ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯ–ನಮಸ್ಕಾರ: ಜನಪರವಾಗಿ ಹೊಮ್ಮಿದ ‘ಪದ್ಮ’ ಪ್ರಶಸ್ತಿ

‘ಪದ್ಮ’ ಪ್ರಶಸ್ತಿಯ ಆಯ್ಕೆ ವಿಧಾನವು ಪ್ರಮುಖ ನೇಮಕಾತಿ ಒಳಗೊಂಡಂತೆ ಇತರ ಕ್ಷೇತ್ರಗಳಿಗೂ ವಿಸ್ತರಿಸಲಿ
Last Updated 29 ನವೆಂಬರ್ 2021, 19:31 IST
ಅಕ್ಷರ ಗಾತ್ರ

ರಾಷ್ಟ್ರಪತಿ ಭವನದಲ್ಲಿ ಇತ್ತೀಚೆಗೆ ನಡೆದ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪರಿಸರಪ್ರೇಮಿ 72 ವರ್ಷದ ತುಳಸಿ ಗೌಡ ಅವರು ಬರಿಗಾಲಲ್ಲಿ ನಡೆದುಬಂದು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕ್ಷಣವು ಸದಾಕಾಲ ಮನಸ್ಸಿನ ಭಿತ್ತಿಯಲ್ಲಿ ಉಳಿಯುವ ಚಿತ್ರ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಸಮುದಾಯಕ್ಕೆ ಸೇರಿದ ತುಳಸಿ ಗೌಡ ಅವರಿಗೆ ಗಿಡ, ಸಸ್ಯ, ಮೂಲಿಕೆಗಳ ಬಗ್ಗೆ ಇರುವ ವಿಶೇಷ ಜ್ಞಾನದಿಂದಾಗಿ ಅವರನ್ನು ‘ಅರಣ್ಯ ವಿಶ್ವಕೋಶ’ ಎಂದು ಕರೆಯಲಾಗುತ್ತದೆ. ಪರಿಸರ ಸಂರಕ್ಷಣೆಯ ತಮ್ಮ ಅಭಿಯಾನದಲ್ಲಿ ಅವರು ಸುಮಾರು 30,000 ಸಸಿಗಳನ್ನು ನೆಟ್ಟು ಮರಗಳಾಗಿ ಬೆಳೆಸಿದ್ದಾರೆ.

ಕೆಲವೇ ವರ್ಷಗಳ ಹಿಂದಿನವರೆಗೂ ಆಕೆಯಂತಹ ವ್ಯಕ್ತಿ, ರಾಷ್ಟ್ರಪತಿ ಭವನದ ಹೊಳೆಯುವ ಸಮಾ ರಂಭದಲ್ಲಿ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಬಹುದು ಎನ್ನುವುದನ್ನು ಯಾರೂ ಕಲ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಭಾರತದ ದೂರದ ಮೂಲೆಮೂಲೆಗಳಲ್ಲಿ ಎಲೆಮರೆ ಕಾಯಿಗಳಂತಿರುವ ವ್ಯಕ್ತಿಗಳಿಗೂ ಸಿಗುವಂತೆ ಪದ್ಮ ಪ್ರಶಸ್ತಿಗಳನ್ನು ಪ್ರಜಾಸತ್ತಾತ್ಮಕಗೊಳಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ನಿರಂತರ ಯತ್ನಗಳಿಂದ ಇದು ಈಗ ಸಾಧ್ಯವಾಗಿದೆ.

ಸ್ವಾರ್ಥಕ್ಕಿಂತ ಸೇವೆಯನ್ನೇ ಮುಖ್ಯವಾಗಿಸಿಕೊಂಡ ಇಂತಹ ಗಮನಾರ್ಹ ವ್ಯಕ್ತಿಗಳಿಗೆ ಪದ್ಮ ಪ್ರಶಸ್ತಿ ನೀಡುವ ಪ್ರಕ್ರಿಯೆ, ಮೋದಿಯವರು ಪ್ರಧಾನಿಯಾದ ನಂತರ ಆರಂಭವಾಯಿತು. 2017ರ ಜನವರಿ ಹಾಗೂ ನಂತರದಲ್ಲಿ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದಾಗಿನಿಂದ ಇಂತಹ ಎಲೆಮರೆಕಾಯಿಗಳಂತಹ ವ್ಯಕ್ತಿಗಳ ಗುರುತಿಸುವಿಕೆ ಗಣನೀಯವಾಗಿ ಹೆಚ್ಚಿತು. ಇಂತಹ ಪ್ರಶಸ್ತಿ ಪುರಸ್ಕೃತರ ಸಂಕ್ಷಿಪ್ತ ಪರಿಚಯವನ್ನು ಅವರ ಸಾಧನೆಗಳೊಂದಿಗೆ 2017ರ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದಾಗ ರಾಷ್ಟ್ರದಾದ್ಯಂತ ಅಚ್ಚರಿಯ ಸಂಚಲನ ಮೂಡಿತ್ತು.ಈ ಪಟ್ಟಿಯಲ್ಲಿ ಪಶ್ಚಿಮ ಬಂಗಾಳದ ಜಲ್‌ಪೈಗುರಿ ಜಿಲ್ಲೆಯ ಕರೀಮುಲ್ ಹಕ್ ಅವರ ಹೆಸರಿತ್ತು. ಅವರು ತಮ್ಮ ಜಿಲ್ಲೆಯಲ್ಲಿ ‘ಆಂಬುಲೆನ್ಸ್ ದಾದಾ’ ಎಂದೇ ಪ್ರಸಿದ್ಧರಾಗಿದ್ದವರು. ಸಮರ್ಪಕ ರಸ್ತೆ, ಸಾರಿಗೆ ಹಾಗೂ ಆರೋಗ್ಯ ಸೇವೆಗಳಂತಹ ಮೂಲ ಸೌಕರ್ಯ ಗಳಿಲ್ಲದ ದೂರದ ಗ್ರಾಮದಲ್ಲಿ ಹಕ್ ಅವರ ವಾಸ್ತವ್ಯ. ಹೀಗಾಗಿ, ಕಾಯಿಲೆಯಿಂದ ನರಳುತ್ತಿದ್ದ ತಾಯಿಯನ್ನು ಸಕಾಲದಲ್ಲಿ ಆಸ್ಪತ್ರೆಗೆ ಸಾಗಿಸಲಾಗಲಿಲ್ಲ ಅವರಿಗೆ. ಈ ವೈಯಕ್ತಿಕ ದುರಂತವು ವೈದ್ಯಕೀಯ ಗಮನದ ತುರ್ತು ಅಗತ್ಯ ಇರುವ ವ್ಯಕ್ತಿಗಳಿಗೆ ತಾವು ಯಾವ ನೆರವು ನೀಡಬಹುದು ಎಂಬುದರ ಕುರಿತಾಗಿ ಆಲೋಚಿಸುವಂತೆ ಮಾಡಿತು. ಪರಿಣಾಮವಾಗಿ, ದೂರದ ಪ್ರದೇಶಗಳಲ್ಲಿ ವಾಸಿಸುವ ವಿಶೇಷವಾಗಿ ಮಹಿಳೆಯರಿಗೆ ನೆರವು ನೀಡಲು ತಮ್ಮ ಮೋಟರ್ ಸೈಕಲ್ ಅನ್ನೇ ಆಂಬುಲೆನ್ಸ್ ಆಗಿ ಪರಿವರ್ತಿಸುವ ನಿರ್ಧಾರ ಕೈಗೊಂಡರು. ಹೆರಿಗೆಗಾಗಿ ಹತ್ತಿರದ ಆಸ್ಪತ್ರೆಗೆ ತೆರಳಬೇಕಿರುವ ಗರ್ಭಿಣಿಯರಿಗೆ ಉಚಿತವಾಗಿ ತಮ್ಮ ಬೈಕ್ ಆಂಬುಲೆನ್ಸ್ ಸೇವೆ ಒದಗಿಸುವುದಾಗಿ ಅವರು ಪ್ರಕಟಿಸಿದರು. ಆ ಜಿಲ್ಲೆಯಲ್ಲಿ ಮಹಿಳೆಯರಿಗೆ ಇದು ನಿಜಕ್ಕೂ ಒಂದು ವರವಾಗಿ ಪರಿಣಮಿಸಿತ್ತು.

ಎಲೆಮರೆಕಾಯಿಗಳಂತೆ ಇರುವವರನ್ನು ಹುಡುಕಿ ಗೌರವಿಸಬೇಕೆಂದು ಪ್ರಧಾನಿಯವರು ಪದ್ಮ ಪ್ರಶಸ್ತಿ ಸಮಿತಿಗೆ ಪ್ರೇರಣೆ ನೀಡಿದಾಗಲಿಂದ, ಸಂಶೋಧಕ ತಂಡವೊಂದು ಮಾಹಿತಿಗಳನ್ನು ಎಲ್ಲಿಂದೆಲ್ಲಾ ಹುಡುಕಿ ತೆಗೆದು ಸಮಿತಿಯ ಪರಿಶೀಲನೆಗೆ ನೀಡುತ್ತದೆ. ಬಹಳಷ್ಟು ಸಂದರ್ಭಗಳಲ್ಲಿ ಇಂತಹವರು ಯಾರಿಂದಲೂ ಅಧಿಕೃತವಾಗಿ ನಾಮಕರಣಗೊಂಡೂ ಇರುವುದಿಲ್ಲ. ಪ್ರಶಸ್ತಿ ಲಭಿಸಿದ ಬಗ್ಗೆ ಸರ್ಕಾರದ ನಿರ್ಧಾರವನ್ನು ಇಂತಹ ಪ್ರಶಸ್ತಿ ಪುರಸ್ಕೃತರಿಗೆ ತಿಳಿಸಿದಾಗ ಅವರಿಗೆ ಅದು ದೊಡ್ಡ ಅಚ್ಚರಿಯೇ ಆಗಿರುತ್ತದೆ. ಇಂತಹ ಒಬ್ಬರು ವ್ಯಕ್ತಿ, ದಾರಿಪಲ್ಲಿ ರಾಮಯ್ಯ. ಅರಣ್ಯ ಸಂಪತ್ತು ಸುಧಾರಿಸುವುದಕ್ಕಾಗಿ, ತಮ್ಮ ಸೈಕಲ್‌ನಲ್ಲಿ ವ್ಯಾಪಕವಾಗಿ ಸಂಚರಿಸಿ ಸಸಿಗಳನ್ನು ನೆಟ್ಟವರು ಅವರು.

2019ರಲ್ಲಿ, 66 ವರ್ಷದ ಮದುರೆ ಚಿನ್ನ ಪಿಳ್ಳೈ ಅವರನ್ನು ಪ್ರಶಸ್ತಿ ಸಮಿತಿ ಆಯ್ಕೆ ಮಾಡಿತು. ಐದು ದಶಕಗಳ ಹಿಂದೆಯೇ ಸಮುದಾಯ ಆಧಾರಿತ ಕಿರು ಹಣಕಾಸು ಯೋಜನೆಯನ್ನು ಈ ಅನಕ್ಷರಸ್ಥ ಮಹಿಳೆ ಜನಪ್ರಿಯಗೊಳಿಸಿದ್ದರು. ಅದೇ ವರ್ಷ ಗೌರವಿಸಲಾದ ಮತ್ತೊಬ್ಬರು ಉನ್ನತ ಸಾಧಕರು, ಲಡಾಖ್‌ನ ‘ಅದ್ಭುತ ಸರ್ಜನ್’ ಡಾ. ತ್ಸೆರಿಂಗ್ ನೋರ್ಬೂ. ಕಳೆದ 50 ವರ್ಷಗಳಿಂದ ಈ ವೈದ್ಯರು ಪ್ರತೀ ವರ್ಷ 500 ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾರೆ. ಯಾವುದೇ ಶುಲ್ಕ ತೆಗೆದುಕೊಳ್ಳದೆ 15,000 ಮಹಿಳೆಯರ ಹೆರಿಗೆಗೆ ಸಹಾಯ ಮಾಡಿದಂತಹ ಕರ್ನಾಟಕದ ತುಮಕೂರು ಜಿಲ್ಲೆಯ ಸೂಲಗಿತ್ತಿ ನರಸಮ್ಮ ಅವರು 2018ರ ಪದ್ಮ ಪುರಸ್ಕೃತರ ಪಟ್ಟಿಯಲ್ಲಿದ್ದರು.

ಇತ್ತೀಚಿನ ಪದ್ಮ ಪ್ರಶಸ್ತಿ ಪಟ್ಟಿಯಲ್ಲಿ, ತುಳಸಿ ಗೌಡ ಅವರಲ್ಲದೆ ಹರೇಕಳ ಹಾಜಬ್ಬ ಅವರ ಹೆಸರೂ ಇತ್ತು. ಪ್ರಾಥಮಿಕ ಶಾಲೆ ಕಟ್ಟಿಸುವುದಕ್ಕಾಗಿ ಕಿತ್ತಳೆ ಹಣ್ಣು ಮಾರಿ ಸಂಪಾದಿಸಿದ ಗಳಿಕೆಯನ್ನು ಮೀಸಲಿಟ್ಟ ವ್ಯಕ್ತಿ ಅವರು. ಇಂತಹ ಸಾಧನೆಗಳನ್ನು ಹೇಳುತ್ತಲೇ ಹೋಗಬಹುದು. ಆದರೆ ಕೆಲವು ಕತೆಗಳು ಮಾದರಿಯಾಗುವಂತಹವು ಹಾಗೂ ಮನ ಕಲಕುವಂತಹವು. ಒಡಿಶಾದ ಚಹಾ ಮಾರಾಟಗಾರ ದೇವರಪಲ್ಲಿ ಪ್ರಕಾಶ ರಾವ್ ಅವರ ಕತೆ ಅಂತಹದ್ದು. ಅವರನ್ನು ‘ಚಹಾ ಮಾರುವ ಗುರು’ ಎಂದೇ ಕರೆಯಲಾಗುತ್ತದೆ. ಕೊಳೆಗೇರಿಗಳಲ್ಲಿ ಬದುಕುತ್ತಿರುವ ಮಕ್ಕಳ ಶಿಕ್ಷಣಕ್ಕಾಗಿ, ತಮ್ಮ ಚಹಾ ಅಂಗಡಿಯಿಂದ ಬಂದ ವರಮಾನದಲ್ಲಿ ಅರ್ಧದಷ್ಟನ್ನು ಎತ್ತಿಡುತ್ತಾರೆ. ‘ಆಶಾ ಓ ಆಶ್ವಾಸನ’ ಎಂಬ ಹೆಸರಿನ ಶಾಲೆಯನ್ನು ಅವರು ಆರಂಭಿಸಿದ್ದಾರೆ. ಸೇವೆ ಮಾಡುವುದರ ಬಗ್ಗೆ ಉತ್ಕಟ ಕಳಕಳಿ ಇರುವಂತಹ ವ್ಯಕ್ತಿಗಳು ಇವರು. ಆದರೆ ಇದಕ್ಕೆ ಮಾನ್ಯತೆ ದೊರೆಯಬೇಕೆಂಬ ನಿರೀಕ್ಷೆ ಇಟ್ಟುಕೊಂಡ ವ್ಯಕ್ತಿಗಳಲ್ಲ. ಅದೂ ರಾಷ್ಟ್ರ ಮಟ್ಟದ ಮಾನ್ಯತೆಯನ್ನಂತೂ ಬಯಸಿದವರೇ ಅಲ್ಲ.

ಜಗದೀಶ್ ಲಾಲ್ ಅಹುಜಾ ಅವರ ಹೆಸರು 2020ರ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿತ್ತು. ಚಂಡೀಗಡದ ಪ್ರಮುಖ ಆಸ್ಪತ್ರೆಯೊಂದರ ಹೊರಗೆ ರೋಗಿಗಳು ಹಾಗೂ ಅವರ ಬಂಧುಗಳಿಗೆ ಉಚಿತ ಆಹಾರ ಪೂರೈಕೆ ಮಾಡುತ್ತಾರೆ 84 ವರ್ಷದ ಈ ಹಿರಿಯರು.

Caption
Caption

ಏಳು ವರ್ಷಗಳ ಹಿಂದೆ, ಮೋದಿಯವರು ಪ್ರಧಾನಿಯಾದಾಗ, ತಾವು ದೆಹಲಿಯ ಅಧಿಕಾರ ಮೊಗಸಾಲೆಗಳಿಗೆ ‘ಹೊರಗಿನವರು’ ಎಂದು ಹೇಳಿಕೊಂಡಿದ್ದರು. ಏಕೆಂದರೆ ತಮ್ಮ ಬದುಕಿನ ಬಹು ಭಾಗವನ್ನು ಅವರು ಗುಜರಾತ್‌ನಲ್ಲಿ ಹಾಗೂ ಆರ್‌ಎಸ್ಎಸ್ ಪ್ರಚಾರಕರಾಗಿ ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಕಳೆದಿದ್ದರು. ದೇಶದ ಉದ್ದಗಲಕ್ಕೆ ಮೋದಿಯವರು ನಡೆಸಿದ ಸಂಚಾರಗಳಿಂದಾಗಿ, ತಾವೇ ಎಲ್ಲರಿಗಿಂತ ಮೇಲೆಂದುಕೊಳ್ಳುವಂತಹ ದೆಹಲಿಯ ಲುಟೆನ್ಸ್ ಮಂದಿಯ ಪ್ರತಿಷ್ಠೆ ಹಾಗೂ ರಾಷ್ಟ್ರದ ಯಾವುದೋ ಮೂಲೆಯಲ್ಲಿ ಪ್ರಚಾರದ ಬೆಳಕಿಲ್ಲದೆ ಅರ್ಥಪೂರ್ಣ ಕೆಲಸ ಮಾಡುವ ಲಕ್ಷಾಂತರ ಜನರ ಮುಗ್ಧತೆಯ ನಡುವಿನ ವೈರುಧ್ಯಗಳನ್ನು ಗ್ರಹಿಸುವುದು ಅವರಿಗೆ ಸಾಧ್ಯವಾಗಿತ್ತು. ಬಹುಶಃ ಈ ಗ್ರಹಿಕೆಯು ರಾಷ್ಟ್ರ ನಿರ್ಮಾಣಕ್ಕೆ ಸದ್ದಿಲ್ಲದೆ ಕೊಡುಗೆ ಸಲ್ಲಿಸುತ್ತಿರುವ ಒಳ್ಳೆಯ ವ್ಯಕ್ತಿಗಳನ್ನು ಗುರುತಿಸಲು ಪದ್ಮ ಪ್ರಶಸ್ತಿ ತೀರ್ಪುಗಾರ ಮಂಡಳಿಗೆ ಉತ್ತೇಜನ ನೀಡಲು ಮೋದಿಯವರಿಗೆ ಪ್ರೇರಣೆಯಾಗಿರಬೇಕು. ಇದರಿಂದಾಗಿ, ಕನಿಷ್ಠ ಶೇಕಡ 20ರಷ್ಟು ಪ್ರಶಸ್ತಿಗಳು ಇಂತಹ ವ್ಯಕ್ತಿಗಳಿಗೆ ಹೋಗುತ್ತವೆ.

ಹೀಗೆಂದಾಗ, ದೆಹಲಿ ಮತ್ತು ಮುಂಬೈಗಳ ಉನ್ನತ ಸಾಧಕರನ್ನು ಪ್ರಶಸ್ತಿಯಿಂದ ಹೊರಗಿಡಬೇಕು ಎಂದು ಅರ್ಥವಲ್ಲ. ರಾಷ್ಟ್ರೀಯ ಮಹತ್ವದ ಪ್ರತಿಷ್ಠಿತ ಸಂಸ್ಥೆಗಳು ದೆಹಲಿಯಲ್ಲಿವೆ. ಇಂತಹ ಸಂಸ್ಥೆಗಳ ನೇತೃತ್ವ ವಹಿಸಿರುವವರನ್ನು ಗುರುತಿಸಬೇಕು. ಉದಾಹರಣೆಗೆ, ಕೋವಿಡ್- 19ರ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಏಮ್ಸ್ ಹಾಗೂ ಐಸಿಎಂಆರ್‌ಗಳಂತಹ ಸಂಸ್ಥೆಗಳು ಸಾಂಕ್ರಾಮಿಕವನ್ನು ನಿಯಂತ್ರಿಸಲು ನಿಸ್ವಾರ್ಥವಾಗಿ ಶ್ರಮಿಸಿದ್ದು ಮಾನ್ಯತೆಗೆ ಅರ್ಹವಾಗಿವೆ.

ಐದು ವರ್ಷಗಳ ಹಿಂದೆ ಈ ಪರಿವರ್ತನೆ ಉಂಟಾ ದಾಗ, ದೆಹಲಿಯ ಲುಟೆನ್ಸ್ ಮಂದಿಗೆ ಪದ್ಮ ಪ್ರಶಸ್ತಿಯ ಕ್ಷಣವನ್ನು ಸಾಧಾರಣ ಪೋಷಾಕಿನಲ್ಲಿ, ಕೆಲವೊಮ್ಮೆ ಚಪ್ಪಲಿಯನ್ನೂ ಧರಿಸದೆ ಬರುವ ಸಾಧಾರಣ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವುದು ಕಷ್ಟವಾದಂತಿತ್ತು. ಜನಪರ ಪದ್ಮ ಪ್ರಶಸ್ತಿಯ ಈ ವಿಧಾನವು ಸರ್ಕಾರ ಮಾಡುವ ಪ್ರಮುಖ ನೇಮಕಾತಿಗಳಂತಹ ಇತರ ಕ್ಷೇತ್ರಗಳಿಗೂ ವಿಸ್ತರಣೆಗೊಂಡು ರಾಷ್ಟ್ರದ ವಿವಿಧ ಭಾಗಗಳ ವ್ಯಕ್ತಿಗಳ ಸಮರ್ಪಕ ಪ್ರಾತಿನಿಧ್ಯಕ್ಕೆ ಅನುವು ಮಾಡಿಕೊಡುವಂತಾಗಲಿ ಎಂಬುದು ಎಲ್ಲರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT