ಸೋಮವಾರ, ಜೂನ್ 27, 2022
21 °C
ಚೀನೀ ಹುನ್ನಾರವನ್ನು ಬದಿಗಿಟ್ಟು, ಕೃಷಿ ಪರಿಸರದ ಅಸಲೀ ಭಯೋತ್ಪಾದನೆ ಕುರಿತು ಮಾತಾಡೋಣವೆ?

ನಾಗೇಶ ಹೆಗಡೆ ಅಂಕಣ–ವಿಜ್ಞಾನ ವಿಶೇಷ| ಈಗ ಬೀಜದ ಬುಟ್ಟಿಯಲ್ಲಿ ಭಯೋತ್ಪಾತ

ನಾಗೇಶ ಹೆಗಡೆ Updated:

ಅಕ್ಷರ ಗಾತ್ರ : | |

ಬೀಜದ ಬುಟ್ಟಿಯಲ್ಲಿ ಭಯೋತ್ಪಾತ– ಪ್ರಾತಿನಿಧಿಕ ಚಿತ್ರ

ಚೀನೀಯರು ನಮ್ಮ ರೈತರಿಗೆ ಉಚಿತ ಬೀಜಗಳನ್ನು ಕಳಿಸಿ ನಾನಾ ಬಗೆಯ ರೋಗಗಳನ್ನು ಹಬ್ಬಿಸಿ ಕೃಷಿರಂಗದಲ್ಲಿ ಭಯೋತ್ಪಾತ ಉಂಟುಮಾಡುತ್ತಿದ್ದಾರೆ ಎಂಬ ಗುಲ್ಲೆದ್ದಿದೆ. ಅಸಲೀ ಕತೆ ಏನು? ನಮ್ಮ ದೇಶದ ಕೃಷಿ ಪರಿಸರಕ್ಕೆ ಬಂದೆರಗಿದ ನಿಜವಾದ ಟೆರರಿಸಂ ಬೇರೆಯೇ ಇದೆ. ಅದನ್ನಿಲ್ಲಿ ಚರ್ಚಿಸೋಣವೆ?

ಬಾಂಬ್‌ಗಳಲ್ಲಿ ಅತ್ಯಂತ ಶ್ರೇಷ್ಠ ಬಾಂಬ್‌ ಯಾವುದು ಗೊತ್ತಾ? ‘ಬೀಜ ಬಾಂಬ್‌’. ಅದರ ತಯಾರಿಕೆಯೂ ಸುಲಭ. ಒದ್ದೆ ಮಣ್ಣಿನ ಮುದ್ದೆಯಲ್ಲಿ ಕೆಲವು ಬೀಜಗಳನ್ನು ಹುದುಗಿಸಿ ಒಣಗಿಸಿಟ್ಟಿರಿ. ನೇರಳೆ, ಬೇವು, ನುಗ್ಗೆ, ಅಗಸೆ, ಹಲಸು, ಹೊಂಗೆ, ಚಕೋತ ಹೀಗೆ ಯಾವುದೂ ಆದೀತು. ಮಳೆಗಾಲದ ಆರಂಭದಲ್ಲಿ ರಸ್ತೆ ಪಕ್ಕಕ್ಕೆ ಎಸೆಯುತ್ತ ಹೋಗಿ. ಕೆಲವಾದರೂ ಚಿಗುರಿ ಮೇಲೇಳಬಹುದು. ಅದು ಲೋಕ ಕಲ್ಯಾಣದ ಕೆಲಸ. ಹಳ್ಳಿಯ ಜನರು ಹಕ್ಕಿಗಳನ್ನು ಓಡಿಸಲು ಬಳಸುವ ಚಿಟ್‌ಬಿಲ್ಲು, ಪೆಟ್ಲು ಅಥವಾ ಕವಣೆಯಿಂದ ಇಂಥ ಬೀಜದುಂಡೆಗಳನ್ನು ದೂರಕ್ಕೂ ಚಿಮ್ಮಿಸಬಹುದು. ಡ್ರೋನ್‌ ಮತ್ತು ಹೆಲಿಕಾಪ್ಟರ್‌ ಮೂಲಕ ಬಂಜರು ಭೂಮಿಗೆ ಇಂಥ ಬಾಂಬ್‌ಗಳನ್ನು ಬೀಳಿಸಬಹುದು. ಸುಧಾರಿತ ದೇಶಗಳಲ್ಲಿ ಬೀಜಗೋಲಿಗಳನ್ನು ದೂರಕ್ಕೆ ಉಡಾಯಿಸಲು ಬಗೆಬಗೆಯ ಮೋಜಿನ ಆಟಿಕೆಗಳೂ ಚಂದದ ಗೋಲಿಗಳೂ ಸಿಗುತ್ತವೆ. ನಮ್ಮ ದೇಶದಲ್ಲೂ ಸೀಡ್‌ಬಾಂಬ್‌ (seed bomb) ಹೆಸರನ್ನು ಗೂಗಲ್‌ ಮಾಡಿದರೆ ನಾನಾ ಬಗೆಯ ಹೂಹಣ್ಣುಗಳ ರೆಡಿಮೇಡ್‌ ಉಂಡೆಗಳು ಸಿಗುತ್ತವೆ. ಅಂಚೆಯ ಮೂಲಕ ತರಿಸಬಹುದು. ಭಾರತ ಸರ್ಕಾರದ್ದೇ mygov.in ಬ್ಲಾಗ್‌ನಲ್ಲಿ ಸೆಗಣಿಮಿಶ್ರಿತ ಸೀಡ್‌ಬಾಂಬ್‌ಗಳ ತಯಾರಿಕೆ, ಪ್ರಸರಣ, ಪ್ರಯೋಜನದ ವಿವರಗಳಿವೆ.

ನಮ್ಮಲ್ಲಿ ಕಳೆದ ನಾಲ್ಕಾರು ವರ್ಷಗಳಿಂದ ಇಂಥ ‘ಬೀಜಗೋಲಿ’ ತಯಾರಿಸುವ ಹಾಗೂ ಬಿತ್ತರಿಸುವ ಕೆಲಸ ಶಾಲೆ ಕಾಲೇಜುಗಳಲ್ಲಿ, ಯುವಸಂಘಗಳಲ್ಲಿ ಹಬ್ಬದ ಸಂಭ್ರಮದಲ್ಲಿ ನಡೆಯುತ್ತ ಬಂದಿತ್ತು. ಆದರೆ ಕೇಡಿ ಕೊರೊನಾ ಬಂದು ಆ ಕೆಲಸಕ್ಕೆ ಕಲ್ಲು ಹಾಕಿದೆ. ಅಂಥ ಒಳ್ಳೇ ಕೆಲಸದ ಬದಲಿಗೆ, ಈಗ ಭಯಾನಕ ಬೀಜ ಬಾಂಬ್‌ಗಳ ಬಗ್ಗೆ ಜನರನ್ನು ಹೆದರಿಸುವ ಕೆಲಸ ಆರಂಭವಾಗಿದೆ. ಚೀನೀಯರು ನಮ್ಮ ರೈತರಿಗೆ ಬೀಜಗಳ ಅದೇನೋ ಉಚಿತ ಪ್ಯಾಕೆಟ್‌ಗಳನ್ನು ಕಳಿಸುತ್ತಿದ್ದಾರಂತೆ. ಅಂಥ ಬೀಜಗಳನ್ನು ಬಿತ್ತಿದರೆ ರೈತಪರಿಸರದ ಸರ್ವನಾಶಕ್ಕೆ ಮುನ್ನುಡಿಯಂತೆ- ಅದಂತೆ ಇದಂತೆ.‌

ಅಂಥ ಹೊಸ ಆತಂಕದ ಸುದ್ದಿಯ ಸಂಕ್ಷಿಪ್ತ ಹಿನ್ನೆಲೆ ಹೀಗಿದೆ: ಕಳೆದ ವರ್ಷ ಇದೇ ದಿನಗಳಲ್ಲಿ ಉತ್ತರ ಭಾರತದ ಮತ್ತು ನಮ್ಮ ಗದಗ, ಶಿರಹಟ್ಟಿ ಭಾಗದ ಕೆಲವು ರೈತರಿಗೆ ಉಚಿತ ಬಿತ್ತನೆ ಬೀಜಗಳ ಪಾರ್ಸೆಲ್‌ ಬಂದಿದ್ದವು. ಇದನ್ನು ಚೀನಾ ದೇಶವೇ ‘ಜೈವಿಕ ಅಸ್ತ್ರ’ವಾಗಿ ರವಾನಿಸಿದೆ ಎಂತಲೂ ಮುಗ್ಧ ರೈತರು ಇದನ್ನು ಬಿತ್ತಿದರೆ ಅದು ಚಿಗುರಿ, ಸ್ಥಳೀಯ ತಳಿಗಳನ್ನು ನಾಶ ಮಾಡಿ, ರೋಗರುಜಿನ, ಕೀಟಕಾಟ ಹಬ್ಬಿಸಿ ದೇಶಕ್ಕೆ ಅಪಾರ ನಷ್ಟ ಉಂಟುಮಾಡಬಹುದು ಎಂತಲೂ ಕೇಂದ್ರ ಸರ್ಕಾರ ಹೋದ ವರ್ಷವೇ ಎಚ್ಚರಿಕೆ ನೀಡಿದೆ. ‘ಈಗ ಮತ್ತೆ ಬಿತ್ತನೆಯ ಕಾಲ ಬಂದಿದ್ದರಿಂದ ರೈತರು ಹುಷಾರಾಗಿರಬೇಕು; ಹೆಸರು ದೆಸೆ ತಿಳಿಸದೆ ಯಾರಾದರೂ ನಿಮಗೆ ಉಚಿತ ಬೀಜದ ಪ್ಯಾಕೆಟ್‌ ಕಳಿಸಿದರೆ ಅದನ್ನು ಬಿತ್ತನೆಗೆ ಬಳಸಬೇಡಿ’. ಹೀಗೆಂದು ಬೀದರ್‌, ತುಮಕೂರು ಜಿಲ್ಲೆಗಳ ಕೃಷಿ ಅಧಿಕಾರಿಗಳು ರೈತರಿಗೆ ಎಚ್ಚರಿಕೆ ಸೂಚನೆಗಳನ್ನು ಈ ವರ್ಷವೂ ಪ್ರಕಟಿಸಿದ್ದಾರೆ.

ಚೀನೀಯರ ಈ ಬೀಜ ಭಯೋತ್ಪಾತದ ಸಂಗತಿ ಕಳೆದ ಆಗಸ್ಟ್‌ನಲ್ಲೇ ನಮ್ಮ ಅನೇಕ ರಾಷ್ಟ್ರೀಯ ಪತ್ರಿಕೆಗಳಲ್ಲಿ, ಚಾನೆಲ್‌ಗಳಲ್ಲಿ ಚರ್ಚೆಗೆ ಬಂದಿದ್ದು ಹೌದು. ಈಗ ಮತ್ತೆ ಅದೇ ಭಯದ ಭೂತ ಧುತ್ತೆಂದಿದೆ. ಕೆಲವರು ಬಾಂಬ್‌ ಬಿದ್ದಂತೆ ಕಂಗಾಲಾಗಿದ್ದಾರೆ. ಆದರೆ ಹಾಗೆಲ್ಲ ಭಯ ಬೀಳಬೇಕಿಲ್ಲ. ಏಕೆಂದರೆ ಈ ಸುದ್ದಿಯ ಮೂಲವನ್ನು ಹುಡುಕುತ್ತ ಹೋದರೆ ಉಳ್ಳಾಗಡ್ಡೆ ಬಿಡಿಸಿ ಬೀಜ ಹುಡುಕಿದಂತಾಗುತ್ತಿದೆ! ಕಳೆದ ವರ್ಷ ‘ಭಾರತ ರಾಷ್ಟ್ರೀಯ ಬೀಜ ಸಂಘ’ (NSAI) ಹಾಗೂ ‘ಅಂತರರಾಷ್ಟ್ರೀಯ ಬೀಜಪರೀಕ್ಷಾ ಪ್ರಾಧಿಕಾರ’ಗಳು (ISTA) ರೈತರಿಗೆ ಎಚ್ಚರಿಕೆಯ ನೋಟಿಸನ್ನು ಕಳಿಸಿದ್ದು ಹೌದು. ಏಕೆಂದರೆ ಅಮೆರಿಕ, ಕೆನಡಾ ಮತ್ತು ಬ್ರಿಟನ್‌ಗಳಲ್ಲಿ ಕೆಲವು ರೈತರಿಗೆ ಅಂಥ ಪುಟ್ಟಪುಟ್ಟ ಬೀಜದ ಪ್ಯಾಕೆಟ್‌ಗಳು ಬಂದಿದ್ದುವಂತೆ. ಚೀನಾದಿಂದ ಬರುವ ಅಂಥ ಉಚಿತ ಬೀಜಗಳ ಬಗ್ಗೆ ರೈತರು ಜಾಗರೂಕರಾಗಬೇಕೆಂದೂ ಅವನ್ನು ನೆಲಕ್ಕೆ ಊರುವ ಬದಲು ಸುಟ್ಟುಹಾಕಬೇಕು ಇಲ್ಲವೆ ಸರ್ಕಾರಕ್ಕೆ ವರದಿ ಮಾಡಬೇಕು ಎಂದೂ ಅಮೆರಿಕ ತನ್ನ ರೈತರಿಗೆ ಕೊಟ್ಟ ಎಚ್ಚರಿಕೆಯ ನೋಟಿಸನ್ನು ನೀಡಿದ್ದೂ ಹೌದು. ಅಂಥ ಎಚ್ಚರಿಕೆಯ ಮಾತುಗಳೇ ನಮ್ಮಲ್ಲೂ ಮರುಪ್ರಸಾರಗೊಂಡವು.

ಅನಾಮಿಕ ಕಂಪನಿಗಳು ಹೀಗೆ ಉಚಿತ ಪ್ಯಾಕೆಟ್‌ಗಳನ್ನು ಯಾರದೋ ವಿಳಾಸಕ್ಕೆ ರವಾನಿಸುವ ತಂತ್ರಕ್ಕೆ ‘ಬ್ರಶಿಂಗ್‌ ಸ್ಕ್ಯಾಮ್‌’ (brushing scam) ಎನ್ನುತ್ತಾರೆ. ಅದು ಬೀಜದ ಪ್ಯಾಕೆಟ್ಟೇ ಆಗಬೇಕೆಂದಿಲ್ಲ. ಮಹಿಳೆಯರ ಆಲಂಕಾರಿಕ ಹೇರ್‌ ಕ್ಲಿಪ್‌ ಆಗಿರಬಹುದು; ಪುಟ್ಟ ಆಟಿಕೆ ಅಥವಾ ಮಕ್ಕಳ ಮೋಜಿನ ಪಝಲ್‌ ಅಗಿರಬಹುದು. ಅವನ್ನು ಉತ್ಪಾದಿಸುವ ಕಂಪನಿಗಳ ದಲ್ಲಾಳಿಗಳು ಕೆಲವರ ಮನೆಯ ವಿಳಾಸವನ್ನು ಅಂತರ್ಜಾಲದಲ್ಲಿ ಪತ್ತೆ ಹಚ್ಚಿ ಹೀಗೆ ಉಚಿತ ಸ್ಯಾಂಪಲ್‌ ಕಳಿಸುತ್ತಾರೆ. ಮತ್ತು ಅಂಥ ಗ್ರಾಹಕರ ಹೆಸರಿನಲ್ಲಿ ತಾವೇ ನಕಲಿ ಖಾತೆ ತೆರೆದು ‘ಭೇಷ್‌ ನಿಮ್ಮ ಮಾಲು ತುಂಬ ಚೆನ್ನಾಗಿದೆ’ ಎಂಬ ಹೊಗಳಿಕೆಯ ಹೊಳಪು ಕೊಟ್ಟು (ಬ್ರಶಿಂಗ್‌ ಮಾಡಿ) ಬೇರೆ ಗ್ರಾಹಕರನ್ನು ಆಕರ್ಷಿಸುತ್ತಾರೆ. ಕಂಪನಿಯಿಂದ ಶಾಭಾಸ್‌ಗಿರಿ ಮತ್ತು ಪದೋನ್ನತಿ ಪಡೆಯುತ್ತಾರೆ. ಕಂಪನಿ ಅಕಸ್ಮಾತ್‌ ತಪಶೀಲು ಮಾಡಿದರೆ ಗ್ರಾಹಕರ ವಿಳಾಸ ಸರಿಯಾಗಿಯೇ ಇರುತ್ತದಲ್ಲ? ಈ ಮಾರಾಟ ತಂತ್ರದಲ್ಲಿ ವಾಚು, ಮೊಬೈಲ್‌ನಂಥ ದೊಡ್ಡ ಮೊತ್ತದ, ದೊಡ್ಡ ಗಾತ್ರದ ವಸ್ತುಗಳಿಗಿಂತ ಅಲ್ಪಬೆಲೆಯ ಸಣ್ಣಪುಟ್ಟ ವಸ್ತುಗಳಿರುತ್ತವೆ. ಬೀಜಗಳ ವಹಿವಾಟಿನಲ್ಲಿ ಇಂಥ ದುರ್ದಂಧೆ ಸುಲಭ. ದೊಡ್ಡ ನಗರಗಳಲ್ಲಿ ಬಾಲ್ಕನಿಯಲ್ಲಿ, ಕೈದೋಟಗಳಲ್ಲಿ ಬೆಳೆಸಬಹುದಾದ ಆಲಂಕಾರಿಕ ಹೂವು ಮತ್ತು ತರಕಾರಿ ಬೀಜಗಳಿಗೆ ತುಂಬ ಬೇಡಿಕೆ ಇದೆ. ಅಂಥ ಕಂಪನಿಗಳ ಆನ್‌ಲೈನ್‌ ವಹಿವಾಟು ಜೋರಾಗಿಯೇ ಇರುತ್ತದೆ. ‌ಮೇಲಾಗಿ, ಅಮೆರಿಕ ಹಾಗೂ ಐರೋಪ್ಯ ದೇಶಗಳಿಗೆ ಅಗ್ಗದ ಚೀನೀ/ತೈವಾನಿ, ಕೊರಿಯಾದ ವಸ್ತುಗಳು ಇನ್ನಷ್ಟು ಅಗ್ಗದಲ್ಲಿ ಬರುವಂತೆ ಅಲ್ಲಿನ ಸರ್ಕಾರಗಳೇ ಅಂಚೆ ಶುಲ್ಕದಲ್ಲಿ ಭಾರೀ ರಿಯಾಯಿತಿ ಘೋಷಿಸಿಕೊಂಡಿವೆ.

ಚೀನೀ ಮೂಲದ ಬೇರೆಲ್ಲ ಭೋಗಸಾಮಗ್ರಿಗಳ ಜೊತೆ ಬೀಜಗಳೂ ಬಂದಿದ್ದು ಪಾಶ್ಚಾತ್ಯ ದೇಶಗಳಿಗೆ ತಲೆನೋವಾಗಿದೆ. ಏಕೆಂದರೆ ಬೀಜ, ಸಸ್ಯ, ಕೀಟ, ಶಿಲೀಂಧ್ರಗಳ ವಿಷಯದಲ್ಲಿ ಈ ದೇಶಗಳು ಕಟ್ಟೆಚ್ಚರದಿಂದ ಇರುತ್ತವೆ. ಅಮೆರಿಕಕ್ಕೆ ಭೇಟಿ ಕೊಡುವ ಪ್ರವಾಸಿಗರ ಸೂಟ್‌ಕೇಸ್‌ನಲ್ಲಿ ಜೀರಿಗೆ, ಸಾಸಿವೆ ಇದ್ದರೂ ಚೆಕ್‌ ಮಾಡಲಾಗುತ್ತದೆ. ‘ಅಮೆರಿಕದ ಕೆಲವೆಡೆ ಈ ರಾಜ್ಯದಿಂದ ಆ ರಾಜ್ಯಕ್ಕೆ ಕೂಡ ಜೀವದ್ರವ್ಯಗಳ ಸಾಗಣೆ ಮಾಡುವಂತಿಲ್ಲ. ಬೇರೆ ದೇಶದಿಂದ ಸಸ್ಯ-ಪ್ರಾಣಿ-ಬೀಜ-ಮೊಟ್ಟೆ ಏನನ್ನೇ ತರಿಸಿದರೂ ಅವನ್ನು ಕ್ವಾರಂಟೈನ್‌ ಮಾಡಿ, ಸುರಕ್ಷತಾ ಸರ್ಟಿಫಿಕೇಟ್‌ ಪಡೆದ ನಂತರವೇ ಬಳಕೆಗೆ, ಸಂಶೋಧನೆಗೆ ಬಿಡಲಾಗುತ್ತದೆ’ ಎನ್ನುತ್ತಾರೆ ಖ್ಯಾತ ಬಹುರಾಷ್ಟ್ರೀಯ ಬೀಜ ಕಂಪನಿಯೊಂದರ ಉನ್ನತ ಅಧಿಕಾರಿಯಾಗಿದ್ದ ಡಾ. ಶರಣ ಬಸವೇಶ್ವರ ಅಂಗಡಿ. ಚೀನಾದಿಂದ ಬರುವ ಬೀಜಗಳ ಫ್ರೀ ಪ್ಯಾಕೆಟ್‌ ಕುರಿತು ಅಮೆರಿಕ, ಐರೋಪ್ಯ ದೇಶಗಳು ತಮ್ಮ ಪ್ರಜೆಗಳಿಗೆ ಎಚ್ಚರಿಕೆಯ ನೋಟಿಸ್‌ ನೀಡಲು ಅದೇ ಕಾರಣವಾಗಿದೆ. ಅದನ್ನೇ ನಮ್ಮ ಕೃಷಿ ಅಧಿಕಾರಿಗಳೂ ಕಾಪಿ ಮಾಡಿ ಎಚ್ಚರಿಕೆಯ ಫೋಷಪತ್ರ ಹೊರಡಿಸಿ, ಸುದ್ದಿ ಮಾಧ್ಯಮಗಳಿಗೆ ಹಬ್ಬದೂಟ ಉಣಿಸಿ ಕೈತೊಳೆದುಕೊಂಡಿವೆ. ನಮ್ಮ ರೈತರಿಗೆ ಚೀನಾದಿಂದ ಅಂಥ ಪ್ಯಾಕೆಟ್‌ ಬಂದ ಒಂದೂ ಉದಾಹರಣೆ ಇದುವರೆಗಂತೂ ಸಿಕ್ಕಿಲ್ಲ.

ಬಂದಿರಬಹುದು ಅನ್ನಿ. ನಮ್ಮ ದೇಶದ ಅನೇಕ ಬಳಕೆದಾರರು ಕೊರಿಯರ್‌ ಮೂಲಕ ಬೀಜದ ಪ್ಯಾಕೆಟ್‌ಗಳನ್ನು ಈಗೀಗ ತರಿಸುತ್ತಿದ್ದಾರೆ. ಕೆಲವು ಕಂಪನಿಗಳು ತಮ್ಮ ಉತ್ಪನ್ನಕ್ಕೆ ಪ್ರಾರಂಭಿಕ ಪ್ರಚಾರವನ್ನು ಪಡೆಯಲು ರೈತರಿಗೆ ಅಥವಾ ರೈತನಾಯಕರಿಗೆ ಉಚಿತ ಪ್ಯಾಕೆಟ್‌ಗಳನ್ನು ಕಳುಹಿಸುವ ಸಾಧ್ಯತೆಯೂ ಇದೆ. ಹಾಗಾಗಿ ರೈತರಿಗೆ ಇಂಥ ಬೀಜಗಳು ಬಂದಿರಲೂಬಹುದು. ಈ ದಿನಗಳಲ್ಲಿ ಇನ್ನೂ ಏನೇನೋ ವ್ಯಾಪಾರೀ ತಂತ್ರಗಳು ಜಾರಿಗೆ ಬಂದಿರುವ ಸಾಧ್ಯತೆಗಳೂ ಇವೆ. ಉದಾಹರಣೆಗೆ ‘ನಕಲೀ ಬೀಜಗಳು ಬರುತ್ತಿವೆ; ನಮ್ಮ ಕಂಪನಿಯ ಅಸಲೀ ಬೀಜಗಳನ್ನೇ ಖರೀದಿಸಿ’ ಎಂಬ ಮಾತನ್ನು ರೈತರ ಮನಸ್ಸಿನಲ್ಲಿ ಬಿಂಬಿಸಲೆಂದೇ ಲೋಕಲ್‌ ಕಂಪನಿಗಳು ಕೆಲವು ಅನಾಮಧೇಯ ನಕಲಿ ಬೀಜಗಳನ್ನು ಹಳ್ಳಿಯ ಜನರಿಗೆ ರವಾನಿಸಿರಲೂಬಹುದು. ಅಂಥ ನಕಲಿ ಬೀಜಗಳನ್ನು ಬಿತ್ತನೆ ಮಾಡಲು ಹೋಗಿ ರೈತರು ನಷ್ಟ ಅನುಭವಿಸಿ, ‘ಬೇಡಪ್ಪಾ ಈ ನಕಲೀ ಬೀಜಗಳ ಹಾವಳಿ; ನಾನಂತೂ ಇನ್ನುಮೇಲೆ ಸದರಿ ಕಂಪನಿಯ ಖಾತರಿ ಬೀಜಗಳನ್ನೇ ಖರೀದಿ ಮಾಡುತ್ತೇನೆ’ ಎಂದು ನಾಲ್ಕಾರು ರೈತರಿಗೆ ಹೇಳಬಹುದಲ್ಲ? ಹೇಗೂ ರೈತಸಮುದಾಯದಲ್ಲಿ ಬಾಯಿಮಾತಿನ ಪ್ರಚಾರಕ್ಕೇ ಎಲ್ಲೆಡೆ ಆದ್ಯತೆ ಇದೆ. ಇದರ ಹೊರತಾಗಿ ಕೆಲವು ಕುತಂತ್ರಿಗಳು ಜನರನ್ನು ಮೋಜಿಗೆ ಹೆದರಿಸಲೆಂದೇ ನಕಲಿ ಬೀಜಗಳ ಪೊಟ್ಟಣಗಳನ್ನು ರೈತರಿಗೆ ಕೊರಿಯರ್‌ ಮಾಡಬಹುದು. ‘ಈ ಬೀಜಗಳ ಟೆರರಿಸಂ ನನಗೇಕೋ ಯಾರೋ ಮೋಸದಾಟ (Prank) ಆಡುವವರು ತಮಾಷೆ ನೋಡಲು ಎಸೆಯುತ್ತಿರುವ ದಾಳದಾಟದಂತೆ ಕಾಣುತ್ತದೆ’ ಎನ್ನುತ್ತಾರೆ, ಕನ್ನಡದ ಖ್ಯಾತ ಕೃಷಿವಿಜ್ಞಾನಿ ಹಾಗೂ ವಿಜ್ಞಾನ ಕಾದಂಬರಿಕಾರ ಪ್ರೊ. ಕೆ.ಎನ್‌.ಗಣೇಶಯ್ಯ. ‘ಹಾವಿಗೆ ಹೆದರಿದ ಮನಸ್ಸಿಗೆ ಬಳ್ಳಿ ಕಂಡರೂ ಹೆದರಿಕೆಯಾಗುವುದು ಸಹಜ. ಈ ಸತ್ಯವನ್ನೇ ಬಂಡವಾಳ ಮಾಡಿಕೊಂಡ ಯಾರೋ ಚೀನಾದ ಕೋವಿಡ್ ವೈರಾಣುವಿನಿಂದ ಹೆದರಿದ ಸಮಾಜವನ್ನು ಮತ್ತೂ ಹೆದರಿಸಿ ತಮಾಷೆ ನೋಡಲೆಂದು ಅಂಚೆಯಲ್ಲಿ ಬೀಜ ಕಳುಹಿಸಿ ಆಡುತ್ತಿರಬಹುದು’ ಎಂದು ಪ್ರೊ. ಗಣೇಶಯ್ಯ ಹೇಳುತ್ತಾರೆ.


ನಾಗೇಶ ಹೆಗಡೆ

ಕೊರೊನಾ ಹಾವಳಿಯಿಂದ ತತ್ತರಿಸಿ ಹೋಗಿರುವ ಸರ್ಕಾರವೂ ಜನರ ಗಮನವನ್ನು ಬೇರೆಡೆ ತಿರುಗಿಸಲು ಏನೆಲ್ಲ ತಂತ್ರಗಳನ್ನು ಹೆಣೆಯುವ ಸಾಧ್ಯತೆಯೂ ಇದೆ. ಅದನ್ನು ನಾವು ಹಿಂದೆ ಕಾಂಗ್ರೆಸ್‌ ನೇತೃತ್ವದ ಸರ್ಕಾರದಲ್ಲೂ, ಕಳೆದ ವರ್ಷ ಸುಶಾಂತ್‌ ಸಿಂಗ್‌ ರಜಪೂತ್‌ ಪ್ರಕರಣದಲ್ಲೂ ನೋಡಿದ್ದೇವೆ. ಮಾಧ್ಯಮಗಳು ಬರಿ ಕೊರೊನಾ, ಕರೀಶಿಲೀಂಧ್ರ, ಔಷಧ ಕಾಳಸಂತೆ ಇತ್ಯಾದಿ ಬಿಟ್ಟು ಬೇರೇನೋ ವಿಷಯ ಚರ್ಚಿಸುವಂತೆ ಮಾಡಲು ಮತ್ತು ಚೀನಾ ಕುರಿತು ಜನರನ್ನು ಇನ್ನಷ್ಟು ಕೋಪಾವಿಷ್ಟರನ್ನಾಗಿ ಮಾಡಲು ಈ ‘ಬೀಜ ಭಯೋತ್ಪಾದನೆ’ ಕೂಡ ಸರ್ಕಾರದ ನೆರವಿಗೆ ಬಂದಿರಲೂ ಸಾಕು.

ನಮ್ಮಲ್ಲಿ ಕೆಲವು ಉತ್ಸಾಹೀ ರೈತರು ಬೇರೆ ದೇಶಗಳಿಂದ ಸಸ್ಯಗಳನ್ನು, ಬೀಜಗಳನ್ನು ತರಿಸುತ್ತಲೇ ಇರುತ್ತಾರೆ. ನಮ್ಮ ಕಸ್ಟಮ್ಸ್‌ ಮತ್ತು ಅಂಚೆ ಇಲಾಖೆಯವರ ಕಣ್ಣು ತಪ್ಪಿಸಿ ವಿದೇಶೀ ಪ್ಯಾಕೆಟ್‌ಗಳನ್ನು ತರಿಸುವುದು ಅಂಥ ಕಷ್ಟದ ಕೆಲಸವೇನೂ ಅಲ್ಲ. ‘ನನಗೆ ಅಂಥ ರೈತರ ಪರಿಚಯವೂ ಇದೆ’ ಎನ್ನುತ್ತಾರೆ, ಪುತ್ತೂರಿನಲ್ಲಿ ಗೇರು ಅಭಿವೃದ್ಧಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಮೋಹನ್‌ ತಲಕಾಲುಕೊಪ್ಪ. ‘ನಮ್ಮ ದೇಶೀ ಕಂಪನಿಗಳು ತಮ್ಮ ಸೇಲ್ಸ್‌ ಜಾಸ್ತಿ ಮಾಡಲೆಂದು ಹೀಗೆ ರೈತರಿಗೆ ಉಚಿತ ಪ್ಯಾಕೆಟ್‌ ವಿತರಣೆ ಮಾಡುವ ಸಾಧ್ಯತೆಯೂ ಇದೆ’ ಎಂದು ಅವರು ಹೇಳುತ್ತಾರೆ.

ವಿದೇಶೀ ಜೀವದ್ರವ್ಯಗಳು (ಬೀಜ, ಸಸ್ಯ, ಆರ್ಕಿಡ್‌ ಪುಷ್ಪ, ಅಪರೂಪದ ಚಿಟ್ಟೆಗಳ ಮೊಟ್ಟೆ ಇತ್ಯಾದಿ) ನಮ್ಮ ದೇಶಕ್ಕೆ ಸತತವಾಗಿ ಬರುತ್ತಲೇ ಇರುತ್ತವೆ, ನಮ್ಮ ಗಡಿಯ ಆಚೆ ಕಳ್ಳಸಾಗಣೆ ಆಗುತ್ತಲೇ ಇರುತ್ತವೆ. ಚೀನಾದ್ದೇ ಅದೆಷ್ಟೊ ಕಂಪನಿಗಳು ನಮ್ಮ ದೇಶದಲ್ಲೇ ಬೀಡುಬಿಟ್ಟಿದ್ದು ಅವು ಸದಾ ಇಲ್ಲಿನ ಜೀವಸಂಪತ್ತಿನ ಸಮೀಕ್ಷೆ ಮಾಡುತ್ತ ಕೆಲವನ್ನು ತಮ್ಮ ದೇಶಕ್ಕೆ ದಾಟಿಸುತ್ತಲೇ ಇರುತ್ತವೆ; ಅಲ್ಲಿನ ಕೆಲವು ಕುಲಾಂತರಿ ಹಾಗೂ ಕುಲಗೆಟ್ಟ ಬೀಜಗಳನ್ನು ಇಲ್ಲಿಗೂ ತರುವ ಸಾಧ್ಯತೆ ಇದೆ (ನಮ್ಮ ದೇಶದ ಅಂಥ ಯಾವ ಬೀಜಸಂಬಂಧೀ ಕಂಪನಿಗಳಿಗೂ ಸಂಶೋಧಕರಿಗೂ ಚೀನಾದಲ್ಲಿ ನೆಲೆಯೂರಲು ಅಲ್ಲಿನವರು ಬಿಡುವುದಿಲ್ಲ). ನಮ್ಮ ದೇಶಕ್ಕೆ ಬರುವ ಅಂಥ ಜೈವಿಕ ಸಾಮಗ್ರಿಗಳ ತಪಾಸಣೆಗೆ ದೊಡ್ಡ ಪಡೆಯೇ ಇದೆ ನಿಜ. ಅದರ ಅದಕ್ಷತೆ ದಿನದಿನಕ್ಕೆ ಹೆಚ್ಚುತ್ತಲೇ ಇದೆ. ನಮ್ಮ ಸಸ್ಯವಿಜ್ಞಾನಿಗಳು ಸಂಶೋಧನೆಯ ಸದುದ್ದೇಶಕ್ಕೆಂದೇ ಬೇರೆ ದೇಶಗಳಿಂದ ತರಿಸುವ ಬೀಜಗಳನ್ನು ಅಥವಾ ಸಸ್ಯಗಳನ್ನು ಅವರು ಕ್ವಾರಂಟೈನ್‌ನಲ್ಲಿ ಇಟ್ಟು ತಪಾಸಣೆ ಮಾಡಿ, ಅಧಿಕೃತ ಮುದ್ರೆ ಒತ್ತಿ ನಮ್ಮದೇ ವಿಶ್ವವಿದ್ಯಾಲಯಕ್ಕೊ ಸಂಶೋಧನಾ ಸಂಸ್ಥೆಗೋ ಸುರಕ್ಷಿತವಾಗಿ ಕಳುಹಿಸಬೇಕು ‘ಆದರೆ ಅಲ್ಲಿನ ಅಧಿಕಾರಿಗಳು ಅದನ್ನು ಬಿಚ್ಚಿ, ಚೆಲ್ಲಾಡಿ, ಕೊಳೆಸಿ, ಒಣಗಿಸಿ, ತಪ್ಪು ಲೇಬಲ್‌ ಹಚ್ಚಿ ಅಧ್ವಾನ ಮಾಡುತ್ತಾರೆ’ ಎನ್ನುತ್ತಾರೆ, ಅನೇಕ ದೇಶಗಳ ಸಸ್ಯಭದ್ರತಾ ವ್ಯವಸ್ಥೆಯನ್ನು ನೋಡಿ ಬಂದ ಕೃಷಿವಿಜ್ಞಾನಿ ಡಾ. ಎ.ಎಸ್‌.ಬಿ. (ಅವರು ತಮ್ಮ ಪೂರ್ತಿ ಹೆಸರನ್ನು ಹೇಳಬಯಸುವುದಿಲ್ಲ). ‘ನಮ್ಮ ಅಧಿಕಾರಿಗಳ ಬೇಕಾಬಿಟ್ಟಿ ಭದ್ರತಾ ಕೆಲಸವನ್ನು ನೋಡಿ, ಬೇಜಾರಾಗಿ ನಾವೂ ಸ್ಮಗಲ್‌ ಮಾಡಿಯೇ ಬೇರೆ ದೇಶದಿಂದ ಬೀಜಗಳನ್ನು ನೇರವಾಗಿ ತರಿಸುವ ಗತಿ ಬಂದಿದೆ’ ಎಂದು ಅವರು ಹೇಳುತ್ತಾರೆ. ಭದ್ರತಾ ತಪಾಸಣೆ ಮಾಡಬೇಕಾದವರೇ ಈಗ ರೈತರಿಗೆ ‘ಹುಷಾರಾಗಿರಿ, ಅಂಥ ಬೀಜಗಳನ್ನು ಬಿತ್ತಬೇಡಿ, ಸುಟ್ಟುಹಾಕಿ’ ಎಂಬ ಎಚ್ಚರಿಕೆ ಕೊಡುತ್ತಿದ್ದಾರೆ. ಗಡಿ ಭದ್ರತಾ ಪಡೆಗಳು ಪ್ರಜೆಗಳ ಮೇಲೆ ಭದ್ರತೆಯ ಹೊಣೆಯನ್ನು ಹೊರಿಸಿದ ಹಾಗಾಗಿದೆ. ಜೈ ಕಿಸಾನ್‌ ಈಗ ಜೈ ಜವಾನ್‌!

ಅನಾಮಧೇಯ ಬೀಜಗಳ ಬಗ್ಗೆ ನಾವು ಹುಷಾರಾಗಿರಬೇಕು- ಅದು ನೂರಕ್ಕೆ ನೂರು ಸತ್ಯ. ಬೀಜದ ಜೊತೆ ವೈರಸ್‌, ಕಳೆಬೀಜ, ಶಿಲೀಂಧ್ರ ಏನೂ ಇರಬಹುದು. ನಮ್ಮಲ್ಲಿ ಲಂಟಾನಾ, ಪಾರ್ಥೇನಿಯಂ, ಯುಪಟೋರಿಯಂ, ಗೇಣುದ್ದದ ಬಸವನಹುಳು, ಆಫ್ರಿಕನ್‌ ಕ್ಯಾಟ್‌ಫಿಶ್‌ ಹೀಗೆ ಏನೆಲ್ಲ ವ್ಯಾಪಿಸಿ ಹಾವಳಿ ಎಬ್ಬಿಸಿವೆ. ಇನ್ನಷ್ಟು ಬರಕೂಡದು. ಆದರೆ ನಿಸರ್ಗಕ್ಕೆ, ಎಲ್ಲಕ್ಕಿಂತ ಘಾತುಕ ಟೆರರಿಸ್ಟ್‌ ಯಾವುದು ಗೊತ್ತೆ? ಅವು ಇದೇ ಕೃಷಿ ಅಧಿಕಾರಿಗಳ ಕೃಪೆಯಿಂದ ನಮ್ಮಲ್ಲಿಗೆ ಹೆಬ್ಬಾಗಿಲ ಮೂಲಕವೇ ಬಂದ ಪೀಡೆನಾಶಕ ಕೆಮಿಕಲ್‌ಗಳು. ಬೇರೆ ದೇಶಗಳಲ್ಲಿ ನಿಷೇಧಿಸಿದ್ದೆಲ್ಲವೂ ನಮ್ಮ ಹೊಲಕ್ಕೆ ರಾಜಾರೋಷವಾಗಿ ಬರುತ್ತಿವೆ. ಒಂದು ಭ್ರಮರದ ದೃಷ್ಟಿಯಲ್ಲಿ, ಒಂದು ಜೇನ್ನೊಣದ ದೃಷ್ಟಿಯಲ್ಲಿ, ಒಂದು ಗೋಪೀ ಹಕ್ಕಿ ಅಥವಾ ಶ್ಯಾಮದ ದೃಷ್ಟಿಯಲ್ಲಿ ನೋಡಿದರೆ, ರೈತರ ಕೈಯಲ್ಲಿರುವ ಸಿಂಚನ ಸಾಮಗ್ರಿಯೇ ಭಯೋತ್ಪಾದಕ ಎನ್ನಿಸಬಹುದು.

ಹಕ್ಕಿಪಕ್ಷಿಗಳ ಕಣ್ಮರೆ, ದುಂಬಿ- ಜೇನ್ನೊಣಗಳ ಕಣ್ಮರೆ, ಮಣ್ಣುಜೀವಿಗಳ ಕಣ್ಮರೆಯನ್ನು ನಮ್ಮಲ್ಲಿ ಯಾರೂ ದಾಖಲಿಸುತ್ತಿಲ್ಲ. ನಮ್ಮ ದೇಶದಲ್ಲೇ ಉತ್ಪನ್ನವಾಗಿ, ನಮ್ಮ ಅಂಗಡಿಗಳ ಮೂಲಕವೇ ವಿತರಣೆಗೊಂಡು ನಮ್ಮದೇ ಜೀವಿವೈವಿಧ್ಯವನ್ನು ಧ್ವಂಸ ಮಾಡುತ್ತಿರುವ ಆಧುನಿಕ ಕೃಷಿಯೇ ಅಷ್ಟೊಂದು ಭಯಾನಕವಾಗಿರುವಾಗ ಅದನ್ನು ಕಡೆಗಣಿಸಿ ನಾವು ಹೊರಗಿನಿಂದ ಮಾರುವೇಷದಲ್ಲಿ ಬರುವ ಅಪಾಯಗಳ ಬಗ್ಗೆ ರೈತ ಸಮುದಾಯದಲ್ಲಿ ಭಯ ಬಿತ್ತನೆ ಮಾಡುತ್ತೇವೆ.

ಕೃಷಿ ವಿಷಗಳಿಂದಾಗಿ ನಿಸರ್ಗದ ಯಾವ ಯಾವ ಹಾಡುಹಕ್ಕಿಗಳು ಕಣ್ಮರೆಯಾಗಿವೆ ಎಂಬುದರ ಬಗ್ಗೆ ಬ್ರಿಟನ್ನಿನ ಸಂಸತ್ತಿನಲ್ಲಿ 25 ವರ್ಷಗಳ ಹಿಂದೆಯೇ ಶ್ವೇತಪತ್ರವನ್ನು ಹೊರಡಿಸಲಾಗಿತ್ತು. ಅಪಾಯದಂಚಿನಲ್ಲಿರುವ ಹಾಡುಹಕ್ಕಿಗಳ ಪಟ್ಟಿಯೂ ಅದರಲ್ಲಿದೆ. ಅಲ್ಲಿ ಈಗಲೂ ಶಾಲಾ ಮಕ್ಕಳನ್ನು ಹೊಲಕ್ಕೆ ಕಳಿಸಿ ಹಕ್ಕಿಪಕ್ಷಿ, ಹುಳಹುಪ್ಪಟೆಗಳ ದಾಖಲಾತಿ ಮಾಡಿಸಲಾಗುತ್ತದೆ. ನಮ್ಮ ಪಠ್ಯಗಳಲ್ಲಿ ಕೃಷಿಗೆ ಪೂರಕವಾದ ಹಕ್ಕಿಪಕ್ಷಿಗಳ ಹೇಳಹೆಸರಿಲ್ಲ. ಆಯಾ ತಾಲ್ಲೂಕುಗಳ ವಿಶಿಷ್ಟ ಕೀಟವೈವಿಧ್ಯ, ಸಸ್ಯಸಂಪತ್ತು, ಹಾಡು ಹಕ್ಕಿಗಳು ಯಾವುಯಾವುದೆಂಬ ಪ್ರಾಂತವಾರು ಪಟ್ಟಿಯೂ ಇಲ್ಲ.

ಮೊನ್ನೆ ವಿಶ್ವ ಪರಿಸರ ದಿನ ‘ಪ್ರಕೃತಿಯ ಪುನಶ್ಚೇತನ’ ಕುರಿತು ನಮ್ಮ ಕೃಷಿ, ಅರಣ್ಯ, ಪಶುಸಂಗೋಪನೆ, ರೇಷ್ಮೆ, ಮೀನುಗಾರಿಕೆ, ನೀರಾವರಿ, ಗ್ರಾಮೀಣಾಭಿವೃದ್ಧಿ ಇತ್ಯಾದಿ ಛಪ್ಪನ್ನಾರು ಇಲಾಖೆಗಳ ಒಬ್ಬರಾದರೂ ಸಚಿವರಾಗಲೀ ಅಧಿಕಾರಿಗಳಾಗಲೀ ತುಟಿ ಬಿಚ್ಚಿದ್ದರೆ?

ಕೂತಲ್ಲೇ ಟ್ವೀಟ್‌ (ಹಕ್ಕಿ ಉಲಿ) ಮಾಡಿರಬಹುದು. ಅದನ್ನಾದರೂ ಮಾಡಿದ್ದರೆ ದಯವಿಟ್ಟು ತಿಳಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು