ಮೋದಿಯವರ ಮನದಾಳದ ಡಿಸ್‍ಲೆಕ್ಸಿಯಾ

ಸೋಮವಾರ, ಮಾರ್ಚ್ 18, 2019
31 °C
ಅಪಾಕ್ಷರಿ ಮಕ್ಕಳು ದಡ್ಡರಲ್ಲ ಎಂಬುದನ್ನು ಬಿಂಬಿಸುವ ಬದಲು ಲೇವಡಿ ಮಾಡುವುದೆ?

ಮೋದಿಯವರ ಮನದಾಳದ ಡಿಸ್‍ಲೆಕ್ಸಿಯಾ

ನಾಗೇಶ ಹೆಗಡೆ
Published:
Updated:
Prajavani

ಲಿಯೊನಾರ್ದೊ ದ ವಿಂಚಿ ಗತಿಸಿ ಈಗ 400 ವರ್ಷಗಳಾದವು. ಈತ ಮೊನಾಲೀಸಾಳನ್ನು ಸೃಷ್ಟಿಸಿದ ಕಲಾಕಾರ; ಶಿಲ್ಪಿ, ವಾಸ್ತುಶಿಲ್ಪಿ, ಸಂಗೀತಗಾರ, ಗಣಿತ ತಜ್ಞ, ಸಸ್ಯವಿಜ್ಞಾನಿ, ಖಗೋಲವಿಜ್ಞಾನಿ, ಅನಾಟಮಿ ತಜ್ಞ, ಭೂವಿಜ್ಞಾನಿ, ನಕಾಶೆತಜ್ಞ, ಎಂಜಿನಿಯರ್, ಇನ್ನೂ ಏನೇನೊ- ಅಂತೂ ನಂಬಲಸಾಧ್ಯ ಸೃಜನಶೀಲತೆಯ ಮನುಷ್ಯ. ಇವನನ್ನು ‘ಹೊಸಯುಗದ ಸವ್ಯಸಾಚಿ’, ‘ಮನುಕುಲದ ಅತ್ಯಂತ ಪ್ರಖರ ಪ್ರತಿಭಾವಂತ’ ಎಂದು ಈಗಲೂ ಹೊಗಳುತ್ತಾರೆ.

ಮೇ 2, 1519ರಂದು ನಿಧನವಾದ ಈತನ ನೆನಪಿಗೆ ಈಗ ಯುರೋಪ್ ಮತ್ತು ಅಮೆರಿಕದಲ್ಲಿ ಅದ್ಧೂರಿಯ ಹಬ್ಬ ಆಚರಿಸಲಾಗುತ್ತಿದೆ. ಈಗೊಂದು ರಸಪ್ರಶ್ನೆ: ಈ ಲಿಯೊನಾರ್ದೊ ದ ವಿಂಚಿ, ಗೆಲಿಲಿಯೊ ಗೆಲಿಲಿ, ನಿಕೊಲಾಸ್ ಟೆಸ್ಲಾ, ಪಿಕಾಸೊ, ಅಲೆಕ್ಸಾಂಡರ್ ಗ್ರಹಾಂ ಬೆಲ್, ಜೇಮ್ಸ್ ಮ್ಯಾಕ್ಸ್‌ವೆಲ್, ಥಾಮಸ್ ಎಡಿಸನ್, ಅಭಿಷೇಕ್ ಬಚ್ಚನ್, ರಿಚರ್ಡ್ ಬ್ರಾನ್ಸನ್, ವಾಲ್ಟ್ ಡಿಸ್ನಿ, ಸ್ಟೀವನ್ ಸ್ಪೀಲ್‍ಬರ್ಗ್... ಇವರೆಲ್ಲರಲ್ಲಿ ಕಾಣುವ ಸಮಾನ ಅಂಶ ಏನು ಹೇಳಬಲ್ಲಿರಾ? ಉತ್ತರ ಸರಳವಾಗಿದೆ: ಇವರೆಲ್ಲರಿಗೂ ‘ಡಿಸ್‍ಲೆಕ್ಸಿಯಾ’ ಎಂಬ ಕಾಯಿಲೆಯಿತ್ತು.

ಈ ತೊಂದರೆ ಇರುವ ಮಕ್ಕಳು ಅಕ್ಷರಗಳನ್ನು ಸರಿಯಾಗಿ ಗುರುತಿಸಲಾರರು. ಆದ್ದರಿಂದ ಅವರನ್ನು ‘ಅಪಾಕ್ಷರಿಗಳು’ ಎನ್ನೋಣ. ಇತರ ಎಲ್ಲ ವಿಧಗಳಲ್ಲೂ ಸಾಮಾನ್ಯ ಮಕ್ಕಳಂತೆ ಕಾಣುವ ಇಂಥವರು ಓದುವ-ಬರೆಯುವ ವಿಷಯದಲ್ಲಿ ಪೆದ್ದರಂತೆ ಕಾಣುತ್ತಾರೆ. 96ನ್ನು 69 ಎಂದು ಬರೆದು ಶಿಕ್ಷಕರಿಂದ ಬೈಸಿಕೊಳ್ಳುತ್ತಾರೆ. ಸರೀಕರಿಂದ ಗೇಲಿ, ಅಪ್ಪ-ಅಮ್ಮನಿಂದ ಏಟಿನ ಶಿಕ್ಷೆ ಅನುಭವಿಸುತ್ತಾರೆ.

ಅಂಥ ನತದೃಷ್ಟ, ಪ್ರತಿಭಾವಂತ ಮಕ್ಕಳ ಸಂಕಟಗಳನ್ನು ಬಿಂಬಿಸಲೆಂದೇ ನಟ ಆಮಿರ್ ಖಾನ್ ‘ತಾರೇ ಜಮೀನ್ ಪರ್’ (ನೆಲಕ್ಕಿಳಿದ ನಕ್ಷತ್ರಗಳು) ಸಿನಿಮಾ ಮಾಡಿ, ಪ್ರಶಸ್ತಿಗಳನ್ನೂ ಗಲ್ಲಾಪೆಟ್ಟಿಗೆಯ ಯಶಸ್ಸನ್ನೂ ಪಡೆದಿದ್ದು ನೆನಪಿದೆ ತಾನೆ? ಎರಡು ವಾರಗಳ ಹಿಂದೆ ಪ್ರಧಾನಿ ಮೋದಿಯವರು ಈ ಕಾಯಿಲೆಯುಳ್ಳ ಮಕ್ಕಳನ್ನು ಅಪಹಾಸ್ಯ ಮಾಡಿದರೆಂದು ಭಾರೀ ಟೀಕೆಗೊಳಗಾದರು. ಆಗಿದ್ದಿದು: ಐಐಟಿ ಖರಗಪುರದಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆಂದು ‘ಹ್ಯಾಕಥಾನ್ ಸ್ಪರ್ಧೆ’ ಏರ್ಪಾಟಾಗಿತ್ತು. ಅದರಲ್ಲಿ ಭಾಗವಹಿಸಿದವರು ಮೋದಿಯವರೊಂದಿಗೆ ವಿಡಿಯೊ ಸಂವಾದ ನಡೆಸುವ ವ್ಯವಸ್ಥೆಯೂ ಆಗಿತ್ತು.

ಯುವತಿಯೊಬ್ಬಳು ತಾನು ಡಿಸ್‍ಲೆಕ್ಸಿಯಾ ಕಾಯಿಲೆ ಇರುವ ಮಕ್ಕಳನ್ನು ಗುರುತಿಸಲೆಂದೇ ವಿಶೇಷ ಆಪ್ ಸೃಷ್ಟಿ ಮಾಡಿದ್ದೇನೆಂದು ಹೇಳುತ್ತಿದ್ದಾಗ ಪ್ರಧಾನಿ ಛಕ್ಕೆಂದು ‘ಅದು 40-50ರ ವಯಸ್ಸಿನ ಮಕ್ಕಳಿಗೂ ನೆರವಿಗೆ ಬರುತ್ತಾ?’ ಎಂದು ಕೇಳಿ, ಕೊಂಕಾಗಿ ನಕ್ಕರು. ರಾಹುಲ್ ಗಾಂಧಿಯವರನ್ನು ಕುರಿತೇ ಅವರು ಈ ವಾಗ್ಬಾಣ ಬಿಟ್ಟರೆಂದು ಅರೆಕ್ಷಣದಲ್ಲಿ ಗೊತ್ತಾಗಿ ಟೆಕಿಗಳೆಲ್ಲ ಹೋ ಎಂದು ನಕ್ಕರು. ಪ್ರಧಾನಿಯ ಈ ಅನಿರೀಕ್ಷಿತ ಪ್ರಶ್ನೆಗೆ ಯುವತಿ ‘ಯಸ್ ಸರ್’ ಎಂದಿದ್ದೇ ತಡ, ಆ ನಗುವಿನಲ್ಲೇ ಮೋದಿಯವರು, ‘ಹಾಗಿದ್ದರೆ ಮಗುವಿನ ಅಮ್ಮನಿಗೆ ಅದು ಸಂತೋಷ ತರುತ್ತದೆ’ ಎಂದು ಇನ್ನೊಂದು ಕೂರಂಬು ಚಿಮ್ಮಿಸಿದಾಗ ನಗು ಅಲೆಅಲೆಯಾಗಿ ಹೊಮ್ಮಿತು.

ಪ್ರಧಾನಿಯ ಈ ಚೂಪುಹಾಸ್ಯಕ್ಕೆ ಚಪ್ಪಾಳೆ ಎದ್ದಷ್ಟೇ ಬಿರುಸಾಗಿ ಅವರ ವಿರುದ್ಧ ಟೀಕೆಯೂ ದೇಶ-ವಿದೇಶಗಳಲ್ಲಿ ಅಲೆಅಲೆಯಾಗಿ ಹೊಮ್ಮಿತು. ಡಿಸ್‍ಲೆಕ್ಸಿಕ್ ಮಕ್ಕಳ ಬಗ್ಗೆ ನಮಗಿರುವ ತಾತ್ಸಾರದ ಧೋರಣೆಯನ್ನು ಬದಲಿಸಲೆಂದು ಜಗತ್ತಿನಾದ್ಯಂತ ಅಸಂಖ್ಯಾತ ಸಂಘ ಸಂಸ್ಥೆಗಳು ಅದೆಷ್ಟೊ ವರ್ಷಗಳಿಂದ ಶ್ರಮಿಸುತ್ತಿವೆ. ‘ತಾರೇ ಜಮೀನ್ ಪರ್’ ಸಿನಿಮಾ ಬಂದಾಗ ಅದಕ್ಕೆ ಜಾಗತಿಕ ಶಾಭಾಸ್‍ಗಿರಿ ಸಿಕ್ಕಿತ್ತು. ಚಿತ್ರದಲ್ಲಿ 8 ವರ್ಷದ ಬಾಲಕನೊಬ್ಬ (ಬಾಲಕಿಯರಲ್ಲಿ ಈ ಕಾಯಿಲೆ ಅಪರೂಪ) ಪೆದ್ದನೆಂಬ ಹಣೆಪಟ್ಟಿ ಪಡೆದಿದ್ದರೂ ಶಿಕ್ಷಕನ ನೆರವಿನಿಂದ ಉತ್ಕೃಷ್ಟ ಕಲಾವಿದನಾಗಿ ಹೊಮ್ಮುವ ಮನತಟ್ಟುವ ಕತೆಯಿದೆ.

ಡಿಸ್‍ಲೆಕ್ಸಿಯಾ ಬಗ್ಗೆ ವ್ಯಾಪಕ ತಿಳಿವಳಿಕೆ ಮೂಡಿಸಿದ ಈ ಸಿನಿಮಾವನ್ನು ವಿಜ್ಞಾನಿಗಳೂ ಮುಕ್ತಕಂಠದಿಂದ ಪ್ರಶಂಸೆ ಮಾಡಿದರು. ಮಕ್ಕಳನ್ನು ಜೂಜಿನ ಕುದುರೆಯ ಹಾಗೆ, ‘ಇನ್ನೂ ವೇಗ, ಜಾಸ್ತಿ ವೇಗ’ ಎಂದು ದೂಡುವ ಪಾಲಕರಿಗೆ ಈ ಚಿತ್ರವೊಂದು ಎಚ್ಚರಿಕೆಯ ಕಹಳೆ’ ಎಂದು ‘ಇಂಡಿಯನ್ ಜರ್ನಲ್ ಆಫ್ ಸೈಕಿಯಾಟ್ರಿ’ ಎಂಬ ವೈಜ್ಞಾನಿಕ ಪತ್ರಿಕೆಯಲ್ಲಿ ವಿಮರ್ಶೆ ಬಂತು. ಜನಜಾಗೃತಿ ಮೂಡಿಸುವಲ್ಲಿ ಈ ಚಿತ್ರ ಅತ್ಯಂತ ಫಲಕಾರಿ ಪ್ರಯತ್ನವಾಗಿದೆ ಎಂದು ಭಾರತೀಯ ನ್ಯೂರಾಲಜಿ (ನರರೋಗ ವಿಜ್ಞಾನ) ಅಕಾಡೆಮಿಯ ತಜ್ಞರೂ ಶ್ಲಾಘಿಸಿದರು. ಚಿತ್ರ ಬಿಡುಗಡೆಯಾದ ಹತ್ತೇ ದಿನಗಳಲ್ಲಿ ಸಿಬಿಎಸ್‍ಇ ಕೂಡ ಎಚ್ಚೆತ್ತುಕೊಂಡಿತು.

ದೈಹಿಕ ವೈಕಲ್ಯವಿದ್ದ ಮಕ್ಕಳಿಗೆ ಮಾತ್ರ ಪರೀಕ್ಷೆ ಬರೆಯಲು ಜಾಸ್ತಿ ಸಮಯ ಕೊಡುತ್ತಿದ್ದ ಈ ಮಂಡಲಿ ಅಪಾಕ್ಷರಿ ಮಕ್ಕಳಿಗೂ ಈ ಸೌಲಭ್ಯವನ್ನು ವಿಸ್ತರಿಸುವುದಾಗಿ ಘೋಷಿಸಿತು. ಮುಂಬೈಯಲ್ಲಿ, ಚಂಡೀಗಢದಲ್ಲಿ ಶಿಕ್ಷಕರಿಗೆ ಇಂಥ ಮಕ್ಕಳ ಕುರಿತು ವಿಶೇಷ ತರಬೇತಿ ಕಾರ್ಯಕ್ರಮಗಳೂ ಆರಂಭವಾದವು. ತಾನೂ ಡಿಸ್‍ಲೆಕ್ಸಿಕ್ಕೆಂದು ‘ಬಿಗ್ ಬಿ’ಯ ಮಗನೂ ಬಹಿರಂಗವಾಗಿ ಹೇಳಿಕೊಳ್ಳುವಂತಾಯಿತು.

‘ದಡ್ಡ’ ಮಕ್ಕಳ ಬಗ್ಗೆ ತಪ್ಪು ಕಲ್ಪನೆ ಮತ್ತು ತಾತ್ಸಾರ ಕೊನೆಗೂ ತೊಲಗಿತು ಎಂದುಕೊಂಡಿರುವಾಗ ದೇಶದ ಪ್ರಧಾನಿಯೇ ಈ ಕಾಯಿಲೆಯನ್ನು ಲೇವಡಿಯ ಅಸ್ತ್ರವಾಗಿ ಬಳಸಿದ್ದು, ಅದಕ್ಕೆ ಅಷ್ಟೊಂದು ಚಪ್ಪಾಳೆ ಬಿದ್ದಿದ್ದು, ಶಿಕ್ಷಣ ತಜ್ಞರನ್ನು ದಂಗುಬಡಿಸಿದೆ. ಅಷ್ಟಕ್ಕೂ ಇದು ಬಾಯಿ ತಪ್ಪಿ ಬಂದ ಅವಹೇಳನವಲ್ಲ. ಪ್ರಧಾನಿಯ ಜೊತೆಗಿನ ವಿಡಿಯೊ ಸಂವಾದದಲ್ಲಿ ಪ್ರತಿ ಪ್ರಶ್ನೆ, ಪ್ರತಿ ಉತ್ತರವೂ ತುಸು ಹೆಚ್ಚುಕಮ್ಮಿ ಪೂರ್ವಯೋಜಿತವೇ ಆಗಿರುತ್ತದೆ. ಮೇಲಾಗಿ, ಡಿಸ್‍ಲೆಕ್ಸಿಯಾ ಎಂಬ ಮಾನಸಿಕ ವೈಕಲ್ಯದ ಅರ್ಥವೂ ಪ್ರಧಾನಿಗೆ ಗೊತ್ತಿತ್ತು.

12 ವರ್ಷಗಳ ಹಿಂದೆ ಮುಖ್ಯಮಂತ್ರಿ ಮೋದಿ ಮತ್ತು ಆಮಿರ್ ಖಾನ್‍ನ ನಡುವೆ ಒಮ್ಮೆ ಸಂಘರ್ಷವಾಗಿತ್ತು. ಅಂದು ಇದೇ ‘ತಾರೇ ಜಮೀನ್ ಪರ್’ ಚಿತ್ರ ಗುಜರಾತ್‍ನಲ್ಲಿ ಬಿಡುಗಡೆ ಆಗದಂತೆ ಮೋದಿಭಕ್ತರು ತಡೆದಿದ್ದರು. ಏಕೆಂದರೆ ಆಮಿರ್ ಖಾನ್ ಆಗಿನ ‘ನರ್ಮದಾ ಬಚಾವೊ ಆಂದೋಲನ’ವನ್ನು ಬೆಂಬಲಿಸಿ, ಮುಳುಗಡೆ ಸಂತ್ರಸ್ತರ ಕುರಿತ ಮೋದಿಯವರ ನಿಲುವನ್ನು ಟೀಕಿಸಿದ್ದರು. ಈಗ ಡಿಸ್‍ಲೆಕ್ಸಿಯಾ ಕಾಯಿಲೆಯನ್ನು ಕುಹಕಕ್ಕೆ ಬಳಸಿದ್ದೂ ಅಲ್ಲದೆ, ಅದಕ್ಕೆ ಕ್ಷಮೆ ಕೇಳಬೇಕೆಂಬ ಜಾಗತಿಕ ಒತ್ತಡಕ್ಕೂ ಪ್ರಧಾನಿ ಕ್ಯಾರೇ ಎಂದಿಲ್ಲ ಏಕೆ? ಎತ್ತರಕ್ಕೇರಿದ ವ್ಯಕ್ತಿಗಳು ದುರ್ಬಲರತ್ತ ಹೀಗೆಲ್ಲ ತಾತ್ಸಾರ ತೋರಿಸಿ ಚಪ್ಪಾಳೆ ಗಿಟ್ಟಿಸುವುದರ ಮಾನಸಿಕತೆಯನ್ನೇ ವಿಜ್ಞಾನಿಗಳು ವಿಶ್ಲೇಷಣೆ ಮಾಡುತ್ತಿದ್ದಾರೆ.

ಸರ್ಕಾರಿ ದಾಖಲೆಗಳ ಪ್ರಕಾರ ಭಾರತದಲ್ಲಿ ಸುಮಾರು ಮೂರುವರೆ ಕೋಟಿ ಡಿಸ್‍ಲೆಕ್ಸಿಯಾ ಮಕ್ಕಳಿದ್ದಾರೆ. ಲೆಕ್ಕಕ್ಕೆ ಸಿಗದವರ ಸಂಖ್ಯೆಯೂ ದೊಡ್ಡದೇ ಇದೆ. ದೊಡ್ಡ ನಗರಗಳ ಪ್ರತಿಷ್ಠಿತ ಶಾಲೆಗಳಲ್ಲಷ್ಟೆ ಅಪಾಕ್ಷರಿಗಳನ್ನು ಗುರುತಿಸಿ, ಪಾಲಕರ ಹಾಗೂ ಮಗುವಿನ ಆತ್ಮವಿಶ್ವಾಸ ಹೆಚ್ಚಿಸುವ ಯತ್ನಗಳಿವೆ. ಹಳ್ಳಿಯ ಶಾಲೆಗಳಲ್ಲಿ ಅಂಥ ಮಕ್ಕಳನ್ನು ಗುರುತಿಸುವುದೂ ಇಲ್ಲ. ಪಾಲಕರಿಗೆ ಗೊತ್ತೂ ಇರುವುದಿಲ್ಲ. ಏಳನೆಯ ಕ್ಲಾಸ್‍ವರೆಗೆ ಮಕ್ಕಳನ್ನು ಫೇಲ್ ಮಾಡಬಾರದೆಂಬ ನೀತಿ ಜಾರಿಗೆ ಬಂದಮೇಲಂತೂ (ಈಗ ಸಡಿಲಾಗಿದೆ) ಈ ಕಾಯಿಲೆ ಇನ್ನಷ್ಟು ಅಡಗಿ ಕೂತಂತಾಗಿದೆ.

ಡಿಸ್‍ಲೆಕ್ಸಿಕ್ ಅಥವಾ ಅಪಾಕ್ಷರಿಗಳು ನಮಗಿಂತ ಭಿನ್ನವಾಗಿ ಜಗತ್ತನ್ನು ನೋಡುತ್ತಾರೆ; ನಮಗೆ ಹೊಳೆದಿರದ ಯೋಚನೆಗಳನ್ನು ಹೊಮ್ಮಿಸುತ್ತಾರೆ. ಸೂಕ್ತ ಅವಕಾಶ ಸಿಕ್ಕರೆ ಅಂಥ ಕೆಲವರ ವಿಶೇಷ ಪ್ರತಿಭೆಗಳು ಹೊರಬರುತ್ತವೆಂದು ಮನೋವಿಜ್ಞಾನಿಗಳು ಹೇಳುತ್ತಾರೆ. ಅವರಿಗೆಂದೇ ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳಿವೆ, ಚರ್ಚಾ ವೇದಿಕೆಗಳಿವೆ. ಅಪಾಕ್ಷರಿಗಳ ಬಗ್ಗೆ ಹೆಮ್ಮೆ, ಆದರ ಹೆಚ್ಚಲೆಂದೇ ಪಿಕಾಸೊ, ಸಿಂಗಪುರದ ಮೊದಲ ಪ್ರಧಾನಿ ಲೀಕ್ವಾನ್ಯೂ, ಹೆನ್ರಿ ಫೋರ್ಡ್, ಲಿಯೊನಾರ್ದೊ ದ ವಿಂಚಿ ಮುಂತಾದ ಹೆಸರುಗಳು ಮುನ್ನೆಲೆಗೆ ಬರುತ್ತಿರುತ್ತವೆ.

ಅಪಾಕ್ಷರಿಗಳ ಪತ್ತೆಗೆಂದು ಹೊಸ ಆಪ್ ತಯಾರಿಸಿದ ಆ ಹುಡುಗಿಗೆ ಶಾಭಾಸ್ ಹೇಳುತ್ತ, ಕೊನೆಗೊಂದು ತುಂಟ ಪ್ರಶ್ನೆ: ರಾಹುಲ್ ಗಾಂಧಿಯವರಿಗೆ ‘ಡಿಸ್‍ಲೆಕ್ಸಿಯಾ ಇತ್ತು, ಈಗಲೂ ಇದೆ’ ಎಂದು ವಾದಿಸಿದರೆ ಅದು ಅವರಿಗೆ ಅವಮಾನವೆ? ಅಥವಾ ‘ಅವರಿಗೆ ಡಿಸ್‍ಲೆಕ್ಸಿಯಾ ಇದ್ದಿರಲಿಕ್ಕಿಲ್ಲ, ಅವರು ಅಸಾಮಾನ್ಯರೇನಲ್ಲ’ ಎಂದರೆ ಅವಮಾನಕಾರಿಯೆ?

ಬರಹ ಇಷ್ಟವಾಯಿತೆ?

 • 59

  Happy
 • 6

  Amused
 • 3

  Sad
 • 1

  Frustrated
 • 7

  Angry

Comments:

0 comments

Write the first review for this !