ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಸಂಬಂಧ ಕಾನೂನು ಬದ್ಧ- ಆದರೆ ಸಮಾಜ ಒಪ್ಪುತ್ತಿಲ್ಲ

ಸೆಕ್ಷನ್ 377 ನಂತರದ ದಿನಗಳು
Last Updated 14 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

‘ಪ್ರೀತಿ, ಬಾಳಿಗೊಂದು ಅರ್ಥವನ್ನು ನೀಡುತ್ತದೆ ಮತ್ತು ಪ್ರೀತಿಸುವ ಅಧಿಕಾರವೇ ನಮ್ಮನ್ನು ಮನುಷ್ಯರನ್ನಾಗಿಸುತ್ತದೆ’

ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಯೊಬ್ಬರ ತೀರ್ಪೊಂದು ಈ ಸಾಲುಗಳಿಂದ ಆರಂಭವಾಗುತ್ತದೆ.

ಬರಹಗಾರರೊಬ್ಬರ ಕಾವ್ಯಾತ್ಮಕ ಲೇಖನದಲ್ಲಿ ಇರಬೇಕಾಗಿದ್ದ ಈ ಸಾಲುಗಳು ನ್ಯಾಯಾಲಯದ ತೀರ್ಪಿನ ಭಾಗವಾಗಲು ಒಂದು ಬಲವಾದ ಕಾರಣವಿತ್ತು. ಏಕೆಂದರೆ, ‘ನವತೇಜ್ ಸಿಂಗ್‌ ಜೋಹರ್ ಮತ್ತು ಇತರರು ವಿರುದ್ಧ ಭಾರತ ಸರ್ಕಾರ' ಪ್ರಕರಣದಲ್ಲಿ 2018ರ ಸೆಪ್ಟೆಂಬರ್ 6ರಂದು ಹೊರಬಿದ್ದ ತೀರ್ಪಿಗೆ ಚಾರಿತ್ರಿಕ ಮಹತ್ವವಿತ್ತು. ಸಹಮತವಿರುವ ಇಬ್ಬರು ವಯಸ್ಕರ ನಡುವಿನ ಲೈಂಗಿಕ ಸಂಬಂಧಗಳನ್ನು ಕಾನೂನುಬದ್ಧಗೊಳಿಸಿದ ಈ ತೀರ್ಪು, ಶತಮಾನಗಳಷ್ಟು ಹಳೆಯದಾದ, ವಸಾಹತು ಕಾಲದ ಪಳೆಯುಳಿಕೆಯಾಗಿದ್ದ ಭಾರತೀಯ ದಂಡ ಸಂಹಿತೆಯ 377ನೇ ಪರಿಚ್ಛೇದದ ವ್ಯಾಪ್ತಿಯಿಂದ ಸಮಲೈಂಗಿಕ ಸಂಬಂಧಗಳನ್ನು ಮುಕ್ತಗೊಳಿಸಿತ್ತು. ಆ ತೀರ್ಪನ್ನು ನೀಡಿದ ಐದು ಮಂದಿ ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದ ನ್ಯಾ. ಡಿ.ವೈ.ಚಂದ್ರಚೂಡ್‌ ತಮ್ಮ ತೀರ್ಪಿನಲ್ಲಿ ಪ್ರೀತಿಯ ಕುರಿತಾದ ಮೇಲಿನ ಸಾಲುಗಳನ್ನು ಉಲ್ಲೇಖಿಸಿದ್ದರು.

ತೀರ್ಪು ಹೊರಬಿದ್ದ ಹೊಸತರಲ್ಲಿ ದೇಶದುದ್ದಕ್ಕೂ ಒಂದು ಬಗೆಯ ಸಂಭ್ರಮ ಮನೆಮಾಡಿತ್ತು! ಎಲ್‌ಜಿಬಿಟಿ (ಸಲಿಂಗಿಗಳು, ದ್ವಿಲಿಂಗಿಗಳು, ಲಿಂಗಪರಿವರ್ತಿತರು) ಸಮುದಾಯಕ್ಕೆ ಈ ತೀರ್ಪಿನಿಂದ ಸಹಜವಾಗಿಯೇ ಆನಂದವಾಗಿತ್ತಾದರೂ ಅದಕ್ಕಿಂತ ಒಂದು ಮುಷ್ಟಿ ಹೆಚ್ಚಿನ ಆನಂದ ಈ ದೇಶದ ಕಾರ್ಪೋರೇಟ್ ಸಂಸ್ಥೆಗಳಿಗೆ ಆದಂತಿತ್ತು. ಅಂದು ಬಹುತೇಕ ಆ್ಯಪ್ ಮತ್ತು ಕಂಪನಿಗಳ ಲೋಗೊಗಳಿಗೆ ಕಾಮನಬಿಲ್ಲಿನ (ಎಲ್‌ಜಿಬಿಟಿ ಸಮುದಾಯವನ್ನು ಪ್ರತಿನಿಧಿಸುವ ಬಣ್ಣಗಳು) ಬಣ್ಣವೇರಿಬಿಟ್ಟಿತ್ತು. ಎಲ್ಲೆಡೆಯಿಂದಲೂ ಶುಭಾಶಯಗಳ ನೆರೆ ಹರಿದು ಬಂತು. ಇಡಿ ದೇಶವೇ ಈ ಸಮುದಾಯದ ಬೆನ್ನಿಗಿದೆಯೇನೋ ಎಂದು ಭಾಸವಾಗುವಷ್ಟರ ಮಟ್ಟಿಗಿತ್ತು ತೀರ್ಪು ಹೊರಬಿದ್ದಂದಿನ ಸಂಭ್ರಮ.

ಅದೆಲ್ಲ ನಡೆದು ಈಗ ಒಂದು ವರ್ಷ ಆಗಿದೆ. ಈ ಒಂದು ವರ್ಷದಲ್ಲಿ ಭಾರತದ ಎಲ್‌ಜಿಬಿಟಿ ಸಮುದಾಯಕ್ಕೆ ಸಂಬಂಧಿಸಿದಂತೆ ಏನೆಲ್ಲ ಬದಲಾವಣೆಗಳಾಗಿವೆ ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ನಾವಂದುಕೊಂಡಷ್ಟು ಸರಳವಾಗಿಲ್ಲವೆಂದೇ ಹೇಳಬೇಕು.

ನಿಜ. 377ನೇ ಪರಿಚ್ಛೇದದ ಭಾಗಶಃ ರದ್ಧತಿಯಿಂದಾಗಿ ಎಲ್‌ಜಿಬಿಟಿ ಸಮುದಾಯದ ಹೋರಾಟಕ್ಕೆ ಮೊದಲ ಹಂತದ ಮತ್ತು ಅತಿದೊಡ್ಡ ಗೆಲುವು ದೊರೆತಿದೆ. ಈ ಒಂದು ವರ್ಷದಲ್ಲಿ ಸಮಲೈಂಗಿಕ ಸಂಬಂಧಗಳ ಬಗೆಗಿನ ಚರ್ಚೆಗಳು ಕೊಂಚ ಹೆಚ್ಚಾಗಿವೆ ಮತ್ತು ಪ್ರಬುದ್ಧವೂ ಆಗಿವೆ. ಶಿಕ್ಷಣ ಮತ್ತು ಉದ್ಯೋಗದ ಸ್ಥಳಗಳಲ್ಲಿ ಈವರೆಗೆ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿದ್ದ ಎಲ್‌ಜಿಬಿಟಿ ಸಂಘಟನೆಗಳು ಈಗ ಮುಕ್ತವಾಗಿ ತಮ್ಮ ಇರುವನ್ನು ತೋರ್ಪಡಿಸುತ್ತಿವೆ. ಅಲ್ಲದೇ ತಮ್ಮ ಹಕ್ಕುಗಳ ರಕ್ಷಣೆಗಾಗಿ ಬೇಡಿಕೆಯನ್ನೂ ಇಡುತ್ತಿವೆ. ಲೈಂಗಿಕತೆ ಮತ್ತು ಲೈಂಗಿಕ ನಿಲುವುಗಳ ಬಗೆಗೆ ಮೊದಲಿಗಿಂತ ಹೆಚ್ಚು ಚರ್ಚೆಯಾಗುತ್ತಿವೆ, ರಾಜಕೀಯ ಪಕ್ಷಗಳೂ ಸಮಲೈಂಗಿಕರು ಮತ್ತು ಲಿಂಗಪರಿವರ್ತಿತರ ಹಕ್ಕುಗಳ ಬಗೆಗೆ ಸಣ್ಣದಾಗಿಯಾದರೂ ದನಿಯೆತ್ತಲಾರಂಭಿಸಿವೆ.

ಮುಖ್ಯವಾಗಿ ಸಾಕಷ್ಟು ಕಾರ್ಪೋರೇಟ್ ಸಂಸ್ಥೆಗಳು ತಮ್ಮ ಕೆಲಸದ ಸ್ಥಳಗಳನ್ನು ಎಲ್‌ಜಿಬಿಟಿ ಸಮುದಾಯದ ವ್ಯಕ್ತಿಗಳ ಪಾಲಿಗೆ ಸುರಕ್ಷಿತವಾಗಿಸುವತ್ತ ಮಹತ್ತರ ಹೆಜ್ಜೆಗಳನ್ನಿಟ್ಟಿವೆ. ಬಹುತೇಕ ಕಾರ್ಪೋರೇಟ್ ಸಂಸ್ಥೆಗಳು ಈ ಮೊದಲೂ ಎಲ್‌ಜಿಬಿಟಿ ವ್ಯಕ್ತಿಗಳ ಹಿತರಕ್ಷಣೆಗಾಗಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದವು. ಈಗ ಈ ಸಮುದಾಯಕ್ಕೆ ಕಾನೂನಿನ ರಕ್ಷಣೆಯೂ ದೊರೆತಿರುವುದರಿಂದ ಅಂತಹ ಚಟುವಟಿಕೆಗಳಿಗೆ ಹೆಚ್ಚಿನ ಬಲ ಬಂದಂತಾಗಿದ್ದು, ಇಲ್ಲಿಯವರೆಗೆ ತಟಸ್ಥವಾಗಿದ್ದ ಸಂಸ್ಥೆಗಳೂ ಎಲ್‌ಜಿಬಿಟಿ ಸ್ನೇಹಿ ವಾತಾವರಣ ನಿರ್ಮಿಸುವ ಮಾತುಗಳನ್ನಾಡುತ್ತಿವೆ.

ಸಮಲೈಂಗಿಕ ಸಂಬಂಧಗಳು ಶಿಕ್ಷಾರ್ಹವಲ್ಲವೆಂದು ಘೋಷಣೆಯಾದ ನಂತರ ಎಲ್‌ಜಿಬಿಟಿ ವ್ಯಕ್ತಿಗಳು ಸಾಮಾಜಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ಈವರೆಗೆ ಕಾನೂನಿನ ಭಯದಿಂದ ಮುಚ್ಚುಮರೆಯಲ್ಲಿದ್ದ ಅದೆಷ್ಟೋ ವ್ಯಕ್ತಿಗಳು ಈಗ ತಮ್ಮ ಲೈಂಗಿಕತೆಯ ಬಗೆಗೆ, ತಮ್ಮದೇ ಲಿಂಗದವರೊಂದಿಗೆ ತಮಗಿರುವ ಪ್ರೀತಿಯ ಬಗೆಗೆ ಮುಕ್ತವಾಗಿ ಮಾತನಾಡುತ್ತಿದ್ದಾರೆ. ತಾನೊಬ್ಬ ಲೆಸ್ಬಿಯನ್ ಮತ್ತು ತನಗೊಬ್ಬ ಸಂಗಾತಿಯಿದ್ದಾಳೆ ಎಂಬುದನ್ನು ಧೈರ್ಯವಾಗಿ ಜಗತ್ತಿನೆದುರು ಸಾರಿದ ಭಾರತೀಯ ಓಟಗಾತಿ ದ್ಯುತಿ ಚಾಂದ್ ಬಗೆಗೆ ತಿಳಿಯದವರಿಲ್ಲ. ಎಲ್‌ಜಿಬಿಟಿ ಸಮುದಾಯಕ್ಕೆ ಉದ್ಯೋಗಾವಕಾಶಗಳನ್ನು ಒದಗಿಸಿಕೊಡಲು ಕೆಲವು ಉದ್ಯೋಗ ಮೇಳಗಳು ನಡೆದಿವೆ ಮತ್ತು ವಿಭಿನ್ನ ಲೈಂಗಿಕತೆಗಳನ್ನು ಒಳಗೊಳ್ಳುವಂತಹ ಉದ್ಯೋಗ ನೀತಿಗಳೂ ಚಾಲ್ತಿಗೆ ಬಂದಿವೆ ಎಂಬುದೂ ಸುಳ್ಳಲ್ಲ. ದೇಶದೆಲ್ಲೆಡೆ ಅಲ್ಲದಿದ್ದರೂ, ಮಹಾನಗರಗಳಲ್ಲಂತೂ ಮೇಲ್ಕಂಡ ಬದಲಾವಣೆಗಳು ಢಾಳವಾಗಿ ಎದ್ದು ಕಾಣುತ್ತಿವೆ. ಆದರೆ, ಇದಿಷ್ಟು ಸಾಕೇ ಎಂಬುದು ಸದ್ಯ ನಮ್ಮೆದುರು ಇರುವ ಪ್ರಶ್ನೆ.

ಈ ತೀರ್ಪನ್ನಿತ್ತ ನ್ಯಾಯಪೀಠದ ಮತ್ತೊಬ್ಬ ಸದಸ್ಯ ನ್ಯಾ. ರೋಹಿಂಗ್ಟನ್ ನಾರಿಮನ್ ತಮ್ಮ ತೀರ್ಪಿನ ಕೊನೆಯಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮೂಹಿಕ ಮಾಧ್ಯಮಗಳ ಮೂಲಕ ಎಲ್‌ಜಿಬಿಟಿ ಸಮುದಾಯದ ಬಗೆಗಿನ ತಪ್ಪು ಕಲ್ಪನೆಗಳನ್ನು ತೊಡೆದುಹಾಕುವ ಕೆಲಸ ಮಾಡಬೇಕು, ಮತ್ತು ಮುಖ್ಯವಾಗಿ ಪೊಲೀಸ್ ವ್ಯವಸ್ಥೆಯಲ್ಲಿ ಸದರಿ ಸಮುದಾಯದ ಬಗೆಗೆ ಸಂವೇದನಾಶೀಲವಾಗಿ ನಡೆದುಕೊಳ್ಳುವ ವ್ಯವಸ್ಥೆಯಾಗಬೇಕು ಎಂದು ಹೇಳುತ್ತಾರೆ. ಆದರೆ, ಕಳೆದ ವರ್ಷದಲ್ಲಿ ಸರ್ಕಾರ ಮತ್ತು ಅದರ ಅಂಗ ಸಂಸ್ಥೆಗಳು ಈ ಸೂಚನೆಯಂತೆ ನಡೆದುಕೊಂಡಿದ್ದಾವೆಯೇ ಎಂಬ ಪ್ರಶ್ನೆಗೆ ಉತ್ತರ 'ಇಲ್ಲ' ಎಂಬುದೇ ಆಗಿದೆ. ಮೇಲೆ ಪಟ್ಟಿ ಮಾಡಲಾದ ಬದಲಾವಣೆಗಳಷ್ಟೂ ನಡೆದಿರುವುದು ಸಮುದಾಯ ಮತ್ತು ಖಾಸಗಿ ವಲಯದ ಪ್ರಯತ್ನಗಳಿಂದಾಗಿ ಮತ್ತು ಇದರಲ್ಲಿ ಸರ್ಕಾರ ವಹಿಸುರುವ ಪಾತ್ರ ಅತ್ಯಂತ ಕಿರಿದು. ಸದರಿ ಪ್ರಕರಣದ ವಾದ ಮತ್ತು ಪ್ರತಿವಾದಗಳ ಸಮಯದಲ್ಲಿ ಸರ್ಕಾರವು ಜಾಣ ಮೌನ ವಹಿಸಿತ್ತು ಮತ್ತು ಮೊಕದ್ದಮೆಯ ನಿರ್ಧಾರವನ್ನು 'ನ್ಯಾಯಾಲಯದ ವಿವೇಚನೆಗೆ' ಬಿಟ್ಟುಬಿಟ್ಟಿತ್ತು. ತೀರ್ಪು ಹೊರಬಂದ ಮೇಲೂ ಅಂತಹುದೇ ಜಾಣ ಮೌನ ತಾಳಿ ಕೂತಿದೆ. ಲಿಂಗಪರಿವರ್ತಿತರ ಕುರಿತಾಗಿ, ಆ ಸಮುದಾಯದ ಸದಸ್ಯರ ವಿರೋಧದ ಹೊರತಾಗಿಯೂ ಮಸೂದೆಯೊಂದನ್ನು ಮಂಡಿಸಿದ್ದು ಬಿಟ್ಟರೆ ಸರಕಾರ ಬೇರೇನನ್ನೂ ಮಾಡಿಲ್ಲವೆಂಬುದು ವಾಸ್ತವ.

ತೀರ್ಪು ಹೊರಬಂದ ಬೆನ್ನಿಗೇ, ಎಲ್‌ಜಿಬಿಟಿ ಸಮುದಾಯಕ್ಕೆ ಸಾಮಾಜಿಕ ಬೆಂಬಲ ತಂದು ಕೊಡುವಲ್ಲಿ ಸಮೂಹ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಲಿವೆ ಎಂದೇ ನಂಬಲಾಗಿತ್ತು. ಆದರೆ ಈ ನಿರೀಕ್ಷೆ ಬಹುಪಾಲು ಸುಳ್ಳಾಯಿತು. ಬೆರಳೆಣಿಕೆಯಷ್ಟು ಪತ್ರಿಕೆಗಳನ್ನು ಹೊರತುಪಡಿಸಿ, ಉಳಿದೆಲ್ಲ ಸುದ್ದಿಮನೆಗಳು ಈ ವಿಚಾರದಲ್ಲಿ ಮೌನ ವಹಿಸಿರುವುದು ಸುಳ್ಳಲ್ಲ.

ಸರ್ಕಾರ ಮತ್ತು ಮಾಧ್ಯಮಗಳ ಸ್ಪಂದನೆ ಈ ರೀತಿಯದ್ದಾದರೆ, ಇನ್ನು ಎಲ್‌ಜಿಬಿಟಿ ಸಮುದಾಯಕ್ಕೆ ಸಂಬಂಧಿಸಿದ ಸಾಮಾಜಿಕ ಆಯಾಮಗಳು ಮತ್ತಷ್ಟು ಕ್ಲಿಷ್ಟವಾಗಿವೆ. ಈ ಮೊದಲು ತಿಳಿಸಿದಂತೆ ಸಮಾಜದಲ್ಲಿ ಕಾಮ, ಸಂಭೋಗ ಮತ್ತು ಲೈಂಗಿಕತೆಯ ಕುರಿತಾದ ಚರ್ಚೆಗಳು ಹೆಚ್ಚಾಗಿವೆ. ಆದರೆ, ಸಮಲೈಂಗಿಕತೆಯ ಕುರಿತಾದ ಸಮಾಜದ ಧೋರಣೆಗಳು ಇಷ್ಟು ಬೇಗ ಬದಲಾಗಿ ಬಿಡುತ್ತವೆ ಎಂದುಕೊಳ್ಳುವುದು ಕೇವಲ ಭ್ರಮೆ. ಲೈಂಗಿಕತೆ ಸಂಬಂಧಿಸಿದ ವಿಚಾರಗಳಲ್ಲಿ ಅತಿರೇಕವಾದ ಮಡಿವಂತಿಕೆ ಇಟ್ಟುಕೊಂಡಿರುವ ಮತ್ತು ಮದುವೆ, ಮಕ್ಕಳು ಮತ್ತು ಸಾಮಾಜಿಕ ಗೌರವಗಳೆಡೆಗೆ ತುಸು ಹೆಚ್ಚೇ ವ್ಯಾಮೋಹವಿರುವ ಭಾರತೀಯ ಸಮಾಜದಲ್ಲಿ ಒಂದೇ ಲಿಂಗದ ಇಬ್ಬರು ವ್ಯಕ್ತಿಗಳ ನಡುವಿನ ಪ್ರೀತಿ ಮತ್ತು ಕಾಮಗಳಿಗೆ ಒಪ್ಪಿಗೆ ದೊರೆಯುವುದು ಸಣ್ಣ ಮಾತೇನಲ್ಲ ಮತ್ತು ಅದು ಈ ಕೂಡಲೇ ನಡೆಯುವಂಥದ್ದೂ ಅಲ್ಲ. ನವತೇಜ್ ಸಿಂಗ್‌ ಜೋಹರ್ ಪ್ರಕರಣದ ತೀರ್ಪು ಎಲ್‌ಜಿಬಿಟಿ ಸಮುದಾಯಕ್ಕೆ ಕಾನೂನು ಮಾನ್ಯತೆಯನ್ನಷ್ಟೇ ತಂದು ಕೊಟ್ಟಿದೆ. ಆದರೆ ಅಂತಹ ವ್ಯಕ್ತಿಗಳು ಬದುಕುವ ಸಮಾಜ ಬದಲಾಗದ ಹೊರತು ಈ ತೀರ್ಪು ಕೇವಲ ನ್ಯಾಯ ಪುಸ್ತಿಕೆಯಲ್ಲಷ್ಟೇ ಉಳಿದುಕೊಳ್ಳಲಿದೆ.

ತೀರ್ಪು ಹೊರಬಿದ್ದಾಗ ಬಹುಪಾಲು ಸಮಲೈಂಗಿಕ ವ್ಯಕ್ತಿಗಳು ಕಾನೂನಾತ್ಮಕ ಗೆಲುವಿಗೆ ಹರ್ಷ ವ್ಯಕ್ತಪಡಿಸಿದ್ದರಾದರೂ, ಅದರಿಂದ ತಮ್ಮ ತಕ್ಷಣದ ಬದುಕಿನಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಲಾರವು ಎಂಬ ಬೇಸರವೂ ಅವರಲ್ಲಿತ್ತು. ಬಹುಪಾಲು ಮಂದಿ ಸಮಲೈಂಗಿಕರು ಇಂದಿಗೂ ಮರೆಯಲ್ಲೆಯೇ ಇದ್ದಾರೆ. ಅವರ ಮೇಲೆ ಇಂದಿಗೂ ದೈಹಿಕ ಮತ್ತು ಮಾನಸಿಕ ದಬ್ಬಾಳಿಕೆಗಳು ಆಗುತ್ತಲೇ ಇವೆ ಮತ್ತು ಅಂತಹ ದಬ್ಬಾಳಿಕೆಗಳಿಗೆ ಹೆದರಿ ತಮ್ಮ ಸಹಜವಾದ ಭಾವನೆ ಕಾಮನೆಗಳನ್ನು ಹತ್ತಿಕ್ಕಿ, ಅಂತಹವರು ಬಲವಂತದ ಮದುವೆಗಳಿಗೆ ಕೊರಳೊಡ್ಡುತ್ತಿದ್ದಾರೆ. ಅಂತಹ ದಬ್ಬಾಳಿಕೆಗಳನ್ನು ಮೀರಿ ನಿಲ್ಲಲು ಯತ್ನಿಸುವವರನ್ನು ಅವಮಾನಕ್ಕೆ ಈಡು ಮಾಡಲಾಗುತ್ತಿದೆ.

ಈ ತೀರ್ಪಿನ ನಂತರದ ಬೆಳವಣಿಗೆಗಳು ಮಹಾನಗರ ಮತ್ತು ಕಾರ್ಪೋರೇಟ್ ವಲಯಕ್ಕಷ್ಟೇ ಸೀಮಿತವಾಗಿವೆಯೇ ಎಂಬುದು ಪ್ರಸ್ತುತ ಎಲ್‌ಜಿಬಿಟಿ ಹೋರಾಟಗಾರರು ಎದುರಿಸುತ್ತಿರುವ ಪ್ರಶ್ನೆ. ಸಣ್ಣ ಪುಟ್ಟ ಊರು ಮತ್ತು ಹಳ್ಳಿಗಳಲ್ಲಿ ಈ ಸಮುದಾಯದ ಸದಸ್ಯರು ಸಂಘಟಿತರಾಗಿಲ್ಲ ಮತ್ತು ಅದೇ ಕಾರಣಕ್ಕಾಗಿಯೇ ಸಣ್ಣ ಊರುಗಳಲ್ಲಿರುವ ಸಮಲೈಂಗಿಕ ಮತ್ತು ಭಿನ್ನ ಲೈಂಗಿಕ ನಿಲುವಿನ ವ್ಯಕ್ತಿಗಳು ತಮ್ಮ ಹಕ್ಕುಗಳಿಂದ ಸತತವಾಗಿ ವಂಚಿತವಾಗುತ್ತಿದ್ದಾರೆ. ತೀರ್ಪು ಹೊರಬಿದ್ದ ಮೇಲಾದರೂ ಗ್ರಾಮಾಂತರ ಭಾಗಗಳಲ್ಲಿರುವ ಎಲ್‌ಜಿಬಿಟಿ ವ್ಯಕ್ತಿಗಳಿಗೆ ಸಂಬಂಧಿಸಿದ ಕೆಲಸಗಳಾಗಬೇಕಿತ್ತು. ಆದರೆ ಆಗಿಲ್ಲ. ಹಾಗೆಯೇ ಕಾರ್ಪೊರೇಟ್ ಸಂಸ್ಥೆಗಳು ತಮ್ಮಲ್ಲಿರುವ ಎಲ್‌ಜಿಬಿಟಿ ವ್ಯಕ್ತಿಗಳ ಸುರಕ್ಷತೆಯ ಬಗೆಗೆ ಮಾತನ್ನಾಡುತ್ತಿವೆಯೇ ಹೊರತು, ಕಾರ್ಪೋರೇಟ್ ಅಲ್ಲದ ಕೆಲಸದ ಸ್ಥಳಗಳು, ಎಂದರೆ ಬ್ಯಾಂಕುಗಳು, ಸರ್ಕಾರಿ ಸಂಸ್ಥೆಗಳು ಮತ್ತು ಇತರ ಖಾಸಗಿ ಸಂಸ್ಥೆಗಳ ಉದ್ಯೋಗಿಗಳ ಪರಿಸ್ಥಿತಿ ಹೇಳಿಕೊಳ್ಳುವಂತಿಲ್ಲ. ಅಂತಹ ಜಾಗಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳು ತಾವು ಈ ಸಮುದಾಯಕ್ಕೆ ಸೇರಿದವರು ಎಂದೇನಾದರೂ ಹೇಳಿಕೊಂಡರೆ, ಅವರು ಹೀಯಾಳಿಕೆ ಮತ್ತು ಶೋಷಣೆಗ ಒಳಗಾಗುವುದಷ್ಟೇ ಅಲ್ಲ, ತಮ್ಮ ನೌಕರಿಯನ್ನು ಕಳೆದುಕೊಳ್ಳುವ ಅಪಾಯವೂ ಇರುತ್ತದೆ. ಇಂತಹ ವ್ಯಕ್ತಿಗಳ ಪರಿಸ್ಥಿತಿ ಕಳೆದ ಒಂದು ವರ್ಷದಲ್ಲಿ ಸುಧಾರಿಸಿದ ಬಗೆಗೆ ಸ್ಪಷ್ಟತೆಯಿಲ್ಲ.

ಅಜ್ಞಾತವಾಸ ಇನ್ನೂ ಮುಗಿದಿಲ್ಲ

ಇನ್ನು ಲಿಂಗಪರಿವರ್ತಿತ ವ್ಯಕ್ತಿಗಳ ವಿಚಾರದಲ್ಲಿ ಕೂಡಾ ಕಳೆದ ಒಂದು ವರ್ಷದಲ್ಲಿ ಹೇಳಿಕೊಳ್ಳುವ ಬದಲಾವಣೆಗಳು ಆದಂತಿಲ್ಲ. ನಿಜ. ಪರಿಸ್ಥಿತಿ ಮೊದಲಿಗಿಂತ ಪರವಾಗಿಲ್ಲ, ಸಾರ್ವಜನಿಕ ಸ್ಥಳಗಳು ಈ ಸಮುದಾಯದ ವ್ಯಕ್ತಿಗಳ ಮಟ್ಟಿಗೆ ಹಿಂದಿನಷ್ಟು ಅಸುರಕ್ಷಿತವಲ್ಲ ಮತ್ತು ಕೆಲ ಮಂದಿಗೆ ಅಲ್ಲಲ್ಲಿ ಉದ್ಯೋಗಾವಕಾಶದ ಏರ್ಪಾಡೂ ನಡೆಯುತ್ತಿದೆ. ಆದರೆ ಈ ಸಮುದಾಯದ ವ್ಯಕ್ತಿಗಳು ಅನುಭವಿಸುವ ಸಾಮಾಜಿಕ ಅಪಮಾನ ಮತ್ತು ಯಾತನೆಗಳಿಗೆ ಹೋಲಿಸಿದರೆ ಈ ಬದಲಾವಣೆ ಸಾಲದು. ಸಾಮಾಜಿಕ ಮತ್ತು ಆರ್ಥಿಕವಾಗಿ ಅತ್ಯಂತ ಕೆಳಸ್ತರದಲ್ಲಿರುವ ಲಿಂಗಪರಿವರ್ತಿತ ಮಹಿಳೆಯರು ಪ್ರತಿದಿನವೂ ಕಿರುಕುಳ ಮತ್ತು ದಬ್ಬಾಳಿಕೆ ಸಹಿಸಿದರೆ, ಇನ್ನು ಲಿಂಗಪರಿವರ್ತಿತ ಪುರುಷರದ್ದು ಇದ್ದೂ ಇಲ್ಲದಂತಹ ಅಜ್ಞಾತವಾಸ.

ಲಿಂಗಪರಿವರ್ತಿತ ವ್ಯಕ್ತಿಗಳ ಮೇಲಿನ ಪೊಲೀಸರ ದೌರ್ಜನ್ಯಗಳು ಕಡಿಮೆಯೇನೂ ಆದಂತಿಲ್ಲ. ಪೊಲೀಸ್ ಇಲಾಖೆಯ ಮೇಲು ಸ್ತರಗಳಲ್ಲಿ ಎಲ್‌ಜಿಬಿಟಿ ಸಮುದಾಯದ ಬಗೆಗೆ ಒಂದಷ್ಟು ಅರಿವಿದೆಯಾದರೂ, ಕೆಳಗಿನ ಹಂತದ ಪೊಲೀಸರಲ್ಲಿ ಈ ಸಮುದಾಯದ ಬಗೆಗಿನ ತಿಳಿವಳಿಕೆ ಬಹಳ ಕಡಿಮೆ. ಲಿಂಗಪರಿವರ್ತಿತರನ್ನು ಮೂರನೇ ಲಿಂಗವೆಂದು ಪರಿಗಣಿಸುವ ನಾಲ್ಸಾ ತೀರ್ಪು, 2014 ಬಂದ ನಂತರ ಮತ್ತು ಕಳೆದ ಒಂದು ವರ್ಷದಲ್ಲಿ ಹಲವಾರು ಸಂದರ್ಭಗಳಲ್ಲಿ ಅಂತಹ ವ್ಯಕ್ತಿಗಳ ಮೇಲೆ ಪೊಲೀಸರಿಂದ ದೌರ್ಜನ್ಯಗಳು ಆಗುತ್ತಲೇ ಇವೆ. ಬಂಧನವಾದ ಪ್ರಕರಣಗಳಲ್ಲೇ ಆರೋಪಿಗಳೊಂದಿಗೆ ಸರಿಯಾಗಿ ನಡೆದುಕೊಂಡ ನಿದರ್ಶನಗಳಿಲ್ಲದಿರುವಾಗ, ಇನ್ನು ಸಣ್ಣ ಕೇಸುಗಳೆಂದು ಪೊಲೀಸ್‌ ದೌರ್ಜನ್ಯ ಮತ್ತು ಸುಲಿಗೆಗೊಳಗಾಗುವ ಸಮುದಾಯದ ವ್ಯಕ್ತಿಗಳ ಲೆಕ್ಕವಿಟ್ಟವರಾರು?

ನಾನು ಗಮನಿಸಿರುವಂತೆ, ಕಳೆದ ಒಂದು ವರ್ಷದಲ್ಲಿ ಹಲವಾರು ವಾಣಿಜ್ಯ ಸೇವಾ ಸಂಸ್ಥೆಗಳು ಕ್ವೀರ್ (ವಿಭಿನ್ನ ಲೈಂಗಿಕ ನಿಲುವು ಮತ್ತು ಅಭಿವ್ಯಕ್ತಿಗಳುಳ್ಳ ವ್ಯಕ್ತಿಗಳಿಗೆ ಬಳಸುವ ಪದ) ಸಮುದಾಯದ ವ್ಯಕ್ತಿಗಳನ್ನು ಒಳಗೊಳ್ಳುವ ಪ್ರಯತ್ನಗಳನ್ನು ಮಾಡುತ್ತಿವೆ. ಟ್ರಾವೆಲ್ ಮತ್ತು ಹೋಟೆಲ್ ಸೇವೆಗಳಲ್ಲಿ ಗಂಡು, ಹೆಣ್ಣು ಜೋಡಿಗಳಂತೆಯೇ, ಸಮಾನ ಲಿಂಗದ ದಂಪತಿಗಳಿಗೂ ಸಮಾನ ಮಾನ್ಯತೆ ಮತ್ತು ಸವಲತ್ತುಗಳನ್ನು ಒದಗಿಸುವುದು, ಇತ್ಯಾದಿ. ಇದು ಒಳ್ಳೆಯ ಬೆಳವಣಿಗೆ ಹೌದಾದರೂ, ವ್ಯವಹಾರದ ದೃಷ್ಟಿಯಲ್ಲಿ ಕೂಡಾ ಒಳ್ಳೆಯ ಲಾಭ ಮಾಡಿಕೊಡುವ ಯೋಜನೆಯೇ ಸರಿ. ಅವೇ ಕಂಪನಿಗಳು ತಮ್ಮಲ್ಲಿ ಕೆಲಸ ಮಾಡುತ್ತಿರಬಹುದಾದ ಕ್ವೀರ್ ಉದ್ಯೋಗಿಗಳನ್ನು ಒಳಗೊಳ್ಳುವಂತಹ ನೀತಿಗಳನ್ನು ಹೊಂದಿವೆಯೇ? ತಮ್ಮ ಕೆಲಸದ ಜಾಗಗಳಲ್ಲಿ ನಡೆಯುವ ಲೈಂಗಿಕ ನಿಲುವನ್ನಾಧರಿಸಿದ ದೌರ್ಜನ್ಯ ತಡೆಗಟ್ಟಲು ಯಾವ ಕ್ರಮ ಕೈಗೊಂಡಿವೆ ಮತ್ತು ಸಮಲೈಂಗಿಕ ಅಥವಾ ಲಿಂಗಪರಿವರ್ತಿತ ವ್ಯಕ್ತಿಗಳೆಂದು ಗುರುತಿಸಿಕೊಳ್ಳುವ ವ್ಯಕ್ತಿಗಳಿಗೆ ಅವು ತಮ್ಮ ಬಾಗಿಲುಗಳನ್ನು ತೆರೆದಿವೆಯೇ ಎಂಬುದು ಎಲ್ಲಕ್ಕಿಂತ ಮುಖ್ಯ. ಹಾಗೆಯೇ ಕಳೆದ ಒಂದು ವರ್ಷದಲ್ಲಿ ಲಿಂಗ ಪರಿವರ್ತಿತ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶವಿರುವ ಹಲವಾರು ಸರ್ಕಾರೇತರ ಸಂಸ್ಥೆಗಳು ಹುಟ್ಟಿಕೊಂಡಿವೆ, ಆದರೆ ಅವುಗಳಲ್ಲಿ ಎಷ್ಟು ಸಂಸ್ಥೆಗಳು ನೈಜವಾದ ಕಾಳಜಿ ಹೊಂದಿವೆ ಎಂಬುದು ಯೋಚಿಸತಕ್ಕ ವಿಷಯ.

ಸಮಲೈಂಗಿಕತೆಯ ಪ್ರೇಮವನ್ನು ‘ಆಸ್ಕರ್ ವೈಲ್ಡ್‌’ನ ಪ್ರಿಯತಮನಾಗಿದ್ದ ಲಾರ್ಡ್ ಆಲ್ಫ್ರೆಡ್ ಡಗ್ಲಸ್ 'ತನ್ನ ಹೆಸರನ್ನು ಹೇಳಲು ಹೆದರುವ ಪ್ರೇಮ' ಎಂದು ಕರೆಯುತ್ತಾನೆ. ಆ ಕಾಲದ ಘೋರವಾದ ಪರಿಸ್ಥಿತಿ ಈಗಿಲ್ಲವಾದರೂ, ಸಮಲೈಂಗಿಕ ಪ್ರೇಮವು ಈಗಲೂ ತನ್ನ ಹೆಸರನ್ನು ಹೇಳಲು ಹೆದರುವ ಸ್ಥಿತಿ ಇದ್ದೇ ಇದೆ. ನೀವು ಸಾಮಾನ್ಯ ಕ್ವೀರ್ ವ್ಯಕ್ತಿಯನ್ನು 377ರ ನಂತರದ ನಿಮ್ಮ ಬದುಕು ಹೇಗಿದೆ ಎಂದು ಕೇಳಿದರೆ, ನಿಮಗೆ ಸಿಗುವ ಉತ್ತರವು ಪೂರ್ತಿ ಸಕಾರಾತ್ಮಕವಾಗಿರುವುದು ಅನುಮಾನ.

ಕಾನೂನು ತೊಡಕೊಂದು ನಿವಾರಣೆಯಾದರೆ ಸಾಲದು. ಎಲ್‌ಜಿಬಿಟಿ ಸಮುದಾಯದ ಹೋರಾಟ ಫಲ ನೀಡಬೇಕಿದ್ದಲ್ಲಿ ಸಾಮಾಜಿಕವಾದ ಮನ್ನಣೆ ಮತ್ತು ಆದರ ಅತ್ಯಗತ್ಯ. ಬದಲಾವಣೆಗಳಾಗುತ್ತಲಿವೆ, ಮುಂದೆಯೂ ಆಗಲಿವೆ. ಆದರೆ, ಈ ದೇಶದ ಮೂಲ ದ್ರವ್ಯವಾದ ಬಹುತ್ವಕ್ಕೆ ಹೆಜ್ಜೆ ಹೆಜ್ಜೆಗೂ ತೊಡಕುಂಟಾಗುತ್ತಿರುವ ಈ ದಿನಮಾನಗಳಲ್ಲಿ ನಾವು ತುಸು ಹೆಚ್ಚೇ ಕಾಯಬೇಕಾಗಬಹುದೇನೋ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT