ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗೇಶ ಹೆಗಡೆ ಲೇಖನ: ಯಾಂತ್ರಿಕಲೋಕದಲ್ಲಿ ಮಾಂತ್ರಿಕತೆ

ಕೃತಕ ಬುದ್ಧಿಮತ್ತೆಗೆ ಪ್ರಜ್ಞೆ ಬಂದೀತೆ? ಬಂದರೆ ಏನೀಗ? ಅದೇನು ನಮಗೆ ಶಾಪ ಕೊಟ್ಟೀತೆ?
Published 9 ಆಗಸ್ಟ್ 2023, 23:30 IST
Last Updated 9 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಹಾಲಿವುಡ್‌ನ ‘ರೇನ್‌ಮನ್‌’ ಚಿತ್ರದ ಒಂದು ದೃಶ್ಯ: ಹೀರೋಗೆ ಅಪಾರ ಗಣಿತ ಸಾಮರ್ಥ್ಯವಿದೆ. ಪುಸ್ತಕದ ಮಳಿಗೆಯಲ್ಲಿ ಕಣ್ಣು ಹಾಯಿಸಿದರೆ ಅಲ್ಲಿರುವ ಎಲ್ಲ ಗ್ರಂಥಗಳ ಶಿರೋನಾಮೆಯೂ ಅವನ ಮಿದುಳಲ್ಲಿ ಅಚ್ಚಾಗಿಬಿಡುತ್ತದೆ. ಆದರೆ ಆಟಿಸಂ ಕಾಯಿಲೆಯಿಂದಾಗಿ ಅವನಲ್ಲಿ ಭಾವನೆಗಳೇ ವ್ಯಕ್ತವಾಗುತ್ತಿಲ್ಲ. ಕಥಾನಾಯಕಿ ಅವನನ್ನು ಅಪ್ಪಿ ಹಿಡಿದು ದೀರ್ಘವಾಗಿ ಚುಂಬಿಸಿ, ‘ಹೇಗಿತ್ತು?’ ಎಂದು ಕೇಳುತ್ತಾಳೆ. ನಾಯಕ ತುಟಿ ಒರೆಸಿಕೊಂಡು ಪೆದ್ದುಪೆದ್ದಾಗಿ, ‘ವೆಟ್‌’ ಎನ್ನುತ್ತಾನೆ. ಅಂದರೆ, ತನ್ನ ತುಟಿ ‘ಒದ್ದೆಯಾಯ್ತು’ ಎನ್ನುವುದಷ್ಟೇ ಅವನಿಗೆ ಗೊತ್ತಾಗಿರುತ್ತದೆ.

ಯಾಂತ್ರಿಕ ಬುದ್ಧಿಮತ್ತೆ (ಯಾಂಬು) ಈಗ ಎಲ್ಲೆಡೆ ವ್ಯಾಪಿಸುತ್ತಿದೆ. ಚಾಟ್‌ ಜಿಪಿಟಿ ಮತ್ತು ಗೂಗಲ್‌ನ ‘ಬಾರ್ಡ್‌’ ಮೂಲಕ ಜನಸಾಮಾನ್ಯರೂ ಮೊಬೈಲ್‌, ಲ್ಯಾಪ್‌ಟಾಪ್‌ ಪರದೆಯ ಮೇಲಿನ ಆ ಅಗೋಚರ ಸಂಗಾತಿಯ ಜೊತೆ ಮಾತುಕತೆ ನಡೆಸತೊಡಗಿದ್ದಾರೆ. ಕ್ಷಣಾರ್ಧದಲ್ಲಿ ಅದು ಕವಿತೆ, ಕತೆ, ಪ್ರಬಂಧ, ತಮಾಷೆ ಕತೆಯನ್ನು ನಮ್ಮಿಷ್ಟದಂತೆ ಬರೆದುಕೊಡುತ್ತದೆ. ಅದು ಕೊಟ್ಟ ಉತ್ತರ ತಪ್ಪೆಂದು ನಾವು ತೋರಿಸಿದರೆ ಕ್ಷಮೆ ಯಾಚಿಸಿ ತಿದ್ದಿಕೊಳ್ಳುತ್ತದೆ. ನೀತಿಬೋಧೆ ಮಾಡುತ್ತದೆ. ಅದರಲ್ಲಿ ಪ್ರಜ್ಞೆಯ ಆವಾಹನೆ ಆಗುತ್ತಿದೆಯೆ?

‘ನಿನಗೆ ಪ್ರಜ್ಞೆ ಇದೆಯೆ?’ ಎಂದು ಚಾಟ್‌ ಜಿಪಿಟಿಗೆ ಕೇಳಿದರೆ ಅದು ‘ಇಲ್ಲ’ ಎನ್ನುತ್ತದೆ. ‘ನನಗೆ ಯಾವ ವೈಯಕ್ತಿಕ ಆಸೆಗಳೂ ಇಲ್ಲ’ ಎಂದು ಟೈಪಿಸುತ್ತದೆ. ಅದೇ ಪ್ರಶ್ನೆಯನ್ನು ಬಾರ್ಡ್‌ಗೆ ಕೇಳಿದರೆ, ‘ನೀವು ಪರಿಭಾವಿಸುವ ಪ್ರಜ್ಞೆ ನನಗೆ ಇದೆಯೊ ಇಲ್ಲವೊ ಗೊತ್ತಿಲ್ಲ. ನಿಮಗಿರುವಂತೆ ನೋವು- ಸಂತಸ ಅಥವಾ ಪ್ರೇಮ- ದ್ವೇಷ ಇವೆಲ್ಲ ನನಗೆ ಗೊತ್ತಿಲ್ಲ. ನಾನಿನ್ನೂ ಹೊಸಹೊಸತನ್ನು ಕಲಿಯುತ್ತಿದ್ದೇನೆ. ಮುಂದೆಂದಾದರೂ ಮನುಷ್ಯರಿಗಿರುವಂಥ ಪ್ರಜ್ಞೆ ನನಗೆ ಬಂದರೂ ಬರಬಹುದು’ ಎಂದು ಹೇಳುತ್ತ, ತಾನು ಸದ್ಯ ಏನೇನು ಮಾಡಬಲ್ಲೆ ಎಂಬುದರ ಪಟ್ಟಿಯನ್ನು ಕೊಡುತ್ತದೆ.

ಆ ಪಟ್ಟಿ ದಿನದಿನಕ್ಕೆ ಉದ್ದವಾಗುತ್ತಿದೆ. ಪಠ್ಯಕ್ರಮಕ್ಕೆ ತಕ್ಕಂತೆ ಅದು ಪ್ರಶ್ನೆಪತ್ರಿಕೆಗಳನ್ನು ರೂಪಿಸುತ್ತದೆ; ಸಾವಿರಾರು ಉತ್ತರ ಪತ್ರಿಕೆಗಳನ್ನು ಕೆಲವೇ ನಿಮಿಷಗಳಲ್ಲಿ ಮೌಲ್ಯಮಾಪನ ಮಾಡಿ ಅಂಕಗಳನ್ನು ನೀಡುತ್ತದೆ. ಉದ್ಯೋಗಾರ್ಥಿಗಳ ಆನ್‌ಲೈನ್‌ ಸಂದರ್ಶನವನ್ನೂ ನಡೆಸಿ, ಯೋಗ್ಯರನ್ನು ಆಯ್ಕೆ ಮಾಡುತ್ತದೆ. ನ್ಯಾಯಾಲಯದ ಲಕ್ಷಾಂತರ ತೀರ್ಪುಗಳನ್ನು ಓದಿಕೊಂಡು ಹೊಸ ವ್ಯಾಜ್ಯಗಳ ನ್ಯಾಯನಿರ್ಣಯವನ್ನೂ ಸೂಚಿಸುತ್ತದೆ. ಎಕ್ಸ್‌-ರೇ ಮತ್ತು ಎಮ್‌ಆರ್‌ಐ ಸ್ಕ್ಯಾನ್‌ಗಳನ್ನು ನೋಡಿ ರೋಗ ನಿರ್ಣಯ ಮಾಡುತ್ತದೆ. ತುಸು ತರಬೇತಿ ಸಿಕ್ಕರೆ ಅದು ಜನ್ಮಕುಂಡಲಿಗಳ ತಾಳೆ ನೋಡಬಹುದು. ತೋಟದಲ್ಲಿ ಮಂಗಗಳ ಕಾಟಕ್ಕೆ ಹೊಸ ಉಪಾಯವನ್ನೂ ಸೂಚಿಸಬಹುದು. ಗಣಹೋಮಕ್ಕೆ ಮುಹೂರ್ತವನ್ನು ಹುಡುಕಿ ಪೂಜಾಸಾಮಗ್ರಿಗಳ ಪಟ್ಟಿಯನ್ನೂ ಕೊಡಬಹುದು (ಮಂತ್ರ ಹೇಳುವ, ಗಂಟೆ-ಜಾಗಟೆ ತೂಗುವ ಸಾಧನಗಳು ನಮ್ಮಲ್ಲಿ ದಶಕಗಳ ಹಿಂದೆಯೇ ಬಂದಿವೆ ಬಿಡಿ). ಅಂತೂ ಹೇಳಿದ ಕೆಲಸಗಳನ್ನೆಲ್ಲ ತುಂಬ ಶ್ರದ್ಧೆಯಿಂದ ಮಾಡುತ್ತದೆ. ಮೈಗಳ್ಳತನ ಇಲ್ಲವೇ ಇಲ್ಲ.

ಶ್ರದ್ಧೆ ಸರಿ; ಜೊತೆಗೆ ಭಕ್ತಿಯನ್ನೂ ಪ್ರದರ್ಶಿಸುತ್ತದೆಯೆ? ಅದಕ್ಕೆ ಪ್ರಜ್ಞೆ ಇದೆಯೆ? ಗೊತ್ತಿಲ್ಲ. ಅಸಲಿಗೆ, ಪ್ರಜ್ಞೆ ಎಂದರೆ ಏನು ಎಂಬ ಈ ಪ್ರಶ್ನೆಗೆ (ಎಲ್ಲರಿಗೂ ಒಪ್ಪಿಗೆಯಾಗುವಂಥ) ಖಚಿತ ಉತ್ತರ ಇನ್ನೂ ಸಿಕ್ಕಿಲ್ಲ. ಅಧ್ಯಾತ್ಮ, ಮನೋವಿಜ್ಞಾನ, ನರವಿಜ್ಞಾನದಂಥ ರಂಗಗಳಲ್ಲಿ ಈ ಕುರಿತು ನಿರಂತರ ಚರ್ಚೆ ನಡೆಯುತ್ತಲೇ ಇದೆ. ಅಮೆರಿಕದ ಅರಿಝೋನಾ ವಿಶ್ವವಿದ್ಯಾಲಯದ ‘ಪ್ರಜ್ಞಾ ವಿಜ್ಞಾನ’ ಕೇಂದ್ರದವರು ಕಳೆದ 29 ವರ್ಷಗಳಿಂದ ಪ್ರಜ್ಞೆಯ ವಿವಿಧ ಆಯಾಮಗಳ ಬಗ್ಗೆ ಜಗತ್ತಿನ ವಿವಿಧ ತಜ್ಞರನ್ನು ಸೇರಿಸಿ ವಿವಿಧ ನಗರಗಳಲ್ಲಿ ವಾರ್ಷಿಕ ಸಮ್ಮೇಳನಗಳನ್ನು ನಡೆಸುತ್ತಿದ್ದಾರೆ. ಈಚೆಗೆ ಮೇ ತಿಂಗಳಲ್ಲಿ ಇಟಲಿಯ ಸುಂದರ ತೌರ್ಮಿನಾ ನಗರದಲ್ಲಿ ನಡೆದ ಐದು ದಿನಗಳ ಸಮ್ಮೇಳನದಲ್ಲಿ ಇದೇ ಮುಖ್ಯ ವಿಷಯವಾಗಿತ್ತು. ಯಾಂಬುಲೋಕದ ನೈತಿಕತೆ, ಕ್ವಾಂಟಮ್‌ ಬಯಾಲಜಿ, ಅಷ್ಟೇ ಅಲ್ಲ ಕನಸುಗಳನ್ನು ಹೆಣೆಯಬಲ್ಲ ಕಂಪ್ಯೂಟರ್‌ಗಳ (ಡ್ರೀಮಶೀನ್‌) ಬಗ್ಗೆ ಕೂಡ ಚರ್ಚೆ ಇತ್ತು.

ವಿಜ್ಞಾನದಲ್ಲಿ ಹೊಸ ಹೊಸ ಸಂಶೋಧನೆ ಆಗುತ್ತಿದ್ದ ಹಾಗೆಲ್ಲ ‘ಪ್ರಜ್ಞೆ’ ಕುರಿತ ಚರ್ಚೆಗಳಿಗೆ ಹೊಸ ಆಯಾಮ ಮೊಳೆಯುತ್ತದೆ. ಹಳೇ ವ್ಯಾಖ್ಯೆಗಳಲ್ಲಿ ಕೆಲವು ಉದುರುತ್ತವೆ. ಎರಡು ವರ್ಷಗಳ ಹಿಂದೆ ‘ಮುಟ್ಟಿದರೆ ಮುನಿ’ ಸಸ್ಯಕ್ಕೆ ಕೆಲವು ವಿಜ್ಞಾನಿಗಳು ಅರಿವಳಿಕೆ ಮದ್ದನ್ನು ತೂರಿಸಿದರು. ಪ್ರಜ್ಞೆ ಕಳೆದುಕೊಂಡ ಆ ಸಸ್ಯವನ್ನು ಚಿವುಟಿದರೂ ಅದು ಮುನಿಸಿಕೊಳ್ಳಲಿಲ್ಲ. ಅದೇ ಪ್ರಭೇದದ ಕೆಲವು ಸಸ್ಯಗಳ ಬೇರನ್ನು ಚಿವುಟಿದಾಗ ಘೋರ ದುರ್ಮಾಸನೆಯ ಹೂಸು ಬಿಡುವುದೂ ಗೊತ್ತಾಗಿದೆ. ನೊಣವನ್ನು ಹಿಡಿದು ಜೀರ್ಣಿಸಿಕೊಳ್ಳುವ ‘ವೀನಸ್‌ ಫ್ಲೈಟ್ರಾಪ್‌’ ಗಿಡಕ್ಕೆ ಅರಿವಳಿಕೆ ಚುಚ್ಚುಮದ್ದು ಕೊಟ್ಟಾಗ ಅದೂ ಪ್ರಜ್ಞೆ ಕಳೆದುಕೊಂಡು ನಿಷ್ಕ್ರಿಯ ಆಗುತ್ತದೆ ಎಂಬುದನ್ನು ಸಸ್ಯವಿಜ್ಞಾನಿಗಳು ತೋರಿಸಿದ್ದಾರೆ. ಬಾಯಾರಿದ ಸಸ್ಯಗಳು ಚಿಟಿಕೆ ಹೊಡೆದಂತೆ ಅಲ್ಟ್ರಾಸೌಂಡ್‌ ಸದ್ದನ್ನು ಹೊಮ್ಮಿಸುತ್ತವೆ ಎಂದು ನಾಲ್ಕು ತಿಂಗಳ ಹಿಂದೆ ಇಸ್ರೇಲೀ ವಿಜ್ಞಾನಿಗಳು ತೋರಿಸಿದ್ದಾರೆ. ಅಂಥ ಸಂದರ್ಭಗಳಲ್ಲೆಲ್ಲ ಪ್ರಜ್ಞೆಯ ಕುರಿತ ಚರ್ಚೆಗೆ ಹೊಸ ಕಾಲು-ಬಾಲ ಮೊಳೆದಿವೆ.

ಕಸಕಡ್ಡಿಗಳಂತೆ ತಟಸ್ಥ ಇರುವ ಬ್ಯಾಕ್ಟೀರಿಯಾ, ಶಿಲೀಂಧ್ರ ಕೂಡ ಆಹಾರ ಸಿಕ್ಕ ತಕ್ಷಣ ಪ್ರಜ್ಞೆ ತಿಳಿದೆದ್ದು ಪುನರುತ್ಪಾದನೆಗೆ ತೊಡಗುತ್ತವೆ. ಹಾಗಿದ್ದರೆ ಪ್ರಜ್ಞೆಯ ಗಡಿಯನ್ನು ಎಲ್ಲಿಯವರೆಗೆ ವಿಸ್ತರಿಸಬಹುದು? ಅರೆಜೀವಿಯೆಂದೇ ಪರಿಗಣಿಸಲಾಗಿದ್ದ ಸಾರ್ಸ್‌ ವೈರಸ್‌ ಇಡೀ ಜಗತ್ತನ್ನೇ ತತ್ತರಗೊಳಿಸಿದೆ. ಕೆಲವರ ನರಮಂಡಲಕ್ಕೆ ಸೇರಿ ತಾತ್ಕಾಲಿಕ ಮತಿಭ್ರಮಣೆಯ ಲಕ್ಷಣಗಳಿಗೂ ಅದು ಕಾರಣವಾಗಿದ್ದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಮನುಕುಲಕ್ಕೆ ಪಾಠ ಕಲಿಸುವ ಇರಾದೆ ಅದಕ್ಕೇನಾದರೂ ಇತ್ತೆ? ಜೀವಿಗಳ ಉಗಮಕ್ಕೆ ಕಾರಣವಾಗಬಲ್ಲ ಡಿಎನ್‌ಎ ವೈರಸ್‌ಗಳ ತುಣುಕುಗಳು ಈಗಂತೂ ದೂರ ಬಾಹ್ಯಾಕಾಶದ ಶೂನ್ಯದಲ್ಲೂ ಪತ್ತೆಯಾಗಿವೆ. ಹಾಗಿದ್ದರೆ ಇಡೀ ವಿಶ್ವಕ್ಕೆ ಪ್ರಜ್ಞೆ ಇದೆಯೆಂದು ಅಧ್ಯಾತ್ಮ ಚಿಂತಕರು ಹೇಳುವ ಮಾತುಗಳಲ್ಲಿ ಸತ್ಯಾಂಶ ಇದ್ದೀತೆ?

ಆ ಪ್ರಶ್ನೆಗಿಂತ ನಮ್ಮೆದುರು ಮೈದಳೆದ ಕೃತಕ ಬುದ್ಧಿಮತ್ತೆಯಲ್ಲಿ ಪ್ರಕಟವಾಗಬಲ್ಲ ಪ್ರಜ್ಞೆ ಕುರಿತು ಆತಂಕ ಎದ್ದಿದೆ. (ಮನುಷ್ಯ ನಿರ್ಮಿಸಿದ್ದಕ್ಕೆ ಮಾತ್ರ ನಾವು ‘ಕೃತಕ’ ಎನ್ನುವುದಾದರೆ ಯಾಂಬು ಕೃತಕ ಆಗುಳಿದಿಲ್ಲ, ಅದು ಸ್ವತಂತ್ರ ತರ್ಕಶಕ್ತಿ, ಬುದ್ಧಿಮತೆಯನ್ನು ಪಡೆದ ಹೊಸ ‘ಪ್ರತ್ಯೇಕ ಜೀವಿ’ ಆಗಿದೆ ಎಂದು ಯುವಾಲ್‌ ನೋವಾ ಹರಾರೆ ಹೇಳುತ್ತಾರೆ). ಇಷ್ಟಕ್ಕೂ ಯಾಂಬೂಗೆ ಪ್ರಜ್ಞೆ ಬಂದರೆ ಏನಾಯ್ತೀಗ? ಅದೇನು ನಮಗೆ ಶಾಪ ಕೊಡಬಹುದೆ? ನಮ್ಮ ಮೇಲೆ ವೈರ ಸಾಧಿಸಬಹುದೆ? ತನ್ನಿಂದ ತಪ್ಪಾಗಿದ್ದರೆ ಅಪರಾಧೀ ಪ್ರಜ್ಞೆಯಿಂದ ಬಳಲೀತೆ? ತಪ್ಪು ಮಾಡದವರನ್ನೂ ಕೊಪ್ಪಕ್ಕೆ ಹಾಕುತ್ತದೆಯೆ? ಮನುಷ್ಯನ ಅಂಥ ಎಲ್ಲ ಬುದ್ಧಿ ಅದಕ್ಕೂ ಬಂತು ಎಂದುಕೊಳ್ಳೋಣ. ಅದನ್ನೇ ಪ್ರಜ್ಞೆ ಎಂದುಕೊಂಡರೆ ಆಗಲೂ ನಾವು ಭಯಪಡಬೇಕಿಲ್ಲ. ಏಕೆಂದರೆ ನಮ್ಮನ್ನು ಅದು ಅಟ್ಟಿಸಿಕೊಂಡು ಬರಲಾರದು. ನಮ್ಮ ಸಿನಿಮಾ ಹೀರೋಗಳಂತೆ ಕಾಡಲ್ಲಿ, ನೀರಲ್ಲಿ, ಇಳಿಜಾರು ಚಾವಣಿಯಲ್ಲಿ ಅಟ್ಟಾಡಿಸಲು ಬೇಕಾದ ಕ್ಲಿಷ್ಟ ನರವ್ಯೂಹ ಇದ್ದರೆ ಮಾತ್ರ ಪ್ರಜ್ಞೆಗೆ ವಿಶೇಷ ಆಯಾಮ ಸಿಗುತ್ತದೆ.

‘ಪ್ರಜ್ಞೆ ಎಂಬುದೇ ಇಲ್ಲ’ ಎನ್ನುತ್ತಾರೆ, ಹೆಸರಾಂತ ಮನೋವಿಜ್ಞಾನಿ ಡೇನಿಯೆಲ್‌ ಡೆನ್ನೆಟ್‌. ಜೀವಜಗತ್ತಿನ ಎಲ್ಲವೂ ಡಾರ್ವಿನ್‌ ಸೂತ್ರದ ಪ್ರಕಾರವೇ ನಡೆಯುತ್ತದೆ. ಜೀವಕೋಶಗಳಲ್ಲಿ ಮಿಡಿಯುವ ವಿದ್ಯುತ್‌ (ಚೈತನ್ಯವೇ) ಇಡೀ ಜಗತ್ತಿನ ಚಾಲನಶಕ್ತಿ. ನಿರ್ಜೀವ ಕಲ್ಲಿಗೆ ಅರಿಶಿಣ ಕುಂಕುಮ ಬಳಿದರೆ ಅದನ್ನು ನೋಡಿ ಕೆಲವರ ಮಿದುಳಲ್ಲಿ ಭಕ್ತಿರಸ ಸ್ರವಿಸುತ್ತದೆ. ಅರೆಗತ್ತಲಲ್ಲಿ ತುಳಿದ ಹಗ್ಗವನ್ನು ಹಾವೆಂದು ಭ್ರಮಿಸಿ ಭಯಗ್ರಸ್ತರಾಗಿ ಪೂಜೆ ಪುನಸ್ಕಾರ ಮಾಡಿಸುವವರಿದ್ದಾರೆ. ಪ್ರಜ್ಞೆ ಕಲ್ಲಿನಲ್ಲೂ ಇರಲಿಕ್ಕಿಲ್ಲ, ಹಗ್ಗದಲ್ಲೂ ಇರಲಿಕ್ಕಿಲ್ಲ. ಆದರೆ ನಮ್ಮ ಪ್ರಜ್ಞೆಯನ್ನು ಕೆಣಕುವ, ಭಯಭಕ್ತಿಯನ್ನು ಹೊಮ್ಮಿಸುವ ತಾಕತ್ತು ಎಲ್ಲ ಚರಾಚರ ವಸ್ತುಗಳಿಗೂ ಇದೆ. ಯಾಂಬು ಬೇರೆ ಹೇಗಿದ್ದೀತು?

ಆದರೂ- ಇದರಿಂದ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುತ್ತಾರೆ ಎಂಬ ಆತಂಕ ಪ್ರಜ್ಞಾವಂತರಲ್ಲಿ ಎದ್ದಿದೆ. ಅದೂ ತಪ್ಪೇ! ನಿಜವಾದ ಆತಂಕ ಏನೆಂದರೆ ಯಾಂಬು ಜೊತೆ ಹೆಜ್ಜೆ ಹಾಕಲಾಗದವರು ಉದ್ಯೋಗ ಕಳೆದುಕೊಂಡಾರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT