ಇದನ್ನು ಮೊದಲೇ ಹೇಳಿಬಿಡೋಣ: ಈ ಕ್ವಾಂಟಮ್ ಜಗತ್ತು ಸುಲಭಕ್ಕೆ ಅರ್ಥವಾಗುವ ವಿಷಯವಲ್ಲ. ಆದರೆ, ವಿಜ್ಞಾನಿಗಳಿಂದ ಹಿಡಿದು ಅಧ್ಯಾತ್ಮ ಚಿಂತಕರವರೆಗೆ ಎಲ್ಲರನ್ನೂ ಪರವಶಗೊಳಿಸುವ ಶಕ್ತಿ ಅದಕ್ಕಿದೆ. ಈ ಜಗತ್ತಿನೊಳಗೆ ನಮಗೆ ಕಾಣದ ಇನ್ನೊಂದು ಪರಮ ಸೂಕ್ಷ್ಮ ಜಗತ್ತು ಇದೆ. ಅಲ್ಲಿನ ವಿದ್ಯಮಾನಗಳು ನಮ್ಮ ಮಾಮೂಲು ತರ್ಕಕ್ಕೆ ನಿಲುಕುವುದಿಲ್ಲ. ಉದಾ: ಹೀಲಿಯಂ ಅನಿಲವನ್ನು ಅತಿ ಶೀತಲ ಸ್ಥಿತಿಗೆ, ಅಂದರೆ ದ್ರವರೂಪಕ್ಕೆ ತಂದು ಅದನ್ನು ಚಕ್ರಾಕಾರವಾಗಿ ಕಲಕಿದಾಗ ಒಂದಲ್ಲ, ಎರಡು ಮೂರು ನಾಲ್ಕು ಸುಳಿಗಳನ್ನು ಕಾಣಬಹುದು. ಕಲಕದೇ ಬಿಟ್ಟರೆ, ಅದನ್ನಿಟ್ಟ ಪಾತ್ರೆಯ ಅಂಚಿನಗುಂಟ ದ್ರವವು ಮೇಲಕ್ಕೇರಿ ಆಚೆ ಹರಿಯುತ್ತದೆ. ಪರಮಾಣುವಿನ ಒಳಗಿರುವ ಕಣಗಳ ವರ್ತನೆ ಅದೆಷ್ಟು ವಿಚಿತ್ರವೆಂದರೆ, ಒಂದೇ ಕಣ ಎರಡು ಕಿಟಕಿಗಳ ಮೂಲಕ ಏಕಕಾಲಕ್ಕೆ ದಾಟಿ ಹೋಗುತ್ತದೆ– ಒಂದು ಅಲೆಯ ಹಾಗೆ. ಆದರೆ ಅಳೆಯಲು ಹೋದರೆ, ಒಂದೇ ಕಿಟಕಿಯ ಮೂಲಕ ಅದು ಕಣರೂಪದಲ್ಲಿ ಸಾಗಿದ ಚಿತ್ರಣ ಸಿಗುತ್ತದೆ. ಒಂದು ಕಣವನ್ನು ವಿಭಜಿಸಿ ಒಂದು ಭಾಗವನ್ನು ಇಲ್ಲೇ ಇಟ್ಟು, ಇನ್ನೊಂದನ್ನು ಮಂಗಳಲೋಕಕ್ಕೆ ಕಳಿಸಿದರೂ ಎರಡರ ವರ್ತನೆಯೂ ಏಕಕಾಲಕ್ಕೆ ಏಕರೂಪದಲ್ಲಿರುತ್ತದೆ. ಇದನ್ನು ಬಲಕ್ಕೆ ತಿರುಗಿಸಿದಾಗ ಅದೂ ತಿರುಗುತ್ತದೆ! ಬೆಳಕಿನ ವೇಗವನ್ನೂ ಮೀರಿಸಿ ಅವೆರಡೂ ಪರಸ್ಪರ ಸಂಪರ್ಕದಲ್ಲಿರುತ್ತವೆ ಎಂಬುದು 1925ರಲ್ಲಿ ಗೊತ್ತಾದಾಗ ಸ್ವತಃ ಐನ್ಸ್ಟೀನ್ ತಬ್ಬಿಬ್ಬಾಗಿದ್ದ. ‘ಹಾಗೆಲ್ಲ ಅವು ದೆವ್ವದಂತೆ ವರ್ತಿಸಲು ಸಾಧ್ಯವೇ ಇಲ್ಲ, ಏನೋ ಐಬಿದೆ’ ಎಂದು ಐನ್ಸ್ಟೀನ್ ಸಾಬೀತು ಮಾಡಲು ಹೋದಾಗ, ಆತ ಹೇಳಿದ್ದು ಸರಿಯೆಂದೂ, ಆದರೆ ವಾದ ತಪ್ಪೆಂದೂ ಹೇಳಿ ವಿಜ್ಞಾನಲೋಕ ಎಡಬಿಡಂಗಿಯಾಗಿತ್ತು.

ಅವೆಲ್ಲ ಹಳೇ ಕತೆ. ಈಗ, 30ಕ್ಕೂ ಹೆಚ್ಚು ನೊಬೆಲ್ ಗಳಿಕೆಯ ನಂತರ, ಕ್ವಾಂಟಮ್ ಫಿಸಿಕ್ಸ್, ಕೆಮಿಸ್ಟ್ರಿ, ಮ್ಯಾಥ್ಸ್, ಬಯಾಲಜಿ ಎಲ್ಲ ಕ್ಷೇತ್ರಗಳಲ್ಲೂ ಸೂಕ್ಷ್ಮಲೋಕದ ಅಲೌಕಿಕ ಸಾಧ್ಯತೆಗಳನ್ನು ದುಡಿಸಿ ಕೊಳ್ಳಲಾಗುತ್ತಿದೆ. ಹೈಟೆಕ್ ಆಸ್ಪತ್ರೆಗಳ ಎಂಆರ್ಐ ಸ್ಕ್ಯಾನಿಂಗ್ ಯಂತ್ರದಲ್ಲಿ ಕ್ವಾಂಟಮ್ ಲೆಕ್ಕಾಚಾರ ಅಡಗಿದೆ. ಚಂದ್ರಲೋಕಕ್ಕೂ ಲೇಸರ್ ಕಿರಣಗಳನ್ನು ಕಳಿಸುತ್ತಿದ್ದೇವೆ. ನಮ್ಮ ಮೊಬೈಲ್ನಲ್ಲಿರುವ ಟ್ರಾನ್ಸಿಸ್ಟರ್ಗಳು, ಜಿಪಿಎಸ್ ಸಾಧನ ಮತ್ತು ಗುಪ್ತಕೀಲಿಗಳು ಕ್ವಾಂಟಮ್ ತತ್ವಗಳನ್ನು ಆಧರಿಸಿವೆ. ಆದರೆ, ಇವೆಲ್ಲ ಕ್ವಾಂಟಮ್ ವಿಶ್ವದತ್ತ ಅಂಬೆಗಾಲು ಅಷ್ಟೆ. ಇಡಿಯಾಗಿ ಕ್ವಾಂಟಮ್ ಕಂಪ್ಯೂಟರನ್ನು ಸೃಷ್ಟಿಸಲು ನಾಲ್ಕಾರು ಮುಂಚೂಣಿ ಕಂಪನಿಗಳು ಏಳೆಂಟು ರಾಷ್ಟ್ರಗಳಲ್ಲಿ ಭಾರಿ ಪೈಪೋಟಿ ನಡೆಸಿವೆ. ಅದನ್ನು ಸಾಧಿಸಿದರೆ ಹೊಸ ವಿಶ್ವವೇ ಮುಷ್ಟಿಗೆ ಸಿಕ್ಕಿದಂತೆ ಎನ್ನಲಾಗುತ್ತದೆ.

ಆಂಧ್ರಪ್ರದೇಶದ ಅಮರಾವತಿಯಲ್ಲಿ ‘ಕ್ವಾಂಟಮ್ ವ್ಯಾಲಿ’ ಹೆಸರಿನ ಕ್ಯಾಂಪಸ್ ರೂಪುಗೊಳ್ಳುತ್ತಿದೆ. ಅಲ್ಲಿ ಐಬಿಎಂ, ಟಿಸಿಎಸ್ ಮತ್ತು ಎಲ್ಎಂಡ್ಟಿ ಕಂಪನಿಗಳು ಜಂಟಿಯಾಗಿ ಕ್ವಾಂಟಮ್ ಕಂಪ್ಯೂಟರ್ ಸಂಕೀರ್ಣವನ್ನು ನಿರ್ಮಿಸುತ್ತಿವೆ. ಶತಕೋಟಿ ಡಾಲರ್ ಬಂಡವಾಳದಲ್ಲಿ ಅಲ್ಲಿ ಈ ರಂಗದ ಸಂಶೋಧನೆ, ತರಬೇತಿ ಮತ್ತು ಶಿಕ್ಷಣ ವ್ಯವಸ್ಥೆ ಅಸ್ತಿತ್ವಕ್ಕೆ ಬರುತ್ತಿದೆ. ಕ್ವಾಂಟಮ್ ವ್ಯವಸ್ಥೆಗೆ ಬೇಕಾದ ವಿಶೇಷ ಬಗೆಯ ಚಿಪ್ಸ್ ಮತ್ತು ಸೈಬರ್ ಜಾಲವೂ ಅಲ್ಲಿ ಸೃಷ್ಟಿಯಾಗಲಿವೆ. ಆರಂಭದಲ್ಲಿ ಇಪ್ಪತ್ತು ನವೋದ್ಯಮ ಕಂಪನಿಗಳು ಈ ಕ್ವಾಂಟಮ್ ಕಣಿವೆಯಲ್ಲಿ ಕಾಲೂರಲಿವೆ. ಕ್ರಮೇಣ ನೂರು ಕಂಪನಿಗಳಿಗೆ ಜಾಗ ಸಿಗಲಿದೆ. 2026ರಿಂದ ಪ್ರತಿವರ್ಷವೂ ಅಲ್ಲಿ ಜಾಗತಿಕ ಕ್ವಾಂಟಮ್ ಎಕ್ಸ್ಪೋ ನಡೆಯಲಿದ್ದು, 2035ರ ಹೊತ್ತಿಗೆ ಅಮರಾವತಿ ‘ಕ್ವಾಂಟಮ್ ಕ್ಯಾಪಿಟಲ್’ ಎನ್ನಿಸಿಕೊಳ್ಳಲಿದೆ.

ಚಂದ್ರಬಾಬು ನಾಯ್ಡು ಅವರ ಈ ಮಹಾಕನಸಿಗೆ ಕೇಂದ್ರ ಸರ್ಕಾರವೂ ನೀರೆರೆಯುತ್ತಿದ್ದು, ಇದಕ್ಕೆಂದು ಅನೇಕ ರಾಷ್ಟ್ರಗಳಿಂದ ಬಂಡವಾಳ ಹರಿದು ಬರಲಿದೆ. ಕರ್ನಾಟಕ ಸರ್ಕಾರ ಚುರುಕಾಗಿ ಯೋಜನೆಯನ್ನು ರೂಪಿಸಿದ್ದಿದ್ದರೆ ಸಿಲಿಕಾನ್ ಸಿಟಿ ಮಾದರಿಯಲ್ಲಿ ನಮ್ಮಲ್ಲೇ ಈ ‘ಕಣಿವೆ’ ರೂಪುಗೊಳ್ಳಬಹುದಿತ್ತು. ಈಗಾಗಲೇ ಬೆಂಗಳೂರಿನ ನಾಗವಾರದ ಹೈಟೆಕ್ ಸಿಟಿಯಲ್ಲಿ ‘ಕ್ಯೂಪೈಎಐ– ಇಂಡಸ್ ಕ್ವಾಂಟಮ್ ಕಂಪ್ಯೂಟರ್’ ಕಾರ್ಯಾಚರಣೆ ನಡೆಸುತ್ತಿದೆ. ದೇಶದ ಮೊದಲ 25 ಕ್ಯೂಬಿಟ್ ಮಷಿನ್ ಎಂಬ ಹೆಗ್ಗಳಿಕೆ ಯೊಂದಿಗೆ ಇದು ಮೊನ್ನೆ ಮೇ ತಿಂಗಳಲ್ಲಷ್ಟೇ ಶೇ 99.7 ಕ್ಷಮತೆಯನ್ನು ಸಾಧಿಸಿ ಜಗತ್ತಿನ ಗಮನವನ್ನು ಸೆಳೆದಿದೆ. ಭಾರತದ ‘ರಾಷ್ಟ್ರೀಯ ಕ್ವಾಂಟಮ್ ಮಿಷನ್’ನ ಭಾಗವಾಗಿ ಇದು ಈಗಾಗಲೇ ಹನ್ನೊಂದು ಪೇಟೆಂಟ್ಗಳನ್ನು ಗಳಿಸಿದೆ. ತುಸು ತಡವಾಗಿ ಎಚ್ಚರಗೊಂಡಂತೆ ಕರ್ನಾಟಕ ಇದೇ 31ರಂದು ‘ಕ್ವಾಂಟಮ್ ಇಂಡಿಯಾ’ ಸಮಾವೇಶ ನಡೆಸುವುದಾಗಿ ನಿನ್ನೆ ಹೇಳಿದೆ.

ಕ್ವಾಂಟಮ್ ಕಂಪ್ಯೂಟರ್ ನೋಡಲು ಚಂದ. ಐಷಾರಾಮಿ ಬಂಗ್ಲೆಗಳಲ್ಲೋ ಚರ್ಚ್ಗಳಲ್ಲೋ ತಾರಸಿಯಿಂದ ಇಳಿಬಿಟ್ಟ ಗಾಜಿನ ತೂಗುದೀಪವನ್ನೇ ಹೋಲುವ ಯಂತ್ರಾಗಾರ ಅದು. ಗಾಜಿನ ಬದಲು ಚಿನ್ನ, ಟೈಟಾನಿಯಂ, ನಿಯೋಬಿಯಂ, ರುಬೀಡಿಯಂ, ಟಂಟಾಲಮ್ ಮುಂತಾದ ಭಾರೀ ಬೆಲೆಬಾಳುವ ಲೋಹಗಳ ಗೊಂಚಲು ಅದು. ಮೇಲಿನ ಸ್ತರದಲ್ಲಿ ಸಾಮಾನ್ಯ ಉಷ್ಣತೆ ಇದ್ದರೆ, ಕೆಳಕ್ಕೆ ಬಂದಂತೆ ಹೀಲಿಯಂ ದ್ರವದಲ್ಲಿ ಶಾಖ ಕಡಿಮೆ ಆಗುತ್ತ ಆಗುತ್ತ ಕೆಳತುದಿಯ ಮೂತಿಯಲ್ಲಿ ನಿಖರ ಶೂನ್ಯದ ಘನಘೋರ ಚಳಿಯಲ್ಲಿ (ಮೈನಸ್ 273.14 ಡಿಗ್ರಿ ಸೆಲ್ಸಿಯಸ್) ಕ್ವಾಂಟಮ್ ಕಣಗಳು ನರ್ತಿಸುತ್ತವೆ. ಅವುಗಳನ್ನು ಕ್ಯೂಬಿಟ್ಗಳಾಗಿ...

ಇವೆಲ್ಲ ನಮ್ಮ ತಿಳಿವಳಿಕೆಗೆ ನಿಲುಕುವುದಿಲ್ಲ ಖರೆ. ಆದರೆ ಒಂದು ಮಹಾಕ್ರಾಂತಿಯ ಆರಂಭದ ಹೆಜ್ಜೆಗಳು ಭಾರತದಲ್ಲೂ ಮೂಡುತ್ತಿವೆ. ಬಾಹ್ಯಾಕಾಶ ದತ್ತ ದಾಪು ಹೆಜ್ಜೆಗಳ ಹಾಗೆ ಇಲ್ಲೂ ಅಮೆರಿಕ ಮತ್ತು ಚೀನಾ ಈಗಾಗಲೇ ಸಾಕಷ್ಟು ಮುಂದಕ್ಕಿವೆ. ಜರ್ಮನಿ, ಜಪಾನ್, ಕೆನಡಾ ಮತ್ತು ಬ್ರಿಟನ್ ಓಟದಲ್ಲಿ ಭಾಗವಹಿಸಿವೆ. ಆದರೆ, ಚೀನಾ ಒಂದನ್ನು ಬಿಟ್ಟರೆ ಎಲ್ಲೆಲ್ಲೂ ಇವೇ ಐಬಿಎಂ, ಗೂಗಲ್, ಮೈಕ್ರೊಸಾಫ್ಟ್ ಮುಂತಾದ ಕಂಪನಿಗಳು ಹೂಡಿಕೆ ಮಾಡಿರುವಾಗ ಇದರಲ್ಲಿ ನಮ್ಮ ಭಾಗ್ಯ ಏನಿದೆ ಕೇಳಿದಿರಾ? ಭಾರತದ ನೆಲದಲ್ಲಿ ಬೇರು ಬಿಡಲು ಇವಕ್ಕೆ ಅವಕಾಶ ಮಾಡಿಕೊಟ್ಟಾಗ ಕಂಪನಿಗಳ ಬೆಳವಣಿಗೆಯ ಜೊತೆ ಜೊತೆಗೇ ಭಾರತದ್ದೇ ಯುವಪೀಳಿಗೆಯ ವಿಕಾಸ ಸಾಧ್ಯವಿದೆ. ಉದ್ಯೋಗಾವಕಾಶ ಮತ್ತು ಅಂತರ ರಾಷ್ಟ್ರೀಯ ಮಟ್ಟದ ದಕ್ಷತೆಯುಳ್ಳ ಮೂಲಸೌಕರ್ಯಗಳು ಸೃಷ್ಟಿಯಾಗುತ್ತವೆ.

ಕ್ವಾಂಟಮ್ ತಂತ್ರಜ್ಞಾನಕ್ಕೆ ಹೋಲಿಸಿದರೆ ಮನುಕುಲದ ಇದುವರೆಗಿನ ಸಾಧನೆಗಳು ಏನೇನೂ ಅಲ್ಲ. ಬೆಂಕಿಯನ್ನು ಪಳಗಿಸಿ ಹಣತೆಯ ದೀಪವನ್ನು ಬೆಳಗಿಸಿದ್ದೇ ಒಂದು ಮಹಾಸಾಧನೆ ಎಂದುಕೊಂಡರೆ, ಅದರ ಎದುರು ವಿದ್ಯುತ್ ಬಲ್ಬ್ ಬೆಳಗಿಸಿದ್ದು ಎಷ್ಟು ದೊಡ್ಡ ಕ್ರಾಂತಿ ಎನಿಸುತ್ತದೋ ಅಂಥದೊಂದು ಕ್ರಾಂತಿಯ ಹೊಸ್ತಿಲಲ್ಲಿ ನಾವಿದ್ದೇವೆ ಎನ್ನಲಾಗುತ್ತಿದೆ. ನಾವೀಗ ಸೂಪರ್ ಕಂಪ್ಯೂಟರ್ ಯುಗದಲ್ಲಿದ್ದೇವೆ ಎಂದರೆ, ಕ್ವಾಂಟಮ್ ಕಂಪ್ಯೂಟರಿನ ಹೋಲಿಕೆಯಲ್ಲಿ ಅದೊಂದು ದೊಡ್ಡ ಗಾತ್ರದ ಹಣತೆ ಅಷ್ಟೆ. ಹಣತೆಯ ಗಾತ್ರವನ್ನು ಅದೆಷ್ಟೇ ಹಿಗ್ಗಿಸಿದರೂ ಅದು ವಿದ್ಯುತ್ ಬಲ್ಬ್ಗೆ ಎಂದೂ ಸಮನಾಗಲಾರದು. ಕ್ವಾಂಟಮ್ ತಂತ್ರಜ್ಞಾನ ಅಷ್ಟೊಂದು ದೊಡ್ಡ ನೆಗೆತಕ್ಕೆ ಸಜ್ಜಾಗುತ್ತಿದೆ. ಆ ಮಹಾಜಿಗಿತಕ್ಕೆ ‘ಕ್ವಾಂಟಮ್ ಲೀಪ್’ ಎಂಬ ಹೆಸರೇ ಇದೆ! ಆ ಜಿಗಿತ ಹೇಗಿರುತ್ತದೆಂದರೆ, ಕ್ವಾಂಟಮ್ ಸುರಂಗದಲ್ಲಿ ತೂರಿಕೊಂಡು ನಾವು ಕ್ಷಣಾರ್ಧದಲ್ಲಿ ಸೂರ್ಯನಾಚಿನ ಇನ್ನೊಂದು ನಕ್ಷತ್ರಕ್ಕೋ ಅಥವಾ ಇನ್ನೊಂದು ವಿಶ್ವಕ್ಕೋ ಕಾಲಿಡಬಹುದು.

ಊಹೆಗೆ ಈಗಲೂ ನಿಲುಕುತ್ತಿಲ್ಲವೆ? ತಾರಾಲೋಕದ ಪಯಣವನ್ನು ಬದಿಗಿಟ್ಟು ನಮ್ಮದೇ ಹಿತ್ತಲಿನ ಕಡೆ ನೋಡಿ: ನಿಸರ್ಗದ ಸಾದಾ ಸಹಜ ವಿದ್ಯಮಾನಗಳು ನಮಗೆ ಈಗಲೂ ನಿಗೂಢವಾಗಿಯೇ ಇವೆ. ಸೂರ್ಯನ ಬೆಳಕನ್ನು ಮತ್ತು ಗಾಳಿಯಲ್ಲಿನ ಇಂಗಾಲವನ್ನು ಹೀರಿಕೊಂಡು ಸಸ್ಯಗಳು ಶರ್ಕರಪಿಷ್ಟವನ್ನುಉತ್ಪಾದಿಸುತ್ತವೆ ಎಂಬುದು ಗೊತ್ತಿದೆ; ಆದರೆ ಹೇಗೆ ಉತ್ಪಾದಿಸುತ್ತವೆ? ವಿಜ್ಞಾನಿಗಳಿಗೆ ಗೊತ್ತಿಲ್ಲ. ತೊಗರಿಯ ಬೇರಿನ ಗಂಟುಗಳಲ್ಲಿರುವ ಏಕಾಣು ಜೀವಿಗಳು ಗಾಳಿಯಲ್ಲಿನ ಸಾರಜನಕವನ್ನು ಹೀರಿಕೊಂಡು ಹೇಗೆ ಯೂರಿಯಾ, ಡಿಎಪಿ ತಯಾರಿಸುತ್ತವೆಯೋ ಗೊತ್ತಿಲ್ಲ. ನಾವು ಅದೇ ಕೆಲಸಕ್ಕೆ ಭೀಮ ಗಾತ್ರದ ಕ್ಲಿಷ್ಟ ಯಂತ್ರಾಗಾರವನ್ನು ಹೂಡಿ, ಅತ್ಯುಗ್ರ ಉಷ್ಣತೆಯಲ್ಲಿ ಮೀಥೇನ್ ಅನಿಲವನ್ನು ಗಾಳಿಯೊಂದಿಗೆ ಉರಿಸಿ, ಸುತ್ತೆಲ್ಲ ಮಾಲಿನ್ಯ ಹಬ್ಬಿಸಿ ಯೂರಿಯಾವನ್ನು ಪಡೆಯುತ್ತೇವೆ. ಇನ್ನೂ ಸ್ಪಷ್ಟವಾದ ಹೋಲಿಕೆ ಬೇಕೆಂದರೆ, ದಟ್ಟ ಕಾಡಿನಲ್ಲಿ ಒಂದು ರೋಬಾಟ್ ಜೀರುಂಡೆಯನ್ನು ಮತ್ತು ಒಂದು ಸಾದಾ ಜೀರುಂಡೆಯನ್ನೂ ಬಿಡಿ. ಬ್ಯಾಟರಿ ಮುಗಿದ ಮೇಲೆ ರೋಬಾಟ್ ಜೀರುಂಡೆ ಅಲ್ಲೇ ಬಿದ್ದಿರುತ್ತದೆ. ಆದರೆ ಸಹಜ ಜೀರುಂಡೆ ತನಗೆ ಬೇಕಿದ್ದ ಆಹಾರವನ್ನು ಸಂಪಾದಿಸಿಕೊಂಡು, ತನ್ನ ವೈರಿಗಳನ್ನು ನಿಭಾಯಿಸಿಕೊಂಡು, ಸಂಗಾತಿಯನ್ನು ಹುಡುಕಿಕೊಂಡು ವಂಶೋದ್ಧಾರ ಮಾಡಿಕೊಳ್ಳುತ್ತದೆ. ಪ್ರಕೃತಿಯ ಆ ಜಾಣ್ಮೆಯ ಒಂದಂಶವನ್ನೂ ನಾವು ಪಡೆದಿಲ್ಲ.

ವೈದ್ಯಕೀಯದಲ್ಲಿ ಇಷ್ಟೊಂದು ಸಾಧನೆ ಮಾಡಿದ್ದರೂ, ಅವೆಲ್ಲವೂ ದಶಕಗಳ ಕಾಲದ ಕತ್ತಲ ಹುಡುಕಾಟ ಮತ್ತು ಕೋಟ್ಯಂತರ ಡಾಲರ್ ವೆಚ್ಚದ ನಂತರ ಬಂದಿವೆ; ಇಲ್ಲವೆ ಪೆನಿಸಿಲಿನ್ನಂಥ ರಾಮಬಾಣಗಳು ಅದೃಷ್ಟವಶಾತ್ ಲಭಿಸಿವೆ. ಕ್ವಾಂಟಮ್ ಎಂಬ ಕನಸಿನ ಲೋಕದಲ್ಲಿ ನಿಸರ್ಗದ ನಿಗೂಢಗಳೆಲ್ಲ ಚಿಟಿಕೆಯಷ್ಟು ಸುಲಭದಲ್ಲಿ ತೆರೆದುಕೊಳ್ಳುತ್ತವೆ. ಈಗಿನ ಸೂಪರ್ ಕಂಪ್ಯೂಟರ್ಗಳು ಹದಿನೈದು ವರ್ಷಗಳಲ್ಲಿ ಮಾಡಬಹುದಾದ ಕೆಲಸವನ್ನು ಕ್ವಾಂಟಮ್ ಕಂಪ್ಯೂಟರ್ಗಳು 15 ನಿಮಿಷಗಳಲ್ಲಿ ಮಾಡಿ ಮುಗಿಸುತ್ತವೆ; ಕ್ಯಾನ್ಸರ್ ರೋಗಕ್ಕೆ, ಮರೆಗುಳಿ ಕಾಯಿಲೆಗೆ ಖಚಿತ ಔಷಧವನ್ನೂ ತಿಳಿಸುತ್ತವೆ; ಜಾಗತಿಕ ತಾಪಮಾನ ಏರಿಕೆಯನ್ನು ತಡೆಗಟ್ಟುವ ಉಪಾಯವನ್ನೂ ಕೊಡುತ್ತವೆ; ಯಾರೂ ಭೇದಿಸಲಾಗದ ಗುಪ್ತ ಸಂದೇಶಗಳನ್ನು ಮಿಲಿಟರಿಗೆ ಮತ್ತು ಬಿಸಿನೆಸ್ ಕಂಪನಿಗಳಿಗೆ ರೂಪಿಸುತ್ತವೆ; ಮನೋವೇಗದಲ್ಲಿ ವಿಶ್ವ ಪರ್ಯಟನೆಗೂ ನಮ್ಮನ್ನು ಹೊರಡಿಸಬಹುದು.

ಅದೆಲ್ಲ ಸರಿ, ಆದರೆ ಇದರಿಂದ ಜನಸಾಮಾನ್ಯರಿಗೇನು ಲಾಭ? ಶುಭಾಂಶು ಶುಕ್ಲರ ಬಾಹ್ಯಾಕಾಶ ಪಯಣಕ್ಕೆ ನಮ್ಮ ಸರ್ಕಾರ ₹550 ಕೋಟಿ ನೀಡಿತೆಂಬ ಸುದ್ದಿ ಬಂದಾಗಲೂ ಈ ಪ್ರಶ್ನೆ ಎದ್ದಿತ್ತು. ಭಾರತದ ಇದುವರೆಗಿನ ಹೈಟೆಕ್ ಸಾಧನೆಗಳೆಲ್ಲ ಪಿರಮಿಡ್ಡನ್ನು ಹೋಲುತ್ತವೆ. ತಳದಲ್ಲಿರುವವರಿಗೆ ಬರೀ ಹೊರೆ ಎನಿಸುವಂತೆ ಮೇಲುಸ್ತರಗಳ ಮಂದಿಗೇ ಎಲ್ಲ ಸೌಲಭ್ಯಗಳೂ ಸಿಗುತ್ತಿವೆ. ಕ್ವಾಂಟಮ್ ತಂತ್ರಜ್ಞಾನದ ಫಲಶ್ರುತಿ ಇದನ್ನು ತಲೆಕೆಳಗು ಮಾಡೀತೆಂದು ಆಶಿಸೋಣ. ಇಷ್ಟಕ್ಕೂ ಈ ಕಂಪ್ಯೂಟರಿನ ಆಕೃತಿಯೇ ಉಲ್ಟಾ ಪಿರಮಿಡ್ ಇದ್ದಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.