ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯ–ನಮಸ್ಕಾರ: ದೇಶದ ಹಿತ ಮರೆತ ಪ್ರಣಾಳಿಕೆಗಳು

ಇಂಡಿಯಾ ಮೈತ್ರಿಕೂಟದ ಪಕ್ಷಗಳ ಭರವಸೆಗಳಲ್ಲಿ ಹೊಣೆಗಾರಿಕೆಯ ಕೊರತೆ ಕಾಣುತ್ತಿದೆ
Published 1 ಮೇ 2024, 22:19 IST
Last Updated 1 ಮೇ 2024, 22:19 IST
ಅಕ್ಷರ ಗಾತ್ರ

‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಒಟ್ಟಾಗಿವೆ ಎಂದು ಭಾವಿಸಲಾಗಿದೆ. ಈ ಒಕ್ಕೂಟದ ಹಲವು ಪಕ್ಷಗಳು ಲೋಕಸಭಾ ಚುನಾವಣೆಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿವೆ. ಈ ಪ್ರಣಾಳಿಕೆಗಳಲ್ಲಿ ಪರಿಣಾಮಗಳನ್ನು ಲೆಕ್ಕಿಸದ ಕೆಲವು ಭರವಸೆಗಳು ಇವೆ. ಈ ಭರವಸೆಗಳು ಉದ್ದೇಶದಲ್ಲಿ ಒಗ್ಗಟ್ಟನ್ನಾಗಲಿ, ಆಡಳಿತದ ಬಗ್ಗೆಹೊಣೆಗಾರಿಕೆಯನ್ನಾಗಲಿ ಪ್ರತಿಫಲಿಸುತ್ತಿಲ್ಲ. ಕೆಲವು ಪಕ್ಷಗಳು ಮಾಡಿರುವ ಘೋಷಣೆಗಳು ರಾಷ್ಟ್ರದ ಭದ್ರತೆಯನ್ನು ಅಪಾಯಕ್ಕೆ ಒಡ್ಡುತ್ತವೆ, ಚೀನಾದ ಎದುರು ಬಹಳ ದುರ್ಬಲವಾಗಿದ್ದ ಸ್ಥಿತಿಗೆ, ಪಾಕಿಸ್ತಾನ ಒಡ್ಡುತ್ತಿದ್ದ ಬೆದರಿಕೆಯ ಕಾರಣಕ್ಕೆ ನಿರಂತರವಾಗಿ ಗಾಸಿಗೊಳ್ಳುತ್ತಿದ್ದಸ್ಥಿತಿಗೆ ದೇಶವನ್ನು ಮತ್ತೆ ಒಯ್ಯುವ ಘೋಷಣೆಗಳು ಅವು. ಇಂತಹ ಘೋಷಣೆಗಳು ಪರಿಸ್ಥಿತಿಯನ್ನು ಇನ್ನಷ್ಟುಸಂಕೀರ್ಣಗೊಳಿಸುವಂಥವು. ಘೋಷಣೆ ಆಗಿರುವ ಕೆಲವು ಉಚಿತ ಕೊಡುಗೆಗಳು ದೇಶದ ಆರ್ಥಿಕ ಆರೋಗ್ಯವನ್ನು ಭಾರಿ ಅಪಾಯಕ್ಕೆ ಸಿಲುಕಿಸಬಲ್ಲವು.

ಕಾಂಗ್ರೆಸ್, ಸಿಪಿಎಂ, ರಾಷ್ಟ್ರೀಯ ಜನತಾದಳ, ಡಿಎಂಕೆ ಮತ್ತು ಇತರ ಕೆಲವು ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿವೆ. ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿದರೆ, ಮೈತ್ರಿಕೂಟದಲ್ಲಿ ಇರುವ ಇತರ ಎಲ್ಲವೂ ಪ್ರಾದೇಶಿಕ ಅಥವಾ ಜಾತಿ ಆಧಾರಿತ ಪಕ್ಷಗಳು. ಹೀಗಾಗಿ ಅವು ದೇಶದ ಒಟ್ಟಾರೆ ಒಳಿತಿಗಿಂತಲೂ ಹೆಚ್ಚಾಗಿ ತಮ್ಮ ರಾಜ್ಯ ಅಥವಾ ತಮ್ಮ ಪ್ರಾಬಲ್ಯದ ಕ್ಷೇತ್ರಗಳ ಬಗ್ಗೆ ತಲೆಕೆಡಿಸಿಕೊಂಡಿರುತ್ತವೆ. 

ಇಂಡಿಯಾ ಮೈತ್ರಿಕೂಟದ ಪಕ್ಷಗಳ ಪ್ರಣಾಳಿಕೆಗಳನ್ನು ದೇಶದ ಸಾಮಾಜಿಕ, ಆರ್ಥಿಕ ಮತ್ತು ಇತರ ಮಹತ್ವದ ಹಿತಾಸಕ್ತಿಗಳ ಬಗ್ಗೆ ಆಳವಾದ ತಿಳಿವಳಿಕೆ ಇರುವ ವ್ಯಕ್ತಿಗಳು ಸಿದ್ಧಪಡಿಸಿರುವಂತೆ ಕಾಣುತ್ತಿಲ್ಲ. ಹಲವು ಭರವಸೆಗಳು ಮತ್ತು ಹೇಳಿಕೆಗಳಲ್ಲಿ ಬೇಜವಾಬ್ದಾರಿತನ ಕಾಣುತ್ತಿದೆ. ಸಿಪಿಎಂ ಉದಾಹರಣೆಯನ್ನು ಗಮನಿಸೋಣ. ಭಾರಿ ಪ್ರಮಾಣದಲ್ಲಿ ಅಣ್ವಸ್ತ್ರಗಳನ್ನು ಹೊಂದಿರುವ ಚೀನಾ ಮತ್ತು ಪಾಕಿಸ್ತಾನ ನಮ್ಮನ್ನು ಬೆಂಬಿಡದೆ ಕಾಡುತ್ತಿದ್ದರೂ ‘ಅಣ್ವಸ್ತ್ರಗಳ ನಿರ್ಮೂಲಕ್ಕೆ ಬದ್ಧವಾಗಿದ್ದೇವೆ’ ಎಂದು ಸಿಪಿಎಂ ಹೇಳಿದೆ. ಚೀನಾದ ಬಳಿ ಭಾರಿ ಪ್ರಮಾಣದಲ್ಲಿ ಅಣ್ವಸ್ತ್ರಗಳ ಸಂಗ್ರಹ ಇದೆ. ಅದು ಪಾಕಿಸ್ತಾನದ ಅಣ್ವಸ್ತ್ರ ಹಾಗೂ ಕ್ಷಿಪಣಿ ಯೋಜನೆಯಲ್ಲಿ ಬಹಳ ನಿಕಟವಾದ ಸಹಭಾಗಿತ್ವ ಹೊಂದಿದೆ. ಭಾರತದ ಹಿತಾಸಕ್ತಿಗಳ ಬಗ್ಗೆ ಅರಿವಿರುವ ಯಾರೇ ಆದರೂ ಅಣ್ವಸ್ತ್ರಗಳನ್ನುನಿರ್ಮೂಲಗೊಳಿಸುವ ಸಲಹೆ ನೀಡುತ್ತಾರೆಯೇ?

ಇಂದಿರಾ ಗಾಂಧಿ ಅವರ ನೇತೃತ್ವದಲ್ಲಿ ಭಾರತದ ಮೊದಲ ಅಣ್ವಸ್ತ್ರ ಪರೀಕ್ಷೆಗೆ (ಪೋಖ್ರಾನ್ 1) ಆದೇಶಿಸಿದ್ದ ಕಾಂಗ್ರೆಸ್ ಪಕ್ಷವು ಸಿಪಿಎಂ ನಿಲುವಿಗೆ ಸಮ್ಮತಿ ಹೊಂದಿದೆಯೇ? ಭಾರತವು ಅಮೆರಿಕದ ಜೊತೆಗಿನ ರಕ್ಷಣಾ ಪಾಲುದಾರಿಕೆಯಿಂದ, ಕ್ವಾಡ್ ಕೂಟದಿಂದ ಹೊರಬರಬೇಕು ಎಂಬ ಸಿಪಿಎಂ ಪ್ರಸ್ತಾವ ಕೂಡ ಅಪಾಯಕಾರಿ. ಇಂಡೊ–ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ವಿಸ್ತರಣಾವಾದಿ ನಡೆಗಳನ್ನು ನಿಯಂತ್ರಣದಲ್ಲಿ ಇರಿಸುವ ವಿಚಾರದಲ್ಲಿ ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ ಕಟ್ಟಿಕೊಂಡಿರುವ ಮಹತ್ವದ ಒಕ್ಕೂಟ ಈ ‘ಕ್ವಾಡ್’. ಪೂರ್ವ, ಪಶ್ಚಿಮ ಮತ್ತು ದಕ್ಷಿಣದಲ್ಲಿ ಸಮುದ್ರ ಪ್ರದೇಶವನ್ನು ಹೊಂದಿರುವ ಭಾರತವು ಚೀನಾ ನೌಕಾದಳದ ವಿಸ್ತರಣೆಯಿಂದಾಗಿ ಬೆದರಿಕೆಗೆ ಗುರಿಯಾಗಿದೆ. ಭಾರತದ ರಾಷ್ಟ್ರೀಯ ಹಿತಾಸಕ್ತಿಗಳನ್ನು
ಮನಸ್ಸಿನಲ್ಲಿ ಇರಿಸಿಕೊಂಡಿರುವ ಯಾರೇ ಆದರೂ ಕ್ವಾಡ್‌ನಿಂದ ಹೊರಬರುವ ಸಲಹೆ ನೀಡುತ್ತಾರೆಯೇ?

ಸಿಪಿಎಂ ಮುಂದಿಟ್ಟಿರುವ ಇನ್ನೊಂದು ಅಪಾಯಕಾರಿ ವಿಚಾರವೆಂದರೆ, ಸಂವಿಧಾನದ 370 ಹಾಗೂ 35(ಎ) ವಿಧಿಗಳನ್ನು ಮತ್ತೆ ಅನುಷ್ಠಾನಗೊಳಿಸುವುದು, ಆ ಮೂಲಕ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ವಿಚಾರವಾಗಿ ಕೈಗೊಂಡ ಅಸಾಮಾನ್ಯ ಕ್ರಮವನ್ನು ಸಂಪೂರ್ಣವಾಗಿ ವ್ಯರ್ಥಗೊಳಿಸುವುದು. ರಾಜಕೀಯ ಪಕ್ಷವೊಂದು ಈ ರೀತಿಯ ಪ್ರಸ್ತಾವ
ಗಳನ್ನು ಸಿದ್ಧಪಡಿಸಿರುವುದು ದೇಶವನ್ನು ಮಿಲಿಟರಿಯ ದೃಷ್ಟಿಯಿಂದ ದುರ್ಬಲಗೊಳಿಸುವ ಹಾಗೂ ದೇಶದ ಏಕತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಕ್ರಿಮಿನಲ್ ಉದ್ದೇಶವನ್ನು ಹೊಂದಿರುವಂತಿದೆ. ಈ ಮಾತುಗಳು ತೀರಾ ಕಟು ಅನ್ನಿಸಬಹುದು. ಭಾರತದ ಕಮ್ಯುನಿಸ್ಟರು ಚೀನಾ ಬಗ್ಗೆ ಹೊಂದಿರುವ ಒಲವು ನಮಗೆಲ್ಲರಿಗೂ ತಿಳಿದಿದೆ. ಆದರೆ ಆ ದೇಶವನ್ನು ಬಲಪಡಿಸಲು, ನಮ್ಮನ್ನು ದುರ್ಬಲಗೊಳಿಸಲು ಆ ಪಕ್ಷವು ಇಷ್ಟೊಂದು ಮುಂದೆ ಸಾಗಬಹುದು ಎಂದು ಯಾರೂ ಊಹಿಸಿರಲಿಕ್ಕಿಲ್ಲ.

ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್, ಈಗಿನ ಸಂದರ್ಭದಲ್ಲಿ ಸಿಪಿಎಂ ಜೊತೆ ಪಾಲುದಾರಿಕೆ ಹೊಂದಿರುವುದು ವಿಷಕಾರಿ. ಕಾಂಗ್ರೆಸ್ ಪಕ್ಷವು ನಿಜಕ್ಕೂ ಕೆಟ್ಟವರ ಸಹವಾಸಕ್ಕೆ ಬಿದ್ದಿದೆ. ಈ ಮೈತ್ರಿಕೂಟವು ದೇಶದಲ್ಲಿ ಅಧಿಕಾರಕ್ಕೆ ಬಂದಲ್ಲಿ ದೇಶದ ಭದ್ರತೆಯ ಕಥೆ ಏನಾಗಬಹುದು ಎಂಬುದನ್ನು ಯಾರಾದರೂ ಊಹಿಸಬಹುದು.

ದೇಶದಾದ್ಯಂತ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸುವುದಾಗಿ, ಜಾತಿ ಗಣತಿ ನಡೆಸುವುದಾಗಿ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ತರತಮವನ್ನು ಸರಿಪಡಿಸುವ ಕೆಲಸಗಳಿಗೆ ಈ ಸಮೀಕ್ಷೆಯ ಮೂಲಕ ದೊರೆಯುವ ದತ್ತಾಂಶವನ್ನು ಬಳಸಿಕೊಳ್ಳಲಾಗುತ್ತದೆ. ಆದರೆ ಇದರ ಅರ್ಥವೇನು? ತಮ್ಮ ಪಕ್ಷವು ದೇಶದ ‘ಎಕ್ಸ್‌ರೇ’ (ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ) ನಡೆಸುವುದಾಗಿ ರಾಹುಲ್ ಗಾಂಧಿ ಅವರು ಏಪ್ರಿಲ್‌ 6ರಂದು ಸಾರ್ವಜನಿಕ ಸಭೆಯೊಂದರಲ್ಲಿ ಹೇಳಿದ್ದಾರೆ. ದತ್ತಾಂಶ ಲಭ್ಯವಾದಾಗ, ತಮ್ಮ ಪಾಲು ಎಷ್ಟು ಎಂಬುದು ಅಲ್ಪಸಂಖ್ಯಾತರಿಗೆ ಗೊತ್ತಾಗುತ್ತದೆ. ಮುಂದಿನ ನಡೆಯಾಗಿ, ಹಣಕಾಸಿನ ಮತ್ತು ಸಾಂಸ್ಥಿಕ ಸಮೀಕ್ಷೆಯನ್ನು ನಡೆಸಲಾಗುತ್ತದೆ. ಅದಾದ ನಂತರದಲ್ಲಿ, ‘ಒಂದು ಕ್ರಾಂತಿಕಾರಕ ಹೆಜ್ಜೆಯನ್ನು ಇರಿಸಲಾಗುತ್ತದೆ. ನಿಮಗೆ (ಅಲ್ಪಸಂಖ್ಯಾತರಿಗೆ) ನಿಮ್ಮ ಹಕ್ಕಿನ ನೆಲೆಯಲ್ಲಿ ಏನು ಸಿಗಬೇಕೋ ಅದು ಸಿಗುತ್ತದೆ’ ಎಂದಿದ್ದಾರೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ರಾಹುಲ್ ಅವರ ಪಕ್ಷವು ಸಂಪತ್ತಿನ ಮರುಹಂಚಿಕೆಯ ಐತಿಹಾಸಿಕ ಹೆಜ್ಜೆಯನ್ನು ಇರಿಸಲಿದೆ. ಇನ್ನೊಂದು ಕಡೆ ಅವರು, ‘ಜಾತಿ ಗಣತಿ’ಯು ಮೊದಲ ಹೆಜ್ಜೆ ಎಂದಿದ್ದಾರೆ. ನಂತರ ಪ್ರತಿ ಸಮುದಾಯಕ್ಕೂ ಅದರ ಪಾಲು ಸಿಗುತ್ತದೆ. ಮನಮೋಹನ್ ಸಿಂಗ್ ಅವರು ಹಲವು ವರ್ಷಗಳ ಹಿಂದೆ ನೀಡಿದ್ದ ಅತ್ಯಂತ ವಿಭಜನಕಾರಿ ಮತ್ತು ಅತ್ಯಂತ ಹಿಂದೂವಿರೋಧಿ ಹೇಳಿಕೆಯನ್ನು ನಾವು ಮರೆಯಬಾರದು. ದೇಶದಲ್ಲಿ ‘ಸಂಪತ್ತಿನ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕು ಇದೆ’ ಎಂದು ಅವರು ಹೇಳಿದ್ದರು.

ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಕಥೆಯನ್ನು ಒಮ್ಮೆ ಅವಲೋಕಿಸೋಣ. ಇಂಡಿಯಾ ಮೈತ್ರಿಕೂಟವು ಅಧಿಕಾರಕ್ಕೆ ಬಂದಲ್ಲಿ ತಾನು ಬಿಹಾರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವುದಾಗಿ, ₹1.6 ಲಕ್ಷ ಕೋಟಿಯ ವಿಶೇಷ ನೆರವು ಒದಗಿಸುವುದಾಗಿ ಅದು ಹೇಳಿದೆ. ಅಲ್ಲದೆ, ಬಿಹಾರದಲ್ಲಿ ಐದು ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ ಮಾಡುವುದಾಗಿ, ಬಿಹಾರದ ಜನರಿಗೆ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿಯೂ ಹೇಳಿದೆ. ಬಡ ಕುಟುಂಬಗಳ ಸಹೋದರಿಯರಿಗೆ ಪ್ರತಿವರ್ಷ ರಕ್ಷಾ ಬಂಧನದ ದಿನ
₹1 ಲಕ್ಷ ನೀಡುವ ಮಾತು ಕೂಡ ಇದೆ. ಮಹಾಲಕ್ಷ್ಮಿ ಹೆಸರಿನ ಯೋಜನೆಯೊಂದರ ಪ್ರಸ್ತಾವ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇದೆ. ಇದು ಬಡ ಕುಟುಂಬಗಳಿಗೆ ಷರತ್ತುರಹಿತವಾಗಿ ಪ್ರತಿವರ್ಷ ₹1 ಲಕ್ಷ ನೀಡುವ ಯೋಜನೆ. 

ಆರ್‌ಜೆಡಿ ಪ್ರಣಾಳಿಕೆಯಲ್ಲಿ ಬಡವರಿಗೆ ₹500ಕ್ಕೆ ಅಡುಗೆ ಅನಿಲ ಸಿಲಿಂಡರ್ ಒದಗಿಸುವ ಪ್ರಸ್ತಾವ ಇದೆ. ಮನೆಯ ಮಹಿಳೆಗೆ ತಿಂಗಳಿಗೆ ₹1,000 ನೀಡುವ, ₹500ಕ್ಕೆ ಅಡುಗೆ ಅನಿಲ ಸಿಲಿಂಡರ್ ನೀಡುವ ಪ್ರಸ್ತಾವ ಡಿಎಂಕೆ ಪ್ರಣಾಳಿಕೆಯಲ್ಲಿದೆ. ತಾನು ಅಧಿಕಾರಕ್ಕೆ ಬಂದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಲೀಟರಿಗೆ ಕ್ರಮವಾಗಿ ₹75 ಹಾಗೂ ₹65 ಆಗಲಿದೆ ಎಂದು ಅದು ಹೇಳಿದೆ.

ಈ ಭರವಸೆಗಳು ತೀರಾ ಅಪಾಯಕಾರಿ.ಒಬ್ಬರಿಗೊಬ್ಬರು ಹೊಂದಿಕೆ ಆಗದ ಹಾಗೂ ಕೆಲವು ಸಂದರ್ಭಗಳಲ್ಲಿ ಹತಾಶೆಗೆ ಒಳಗಾದಂತೆ ಕಾಣುವ ಪಕ್ಷಗಳ ಮೈತ್ರಿಕೂಟಕ್ಕೆ ಮತ ಚಲಾಯಿಸಬೇಕೇ ಎಂಬುದನ್ನು ಮತದಾರರು ತೀರ್ಮಾನಿಸಬೇಕು. ಇಂತಹ ಪಕ್ಷಗಳ ಮೈತ್ರಿಕೂಟವು ಅಧಿಕಾರಕ್ಕೆ ಬಂದಲ್ಲಿ ದೇಶವು ಸುರಕ್ಷಿತವಾಗಿ ಇರುತ್ತದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT