ಬುಧವಾರ, ಜೂನ್ 16, 2021
23 °C
ಸಾವಿನ ಲೆಕ್ಕವನ್ನು ಸರಿಯಾಗಿ ಇಡದಿದ್ದರೆ ಬದುಕಿದ್ದವರ ಬಾಳೂ ನರಕವಾಗುತ್ತದೆ

ನಾಗೇಶ ಹೆಗಡೆ ಲೇಖನ: ಉರಿವ ಚಿತೆಗೆ ಪರದೆಯೇಕೆ?

ನಾಗೇಶ ಹೆಗಡೆ Updated:

ಅಕ್ಷರ ಗಾತ್ರ : | |

ಗಂಗೆಯಲ್ಲಿ ಅನಾಥ ಶವಗಳು ತೇಲುತ್ತಿರುವ ಚಿತ್ರ ವರದಿಗಳು ಇದೀಗ ಬರತೊಡಗಿವೆ. 102 ವರ್ಷಗಳ ಹಿಂದೆ ಹೀಗೇ ಆಗಿತ್ತು. ‘ಗಂಗೆಯಲ್ಲಿ ಹೆಣಗಳ ಪ್ರವಾಹವೇ ಬರುತ್ತಿದೆ’ ಎಂದು ಆಗ ಹಿಂದೀ ಕವಿ ಸೂರ್ಯಕಾಂತ್‌ ತ್ರಿಪಾಠಿ ತಮ್ಮದೊಂದು ಕವನದಲ್ಲಿ ವರ್ಣಿಸಿದ್ದರು. ಅಂದಿನ ಬ್ರಿಟಿಷ್‌ ಆಡಳಿತದ ಸ್ಯಾನಿಟರಿ ಕಮಿಷನರ್‌ ವರದಿಯ ಪ್ರಕಾರ, ದೇಶದ ಎಲ್ಲ ನದಿಗಳಲ್ಲೂ ಶವಗಳು ತೇಲುತ್ತಿದ್ದವು. ಏಕೆಂದರೆ ಚಿತೆಗೆ ಬೇಕಿದ್ದಷ್ಟು ಒಣ ಕಟ್ಟಿಗೆಯೇ ಇರಲಿಲ್ಲ. ಈಗಿನ ಸ್ಥಿತಿಗೂ ಸೌದೆಯ ಅಭಾವವೇ ಕಾರಣವೆಂದು ಹೇಳಲಾಗುತ್ತಿದೆ. ದಕ್ಷಿಣದಲ್ಲಂತೂ ನದಿಗಳಲ್ಲಿ ನೀರಿಗೂ ಅಭಾವವಿದೆ. ಒಡಲ ಬೆಂಕಿಯಲ್ಲಿ ಚಿತೆ ಉರಿಯುವಂತಿದ್ದಿದ್ದರೆ...

ಸಂಪರ್ಕ ತಂತ್ರಜ್ಞಾನದಲ್ಲಿ ನಾವು 4ಜಿ ನಂತರದ 5ಜಿಗೆ ಕಾಲಿಡುತ್ತಿದ್ದೇವೆ. ಭಾರತದ ಮಹಾಮರಣಗಳ ಚರಿತೆಯ ಪ್ರಕಾರವೂ 4ನೇ ಅಲೆ ಮುಗಿದು 5ನೇ ಅಲೆ ನಡೆಯುತ್ತಿದೆ. ಹಿಂದೆ, 1918-20ರ ಸ್ಪ್ಯಾನಿಷ್‌ ಫ್ಲೂ ಎಂಬ ಮೊದಲ ಅಲೆಯಲ್ಲಿ ಒಂದೂವರೆ- ಎರಡು ಕೋಟಿ ಜನರು ಬಲಿಯಾಗಿದ್ದರು. ಎರಡನೆಯ ಅಲೆ 1943ರ ಬಂಗಾಳದ ಕ್ಷಾಮ. ಆಗ 20ರಿಂದ 30 ಲಕ್ಷ ಜನರ ಸಾವಾಗಿತ್ತು. ಮೂರನೆಯದು ದೇಶ ವಿಭಜನೆಯ ಸಂದರ್ಭದ ರಕ್ತಪಾತ. ಆಗ ಅಂದಾಜು ಹತ್ತು ಲಕ್ಷ ಜನರು ಸಾವಪ್ಪಿದರು. ಈ ಮೂರೂ ಅಲೆಗಳಿಗೆ ಬ್ರಿಟಿಷರನ್ನೇ ದೂಷಿಸಬಹುದಾಗಿತ್ತು. ಮೊದಲನೇ ಮಹಾಯುದ್ಧದಲ್ಲಿ ಬ್ರಿಟಿಷರ ಪರವಾಗಿ ಹೋರಾಡಲು ಹೋದವರು ಮರಳಿ ಹಡಗಿನಲ್ಲಿ ಮುಂಬೈಗೆ ಬರುವಾಗ ಸ್ಪ್ಯಾನಿಷ್‌ ಜ್ವರವನ್ನೂ ತಂದರು. ಎರಡನೇ ಮಹಾಯುದ್ಧದಲ್ಲಿ ಬ್ರಿಟಿಷರ ಸೈನ್ಯಕ್ಕೆ ಆಹಾರ ಸಂಗ್ರಹಿಸುವ ಭರದಲ್ಲಿ ಬಂಗಾಳದಲ್ಲಿ ಮಹಾಕ್ಷಾಮ ತಲೆದೋರಿತು. ಮೂಳೆ ಚಕ್ಕಳದ ಜನರು ಸಾಲು ಸಾಲಾಗಿ ಆಹಾರ ಗೋದಾಮುಗಳ ಎದುರು ಕುಸಿದು ಸಾಯುತ್ತಿದ್ದರು (ಆ ಕುರಿತ ವರದಿಯನ್ನು ಓದಿದ ಬ್ರಿಟಿಷ್‌ ಪ್ರಧಾನಿ ಚರ್ಚಿಲ್‌, ‘ಗಾಂಧಿ ಯಾಕಿನ್ನೂ ಸತ್ತಿಲ್ಲ?’ ಎಂದು ಕಡತದ ಮೇಲೆ ಕೊಂಕುಷರಾ ಬರೆದದ್ದೂ ಚರಿತ್ರೆಯಲ್ಲಿ ದಾಖಲಾಗಿದೆ). ಇನ್ನು, ಮೂರನೆಯ ಅಲೆಯಾಗಿ ಬಂದ ದೇಶದ ವಿಭಜನೆಯ ಸಂದರ್ಭದ ಮಹಾಮರಣವಂತೂ ಬ್ರಿಟಿಷರ ‘ಒಡೆದು ಆಳುವ’ ನೀತಿಯ ಫಲವೇ ತಾನೆ?

ಸ್ವತಂತ್ರ ಭಾರತದ ಈಗಿನ ಕೊರೊನಾ ಸಾಂಕ್ರಾಮಿಕದ ಎರಡು ಅಲೆಗಳಲ್ಲಿ ಇದುವರೆಗೆ 2.55 ಲಕ್ಷ ಜನರು ಗತಿಸಿದ್ದಾರೆ ಎಂದು ಸರ್ಕಾರಿ ದಾಖಲೆಗಳು ಹೇಳುತ್ತಿವೆ. ಈ ದಾಖಲೆಗಳೇ ಸರಿ ಇಲ್ಲವೆಂದೂ ಸಾವಿನ ಸಂಖ್ಯೆ ಕನಿಷ್ಠ ಮೂರು ಪಟ್ಟು (ಗರಿಷ್ಠ ಎಂಟು ಪಟ್ಟು) ಹೆಚ್ಚಿಗೆ ಇದೆಯೆಂದೂ ಸಂಖ್ಯಾತಜ್ಞರು, ಕಂಪ್ಯೂಟರ್‌ ಮಾಡೆಲಿಂಗ್‌ ಪರಿಣತರು ಮತ್ತು ಅಂಟುಜಾಡ್ಯ ಅಧ್ಯಯನಕಾರರು ಅಂದಾಜು ಮಾಡಿದ್ದಾರೆ. ಜಾಗತಿಕ ಆರೋಗ್ಯ ಮಾಪನ ಸಂಸ್ಥೆಯ ಮುನ್ನೋಟವನ್ನು ಆಧರಿಸಿ ಆಗಸ್ಟ್‌ ಹೊತ್ತಿಗೆ ಸಾವಿನ ಸಂಖ್ಯೆ ಹತ್ತು ಲಕ್ಷಕ್ಕೆ ಏರಲಿದೆ ಎಂದು ಪ್ರತಿಷ್ಠಿತ ಬ್ರಿಟಿಷ್‌ ಮೆಡಿಕಲ್‌ ಪತ್ರಿಕೆ ‘ಲ್ಯಾನ್ಸೆಟ್‌’ ಮೊನ್ನೆ ತಾನೇ ಸಂಪಾದಕೀಯವನ್ನು ಬರೆದಿದೆ. ‘ಅದು ನಿಜವೇ ಆದ ಪಕ್ಷದಲ್ಲಿ, ಈ ಆತ್ಮಘಾತುಕ ಮಹಾದುರಂತಕ್ಕೆ ಮೋದಿ ನೇತೃತ್ವದ ಸರ್ಕಾರವೇ ಬಾಧ್ಯಸ್ಥ’ ಎಂದು ಖಡಕ್ಕಾಗಿ ಹೇಳಿದೆ.

ನಮ್ಮ ದೇಶದ ಅಸಲೀ ಸಾವಿನ ಸಂಖ್ಯೆ ಎಷ್ಟಿದ್ದೀತೆಂದು ನಿರ್ಧರಿಸಲು ಅಂಕಿಸಂಖ್ಯಾ ತಜ್ಞರು ಅಕ್ಷರಶಃ ಆಕಾಶ- ಪಾತಾಳ ಒಂದು ಮಾಡುತ್ತಿದ್ದಾರೆ. ಉರಿಯುವ ಚಿತೆಗಳ ಫೋಟೊಗಳನ್ನು ಬಾನೆತ್ತರದಿಂದ ಸಂಗ್ರಹಿಸುವುದೇನು, ಹೂಳಿದ ಶವಗಳ ಲೆಕ್ಕ ತೆಗೆಯುವುದೇನು; ಪತ್ರಿಕೆಗಳಲ್ಲಿ ಪ್ರಕಟವಾಗುವ ‘ಚಿರಸ್ಮರಣೆ’ಯ ಸಂದೇಶಗಳನ್ನು ಲೆಕ್ಕ ಹಾಕುವುದೇನು (ಉದಾ: ಆರು ಎಡಿಶನ್‌ಗಳಲ್ಲಿ ಪ್ರಕಟವಾಗುವ ಗುಜರಾತಿ ‘ಸಂದೇಶ್‌’ ದಿನಪತ್ರಿಕೆಯ ಪ್ರತೀ ಎಡಿಶನ್‌ನಲ್ಲಿ ಎರಡೆರಡು ಪುಟಗಳ ತುಂಬ ಸರಾಸರಿ 75 ವಿದಾಯ ಸಂದೇಶಗಳು ಪ್ರತಿದಿನ ಪ್ರಕಟವಾಗುತ್ತಿವೆ); ಸಾವಿನ ಲೆಕ್ಕವನ್ನು ಇದ್ದುದರಲ್ಲಿ ತುಸು ಅಚ್ಚುಕಟ್ಟಾಗಿ ಇಡುತ್ತ ಬಂದಿದ್ದ ಮುಂಬೈ ಮಹಾನಗರದ ಹಿಂದಿನ ವರ್ಷಗಳ ದಾಖಲೆಗಳನ್ನು ತೆಗೆದು ಈಗಿನ ಹೆಚ್ಚುವರಿ ಸಾವಿನ ಸಂಖ್ಯೆಗಳನ್ನು ಹೋಲಿಸುವುದೇನು...

ಆದರೂ ಕೋವಿಡ್‌ ಸಾವಿನ ಲೆಕ್ಕ ಅಂದಾಜಿಗೂ ನಿಲುಕುತ್ತಿಲ್ಲ, ಏಕೆಂದರೆ, ವೈಜ್ಞಾನಿಕ ವಿಧಾನದಲ್ಲಿ ಮರಣ ದಾಖಲೆಗಳನ್ನು ಸಂಗ್ರಹಿಸುವ ಶಿಸ್ತು ಈ 5ಜಿ ಯುಗದಲ್ಲೂ ನಮಗೆ ಮೈಗೂಡಿಲ್ಲ. ಸುಧಾರಿತ ದೇಶಗಳಲ್ಲಿ ಪ್ರತೀ ಸಾವಿಗೂ ವೈದ್ಯಕೀಯ ವಿವರಣೆ, ದಾಖಲೆ ಇಡಲಾಗುತ್ತದೆ. ನಮ್ಮಲ್ಲಿ ಆಸ್ಪತ್ರೆಯಲ್ಲಿ ಸತ್ತರೆ ಅಥವಾ ಅಪಮೃತ್ಯುವಿನಿಂದಾಗಿ ಪೊಲೀಸ್‌ ದಾಖಲೆಗೆ ಸೇರಿದ್ದರೆ ಮಾತ್ರ ಡೆತ್‌ ಸರ್ಟಿಫಿಕೇಟ್‌ ಇರುತ್ತದೆ. ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ಶೇಕಡ 10ರಷ್ಟು ಸಾವಿಗೂ ಸರ್ಟಿಫಿಕೇಟ್‌ ಅಥವಾ ದಾಖಲೆ ಇರುವುದಿಲ್ಲ. ಸ್ಪ್ಯಾನಿಷ್‌ ಫ್ಲೂ ಸಂದರ್ಭದಲ್ಲಿ ಬ್ರಿಟಿಷರ ಆಳ್ವಿಕೆ ಇದ್ದ ಪ್ರದೇಶಗಳಲ್ಲಷ್ಟೆ ಸಾವಿನ ಅಷ್ಟಿಷ್ಟು ದಾಖಲೆ ಇತ್ತು. ಪ್ರತೀ ಹತ್ತು ವರ್ಷಗಳಿಗೊಮ್ಮೆ ಜನಗಣತಿ ನಡೆದಿದ್ದರಿಂದ, ಜನಸಂಖ್ಯೆ ತೀವ್ರ ಕುಸಿದರೂ ದಶಕದ ಕೊನೆಯಲ್ಲಿ ದಾಖಲೆಗೆ ಸಿಗುತ್ತಿತ್ತು. ಈಗ ನಮಗೆ ಅದೂ ಸಿಗದಂತಾಗಿದೆ; ಏಕೆಂದರೆ, ಈ ದಶಕದ ಜನಗಣತಿ ನಮ್ಮಲ್ಲಿ ಇದೀಗಷ್ಟೆ ಆರಂಭವಾಗಬೇಕಿದೆ. ಹಿಂದಿನ ವರ್ಷ ಗತಿಸಿದವರು ಇದರಲ್ಲಿ ಸೇರ್ಪಡೆ ಆಗುವಂತಿಲ್ಲ.

ಈಗಂತೂ ಹಳ್ಳಿಗಳಿಗೂ ಕೊರೊನಾ ವ್ಯಾಪಿಸುತ್ತಿದೆ. ಆಂಬುಲೆನ್ಸ್‌ ಸಿಗದೆ, ಆಮ್ಲಜನಕ ಸಿಗದೆ, ಆಸ್ಪತ್ರೆ ಸೇರಲಾಗದೆ, ಶವಾಗಾರದ ಲೆಕ್ಕಕ್ಕೂ ಸೇರದೆ ದಫನಗೊಂಡವರ ಬಗ್ಗೆ ಲೆಕ್ಕವಿಲ್ಲದಷ್ಟು ವರದಿಗಳು ಬರುತ್ತಿವೆ. ಆದರೆ ಸರ್ಕಾರಿ ದಾಖಲೆಗೆ ಸೇರುತ್ತಿಲ್ಲ.


-ನಾಗೇಶ ಹೆಗಡೆ

ಗುಜರಾತಿನಲ್ಲಂತೂ ಆಸ್ಪತ್ರೆಯಲ್ಲಿ ಕೋವಿಡ್‌ ಕಾಯಿಲೆಯಿಂದಲೇ ಮೃತರಾದರೂ- ಅವರು ಈ ಮೊದಲೇ ಹೃದ್ರೋಗ, ಮಧುಮೇಹ, ಕ್ಯಾನ್ಸರ್‌ ಅಥವಾ ಮೂತ್ರಪಿಂಡ ರೋಗಿಯಾಗಿದ್ದರೆ ಅಂಥವರನ್ನು ಕೋವಿಡ್‌ ಸಾವಿನ ಲೆಕ್ಕಕ್ಕೆ ಸೇರಿಸಬಾರದೆಂದು ಅಧಿಕೃತ ಆದೇಶವನ್ನೇ ಹೊರಡಿಸಲಾಗಿತ್ತು. ಈ ಬಗ್ಗೆ ಭಾರತೀಯ ವೈದ್ಯ ಸಂಶೋಧನ ಮಂಡಳಿ ಆಕ್ಷೇಪಿಸಬೇಕಾಯಿತು.

2020ರ ಕೊರೊನಾ ಮೊದಲ ಅಲೆಯಲ್ಲಿ ನಾನಾ ಕಾರಣಗಳಿಂದಾಗಿ ಸತ್ಯಚಿತ್ರಣ ಮಬ್ಬಾಗಿದ್ದರಿಂದ ‘ಸಾಂಕ್ರಾಮಿಕ ಮುಗಿಯಿತು’ ಎಂದು ಕೇಂದ್ರ ಆರೋಗ್ಯ ಸಚಿವರು ಘೋಷಣೆ ಮಾಡಿದರು. ಅಸ್ಪಷ್ಟ ಮಾಹಿತಿಯನ್ನು ಸರ್ಕಾರವೇ ನಂಬಿ, ಲಸಿಕೆ ಮತ್ತು ಆಮ್ಲಜನಕವನ್ನು ವಿದೇಶಗಳಿಗೆ ರವಾನಿಸಿ, ಆರೋಗ್ಯ ವ್ಯವಸ್ಥೆಯನ್ನು ಕಡೆಗಣಿಸಿದ್ದರಿಂದಲೇ ಎರಡನೆ ಅಲೆ ಇಷ್ಟೊಂದು ಭೀಕರವಾಗಿದೆ ಎಂಬುದನ್ನು ಎಲ್ಲ ವಿಶ್ಲೇಷಕರೂ ಹೇಳುತ್ತಾರೆ. ಅಂದಹಾಗೆ, ಸುಳ್ಳಿನ ಸರಮಾಲೆಯನ್ನು ಸೃಷ್ಟಿಸುತ್ತ, ತನ್ನ ಸುಳ್ಳನ್ನು ತಾನೇ ನಂಬುವಂಥ ಸ್ಥಿತಿಗೆ ವೈದ್ಯಕೀಯದಲ್ಲಿ ‘ಮಿಥೋಮೇನಿಯಾ’ ಎನ್ನುತ್ತಾರೆ. ಮನೋವೈದ್ಯಕೀಯ ಗ್ರಂಥಗಳಲ್ಲಿ ಈ ಕಾಯಿಲೆಗೆ ಉದಾಹರಣೆಯಾಗಿ ಸ್ಟಾಲಿನ್‌, ಹಿಟ್ಲರ್‌ ಮತ್ತು ಮಾವೊ ಕಾಲದ ನರಮೇಧಗಳನ್ನು ಹೆಸರಿಸಲಾಗಿದೆ.

ಸಾವಿನ ಲೆಕ್ಕ ಸರಿ ಇದ್ದರೆ ಎಷ್ಟೊಂದು ಅನುಕೂಲಗಳಿವೆ: ಸಂಖ್ಯಾಶಾಸ್ತ್ರ ಮತ್ತು ಗಣಿತೀಯ ಸೂತ್ರಗಳನ್ನು ಬಳಸಿ ಶಕ್ತಿಶಾಲಿ ಕಂಪ್ಯೂಟರ್‌ ನೆರವಿನಿಂದ ‘ಮಾಡೆಲಿಂಗ್‌’ ಮಾಡಬಹುದು. ಸಾಂಕ್ರಾಮಿಕದ ಕರಾಳತೆ ಯಾವ ಋತುಗಳಲ್ಲಿ, ಯಾವ ಪ್ರದೇಶದಲ್ಲಿ, ಯಾವ ವಯೋಮಾನದಲ್ಲಿ ಎಷ್ಟಿರುತ್ತದೆ, ಏನೇನು ಕ್ರಮ ಕೈಗೊಳ್ಳಬೇಕು ಅಥವಾ ಯಾವ ತಪ್ಪನ್ನು ಮಾಡಬಾರದು ಎಂಬುದರ ಸ್ಪಷ್ಟ ಚಿತ್ರಣ ಸಿಗುತ್ತದೆ. ಹೊಸ ಸಾಂಕ್ರಾಮಿಕವನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಬರುತ್ತದೆ. ಇಲ್ಲಾಂದರೆ ವಿಜ್ಞಾನದ ಕಣ್ಣಿಗೂ ಮಂಕು ಪರದೆ ಎಳೆದಂತಾಗುತ್ತದೆ.

ನಂಬಿದರೆ ನಂಬಿ, ಗಾಯತ್ರಿ ಮಂತ್ರದಿಂದ ಕೋವಿಡ್‌ 19ನ್ನು ಸೋಲಿಸಲು ಸಾಧ್ಯವೇ ಎಂಬ ಪ್ರಯೋಗವೊಂದು ಹೃಷಿಕೇಶದ ವೈದ್ಯವಿಜ್ಞಾನ ಸಂಸ್ಥೆಯಲ್ಲಿ ನಡೆದಿದೆ. ವಿಜ್ಞಾನ ತಂತ್ರಜ್ಞಾನ ಇಲಾಖೆಯ ಧನಸಹಾಯದಿಂದ ಹತ್ತು ರೋಗಿಗಳು ಇದೀಗ ಮಂತ್ರಾಭ್ಯಾಸ ಮುಗಿಸಿದ್ದಾರೆ.

ಅದಾಗಿ, ಗಾಯತ್ರಿ ಮಂತ್ರದ ಕೊನೆಯ ಸಾಲಿನ ಅರ್ಥವೇನು ಗೊತ್ತೆ? ‘ನಮ್ಮ ಬುದ್ಧಿ ಸರಿಯಾದ ದಿಕ್ಕಿನಲ್ಲಿ ಚಲಿಸುವಂತೆ ಪ್ರಚೋದಿಸು’.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು