ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಹಬ್ಬದ ಸಂಭ್ರಮ

Published 21 ಅಕ್ಟೋಬರ್ 2023, 5:36 IST
Last Updated 21 ಅಕ್ಟೋಬರ್ 2023, 5:36 IST
ಅಕ್ಷರ ಗಾತ್ರ

ಭಾರತಿ.ಎ.ಕೊಪ್ಪ

ಹಬ್ಬದ ಸಮಯದಲ್ಲಿ ಸಾಂಪ್ರದಾಯಿಕ ಉಡುಗೆ ತೊಡುವುದೆಂದರೆ ಮಹಿಳೆಯರಿಗೆ ಎಲ್ಲಿಲ್ಲದ ಸಂತೋಷ. ವರ್ಷವೀಡಿ ಆಫೀಸು, ಮನೆಯ ಜಂಜಾಟದಲ್ಲಿರುವ ಮಹಿಳೆಯರು ಹಬ್ಬ ಸಮೀಪಿಸುತ್ತಿದ್ದಂತೆ ‘ಫೆಸ್ಟಿವ್ ವೈಬ್ಸ್‌’ಗೆ ಮಾರುಹೋಗುವ ಸುಖವೇ ಚಂದ. 

ಕಾಲ ಬದಲಾದಂತೆ ಭಕ್ತಿ  ಭಾವಗಳು, ಆಚರಣೆಯ ವಿಧಾನಗಳು ಅಲ್ಲಲ್ಲಿ ಅಲ್ಪಸ್ವಲ್ಪ ಬದಲಾವಣೆಗೊಂಡಿವೆ. ದಸರಾ ಹಬ್ಬವಂತೂ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ವಿಭಿನ್ನವಾಗಿ ಆಚರಣೆಯಾಗುತ್ತದೆ. ಮೈಸೂರು ಭಾಗದಲ್ಲಿ ಗೊಂಬೆಗಳನ್ನು ಕೂರಿಸುವುದಲ್ಲಿ ವಿಶೇಷತೆ  ಇದ್ದರೆ,  ಕರಾವಳಿ ಭಾಗಗಳಲ್ಲಿ ದೇಗುಲಗಳಲ್ಲಿ ಶಕ್ತಿ ದೇವಿ ಆರಾಧನೆ ನಡೆಯುತ್ತದೆ. 

ದಶಕಗಳ ಹಿಂದೆ ಬಹಳಷ್ಟು ಮನೆಗಳಲ್ಲಿ ನವರಾತ್ರಿಯ ಒಂಬತ್ತು ದಿನಗಳೂ ವಿಶೇಷ ಪೂಜೆ, ದುರ್ಗಾ ಪಾರಾಯಣಗಳು ನಡೆಯುತ್ತಿದ್ದವು.ಆ ಸಂದರ್ಭದಲ್ಲಿ ಮಹಿಳೆಯರು, ಹೆಣ್ಣು ಮಕ್ಕಳು ಮನೆಯಲ್ಲಿ ತರಹೇವಾರಿ ಹೂಗಳನ್ನು ಕೊಯ್ದು ಮಾಲೆ ಮಾಡುವುದು, ಹತ್ತಿಯನ್ನು ಹೊಸೆದು ಬತ್ತಿ ತಯಾರಿಸುವುದು,ರಂಗೋಲಿ ಇಡುವುದರಲ್ಲಿ ತೊಡಗಿಕೊಳ್ಳುತ್ತಿದ್ದರು. ಕಾಲ ಬದಲಾಗಿದ್ದು, ಈ ಆಚರಣೆಗಳು ದೂರವಾಗಿ ಸರಳವಾಗಿ ಒಂದು ಎರಡು ದಿನಗಳ ದುರ್ಗಾ ಪಾರಾಯಣದಂತಹ ಪೂಜೆಗಳಿಗೆ ಸೀಮಿತವಾಗುತ್ತಿದೆ.  

ಅಲ್ಲಲ್ಲಿ ಮಹಿಳೆಯರ ಭಜನಾ ಮಂಡಳಿಗಳು, ಸ್ತೋತ್ರ ಪಠಣಾ ತಂಡಗಳು ರೂಪುಗೊಂಡಿವೆ. ಈ ತಂಡಗಳು ಒಂದಿಷ್ಟು ಹಳೆಬೇರು ಹೊಸ ಚಿಗುರು ಎಂಬಂತೆ ಹಬ್ಬಗಳ ಕಳೆಗೆ ಹೊಸ ಚೈತನ್ಯ ನೀಡುತ್ತಿವೆ.ಅದಲ್ಲದೇ ಹತ್ತಾರು ಕೆಲಸಗಳ ಒತ್ತಡದಲ್ಲಿದ್ದರೂ ಒಂದೆರಡು ದಿನ ರಜೆ ತೆಗೆದುಕೊಂಡು ಸಾಂಪ್ರದಾಯಿಕ ಉಡುಗೆ ತೊಟ್ಟು ದೇವಾಲಯಗಳಿಗೆ ಹೋಗಿ ಬರುವುದೂ ಕೂಡ ಫೆಸ್ಟಿವ್ ವೈಬ್ಸ್ ಗೆ ಒಂದಿಷ್ಟು ಖುಷಿ ಮತ್ತು ನೆಮ್ಮದಿ ನೀಡುತ್ತದೆ.

ದಸರಾ ರಜೆ ಎಂಬುದು ತಾಯಿಯಂದಿರು ಮಕ್ಕಳೊಂದಿಗೆ ಸಮಯ ಕಳೆಯಲು ಸಿಗುವ ಅವಕಾಶ ಎಂದೇ ಹೇಳಬಹುದು. ಮಕ್ಕಳಿಗೆ ನಮ್ಮ ಆಚರಣೆ, ಸಂಸ್ಕೃತಿ - ಸಂಪ್ರದಾಯಗಳ ಪರಿಚಯ ಮಾಡಲು ಈ ದಸರ ರಜೆ ಅತ್ಯಂತ ಉಪಯುಕ್ತವಾದುದು.  ದೇವಾಲಯಗಳಿಗೆ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಪ್ರವಾಸ ಹೋಗುವುದು, ಮೈಸೂರಿನ ನಾಡಹಬ್ಬದ ವೈಭವವನ್ನು ಕಣ್ತುಂಬಿಕೊಳ್ಳಲು ಮೈಸೂರು ಪ್ರವಾಸ ಕೈಗೊಳ್ಳುವುದು ಆ ಮೂಲಕ ಮನೆ ಮಂದಿಯೆಲ್ಲ ಒಟ್ಟಾಗಿರುವುದರಲ್ಲಿ ಸಿಗುವ ಸಂತೋಷವೇ ಬೇರೆ. 

ನವರಾತ್ರಿಯ ಒಂಭತ್ತು ದಿನಗಳೂ ದಿನಕ್ಕೊಂದು ಬಣ್ಣ ದೇವಿಗೆ ಶ್ರೇಷ್ಠ ಎಂಬ ಪ್ರತೀತಿ ಇದೆ.ಹಾಗೆಯೇ ಒಂದೊಂದು ದಿನ ದೇವಿಗೆ ಒಂದೊಂದು ಹೂವು ಶ್ರೇಷ್ಠ ಎಂಬ ನಂಬಿಕೆ ಇದೆ. ಆಯಾ ಬಣ್ಣದ ಬಟ್ಟೆ, ಹೂಗಳನ್ನು ತೊಟ್ಟು ಸಂಭ್ರಮಿಸುವುದರಲ್ಲಿ ಹಬ್ಬದ ಕಳೆ ಮತ್ತಷ್ಟು ಹೆಚ್ಚುತ್ತದೆ.ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸುವ ಆಧುನಿಕ ಮಹಿಳೆಯರಿಗೆ ದಿನಕ್ಕೊಂದು ಬಣ್ಣದ ಬಟ್ಟೆ ನಾವೀನ್ಯ   ತಂದು ಕೊಡುತ್ತದೆ.

ಕರ್ನಾಟಕದ ಕರಾವಳಿ ಭಾಗದಲ್ಲಿ ನವರಾತ್ರಿಯ ಸಡಗರಕ್ಕೆ ಇನ್ನಷ್ಟು ಪು಼ಷ್ಠಿ ನೀಡುವ ಆಚರಣೆ ಹೊಸ್ತು ಎಂಬ ಪೂಜೆ. ನವರಾತ್ರಿಯ ಒಂದು ದಿನ ಭತ್ತದ ಗದ್ದೆಯ ತೆನೆಯನ್ನು ಪೂಜಿಸಿ ,ತೆನೆ ಕೊಯ್ದು ಪತಿ ಹೊತ್ತು ಮನೆಗೆ ತಂದಾಗ ಪತಿಯ ಕಾಲಿಗೆ ತಂಬಿಗೆಯಿಂದ ನೀರು ಹಾಕಿ ತೊಳೆಯುವ ಮೂಲಕ ‘ಹೊಸ್ತು’ ಆಚರಿಸುವ ಮಹಿಳೆಯರ ಸಂಭ್ರಮ ಹೇಳತೀರದು.ಕದಿರು ಕಟ್ಟುವುದು ಎಂಬುದು ಮಹಿಳೆಯರ ಪಾಲಿಗೆ ವಿಶೇಷ ಹಬ್ಬವಾಗಿದೆ. ಹೊಸ ಭತ್ತದ 9 ಕಾಳುಗಳನ್ನು ಸುಲಿದು ಹೊಸ ಅಕ್ಕಿಯ ಗಂಜಿಯ ನೈವೇದ್ಯ ಮಾಡುವುದು ಸರಳ ಸುಂದರ ‘ಹೊಸ್ತು’ ಆಚರಣೆಯಾಗಿದೆ.

ಕಾಲ ಎಷ್ಟೇ ಬದಲಾಗಲಿ ಕೆಲವೊಂದು ಆಚರಣೆಗಳು ಮನದ ಆನಂದವನ್ನು ಇಮ್ಮಡಿಗೊಳಿಸುತ್ತವೆ. ಆರ್ಥಿಕ ಸ್ವಾವಲಂಬನೆಗೆ ಔದ್ಯೋಗಿಕ ನೆಲೆಯಲ್ಲಿ ದಿನವೂ ಕೆಲಸದ ಜಂಜಾಟದಲ್ಲಿ ತೊಡಗಿರುವ ಹೆಂಗಳೆಯರಿಗೆ ದಸಾರದಂತ ಹಬ್ಬಗಳು ಹೊಸ ಹುರುಪು ತರುವುದಂತೂ ಸತ್ಯ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT