ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗೇಶ ಹೆಗಡೆ ಲೇಖನ | ಖಂಡ್ರೆ ಗಮನಕ್ಕೆ ಹಸಿರು ಗೋಡೆ

ಜಗತ್ತಿನ ಅತಿ ದೊಡ್ಡ ʼಹಸಿರು ಗೋಡೆʼ ಆಫ್ರಿಕದಲ್ಲಿ ಸಜ್ಜಾಗುತ್ತಿದೆ. ನಮಗೂ ಅಂಥದ್ದೊಂದು ಬೇಕು
Published 8 ಜೂನ್ 2023, 0:54 IST
Last Updated 8 ಜೂನ್ 2023, 0:54 IST
ಅಕ್ಷರ ಗಾತ್ರ

ಖಗೋಳವಿಜ್ಞಾನಿ ಪರ್ಸಿವಲ್‌ ಲೊವೆಲ್‌ ಎಂಬಾತ 1901ರಲ್ಲಿ ಒಂದು ಗುಡ್ಡದ ಮೇಲೆ ಟೆಲಿಸ್ಕೋಪ್‌ ಹೂಡಿಕೊಂಡು ಮಂಗಳಗ್ರಹವನ್ನು ನೋಡುತ್ತಿದ್ದ. ಅಲ್ಲಿ ಆತನಿಗೆ ನೀರಿನ ಕಾಲುವೆಗಳನ್ನು ಹೋಲುವ ಅಸ್ಪಷ್ಟ ಗೀರುಗಳು ಕಂಡವು. ಒಟ್ಟೂ 183 ಕಾಲುವೆಗಳನ್ನೂ ಮಂಗಳನ ನೆತ್ತಿಯ ಮೇಲೆ ಹಿಮವನ್ನೂ ಗುರುತಿಸಿದ. ಆ ಕೆಂಪುಗ್ರಹದಲ್ಲಿ ಭೀಕರ ಬರಗಾಲ ಇದೆಯೆಂದೂ ಅಲ್ಲಿನ ಜೀವಿಗಳು ಬದುಕುಳಿಯಲೆಂದು ಹೇಗೋ ಕಷ್ಟಪಟ್ಟು ಕಾಲುವೆ ತೋಡುತ್ತಿವೆಯೆಂದೂ ಊಹಿಸಿ ‘ವೈಜ್ಞಾನಿಕ’ ಲೇಖನವನ್ನು ಬರೆದ. ಮುಂದೆ, ಇನ್ನಷ್ಟು ಸುಧಾರಿತ ಟೆಲಿಸ್ಕೋಪ್‌ಗಳು ಬಂದಮೇಲೆ ಲೊವೆಲ್‌ನ ಊಹೆ ನಿಜವಲ್ಲ, ಅಲ್ಲಿ ಜೀವಿಗಳಿಲ್ಲ ಎಂಬುದು ಗೊತ್ತಾಯಿತು. ಆದರೆ ಕಲ್ಪನಾ ಸಾಹಿತ್ಯದಲ್ಲಿ ಮಂಗಳನ ಆ ನತದೃಷ್ಟ ಜೀವಿಗಳ ಕತೆಗಳು ಬರುತ್ತಲೇ ಹೋದವು. ಅಲ್ಲಿನ ಜೀವಿಗಳು ನೀರಿಗಾಗಿ ಪೃಥ್ವಿಯ ಕಡೆ ವಲಸೆ ಬಂದಿದ್ದರ ಬಗ್ಗೆ ಕೂಡ ಕತೆಗಳು ಹೆಣೆದುಕೊಂಡವು.

ಈಗ ನಾವೇ ನಮ್ಮ ಭೂಗ್ರಹವನ್ನು ಬಿಟ್ಟು ಬೇರೆ ಕಡೆ ವಲಸೆ ಹೋಗಬೇಕಾಗಿ ಬಂದೀತೆಂದು ಕತೆ ಬರೆಯುವ ಮಟ್ಟಕ್ಕೆ ನಮ್ಮ ಭೂಮಿಯ ಬಿಸಿಯು ಪ್ರಳಯದ ಕಡೆ ವಾಲುತ್ತಿರುವಂತಿದೆ. ಆದರೆ ಹಾಗಾಗಲು ಬಿಡಕೂಡದು ಎಂದು ಜಾಗತಿಕ ಮಟ್ಟದ ಚಿಂತನೆಗಳು ನಡೆಯುತ್ತಿವೆ. ಮಂಗಳ ಲೋಕದ ಕಲ್ಪನಾಕತೆಗಳ ಮಾದರಿಯಲ್ಲೇ ಕೆಲವು ಅಸಲೀ ಕೆಲಸಗಳೂ ನಮ್ಮಲ್ಲಿ ನಡೆಯತೊಡಗಿವೆ. ಅದನ್ನೀಗ ನೆನಪಿಸಲು ಕಾರಣ ಏನೆಂದರೆ, ಪ್ರತಿವರ್ಷ ಜೂನ್‌ 17ನ್ನು ‘ಮರುಭೂಮಿ ಮತ್ತು ಬರಗಾಲವನ್ನು ಹಿಮ್ಮೆಟ್ಟಿಸುವ ಅಂತಾರಾಷ್ಟ್ರೀಯ ದಿನ’ ಎಂದು ಆಚರಿಸಬೇಕೆಂದು ವಿಶ್ವಸಂಸ್ಥೆ ಕರೆ ಕೊಟ್ಟಿದೆ, 1995ರಿಂದ ಕರೆ ಕೊಡುತ್ತಲೇ ಬಂದಿದೆ.

ಮರುಭೂಮಿಯ ವಿಸ್ತರಣೆಯನ್ನು ಹಿಮ್ಮೆಟ್ಟಿಸಲೆಂದು ‘ದ ಗ್ರೇಟ್‌ ಗ್ರೀನ್‌ ವಾಲ್‌ (ಮಹಾ ಹಸಿರು ಗೋಡೆ) ಹೆಸರಿನ ಯೋಜನೆಯೊಂದು ಉತ್ತರ ಆಫ್ರಿಕಾದ ಸಹಾರಾ ಮರುಭೂಮಿಯಲ್ಲಿ ಜಾರಿಯಲ್ಲಿದೆ. ಆ ಮಹಾಖಂಡದ ಪಶ್ಚಿಮ ತುದಿಯ ಸೆನೆಗಲ್‌ ದೇಶದಿಂದ ಹಿಡಿದು ಪೂರ್ವ ತುದಿಯ ಜಿಬೂಟಿಯವರೆಗೆ, ಹನ್ನೊಂದು ರಾಷ್ಟ್ರಗಳ 7777 ಕಿಲೊಮೀಟರ್‌ ಉದ್ದದ 15 ಕಿಲೊಮೀಟರ್‌ ಅಗಲದ, ಗಿಡಮರಗಳ ಗೋಡೆ ಇದು. ವಿಮಾನವೊಂದು ಗಂಟೆಗೆ 350 ಕಿ.ಮೀ. ವೇಗದಲ್ಲಿ ಸಾಗುತ್ತಿದ್ದರೆ ಈ ತುದಿಯಿಂದ ಆ ತುದಿ ತಲುಪಲು 20 ಗಂಟೆ ಬೇಕು. ಸಹಾರಾ ಅಂದರೆ ಗೊತ್ತಲ್ಲ, ಜಗತ್ತಿನ ಅತಿ ದೊಡ್ಡ ಮರುಭೂಮಿ. ಹಿಂದೊಮ್ಮೆ ಅರಣ್ಯಗಳಿದ್ದ ಈ ವಿಶಾಲ ಭೂಪ್ರದೇಶ ಪ್ರತಿ 41 ಸಾವಿರ ವರ್ಷಗಳಿಗೊಮ್ಮೆ ತನ್ನ ಲಕ್ಷಣಗಳನ್ನು ಬದಲಿಸಿಕೊಳ್ಳುತ್ತದೆ. ಇನ್ನು 15 ಸಾವಿರ ವರ್ಷಗಳ ನಂತರ ಮತ್ತೆ ಅಲ್ಲಿ ತಂತಾನೇ ಅರಣ್ಯ ತಲೆಯೆತ್ತುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈಗಂತೂ ಅದು 92 ಲಕ್ಷ ಚ.ಕಿ.ಮೀ. ವಿಸ್ತಾರದ ಘೋರ ಮರುಭೂಮಿ. ಇಡೀ ಭಾರತಕ್ಕಿಂತ ಮೂರು ಪಟ್ಟು ದೊಡ್ಡದು.

ಜಗತ್ತಿನ ನಾನಾ ಭಾಗಗಳಲ್ಲಿ ಮರುಭೂಮಿಗಳು ವಿಸ್ತರಿಸುತ್ತಿವೆ. ಮನುಷ್ಯನಿಂದಾಗಿ ಈಗೀಗ ಶೀಘ್ರವಾಗಿ ವಿಸ್ತರಿಸುತ್ತಿವೆ. ಅದಕ್ಕೆ ತಡೆಯೊಡ್ಡಲೆಂದೇ ವಿಶ್ವಸಂಸ್ಥೆಯ ‘ಯುಎನ್‌ಸಿಸಿಡಿ’ ಹೆಸರಿನ ಅಂಗಸಂಸ್ಥೆ ಅಸ್ತಿತ್ವಕ್ಕೆ ಬಂದಿದ್ದು, ಅದರ ನೆರವಿನಲ್ಲಿ ಜೀನ್‌-ಮಾರ್ಕ್‌ ಸಿನ್ನಸ್ಸಾಮಿ ಎಂಬ ಪರಿಸರ ಎಂಜಿನಿಯರ್‌ ದಿಗ್ದರ್ಶನದಲ್ಲಿ ಈ ಮಹಾಗೋಡೆಯ ನಿರ್ಮಾಣ ಕೆಲಸ ನಡೆಯುತ್ತಿದೆ. ಸಹಾರಾ ಮರುಭೂಮಿ ಇನ್ನಷ್ಟು ವಿಸ್ತರಿಸದಂತೆ ಈ ಹಸಿರುಪಟ್ಟಿಯನ್ನು ನಿರ್ಮಿಸಲು ಹೊರಟಿದ್ದು, ಹನ್ನೊಂದು ರಾಷ್ಟ್ರಗಳನ್ನು ಅದಕ್ಕೆಂದೇ ಅಣಿಗೊಳಿಸಿದ್ದು, ಕೆಲಸ ನಿರಂತರ ಸಾಗುವಂತೆ ನೋಡಿಕೊಂಡು ಬಂದಿದ್ದು ಒಂದು ಮಹಾ ಸಾಹಸವೇ ಹೌದು. ಬಂಡವಾಳವೇನೊ ವಿಶ್ವಬ್ಯಾಂಕ್‌, ವಿಶ್ವಬ್ಯಾಂಕ್‌ನ ಪರಿಸರ ನಿಧಿ, ಆಫ್ರಿಕನ್‌ ಸಂಘದಿಂದ ಬರುತ್ತದೆ. ಆದರೆ ಎತ್ತಿನಹೊಳೆ ಕಾಲುವೆಯ ಹಾಗೆ ಯಂತ್ರಗಳ ನೆರವಿನಿಂದ ಮಾಡುವ ಕೆಲಸ ಇದಲ್ಲ. ಅದಕ್ಕೆ ಸ್ಥಳೀಯ ಬಡ ಜನರನ್ನೇ ತೊಡಗಿಸಬೇಕು. ನೀರು ನೆರಳಿಲ್ಲದ ರಣಸೆಕೆಯ ನೆಲದಲ್ಲಿ ಬದುಕಲಾಗದೇ ನಗರಗಳತ್ತ ಗುಳೆ ಹೋಗುತ್ತಿರುವುದನ್ನು ತಡೆಯಬೇಕು. ಯಾರೋ ಒಡ್ಡುವ ಕಾಸಿಗಾಗಿ ಗನ್‌ ಹಿಡಿದು ಯಾವುದೋ ಮಾಫಿಯಾ ಗ್ಯಾಂಗನ್ನು ಸೇರಲು ಹೊರಟವರನ್ನು ಇತ್ತ ತಿರುಗಿಸಬೇಕು. ‘ಇದರಲ್ಲಿ ನನಗೇನು ಪಾಲಿದೆ?’ ಎಂದು ಅಡ್ಡಗಾಲು ಹಾಕುವ ಮುಖಂಡರ ಮನವೊಲಿಸಿ ಹಣದ ಸದ್ವಿನಿಯೋಗ ಆಗುವಂತೆ ನೋಡಿಕೊಳ್ಳಬೇಕು. ಜನರು ನಿರ್ಮಿಸುವ ಹಸಿರು ವನವೇ ಜನರಿಗೆ ಆಹಾರವನ್ನೂ ನೀಡಬೇಕು, ಅಡುಗೆಗೆ ಸೌದೆಯನ್ನೂ, ಮನೆಗೆ ಹೊದಿಕೆಯನ್ನೂ ಒದಗಿಸಬೇಕು, ನೆಲದ ತೇವಾಂಶವನ್ನೂ ಅಂತರ್ಜಲವನ್ನೂ ಜೀವಿವೈವಿಧ್ಯವನ್ನೂ ಹೆಚ್ಚಿಸಬೇಕು, ಹೊಸ ಹಸಿರು ನೆಲದ ಸ್ವಾಮಿತ್ವವೂ ಅವರಿಗೇ ಸಿಗುವಂತಾಗಬೇಕು. ಹಳತು ಹೋಗಿ ಹೊಸ ಸರ್ಕಾರ ಬಂದರೂ ಸರ್ವಾಧಿಕಾರಿ ಬಂದರೂ ಯೋಜನೆ ಕುಂಟದಂತೆ ಸಕಲೆಂಟು ಸವಾಲುಗಳನ್ನು ಎದುರಿಸುತ್ತಲೇ ಮುನ್ನಡೆಯಬೇಕು. ಮುನ್ನಡೆಯುತ್ತಿದೆ.

ನಮ್ಮ ದೇಶದಲ್ಲೂ ಇಂಥದ್ದೊಂದು ‘ಅರಾವಳಿ ಗ್ರೇಟ್‌ ಗ್ರೀನ್‌ ವಾಲ್‌’ ಯೋಜನೆಗೆ ಕಳೆದ ಮಾರ್ಚ್‌ ತಿಂಗಳಲ್ಲಿ ಕೇಂದ್ರ ಪರಿಸರ ಸಚಿವ ಭೂಪೇಂದರ್‌ ಯಾದವ್‌ ಹಸಿರು ನಿಶಾನೆ ತೋರಿಸಿದ್ದಾರೆ. ವಿಶ್ವಸಂಸ್ಥೆಯ ಎಫ್‌ಎಒ (ಆಹಾರ ಮತ್ತು ಕೃಷಿ ಸಂಘಟನೆ) ನೆರವಿನಿಂದ ಗುಜರಾತ್‌, ರಾಜಸ್ಥಾನ, ಹರಿಯಾಣ ಮತ್ತು ದೆಹಲಿಯ  ನಡುವೆ ಮರುಭೂಮಿ ಮುನ್ನುಗ್ಗದಂತೆ, ಬರಗಾಲ ತಲೆಯೆತ್ತದಂತೆ ಐದು ಕಿಲೊಮೀಟರ್‌ ಅಗಲದ 60 ಲಕ್ಷ ಹೆಕ್ಟೇರ್‌ನಲ್ಲಿ ಹಸಿರಿನ ಸಂವರ್ಧನೆಯ ಕೆಲಸ ಆರಂಭವಾಗಿದೆ.

ಇನ್ನು ಮುಂದಿನ ಸಂಗತಿಗಳು ಎಂಜಿನಿಯರಿಂಗ್‌ ಡಿಗ್ರಿ ಪಡೆದಿರುವ ಕರ್ನಾಟಕದ ಪರಿಸರ ಸಚಿವ ಈಶ್ವರ ಖಂಡ್ರೆಯವರ ಖಾಸಾ ಗಮನಕ್ಕೆ:

ಭಾರತದ ಎರಡನೇ ಅತಿದೊಡ್ಡ ಮರುಭೂಮಿ ಕರ್ನಾಟಕದಲ್ಲಿ ಸೃಷ್ಟಿಯಾಗುತ್ತಿದೆ ಎಂದು ವಿಜ್ಞಾನಿಗಳು ಪದೇ ಪದೇ ಹೇಳುತ್ತ ಬಂದಿದ್ದಾರೆ. ಉತ್ತರ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಅಂತರ್ಜಲ ಕುಸಿಯುತ್ತ, ನೆಲದ ತೇವಾಂಶ ಆರುತ್ತ, ಗಿಡಮರಗಳು ಕಣ್ಮರೆಯಾಗುತ್ತ ಸಾಗಿವೆ. ಇಲ್ಲೂ ಮರುಭೂಮಿ ತಡೆಯಲೆಂದು ಅಂಥದ್ದೊಂದು ವಿಸ್ತಾರದ ಯೋಜನೆ ಸಾಧ್ಯವಾದೀತೆ? ಜನರಿಗೆ ಸೂಕ್ತ ಪ್ರೇರಣೆ ನೀಡಿದರೆ ಯಾವ ವಿಶೇಷ ಅನುದಾನವಿಲ್ಲದೆ ಹಸಿರೀಕರಣ ಸಾಧ್ಯವೆಂದು ಮಹಾರಾಷ್ಟ್ರದಲ್ಲಿ ಅಮೀರ್‌ ಖಾನ್‌ ನೇತೃತ್ವದ ‘ಪಾನಿ ಫೌಂಡೇಶನ್‌’ ತಂಡ ತೋರಿಸುತ್ತ ಬಂದಿದೆ. ಚುನಾವಣೆಯಲ್ಲಿ ಬಳಸುವ ಸೋಶಿಯಲ್‌ ಎಂಜಿನಿಯರಿಂಗ್‌ ತಂತ್ರಗಳಿಗಿಂತ ಭಿನ್ನಬಗೆಯ ವಶೀಕರಣದ ಎಂಜಿನಿಯರಿಂಗ್‌ ತಂತ್ರ ಇದಕ್ಕೆ ಬೇಕು. ಕಲಬುರಗಿಯ ನೆಲ ಮರುಭೂಮಿ ಆಗದಂತೆ ತಡೆಯಲೆಂದು ರಾಜೇಂದ್ರ ಸಿಂಗರಂಥ ಜಲತಜ್ಞರ, ವಿಜ್ಞಾನಿಗಳ, ಕಾಲೇಜು-ವಿಶ್ವವಿದ್ಯಾಲಯ ಉಪನ್ಯಾಸಕರ, ಕುಲಪತಿಗಳ ಮತ್ತು ಮಠಾಧೀಶರ ನೆರವಿನಲ್ಲಿ ಕಳೆದ ಹತ್ತು ವರ್ಷಗಳಿಂದ ಜಲಜಾಗೃತಿಗೆ ಶ್ರಮಿಸಿದ ಬಿ.ಆರ್‌.ಪಾಟೀಲರು ಈಗ ಆಳಂದದ ಶಾಸಕರಾಗಿ ಗೆದ್ದು ಬಂದಿದ್ದಾರೆ. ಅವರಂಥವರ ಸಲಹೆ ಪಡೆಯಬೇಕು.

ಆಫ್ರಿಕಾದಲ್ಲಿ ‘ಗ್ರೇಟ್‌ ಗ್ರೀನ್‌ ವಾಲ್‌’ ನಿರ್ಮಾಣವನ್ನು ಮುನ್ನಡೆಸುತ್ತಿರುವ ಸಿನ್ನಸ್ಸಾಮಿ (ಚಿನ್ನಸ್ವಾಮಿ) ಭಾರತೀಯ ಮೂಲದವರೇ ಆಗಿದ್ದು ಭಾರತದ ಪರಿಸರ ಸಂವರ್ಧನ ಯೋಜನೆಗಳ ವೀಕ್ಷಣೆಗೆಂದು ಆಗಾಗ ಇಲ್ಲಿಗೆ ಬರುತ್ತಿರುತ್ತಾರೆ. ಅದಕ್ಕಿಂತ ಮುಖ್ಯ ಸಂಗತಿ ಇನ್ನೊಂದಿದೆ: ಬರಗಾಲದಿಂದಾಗಿ ಜನರು ಗುಳೆ ಹೊರಡುವುದನ್ನು ತಪ್ಪಿಸಲೆಂದು ಹಾಗೂ ಈ ಜಾಗತಿಕ ಹಸಿರೀಕರಣ ಯೋಜನೆಗೆ ಪ್ರೇರಣೆ ನೀಡಲೆಂದು ಬೆಂಗಳೂರಿನವರೇ ಆದ ವಿಶ್ವಮಾನ್ಯ ಗಾಯಕ ರಿಕಿ ಕೇಜ್‌ ಅವರನ್ನೇ ಸದ್ಭಾವನಾ ರಾಜದೂತನನ್ನಾಗಿ ವಿಶ್ವಸಂಸ್ಥೆ ನೇಮಕ ಮಾಡಿದೆ. ಅವರ ಇಳೆಮಳೆಯ ಹಾಡುಗಳೇ ಅದೆಷ್ಟೊ ರಾಷ್ಟ್ರಗಳಲ್ಲಿ ಹಸಿರು ಗೋಡೆಯ ನಿರ್ಮಾಣಕ್ಕೆ ಭೂಮಿಗೀತೆಯಾಗಿ ಜನರನ್ನು ಸಜ್ಜುಗೊಳಿಸುತ್ತಿವೆ. ನಮ್ಮಲ್ಲಿ ಮರುಭೂಮಿಗಳು ನಾನಾ ರೂಪಗಳಲ್ಲಿ ಮಲೆನಾಡಿನಲ್ಲೂ ನೆಲದಾಳದಲ್ಲೂ ವಿಸ್ತರಿಸುತ್ತಿವೆ. ಜೂನ್‌ 17ನ್ನು ಮರುಭೂಮಿಯ ತಡೆಗೋಡೆಯ ದಿನವೆಂದು ಆಚರಿಸಿರೆಂದು ವಿಶ್ವಸಂಸ್ಥೆ ಕಳೆದ 27 ವರ್ಷಗಳಿಂದ ಕರೆ ಕೊಡುತ್ತ ಬಂದಿದೆ. ಒಮ್ಮೆಯಾದರೂ ಆ ಕರೆಗೆ ಓಗೊಡೋಣವೇ?

ಈ ವರ್ಷದ ಮರುಭೂಮಿ ತಡೆಗಟ್ಟುವ ದಿನಕ್ಕೆ ‘ಅವಳ ಭೂಮಿ, ಅವಳ ಹಕ್ಕು’ ಎಂಬ ಘೋಷವಾಕ್ಯವನ್ನು ವಿಶ್ವಸಂಸ್ಥೆ ನೀಡಿದೆ. ಬೆಂಗಳೂರಿನ ಸಿಮೆಂಟ್‌ ಕಾಂಕ್ರೀಟ್‌ ಗೋಡೆಗಳನ್ನು ನಿರ್ಮಿಸುವ ಶ್ರಮಿಕರಲ್ಲಿ ಉತ್ತರ ಕರ್ನಾಟಕದಿಂದ ಗುಳೆ ಬಂದ ಸಣಕಲು ಮಹಿಳೆಯರೇ ಹೆಚ್ಚಾಗಿ ಕಾಣುತ್ತಿರುತ್ತಾರೆ. ಅವಳು ಬಿಟ್ಟುಬಂದ ಭಣಭೂಮಿಯಲ್ಲಿ ಅವಳೇ ಹಸಿರು ಉಕ್ಕಿಸುವಂತೆ ಮಾಡಲು ಸಾಧ್ಯವಿದೆ ತಾನೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT