ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಲಿತಕಲೆ: ಬ್ಯೂಟಿಫುಲ್ ಮನಸುಗಳ ಕ್ಯಾನ್ವಾಸ್

ಬೆಂಗಳೂರಿನಲ್ಲಿ ಚಿತ್ರಕಲಾ ಪರಿಷತ್, ಮೈಸೂರಲ್ಲಿ ‘ಕಾವಾ’ * ಪದವಿ ಪಡೆದವರಿಗೆ ಸೃಜನಾತ್ಮಕ ಹುದ್ದೆ
Last Updated 21 ಏಪ್ರಿಲ್ 2018, 19:45 IST
ಅಕ್ಷರ ಗಾತ್ರ

ಮಾಹಿತಿ: ಸಂದೀಪ್‌ ಕೆ. ಎಂ. ಮತ್ತು ಸ್ಮಿತಾ ಶಿರೂರ

ಏಪ್ರಿಲ್-ಮೇ ತಿಂಗಳು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳ ಫಲಿತಾಂಶದ ಸಮಯ. ಫಲಿತಾಂಶ ಎನ್ನುವುದು ಮುಂದಿನ ತರಗತಿಗಳ ಪ್ರವೇಶಕ್ಕೆ ದೊರೆತ ಹಸಿರುನಿಶಾನೆ. ಆದರೆ, ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದರಿಂದ ಅಥವಾ ಉತ್ತಮ ಅಂಕ ತೆಗೆದುಕೊಳ್ಳುವುದರಿಂದಷ್ಟೇ ಒಳ್ಳೆಯ ಕೋರ್ಸ್‍ಗಳು ದೊರೆಯುವುದಿಲ್ಲ. ಕಲಿಕೆಗೆ ಲಭ್ಯವಿರುವ ಅವಕಾಶಗಳು ಹಾಗೂ ಅವುಗಳಿಗೆ ಇರುವ ಸಾಧ್ಯತೆಗಳ ಕುರಿತು ತಿಳಿದುಕೊಳ್ಳುವುದು ಬಹಳ ಮುಖ್ಯ.

ಈ ನಿಟ್ಟಿನಲ್ಲಿ, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಅನುಕೂಲ ಆಗುವಂತಹ ಲೇಖನಗಳ ಮಾಲಿಕೆಯನ್ನು ‘ಪ್ರಜಾವಾಣಿ’ ಆರಂಭಿಸುತ್ತಿದೆ. ಮೊದಲ ಹಂತದಲ್ಲಿ ಪಿಯುಸಿ ನಂತರ ಇರುವ ಕಲಿಕೆಯ ಅಪಾರ ಸಾಧ್ಯತೆಗಳ ಕುರಿತು ಶಿಕ್ಷಣ ತಜ್ಞರು ಬೆಳಕು ಚೆಲ್ಲಲಿದ್ದಾರೆ. ಚಿತ್ರಕಲೆ ಮತ್ತು ದೃಶ್ಯಕಲೆ ಮಾಧ್ಯಮಗಳನ್ನೊಳಗೊಂಡ ಲಲಿತಕಲಾ ವಿಭಾಗದ ಕಲಿಕೆಯ ಕೆಲವು ಅವಕಾಶಗಳ ಕುರಿತು ಮಾಹಿತಿ ಇಲ್ಲಿದೆ.

ವೈದ್ಯಕೀಯ, ಎಂಜಿನಿಯರಿಂಗ್‌ ಕೋರ್ಸ್‌ಗಳು ಪ್ರಸ್ತುತ ಕಾಲಘಟ್ಟದಲ್ಲಿ ಟ್ರೆಂಡ್‌ ಆಗಿವೆ. ಪಿಯುಸಿ ಮುಗಿದ ನಂತರ ಬಹಳಷ್ಟು ವಿದ್ಯಾರ್ಥಿಗಳು ಈ ಕೋರ್ಸ್‌ ಸೇರಲು ಸಾಹಸ ಪಡುತ್ತಿರುತ್ತಾರೆ. ಒಂದು ವೇಳೆ ಈ ಕೋರ್ಸಿನ ಸೀಟ್‌ಗಳು ದೊರೆಯದ ಸಂದರ್ಭದಲ್ಲಿ ಬಿ.ಕಾಂ, ಬಿ.ಎಸ್ಸಿ, ಬಿ.ಎ. ರೀತಿಯ ಸಾಂಪ್ರದಾಯಿಕ ಕೋರ್ಸ್‌ಗಳಿಗೆ ಸೇರುತ್ತಾರೆ. ಲಲಿತಕಲೆಯಲ್ಲಿ ಕೂಡ ಪದವಿ ಪಡೆಯಬಹುದು ಎನ್ನುವುದು ಹೆಚ್ಚು ಮಂದಿಗೆ ತಿಳಿದಿಲ್ಲ.

ಲಲಿತಕಲೆಯಲ್ಲಿ ಪದವಿ ಪಡೆದವರಿಗೆ ಸೃಜನಾತ್ಮಕ ಹುದ್ದೆಗಳು ಸೃಷ್ಟಿಯಾಗುತ್ತಿವೆ. ಸ್ಮಾರ್ಟ್‌ ಫೋನ್‌ನಲ್ಲಿ ಇ–ಕಾಮರ್ಸ್‌ ಪ್ರವೇಶದ ನಂತರ ಯುಐ ಮತ್ತು ಯಎಕ್ಸ್‌ ಡಿಸೈನರ್‌ಗಳಿಗೆ ಬೇಡಿಕೆಯೂ ಹೆಚ್ಚುತ್ತಿದೆ.

ಅಂತರರಾಷ್ಟ್ರೀಯ ದರ್ಜೆಯ ಸಾಫ್ಟ್‌ವೇರ್‌ನೊಂದಿಗೆ ಸೃಜನಾತ್ಮಕ ಕಲೆಯ ಶಿಕ್ಷಣ ನೀಡುವ ಸಾಕಷ್ಟು ಸಂಸ್ಥೆಗಳು ಕರ್ನಾಟಕದಲ್ಲಿವೆ. ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ಲಲಿತಕಲೆಯಲ್ಲಿ ಪದವಿ ಕೋರ್ಸ್‌ ನಡೆಸುತ್ತಿವೆ.

ಲಲಿತಕಲಾ ನಿಕಾಯದಲ್ಲಿ ಚಿತ್ರಕಲೆ, ಕಂಪ್ಯೂಟರ್‌ ಗ್ರಾಫಿಕ್ಸ್‌, ಶಿಲ್ಪಕಲೆ, ವಾಣಿಜ್ಯ ಕಲೆ ಸೇರಿದಂತೆ ಸೃಜನಾತ್ಮಕ ಕಲೆಗೆ ಸಂಬಂಧಿಸಿದ ವಿವಿಧ ವಿಭಾಗಗಳಿರುತ್ತವೆ. ವಿದ್ಯಾರ್ಥಿಗಳು ಅವರ ಅಭಿರುಚಿಗೆ ತಕ್ಕಂತೆ ವಿಷಯ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ದೃಶ್ಯಕಲೆಯ ಜೀವಕೇಂದ್ರ ‘ಚಿತ್ರಕಲಾ ಪರಿಷತ್‌’: ‘ಕರ್ನಾಟಕ ಚಿತ್ರಕಲಾ ಪರಿಷತ್’ ಕರ್ನಾಟಕದ ಪ್ರಮುಖ ಕಲಾಕೇಂದ್ರಗಳಲ್ಲೊಂದು. ವಿಶ್ವದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಬರುವ ಕಲಾಸಕ್ತರ ಪಾಲಿಗಿದು ಆಕರ್ಷಣೆಯ ಕೇಂದ್ರ. ಕರ್ನಾಟಕದ ಜೊತೆಗೆ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳೂ ಇಲ್ಲಿ ಲಲಿತಕಲೆಗಳನ್ನು ಅಭ್ಯಾಸ ಮಾಡುತ್ತಾರೆ.

ಡಿಪ್ಲೊಮ ಮತ್ತು ಬಿ.ಎಫ್‍ಎ ತರಗತಿಗಳನ್ನು ಪರಿಷತ್ ನಡೆಸುತ್ತದೆ. ಬಿ.ಎಫ್‌ಎ ಪದವಿಯಲ್ಲಿ ಪೈಂಟಿಂಗ್, ಅಪ್ಲೈಡ್‌ ಆರ್ಟ್ (ವಾಣಿಜ್ಯ ಕಲೆ), ಸ್ಕಲ್ಪ್ಚರ್ (ಶಿಲ್ಪ ಕಲೆ), ಗ್ರಾಫಿಕ್‌ ಆರ್ಟ್‌, ಆರ್ಟ್ ಹಿಸ್ಟರಿ - ಹೀಗೆ ಐದು ವಿಭಾಗಗಳಿದ್ದು, ವಿದ್ಯಾರ್ಥಿಗಳು ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಪಿಯುಸಿ ಪಾಸಾಗಿರುವ ವಿದ್ಯಾರ್ಥಿಗಳು ಈ ಪದವಿಗೆ ಪ್ರವೇಶ ಪಡೆಯಬಹುದಾಗಿದೆ.

ಡಿಪ್ಲೊಮ: ಗ್ರಾಫಿಕ್ಸ್‌, ಆ್ಯನಿಮೇಷನ್‌ಗೆ ಸಂಬಂಧಿಸಿದ ಒಂದು ವರ್ಷದ ಡಿಪ್ಲೊಮ ಕೋರ್ಸ್‌ ಅನ್ನು ಚಿತ್ರಕಲಾ ಪರಿಷತ್‌ ನಡೆಸುತ್ತಿದೆ. ಪದವಿಯ ನಂತರ ಲಲಿತಕಲೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌.ಡಿ ಅಧ್ಯಯನಕ್ಕೆ ಅವಕಾಶವಿದೆ. ಅತ್ಯುತ್ತಮ ಗ್ರಂಥಾಲಯ ಹಾಗೂ ಕಲಾಕೃತಿಗಳನ್ನು ಒಳಗೊಂಡ ಗ್ಯಾಲರಿಗಳು ಚಿತ್ರಕಲಾ ಪರಿಷತ್‍ನಲ್ಲಿವೆ.

ವಿಳಾಸ: ಕರ್ನಾಟಕ ಚಿತ್ರಕಲಾ ಪರಿಷತ್, ನಂ.1, ಆರ್ಟ್ ಕಾಂಪ್ಲೆಕ್ಸ್, ಕುಮಾರಕೃಪ ರಸ್ತೆ, ಬೆಂಗಳೂರು- 560001. ಫೋನ್: 080 2226 1816.
ಇ-ಮೇಲ್: chitrakalaparishath@gmail.com
ವೆಬ್‍ಸೈಟ್: karnatakachitrakala parishath.com

ಕಲಿಕೆಯ ಹುಲ್ಲುಗಾವಲು ‘ಕಾವಾ’: ಮೈಸೂರಿನ ‘ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು’ ರಾಜ್ಯದಲ್ಲಿನ ಲಲಿತಾಕಲಾ ವಿದ್ಯಾರ್ಥಿಗಳ ಆಕರ್ಷಣೆಯ ಕೇಂದ್ರಗಳಲ್ಲೊಂದು. ‘ಕಾವಾ’ ಎಂದು ಕರೆಸಿಕೊಳ್ಳುವ ಈ ದೃಶ್ಯಕಲಾ ಕಾಲೇಜು, ಕರ್ನಾಟಕ ಸರ್ಕಾರದ ಏಕೈಕ ಕಲಾಶಿಕ್ಷಣ ಸಂಸ್ಥೆಯಾಗಿದೆ.

ದೃಶ್ಯಕಲೆಗಳ ಎಲ್ಲ ಬಗೆಗಳ ಉತ್ಕೃಷ್ಟತೆಯನ್ನು ಅಭಿವೃದ್ಧಿಪಡಿಸುವುದು ‘ಕಾವಾ’ದ ಮುಖ್ಯ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಪದವಿ ಪಡೆಯಲು ಐದು ವರ್ಷಗಳ ಶಿಕ್ಷಣ ನೀಡುತ್ತದೆ. ಎರಡು ವರ್ಷಗಳ ಫೌಂಡೇಷನ್ ಶಿಕ್ಷಣ ಹಾಗೂ ಮೂರು ವರ್ಷಗಳ ವಿಶೇಷ ಶಿಕ್ಷಣವನ್ನು (ಬಿ.ಎಫ್ಎ ಪದವಿ) ಈ ಕೋರ್ಸ್ ಒಳಗೊಂಡಿದೆ.

ಉತ್ತಮ ಕಲಾಪುಸ್ತಕಗಳ ಗ್ರಂಥಾಲಯದ ಜೊತೆಗೆ, ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಆಗುವಂತಹ ದೃಶ್ಯ ಹಾಗೂ ಶ್ರವ್ಯ ಕಲಿಕಾ ಉಪಕರಣಗಳು ಸಂಸ್ಥೆಯಲ್ಲಿ ಲಭ್ಯವಿವೆ.

ಕೋರ್ಸ್‌ಗಳ ವಿವರ– 1. ಫೌಂಡೇಶನ್‌ (2 ವರ್ಷಗಳ ಅವಧಿಯ ಕೋರ್ಸ್‌): ಅರ್ಹತೆ: ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

2. ಬಿ.ಎಫ್‌ಎ (3 ವರ್ಷಗಳ ಬ್ಯಾಚುಲರ್‌ ಆಫ್‌ ವಿಷುವಲ್‌ ಆರ್ಟ್‌): ಬಿ.ಎಫ್‍ಎ ಪದವಿಯಲ್ಲಿ ವಿದ್ಯಾರ್ಥಿಗಳು ತಮ್ಮಿಷ್ಟದ ವಿಷಯಗಳನ್ನು ಆರಿಸಿಕೊಳ್ಳಲು ಅವಕಾಶವಿದೆ. ಆಯ್ಕೆಗೆ ಅವಕಾಶವಿರುವ ಐಚ್ಛಿಕ ವಿಷಯಗಳು: ಪೇಂಟಿಂಗ್‌, ಶಿಲ್ಪಕಲೆ, ಗ್ರಾಫಿಕ್ಸ್‌, ಅಪ್ಲೈಡ್‌ ಆರ್ಟ್‌, ಫೋಟೊಗ್ರಫಿ ಅಂಡ್‌ ಫೋಟೊ ಜರ್ನಲಿಸಂ, ಕಲಾ ಇತಿಹಾಸ)
ಅರ್ಹತೆ: ‘ಕಾವಾ’ದ ಫೌಂಡೇಶನ್‌ ಕೋರ್ಸ್‌ ಅಥವಾ ತತ್ಸಮಾನ ಪರೀಕ್ಷೆ ಉತ್ತೀರ್ಣರಾಗಿರಬೇಕು.

3. ಎಂ.ಎಫ್‌ಎ (ಎರಡು ವರ್ಷಗಳ ಮಾಸ್ಟರ್‌ ಆಫ್‌ ಫೈನ್‌ ಆರ್ಟ್ಸ್‌)
ಅರ್ಹತೆ:
ಬಿ.ಎಫ್‌ಎ ಉತ್ತೀರ್ಣ.

ಶುಲ್ಕ: ಮೈಸೂರು ವಿಶ್ವವಿದ್ಯಾನಿಲಯದಿಂದ 2018–19ನೇ ಸಾಲಿನ ಶುಲ್ಕದ ನೋಟಿಫಿಕೇಶನ್‌ ಇನ್ನೂ ಬಂದಿಲ್ಲ. ಹೀಗಾಗಿ ಯಾವ ಕೋರ್ಸ್‌ಗಳ ಶುಲ್ಕ ವಿವರವೂ ಲಭ್ಯವಿಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದ ವೇಳೆ ಬರುವ ಸಾಧ್ಯತೆಗಳಿವೆ ಎಂದು ಕಾವಾ ಕಚೇರಿ ತಿಳಿಸಿದೆ.

ಸಂಪರ್ಕ ವಿಳಾಸ: ಭಾರತೀಯ ಪಠ್ಯಪುಸ್ತಕ ಮುದ್ರಣಾಲಯ ಆವರಣ, ಟಿ. ನರಸೀಪುರ ರಸ್ತೆ, ಸಿದ್ದಾರ್ಥ ನಗರ, ಮೈಸೂರು- 570011. ದೂರವಾಣಿ: 0821– 2438931. ಇ-ಮೇಲ್: deancava@gmail.com. ಹೆಚ್ಚಿನ ವಿವರಗಳು cavamysore.in ಜಾಲತಾಣದಲ್ಲಿ ಲಭ್ಯ.

ಉದ್ಯೋಗಾವಕಾಶದ ಸಾಧ್ಯತೆ: ಲಲಿತಕಲಾ ವಿಭಾಗದಲ್ಲಿ ಶಿಕ್ಷಣ ಪಡೆದವರಿಗೆ ಕೇಂದ್ರೀಯ ವಿದ್ಯಾಲಯ, ನವೋದಯ, ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಕಲಾಶಿಕ್ಷಕರ ಹುದ್ದೆಗಳಿವೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಉದ್ಯೋಗಾವಕಾಶ ಲಭ್ಯ.

ಸೀಮಿತ ಸಂಖ್ಯೆಯ ಶಿಕ್ಷಕರ ಉದ್ಯೋಗಗಳಿಗಿಂತಲೂ ಖಾಸಗಿ ಅವಕಾಶಗಳು ಹೆಚ್ಚು. ವಸ್ತ್ರೋದ್ಯಮದಲ್ಲಿ, ಫೋಟೊ ಜರ್ನಲಿಸ್ಟ್‌ಗಳಾಗಿ, ಪತ್ರಿಕೆಗಳಲ್ಲಿ ಗ್ರಾಫಿಕ್ಸ್‌ ಡಿಸೈನರ್‌ಗಳಾಗಿ, ಜಾಹೀರಾತು ಏಜೆನ್ಸಿಗಳಲ್ಲಿ ವಿನ್ಯಾಸಕಾರರಾಗಿ ಉದ್ಯೋಗಗಳಲ್ಲಿ ತೊಡಗಬಹುದು. ಜಾಹೀರಾತು, ದೃಶ್ಯ ಮಾಧ್ಯಮ, ಸಿನಿಮಾ ಸೇರಿದಂತೆ ವಿವಿಧ ಸಾಫ್ಟ್‌ವೇರ್‌ ಕಂಪನಿಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶವಿದೆ.

ವೆಬ್‌ ಡಿಸೈನರ್‌, ಗ್ರಾಫಿಕ್‌ ಡಿಸೈನರ್‌, ಅನಿಮೇಟರ್‌, ಆರ್ಟ್‌ ಡೈರೆಕ್ಟರ್‌, ಫೋಟೊಗ್ರಾಫರ್‌, ಸಿನಿಮಾಟೋಗ್ರಾಫರ್‌, ವಿಜುಲೈಸರ್‌, ಮೊಬೈಲ್‌ ಆ್ಯಪ್‌ ಡಿಸೈನರ್‌ಗಳಾಗಿ ದುಡಿಯಬಹುದು. ಕಲೆ ಆಧಾರಿತ ಸ್ವಂತ ಉದ್ಯಮಗಳನ್ನು ನಡೆಸಬಹುದು. ಅನಿಮೇಶನ್‌ ಕಲಿತು ವಿದೇಶಗಳಲ್ಲಿ ಒಳ್ಳೆಯ ಅವಕಾಶ ಪಡೆದವರ ಉದಾಹರಣೆಗಳೂ ಇವೆ.

ವಿಶ್ವಮುಖಿ ‘ಸೃಷ್ಟಿ’
ಬೆಂಗಳೂರಿನ ‘ಸೃಷ್ಟಿ ಕಾಲೇಜ್‌ ಆಫ್‌ ಫೈನ್‌ ಆರ್ಟ್ಸ್‌’ ಕಲಾವಿದ್ಯಾರ್ಥಿಗಳು ಪ್ರವೇಶಕ್ಕೆ ಹಂಬಲಿಸುವ ವಿದ್ಯಾಸಂಸ್ಥೆ. ದೇಶ ವಿದೇಶಗಳ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆಯಲು ಪೈಪೋಟಿ ನಡೆಸುತ್ತಾರೆ.

ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ಸೃಷ್ಟಿ ಕಾಲೇಜ್‌ ಆಫ್‌ ಫೈನ್‌ ಆರ್ಟ್ಸ್‌ನಲ್ಲಿ ಬಿ.ವೊಕ್‌, ಬಿ.ಡಿಸೈನ್‌, ಬಿ.ಎಫ್‌ಎ ಪದವಿಯ ಕೋರ್ಸ್‌ಗಳು ಲಭ್ಯವಿದೆ.

ಬಿ.ವೊಕ್‌ ಪದವಿಯಲ್ಲಿ ಲಭ್ಯವಿರುವ ಕೋರ್ಸ್‌ಗಳು:
1. ಡಿಜಿಟಲ್‌ ಫಿಲ್ಮ್‌ ಮೇಕಿಂಗ್‌
2. ಡಿಜಿಟಲ್‌ ಮೀಡಿಯಾ ಪ್ರೊಡಕ್ಷನ್‌
3. ಕ್ರಿಯೇಟಿವ್‌ ಕೋಡಿಂಗ್‌
4. ಕಮ್ಯೂನಿಕೇಷನ್‌ ಡಿಸೈನ್‌
5. ಡಿಜಿಟಲ್‌ ಡಿಸೈನ್‌ ಅಂಡ್‌ ಇಂಟರ‍್ಯಾಕ್ಷನ್‌ ಎಂಜಿನಿಯರಿಂಗ್‌
6. ಇಂಟೀರಿಯರ್‌ ಡಿಸೈನ್‌ ಅಂಡ್ ಬಿಲ್ಡ್‌
7. ಕ್ರಿಯೇಟಿವ್‌ ಮ್ಯಾನ್ಯುಫ್ಯಾಕ್ಚರಿಂಗ್‌

ಬಿ.ಡಿಸೈನ್‌ನಲ್ಲಿ ಲಭ್ಯವಿರುವ ಕೋರ್ಸ್‌ಗಳು:
1. ಬಿಸಿನೆಸ್‌ ಸರ್ವೀಸ್‌ ಅಂಡ್‌ ಸಿಸ್ಟಮ್‌ ಡಿಸೈನ್‌
2. ಕ್ರಿಯೇಟಿವ್‌ ಅಂಡ್‌ ಅಪ್ಲೈಡ್‌ ಕಂಪ್ಯೂಟಿಷನ್‌
3. ಕ್ರಿಯೇಟಿವ್‌ ಎಜುಕೇಷನ್‌
4. ಹ್ಯೂಮನ್‌ ಕ್ರಿಯೇಟೆಡ್‌ ಡಿಸೈನ್‌
5. ಇಂಡಸ್ಟ್ರಿಯಲ್‌ ಆರ್ಟ್ಸ್‌ ಅಂಡ್‌ ಡಿಸೈನ್‌ ಪ್ರಾಕ್ಟೀಸ್‌
6. ಇನ್‌ಫರ್ಮೇಷನ್‌ ಆರ್ಟ್ಸ್‌ ಅಂಡ್‌ ಇನ್‌ಫರ್ಮೇಷನ್‌ ಡಿಸೈನ್‌ ಪ್ರಾಕ್ಟೀಸ್‌
7. ಪಬ್ಲಿಕ್‌ ಸ್ಪೇಸ್‌ ಡಿಸೈನ್‌
8. ವಿಜುವಲ್‌ ಕಮ್ಯೂನಿಕೇಷನ್‌ ಅಂಡ್‌ ಸ್ಟ್ರಾಟಜಿಕ್‌ ಬ್ರಾಂಡಿಂಗ್‌

ಬಿಎಫ್‌.ಎ. ಪದವಿಯಲ್ಲಿ ಲಭ್ಯವಿರುವ ಕೋರ್ಸ್‌ಗಳು:
1. ಡಿಜಿಟಲ್‌ ಮೀಡಿಯಾ ಆರ್ಟ್ಸ್‌
2. ಸಿನಿಮಾ
3. ಸೃಜನಶೀಲ ಬರವಣಿಗೆ
4. ಪ್ರಯೋಗಾತ್ಮಕ ಕಲೆ
5. ಪ್ರಚಲಿತ ಕಲಾ ಪ್ರಕಾರ

ವಿಳಾಸ: ಸೃಷ್ಟಿ ಇನ್‍ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿ, ನಂ. 40/ಡಿ, 2ನೇ ಕ್ರಾಸ್, 5ನೇ ಮೇನ್, ಮರಿಲಿಂಗಯ್ಯ ಬಿಲ್ಡಿಂಗ್, ಶಿವಮಂದಿರ ರಸ್ತೆ, ಕೆಎಚ್‍ಬಿ ಇಂಡಸ್ಟ್ರಿಯಲ್ ಏರಿಯಾ, ಯಲಹಂಕ, ಬೆಂಗಳೂರು - 560016. ಫೋನ್: 080 49000800 / 49000801 / 2 /3 /4. ಇ-ಮೇಲ್:  admissions@srishti.ac.in ವೆಬ್‍ಸೈಟ್: srishti.ac.in

*
ಅಪ್ಲೈಡ್ ಆರ್ಟ್ ಸಂಪೂರ್ಣವಾಗಿ ಜಾಬ್ ಓರಿಯೆಂಟೆಡ್ ಕೋರ್ಸ್‌. ಅದರಲ್ಲಿ ಡಿಗ್ರಿ ಪಡೆದವರಿಗೆ ಜಾಹೀರಾತು ಕಂಪನಿಗಳಲ್ಲಿ ಹಾಗೂ ಎಂಎನ್‌ಸಿ ಕಂಪನಿಗಳಲ್ಲಿ ಒಳ್ಳೆಯ ಕೆಲಸ ದೊರಕುತ್ತದೆ. 
ನಾಗಪ್ಪ ಬಿ. ಬಡಿಗೇರ್, ಸಹಾಯಕ ಪ್ರಾಧ್ಯಾಪಕ, ಚಿತ್ರಕಲಾ ಪರಿಷತ್‌, ಬೆಂಗಳೂರು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT