ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎ. ಸೂರ್ಯ ಪ್ರಕಾಶ್ ಅವರ ಬರಹ: ಕಾಂಗ್ರೆಸ್ಸಿನ ಅನುಪಸ್ಥಿತಿ ಐತಿಹಾಸಿಕ ಎಡವಟ್ಟು

Published 4 ಫೆಬ್ರುವರಿ 2024, 20:14 IST
Last Updated 4 ಫೆಬ್ರುವರಿ 2024, 20:14 IST
ಅಕ್ಷರ ಗಾತ್ರ

ಅಯೋಧ್ಯೆಯಲ್ಲಿ ನಿರ್ಮಿಸಿರುವ ನವ್ಯ, ಭವ್ಯ ಮತ್ತು ದಿವ್ಯ ರಾಮ ಮಂದಿರದಲ್ಲಿ ನಡೆದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಕಾಂಗ್ರೆಸ್ಸಿನ ರಾಷ್ಟ್ರೀಯ ನಾಯಕರು ತೀರ್ಮಾನಿಸಿದರು. ಇದು ಜನರ ಭಾವನೆಗಳ ಜೊತೆಗಿನ ಸಂಬಂಧವನ್ನು ಪಕ್ಷವು ಸಂಪೂರ್ಣವಾಗಿ ಕಡಿದುಕೊಂಡಿದೆ ಎಂಬುದಕ್ಕೆ ತೀರಾ ಈಚೆಗಿನ ಹಾಗೂ ಕಣ್ಣಿಗೆ ರಾಚುವಂತಹ ನಿದರ್ಶನ. ಭಾರತವು ತನ್ನ ನಾಗರಿಕತೆಯ ಶಕ್ತಿಯನ್ನು ಮತ್ತೊಮ್ಮೆ ಹೇಳಿಕೊಂಡ ಕ್ಷಣವನ್ನಾಗಿ, ಐದು ಶತಮಾನಗಳ ಹಿಂದಿನ ತಪ್ಪೊಂದನ್ನು ಸರಿಪಡಿಸಿದ ಕ್ಷಣವನ್ನಾಗಿ ಜನರು ಈ ಕಾರ್ಯಕ್ರಮವನ್ನು ಕಂಡಿದ್ದರು.

ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಮೂಲಕ ಬಾಲರಾಮನು ಅಯೋಧ್ಯೆಯಲ್ಲಿನ ಪವಿತ್ರ ಸ್ಥಾನಕ್ಕೆ ಮರಳಿ ಬಂದನು. ಹಿಂದೂ ಸಮುದಾಯದ ಹಲವು ತಲೆಮಾರುಗಳ ಕನಸು ನನಸಾಯಿತು. ಈ ಸ್ಥಳವು ರಾಮನ ಜನ್ಮಸ್ಥಳ ಎಂದು ಹಿಂದೂಗಳು ಸಾವಿರಾರು ವರ್ಷಗಳಿಂದ ನಂಬಿದ್ದಾರೆ. ಈ ಕಾರಣಕ್ಕಾಗಿಯೇ, ಅಯೋಧ್ಯೆಯಲ್ಲಿ ‌ಪ್ರಾಣ ಪ್ರತಿಷ್ಠಾಪನೆ ನಡೆದ ಸಂದರ್ಭದಲ್ಲಿ ದೇಶದ ಪಟ್ಟಣಗಳಲ್ಲಿ, ಹಳ್ಳಿಗಳಲ್ಲಿ, ನಗರಗಳ ಬಡಾವಣೆಗಳಲ್ಲಿ ಭಾವನೆಗಳು ತಾವಾಗಿಯೇ ಉಕ್ಕಿ ಹರಿದವು. ದಿವ್ಯವಾದ ಸೌಂದರ್ಯ ಹೊಂದಿರುವ ಬಾಲರಾಮನ ಮುಖವನ್ನು, ಬಾಲರಾಮನ ವೈಭವಯುತವಾದ ಮೂರ್ತಿಯನ್ನು ಟಿ.ವಿ. ಕ್ಯಾಮೆರಾಗಳು ತೋರಿಸಿದಾಗ ಭಕ್ತರ ಕಣ್ಣಿನಿಂದ ನೀರು ಜಿನುಗಿತು. 

ಹೀಗಿದ್ದರೂ, ಕಾಂಗ್ರೆಸ್ಸಿನ ಹಿರಿಯ ನಾಯಕರು ಮತ್ತು ‘ಇಂಡಿಯಾ’ ಮೈತ್ರಿಕೂಟದ ಬಹುತೇಕ ಪಕ್ಷಗಳ ನಾಯಕರು ಜನರ ನಂಬಿಕೆಗಳನ್ನು ಮತ್ತು ಸಂತಸವನ್ನು ಕಾಣಲು ಅಲ್ಲಿರಲಿಲ್ಲ. ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವು ಹಿಂದೂಗಳಿಗೆ ತಮ್ಮ ಹೆಮ್ಮೆಯ, ಹಕ್ಕಿನ ದೃಢವಾದ ಪ್ರತಿಪಾದನೆಯಾಗಿತ್ತು. ಕಾಂಗ್ರೆಸ್ ಪಕ್ಷವು ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದು ಆ ಪಕ್ಷವು ಜವಾಹರಲಾಲ್ ನೆಹರೂ ಕಾಲದಿಂದಲೂ ಪಾಲಿಸಿಕೊಂಡು ಬಂದಿರುವ ಪೊಳ್ಳು–ಧರ್ಮನಿರಪೇಕ್ಷ ನೀತಿಯ ಅಂತಿಮ ಸಮರ್ಥನೆಯಂತೆ ಹಾಗೂ ಸೋನಿಯಾ ಗಾಂಧಿ ಅವರು ಪಕ್ಷದ ಮೇಲೆ ಹಿಡಿತ ಸಾಧಿಸಿದ ನಂತರ ಆ ನೀತಿಯು ಹಿಂದೂ ವಿರೋಧಿಯಾಗಿ ಬದಲಾಗಿದ್ದುದರ ಅಂತಿಮ ಸಮರ್ಥನೆಯಂತೆ ಕಾಣುತ್ತದೆ. ರಾಹುಲ್ ಗಾಂಧಿ ಅವರು ‘ದೇಶದಲ್ಲಿ ರಾಮನ ಅಲೆ ಇಲ್ಲ’ ಎಂದು ಈಚೆಗೆ ಹೇಳಿರುವುದು ಇದಕ್ಕೆ ಒಂದು ಉದಾಹರಣೆ. ಕೋಟ್ಯಂತರ ಜನರ ಭಾವನೆಗಳ ಬಗ್ಗೆ ರಾಹುಲ್ ಅವರಿಗೆ ತಿಳಿದೇ ಇಲ್ಲ ಎಂಬುದನ್ನು ಈ ಮಾತು ತೋರಿಸುತ್ತದೆ.

ಕಾಂಗ್ರೆಸ್ಸಿನ ನಡೆಯು ವಿಚಿತ್ರವಾಗಿ ಕಾಣುತ್ತಿದೆ. ಏಕೆಂದರೆ, ಜನವರಿ 22ರಂದು ನಡೆದಿದ್ದು ಪೂರ್ವನಿಶ್ಚಿತವಾದ ಕಾರ್ಯಕ್ರಮದಂತೆ ಇತ್ತು. ಒಂದು ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಹತ್ತಿಕ್ಕಲ್ಪಟ್ಟಿದ್ದ ಭಾರತದ ಆತ್ಮವು ಆ ದಿನ ಅಂತೂ ತನ್ನ ದನಿಯನ್ನು ಕಂಡುಕೊಂಡಿತ್ತು. ಅಲ್ಲದೆ, 110 ಕೋಟಿಗೂ ಹೆಚ್ಚು ಹಿಂದೂಗಳು ಇರುವ ದೇಶದಲ್ಲಿ ಕಾಂಗ್ರೆಸ್ಸಿನ ನಡೆಯು ಚುನಾವಣಾ ದೃಷ್ಟಿಕೋನದಿಂದ ಹೆಚ್ಚಿನ ಪ್ರಯೋಜನವನ್ನೇನೂ ತಂದುಕೊಡುವುದಿಲ್ಲ. ದೇಶದ ಹಿಂದೂಗಳು ತಮ್ಮ ಹಿಂದಿನ ಹಿಂಜರಿಕೆಗಳನ್ನೆಲ್ಲ ಮೀರಿ ಆತ್ಮಸಮರ್ಥನೆಯ ಹಾದಿಯನ್ನು ತುಳಿದಿದ್ದಾರೆ. ಅಲ್ಲದೆ, ಕಾಂಗ್ರೆಸ್ ಪಕ್ಷವು 2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ತೋರಿದ ಕಳಪೆ ಸಾಧನೆ, ರಾಷ್ಟ್ರಮಟ್ಟದಲ್ಲಿ ಪಕ್ಷದ ಮತಗಳಿಕೆ ಪ್ರಮಾಣವು ಶೇಕಡ 20ಕ್ಕಿಂತ ಕಡಿಮೆ ಆಗಿದ್ದನ್ನು ಪರಿಗಣಿಸಿದಾಗಲೂ ಈ ನಡೆಯು ವಿಚಿತ್ರವಾಗಿ ಕಾಣಿಸುತ್ತದೆ. ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಖ್ಯಾಬಲವು ಶೇಕಡ 10ಕ್ಕಿಂತ ಕಡಿಮೆ ಆಗಿದೆ.

ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಆಗಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು //ರಾಮನನ್ನು ಕಡೆಗಣಿಸಲು/// ತೀರ್ಮಾನಿಸಿದರು. ಆದರೆ, ಈ ನಡೆಯು ರಾಜಕೀಯವಾಗಿ ವಿವೇಕದ್ದಲ್ಲ ಎಂಬುದು ಪಕ್ಷದ ಇತರ ಕೆಲವರ ಅಭಿಪ್ರಾಯವಾಗಿತ್ತು. ಅವರು ಈ ವಿಚಾರವನ್ನು ಭಿನ್ನವಾಗಿ ನಿಭಾಯಿಸಿದರು. ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಕಮಲ್ ನಾಥ್, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಕ್ಕು ಮತ್ತು ಅವರ ಸಂಪುಟ ಸಹೋದ್ಯೋಗಿ ಇಲ್ಲಿ ಉಲ್ಲೇಖಾರ್ಹರು. ಸುಕ್ಕು ಅವರು ತಾವು ಜನವರಿ 22ರಂದು ತಮ್ಮ ಮನೆಯಲ್ಲಿ ಸಂಜೆ ದೀಪ ಉರಿಸುವುದಾಗಿ ಹೇಳಿದರು, ರಾಜ್ಯದ ಜನ ಕೂಡ ಪ್ರಾಣ ಪ್ರತಿಷ್ಠಾಪನೆಯ ಕಾರಣಕ್ಕಾಗಿ ಮನೆಗಳಲ್ಲಿ ದೀಪ ಉರಿಸುವಂತೆ ಕರೆನೀಡಿದರು. ಅಲ್ಲದೆ, ಪ್ರಾಣ ಪ್ರತಿಷ್ಠಾಪನೆಯ ದಿನ ಕೇಂದ್ರ ಸರ್ಕಾರವು ಅರ್ಧ ದಿನ ರಜೆ ಘೋಷಿಸಿದರೆ ತಾವು ಒಂದು ದಿನ ರಜೆ ಘೋಷಿಸಿದರು.

ಸಿದ್ದರಾಮಯ್ಯ ಅವರು ಜನವರಿ 22ರಂದು ಬೆಂಗಳೂರಿನ ಮಹಾದೇವಪುರದ ರಾಮ ದೇವಸ್ಥಾನದಲ್ಲಿ ನಡೆದ ಪ್ರಾಣ ಪ್ರತಿಷ್ಠಾಪನೆ ಕಾರ್ಯದಲ್ಲಿ ಭಾಗಿಯಾಗಿದ್ದರು. ರಾಮನಿಗೆ ಪೂಜೆ ಸಲ್ಲಿಸಿದರು. ಅಲ್ಲಿ ಸೇರಿದ್ದವರಿಗೆ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುವಂತೆಯೂ ಸಿದ್ದರಾಮಯ್ಯ ಹೇಳಿದರು. ‘ಜೈ ಶ್ರೀರಾಮ್’ ಎಂಬ ಘೋಷಣೆಯು ಎಲ್ಲರಿಗೂ ಸೇರಿದ್ದು ಎಂದು ಅವರು ಕಾರ್ಯಕ್ರಮದಲ್ಲಿ ಸೇರಿದ್ದ ಜನರಿಗೆ ನೆನಪಿಸಿದರು. ಇದನ್ನು ಯಾರೋ ಒಬ್ಬರು ತಮ್ಮದು ಎಂದು ಹೇಳಿಕೊಳ್ಳುವಂತಿಲ್ಲ ಎಂದರು. ‘ಇಡೀ ದೇಶಕ್ಕೆ ರಾಮನಲ್ಲಿ ನಂಬಿಕೆ ಇದೆ. ಎಲ್ಲರೂ ಶ್ರೀರಾಮನನ್ನು ಪೂಜಿಸುತ್ತಾರೆ, ಹಿಂದೂಗಳು ಹೆಚ್ಚಾಗಿ ಪೂಜಿಸುತ್ತಾರೆ. ನಾವು ಕೂಡ ಶ್ರೀರಾಮಚಂದ್ರನ ಪರಮ ಭಕ್ತರು. ನಾನು ಕೂಡ ನನ್ನ //ಕ್ಷೇತ್ರದಲ್ಲಿ/// ರಾಮನ ದೇವಸ್ಥಾನವನ್ನು ನಿರ್ಮಿಸಿದ್ದೇನೆ. ದೇಶದಲ್ಲಿ ರಾಮರಾಜ್ಯ ಸ್ಥಾಪನೆ ಆಗಲಿ ಎಂದು ಎಲ್ಲರೂ ಆಶಿಸುತ್ತಾರೆ. ಕುವೆಂಪು ಹೇಳಿದ ಸರ್ವಜನಾಂಗದ ಶಾಂತಿಯ ತೋಟವು ರಾಮ ರಾಜ್ಯದ ಹೃದಯಭಾಗದಲ್ಲಿರುತ್ತದೆ. ಸಹಿಷ್ಣುತೆ ಮತ್ತು ಸಹಬಾಳ್ವೆ ಇಲ್ಲಿ ಪ್ರಮುಖ ಅಂಶಗಳು’ ಎಂದು ಸಿದ್ದರಾಮಯ್ಯ ಹೇಳಿದರು. ‘ವಿದೇಶಿಯರಿಂದ ಹಲವು ದಾಳಿಗಳು ನಮ್ಮ ಮೇಲೆ ನಡೆದರೂ ನಮ್ಮ ಸಂಸ್ಕೃತಿ, ನಮ್ಮ ಧರ್ಮ ಮತ್ತು ನಮ್ಮ ದೇವರು ನಮ್ಮನ್ನು ಒಟ್ಟಾಗಿ ಇರಿಸಿವೆ’ ಎಂದು ಸಿದ್ದರಾಮಯ್ಯ ಅವರು ಮಾತು ಮುಗಿಸಿದರು.

ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷವನ್ನು ನಿಯಂತ್ರಿಸುತ್ತಿರುವ, ಆ ಪಕ್ಷದ ಮಾಲೀಕತ್ವ ಹೊಂದಿರುವ ಕುಟುಂಬಕ್ಕೆ ಈ ರಾಜಕೀಯ ಪ್ರಜ್ಞೆ ಇದ್ದಿದ್ದರೆ!

ತಾವು ಹನುಮಂತನ ಭಕ್ತ ಎಂದು ಹೇಳಿಕೊಂಡಿರುವ ಕಮಲ್ ನಾಥ್ ಅವರು ಅಯೋಧ್ಯೆಯಲ್ಲಿ ನಡೆದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಸ್ವಾಗತಿಸಿದರು. ಈ ಕ್ಷಣಕ್ಕಾಗಿ ಜನರು ಬಹುಕಾಲದಿಂದ ಕಾಯುತ್ತಿದ್ದರು ಎಂದರು. ಈ ಮಂದಿರವನ್ನು ಎಲ್ಲರ ಸಮ್ಮತಿಯೊಂದಿಗೆ ನಿರ್ಮಿಸಲಾಗುತ್ತಿದೆ. ಇದು ಭಾರತದಲ್ಲಿ ಮಾತ್ರ ಸಾಧ್ಯ ಎಂದು ಹೇಳಿದರು. ರಾಮ ಮಂದಿರದ ಗೇಟುಗಳಿಗೆ ಹಾಕಿದ್ದ ಬೀಗವನ್ನು ತೆಗೆಸಿದ್ದು ರಾಜೀವ್ ಗಾಂಧಿ ಅವರು ಎಂದು ಹೇಳುವ ಮೂಲಕ ಒಂದಿಷ್ಟು ರಾಜಕೀಯ ಪ್ರಯೋಜನ ಪಡೆಯುವ ಯತ್ನವನ್ನೂ ಅವರು ಮಾಡಿದರು. ಇಲ್ಲಿ ಗಮನಾರ್ಹ ವಿಷಯವೆಂದರೆ, ರಾಮ ಎಲ್ಲರಿಗೂ ಸೇರಿದವ, ಒಂದು ರಾಜಕೀಯ ಪಕ್ಷವು ರಾಮ ತನ್ನವ ಎಂದು ಹೇಳಿಕೊಳ್ಳುವಂತಿಲ್ಲ ಎಂದು ಕಾಂಗ್ರೆಸ್ಸಿನ ಈ ಮೂರೂ ನಾಯಕರು ಹೇಳಿದರು. ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿ ರಾಮ ಮಂದಿರ ನಿರ್ಮಾಣವಾಗಿದೆ ಎಂದು ಕೂಡ ಕಮಲ್ ನಾಥ್ ಹೇಳಿದರು.

ಹಿಮಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ಸುಕ್ಕು ಅವರಲ್ಲದೆ, ಅವರ ಸಂಪುಟದ ಸಹೋದ್ಯೋಗಿಯೊಬ್ಬರು ಹಿಂದೂವಾಗಿ, ಸನಾತನಿಯಾಗಿ ಅಯೋಧ್ಯೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ತಮ್ಮ ಕರ್ತವ್ಯ ಎಂದರು. ‘ಇತಿಹಾಸ ಸೃಷ್ಟಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಾನು ಬಯಸುವೆ. ನನಗೆ ಆಹ್ವಾನ ಕಳುಹಿಸಿದವರಿಗೆ ನಾನು ಧನ್ಯವಾದ ಅರ್ಪಿಸುವೆ’ ಎಂದರು.

ಇಂತಹ ವಿವೇಕದ ದನಿಗಳಿಗೆ ‘ಹೈಕಮಾಂಡ್’ ಕಿವಿಗೊಟ್ಟಿದ್ದರೆ ಕಾಂಗ್ರೆಸ್ ಪಕ್ಷವು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಪ್ರಸ್ತುತತೆಯನ್ನು ಉಳಿಸಿಕೊಳ್ಳಬಹುದಿತ್ತು. ಅದರಲ್ಲೂ ಮುಖ್ಯವಾಗಿ, ಲೋಕಸಭಾ ಚುನಾವಣೆಯು ಹತ್ತಿರವಾಗುತ್ತಿರುವ ಈ ಹೊತ್ತಿನಲ್ಲಿ ಇದು ಅಗತ್ಯವಾಗಿತ್ತು. ಈಗ ಈ ಪಕ್ಷವು ಈ ಐತಿಹಾಸಿಕ ಅಪರಾಧಕ್ಕಾಗಿ ಚುನಾವಣೆಯಲ್ಲಿ ಬೆಲೆ ತೆರಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT