ಸೋಮವಾರ, ಅಕ್ಟೋಬರ್ 14, 2019
23 °C
ಕಾಂಗ್ರೆಸ್ಸಿನ ನಿಘಂಟಿನಲ್ಲಿ ‘ರಾಜಕೀಯ, ಸೈದ್ಧಾಂತಿಕ ಭಿನ್ನತೆ’ ಎಂಬ ಪದಗಳು ಇಲ್ಲ

ಗಣ್ಯರಿಗೆ ಗೌರವ ಮತ್ತು ಭಿನ್ನ ದನಿ

ಎ. ಸೂರ್ಯ ಪ್ರಕಾಶ್
Published:
Updated:
Prajavani

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ನಾನಾಜಿ ದೇಶಮುಖ್, ಪ್ರಣವ್ ಮುಖರ್ಜಿ ಮತ್ತು ಭೂಪೆನ್ ಹಜಾರಿಕಾ ಅವರನ್ನು ಭಾರತರತ್ನ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದನ್ನು ದೇಶದೆಲ್ಲೆಡೆ ಸ್ವಾಗತಿಸಲಾಗಿದ್ದರೂ, ಕೆಲವು ಭಿನ್ನ ದನಿಗಳು ಕೇಳಿಬಂದಿವೆ.‌ ಅದರಲ್ಲೂ ಮುಖ್ಯವಾಗಿ, ಕೇಂದ್ರ ಸರ್ಕಾರವು ತನಗೆ ‘ನಿಷ್ಠರಾದವರನ್ನು’ ಮುಂದಕ್ಕೆ ತರುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಆರೋಪಿಸಿದ್ದಾರೆ. ಆದರೆ ಸತ್ಯಕ್ಕೆ ಇದಕ್ಕಿಂತಲೂ ದೂರವಾದ ಮಾತು ಇನ್ನೊಂದು ಇರಲಿಕ್ಕಿಲ್ಲ. ಭಾರತದ ನಿಜವಾದ ಹೀರೊಗಳನ್ನು ಗೌರವಿಸುವ ವಿಚಾರ ಚರ್ಚಿಸುವಾಗ ಕಾಂಗ್ರೆಸ್ಸಿಗರು ಇನ್ನಷ್ಟು ಎಚ್ಚರಿಕೆಯಿಂದ ವರ್ತಿಸುವುದು ಒಳ್ಳೆಯದು.

ಈ ಪ್ರಶಸ್ತಿಗೆ ಸಂಬಂಧಿಸಿದ ನಿಯಮಗಳು ಹೇಳುವಂತೆ, ಇದನ್ನು ರಾಷ್ಟ್ರಪತಿಯವರು ಪ್ರಧಾನಿಯವರ ಶಿಫಾರಸು ಆಧರಿಸಿ ಪ್ರದಾನ ಮಾಡುತ್ತಾರೆ. ಈ ಪ್ರಶಸ್ತಿ ಸ್ಥಾಪಿಸಿದ್ದು 1954ರಲ್ಲಿ. ಮಾರನೆಯ ವರ್ಷ ಪ್ರಧಾನಿ ಜವಾಹರಲಾಲ್ ನೆಹರೂ ಅವರು ತಮಗೆ ತಾವೇ ‘ಭಾರತರತ್ನ’ ಕೊಟ್ಟುಕೊಂಡರು. ಪ್ರಧಾನಿ ಇಂದಿರಾ ಗಾಂಧಿ ಅವರು ಕೂಡ 1971ರಲ್ಲಿ ತಮಗೆ ತಾವೇ ಈ ಪ್ರಶಸ್ತಿ ಕೊಟ್ಟುಕೊಂಡರು. ದೇಶದ ಸಂವಿಧಾನಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅಥವಾ 560ಕ್ಕೂ ಹೆಚ್ಚಿನ ರಾಜ–ಮಹಾರಾಜರು ಭಾರತದ ಒಕ್ಕೂಟದಲ್ಲಿ ವಿಲೀನ ಆಗುವಂತೆ ಮಾಡಿದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಈ ಗೌರವಕ್ಕೆ ಅರ್ಹರು ಎಂದು ನೆಹರೂ ಅವರಿಗಾಗಲೀ, ಇಂದಿರಾ ಅವರಿಗಾಗಲೀ ಅನಿಸಲಿಲ್ಲ. ರಾಜೀವ್ ಗಾಂಧಿ ಅವರ ಹತ್ಯೆಯಾದ ನಂತರ ಅವರಿಗೂ ‘ಭಾರತರತ್ನ’ ನೀಡಲಾಯಿತು.

ಅಂಬೇಡ್ಕರ್ ಅವರಿಗೆ ‘ಭಾರತರತ್ನ’ ನೀಡಿದ್ದು ವಿ.ಪಿ. ಸಿಂಗ್ ನೇತೃತ್ವದ ಸರ್ಕಾರ. ಈ ಸರ್ಕಾರಕ್ಕೆ ಬಿಜೆಪಿಯ ಬೆಂಬಲ ಇತ್ತು. ಅಂಬೇಡ್ಕರ್ ಅವರಿಗೆ ಅಷ್ಟರವರೆಗೆ ಪ್ರಶಸ್ತಿ ನೀಡದಿದ್ದುದು ಏಕೆ? ಏಕೆಂದರೆ, ಸುಬ್ರಮಣಿಯನ್ ಸ್ವಾಮಿ ಅವರ ಪ್ರಕಾರ, ‘ಅಲ್ಲಿಯವರೆಗೆ ಯಾವ ಪ್ರಧಾನಿ ಕೂಡ ನೆಹರೂ ಅವರನ್ನು ಮೀರಿ ತೀರ್ಮಾನ ಕೈಗೊಳ್ಳುವ ಧೈರ್ಯ ಹೊಂದಿರಲಿಲ್ಲ’.

ಭಾರತದ ಏಕತೆಯ ಹಿಂದಿನ ನಿಜವಾದ ವ್ಯಕ್ತಿ ಸರ್ದಾರ್ ಪಟೇಲರ ಕೊಡುಗೆಗಳನ್ನು 1991ರಲ್ಲಿ ಗುರುತಿಸಿದ್ದು ಕೂಡ ಕಾಂಗ್ರೆಸ್ಸೇತರ ಸರ್ಕಾರವೇ. ಸರ್ದಾರ್ ಪಟೇಲರಿಗೆ ಮರಣೋತ್ತರ ಭಾರತರತ್ನ ನೀಡಬೇಕು ಎಂದು ಹೇಳಿದ್ದು ‍ಪ್ರಧಾನಿ ಚಂದ್ರಶೇಖರ್. ಅವರ ಪ್ರಸ್ತಾವವನ್ನು ರಾಷ್ಟ್ರಪತಿ ವೆಂಕಟರಾಮನ್ ತಕ್ಷಣವೇ ಒಪ್ಪಿಕೊಂಡರು. ರಾಜೀವ್ ಗಾಂಧಿ ಮತ್ತು ಸರ್ದಾರ್ ಪಟೇಲರಿಗೆ ರಾಷ್ಟ್ರಪತಿ ಭವನವು 1991ರ ಜೂನ್‌ನಲ್ಲಿ ಒಂದೇ ಬಾರಿಗೆ ‘ಭಾರತರತ್ನ’ ಘೋಷಣೆ ಮಾಡಿತು. ಅದಕ್ಕೂ ಮೊದಲು ಪ್ರಧಾನಿ ಚಂದ್ರಶೇಖರ್, ‘ಸ್ವಾತಂತ್ರ್ಯ ಹೋರಾಟ ಹಾಗೂ ದೇಶಕ್ಕೆ ನೀಡಿದ ದೊಡ್ಡ ಸೇವೆಯನ್ನು ಪರಿಗಣಿಸಿ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರಿಗೂ ಭಾರತರತ್ನ ನೀಡಬೇಕು’ ಎಂದು ಪ್ರಸ್ತಾಪಿಸಿದ್ದರು. ವೆಂಕಟರಾಮನ್ ಅವರು ಇದನ್ನೂ ಅನುಮೋದಿಸಿದ್ದರು. ಆ ಸಂದರ್ಭದಲ್ಲಿ ದೇಸಾಯಿ ಅವರಿಗೆ 96 ವರ್ಷ ವಯಸ್ಸಾಗಿತ್ತು.

ಭೂಪೆನ್ ಹಜಾರಿಕಾ ಅವರಿಗೆ ‘ಭಾರತರತ್ನ’ ನೀಡಿದ ಇಂದಿನ ಸರ್ಕಾರದ ತೀರ್ಮಾನ ವಾಜಪೇಯಿ ನೇತೃತ್ವದ ಸರ್ಕಾರವು ಮಹಾನ್ ದೇಶಭಕ್ತ ಗೋಪಿನಾಥ ಬೋರ್ದೊಲೋಯಿ ಅವರಿಗೆ ಭಾರತರತ್ನ ನೀಡುವ ತೀರ್ಮಾನ ತೆಗೆದುಕೊಂಡಿದ್ದನ್ನು ನೆನಪಿಸುತ್ತದೆ. ಅಸ್ಸಾಮಿನ ಕೆಲವು ಭಾಗಗಳು ತನ್ನವೆಂಬ ಪಾಕಿಸ್ತಾನದ ವಾದ ಹತ್ತಿಕ್ಕುವ ವಿಚಾರದಲ್ಲಿ ಗೋಪಿನಾಥ ಅವರು ಸರ್ದಾರ್ ಪಟೇಲರ ಜೊತೆ ಕೆಲಸ ಮಾಡಿದ್ದರು. ಹೀಗಿದ್ದರೂ, ಇವರಿಗೆ ಭಾರತರತ್ನ ನೀಡಬೇಕು ಎಂದು ಕಾಂಗ್ರೆಸ್ ಪಕ್ಷಕ್ಕೆ ಅನಿಸಲಿಲ್ಲ. ಅವರಿಗೆ 1999ರಲ್ಲಿ ಭಾರತರತ್ನ ನೀಡಿ ಗೌರವಿಸಿದ್ದು ವಾಜಪೇಯಿ ನೇತೃತ್ವದ ಸರ್ಕಾರ.

ಇಂದಿರಾ ಗಾಂಧಿ ಅವರು ದೇಶದಲ್ಲಿ ಸರ್ವಾಧಿಕಾರ ಹೇರಿದ ನಂತರ, ಪ್ರಜಾತಂತ್ರದ ಪುನರ್‌ ಸ್ಥಾಪನೆಗಾಗಿ ಚಳವಳಿ ಮುನ್ನಡೆಸಿದ ರಾಷ್ಟ್ರೀಯ ಹೀರೊ ಜಯಪ್ರಕಾಶ ನಾರಾಯಣ ಅವರಿಗೆ ದೇಶದ ಪರಮೋಚ್ಚ ಪ್ರಶಸ್ತಿ ನೀಡಿದ್ದು ವಾಜಪೇಯಿ ನೇತೃತ್ವದ ಸರ್ಕಾರ.

ಮಹಾತ್ಮ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿ ಇದ್ದಿದ್ದರೂ, ನಂತರದಲ್ಲಿ ನೆಹರೂ–ಗಾಂಧಿಗಳ ನಾಯಕತ್ವದಲ್ಲಿ ಅದು ಸಣ್ಣ ಮನಸ್ಸಿನ ಪಕ್ಷವಾಯಿತು. ನೆಹರೂ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರು ಒಟ್ಟು 38 ವರ್ಷಗಳ ಕಾಲ ಅಧಿಕಾರದಲ್ಲಿದ್ದರು. 2004ರಿಂದ 2014ರ ನಡುವಿನ ಅವಧಿಯಲ್ಲಿ ಸೋನಿಯಾ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿ ‘ನಿಜವಾದ’ ಪ್ರಧಾನಿ ಕೂಡ ಆಗಿದ್ದರು. 1991ರಿಂದ 1996ರವರೆಗೆ ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದಾಗ ಈ ಕುಟುಂಬ ಪ್ರಯೋಜನಗಳನ್ನು ಪಡೆದುಕೊಂಡಿತು.

ವಾಜಪೇಯಿ ಅವರಿಗೆ ಭಾರತರತ್ನ ನೀಡಬೇಕು ಎಂದು ಹಲವರು ಸಲಹೆ ನೀಡಿದ್ದರೂ, ಸೋನಿಯಾ–ಮನಮೋಹನ್ ಜೋಡಿ ಅದನ್ನು ತಿರಸ್ಕರಿಸಿತು. ಆದರೆ, 2014ರ ಜನಾದೇಶವು ಕಾಂಗ್ರೆಸ್ ಪಕ್ಷದ ಶಕ್ತಿಯನ್ನು ಸಂಸತ್ತಿನಲ್ಲಿ ಎರಡಂಕಿಗೆ ಇಳಿಸಿದ ನಂತರ ವಾಜಪೇಯಿ ಅವರಿಗೆ ಅರ್ಹವಾದ ಗೌರವ ಸಂದಿತು.

ಮೋದಿ ನೇತೃತ್ವದ ಸರ್ಕಾರವು ಕಾಂಗ್ರೆಸ್ ಪಕ್ಷದ ಹಿಂದಿನ ಹಾಗೂ ಇಂದಿನ ಹಿರಿಯ ನಾಯಕರನ್ನು– ಪಂಡಿತ್ ಮದನ ಮೋಹನ ಮಾಳವೀಯ ಮತ್ತು ಪ್ರಣವ್ ಮುಖರ್ಜಿ– ಕೂಡ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ನೆಹರೂ–ಗಾಂಧಿ ಕುಟುಂಬದವರು ಭಾರತರತ್ನ ಗೌರವವನ್ನು ತಮಗೆ ತಾವೇ ಕೊಟ್ಟುಕೊಂಡರು, ಅದನ್ನು ಅಂಬೇಡ್ಕರ್, ಪಟೇಲ್, ಮಾಳವೀಯ, ಜಯಪ್ರಕಾಶ ನಾರಾಯಣ, ಮೊರಾರ್ಜಿ, ವಾಜಪೇಯಿ ಅವರಂತಹ ಮಹಾನ್ ವ್ಯಕ್ತಿಗಳಿಗೂ ನೀಡಬೇಕು ಎಂಬುದು ಕುಟುಂಬದವರಿಗೆ ಅನಿಸಲೇ ಇಲ್ಲ ಎಂಬುದನ್ನು ‘ಭಾರತರತ್ನ’ದ ಇತಿಹಾಸವೇ ಹೇಳುತ್ತದೆ. ಈ ಎಲ್ಲ ನಾಯಕರಿಗೆ ಭಾರತರತ್ನ ಸಿಗಲು ದೇಶವಾಸಿಗಳು ಕಾಂಗ್ರೆಸ್ಸೇತರ ಸರ್ಕಾರವನ್ನು ಆಯ್ಕೆ ಮಾಡಬೇಕಾಯಿತು.

ಕಾಂಗ್ರೆಸ್ ಪಕ್ಷವು ಬಹುತ್ವದ ಬಗೆಗಿನ ತನ್ನ ಬದ್ಧತೆ ಕುರಿತು ಸಾಕಷ್ಟು ಮಾತನಾಡುತ್ತದೆಯಾದರೂ, ನೆಹರೂ–ಗಾಂಧಿ ಕುಟುಂಬವು ತನಗೆ ಇಷ್ಟವಾಗದ ರಾಜಕೀಯ ಗುಂಪುಗಳಿಗೆ ಸೇರಿದವರ ಕೊಡುಗೆಗಳನ್ನು ಯಾವತ್ತೂ ಗುರುತಿಸಿಲ್ಲ ಎಂಬುದು ಕೂಡ ನಿಜ. ಕಾಂಗ್ರೆಸ್ ಪಕ್ಷದ ನಿಘಂಟಿನಲ್ಲಿ ‘ರಾಜಕೀಯ, ಸೈದ್ಧಾಂತಿಕ ಭಿನ್ನತೆ’ ಎಂಬ ಪದಗಳು ಇಲ್ಲ. ಆದರೆ, ಮೋದಿ ಮತ್ತು ಬಿಜೆಪಿಯ ತೀರ್ಮಾನಗಳಲ್ಲಿ ಹೆಚ್ಚಿನ ಪ್ರಬುದ್ಧತೆ ಹಾಗೂ ಹೃದಯ ವೈಶಾಲ್ಯ ಕಾಣಬಹುದು.

ರಾಷ್ಟ್ರೀಯ ಪ್ರಶಸ್ತಿಯನ್ನು ತನ್ನ ರಾಜಕೀಯ ಹಿತಸಾಧನೆಗೆ ಬಳಸಿಕೊಂಡ ಆರೋಪ ಕಾಂಗ್ರೆಸ್ಸಿನ ಮೇಲಿದೆ. ಇದಕ್ಕೆ ಒಂದು ಉದಾಹರಣೆ ಭಾರತರತ್ನ ಪ್ರಶಸ್ತಿ
ಯನ್ನು ತಮಿಳುನಾಡಿನ ಸಿನಿಮಾ ತಾರೆ, ರಾಜಕಾರಣಿ ಎಂ.ಜಿ. ರಾಮಚಂದ್ರನ್ ಅವರಿಗೆ 1988ರಲ್ಲಿ ನೀಡಿದ್ದು. ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ಸಿಗೆ ಎಂಜಿಆರ್ ಅವರ ಪಕ್ಷದ ಬೆಂಬಲ ಬೇಕಾಗಿತ್ತು. ‘ಇದು ಕಾಂಗ್ರೆಸ್ ಪಕ್ಷದ ರಾಜಕೀಯ ನಡೆ ಎಂದು ಸರ್ಕಾರದೊಳಗೆ ಹಾಗೂ ಸರ್ಕಾರದ ಹೊರಗೆ ಇದ್ದ ಅನೇಕರು ಭಾವಿಸಿದ್ದರು’ ಎಂದು ಆ ಸಂದರ್ಭದಲ್ಲಿ ಸಂಪುಟ ಕಾರ್ಯದರ್ಶಿ ಆಗಿದ್ದ ಬಿ.ಜಿ. ದೇಶಮುಖ್ ಬರೆದಿದ್ದಾರೆ.

ಇವನ್ನೆಲ್ಲ ಅವಲೋಕಿಸಿ, ಭಾರತರತ್ನದ ವಿಚಾರದಲ್ಲಿ ಕಾಂಗ್ರೆಸ್ಸಿಗರಿಗೆ ನೀಡಬಹುದಾದ ಅತ್ಯುತ್ತಮ ಸಲಹೆ: ‘ದಯವಿಟ್ಟು ನಿಮ್ಮ ಬಾಯಿಗೆ ಬೀಗ ಹಾಕಿಕೊಂಡಿರಿ’!

ಲೇಖಕ: ಪ್ರಸಾರ ಭಾರತಿ ಅಧ್ಯಕ್ಷ

Post Comments (+)