂಡಸ್ಟ್ರೀಸ್, ಜೆಟಿಎಸ್ ಇಂಡಸ್ಟ್ರೀಸ್, ಜೈನ್ ಕೊ ಪ್ರಾಜೆಕ್ಟ್, ಆರ್ಚ್‌ಸಾಪ್ಟ್, ಯುನಿಬೆಕ್ಸ್, ಇನ್‌ಫ್ರಾನಿಕ್ಸ್, ಸೋಮದತ್ತಾ ಫೈನಾನ್ಸ್ ಕಾರ್ಪೊರೇಷನ್, ಪ್ರತೀಕ್ ಪೆಸಾಲ್ಸ್, ಗ್ರೀನ್ ಲೈನ್ ಟಿ ಅಂಡ್ ಎಕ್ಸ್‌ಪೋರ್ಟ್‌ಗಳು ಏರಿಕೆ ಕಂಡಿವೆ.

ಆದರೆ ಇಲ್ಲಿ ಗಮನಿಸಬೇಕಾದ ಅಂಶ, ವಹಿವಾಟಾದ ಷೇರುಗಳ ಸಂಖ್ಯೆ ಕೇವಲ ಒಂದು ಮಾತ್ರ.

ಪರಿವರ್ತನಾ ಬಾಂಡ್ ವಿಚಾರ
2007-08 ರಲ್ಲಿ ಷೇರು ಪೇಟೆಗಳ ಉತ್ತಂಗದಲ್ಲಿದ್ದಾಗ ಅಗ್ರಶ್ರೇಣಿ ಕಂಪೆನಿಗಳೊಂದಿಗೆ ಮಧ್ಯಮ ಶ್ರೇಣಿ ಹಾಗೂ ಕೆಳಮಧ್ಯಮ ಶ್ರೇಣಿ. ಕಂಪೆನಿಗಳೂ ಸಹ ವಿದೇಶಿ ವಿನಿಮಯ ಪರಿವರ್ತನಾ ಬಾಂಡ್‌ಗಳ ಮೂಲಕ ಸಂಪನ್ಮೂಲ ಸಂಗ್ರಹಣೆ ಮಾಡಿವೆ. ಆಗಿನ ಡಾಲರ್ ಬೆಲೆಯು ರೂ42ರ ಸಮೀಪವಿದ್ದು ಈ ವರ್ಷದಲ್ಲಿ ಸುಮಾರು 48 ಕಂಪೆನಿಗಳು ಈ ಪರಿವರ್ತನಾ ಬಾಂಡ್ ಹಣವನ್ನು ಪಕ್ವತೆಯ ಮೌಲ್ಯದೊಂದಿಗೆ ಹಿಂದಿರುಗಿಸಬೇಕಾಗಿದೆ.

ಇದರಲ್ಲಿ ಸುಮಾರು ಅರ್ಧದಷ್ಟು ಕಂಪೆನಿಗಳು ಈಗಿನ ಪೇಟೆಯ ಪರಿಸ್ಥಿತಿ ಕಾರಣ ಈ ದಿಶೆಯಲ್ಲಿ ವಿಫಲವಾಗುವ ಸಾಧ್ಯತೆ ಇದೆ. ಡಾಲರ್‌ನ ಬೆಲೆಯು ರೂ56ರ ಸಮೀಪದಲ್ಲಿರುವುದೂ ಸಹ ಹೆಚ್ಚಿನ ಬಾಧಕವಾಗಿದೆ. ಕಂಪೆನಿಗಳಾದ ಝೆನಿತ್ ಇನ್‌ಪೇಟೆಕ್, ಎವರೆಸ್ಟ್ ಕ್ಯಾಂಟೋ, ಜಿ. ವಿ. ಫಿಲಂ, ಫಸ್ಟ್ ಸೋರ್ಸ್, ಶ್ರೀ ಅಷ್ಠವಿನಾಯಕ ಸಿನೆವಿಷನ್ ಇಂಡೋವಿಂಡ್ ಎನರ್ಜಿ, ಅಂಕುರ್ ಡ್ರಗ್ಸ್, ಎಕ್ಸೆಲ್ ಎನರ್ಜಿ, ಕಂಪೆನಿಗಳ ಈಗಿನ ಷೇರಿನ ದರವು ಪರಿವರ್ತನಾ ಬೆಲೆಗಿಂತ ಶೇ 90 ರಷ್ಟು ಕುಸಿದಿರುವುದು ಆತಂಕಕಾರಿಯಾಗಿದೆ.

ಹೆಸರಿನ ಬದಲಾವಣೆ ವಿಚಾರ
*ಗ್ಲೋಬ್‌ಸಿನ್ ಇನ್‌ಫೊಟೆಕ್ ಲಿ. ಕಂಪೆನಿ ಹೆಸರನ್ನು ಸೆಕ್ಯೂರ್ ಅರ್ಥ್ ಟೆಕ್ನಾಲಜೀಸ್ ಲಿ. ಎಂದು ಬದಲಿಸಲಾಗಿದೆ.

*ಸಿನೆಮಾಕ್ಸ್ ಇಂಡಿಯಾ ಲಿ. ಕಂಪೆನಿ ಹೆಸರನ್ನು ಸಿನೆಮ್ಯಾಕ್ಸ್ ಪ್ರಾಪರ್ಟಿಸ್ ಲಿ. ಎಂದು ಬದಲಿಸಲಾಗಿದೆ.

*ಹೌಸ್ ಆಫ್ ಪರ್ಲ್ ಫ್ಯಾಷನ್ಸ್ ಲಿ. ಕಂಪೆನಿ ಹೆಸರನ್ನು ಪರ್ಲ್‌ಗ್ಲೋಬರ್ ಇಂಡಸ್ಟ್ರೀಸ್ ಲಿ. ಎಂದು ಬದಲಿಸಲಾಗಿದೆ.

*ಇಂಗ್ಲೀಷ್ ಇಂಡಿಯಾ ಕ್ಲೆ ಲಿ. ಕಂಪೆನಿಯ ಹೆಸರನ್ನು ಇಐಸಿಎಲ್ ಲಿ ಎಂದು ಬದಲಿಸಲಾಗಿದೆ. ಸಿನೇರಿಯೋ ಮೀಡಿಯಾ ಲಿ. ಕಂಪೆನಿ ಹೆಸರನ್ನು ಎಸ್‌ವಿಪಿ ಗ್ಲೋಬಲ್ ವೆಂಚರ್ಸ್ ಲಿ. ಎಂದು ಬದಲಿಸಲಾಗಿದೆ.

ಎಚ್ಚರಿಕೆ ದೃಷ್ಠಿಯಿಂದ ಹೊರಗೆ
ಮಣ್ಣಾಪುರಂ ಫೈನಾನ್ಸ್ ಲಿ. ಕಂಪೆನಿಯು ಎಚ್ಚರಿಕೆ ದೃಷ್ಟಿಯಿಂದ ಹೊರಬಂದಿದ್ದು, ಅದರ ಆರ್ಥಿಕತೆ ಸ್ಥಿರವಾಗಿದೆ ಎಂಬ ಪ್ರಿಸಿಲ್ ಪ್ರಕಟಣೆಯು ಷೇರಿನ ಬೆಲೆಯನ್ನು ರೂ25 ರಿಂದ ರೂ34ರ ವರೆಗೂ ಜಿಗಿಯುವಂತೆ ಮಾಡಿತು. ರೂ 31.35 ರಲ್ಲಿ ವಾರಾಂತ್ಯ ಕಂಡಿತು.

ವಾರದ ವಿಶೇಷ

ಪ್ರಧಾನ ಮಂತ್ರಿಗಳ ತೆಕ್ಕೆಗೆ ವಿತ್ತ ಸಚಿವಾಲಯ ಸೇರಿಕೊಂಡ ಬೆನ್ನಲ್ಲೇ ಇದುವರೆಗೂ ಚರ್ಚಾಗ್ರಸ್ತವಾಗಿ ಪೇಟೆಯ ವಾತಾವರಣ ಕಲುಷಿತಗೊಳಿಸಿ ನಂಬಿಕೆಯ ಕೊರತೆಯನ್ನುಂಟು ಮಾಡಿದ್ದ `ಗಾರ್~ ನಿಯಮಾವಳಿಗಳ ಬಗೆಗಿನ ಸಮಜಾಯಿಶಿ,ಯುರೋಪಿನ ಬೆಳವಣಿಗೆಗಳು, ರೂಪಾಯಿ ಬೆಲೆಯ ಚೇತರಿಕೆ ಮುಂತಾದ ಸಕಾರಾತ್ಮಕವಾದ ಬೆಳವಣಿಗೆಗಳ ಸಂಯುಕ್ತ ಪ್ರಭಾವವು ಶುಕ್ರವಾರದಂದು ಭರ್ಜರಿ ದಾಖಲೆಯ ಏರಿಕೆಯನ್ನು ಸಂವೇದಿ ಸೂಚ್ಯಂಕ ಪ್ರದರ್ಶಿಸಿದ್ದು, ಇದರ ಹಿಂದೆ ವಿದೇಶೀ ವಿತ್ತೀಯ ಸಂಸ್ಥೆಗಳ ರೂ 3 ಸಾವಿರ ಕೋಟಿಗೂ ಹೆಚ್ಚಿನ ಕೊಳ್ಳುವಿಕೆಯ ಪೇಟೆಯ ವಾತಾವರಣವನ್ನೇ ಬದಲಾಯಿಸಿ ಬಿಟ್ಟಿದೆ.

ಇನ್ನು ಮುಂದೆ ಸಂವೇದಿ ಸೂಚ್ಯಂಕ 20 ಸಾವಿರ, 22 ಸಾವಿರ ಮುಂತಾದ ಹಂತಕ್ಕೆ ತಲುಪಬಹುದೆಂಬ ವಿಶ್ಲೇಷಣೆಗಳು ಬರುವ ಸಾಧ್ಯತೆ ಇದೆ. ಸಣ್ಣ ಹೂಡಿಕೆದಾರರು ಷೇರುಪೇಟೆ ಎಂಬ ಸಮುದ್ರಕ್ಕೆ ಧುಮುಕುವ ಮುನ್ನ ಪೂರ್ವಭಾವಿಯಾಗಿ ಎಂತಹ ಮಾದರಿಯ ಚಟುವಟಿಕೆ ನಡೆಸಬೇಕೆಂದು ನಿರ್ಧರಿಸಿ ಅದಕ್ಕೆ ಅಂಟಿಕೊಳ್ಳುವುದು ಉತ್ತಮ.

  ಕಾರಣ ಈ ಪೇಟೆಯಲ್ಲಿ ಚಟುವಟಿಕೆ ನಿರತರಾದಾಗ ನಮ್ಮ ಪೂರ್ವ ನಿಯೋಜಿತ ಚಿಂತನೆಗಳನ್ನು ನಮಗರಿವಿಲ್ಲದೆಯೇ ಬದಲಾಯಿಸುವ ತಾಕತ್ತು ಈ ಪೇಟೆಗಿದೆ. ಹೂಡಿಕೆ ಮಾಡಿದ ಹಣದ ಸುರಕ್ಷತೆಗೆ ಮೊದಲ ಆದ್ಯತೆ ಇರಬೇಕು. ನಂತರ ಲಾಭದ ಮೋಹ. ಹೂಡಿಕೆಗೆ ಮುನ್ನ ಕಂಪೆನಿಗಳ ಗುಣಮಟ್ಟ ಹಾಗೂ ಹೂಡಿಕೆ ಸ್ನೇಹಿ ಎಂಬುದನ್ನು ಖಾತ್ರಿಪಡಿಸಿಕೊಂಡು ನಿರ್ಧರಿಸುವುದು ಸೂಕ್ತ.
 
ಹೂಡಿಕೆಯನ್ನು ಉತ್ತಮ ಮೂಲಭೂತಗಳುಳ್ಳ ಕಂಪೆನಿಯಲ್ಲಿ ಮಾಡಿ ನಂತರ ಪೇಟೆ ನೀಡಬಹುದಾದ ಸಹಜ ಲಾಭ ದೊರೆತಲ್ಲಿ ನಗದೀಕರಣಕ್ಕೆ ಉಪಯೋಗಿಸಿಕೊಳ್ಳುವುದು ಕ್ಷೇಮ. ಇತ್ತೀಚಿನ ದಿನಗಳಲ್ಲಿ ಅನಿರೀಕ್ಷಿತ, ಅನಪೇಕ್ಷಿತ ಬೆಳವಣಿಗೆಗಳು ಬೆಲೆಗಳಲ್ಲಿ ಏರುಪೇರು ಪ್ರದರ್ಶಿತವಾಗುವುದು ಸ್ವಾಭಾವಿಕವಾಗಿದೆ.

ಇಂದ್ರಪ್ರಸ್ತ ಗ್ಯಾಸ್ ಕಂಪೆನಿಯಲ್ಲುಂಟಾದ ಒಂದೇ ದಿನದಲ್ಲಿ ರೂ320 ರಿಂದ ರೂ170ಕ್ಕೆ ಕುಸಿತವಾಗಲಿ, ಸೀಮೆಂಟ್ ಕಂಪೆನಿಗಳ ಮೇಲೆ ವಿಧಿಸಿದ ದಂಡದಂತಹ ಬೆಳವಣಿಗೆ, ಮಣ್ಣಾಪುರಂ ಫೈನಾನ್ಸ್‌ಗೆ ಕ್ರಿಸಿಲ್‌ನಿಂದ ದೊರತ ಹಸಿರು ನಿಶಾನೆ, ಆನ್‌ಮೊಬೈಲ್ ಕಂಪೆನಿಯಲ್ಲಂಟಾದ ಕುಸಿತ ಮುಂತಾದವುಗಳ ಪ್ರಕರಣಗಳಲ್ಲಿ ಕಾರಣ ವೈವಿಧ್ಯಮಯವಾದರೂ ಅವಕಾಶ ವಂಚಿತರಾಗುವುದು ಬೇಡವೆನ್ನುವುದನ್ನು ಅರಿಯಬಹುದು. 

 ಪೇಟೆಗಳು ಜಾಗತಿಕ ಮಟ್ಟದಲ್ಲಿ ವಿಸ್ತರಿಸಿಕೊಂಡಿರುವಾಗ ಪ್ರತಿಯೊಂದಕ್ಕೂ ಕಾರಣಗಳನ್ನು ಹುಡುಕಬಾರದು. ವಿಶೇಷವಾಗಿ ಲಾಭ ನಗದಿಕರಣದ ಸಂಧರ್ಭದಲ್ಲಿ ಥಿಂಕ್‌ಸಾಪ್ಟ್ ಗ್ಲೋಬಲ್ ಸರ್ವಿಸಸ್‌ನಂತಹ ಕಂಪೆನಿ ಒಂದು ತಿಂಗಳ ಅವಧಿಯಲ್ಲಿ ರೂ45ರ ಸಮೀಪದಿಂದ ರೂ84ರ ವರೆಗೆ ಜಿಗಿತಕೊಂಡಾಗ ಮೊದಲ ಆದ್ಯತೆ ಬಂಡವಾಳ ಅಭಿವೃದ್ಧಿಗಿಂತ, ಸುರಕ್ಷತೆಯಾಗಿರಬೇಕು.

ಕೇವಲ ಅಂಕಿ - ಅಂಶಗಳಿಗೆ ಮಾರು ಹೋಗಬೇಡಿ. ಕಾರಣ ದಾಖಲೆಯ ಹಿಂದೆ ಅಡಕವಾಗಿರುವ ಅಸಹಜ ಕ್ರಿಯೆಗಳು ಅರಿವಾಗದು. ಕೇವಲ ಒಂದೊಂದೇ ಷೇರಿನ ವಹಿವಾಟಿನಿಂದ ಬೇಕಾದ ಏರಿಕೆ ಅಥವಾ ಇಳಿಕೆ ತೋರಿಸಬಹುದಾಗಿದೆ.

ಫಾರ್ಮಾಸಿಯಾ ಲಿ. ಕಂಪೆನಿ ಕಳೆದ ಒಂದು ವಾರದಲ್ಲಿ ರೂ159 ರಿಂದ ರೂ131ಕ್ಕೆ ಕುಸಿದಿದೆ. ಟಿ ಗುಂಪಿನ ಈ ಕಂಪೆನಿಯಲ್ಲಿ ಹೆಚ್ಚಿನ ವಹಿವಾಟಾಗಿದೆ. ಕಳೆದ ಒಂದು ವರ್ಷದ ರೂ 201 ರಿಂದಲೂ ಇದುವರೆಗೆ 100 ಷೇರು ಮಾರಾಟ ಮಾಡಲು ಸಹ ಆಗದೆ ಇರುವಂತಹ ವಾತಾವರಣವಿದೆ. ಹಾಗಾಗಿ ಹೂಡಿಕೆಗೆ ಫಂಡಮೆಂಟಲ್ಸ್ ನಂತರ ಟೆಕ್ನಿಕಲ್ಸ್ ನೀಡುವ ಲಾಭದಿಂದ ಹೊರ ಬಂದರೆ ಬಂಡವಾಳ   ಸುರಕ್ಷಿತ!

98863-13380
 (ಮಧ್ಯಾಹ್ನ 4.30ರ ನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT