ಭಾನುವಾರ, ಜುಲೈ 3, 2022
26 °C
ನೇತಾಜಿ ಕುರಿತ ಹೂತಿಟ್ಟ ಸತ್ಯಗಳನ್ನು ಹೊಸ ಪುಸ್ತಕವೊಂದು ಹೊರತೆಗೆದಿದೆ

ನೇತಾಜಿ: ಬದುಕಿನ ಮರು ಅವಲೋಕನ

ಎ. ಸೂರ್ಯ ಪ್ರಕಾಶ್ Updated:

ಅಕ್ಷರ ಗಾತ್ರ : | |

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೆಯ ಜನ್ಮ ದಿನಾಚರಣೆ ಕಾರ್ಯಕ್ರಮಗಳಿಗೆ ಇಂದು (ಜ. 23) ಚಾಲನೆ ನೀಡಲಾಗುತ್ತದೆ. ಭಾರತದ ಮಹಾನ್ ದೇಶಭಕ್ತರಲ್ಲಿ ಒಬ್ಬರಾದ ನೇತಾಜಿಯವರ ಧೈರ್ಯ, ಬದ್ಧತೆ, ದೃಢನಿಶ್ಚಯಗಳ ಬಗ್ಗೆ ತಿಳಿದುಕೊಳ್ಳಲು ವರ್ಷಪೂರ್ತಿ ನಡೆಯುವ ಈ ಕಾರ್ಯಕ್ರಮಗಳು ದೇಶವಾಸಿಗಳಿಗೆ ನೆರವಾಗುತ್ತವೆ.

ನೇತಾಜಿ ಅವರ ವ್ಯಕ್ತಿತ್ವದ ಬಗ್ಗೆ ಭಾರತೀಯರು ಯಾವತ್ತಿಗೂ ಆಕರ್ಷಣೆ ಹೊಂದಿದ್ದಾರೆ, ಅವರ ಬಗ್ಗೆ ಎಂದಿಗೂ ಬತ್ತದ ಪ್ರೀತಿಯನ್ನು ಹೊಂದಿದ್ದಾರೆ. ನೇತಾಜಿ ಅವರನ್ನು ಸ್ಮರಿಸಿಕೊಳ್ಳಲು ಜನ ದೇಶದಾದ್ಯಂತ ಸ್ಮಾರಕಗಳನ್ನು ನಿರ್ಮಿಸಿರುವುದು ಈ ಮಾತಿಗೆ ಸಾಕ್ಷಿ. ನೇತಾಜಿ ಅವರು ಹುಟ್ಟಿದ್ದು ಬಂಗಾಳದಲ್ಲಿಯಾದರೂ ಎಲ್ಲ ರಾಜ್ಯಗಳ ಜನರ ಗೌರವಕ್ಕೆ ಅವರು ಪಾತ್ರರಾಗಿದ್ದರು. ಆ ಗೌರವ ಅದೆಷ್ಟು ಇದೆಯೆಂದರೆ, ದಕ್ಷಿಣ ಭಾರತದ ಕರ್ನಾಟಕ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳ ಪ್ರತೀ ಪಟ್ಟಣ, ಹಲವು ಹಳ್ಳಿಗಳಲ್ಲಿ ಕೂಡ ‘ನೇತಾಜಿ ವೃತ್ತ’, ‘ನೇತಾಜಿ ರಸ್ತೆ’ ಅಥವಾ ನೇತಾಜಿಯವರ ಪ್ರತಿಮೆ ಇದೆ. ಇವೆಲ್ಲ ಸಾಧ್ಯವಾಗಿದ್ದು ಜನರ ಒತ್ತಾಸೆಯಿಂದಾಗಿ. ಇದಕ್ಕೂ ಯಾವುದೇ ಸರ್ಕಾರಕ್ಕೂ ಸಂಬಂಧ ಇಲ್ಲ. ನೇತಾಜಿಯವರ ನೆನಪನ್ನು ಹಸಿರಾಗಿ ಇರಿಸಲು, ಅವರ ಪರಂಪರೆಯನ್ನು ಉಳಿಸಲು ಸರ್ಕಾರದ ಬೆಂಬಲ ಬೇಕಾಗಿಲ್ಲ, ಸರ್ಕಾರದ ಜಾಹೀರಾತು ಕೂಡ ಬೇಕಿಲ್ಲ. ನೇತಾಜಿ ಅವರು ರಾಷ್ಟ್ರ ನಾಯಕರ ಸಾಲಿನಲ್ಲಿ ಎತ್ತರದ ಸ್ಥಾನ ಪಡೆದಿರಲು ಕಾರಣ ಇದು.

ಇದು ನಮ್ಮನ್ನು ಬಹುಮುಖ್ಯ ಪ್ರಶ್ನೆಯೊಂದರ ಬಳಿ ತಂದು ನಿಲ್ಲಿಸುತ್ತದೆ. ಬ್ರಿಟಿಷರು ಭಾರತವನ್ನು ಅವಸರದಲ್ಲಿ ತೊರೆದಿದ್ದಕ್ಕೆ ಕಾರಣವೇನು? ಈ ಪ್ರಶ್ನೆಯನ್ನು ಮುಂದಿನ ವರ್ಷದಲ್ಲಿ ದೇಶದೆಲ್ಲೆಡೆ ಎತ್ತಲಾಗುತ್ತದೆ, ಉತ್ತರಿಸಲಾಗುತ್ತದೆ. 1947ರ ಆಗಸ್ಟ್‌ನಲ್ಲಿ ಭಾರತವನ್ನು ತೊರೆಯಲು ಬ್ರಿಟಿಷ್ ಸರ್ಕಾರ ನಿರ್ಣಯ ಕೈಗೊಳ್ಳಲು ಕಾರಣವಾದ ವಿದ್ಯಮಾನಗಳ ಬಗ್ಗೆ ಹೊಸ ನೋಟವೊಂದನ್ನು ಹರಿಸುವ ವಿಚಾರಗಳು ನೇತಾಜಿ ಸುಭಾಷ್ ಬೋಸ್–ಐಎನ್‌ಎ ಟ್ರಸ್ಟ್‌ ಈಚೆಗೆ ಪ್ರಕಟಿಸಿದ ಪುಸ್ತಕವೊಂದರಲ್ಲಿ ಇವೆ. ‘ನೇತಾಜಿ: ಭಾರತದ ಸ್ವಾತಂತ್ರ್ಯ ಮತ್ತು ಬ್ರಿಟಿಷ್ ಕಡತಗಳು’ ಎಂಬುದು ಪುಸ್ತಕದ ಹೆಸರು. ಕಲ್ಯಾಣ್ ಕುಮಾರ್ ಡೇ ಇದನ್ನು ಬರೆದಿದ್ದಾರೆ. ಬ್ರಿಟಿಷರ ಮನಸ್ಸು ತಕ್ಷಣಕ್ಕೆ ಬದಲಾಗಿದ್ದರ ಕುರಿತು ಬೆಳಕು ಚೆಲ್ಲುವ ಹಲವು ಪ್ರಮುಖ ವರದಿಗಳು ಹಾಗೂ ಕಡತಗಳನ್ನು ಪುಸ್ತಕವು ಒಳಗೊಂಡಿದೆ. ವಿವಿಧ ಪ್ರಾಂತ್ಯಗಳ ಗವರ್ನರ್‌ಗಳು ಹಾಗೂ ಗುಪ್ತಚರ ವಿಭಾಗದ ವರದಿಗಳು ಇವು. 1940ರ ದಶಕದ ಮಧ್ಯಭಾಗದ ವೇಳೆಗೆ, ಬೋಸ್ ಅವರ ಅಪಾರ ಜನಪ್ರಿಯತೆ, ಮಿಲಿಟರಿಯನ್ನು ಬಳಸಿ ವಸಾಹತುಶಕ್ತಿಯನ್ನು ದೇಶದಿಂದ ಹೊರಹಾಕಲು ಅವರು ಆರಂಭಿಸಿದ್ದ ‘ಇಂಡಿಯನ್ ನ್ಯಾಷನಲ್ ಆರ್ಮಿ’ಗೆ (ಐಎನ್‌ಎ) ದೇಶದಾದ್ಯಂತ ವ್ಯಕ್ತವಾಗುತ್ತಿದ್ದ ಮೆಚ್ಚುಗೆ ಮತ್ತು ಸಹಾನುಭೂತಿಯನ್ನು ಕಂಡು ಬ್ರಿಟಿಷರು ಭೀತಿಗೆ ಒಳಗಾಗಿದ್ದರು ಎಂಬುದನ್ನು ಈ ವರದಿಗಳು ಸೂಚಿಸುತ್ತವೆ. ಇದರಿಂದಾಗಿ ಬಾಂಬೆಯ ನೌಕಾದಳದಲ್ಲಿ ಮತ್ತು ಇತರೆಡೆಗಳಲ್ಲಿ ದಂಗೆ, ಮದ್ರಾಸ್ ಮತ್ತು ಪುಣೆ ಸೇರಿದಂತೆ ಕೆಲವು ಸೇನಾ ಶಿಬಿರಗಳಲ್ಲಿ ಬಂಡಾಯ ಉಂಟಾಗಿತ್ತು.

1946ರಲ್ಲಿ ಐಎನ್‌ಎ ಅಧಿಕಾರಿಗಳು ಮತ್ತು ಸೈನಿಕರನ್ನು ಕೋರ್ಟ್‌ ಮಾರ್ಷಲ್‌ಗೆ ಒಳಪಡಿಸುವ ಬ್ರಿಟಿಷರ ತೀರ್ಮಾನ ಹಾಗೂ ಅದಕ್ಕೆ ದೇಶದಾದ್ಯಂತ ವ್ಯಕ್ತವಾದ ಆಕ್ರೋಶವು ದೊಡ್ಡ ಪರಿಣಾಮ ಬೀರಿತು. ನೇತಾಜಿ ಅವರ ಕರೆಗೆ ಓಗೊಟ್ಟು, ಭಾರತದ ವಿಮೋಚನೆಯ ಉದ್ದೇಶದಿಂದ ಆಗ್ನೇಯ ಏಷ್ಯಾದ ರಾಷ್ಟ್ರಗಳು ಹಾಗೂ ಭಾರತದ ಸಹಸ್ರಾರು ಜನ ಐಎನ್‌ಎ ಸೇರಿದ್ದನ್ನು, ತಮ್ಮ ಪ್ರಾಣ ತ್ಯಾಗ ಮಾಡಿದ್ದನ್ನು ಕಂಡು ನೇತಾಜಿ ಅವರ ದೃಢನಿಶ್ಚಯ ಹಾಗೂ ಶಕ್ತಿ ಯಾವ ರೀತಿಯದ್ದಾಗಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.

1945ರ ಗುಪ್ತಚರ ವರದಿಯೊಂದನ್ನು ಡೇ ಅವರು ಉಲ್ಲೇಖಿಸಿದ್ದಾರೆ. ಐಎನ್‌ಎ ಸೈನಿಕರ ಪರ ಅಪಾರ ಅನುಕಂಪ ವ್ಯಕ್ತವಾಗುತ್ತಿರುವುದರ ಬಗ್ಗೆ ಇದು ಬ್ರಿಟಿಷ್ ಸರ್ಕಾರವನ್ನು ಎಚ್ಚರಿಸಿದೆ. ಇದನ್ನು ಸರ್ಕಾರ ಪರಿಗಣಿಸದಿದ್ದರೆ, ಸಾಮೂಹಿಕ ಪ್ರತಿರೋಧ ಹಾಗೂ ರಕ್ತಪಾತ ಉಂಟಾಗಬಹುದು ಎಂದು ಹೇಳಿದೆ. ಹಲವು ಗವರ್ನರ್‌ಗಳು ತಮ್ಮ ವರದಿಗಳಲ್ಲಿ ವ್ಯಕ್ತಪಡಿಸಿದ್ದ ಆತಂಕವನ್ನು ಗಮನಿಸಿ ವೈಸ್‌ರಾಯ್‌ಗೆ 1945 ಮತ್ತು 1946ರ ಸಂದರ್ಭದಲ್ಲಿ ಹೆಚ್ಚಿನ ಆಯ್ಕೆಗಳು ಇರಲಿಲ್ಲ. ಭಾರತದ ಸೇನೆಯಲ್ಲಿ ದಂಗೆ ಸೃಷ್ಟಿಯಾಗಬಹುದು ಎಂದು ಅವರೆಲ್ಲ ಎಚ್ಚರಿಸಿದ್ದರು. ಐಎನ್‌ಎಯ ಮೂವರು ಪ್ರಮುಖ ಸೈನಿಕರಾದ ಪ್ರೇಮ್‌ ಕುಮಾರ್ ಸೆಹಗಲ್, ಗುರುಭಕ್ಷ್ ಸಿಂಗ್ ಧಿಲ್ಲಾನ್ ಮತ್ತು ಶಾನವಾಜ್ ಖಾನ್ ಅವರನ್ನು ದೇಶದಿಂದ ಗಡಿಪಾರು ಮಾಡುವ ಶಿಕ್ಷೆಯ ಬದಲಾಗಿ ಬ್ರಿಟಿಷರು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸುವಂತಾಗಲು ಈ ಆತಂಕವೇ ಕಾರಣವಾಯಿತು.

ಜನರಲ್ ಸಿ.ಜೆ. ಆಫ್ಲೆಕ್ ಅವರು 1947ರ ಫೆಬ್ರುವರಿ 12ರಂದು ಸೇನೆಯ ಕಮಾಂಡರ್‌ಗಳಿಗೆ ಬರೆದ ‘ವೈಯಕ್ತಿಕ ಹಾಗೂ ರಹಸ್ಯ’ ಪತ್ರವು ಈ ವಿಷಯವನ್ನು ಪುಷ್ಟೀಕರಿಸುವಂತೆ ಇದೆ. ಗಡಿಪಾರು ಮಾಡಿದ್ದಿದ್ದರೆ ಹಿಂಸಾತ್ಮಕ ಆಂತರಿಕ ಸಂಘರ್ಷ ಉಂಟಾಗುತ್ತಿತ್ತು ಎಂದು ಅವರು ಅದರಲ್ಲಿ ಹೇಳಿದ್ದಾರೆ. ಈ ಸೈನಿಕರು ‘ದೇಶಭಕ್ತರು ಮತ್ತು ರಾಷ್ಟ್ರೀಯವಾದಿಗಳು ಎಂಬ ನೈಜ ಭಾವನೆ ಇದೆ’, ಹಾಗಾಗಿ ಅವರು ದಾರಿ ತಪ್ಪಿದವರಾಗಿದ್ದರೂ ‘ಅವರನ್ನು ಭಾರತದ ನಿಜವಾದ ಮಕ್ಕಳು ಎಂಬಂತೆ, ಕ್ಷಮಾರ್ಹ ರೀತಿಯಲ್ಲಿ ಕಾಣಬೇಕು’ ಎಂದು ಪತ್ರದ‌ಲ್ಲಿ ಬರೆದಿದ್ದಾರೆ. ಭಾರತೀಯ ಸೇನೆಯಲ್ಲಿನ ಭಾರತೀಯ ಅಧಿಕಾರಿಗಳು, ಇವರ ಶಿಕ್ಷೆಯ ವಿಚಾರದಲ್ಲಿ ಆಗಿರುವ ಅಂತಿಮ ನಿರ್ಧಾರದಿಂದಾಗಿ ಸಮಾಧಾನ ಹೊಂದಿದ್ದಾರೆ. ಗಡಿಪಾರಿನ ಶಿಕ್ಷೆಯನ್ನು ಜಾರಿ ಮಾಡಿದ್ದಿದ್ದರೆ ದೇಶದಲ್ಲಿ ಗೊಂದಲಗಳು ಸೃಷ್ಟಿಯಾಗುತ್ತಿದ್ದವು ಎಂದೂ ಪತ್ರದಲ್ಲಿ ಹೇಳಿದ್ದಾರೆ.

ಇದಲ್ಲದೆ, ನೌಕಾದಳದಲ್ಲಿನ ದಂಗೆ ಹಾಗೂ ಜಬಲ್ಪುರ, ಮದ್ರಾಸ್ ಮತ್ತು ಪುಣೆಯಲ್ಲಿ ಸೇನಾ ಶಿಬಿರಗಳಲ್ಲಿ ನಡೆದ ದಂಗೆಗಳಿಂದಾಗಿ ಬ್ರಿಟಿಷರಿಗೆ ತಾವು ಭಾರತದ ಸಶಸ್ತ್ರ ಸೈನಿಕರನ್ನು ನೆಚ್ಚಿಕೊಂಡು ಭಾರತ ಉಪಖಂಡದಲ್ಲಿ ತಮ್ಮ ಸಾಮ್ರಾಜ್ಯ ಉಳಿಸಿಕೊಳ್ಳಲು ಆಗದು ಎಂಬುದು ಮನವರಿಕೆ ಆಗಿತ್ತು. ಈ ಅರಿವು ಎಲ್ಲರಿಗೂ ಆಗುತ್ತಲೇ, ಅವರು ತ್ವರಿತವಾಗಿ ಕೆಲಸ ಆರಂಭಿಸಿದರು. ಭಾರತದಲ್ಲಿನ ವಸಾಹತು ವ್ಯವಸ್ಥೆಯನ್ನು ಕೊನೆಗೊಳಿಸುವ ಅಧಿಕೃತ ತೀರ್ಮಾನವನ್ನು ಬ್ರಿಟಿಷರು 1946ರ ಮಾರ್ಚ್‌ನಲ್ಲಿ ಕೈಗೊಂಡರು.

ಬೆರಾರ್ ಮತ್ತು ಕೇಂದ್ರ ಪ್ರಾಂತ್ಯಗಳ ಗವರ್ನರ್ ಸರ್ ಟ್ವೈನಾಮ್ ಅವರು 1945ರ ನವೆಂಬರ್‌ 26ರಂದು ಲಾರ್ಡ್‌ ವಾವೆಲ್‌ ಅವರಿಗೆ ಒಂದು ಪತ್ರ ಬರೆದಿದ್ದರು. ಅದರಲ್ಲಿ ಅವರು, ಒಂದು ಲಕ್ಷ ಚದರ ಮೈಲಿಗಳಿಗಿಂತ ಹೆಚ್ಚಿನ ವಿಸ್ತೀರ್ಣದ, 1.8 ಕೋಟಿಗಿಂತ ಹೆಚ್ಚು ಜನಸಂಖ್ಯೆ ಇರುವ ಪ್ರದೇಶವನ್ನು ನಿಭಾಯಿಸಲು ತಮ್ಮ ಬಳಿ 17 ಐರೋಪ್ಯ ಅಧಿಕಾರಿಗಳು (ಅವರಲ್ಲಿ ಮೂವರು ನ್ಯಾಯಾಂಗದ ಅಧಿಕಾರಿಗಳು), ಪೊಲೀಸರ ಪೈಕಿ 19 ಜನ ಯುರೋಪಿನ ಅಧಿಕಾರಿಗಳು ಮಾತ್ರ ಇರುವುದಾಗಿ ಹೇಳಿಕೊಂಡಿದ್ದರು. ಸರ್ ಟ್ವೈನಾಮ್ ಅವರು ಉಲ್ಲೇಖಿಸಿದ ಸಂಖ್ಯೆಗಳು, ಭಾರತದಲ್ಲಿನ ಬ್ರಿಟಿಷ್ ವಸಾಹತಿನ ದುರಂತವನ್ನು ಹೇಳುತ್ತಿದ್ದವು. ಎಲ್ಲವೂ ಚೆನ್ನಾಗಿದ್ದ ಸಂದರ್ಭದಲ್ಲಿಯೂ ಅಧಿಕಾರಿಗಳು, ಪೊಲೀಸರು ಮತ್ತು ಸೇನೆಯಲ್ಲಿ ಕೆಲವು ಸಾವಿರ ಜನ ಯುರೋಪಿಯನ್ನರು ಮಾತ್ರ ಇದ್ದರು. ಹೀಗಿದ್ದರೂ ಅವರು 40 ಕೋಟಿ ಜನರಿರುವ ಭಾರತವನ್ನು ವಸಾಹತು ಮಾಡಿಕೊಂಡಿದ್ದರು.

ಈ ಅಂಕಿ–ಅಂಶಗಳನ್ನು ಗಮನಿಸಿದರೆ ಭಾರತೀಯರು ಇಂದು ಆಶ್ಚರ್ಯಚಕಿತರಾಗಬಹುದು. ಕೋಟ್ಯಂತರ ಜನ ಭಾರತೀಯರು ತಮ್ಮನ್ನು ಕೆಲವೇ ಮಂದಿ ಯುರೋಪಿಯನ್ನರ ನಿಯಂತ್ರಣಕ್ಕೆ ಒಪ್ಪಿಸಿಕೊಂಡಿದ್ದು ಹೇಗೆ? ಒಗ್ಗಟ್ಟು ಮತ್ತು ಆತ್ಮವಿಶ್ವಾಸದ ಕೊರತೆ ಎರಡು ಮುಖ್ಯ ಕಾರಣಗಳಾಗಿದ್ದವು. ಡೇ ಅವರ ಪುಸ್ತಕವು ನಮಗೆ, ಇತರ ಕೆಲವು ಇತಿಹಾಸಕಾರರು ಸತ್ಯವನ್ನು ಅದುಮಿಡಲು ಉದ್ದೇಶಪೂರ್ವಕವಾಗಿ ಯತ್ನಿಸಿದ್ದರ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳಲು ನೆರವಾಗಬೇಕು. ಹೂತಿಟ್ಟ ಸತ್ಯಗಳನ್ನು ಹೊರತೆಗೆಯಲು ಹಲವರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಸತ್ಯದ ಸಮೀಪಕ್ಕೆ ಹೋಗಲು ನೆರವಾಗಿದ್ದಕ್ಕೆ ನಾವು ಅವರಿಗೆ ಕೃತಜ್ಞರಾಗಿರಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು